ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಈ ದೃಶ್ಯವನ್ನು ಮೊದಲೂ ನೋಡಿದ್ದೆ..

ಗುಲ್ಜಾರ್ 

ಕನ್ನಡಕ್ಕೆ: ಚಿದಂಬರ ನರೇಂದ್ರ 

ಈ ದೃಶ್ಯವನ್ನು ಮೊದಲೂ ನೋಡಿದ್ದೆ.
ಬಂದೂಕನ್ನು ಎದೆಗೆ ನಾಟಿಸಿಕೊಂಡ
ಸೈನಿಕರ ದಂಡು
ಮತ್ತು ಎದುರಿಗೆ
ಎದೆ ಸೆಟೆಸಿ, ಘೋಷಣೆ ಕೂಗುತ್ತಿದ್ದ
ಜನ ಸಮೂಹ.
ಬಹುಶಃ ಅದು 1919 ರ ವರ್ಷ
ಅಮೃತಸರ್ ನ ಜಲಿಯನ್ ವಾಲಾ ಬಾಗ್.

ಅಥವಾ 1936 ರ
ಲಾಹೋರ್ ನ ಒಂದು ಬೀದಿಯ ದೃಶ್ಯ,
ಸ್ವತಂತ್ರ ಹೋರಾಟದ ವರ್ಷಾಚರಣೆಯ
ಮಾರನೆಯ ರಾತ್ರಿ.

ಈ ಚಿತ್ರಗಳಲ್ಲಿ
ಎಷ್ಟು ಸಾಮ್ಯತೆ ಇದೆ ನೋಡಿ
ಇದರಲ್ಲಿನ ಜನರು,
ಅವರ ಮುಖದಲ್ಲಿನ ನೋವು,
ಎದೆಯಲ್ಲಿನ ಸಿಟ್ಟು,
ಆ ಹರೆಯ,ಆ ಭಾವನೆಗಳು
ಯಾವದೂ ನನಗೆ
ಅಪರಿಚಿತ ಅನಿಸುವುದಿಲ್ಲ.

ಅದು 1942 ರ ವರ್ಷ ಇರಬಹುದು
ಅಲಹಾಬಾದ್ ನ
ಒಂದು ಚೌಕದ ನಟ್ಟ ನಡುವೆ,
ಜನಸಾಗರವನ್ನು ಸುತ್ತುವರೆದಿದ್ದ
ಬ್ರಿಟಿಷ್ ಸೈನಿಕರು
ಅವರ ಕೈಯಲ್ಲಿ ಮತ್ತೆ ಅದೇ ಬಂದೂಕು
ಎದುರಿಗೆ ಮತ್ತೆ ಅದೇ ಜನ
ಅದೇ ಘೋಷಣೆಗಳು
ಅದೇ ಬಿಗಿದ ಮುಷ್ಟಿಗಳು,
ಅವತ್ತೂ ಜನರ ಕೈಯಲ್ಲಿ ಅದೇ ಧ್ವಜ.

ಇಂದೂ ಕೂಡ ಬಂದೂಕು
ಬೆಂಕಿ ಉಗಳಿತು, ಜನ ಹಾಗೆ ಸತ್ತರು
ಮತ್ತೆ ಅದೇ ರಕ್ತ ಬೀದಿಯ ಮೇಲೆಲ್ಲ.
ಹೌದು, ಅದೇ ಚೌಕದ ನಟ್ಟ ನಡುವೆ
ಕಬ್ಬಿಣ, ಕಾಂಕ್ರೀಟುಗಳ ಕಾಡಿನಲ್ಲಿ.
ಮೊದಲೇನೋ ಇಲ್ಲೊಂದು
ಬ್ರಿಟಿಷ್ ಅಧಿಕಾರಿಯ ಮೂರ್ತಿ ಇತ್ತಂತೆ
ಇವತ್ತು ಗಾಂಧಿಯ ಮೂರ್ತಿ ಇದೆ
ಆದರೆ ಇದು
1992 ರ ವರ್ಷ.
ನನಗೆ
ಯಾವದೂ ಅಪರಿಚಿತ ಅನಿಸುವುದಿಲ್ಲ.

Gulzar

********

ಚಿದಂಬರ ನರೇಂದ್ರ ಅವರ ಸಾಲುಗಳು 

ಇದು ೨೦೧೯ ರ ವರ್ಷ
ಮತ್ತೇ ಅದೇ ಮುಗ್ಧ ಹುಡುಗರು,
ಮುಖದಲ್ಲಿ ಅದೇ ವ್ಯವಸ್ಥೆಯ ಬಗ್ಗೆ ಆಕ್ರೋಶ
ಮತ್ತೆ ಕಾಲೇಜಿಗೆ ನುಗ್ಗಿ ವಿದ್ಯಾರ್ಥಿಗಳ ರಕ್ತ ಹರಿಸಿದೆ ಸರ್ಕಾರ
ನನಗೆ ಯಾವುದೂ ಅಪರಿಚಿತ ಅನಿಸುವುದಿಲ್ಲ

‍ಲೇಖಕರು avadhi

20 November, 2019

1 Comment

  1. T S SHRAVANA KUMARI

    ಹೌದು ಅಂದೂ ಇತ್ತು, ಇಂದೂ ಇದೆ, ಮುಂದೂ ಇರುತ್ತದೆ. ಬದಲಾವಣೆಯಾಗುವುದೆಂದು ನನಗಂತೂ ಅನ್ನಿಸುವುದಿಲ್ಲ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading