ಗುಲಾಬಿ ಮೃದು ಪಾದಗಳ ನೆನೆಯುತ್ತಾ..

ಇಂದು ವಿಶ್ವ ಮಕ್ಕಳ ಹಕ್ಕುಗಳ ದಿನ. 

ಮಕ್ಕಳಿಗೆ ಹಕ್ಕುಗಳನ್ನು ದೊರಕಿಸಿಕೊಡಲು ಶ್ರಮಿಸಿದ ಮಹತ್ವದ ವ್ಯಕ್ತಿ ಎಗ್ಲಾನ್ಟೈನ್ ಜೆಬ್. 

ಇಂದು ಮಧ್ಯಾಹ್ನದ ಬಿಸಿಯೂಟ ಸೇರಿದಂತೆ ಜಗತ್ತಿನಾದ್ಯಂತ ಮಕ್ಕಳು ಒಂದಿಷ್ಟಾದರೂ ನೆಮ್ಮದಿ ಅನುಭವಿಸುತ್ತಿದ್ದರೆ ಅದರ ಹಿಂದೆ ಜೆಬ್ ಮುನ್ನೆಡೆಸಿದ ಹೋರಾಟವಿದೆ.

ಈ ಜೆಬ್ ಳನ್ನು ಕುರಿತು ಮಕ್ಕಳ ಹಕ್ಕುಗಳ ರಕ್ಷಣೆಗಾಗಿಯೇ ಸಾಕಷ್ಟು ಕೆಲಸ ಮಾಡಿರುವ ಎನ್ ವಿ ವಾಸುದೇವ ಶರ್ಮಾ ಮಹತ್ವದ ಕೃತಿ ಬರೆದಿದ್ದಾರೆ.

‘ಬಹುರೂಪಿ’ ಪ್ರಕಾಶನ ಹೊರತಂದಿರುವ ಈ ಕೃತಿಯನ್ನು ಕೊಳ್ಳಲು ಇಲ್ಲಿ ಕ್ಲಿಕ್ಕಿಸಿ 

ಈ ಕೃತಿಗೆ ಬರೆದ ಮುನ್ನುಡಿ ಇಲ್ಲಿದೆ-

ಜಿ ಎನ್ ಮೋಹನ್

ವಾಸುದೇವ ಶರ್ಮಾ ನನಗೆ ಪರಿಚಯವಾಗುವ ಮುನ್ನವೇ ಮಕ್ಕಳ ಕಡೆಗಿನ ಅವರ ಅಪರಮಿತ ಕಾಳಜಿಯ ಪರಿಚಯವಾಗಿತ್ತು. ಮಕ್ಕಳ ಬಗೆಗೆ ವಿಧಾನಸಭೆಯಲ್ಲಿ ಯಾವ ಜನಪ್ರತಿನಿಧಿ ಎಷ್ಟು ಪ್ರಶ್ನೆ ಕೇಳಿದ್ದಾರೆ, ನಿಜಕ್ಕೂ ಅವರಿಗೆ ಮಕ್ಕಳ ಬಗ್ಗೆ ಕಾಳಜಿ ಇದೆಯೇ ಮಕ್ಕಳ ಬಗ್ಗೆ ಅವರಿಗೇನು ಗೊತ್ತು ಎನ್ನುವುದನ್ನು ವಾಸುದೇವ ಶರ್ಮಾ ಅಧ್ಯಯನ ನಡೆಸಿ ಮಾಧ್ಯಮದ ಮುಂದೆ ಬಿಚ್ಚಿಡುತ್ತಿದ್ದರು. ‘ಪ್ರಜಾವಾಣಿ’ಯ ವರದಿಗಾರನಾಗಿದ್ದ ನಾನು ಶರ್ಮಾ ಪಟಪಟನೆ ಮುಂದಿಡುತ್ತಿದ್ದ ಅಂಕಿ ಅಂಶಗಳನ್ನು ಬೆರಗುಗಣ್ಣಿನಿಂದ ನೋಡುತ್ತಿದೆ.

ಆ ವೇಳೆಗೆ ನಾನು ವರ್ಲ್ಡ್ ಕಪ್ ಫುಟ್ ಬಾಲ್ ಬಗ್ಗೆ ಸಾಕಷ್ಟು ಪುಸ್ತಕದ ಪುಟಗಳನ್ನು ತಿರುವಿ ಹಾಕಿದ್ದೆ. 200 ದೇಶಗಳಲ್ಲಿ ಫುಟ್ ಬಾಲ್ ಎಂದರೆ ಇನ್ನಿಲ್ಲದ ಹುಚ್ಚು. ಆದರೆ ಆ ಫುಟ್ ಬಾಲ್ ಅನ್ನುವುದು ಹೇಗೆ ತಯಾರಾಗುತ್ತದೆ ಎನ್ನುವುದರ ಬಗ್ಗೆ ಸಂಪೂರ್ಣ ಅಜ್ಞಾನ. ಪ್ರತೀ ತಂಡದ ಪ್ರತೀ ಆಟಗಾರನ ಬಗ್ಗೆ ಬೆಟ್ಟದಷ್ಟು ಮಾಹಿತಿ ಹೊಂದಿರುವ, ದೇಶ ದೇಶಗಳ ನಡುವೆ ಇರುವ ಮುನಿಸು ಗೊತ್ತಿರುವ, ಎರಡು ದಶಕದ ಫುಟ್ ಬಾಲ್ ಅಂಕಿ ಅಂಶವನ್ನು ಬೇಕಾದರೂ ಪಟಪಟನೆ ಹೇಳಬಲ್ಲ ಫುಟ್ ಬಾಲ್ ಪ್ರಿಯರಿಗೆ.. ಈ ಫುಟ್ ಬಾಲ್ ನ ಹಿಂದೆ ಲಕ್ಷಾಂತರ ಮಕ್ಕಳ ಕಣ್ಣೀರು ಇದೆ ಎನ್ನುವುದು ಗೊತ್ತಿರುವುದಿಲ್ಲ.

ಖ್ಯಾತ ಸಾಹಿತಿ ವೈದೇಹಿ ‘ಗುಲಾಬಿ ಮೃದುಪಾದಗಳು’ ಎನ್ನುವ ಕಥೆಯನ್ನು ಬರೆದಿದ್ದರು. ನನಗೆ ತುಂಬಾ ಇಷ್ಟವಾದ ಕಥೆ ಅದು. ಅದುವರೆಗೆ ನಾನು ಮಕ್ಕಳೆಂದರೆ ಮೃದು ಗುಲಾಬಿ ಅಂಗೈ ಇರುತ್ತದೆ. ಮೃದು ಗುಲಾಬಿ ಪಾದಗಳಿರುತ್ತದೆ, ಕಣ್ಣಲ್ಲಿ ಕನಸುಗಳಿರುತ್ತದೆ ಎಂದೇ ಅಂದುಕೊಂಡಿದ್ದೆ. ಫುಟ್ ಬಾಲ್ ವರ್ಲ್ಡ್ ಕಪ್ ಶುರುವಾಗುವವರೆಗೆ.

ನಮ್ಮದೇ ಜಲಂಧರ್ ನಲ್ಲಿ, ದೆಹಲಿಗೆ ತುಂಬಾ ದೂರವೇನೂ ಇಲ್ಲದ ಜಲಂಧರ್ ನಲ್ಲಿ ಸಾವಿರಾರು ಮಕ್ಕಳು ಒಂದನೆಯ ತರಗತಿಗೆ ಹೋಗುವ ಮುನ್ನವೇ, ಕೈಗೆ ಬಳಪ ಎತ್ತಿಕೊಳ್ಳುವ ಮುನ್ನವೇ ಫುಟ್ ಬಾಲ್ ಹೊಲಿಯಲು ಸೂಜಿಯನ್ನು ಎತ್ತಿಕೊಳ್ಳುತ್ತಿದ್ದಾರೆ.

ಬೆಳ್ಳಂಬೆಳಗ್ಗೆ 7ಕ್ಕೆ ಸೂಜಿ ಕೈಗೆತ್ತಿಕೊಳ್ಳುವ ಮಗು ರಾತ್ರಿಯವರೆಗೂ ಫುಟ್ ಬಾಲ್ ಹೊಲಿಯುತ್ತ ಅದರ ಬೆನ್ನು ಬಾಗಿದೆ, ಅಂಗೈ ಗಾಯಗಳಿಂದ ತುಂಬಿದೆ, ಕಣ್ಣಿನ ದೃಷ್ಟಿ ಹೋಗುತ್ತಿದೆ ಎಂದು ‘ಯೂನಿಸೆಫ್’ ವರದಿ ಮಾಡಿದೆ.

ಅಂತಹ ಯೂನಿಸೆಫ್ ಸೇರಿದಂತೆ ಇದ್ದದ್ದನ್ನು ಇದ್ದ ಹಾಗೆ ಹೇಳುವ ಹಲವು ಸಂಘಟನೆಗಳಲ್ಲಿ ವಾಸುದೇವ ಶರ್ಮಾ ಹೆಜ್ಜೆ ಹಾಕಿದರು. ಹಾಗಾಗಿಯೇ ವಾಸುದೇವ ಶರ್ಮಾಗೆ ನಿಖರ ನೋಟವಿದೆ. ಮಕ್ಕಳೂ ಸಹಾ ಪ್ರಜೆಗಳೇ.. ಹಾಗಾಗಿ ಜನ ಪ್ರತಿನಿಧಿಗಳು ಮಕ್ಕಳ ಪ್ರನಿಧಿಗಳು ಕೂಡಾ ಎನ್ನುವ ಅರಿವು ಮೂಡಿಸುವ ಅಸಾಧಾರಣವಾದ ಕೆಲಸವನ್ನು ಮಾಡಿದ್ದಾರೆ.

ಮಕ್ಕಳ ಮನಸ್ಸು ಒಂದು ಪುಟ್ಟ ಕ್ಯಾನ್ ವಾಸ್ ನಂತೆ. ಅಲ್ಲಿ ಬರೆದದ್ದು ಸುಲಭವಾಗಿ ಅಳಿಸಿಹೋಗುವಂತಹದ್ದಲ್ಲ. ಇದರ ಗಾಢ ಅರಿವು ನನಗೆ ಆದದ್ದು ಇದೇ ಪತ್ರಿಕಾ ವರದಿಗಾರಿಕೆಯ ಸಮಯದಲ್ಲಿಯೇ..

ಆಗ ನಾನು ಮಂಗಳೂರಿನಲ್ಲಿದ್ದೆ. ಬ್ಯಾಂಕ್ ನ ಪತ್ರಿಕಾ ಗೋಷ್ಠಿ ಅದು. ಬ್ಯಾಂಕ್ ನ ಅಧ್ಯಕ್ಷರು ತಮ್ಮ ಸಾಧನೆಯನ್ನು ವಿವರಿಸುತ್ತಾ ನಮ್ಮಲ್ಲಿ ಎಲ್ಲಾ ಯೋಜನೆಗಳೂ ಯಶಸ್ವಿಯಾಗಿದೆ. ಮಕ್ಕಳಿಗಾಗಿ ರೂಪಿಸಿದ ಪಿಗ್ಮಿ ಬ್ಯಾಂಕ್ ಬಿಟ್ಟು ಎಂದರು. ಆಗತಾನೆ ಸಮಾಜದ ಸಂಕೀರ್ಣತೆಗೆ ಕಣ್ಣು ಬಿಡುತ್ತಿದ್ದ ನಾನು ಹಾಗಿದ್ದರೆ ಅದೇಕೆ ಬೇಕು ಮುಚ್ಚಿಬಿಡಬಹುದಲ್ಲಾ ಎಂದೆ. ಅವರು ಬೆಚ್ಚಿ ಬಿದ್ದವರಂತೆ ಸಾಧ್ಯವೇ ಇಲ್ಲ. ಇವತ್ತು ನಮ್ಮ ಬ್ಯಾಂಕ್ ನೊಡನೆ ಒಡನಾಡಿದ ಮಕ್ಕಳು ನಮ್ಮ ಭವಿಷ್ಯದ ಗ್ರಾಹಕರು. ಯಾರಿಗೆ ತಾನೇ ತಮ್ಮ ಬಾಲ್ಯಕ್ಕೆ ಮರಳಲು ಇಷ್ಟವಿಲ್ಲ ಹೇಳಿ. ಹಾಗಾಗಿ ನಾಳೆಯ ಕಾರಣದಿಂದಾಗಿ ಇಂದಿನ ನಷ್ಟಕ್ಕೆ ಕೊನೆ ಹಾಡುವುದಿಲ್ಲ ಎಂದರು. ಒಂದು ಮಹತ್ವದ ಪಾಠ ನನಗೆ ಆಗಿಹೋಯಿತು.

ಮಕ್ಕಳು ಅನುಭವಿಸಿದ ನೋವು ಇಡೀ ಬದುಕಿನುದ್ದಕ್ಕೂ ಅವರ ಜೊತೆ ಪಯಣಿಸುತ್ತದೆ. ಅಂದು ಆದ ಗಾಯ ಇಡೀ ಬದುಕನ್ನು ಬಲಿ ತೆಗೆದುಕೊಳ್ಳುತ್ತದೆ.

ವಾಸುದೇವ ಶರ್ಮಾರಿಗೆ ಇದು ಗೊತ್ತಿರುವುದರಿಂದಲೇ ಅವರು ಮಕ್ಕಳಿಗಾಗಿ ಬರೀ ಕಾರ್ಯಕ್ರಮ ಸಂಘಟಿಸಿ, ಘೋಷಣೆ ಹೊರಡಿಸಿ ಸುಮ್ಮನಾಗಲಿಲ್ಲ. ಬದಲಿಗೆ ಮಕ್ಕಳಿಗೆ ಹಕ್ಕು ರೂಪಿಸುವ ಮಹತ್ವದ ಕೆಲಸದಲ್ಲಿ ತೊಡಗಿಸಿಕೊಂಡರು. ಮಕ್ಕಳ ಬಗ್ಗೆ ಜನ ನಾಯಕರಿಗಿದ್ದ ಅಜ್ಞಾನ ಒಂದಿಷ್ಟಾದರೂ ಇಲ್ಲವಾಗುವಂತೆ ನೋಡಿಕೊಂಡರು. ಮಕ್ಕಳ ಬಗ್ಗೆ ಸಮಾಜಕ್ಕಿದ್ದ ಕಣ್ಣ ಪೊರೆಯನ್ನು ತೆಗೆಯುವ ಕ್ಯಾಟರಾಕ್ಟ್ ಚಿಕಿತ್ಸೆಗೂ ಮುಂದಾಗಿದ್ದಾರೆ.

‘ಮಕ್ಕಳ ಸ್ಕೂಲ್ ಮನೇಲಲ್ವೆ..’ ಎಂದು ಹೇಳಿಬಿಡುವುದು ತುಂಬಾ ಸುಲಭ. ಆದರೆ ಇವತ್ತು ಮನೆ, ಮನೆಯೊಳಗಿನ ವ್ಯಕ್ತಿಗಳೇ ಜೀವನದುದ್ದಕ್ಕೂ ಮಾಸಲಾಗದ ಗಾಯಗಳಿಗೆ ಕಾರಣರು ಎನ್ನುವುದನ್ನು ಹಲವು ವರದಿಗಳು ಬೊಟ್ಟು ಮಾಡಿ ತೋರಿಸಿವೆ. ಮಕ್ಕಳಿಗೆ ಗುಡ್ ಟಚ್- ಬ್ಯಾಡ್ ಟಚ್ ಹೇಳಿಕೊಡಬೇಕಾದ ಕಾಲದಲ್ಲಿರುವುದಕ್ಕೆ ಮಕ್ಕಳ ಮನಸ್ಸಿನ ಮೇಲೆ, ಮುಗ್ಧತೆಯ ಮೇಲೆ ಹಲ್ಲೆ ಮಾಡಿದ ಮನೆ ಮಂದಿ, ನೆರೆ ಹೊರೆಯೂ ಕಾರಣ. ಇಂತಹ ವಿಷಯಗಳು ಇಂದು ಸಮಾಜದಲ್ಲಿ ಚರ್ಚೆಗೆ ಬರುತ್ತಿರುವುದರ ಹಿಂದೆ ವಾಸುದೇವ ಶರ್ಮಾ ಹಾಗೂ ಅಂತಹ ಮನಸ್ಸುಗಳ ಕಾಳಜಿಯಿದೆ.

ಶರ್ಮಾ ನನಗೆ ಅವರ ಈ ಎಲ್ಲಾ ಕೆಲಸಗಳ ಆಚೆಯೂ ಪರಿಚಿತರು. ಆದರೆ ಈ ಎಲ್ಲಕ್ಕೂ ಮೀರಿ ನನಗೆ ಅವರ ಕೆಲಸಗಳೇ ಮುಖ್ಯ. ಒಬ್ಬ ಸಮಾಜ ಕಾರ್ಯದ ವಿದ್ಯಾರ್ಥಿಯಾಗಿ ಅವರು ಯಾವ ರೀತಿಯ ಹಕ್ಕುಗಳ ಆಂದೋಲನದ ಜೊತೆಗೂ ಕೈಗೂಡಿಸಬಹುದಿತ್ತು. ಆದರೆ ಅವರು ಮಕ್ಕಳನ್ನು ತಮ್ಮ ತೆಕ್ಕೆಗೆ ಎತ್ತಿಕೊಂಡರಲ್ಲಾ ಅದು ನನಗೆ ಮುಖ್ಯ.

ಮಕ್ಕಳ ಹಕ್ಕುಗಳ ಬಗೆಗಿನ ಅರಿವು ಅವರಿಗೆ ಸುಲಭವಾಗಿ ಒದಗಿಬಂದದ್ದೇನೂ ಅಲ್ಲ. ವಾಸುದೇವ ಶರ್ಮಾ ಅದನ್ನು ಬೆಂಬತ್ತಿ ತಮ್ಮದಾಗಿಸಿಕೊಂಡಿದ್ದಾರೆ.

ಹೀಗೆ ಇವರು ಹಾಕಿದ ಹೆಜ್ಜೆಯ ಹಿಂದೆ ಒಂದು ಕಾಯುವ ತಾಯಿ ಇದ್ದಾರೆ ಎನ್ನುವುದು ನನಗೆ ಗೊತ್ತಾದದ್ದು ನಾವಿಬ್ಬರೂ ದೂರದರ್ಶನದ ಕಚೇರಿಯಲ್ಲಿ ‘ಚಂದನ’ ಪ್ರಶಸ್ತಿಯ ತೀರ್ಪುಗಾರರಾಗಿ ಕುಳಿತಾಗ. ಪ್ರಶಸ್ತಿಯ ಬಗ್ಗೆ ಮಾತನಾಡಿದ್ದಕ್ಕಿಂತ ನಾವು ಮಕ್ಕಳಿಗೆ ಹಕ್ಕುಗಳನ್ನು ದೊರಕಿಸಿಕೊಡುವುದನ್ನೇ ತನ್ನ ಬದುಕು ಎಂದುಕೊಂಡ ಎಗಳಾಂತ್ಬಐನ್ ಜೆಬ್ ಬಗ್ಗೆ ಮಾತನಾಡಿದ್ದೇ ಹೆಚ್ಚು. ಶರ್ಮಾ ಅದೆಷ್ಟು ಉತ್ಸುಕರಾಗಿ ಮಾತನಾಡುತ್ತಿದ್ದರೆಂದರೆ ದೂರದರ್ಶನದ ಕಛೇರಿಯೊಂದ ಹೊರಬರುವ ವೇಳೆಗೆ ನಾನು ಗೂಗಲಿಸಿ ಹತ್ತಾರು ವಿಷಯಗಳನ್ನು ನನ್ನದಾಗಿಸಿಕೊಂಡಿದ್ದೆ. ಎರಡೂ ಕೈ ಸೇರಿಸಿದರೆ ಚಪ್ಪಾಳೆ ಎನ್ನುತ್ತಾರೆ ನಮ್ಮಿಬ್ಬರ ನಾಲ್ಕೂ ಕೈಗಳು ಸೇರಿದ್ದರಿಂದ ಪರಿಣಾಮ ಹೆಚ್ಚಾಯಿತು. ಈ ಕೃತಿ ನಿಮ್ಮ ಮುಂದಿದೆ.

ನನಗೆ ಎಷ್ಟೋ ಜನ ಕೇಳುತ್ತಾರೆ. ನೀವು ಪತ್ರಕರ್ತರಾಗಿಲ್ಲದಿದ್ದರೆ ಏನಾಗಿರುತ್ತಿದ್ದೀರಿ ಎಂದು. ನಾನು ಒಂದು ಕ್ಷಣವೂ ತಡವರಿಸದೆ ಮಕ್ಕಳ ಬಾಲವಾಡಿ ತೆರೆದು ಅವರ ಆಟ ಪಾಠಗಳನ್ನು ಕಣ್ಣು ತುಂಬಿಸಿಕೊಳ್ಳುತ್ತಾ ಕೂರುತ್ತಿದ್ದೆ ಎನ್ನುತ್ತೇನೆ.

ಅದು ಸಾಧ್ಯವಾಗಲಿಲ್ಲ. ಮಕ್ಕಳಿಗೆ ಆ ಆಟ, ಪಾಠದ ಹಕ್ಕು ಸಿಗುವಂತೆ ಮಾಡಿದ ಆ ಅಮ್ಮನ ಬಗ್ಗೆ ಈ ಕೃತಿ ಪ್ರಕಟಿಸುವ ಅವಕಾಶ ಸಿಕ್ಕಿತಲ್ಲಾ ಎಂದು ಒಂದು ಮಾರು ಎತ್ತರ ಜಿಗಿದಿದ್ದೇನೆ.

ನೀವೂ ಓದಿ. ಮಕ್ಕಳಿಗಾಗಿ ಒಂದು ಸುಂದರ ಜಗತ್ತನ್ನು ಬಿಟ್ಟು ಹೋಗೋಣ.

 

‍ಲೇಖಕರು avadhi

November 20, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. T S SHRAVANA KUMARI

    ಹೌದು, ಮಕ್ಕಳಿಗಾಗಿ ಒಂದು ಸುಂದರ ಜಗತ್ತನ್ನು ಬಿಟ್ಟು ಹೋಗೋಣ.

    ಪ್ರತಿಕ್ರಿಯೆ
  2. ವಾಸುದೇವ ಶರ್ಮಾ

    ಎಷ್ಟೋ ದಿನಗಳ ನಂತರ ಯಾವುದೋ ಲಿಂಕ್ ನೋಡುತ್ತಿದ್ದವನಿಗೆ “ಆಕೆ ಮಕ್ಕಳನ್ನು ರಕ್ಷಿಸಿದಳು…” ಎಗ್ಲಾಂಟೈನ್ ಜೆಬ್ಬಳ ನನ್ನ ಪುಸ್ತಕಕ್ಕೆ ನೀವು ಬರೆದ ಈ ಪ್ರವೇಶಿಕೆಗೆ ಮತ್ಯೊಮ್ಮೆ ಬಂದೆ.

    ಮರು ಓದು ಖುಷಿ ಕೊಟ್ಟಿತು.

    ಧನ್ಯವಾದ ಮೋಹನ್.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: