
ಪ್ರವರ ಕೊಟ್ಟೂರು
ಮೌನವನ್ನು ಎದುರು ನೋಡುತ್ತಿದ್ದೆ
ತಂಗಾಳಿಯ ನೂಕಿಕೊಂಡು ಬಂದ ನಿನ್ನನ್ನು ನಾನು ಗಮನಿಸಲಿಲ್ಲ,
ಕಾಮನಬಿಲ್ಲುಗಳ ಹೊದ್ದುಕೊಂಡ ಮೋಡಗಳೋ
ಚಂದ್ರರ ಹೊತ್ತುಕೊಂಡ ನವಿಲುಗಳೋ
ಚಳಿಗಾಲದ ಬರ್ಫುಗಳು ಕರಗಿ ಅಂಗೈ ತುಂಬಾ ನದಿ
ಈ ಹಾಳು ಕವಿಗಳು ವೈರಾಗಿಗಳು, ಪಾಪಿಗಳು, ದ್ರೋಹಿಗಳು
ಅಂತೆಲ್ಲಾ ಪುಕಾರು
ಪ್ರೀತಿಸಲಿಕ್ಕೆ ಲಾಯಕ್ಕಿಲ್ಲದವರೆಂದು
ಹರೆಯದ ಹುಡುಗಿಯರ ಎಡಗಾಲಿನ ಒದೆ ತಿಂದಿದ್ದೇನೆ
ಪದ್ಯ ಬರೆದುಕೊಂಡೇ
ಮಂಟಪಕ್ಕೆ ಬಿಟ್ಟುಬಂದ ಗೆಳತಿಯರ
ನೆನಪು ಮಾಸುವ ಮುನ್ನ
ಧೋ ಎಂದು ಮಳೆ
ನೆನೆದು ಮೈ ಒದ್ದೆಯಾದಾಗ ಹಾಳು ಹೃದಯ
ಬೆಚ್ಚಗಿರಲು ಹಾತೊರೆಯುತ್ತದೆ
ಯಾರನ್ನು ದೂರುವುದು!
ಪದ್ಯಗಳನ್ನೋ, ಗೆಳತಿಯರನ್ನೋ, ಸ್ವತಃ ನನ್ನನ್ನೋ
ವ್ಯಥೆಯ ಒಡಲಿನಲ್ಲಿ
ಒಂದೆರಡು ಹನಿ ವಿಸ್ಕಿ ಇಲ್ಲದಿದ್ದರೆ!
ಗಾಜಿನ ಬಾಟಲುಗಳನ್ನು ಪ್ರೀತಿಸಿ
ಅಭ್ಯಾಸವಿದೆ,
ಅವುಗಳ ಬೆನ್ನಿಗೆ ಗೀರಿನ ಸಬೂಬು,
ಕೋಣೆಯ ತುಂಬಾ
ಈಗೀಗ ಪ್ರೀತಿಭರಿತ ಹಾಡುಗಳು
ಸೌಂದರ್ಯೋಪಾಸನೆ
ನೀನೀಗ ಧೈರ್ಯದಿಂದ
ಈ ಕವಿಯನ್ನು
ಒಂದು ಮುತ್ತಿನಿಂದ ಕೊಲ್ಲಬಹುದು






“ನೀನೀಗ ಧೈರ್ಯದಿಂದ
ಈ ಕವಿಯನ್ನು
ಒಂದು ಮುತ್ತಿನಿಂದ ಕೊಲ್ಲಬಹುದು”
ವಾಹ್… ಎಮಥ ಚೆಂದದ ಸಾಲುಗಳು