ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಈಗ ಹೇಳಿ ತೀರ್ಪು ಯಾಕೆ ನಮ್ಮ ವಿರುದ್ದವಾಯಿತು..?

c s dvarakanath

ಸಿ ಎಸ್ ದ್ವಾರಕಾನಾಥ್

ಮಹದಾಯಿ ನ್ಯಾಯಾಧಿಕರಣದ ಮಧ್ಯಂತರ ತೀರ್ಪು ನಮ್ಮ ವಿರುದ್ಧವಾಗಿದೆ..!? ಕರ್ನಾಟಕ ನೆಲ, ಜಲ, ನದಿ, ವನಗಳ ಬಗ್ಗೆ ಕಾಳಜಿ ಇಟ್ಟುಕೊಂಡ ಒಬ್ಬ ವಕೀಲನಾಗಿ ನನಗನಿಸಿದ್ದನ್ನು ನಿಮ್ಮೊಡನೆ ಹಂಚಿಕೊಳ್ಳುತಿದ್ದೇನೆ.

mahadayi mapಕಾವೇರಿ ನ್ಯಾಯಾಧಿಕರಣವಾಗಲಿ, ಮಹದಾಯಿ ನ್ಯಾಯಾಧಿಕರಣವಾಗಲಿ ಅಥವ ಸುಪ್ರೀಂ ಕೋರ್ಟ್ ಅಥವ ಯಾವುದೇ ಹೈಕೋರ್ಟುಗಳಲ್ಲಿ ಸಹಜವಾಗಿ ಸದಾ ಕರ್ನಾಟಕದ ಹಿತಾಸಕ್ತಿಗೆ ವಿರುದ್ಧವಾಗಿ ಯಾಕೆ ತೀರ್ಪು ಬರುತ್ತೆ? ಎನ್ನುವುದನ್ನು ಪರಾಮರ್ಶಿಸಿ ನೋಡಿ.. ನಿಮಗೆ ಸತ್ಯ ದರ್ಶನವಾಗುತ್ತದೆ..

ಕಾವೇರಿ ಇಷ್ಯೂ ತೆಗೆದುಕೊಳ್ಳಿ

ಎಂದಾದರೂ ನಮ್ಮ ವಕೀಲರು ಸಮರ್ಪಕವಾಗಿ ವಾದ ಮಂಡಿಸಿದ್ದಾರೆಯೆ..? ನ್ಯಾಯಾಲಯ ಕೇಳಿದ ದಾಖಲೆಗಳನ್ನು ನೀಡಿದ್ದಾರೆಯೆ? ಪ್ರತಿ ಸರ್ಕಾರ ಬಂದಾಗಲೂ ವಕೀಲರು ಬದಲಾಗುತಿರುತ್ತಾರೆ.. ನಮ್ಮ ಪರ ವಾದ ಮಾಡುವವರು ಸದಾ ಕರ್ನಾಟಕದವರಲ್ಲದ ವಕೀಲರೆ..!?

ತಮಿಳುನಾಡಿನ ಪರ ಸದಾ ಪರಾಷರನ್ ಎಂಬ ಹಿರಿಯ ಮುತ್ಸದ್ದಿಯೇ ವಾದಿಸುತ್ತಾರೆ. ಯಾವುದೇ ಸರ್ಕಾರವಿದ್ದರೂ ಕಾವೇರಿ ವಿಷಯ ಬಂದಾಗ ಇವರೇ ಶಾಶ್ವತ ವಕೀಲರು! ರಾಜ್ಯದ ಹಿತಾಸಕ್ತಿ ಬಂದಾಗ ಪರಾಷರನ್ ತಮ್ಮ ರಾಜ್ಯಕ್ಕಾಗಿ ಕಾಳಜಿಯಿಂದ ವಾದಿಸಿದರೆ ನಮ್ಮ ಹೊರರಾಜ್ಯ ವಕೀಲರು ಕೇವಲ ಫೀಜ್ ಗಾಗಿ ವಾದಿಸುತ್ತಾರೆ!!

ತಮಿಳುನಾಡಿನ ಅಧಿಕಾರಿಗಳು ಎಲ್ಲಾ ದಾಖಲಾತಿಗಳನ್ನು ವ್ಯವಸ್ಥಿತವಾಗಿ ತಮ್ಮ ವಕೀಲರಿಗೆ ಒದಗಿಸಿದರೆ ನಮ್ಮವರು ಕಾಟಾಚಾರಕ್ಕೆ ಬಂದವರಂತಿರುತ್ತಾರೆ!

ನಮ್ಮ ವಕೀಲರು ಆಗಾಗ ಬದಲಾಗುವುದರಿಂದ ಸಮಸ್ಯೆಯ ಆಳ ಅವರ ಅರಿವಿಗೆ ಪರಿಚಯವಾಗಿರುವುದೇ ಇಲ್ಲ. ಈ ಎಲ್ಲದರಿಂದಾಗಿ ನಮ್ಮ ವಾದವನ್ನು ಸಮರ್ಥವಾಗಿ ಮಂಡಿಸಲಾರದೆ, ದಾಖಲಾತಿಗಳನ್ನು ಒದಗಿಸಲಾರದೆ ಹಿಮ್ಮೆಟ್ಟುತಿದ್ದೇವೆ. ಈ ಸತ್ಯ ಅರಿಯದ ನಾವು ನ್ಯಾಯಾದಿಕರಣಗಳನ್ನು ದೂರುತ್ತೇವೆ.

ಈಗಿನ ಮಹದಾಯಿ ಮಧ್ಯಂತರ ತೀರ್ಪನ್ನೇ ನೋಡಿ.. ನ್ಯಾಯಾಧಿಕರಣಗಳು ಪಟ್ಟಿ ಮಾಡಿರುವ ನಮ್ಮ ದೌರ್ಬಲ್ಯಗಳನ್ನು ಗಮನಿಸಿ..

court೧. ಯೋಜನೆಗೆ ಸಂಬಂಧಿಸಿದ ತಾಂತ್ರಿಕ ಯೋಜನಾ ವರದಿ ಹಾಗೂ ತಾಂತ್ರಿಕ ಸಾಧ್ಯಾಸಾಧ್ಯತಾ ವರದಿಯನ್ನು ನ್ಯಾಯಾಧಿಕರಣಕ್ಕೆ ಸಲ್ಲಿಸಿಲ್ಲ.
೨. ಪರಿಸರ ಇಲಾಖೆಯ ಅನುಮೋದನೆಯನ್ನೇ ಪಡೆಯದೆ ಸರ್ಕಾರ ಯೋಜನೆ ಅನುಷ್ಠಾನಕ್ಕೆ ಮುಂದಾಗಿರುವುದು ಆಕ್ಷೇಪಾರ್ಹ.
೩. ನೀರು ಪಡೆಯುವ ಸಂದರ್ಭದಲ್ಲಿ ಬರಗಾಲ ಇದೆ ಎನ್ನುವುದನ್ನು ಕರ್ನಾಟಕ ಹೇಗೆ ಸಾಬೀತುಪಡಿಸುತ್ತದೆ? ಮಳೆಯನ್ನು ಆಧರಿಸಿಯೋ ಅಥವಾ ಡ್ಯಾಂನಲ್ಲಿ ನೀರಿನ ಪ್ರಮಾಣವನ್ನು ಗಮನಿಸಿಯೋ ಎನ್ನುವುದು ಸ್ಪಷ್ಟವಾಗಿಲ್ಲ.
೪. ಹೆಚ್ಚುವರಿ ನೀರಿನ ಲಭ್ಯತೆ ಇದೆ ಎನ್ನುವುದನ್ನು ಸಾಭೀತುಪಡಿಸಲು ಅಗತ್ಯ ಸಾಕ್ಷಾಧಾರಗಳನ್ನು ಒದಗಿಸಿಲ್ಲ.
೫. ತಿರುವು ಯೋಜನೆಯ ಸಾಧಕ-ಬಾದಕಗಳ ಕುರಿತು ವೈಜ್ಞಾನಿಕ ಅಧ್ಯಯನ ನಡೆಸಿಲ್ಲ. (ಆಧಾರ: ಕನ್ನಡ ಪ್ರಭ)

ಈಗ ಹೇಳಿ ನ್ಯಾಯಾಧಿಕರಣದ ತೀರ್ಪು ಯಾವ ಕಾರಣದಿಂದಾಗಿ ನಮ್ಮ ವಿರುದ್ದವಾಯಿತು..? ಇದಕ್ಕೆ ನೇರ ಹೊಣೆ ಸರ್ಕಾರ ಮತ್ತು ನಮ್ಮ ಕಾನೂನು ಪಂಡಿತರಲ್ಲವೆ..?

ರಾಜ್ಯವೊಂದಕ್ಕೆ ತನ್ನ ನೆಲ, ಜಲ, ನದಿ, ಕಾನನಗಳನ್ನು ಕಾಪಾಡಿಕೊಳ್ಳುವ ಬಗ್ಗೆ ಕನಿಷ್ಟ ಕಾಳಜಿ, ಅವನ್ನು ನಾಡಗಾಗಿ ಉಳಿಸಬೇಕಾದ ಇಚ್ಛಾಶಕ್ತಿಗಳಿಲ್ಲದಿದ್ದರೆ ಜನನಾಡಿಗೆ ಇಂತಹ ಕಷ್ಟ ತಪ್ಪಿದ್ದಲ್ಲ. ಅದು ಯಾವುದೇ ಪಕ್ಷದ ಸರ್ಕಾರವಾಗಿರಲಿ.. ಎಲ್ಲರಿಗೂ ಅನ್ವಯಿಸುತ್ತೆ.. ಇದು ನಮ್ಮ ನಾಚಿಕೆಗೇಡು..

‍ಲೇಖಕರು Admin

30 July, 2016

4 Comments

  1. Anonymous

    ಫ್ರೊ. ಬಸವರಾಜ ಪುರಾಣಿಕ

    ನಿಮ್ಮ ವಿಶ್ಲೇಷಣೆ ಮನನೀಯವಾಗಿದೆ.
    ರಸ್ತೆಗಿಳಿದು ಅಬ್ಬರಿಸುವ ಜನಕ್ಕೆ ಇದು ನಿಲುಕೀತೆ?
    “ಅವಧಿ”ಯ ಮೂಲಕ ೆಷ್ಟು ಜನಕ್ಕೆ ತಲುಪೀತೂ?
    ನೀವು ಇದನ್ನು ದಿನಪತ್ರಿಕೆಗಳಲ್ಲಿ ಪ್ರಕಟಿಸಿದರೆ ಆಸಕ್ತ ಜನಕ್ಕೆ ಲಾಭವಾದೀತು.
    ನಿಮ್ಮ ಸತ್ಯಪ್ರತಿಪಾದನೆಗೆ ನನ್ನ ಅಭಿನಂದನೆಗಳು
    ಬಸವರಾಜ ಪುರಾಣಿಕ 8792877649

  2. C. N. Ramachandran

    ಮಾನ್ಯ ದ್ವಾರಕಾನಾಥ್ ಅವರಿಗೆ: ಕರ್ನಾಟಕದ ನೆಲ-ಜಲ-ಜನರ ಬಗ್ಗೆ ನಿಮಗಿರುವ ಕಾಳಜಿಯನ್ನು ಗೌರವಿಸುತ್ತಲೇ, ಮಹದಾಯಿ ಮಧ್ಯಂತರ ತೀರ್ಪನ್ನು ಕುರಿತು ನೀವು ಭಾವುಕರಾಗಿ ಬರೆದಿರುವ ಲೇಖನಕ್ಕೆ ಈ ಪ್ರತಿಕ್ರಿಯೆಯನ್ನು ನೀಡುತ್ತಿದ್ದೇನೆ. ಸಾಮಾನ್ಯವಾಗಿ ನೀವು ಸಮಸ್ಯೆಗಳನ್ನು ವಸ್ತುನಿಷ್ಠವಾಗಿ ಚರ್ಚಿಸುತ್ತೀರಿ; ಆದರೆ ಈ ಲೇಖನ ಏಕಪಕ್ಷೀಯವಾಗಿದೆ, ಜನರನ್ನು ಗೊಂದಲಕ್ಕೆ ಈಡುಮಾಡುತ್ತದೆ ಎಂದು ಹೇಳಲು ನನಗೆ ವ್ಯಥೆಯಾಗುತ್ತದೆ.
    ನೀವು ಆಧರಿಸಿರುವ “ಕನ್ನಡಪ್ರಭ” ಪತ್ರಿಕೆಯ ಶುಕ್ರವಾರದ (೨೯/೭/೧೬) ಸಂಚಿಕೆಯ ಐದನೆಯ ಪುಟದಲ್ಲಿ “ಮಹದಾಯಿ ನ್ಯಾಯಾಧಿಕರಣ ತೀರ್ಪಿನ ಜಿಜ್ಞಾಸೆಗಳು” ಎಂಬ ಲೇಖನವಿದೆ. ಅದರಲ್ಲಿ ದಾಖಲಿಸಿರುವ ಮುಖ್ಯಾಂಶಗಳು ಹೀಗಿವೆ:
    ೧) ಅರಣ್ಯ ಇಲಾಖೆಯ ಅನುಮತಿ: ಇದನ್ನು ಪಡೆದಿಲ್ಲ ಎಂಬುದು ಒಂದು ಆಕ್ಷೇಪ. ಆದರೆ, ೨೦೦೧ರಲ್ಲಿಯೇ ಕರ್ನಾಟಕ ಸರಕಾರ ಅನುಮತಿಗಾಗಿ ಬರೆದ ಪತ್ರಕ್ಕೆ ಉತ್ತರವಾಗಿ, ’ನೀರು ಹಂಚಿಕೆ ಸಮಸ್ಯೆ ಬಗೆಹರಿಸಿಕೊಂಡು ಬಂದ ನಂತರ ಅನುಮತಿ ಬಗ್ಗೆ ನಿರ್ಧರಿಸಲಾಗುವುದು’ ಎಂದು ಕೇಂದ್ರ ಸರಕಾರ ೨೦೦೩ರಲ್ಲಿ ಕ. ಸರಕಾರಕ್ಕೆ ಉತ್ತರ ಬರೆಯಿತು; ಅದರ ಪ್ರತಿ ನ್ಯಾಯಾಧಿಕರಣದ ಬಳಿ ಇದೆ.
    ೨) ’ಬರಗಾಲದ ಸಂದರ್ಭದಲ್ಲಿ ನೀರು ಬಳಸಿಕೊಳ್ಳುತ್ತೇವೆ ಎಂಬುದಕ್ಕೆ ಪೂರಕ ದಾಖಲೆ ಇಲ್ಲ’ ಎನ್ನುವುದೂ ಸರಿಯಲ್ಲ. ಗೋವಾ ಸರಕಾರ ನೀಡಿರುವ ಅಧಿಕೃತ ಮಾಹಿತಿ ಪ್ರಕಾರ ೨೦೫೦ರ ಹೊತ್ತಿಗೆ ಗೋವಾಕ್ಕೆ ಬೇಕಾಗುವ ನೀರನ್ನು ಬಳಸಿಯೂ ೧೪ ಟಿ ಎಂ ಸಿ ನೀರು ಹೆಚ್ಚುವರಿಯಾಗಿ ಉಳಿಯುತ್ತದೆ. ಈ ಅಧಿಕೃತ ಮಾಹಿತಿಯೂ ನ್ಯಾಯಾಧಿಕರಣದ ಬಳಿ ಇದೆ.
    ೩) ’ವಿಸ್ತೃತ ಯೋಜನಾ ವರದಿ’: ನ್ಯಾಯಾಧಿಕರಣದ ತೀರ್ಪು ಬರದೆ (ಎಂದರೆ ಎಷ್ಟು ನೀರು ಕರ್ನಾಟಕಕ್ಕೆ ಬರುತ್ತದೆ ಎಂದು ಗೊತ್ತಾಗುವ ಮೊದಲೆ) ವಿಸ್ತೃತ ಯೋಜನೆಯನ್ನು ಸಿದ್ಧಪಡಿಸುವುದು ಹೇಗೆ? ಕೃಷ್ಣ ನ್ಯಾಯಾಧಿಕರಣದ ಸಂದರ್ಭದಲ್ಲಿ ಪರಿಸರ ಇಲಾಖೆಯ ಅನುಮತಿ ಇಲ್ಲದೆಯೇ ರಾಜ್ಯಕ್ಕೆ ಅನುಮತಿ ದೊರಕಿತ್ತು; ಅನಂತರ ರಾಜ್ಯ ಸರಕಾರ ವಿಸ್ತೃತ ಯೋಜನಾ ವರದಿಯನ್ನು ಸಿದ್ಧಪಡಿಸಿತ್ತು.
    ಈ ಅಂಶಗಳ ಆಧಾರದ ಮೇಲೆ ” ನ್ಯಾಯಮಂಡಳಿ ಕರ್ನಾಟಕದ ಅರ್ಜಿ ವಜಾ ಮಾಡುವ ಮೊದಲು ಪೂರಕ ದಾಖಲೆಗಳನ್ನು ಪರಿಶೀಲಿಸದೆ ಆದೇಶ ನೀಡಿದೆ” ಎಂಬುದು ಆ ಲೇಖನದ ತೀರ್ಮಾನ. ಈ ತೀರ್ಮಾನವು ಸತ್ಯವೆ ಅಥವಾ ಸತ್ಯದೂರವೇ ಎಂಬುದನ್ನು ನಿಮ್ಮಂತಹ ತಜ್ಞರು ನಮಗೆ ತಿಳಿಸಿಕೊಡಬೇಕು.
    ಸಮಸ್ಯೆಗಳು ಎದುರಾದಾಗ ಅವನ್ನು ಎದುರಿಸುವ ಬಗೆಯನ್ನು ಕುರಿತು ಚಿಂತಿಸಬೇಕೇ ಹೊರತು ಮತ್ತೊಬ್ಬರ ಇನ್ನೊಬ್ಬರ ಹೆಗಲು ತೋರಿಸುವುದಲ್ಲ. ಅದೇ ಪತ್ರಿಕೆಯ ಮತ್ತೊಂದು ಸಂಚಿಕೆಯಲ್ಲಿ ’ನಾರಿಮನ್ ಈಮಧ್ಯಂತರ ತೀರ್ಪಿಗೆ ಅರ್ಜಿ ಹಾಕುವುದು ಬೇಡ ಎಂದು ಸರಕಾರಕ್ಕೆ ತಿಳಿಸಿದ್ದರು; ಆದರೆ, ವಿರೋಧ ಪಕ್ಷಗಳ ’ಮಧ್ಯಂತರ ತೀರ್ಪಿಗೆ ಅರ್ಜಿ ಹಾಕಿ’ ಎಂಬ ಕೂಗಿಗೆ ಸರಕಾರ ಮಣಿಯಿತು’ ಎಂಬ ವರದಿಯೂ ಇದೆ. ಸದ್ಯದಲ್ಲಿಯೇ ಕೊನೆಯ ತೀರ್ಪು ಬರಲಿರುವಾಗ ಮಧ್ಯಂತರ ತೀರ್ಪಿಗೆ, ಪ್ರಾಯಃ, ಕೋರಿಕೆ ಸಲ್ಲಿಸಬಾರದಾಗಿತ್ತು. ಇನ್ನು ರಾಜ್ಯದ ಮುಖ್ಯ ಮಂತ್ರಿಗಳು ಗೋವಾದ/ ಮಹಾರಾಷ್ಟ್ರದ ಮುಖ್ಯ ಮಂತ್ರಿಗಳನ್ನು ಭೇಟಿ ಮಾಡಿ ಚರ್ಚೆ ಮಾಡಬೇಕಾಗಿತ್ತು; ಅಲ್ಲಿಯ ವಿರೋಧ ಪಕ್ಷಗಳನ್ನು ಒಲಿಸಬೇಕಿತ್ತು — ಎಂಬಂತಹ ವಿಚಾರಗಳೆಲ್ಲಾ ಅರ್ಥಹೀನ. ವೈಯಕ್ತಿಕ ನೆಲೆಯಲ್ಲಿ ಅಧಿಕಾರದಲ್ಲಿರುವವರು ಎಷ್ಟೇ ಸ್ನೇಹಪರರಾದರೂ, ಆ ಸ್ನೇಹವನ್ನು ರಾಜ್ಯದ ಆಗುಹೋಗುಗಳಿಗೆ ಯಾರೂ ಬಳಸುವುದಿಲ್ಲ. (ಚರ್ಚೆಗೆ ಹೋದಾಗ ಪ್ರೀತಿಯಿಂದ ಪಂಚತಾರಾ ಗೌರವವನ್ನು ತೋರಿಸಬಹುದು, ಅಷ್ಟೇ.)
    ಕೊನೆಯದಾಗಿ, ಕಷ್ಟ ಕಾಲದಲ್ಲಿ, ಆಪಾದನೆಗಳನ್ನು ಮಾಡುವ ಬದಲಿಗೆ ಎಲ್ಲರೂ ಒಂದಾಗಿ ಪರಿಹಾರ ಸೂತ್ರಗಳನ್ನು ಶೋಧಿಸಬೇಕು. ಸಿ. ಎನ್. ರಾಮಚಂದ್ರನ್

  3. siddanna vijapur

    ನಿಜ ಸರ್ ನಿಮ್ಮ ಮಾತು ಇಂತಹ ಸಮಸ್ಯೆಗಳಿಗೆ ನ್ಯಾಯಾಲಯಕ್ಕೆ ಸರಿಯಾದ ದಾಖಲೆಗಳನ್ನು ಒದಗಿಸಬೇಕು. ಅದೇಕೋ ನ್ಯಾಯವಾದಿಗಳ ಇಚ್ಚಾಶಕ್ತಿಯ ಕಿರತೆಯೋ ಅಥವಾ ಸಮರ್ಪಕ ದಾಖಲೆಗಳ ಕೊರತೆಯಿಂದ ಹಿನ್ನಡೆಯಾಗಿದೆ.

  4. Rudranna Harthikote

    Namma vakilaru elli badalagiddare, ade Nariman, kataraki, brijash kalappa, javali iddare, sarakaragalu badaladante hiriya vakilaru badalagilla, aya pakshadavaru kelavaru serpade, berpade agide aste,

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading