ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಈಗ ರಾಜ್ಯದ ತುಂಬ ಅವನ ಶಾಸನವೇ ಕವಿತೆ..

p b prasannaಪಿ ಬಿ ಪ್ರಸನ್ನ  

 

ಪ್ರಭುಸಮ್ಮಿತ

ಓಲಗದಲ್ಲಿ ವಿರಾಜಮಾನ
ರಾಜ
ಬಗೆ ಬಗೆಯ ಬಿರುದು ಬಾವಲಿಗಳ ಸಹಿತ
ಸಾಲುಗಟ್ಟಿದ್ದಾರೆ ಜನ
ಹೂ ಹಣ್ಣು ಅಹವಾಲುಗಳ ಜೊತೆಗೆ

playing fiddleಅವನೋ ಅನಾ
ಮತ್ತಾಗಿ ಅವರು ತಂದ
ಅರೆಬಿರಿದ ಹೂಗಳ ಹಿಸುಕಿ
ಇದು ಗಂಧ
ಮಿಡಿ ಕಾಯಿ ದೋರುಗಾಯಿಗಳ ಹಿಂಡಿ
ಇದೇ ರಸವೆನುವ
ಮರುದಿನದಿಂದ ಅದೇ ಶಾಸನ

ಸಂಗೀತ ಸೇವಾ ಅವಧಾರಯ
ಎಂದಾಗ ಇದ್ದೆಲ್ಲ ಕವಿಗಳು
ಗಾಯಕರು ಸಿದ್ಧ
ನೀವೆಲ್ಲ ನನ್ನ ಶ್ರುತಿಗೇ ಬದ್ಧ
ರಾಗಿ ಎಂದಾಗ ಅವರು ಕಂಗಾಲು

ಕವಿಯೋ
ಸ್ವಚ್ಛಂದ ಛಂದ ವಿಹಾರಿ
ಗಾಯಕನೋ
ಮಿಡಿದಂತೆ ಏಕತಾರಿ
ಕುಕಿಲಿರಿವ ಕೋಗಿಲೆಯ ಕುಣಿವ ನವಿಲಿನ
ಹರಿವ ನೀರಿನ ಶ್ರುತಿಯ ಹಿಡಿಯುವ

ಮಸಿಯು ಇಳಿಯದು ಎಂದ ಕವಿ
ಶ್ರುತಿಯು ಸೇರದು ಎಂದ ಗಾಯಕ
ಓಲಗದಲ್ಲೀಗ ಗದ್ದಲವೋ ಗದ್ದಲ

ನಾನೆ ಬರೆಯುವೆ ನಾನೆ ಹಾಡುವೆ
ಹೊಟ್ಟೆ ಹೊರೆಯಲೆಂದೇ ಇರುವ ನೀವುಗಳು
ನನ್ನ ಅನುಸರಿಸಿ ಎಂದ

ಈಗ
ರಾಜ್ಯದ ತುಂಬ ಅವನ ಶಾಸನವೇ ಕವಿತೆ
ಅದರದ್ದೇ ಪಾಡು

ಅಗೆಯುವವರು

ಅವರು ನಿತ್ಯವೂ
ಅಗೆಯುವರು ಚತುರಂಗ ಬಲ
ಭೇರಿ ಕೊಂಬು ಕಹಳೆಯೊಂದಿಗೆ

peopleಹೂವುಗಳ ಕತ್ತರಿಸಿ
ಮುಳ್ಳ ಹಂಚುವರು
ಶರಣು ಎಂದವರನೂ ಬಾಗಿಸಿ
ರುಂಡ ಚೆಂಡಾಡುವರು

ಕೋಡಿ ಕೋಡಿ ನೆತ್ತರಲಿ
ಬಣ್ಣ ರುಚಿ ಶಕ್ತಿಗಳ ಅರಸಿ
ಖಚಿತ ಗಂಧ ಬೆರೆಸುವರು

ಗೋರಿಗಳ ಅಗೆದು
ಸಿಕ್ಕ ಮೂಳೆಗಳ
ಮಹಿಮೆಯ ಹಾಡುವರು
ಬೇತಾಳಗಳಿಗೆ ಬಣ್ಣ ಬಳಿದು
ಗಾಳಿ ತುಂಬಲೆಳಸುವರು
ಸನಾತನದ ಚೂರುಗಳ
ಮರು ಜೋಡಿಸಿ ಚೌಕಟ್ಟಿನೊಳಗಿಟ್ಟು
ಸಂಭ್ರಮಿಸುವರು

ಅಗೆಯುವರು
ಅಗೆದಂತೆ ಗೋರಿಗಳೇ ಆಗುವರು
ಅವರು ಹರಿಸಿದ ನೆತ್ತರು
ಕಾಲ ಬುಡಕ್ಕೇ ಬಂದು
ಮಣ್ಣು ಸಡಿಲವಾಗಿ
ಅವರೇ ಸಮಾಧಿಯಾದರೂ ಸಂಭ್ರಮಿಸುವರು !

‍ಲೇಖಕರು admin

16 March, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading