ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಈಗ ಇವಳೂ ಕಾಯುವುದಿಲ್ಲವಲ್ಲ..

ಸೌರಭ ರಾವ್
ನಿನ್ನ ಮುತ್ತಿಗೆ ನಾ ಮೊದಲ ಸಲ ಬಿಕ್ಕಿದ ರಾತ್ರಿಯಿದು
ಪ್ರಾಜ್ಞಮೌನಿ ನೀ; ನಿನ್ನ ಪ್ರಶ್ನೆಗಳಿಗೆ ಉತ್ತರಗಳನಾಲಿಸುವ ತಾಳ್ಮೆಯಿದೆ
ಮುತ್ತು ನಿರಾಕರಿಸಿದ ಮಡದಿಯನ್ನು ಮರುಕ್ಷಣವೇ ಮಗುವಂತೆ ತಬ್ಬಿದ ಹೆಂಗರುಳು ನಿನ್ನದು
ಅದೇನೋ ‘ಗಂಡಸ್ತನ’ ಕೆರಳದೇ ತಾಯಿಯಾದ ಆತ್ಮಬಂಧು ನೀ
ನನ್ನ ತಪೋಜೀವಿ, ಕೇಳು
ಯಾವತ್ತು ಚಿಂತನಶೀಲರಾದ ನಿನ್ನ ಚಿಕ್ಕಮ್ಮನನ್ನು ರಾತ್ರಿಯೂಟದ ನಂತರ ಬೀಳ್ಕೊಡುವಾಗ ಅಷ್ಟು ದೊಡ್ಡ ಮನೆಯಲ್ಲಿ ಮತ್ತೂ ಪುಟ್ಟಹಕ್ಕಿಯಂತೆ ಕಂಡಳಲ್ಲ
ಅದಕ್ಕೆ ಮುಂಚೆ, ನಾ ಹಠ ಮಾಡದಿದ್ದರೆ ಕುಂಕುಮ ಕೊಡಲೂ ಹಿಂಜರಿದಳಲ್ಲ
ವೈಧವ್ಯಕ್ಕೆ ಕ್ರೂರಮುಖಗಳ ಕೊಡುವ ಸಮಾಜಕ್ಕೆ, ಅಂಥವಳನ್ನು ‘ಸತಿ’ ಪದ್ಧತಿಯನ್ನೂ ಹೊಗಳುವಂತೆ ಮಾಡಿಬಿಡುವ ಆ ಅಸಹ್ಯ ಶಕ್ತಿಯಿದೆಯಲ್ಲ
ಆಗ ನಮ್ಮ ಒಣ ವೈಚಾರಿಕತೆಯೆಲ್ಲ ಬೆನ್ನುಹುರಿ ಮುರಿದಂತೆ ಬಿದ್ದು ಮಣ್ಣುಮುಕ್ಕುತ್ತದಲ್ಲ
ಅದಕ್ಕೂ ಮುಂಚೆ ನನ್ನ ಜೀವದ ಗೆಳತಿಯೊಬ್ಬಳು
ಸಂಜೆ ಕತ್ತಲಲ್ಲಿ ಕರಗುತ್ತಿದ್ದಾಗ ನನ್ನ ತಬ್ಬಿ ಬಿಕ್ಕಿದಳಲ್ಲ
ಮೂವತ್ತು ದಾಟಿದ ಹೆಣ್ಣುಮಕ್ಕಳ ಬಗ್ಗೆ ಜನರ ಹೊಲಸು ಕುತೂಹಲ, ವದಂತಿ,  ಪ್ರಶ್ನೆ-ಪುಕಾರುಗಳಿರುತ್ತವಲ್ಲ
ಕೂಸು ಹುಟ್ಟುವ ಮುನ್ನ ಕುಲಾವಿ ಹೊಲೆದರೆನ್ನುವುದು ಕೇವಲ ಗಾದೆಯಾಗುಳಿಯದೇ
ಎಂದೋ ಅವಳ ತಾಯಿ ಹೊಲೆದ ಪುಟ್ಟ ಬಟ್ಟೆತುಂಡೊಂದು ಸಿಕ್ಕಿ ಕುಹಕವನ್ನಾಡುವಾಗ
ತಾಯಿ-ಮಗಳ ನಡುವೆ ಒಂದು ಮೌನ ಅನಾಥವಾಗಿತ್ತಲ್ಲ
ಅಲ್ಲಿ ಅಮ್ಮಾ, ನನ್ನಮ್ಮ, ದೂರ-ದೂರಲ್ಲಿ
ಪ್ರಾರ್ಥನೆಗಳೆಲ್ಲ ಬರಿದಾಗಿ ಬರಡಾದಂತೆ ಅಭ್ಯಾಸಬಲದಿಂದ ಸಂಜೆ ದೀಪ ಹಚ್ಚುತ್ತಾಳಲ್ಲ
ಹನ್ನೆರಡು ವರ್ಷಗಳ ಹಿಂದೆ ಹೀಗೇ ಒಂದು ಸಂಜೆ ತೊರೆದು ಹೋದ ಅವಳ ಗಂಡ ಇನ್ನೂ ಬರಲಿಲ್ಲವಲ್ಲ
ಈಗ ಇವಳೂ ಕಾಯುವುದಿಲ್ಲವಲ್ಲ
ಈ ರಾತ್ರಿಗೆ ನಾನು ನಿನ್ನ ಮಗುವಾಗೇ ಇರುತ್ತೇನೆ
ಬಿಕ್ಕು ಮರೆತು ಮಾತಲ್ಲಿ ಬತ್ತಲಾಗದ ನೋವುಗಳು ನಗುವೆಂಬ ಬಟ್ಟೆತೊಟ್ಟು ಹುಸಿಯಾಗಿ ನರಳುವುದ ಈ ದಿನ ತುಂಬ ನೋಡಿದ್ದೇನೆ
ನಿನ್ನ ಮುತ್ತಿಗೆ ಹೇಗೆ ಅರಳಲಿ, ಹೇಗೆ ಕೆರಳಲಿ
ನನ್ನ ಶಾಂತಮುಖಿ, ಹೇಳು..

‍ಲೇಖಕರು avadhi

9 September, 2019

1 Comment

  1. T S SHRAVANA KUMARI

    ಚೆನ್ನಾಗಿದೆ

Trackbacks/Pingbacks

  1. Women whose sorrow knows dignity – Silkworm Slumbers - […] ಈಗ ಇವಳೂ ಕಾಯುವುದಿಲ್ಲವಲ್ಲ.. […]

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading