ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಈಗಲೂ ಹಾಗೆಯೇ..

ಭಾರತಿ ಹೆಗಡೆ

 

ನೆನಪಿದೆಯಾ ನಿನಗೆ

ಇನ್ನೂ ದೂರ ನಡೆಯಲಾರೆ ಎಂದಾಗಲೆಲ್ಲ

ಒಂದೊಂದೇ ಹಣ್ಣು ಕೊಟ್ಟು

ಇಷ್ಟೇ ದೂರ…

ಇಲ್ಲೊಂದು ಕಾಡು

ಅದರಾಚೆಗೊಂದು ಗುಡ್ಡ

ಈ ಗುಡ್ಡದಾಚೆಗೆ ಹೊಳೆ

ಹೊಳೆಯಾಚೆಗೆ ಗದ್ದೆ

ಅದರಾಚೆಗೆ ಬಂದೇ ಬಿಟ್ಟಿತು ಮನೆ…

ಅನ್ನುತ್ತ ಮುಗಿಯದ ಈ ಹಾದಿಯಲ್ಲಿ

ಕೈ ಹಿಡಿದು ಕರೆದೊಯ್ದದ್ದು…

ಕುಂಟುತ್ತ ಅಲ್ಲೇ ಕುಸಿದು ಕೂತವಳನ್ನು

ಎತ್ತಿ ಹೆಗಲ ಮೇಲೆ ಕೂರಿಸಿಕೊಂಡು ಹೋಗಿದ್ದು

ಹೆಜ್ಜೆಯೂರಲೂ ಬಿಡದೆ…

ಅದೆಷ್ಟು ಹಣ್ಣುಗಳಿದ್ದವು ನಿನ್ನ ಬರಿದಾಗದ ಕೈ ಚೀಲದಲ್ಲಿ

ಇದ್ದವರಿಗೆಲ್ಲ ನನ್ನಿಂದಲೇ ಕೊಡಿಸುತ್ತ ಬಂದೆ

ಬರಿಗೈಯ್ಯಲ್ಲಿ ನಿಂತ

ನನ್ನ ಬೊಗಸೆ ತುಂಬಾ ಹಣ್ಣುಗಳನ್ನು ತುಂಬಿದೆ

ಹಣ್ಣ ಮರವನ್ನೇ

ಒಡಲೊಳಗಿಟ್ಟುಕೊಂಡವನಂತೆ

ಖಾಲಿಯಾದ ಪೆನ್ನಿಗೆ ಶಾಯಿ ತುಂಬಿಸಿ

ಚೆಂದದ ಅಕ್ಷರ  ಬರೆಸುತ್ತ ಅದೆಲ್ಲಿ ಮಾಯವಾಗಿಬಿಟ್ಟೆ…?

ಹೀಗೆ ಎಲೆತೊಟ್ಟು ಮುರಿದಂತೆ

ಕಳಚಿಕೊಂಡ ನಿನ್ನ ಹೇಗೆ ಕ್ಷಮಿಸಲಿ?

ಈಗಲೂ ಹಾಗೆಯೇ

ಕೊಟ್ಟೂ ಕೊಟ್ಟು ಬರಿದಾಗಿಸಿಕೊಂಡಿದ್ದೇನೆ ಈ ಕೈಗಳನ್ನು

ಖಾಲಿಯಾದ ಪೆನ್ನಿನಿಂದ ಏನು ಬರೆಯಲಿ…?

ಮರಳು ಮಣ್ಣುಗಳ ನಡುವೆ

ಹೇಗೆ ಹೆಜ್ಜೆಯಿಡಲಿ?

ಹಣ್ಣು ತೋರಿಸುತ್ತ.. ಇಲ್ಲೇ ಬಂದುಬಿಟ್ಟಿತು ನಿನ್ನ ಮನೆ…

ಎಂದು ಕರೆದೊಯ್ಯಬೇಕಾದವ

ಅದ್ಯಾವ ಮನೆ ಹೊಕ್ಕಿಬಿಟ್ಟೆ?

ಹೇಳು ನೀ ಹೊಕ್ಕ ಆ ಮನೆ ಎಲ್ಲಿದೆ…?

‍ಲೇಖಕರು admin

3 January, 2017

3 Comments

  1. S.p.vijaya Lakshmi

    Beautiful kavithe

  2. Anonymous

    ಭಾವಪೂರ್ಣ ತಲ್ಲಣದ ನಡುವೆ ಜೀವಪ್ರೀತಿ ಹಣುಕಿದೆ. ಜಡಗೊಂಡ ಮನವ ಕಾಡಿ ಕಾಡಿ ಕೆಣಕಿದೆ.

  3. Neeta Rao

    ಒದ್ದೆ ಮನಸ್ಸಿನ ತೊಯ್ದ ಭಾವಗಳು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading