ಬಹಳ ವರ್ಷದ ಹಿಂದೆ ಕವಿತೆ ಬರೆಯುವ ಧೈರ್ಯ
ಮಾಡಿದಾಗ ಬರೆದ ಮೊದಲ ಪದ್ಯ
ಅಮ್ಮ

ಎ ಎಂ ಪ್ರಕಾಶ್
ಬೇಸಿಗೆ ಶನಿವಾರ ಶಾಲೆ ಬಿಟ್ಟಾಗ
ಬೆಂಕಿ ರಸ್ತೆಯ ಮೇಲೆ ಬರಿಗಾಲ ಕುಣಿತ
ಸುಡುನೆತ್ತಿ ,ಪಾದದಳೆತೆಯ ನೆರಳು
ಹಸಿವೆ ಕಂಗಳ ಹೊತ್ತು
ಕತ್ತಲಾವರಿಸಿದ ಮನೆ ಹೊಕ್ಕರೆ
ಒಳಗೆ ಲೋಹ ತಾಗಿದ ಸದ್ದು
ಅಮ್ಮ. ವಾರಕ್ಕೊಮ್ಮೆ ವಿವಿಧಾಕಾರಗಳ
ದೇವರ ಮೈತೊಳೆದು
ಬೆಳ್ಳಿ ಕೆತ್ತನೆಯ ಸಂದುಗಳಲ್ಲಿನ
ಕಪ್ಪು ಧೂಳ ಶುಭ್ರವಾಗಿಸಿ
ಸ್ವಸ್ಥಾನದಲ್ಲಿರಿಸಿ
ಶತಮಾನಗಳ ಸ್ಪರ್ಶದಿಂದ
ಸವೆದ ಆಕೃತಿಯ ದೈವಕ್ಕೆ
ಎಣ್ಣೆ ದೀಪ ಹಚ್ಚಿದಾಗ
ಗೂಡಿನ ತುಂಬಾ ಹರಡುವ
ಬೆಳ್ಳನೆಯ ಬೆಳಕು
ಹಸಿವನ್ನೂ ಆವರಿಸಿ ಬಿಡುತ್ತಿತ್ತು
ಈಗಲೂ ಹಸಿವೆಯಾದಾಗಲೆಲ್ಲಾ
ಬೆಳಕು ನೆನಪಿಗೆ ಬರುತ್ತದೆ.





0 Comments