ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಈಗಲೂ ನೆನಪಾಗುತ್ತಾನವನು ನಗುತ್ತ ನಡೆದು ಹೋದವನು..

ಕಿಂದರಿ ಜೋಗಿ

ವಿನಿ 

 

ನೆನಪಾಗುತ್ತಾನೆ ಅವನು
ಮರೆತಷ್ಟು ಮತ್ತೆ ನೆನಪಾಗುತ್ತಾನೆ.

ಸರಿಯಾಗಿ ದಶಕದ ಹಿಂದೆ
ಪುಟ್ಟ ಊರಿನ ಶಿವರಾತ್ರಿ
ಜಾತ್ರೆಯಲ್ಲಿ
ಮೊದಲ ಬಾರಿ ಕಂಡಿದ್ದ
ಅದೇ ಕೊನೆಯ ಬಾರಿ ಕೂಡ.

he2 ಗಿಜಿಗಿಡುವ ಜನಜಂಗುಳಿಯ
ಬೀದಿಯಲ್ಲಿ
ಅವನು ನಡೆದು ಬರುತ್ತಿದ್ದರೆ
ಬಳೆ ಅಂಗಡಿಗಳ ಮುಂದಿನ
ಹೆಂಗಸರ ಕಣ್ಣೆಲ್ಲ ಅವನತ್ತ
ಗಂಡಸರೆಲ್ಲ ನಿಬ್ಬೆರಗು
ಮಕ್ಕಳಿಗೆಲ್ಲ ಖುಷಿ
ಕಿಂದರಿ ಜೋಗಿಯೊಬ್ಬ ಬಂದಂತೆ.

ಯಾರವನು ?
ಯಾರಿಗೂ ಗೊತ್ತಿಲ್ಲ.
ಯಾವುದೋ ದೂರ ದೇಶದವನು.
ಮುಡಿ ಕಟ್ಟಿದ ಕೂದಲು
ದಟ್ಟ ದಾಡಿ
ಋಷಿ ಮುನಿಯ ವರ್ಚಸ್ಸಿನವನು
ಹೆಸರೇ ಹೇಳಲಾಗದಂತ ಬಣ್ಣದ
ಬಟ್ಟೆ ಹಾಕಿದವನ
ತೋಳಲ್ಲೊಂದು
ಜೋಳಿಗೆಯಂತ ಚೀಲ
ಏಳೂವರಡಿ ಎತ್ತರದ ಅಜಾನುಬಾಹು.
ಒಂಟಿಯಾಗಿ ನಡೆದು ಬರುತ್ತಿದ್ದರೆ
ಇರುವೆ ಗುಂಪಿನಲ್ಲೊಂದು
ಆನೆ ಬಂದಂತಿತ್ತು.

ಎಲ್ಲರೂ ನಗತೊಡಗಿದರು
ಅವನ ಎತ್ತರಕ್ಕೆ
ವಿಲಕ್ಷಣ ವೇಷಕ್ಕೆ.
ಅಪಹಾಸ್ಯದ ನಗು ನಕ್ಕರು
ನಿಂಬೆ ಹಣ್ಣು, ಕಾಗದವನ್ನೆಲ್ಲ ಎಸೆದರು
ಮತ್ತಷ್ಟು ನಕ್ಕರು.

ನಾನೂ ಇದ್ದೆನಲ್ಲ
ಇರುವೆ ಗುಂಪಿನಲ್ಲೊಂದು
ಪುಟ್ಟ ಇರುವೆಯಂತೆ
ಏನೂ ಅರ್ಥವಾಗದ
ಬಾಲ್ಯದ ಬೆರಗು ನನ್ನದು
ಅನಿಸಲಿಲ್ಲ ನಗಬೇಕೆಂದು.

ಆದರೆ ಅವನು ನಕ್ಕನಲ್ಲ ಪ್ರತಿಯಾಗಿ
ಬೇರೆಯದೆ ರೀತಿಯ ನಗುವದು
ಜಗದ ವಿಷ ಕುಡಿದು ವಿಷಕಂಠ ನಕ್ಕಂತಿತ್ತು
ತೂಕದ ಮುಗುಳ್ನಗು.
ಗೇಲಿ ಮಾಡಿ ನಗುತ್ತಿದ್ದವರತ್ತ
ಮಂದಹಾಸ ಬೀರಿದ
ಕೈಜೋಡಿಸಿ ವಿನಮ್ರತೆ ಸೂಚಿಸಿದ
ಬುದ್ದ ಇರಬಹುದಾ ಅವನು
ಅನಿಸಿತ್ತು ನನಗೆ.

ಮುಗುಳ್ನಗುತ್ತಲೇ ನಡೆದು ಹೋದ.
ಅವನೆತ್ತರಕ್ಕೇರಲಾರದ
ಹತಾಶೆಯಿತ್ತಾಗ
ನಕ್ಕವರ ಮುಖಗಳಲ್ಲಿ.
ಅವನು ನಡೆದೇ ಹೋದ
ಎತ್ತರಕ್ಕೆ ಆನೆಯಂತೆ
ಗಜಗಾಂಭೀರ್ಯದಿಂದ.

ಈಗಲೂ ನೆನಪಾಗುತ್ತಾನವನು
ಎತ್ತರಕ್ಕೆ, ನಗುತ್ತ ನಡೆದು ಹೋದವನು.

ಒಮ್ಮೊಮ್ಮೆ ದುಃಖ ವಿಪರೀತವಾದಾಗ
ಸೋತು ಸುಣ್ಣವಾದಾಗ
ಯಾರೋ ಏನೋ ಅಂದಾಗ
ದಾರಿಯೆ ಕಾಣದಾದಾಗಲೆಲ್ಲ
ಮತ್ತೆ ನೆನಪಾಗುತ್ತಾನೆ ಅವನು.
ಎಲ್ಲ ಮರೆತು ಅವನಂತೆ
ಅವನ ಹಿಂದೆ ಎತ್ತರಕ್ಕೆ
ನಡೆಯಲು ಹೊರಟು ಬಿಡುತ್ತೇನೆ.

‍ಲೇಖಕರು Admin

30 April, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading