‘ಇವ ನಮ್ಮವ’ ಕಥೆಯ ಆಂತರ್ಯದ ಮಂಥನ…

  ಡಾ ವೀಣಾ ಪಿ           

ಕನ್ನಡ ಭಾಷೆಯ ಸಣ್ಣ ಕಥೆಗಳ ಸಮರ್ಥ ಉತ್ತರಾಧಿಕಾರಿ ಎಂದೇ ಗುರುತಿಸಿಕೊಂಡಿರುವ ಡಾ. ಅಮರೇಶ ನುಗಡೋಣಿಯವರ ಕಥೆಗಳನ್ನೋದುವುದೆಂದರೆ, ಅದೊಂದು ಸಂಕ್ರಾಂತಿಯ ಸುಗ್ಗಿಯ ಸೊಗಸನ್ನೂ, ವೈಚಾರಿಕತೆಯ ಬುತ್ತಿಯನ್ನುಂಡ ಸಂತೃಪಿಯನ್ನೂ ಒಟ್ಟೊಟ್ಟಿಗೇ ದಕ್ಕಿಸಿಕೊಳ್ಳುವ ಸುಯೋಗ. ನವೋದಯ, ನವ್ಯ ಹಾಗೂ ಬಂಡಾಯ ಕಾಲಘಟ್ಟದ ನವಿರುತನ, ಸೂಕ್ಷ್ಮ ಕೃತಿ ಹಾಗೂ ಜನಪರ ಕಾಳಜಿಗಳಿಂದಾದ ಸಮಗ್ರ ಸಮನ್ವಯದ ಪ್ರಬುದ್ಧ ಬರಹದ ಮೂಲಕ ಓದುಗರನ್ನು ವಿಚಾರಶೀಲತೆಯ ಮಹಾಮಂಥನಕ್ಕೆ ಪ್ರೇರಿಸುವ ಇವರ ಕಥೆಗಳು ಆಂತರ್ಯದಲ್ಲಿ ಅಗಾಧ ತಾತ್ವಿಕತೆಯ ಆಳ-ಅಗಲಗಳ ಹರಹನ್ನುಳ್ಳ ಮಹಾಗಣಿಗಳೇ ಸರಿ.

ಇವರ ಪ್ರತೀ ಕಥೆಯೂ ಕಟ್ಟಿಕೊಡುವ ಸಂದರ್ಭ ಮತ್ತು ಸನ್ನಿವೇಶಗಳ ಗಾಢ ಒಳ ನೋಟಗಳು ಹಾಗೂ ಮಥಿತಾರ್ಥಗಳ ವಿಶಿಷ್ಟ ನೆಲೆಗಳು ಸಮಾಜವನ್ನು ವಾಸ್ತವಿಕ ನೆಲೆಗಟ್ಟಿನ ಕಟಕಟೆಯಲ್ಲಿ ನಿಲ್ಲಿಸಿ ಆತ್ಮ ವಿಮರ್ಶೆಗೆ ಪ್ರೇರಿಸುವ ಮಹಾ ಯಜ್ಞಗಳಂತೆ ಭಾಸವಾಗುತ್ತವೆ. ಈ ಮಹಾಯಜ್ಞದ ಪ್ರಾಪ್ತಿಯಲ್ಲಿ ಓದಿಗೆ ಸಂದುವ ಪಾಲು ಬಯಸಿ ಮೆಚ್ಚಿನ ಕಥೆಗಾರರಾದ ಡಾ. ಅಮರೇಶ ನುಗಡೋಣಿಯವರ ಕಥೆಗಳನ್ನು ಬೆಂಬತ್ತಿದಾಗ ಒದಗಿದ ಜ್ಞಾನಾನಂದದ ಅನುಭೂತಿಯನ್ನು ಪದಗಳಲ್ಲಿ ನಿರೂಪಿಸುವ ಕಿರು ಬರಹ ಯಜ್ಞಕ್ಕೆ ತೊಡಗಿ ಇವರ “ಇವ ನಮ್ಮವ” ಕಥೆಯ ಆಂತರ್ಯವನ್ನಿಲ್ಲಿ ಮಂಥನಗೈದಿದ್ದೇನೆ.

“ಇವ ನಮ್ಮವ” ಕಥೆ ಸಮಕಾಲೀನ ಸಂದರ್ಭಕ್ಕೆ ಅತ್ಯಂತ ಅಗತ್ಯವಾದ ಬೋಧೆಯನ್ನೊದಗಿಸುವ ಕಥಾವಸ್ತುವನ್ನು ಹೊಂದಿರುವ ಕಾರಣದಿಂದಾಗಿ ವಿಶಿಷ್ಠವಾಗಿದ್ದು, ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಪೂರೈಸಿ ಮುಂಧಾವಿಸುತ್ತಿರುವ ಭಾರತೀಯ ಸಂದರ್ಭಕ್ಕೆ ಕಟ್ಟಿಕೊಡಲಾದ ಮಾನವೀಯ ನೆಲೆಗಟ್ಟಿನಲ್ಲಿ ಹಿಂದೂ-ಮುಸ್ಲೀಂ ಸಾಮರಸ್ಯವನ್ನು ಪ್ರತಿಪಾದಿಸುವ ಕಥಾ ಹೂರಣದ ವಿಶಿಷ್ಠ ಕಥನವಾಗಿದೆ.

ಅಖಂಡ ಭಾರತವನ್ನು ಒಡೆದ ದೇಶ ವಿಭಜನೆಯ ಕಹಿ ನೆನಪುಗಳು ಪ್ರತೀ ಬಾರಿಯೂ ಸ್ವಾತಂತ್ರ್ಯ ದಿನವನ್ನು ಪೂರ್ಣ ಹರುಷದ ಭಾವದೊಂದಿಗೆ ಆಚರಿಸಲಾಗದ ಕೊರಗನ್ನು ಮತಿ-ಮನಗಳಲ್ಲಿ ಮೂಡಿಸುತ್ತಲೇ ಇರುವ ಜೊತೆಗೆ ಸಾಮರಸ್ಯ ನೀಗುವ, ವಿಚ್ಛಿದ್ರತೆಯನ್ನು ಪದೇ-ಪದೇ ಉದ್ರೇಕಿಸುವ ಘಟನಾವಳಿಗಳು ಭಾರತದ ಸಾಮಾಜಿಕ ಭವಿಷ್ಯಕ್ಕೆ ಪ್ರಶ್ನಾರ್ಥಕ ಚಿಹ್ನೆಯನ್ನಿಡುತ್ತಲೇ ಇರುತ್ತವೆ.

ಇತ್ತೀಚಿನ ದಿನಗಳಲ್ಲಂತೂ ತೀವ್ರ ಆಳವಾಗಿಯೇ ಜನಸಾಮಾನ್ಯರ ಭಾವದಾಳವನ್ನು ಅಂತೆಯೇ ವೈಚಾರಿಕರ ವಿಚಾರಮತಿಯನ್ನು ಕಲಕುತ್ತಲೇ ಇರುವ ಹಿಂದೂ- ಮುಸ್ಲೀಂ ವೈಷಮ್ಯದ ಕುದಿಯು ಬೇರೆ-ಬೇರೆ ಸಂದರ್ಭ ಹಾಗೂ ಸ್ಥಳಗಳಲ್ಲಿ ಅಮಾಯಕರ ಬದುಕಿನ ಮಾರ್ಗಕ್ಕೆ ಹಾನಿ, ಹಿಜಬ್ ಮತ್ತು ಕೇಸರಿ ಶಾಲು ವಿವಾದ, ದೇಗುಲ ಮತ್ತು ದರ್ಗಾಗಳಿಗೆ ಬೆಂಕಿ, ಮತೀಯ ದೊಂಬಿ, ಕೊಲೆಗಳಂತಹ ಅತಿರೇಕದ ಅನಾಹುತಗಳಿಗೆ ಕಾರಣವಾಗಿ ಬೇರೆ-ಬೇರೆ ರೂಪಗಳಲ್ಲಿ ಬದುಕನ್ನು ದುಸ್ತರಗೊಳಿಸುತ್ತಿರುವುದನ್ನು ಕಂಡು ತೀವ್ರ ವಿಷಾದ ಹಾಗೂ ನೊಂದ ಮನೋಭಾವದ ಪ್ರತಿನಿಧಿಯಾಗಿ, ಅದೇ ಕಥಾವಸ್ತುವನ್ನು ಆಯ್ದುಕೊಂಡು, ಸಮಾಜವನ್ನು ತಿದ್ದುವೋಪಾದಿಯಲ್ಲಿ ಸಾಮಾಜಿಕ ಸಾಮರಸ್ಯದ ಬುತ್ತಿಯನ್ನು ಕೋಮುವಾದ ವಿಜೃಂಭಿಸುತಿಹ ಹಾದಿಯಲ್ಲಿ ನಡೆಯಬೇಕಾದ ಅನಿವರ‍್ಯತೆಯಲ್ಲಿ ಅಗತ್ಯವೆಂದು “ಇವ ನಮ್ಮವ” ಕಥೆಯಲ್ಲಿ ಕಟ್ಟಿಕೊಟ್ಟಿದ್ದಾರೆ ಡಾ. ಅಮರೇಶ ನುಗಡೋಣಿಯವರು.

ಅತೀವ ಖೇದಕರ ಹಾಗೂ ವಿಷಣ್ಣಕಾರಿ ಸಾಮಾಜಿಕ ಪ್ರವರ್ತನೆಗಳಿಂದ ಕ್ಷೋಬೆಗೊಂಡ ಪ್ರತೀ ಮನಕ್ಕೂ ಈ ಕಥೆ ಸಕಾಲಿಕ ಹಾಗೂ ಸೂಕ್ತವೆಂದೆನ್ನಿಸುವಲ್ಲಿ ಸಂದೇಹವಿಲ್ಲ. ಹಿಂದೂ- ಮುಸ್ಲೀಂ ವೈಷಮ್ಯದ ಝಳದ ತೀವ್ರತೆಯನ್ನು ಹಿಡಿದು ಸಾಗಿರುವ ಕಥೆ ಸಾಮರಸ್ಯದ ತಂಪನ್ನು ಸ್ಥಾಪಿಸಲು ಉದ್ದಕ್ಕೂ ತುಡಿಯುತ್ತದೆ. ಧಾರ್ಮಿಕ ನೆಲೆಯ ಸಂಘರ್ಷಗಳ ವೇಳೆ ಒಂದು ಧರ್ಮ ಮತ್ತೊಂದು ಧರ್ಮವನ್ನು ಅವಗಣಿಸುವ, ಅಂತರ್-ಧರ್ಮೀಯರ ಅಸ್ಮಿತೆ, ಬದುಕು, ಆಚಾರ-ವಿಚಾರಗಳನ್ನು ಪ್ರಶ್ನಿಸುವ, ಹಿಂಸಿಸುವ, ಬೀದಿಗೆಳೆಯುವ ಮಟ್ಟಕ್ಕೆ ಇಳಿದುದನ್ನು; ಕೋಮು ಗಲಭೆಗಳಂತಹ ಸಂದರ್ಭದಲ್ಲಿ ಮನದಲ್ಲಿ ಭುಗಿಲೇಳುವ ವಿಕ್ಷಬ್ಧ ಭಾವಗಳನ್ನು; ಇವೆಲ್ಲವನ್ನೂ ಕಂಡೂ ಕಾಣದಂತಿದ್ದು, ಸರಿಪಡಿಸಲಾಗದ ಅಥವಾ ಬಹುತೇಕ ಇಂಥದ್ದೊಂದು ಸ್ಥಿತಿಗೆ ಸ್ವಯಂ ಕಾರಣವೇ ಆದ ವ್ಯವಸ್ಥೆಯ ವೈಫಲ್ಯ ಹಾಗೂ ದುರವಸ್ಥೆಗಳನ್ನು ಕಟ್ಟಿಕೊಡುವ “ಇವ ನಮ್ಮವ” ಕಥೆ ಮತ್ತು ಆಶಯ ಅಪೂರ್ವವಾಗಿದೆ.

ಆರಂಭಿಕ ಜೈನ ಧರ್ಮಿಯ ಉಲ್ಲೇಖ – “ಯಾರೊಬ್ಬರ ಜೀವನೋಪಾಯವನ್ನು ಕಸಿದುಕೊಳ್ಳಬೇಡಿ. ಅದು ಪಾಪದ ಪ್ರವೃತ್ತಿ.” – ಯಾವ ಧರ್ಮವೂ ಇನ್ನೊಬ್ಬರಿಗೆ ಕೇಡನ್ನು ಬೋಧಿಸುವುದಿಲ್ಲ ಎಂಬುದನ್ನು ಎತ್ತಿ ತೋರಿದಂತಿದೆ. ‘ಧರ್ಮ’ – ಎಂಬುದು ಕೆಳಗೆ ಬೀಳಿಸುವುದಲ್ಲ; ಕೆಳಗೆ ಬಿದ್ದವರನ್ನು ಮೇಲೆತ್ತುವಂಥದ್ದು – ಎಂಬ ಧರ್ಮದ ಪದೋತ್ಪತ್ತಿಯ ನೆಲೆಯನ್ನೇ ಕಥೆಯುದ್ದಕ್ಕೂ ಪ್ರತಿಪಾದಿಸಲು ಯತ್ನಿಸಿರುವುದು ಕಥೆಯ ಘಟನೆಗಳ ವಿವಿಧ ಸಂದರ್ಭಗಳಲ್ಲಿ ಸಾಬೀತಾಗುತ್ತಲೇ ಹೋಗುತ್ತದೆ.

ಈ ಕಥೆಯಲ್ಲಿ ವಿಶೇಷವಾಗಿ ಮುಸ್ಲೀಂ ಸಮುದಾಯದ ಸಕಲ ರೀತಿ-ರಿವಾಜು, ಆಚರಣೆಗಳನ್ನು ಕಥೆಯಲ್ಲಿ ಮೇಳೈಸಿರುವ ಬಗೆ, ಕಥೆಗಳ ಪಾತ್ರಗಳಿಗೆ ಇಟ್ಟ ಹೆಸರುಗಳು ಉದಾಹರಣೆಗೆ: ಹಿಂದೂ- ಮುಸ್ಲೀಂ ಸಾಮರಸ್ಯದ ಪ್ರತೀಕವೇ ಆದ ‘ಶರೀಫ’ರ ಹೆಸರನ್ನು ನಾಯಕನಿಗಿಟ್ಟಿರುವುದು; ಸ್ವತಂತ್ರ್ಯ ಭಾರತದ ಗಲ್ಲಿಯಲ್ಲಿ ಜರುಗುವುದೇನೆಂಬುದನ್ನು ತೋರುವಂತೆ ನಾಯಕ ವಾಸಿಸುವ ಬಡಾವಣೆಗೆ ‘ಆಜಾದ್ ನಗರ’ ಎಂಬ ಹೆಸರಿಟ್ಟಿರುವುದು ಅತ್ಯಂತ ಅಪ್ಯಾಯಮನವೆನಿಸುತ್ತದೆ. ಜನ್ನತ್, ದುಖಾನ್, ಫಜರ್, ಬೀವಿ, ಉರ್ದು ಪದಗಳನ್ನೇ ಬಳಸಿರುವುದು ಕಥೆಗೆ ಮೆರುಗು ತಂದಿದೆ.

ವಿಠ್ಠಲ ನಗರವನ್ನು ಉಲ್ಲೇಖಿಸುತ್ತಲೇ, ಸದ್ದುಗದ್ದಲ ಮಾಸಿದ ಹನುಮ ಮಂದಿರವನ್ನು ಜನ್ನತ್ತು ಎಂದು ಶರೀಫ ಪರಿಭಾವಿಸುವಿಕೆ; ‘ರಸೂಲ’ ಎಂಬ ಪದಕ್ಕೆ ‘ಸಂದೇಶವಾಹಕ’ ಎಂಬರ್ಥವೂ ಇರುವ ನೆಲೆಯಲ್ಲಿ ಅವನು ಅಲ್ಲಲ್ಲಿ ನಡೆದ ಗಲಭೆಗಳನ್ನು ವಿವರಿಸುತ್ತಿರುತ್ತಾನಾದ್ದರಿಂದ ಪಾತ್ರಕ್ಕೆ ಈ ಹೆಸರಿನ ನಾಮಕರಣ ಸೂಕ್ತವೆಂದೆನಿಸುತ್ತದೆ.

‘ಓಂಕಾಳಮ್ಮನ ಜಾತ್ರೆಯಲ್ಲಿ ರಂಜಾನನಣ್ಣನ ಟೀಮಿನ ಮಂದಿಗೆ ವ್ಯಾಪಾರ ಮಾಡಲು ಬಿಡಲಿಲ್ಲವಂತೆ..’ – ಎಂಬ ನಾಮಪದಗಳ ಬಳಕೆಗಳು ಕಥೆಯ ಚೆಂದವನ್ನು ಹೆಚ್ಚಿಸಿವೆ. ಶಂಶಾಲ ದರ್ಗಾದ ಮತ್ತು ಶೇಖ್ ಮಿಯಾ ಬಾಬಾ ಉರುಸಿಗೆ ಹಿಂದೂಗಳು; ಉರುಕುಂದಿ ಈರಣ್ಣ ಮತ್ತು ತಿಂತಿಣಿ ಮೊನಪ್ಪಯ್ಯನ ಜಾತ್ರೆಗೆ ಮುಸ್ಲೀಂರು ಹೋಗುವಿಕೆ ನಡೆದು ಬಂದಿದೆ ಎಂಬ ನಿರೂಪಣೆ ಸೊಗಸೆನ್ನಿಸುತ್ತದೆ.

ಕಥೆಗಾರನೋರ್ವ ಎಂದಿಗೂ ಶೋಷಿತನ ಪರವಾಗಿಯೇ ನಿಲ್ಲುವಂತೆ ದಾಳಿಗೊಳಗಾದ, ಹಾನಿಗೀಡಾದ, ತಪ್ತ ಮುಸ್ಲೀಂ ಸಮುದಾಯದ ಪರವಾಗಿ ಹಿಂದೂ ಲೇಖಕರಾದ ಅಮರೇಶ ನುಗಡೋಣಿಯವರು ಈ ಕಥೆಯ ಮೂಲಕ ಧ್ವನಿಯಾಗಿರುವುದು – “ಬರೀ ದುಖಾನು ಸುಟ್ಟದ; ಪ್ರಪಂಚವೇನೂ ಸುಟ್ಟಿಲ್ಲ” – ಎಂಬ ಕಥಾ ನಾಯಕ ಜಾಫರನ ನುಡಿಗೆ ಅನ್ವರ್ಥಕವೆನಿಸುತ್ತದೆ. ನಾಯಕ ಶರೀಫನ ಪಾತ್ರವಂತೂ ಭಾರತವೆಂಬ ಸರ್ವ ಧರ್ಮಗಳ ಕರಗುವ ಮೂಸೆಯಲ್ಲಿ ಕರಗಿ ಬೆರೆತ ಓರ್ವ ಸಹೃದಯಿ ಮುಸಲ್ಮಾನನ ದರ್ಶನವನ್ನು ಮಾಡಿಸುತ್ತದೆ.

ಸಾಮರಸ್ಯ, ತಾಳ್ಮೆಯ ಬೋಧೆ, ಅನ್ಯ ಕೋಮಿನವರ ಕಿಡಿಗೇಡಿ ಧಾಳಿಯ ವೇಳೆಯೂ ಶರೀಫ ಸಾಬ ತೋರುವ ತಾಳ್ಮೆ ಹಾಗೂ ತಾಳಿಕೆಯ ಭಾವ, ತನ್ನದೇ ಅಂಗಡಿಯ ಧ್ವಂಸದ ತರುವಾಯವೂ “ಸೇಡು ಬೆಳೀಬರ‍್ದು ಮಗಳೇ..” – ಎಂಬ ಶರೀಫನ ಕಾಳಜಿ, ಸಂಯಮ ವಿಶೇಷವೆನ್ನಿಸುತ್ತವೆ. ತನ್ನ ಅಂಗಡಿ ಹಿಂದೂಗಳಿಂದ ನಾಶವಾದ ನಂತರವು ತೆಗೆದಿರಿಸಿದ್ದ ತಾಜಾ ಸೇಬುಹಣ್ಣುಗಳನ್ನು ಪಾಂಡುರಂಗ ದೇಸಾಯಿಗೆ ಕಳುಹಿಸಲು ಮುಂದಾಗುವ ಮುಸಲ್ಮಾನ ಶರೀಫಣ್ಣ ಇಷ್ಟವಾಗುತ್ತಾನೆ. ಶರೀಫನ ಹೆಂಡತಿ ರಜಿಯಾ ಶ್ಯಾಮಣ್ಣನ ಮಗಳ ಮಕ್ಕಳ ಕೆಮ್ಮು ನೆಗಡಿಗೆ ದೊಡ್ಡ ಪತ್ರೆ ಕಳುಹಿಸುವುದು ಮಾನವೀಯ ಮಾತೃತ್ವದ ಪರಿಛಾಯೆಯಾಗಿ ಕಾಣುತ್ತದೆ.

ರಜಿಯಾಳ ಪಾತ್ರದ ಮೂಲಕ ಧ್ವಂಸ ಹಾಗೂ ಧಾಳಿಗೀಡಾದ ಕುಟುಂಬದ ಸ್ತ್ರೀಯರ ತಹತಹಿಕೆ ಹಾಗೂ ಬೇಗುದಿಗಳನ್ನೂ; ಆದಿಲ್, ಸಲೀಂರಂತಹ ಮಕ್ಕಳು ಗುಂಪು ದಾಂಧಲೆಯಲ್ಲಿ (ಬಹುಶಃ ಮತೀಯ ಪ್ರೇರಿತ) ತೊಡಗಿ ಮನೆ ಮಾರು ಬಿಟ್ಟೋಡುವ ಸ್ಥಿತಿ ತಂದುಕೊಂಡು ತಂದೆ-ತಾಯಿಗೆ ತಂದೊಡ್ಡುವ ಅನಾಥ ಸ್ಥಿತಿಯನ್ನೂ; ಮೊಮ್ಮಕ್ಕಳಾದ ಪರ್ವೀನ್ ಹಾಗೂ ಶಕೀಲಾರ ಮೂಲಕ ಹಿಜಬ್ ಮತ್ತು ಕೇಸರಿ ಶಾಲುಗಳ ಸಂಘರ್ಷ ಅಮಾಯಕ ಮುಸ್ಲೀಂ ಹೆಣ್ಣು ಮಕ್ಕಳ ಮೇಲೆ ಬೀರಿದ ಅನಪೇಕ್ಷಿತ ಪೇಚು ಹಾಗೂ ದ್ವಂದ್ವದ ಸ್ಥಿತಿಯನ್ನು ಹಾಗೂ ಹಿಜಬ್ ಧರಿಸಿಬರಬೇಕೆಂಬ ಸ್ವಧರ್ಮೀಯರ ಹುಕುಂ ಒಂದೆಡೆಯಾದರೆ, ಹಿಜಬ್ ಮತ್ತೊಂದೆಡೆ ಧರಿಸಬಾರದೆಂಬ ಕಾನೂನಿನ ನಡುವೆ ನರಳುವ ಮುಸ್ಲೀಂ ಯುವತಿಯರ ಶಿಕ್ಷಣದ ಕನಸಿನ ಬಗೆಗಿನ ನಿರುದ್ವಿಗ್ನವಲ್ಲದ ಆತಂಕ ಹಾಗೂ ತೊಳಲಾಟದ ಮನಸ್ಥಿತಿಯನ್ನು; ಜೊತೆಗೆ ಸಮಾಜದಲ್ಲಿ ಪ್ರತೀ ಬದುಕು, ವ್ಯಾಪಾರ-ವ್ಯವಹಾರವೂ ಜಾತಿ-ಧರ್ಮಗಳನ್ನು ಮೀರಿ ಒಬ್ಬರಿಗೊಬ್ಬರು ಆತು-ಅಗತ್ಯವಾಗಿ ಸಾಗುತ್ತಿರುವಿಕೆ ಸಕಲವನ್ನೂ ಕಥೆ ಅದ್ಭುತವಾಗಿ ನಿರೂಪಿಸಿದೆ.

‘ಸರ್ಕಾರ, ಕಾನೂನು ಅವರ ಕೈಯಾಗವಂತೆ’ – ಎಂಬ ರಸೂಲನ ಆತಂಕದ ಹೇಳಿಕೆ – ಧರ್ಮನಿಷ್ಠ ರಾಜಕೀಯ ಪ್ರೇರಿತ ನಡೆಗಳು ಹೇಗೆ ಆಘಾತಕಾರಿ ಎಂಬುದನ್ನು ಧ್ವನಿಸಿದರೆ; “ಸಣ್ಣ ಜಗಳ ನಡೀತಾವಷ್ಟೆ. ನಿನ್ನಂಥ ಹುಡುಗರು ಆ ಸುದ್ದಿಗಳನ್ನು ಮನ್ಸಿಗೆ ತಗಬಾರದು..”  – ಎಂಬಲ್ಲಿ ಯುವ ಜನತೆ ಸಮಕಾಲೀನ ಸಂದರ್ಭಗಳನ್ನು ನಿಭಾಯಿಸಬೇಕಾದ್ದು ಹೇಗೆಂಬ ತಿಳುವಳಿಕೆ ಇದೆ. ‘ಹಿಂದೂ ಕಾಲೋನಿಯೊಳಗೆ ತರಕಾರಿ ಮಾರಬಾರದು, ಸೈಕಲ್ ರಿಪೇರಿ ದುಖಾನ್ ಬೇರೆಡೆಗೆ ಹಾಕಬೇಕು, ಹನುಮ ಮಂದಿರದ ಆವರಣದಲ್ಲಿ ಮುಸಲ್ಮಾನರು ವ್ಯಾಪಾರ ಮಾಡಬಾರದು ಎಂಬಿತ್ಯಾದಿ ತಾಕೀತುಗಳು ಸಾಮರಸ್ಯದ ಹಾದಿಗೆ ಮುಳ್ಳು ಹರವುತ್ತಿರುವ ಬಗೆಯನ್ನು ಎತ್ತಿ ತೋರುತ್ತವೆ.

ಜೊತೆಗೆ ಬ್ರೇಕಿಂಗ್ ನ್ಯೂಸ್ ಧಾವಂತದಲ್ಲಿ ಸಮೂಹ ಮಾಧ್ಯಮಗಳು ಬಣ್ಣ ಹಚ್ಚಿದ ಸುದ್ದಿಗಳನ್ನು ಭಿತ್ತರಿಸುತ್ತಾ ಸಮಾಜದ ಮೇಲೆ ಬೀರುವ ಅನಪೇಕ್ಷಿತ ಪ್ರಭಾವಗಳ ಕುರಿತಾಗಿಯೂ ಕಥೆ ಗಮನ ಸೆಳೆಯುತ್ತದೆ. ಶರೀಫನ ಕನಸು ಮಾರ್ಮಿಕವಾದ ಆತಂಕದ ಮುನ್ಸೂಚನೆಯನ್ನು ನೀಡುತ್ತದೆ. ಹೀಗೆ ದ್ವೇಷ ವೈಷಮ್ಯಗಳಾದರೆ ಇತಿಹಾಸ ಮರುಕಳಿಸುವುದರಲ್ಲಿ, ನಾವು ರಕ್ತದ ನೆಲದಲ್ಲಿ ನಿಲ್ಲುವುದೇನೂ ದೂರವಿಲ್ಲ – ಎಂಬುದು ಖಚಿತ ಮುನ್ಸೂಚನೆ. ಮನಸ್ಸಿನಲ್ಲಿ ಆತಂಕ, ಆಘಾತವುಕ್ಕುವ ವೇಳೆಯಲ್ಲಿಯೂ ಸಂವೇದನೆಯ ಕಥೆಗಾರನ ತುಡಿತ – ತಾಳ್ಮೆ; “ಇದು ತಾಳಿಕೊಂಡಿರುವ ಸಮಯ” – ಎಂಬ ಶರೀಫನ ಪಾತ್ರದ ನುಡಿಯ ಮೂಲಕ ವ್ಯಕ್ತಗೊಂಡಿದೆ. ಮತ್ತೆ ಶರೀಫನ ಅಂಗಡಿ ಮುಗ್ಗಟ್ಟು ಧ್ವಂಸದ ಸಂದರ್ಭವನ್ನು ಹನುಮ ದೇವರಿಗೆ ಉಪವಾಸವಿದ್ದು ಅಸ್ವಸ್ಥಳಾದ ಮಹಿಳೆಯನ್ನು ಶರೀಫ ಉಪಚರಿಸುತ್ತಿರುವಾಗ ನಡೆದ ಘಟನೆಯಾಗಿ ಕಲ್ಪಿಸಿ ಚಿತ್ರಿಸಿರುವುದು ದುರುಳರ ದುಷ್ಟತೆಯನ್ನು ಗಾಢವಾಗಿ ನಿರೂಪಿಸುವಲ್ಲಿ ಶರೀಫನ ಪಾತ್ರವನ್ನು ಆಪ್ತವಾಗಿಸುವಲ್ಲಿ ಯಶಸ್ವಿಯಾಗುತ್ತದೆ.

ಧ್ವಂಸವಾದ ಹಣ್ಣುಗಳು ಹನುಮ ಭಕ್ತರಿಗಾದರೂ ಸಂದಿದ್ದರೆ ಎಂದುಕೊಳ್ಳುವಲ್ಲಿ ಅವನ ಜಾತ್ಯಾತೀತ ಮನೋಧರ್ಮ ಎತ್ತಿ ತೋರಿದಂತಿದೆ. ಒಟ್ಟಿನಲ್ಲಿ ತುಂಬಾ ಸೂಕ್ಮ್ಷಮತೆಯೊಂದಿಗೆ ಪ್ರತೀ ಘಟನೆಯನ್ನು ನಿರೂಪಿಸಲಾಗಿದೆ. “ಎಲ್ಲ ಸಹೀ. ದೇವ್ರು ಸರಿ ಮಾಡ್ತಾನೆಂಬ ನಂಬುಗೆ ನಮಗರ‍್ಲಿ.” – ಎಂಬ ಆಶಾವಾದ, ತುಡಿತ ಚೆನ್ನಾಗಿ ನಿರೂಪಿಸಲ್ಪಟ್ಟಿದೆ. ಶರೀಫನಿಗೆ ದುಕಾನು ಹಾಳುಗೈದವರ ಪರಿಚಯವಿದ್ದರೂ ಪೊಲೀಸರಿಗೆ ಹೇಳದೇ “ಸೇಡು ಬೆಳಿಬರ‍್ದು ಮಗಳೇ..” – ಎಂಬಲ್ಲಿ ಶರೀಫನ ವಿವೇಕ; “ಹಿಂದೂಸ್ತಾನದ ಮುಸ್ಲೀಂರು ನಾವು ಪಾಕಿಸ್ತಾನ ನಮ್ಮ ಕನ್ಸು-ಮನ್ಸಿನಲ್ಲಿಲ್ಲ” – ಎಂಬಲ್ಲಿ ಭಾರತದ ಮಣ್ಣಿನೊಂದಿಗೆ ಮುಸ್ಲೀಂರ ಸಹಜ ಸಂಬಂಧವನ್ನು ಕಥೆ ನಿರೂಪಿಸಿದೆ. ಅಂತೆಯೇ ಮೊಳಕೆಯ ಚಿಗುರಲ್ಲಿ, ಪೈರಲ್ಲಿ, ಗಿಡಮರ, ಕಾಡಲ್ಲಿ ಹಸಿರೇ ಹಸಿರು; ಅದಿಲ್ಲಂದ್ರ ಮನುಷ್ಯ ಜಾತಿ ಬದುಕದಿಲ್ಲವ್ವ” – ಎಂಬ ಮಾತಲ್ಲಿ ಹಸಿರಿನ ಬಗ್ಗೆ ಕೋಮುವಾದಿಗಳ ದ್ವೇಷವನ್ನು ಶಮನಗೊಳಿಸುವ ಯತ್ನವಿದೆ.

ಇದೆಲ್ಲವನ್ನೂ ಮೀರಿ “ಹಜ್ರತ್ ಕಟ್ಟೆ” ವಿಶೇಷ ಸಾಂಕೇತಿಕ ಪ್ರತಿಮೆಯಾಗಿ ಕಥೆಯ ಆಶಯದ ವೇದಿಕೆಯಾಗಿ ಮೂಡಿಬಂದಿದೆ. ಇತಿಹಾಸದ ಬದಲಾವಣೆಗಳಿಗೆ ಸಾಕ್ಷಿಯಾಗಿ, ವಾದ-ವಿವಾದ ಹಾಗೂ ಸಾಮರಸ್ಯದ ನೆಲೆಯಾಗಿ ನಿಲ್ಲುವಲ್ಲಿ ಯಶಸ್ವಿಯಾಗಿರುವುದು ಒಂದಷ್ಟು ಸಮಾಧಾನ ತರುತ್ತದೆ. ಅಂಥ ಅನುಚಿತ ಧಾಳಿಯ ಸಂದರ್ಭದಲ್ಲಿ ಹಜ್ರತ್ ಕಟ್ಟೆಯ ದೋಸ್ತರೆಲ್ಲಾ ಬಂದು ಶರೀಫನಿಗೆ ಸಂತೈಸುವುದು ಸಮಾಜದಲ್ಲಿ ಮಾನವೀಯತೆ ಮರೆಯಾಗಿಲ್ಲವೆಂಬುದನ್ನು ಸೂಚ್ಯವಾಗಿ ತೋರುತ್ತದೆ. ಎಲ್ಲರೂ ಸಂವೇದಾನಾಶೂನ್ಯರಲ್ಲ; ಆದರೆ, ಒಂದಷ್ಟು ಪುಂಡಾಟಿಕೆ ಪ್ರವೃತ್ತಿಯ ಜನರು ಸಮಾಜದಲ್ಲೆಬ್ಬಿಸುವ ದೊಂಬಿಗಳು ಅಮಾಯಕರ ಬದುಕಿಗೆ ತರುವ ಹಾನಿ ಅಗಾಧವಾದದ್ದು, ಈ ಎಲ್ಲವನ್ನು ಈ ಕಥೆಯಲ್ಲಿ ಅತ್ಯುತ್ತಮವಾಗಿ ತೋರಿಸಲಾಗಿದೆ.

“ಅವರ ಮ್ಯಾಲೆ ಧಾಳಿ ನಡೆದದ್ದೂ ಒಂದೇ, ಕೆರೆ ಹನುಮನ ಮ್ಯಾಲೆ ಧಾಳಿ ನಡೆದಂಗನೇ ಸರಿ. ಇದನ್ನು ನಾವು ಖಂಡಸ್ತೇವು.” – ಇದು ಪ್ರತೀ ಹಿಂದೂವಾದವನಲ್ಲಿ ಮೂಡಬೇಕಾದ ಭಾವ; “ನಾವೆಲ್ಲ ಹಜ್ರತ್ ಕಟ್ಟೆಯ ದೋಸ್ತರು ಮತ್ತೆ ಮೊದಲಿನಂತೆ ಕೂಡಿಕೊಂಡು ಇರುವವರು ಆಗಲಿ” – ಪ್ರತೀ ಭಾರತೀಯರಲ್ಲಿ ಮೂಡಬೇಕಾದ ಅಗತ್ಯ; ಜೈ ಶ್ರೀರಾಮ್ ಹಾಗೂ ಜೈ ಹನುಮಾನ್ ಘೋಷಗಳು ರಣ ಕಹಳೆಗಳಂತೆ ಭಾಸವಾಗುವಂತೆ ಬಳಸುವುದು ಖಂಡಿತಾ ಯಾವ ಹಿಂದೂವಿಗೂ ಶೋಭೆ ತರುವಂಥದ್ದಲ್ಲ. ಅಂತೆಯೇ ಹಿಜಬ್ ವಿವಾದ, ಆಜಾನ್ ಕೂಗುವಿಕೆ ನಿಷೇದ ಇತ್ಯಾದಿಗಳು ಬೇಕೆಂದೇ ಒಂದಾದಮೇಲೊಂದಂರಂತೆ ಸೃಷ್ಟಿಸಲ್ಪಟ್ಟ ದಳ್ಳುರಿಗಳೆಂದು ಸ್ವಪ್ರತಿಷ್ಟೆ ಬಿಟ್ಟ ಯಾವ ಹಿಂದೂವಿಗೂ ಅನ್ನಿಸದೇ ಇರಲಾರದು. ಅವರು ಆಜಾನ್ ಕೂಗುವರೆಂದು ಅವರಷ್ಟೇ ಜೋರಾಗಿ ಮೈಕಿನಲ್ಲಿ ಇವರು ಈಗ ಹೊಸದಾಗಿ ಚಾಲೀಸಾ ಸ್ತುತಿಸಿದ್ದು ಅದೆಷ್ಟು ಬಾಲಿಶ! ಸ್ವಾತಂತ್ರ್ಯ ಅಮೃತ ಮಹೋತ್ಸವದತ್ತ ಭಾರತ ಹೊರಟ ಹೊತ್ತಲ್ಲಿ ಖೇದಕರವಾದ ಅನಪೇಕ್ಷಿತವಾದ ಹಲವು ಪ್ರಸಂಗಗಳು ನಮ್ಮ ಭಾರತೀಯ ಸಮಾಜದ ಶಾಂತಿಯ ಬುಡಕ್ಕೆ ಕೊಡಲಿಯಿಟ್ಟದ್ದು; ಆ ಘಟನೆಗಳ ಚಿಗುರು ಕರ್ನಾಟಕದಲ್ಲಿ ಆದದ್ದು ಮತ್ತಷ್ಟು ವಿಷಾದಕರ ಸಂಗತಿಯೇ..

ಕಥೆಯಲ್ಲಿ ಎಲ್ಲಕ್ಕಿಂತ ವಿಶೇಷವಾದದ್ದೆಂದೆನಿಸಿದ್ದು ಮರುಳನ ಪಾತ್ರ. ಧರ್ಮದ ಅಮಲಿನಲ್ಲಿ ಉನ್ಮತ್ತ ದ್ವೇಷದ ದಳ್ಳುರಿಕೋರರ ನಡುವೆ ‘ಮರುಳ’ನೆಂಬ ನಿರ್ಲಿಪ್ತ ಪಾತ್ರ; ಈ ಪಾತ್ರದೊಂದಿಗೆ ಬೆರೆತ ಸಂತತನ ಇಷ್ಟವಾಗುತ್ತದೆ. ಧರ್ಮದ ಹುಚ್ಚು ಹತ್ತಿಸಿಕೊಂಡ ಜನ ಸಾಮಾನ್ಯರು ಮರುಳರೋ.. ಯಾವುದಕ್ಕೂ ಅಂಟಿಕೊಂಡಿಲ್ಲದ ಆತ ಮರುಳನೋ.. ಎಂಬ ಪ್ರಶ್ನೆಯಂತೂ ಮನದಲ್ಲಿ ಮೂಡದೇ ಇರದು. “ಹನುಮ-ಶರೀಫನ ಮಾತುಕತೆ ನಡೆದಾವ, ನಡಿಲಿ, ಹಿಂಗ ನಡಿಬೇಕು…” ಎಂದು ರ‍್ರನೇ ಹೋದ ದಿಕ್ಕಿಗೆ ಶರೀಫ ಕೈ ಮುಗಿಯುವುದು ಅದೆಂಥಾ ಅದ್ಭುತ ಅಂತ್ಯ ಕಥೆಗೆ! ಹೌದು; ಹನುಮ-ಶರೀಫ, ಅಲ್ಲಾ-ಶ್ಯಾಮರ ನಡುವೆ ನಿಲ್ಲದ ಮಾತುಕತೆ ನಡೆದಾಗಲೇ ಈ ಜಗ ಸೊಗ ಸದೃಶವಾಗಿರಬಲ್ಲದು; ಇಲ್ಲವೋ ಘೋರ ನರಕವೇ…

ಹೀಗೆ ಈ ರೀತಿ ಜಾತ್ಯಾತೀತ ಪ್ರವೃತ್ತಿಯ ಭಾವಗಳನ್ನು ಹಿಂದೂವಾದವರು ಸಮಾಜದಲ್ಲಿ ಮುಕ್ತವಾಗಿ ತೋರುವುದೂ ಕೆಲವೊಮ್ಮೆ ಅಲ್ಲಿ ಹಿಜಬ್ ಸಮಸ್ಯೆಗೀಡಾದ ಹೆಣ್ಣುಮಕ್ಕಳಂತೆಯೇ ಕಷ್ಟಕರವೇ ಆಗಿರುವಲ್ಲಿ ಹಿಂದೂ ಲೇಖಕರ ಲೆಕ್ಕಣಿಯಿಂದ ಮೂಡಿದ ಈ ಕಥೆ ಮಾತ್ರಕ್ಕಲ್ಲ; ಕಥೆಯ ಲೇಖಕರ ವ್ಯಕ್ತಿತ್ವಕ್ಕೂ ಯಾರಾದರೂ ತಲೆದೂಗಲೇ ಬೇಕು. “ಇವ ನಮ್ಮವ” ಕಥೆಯ ಬಗೆಗೆ ಅಪಾರ ಮೆಚ್ಚುಗೆಯೊಂದಿಗೆ, ದ್ವೇಷ ಮೀರಿದ ಪ್ರೀತಿ ಭಾರತದಲ್ಲಿ ನೆಲೆಗೊಳ್ಳಲಿ ಎಂಬುದು ಸರ್ವದಾ ನನ್ನ ಬಯಕೆ ಮತ್ತು ನಿರುಕು ಕೂಡಾ..

“ಇವನಾರವ? ಇವನಾರವ?
ಇವನಾರವನೆಂದೆನಿಸದಿರಯ್ಯಾ
ಇವ ನಮ್ಮವ ಇವ ನಮ್ಮವ
ಇವ ನಮ್ಮವನೆಂದೆನಿಸಯ್ಯಾ
ಕೂಡಲ ಸಂಗಮದೇವಾ
ನಿಮ್ಮ ಮನೆಯ ಮಗನೆಂದೆನಿಸಯ್ಯಾ..”

-ಎಂಬ ಬಸವೇಶ್ವರರ ವಚನ ಸಾರ್ವಕಾಲಿಕ ಹಾಗೂ ಸಾರ್ವತ್ರಿಕ ಅನುಷ್ಠಾನವಾದರೆ ಬಹುಶಃ ಜಗದ ಬಹು ಬೇಗೆಗಳು ಪರಿಹಾರಗೊಳ್ಳಬಲ್ಲವೆಂಬ ಸದಾಶಯದೊಂದಿಗೆ..                                                                                                            

‍ಲೇಖಕರು avadhi

January 24, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: