‘ಅಲೆಮಾರಿ’ ಕನ್ನಡದ ಭರವಸೆಯ ಅನುವಾದಕರಾಗಬಲ್ಲ ಕಸುವು ಹೊಂದಿದ್ದಾರೆ. ಅವರ ಓದಿನ ವಿಸ್ತಾರ ಸಹಾ ಬೆರಗು ಹುಟ್ಟಿಸುವಂತಿದೆ. ಅಮೃತಾ ಪ್ರೀತಂ ರ ಕವನ, ಕಥೆಗಳು ಹಲವರ ಕೈನಲ್ಲಿ ಅರಳಿದೆ. ಕೆಲವರ ಕೈನಲ್ಲಿ ನರಳಿದೆ. ಇಂತಹ ಪರಿಸ್ಥಿತಿಯ ನಡುವೆ ಈ ಅಲೆಮಾರಿ ಅನುವಾದದ ರುಚಿ ನೋಡಿ. ಚೆನ್ನಾಗಿದೆ ಅನಿಸಿದರೆ ಬರೆಯಿರಿ-alemaricta@gmail.com
***
ವಾರದ ಹಿಂದೆ ಊರಿಗೆ ಹೋಗುವಾಗ ನನಗೀ ಪದ್ಯಗಳು ಸಿಕ್ಕವು. ಅಮೃತಾ ಪ್ರೀತಂ ವ್ಯಾಮೋಹ. ಆಕೆಯ ಕಥೆಯನ್ನು ಓದುತ್ತಾ ಊರು ಸೇರಿದ ಮೇಲೆ ಈ ಪದ್ಯಗಳನ್ನು ಓದಿ ಮುಗಿಸಿದೆ. ಓದು ತುಂಬಾ ಖುಷಿ ಕೊಟ್ಟಿತು. ‘ನೆನಪೆಂಬ ಬಿಸಿಲಿನ ತುಣಕು’, ‘ಜಾತ್ರೆಯ ಗದ್ದಲದಲ್ಲೂ ಮೌನದ ಜಗತ್ತು’, ‘ಬೆರಳು ಹಿಡಿದ ಮಗು…’ವಿನ ಚಿತ್ರಗಳು ನನ್ನ ಅಪ್ಪಿ ಬಿಟ್ಟವು. ಮನೆ ಅಂಗಳದಲ್ಲಿ ನಾಲ್ಕು ತಾಸು ಮಳೆ ಹನಿಗಳು ಬಿಟ್ಟು ಬಿಟ್ಟದೆ ಊರಿಗೆ ಸ್ನಾನ ಮಾಡಿಸುತ್ತಾ ಇದ್ದಾಗ ನಾನು ಅಮೃತಾ ಪ್ರೀತಂಗಳ ಈ ಸಾಲುಗಳಲ್ಲಿ ನೆನೆಯುತ್ತಿದ್ದೆ. ಅದೇ ಖುಷಿಯಲ್ಲಿ ನಾನು ಇವುಗಳನ್ನು ಕನ್ನಡಕ್ಕೆ ಅನುವಾದಿಸಿದೆ. ಮತ್ತೊಮ್ಮೆ ತಿದ್ದುವ ಪ್ರಯತ್ನವನ್ನ ಮಾಡಿಲ್ಲ. ಒಮ್ಮೆ ಓದಿದಾಗ ವಾಚ್ಯ ಅನ್ನಿಸುವ, ಹಾಗೇ ಸಾಲಿನಿಂದ ಸಾಲಿಗೆ ಸಂಬಂಧವೇ ಇಲ್ಲ ಎನ್ನುವ ಹಾಗೂ ಅನ್ನಿಸಬಹುದು. ಆದರೂ ಒಮ್ಮೆ ಓದಿ…
***
ನಿನ್ನ ನೆನಪೊಂದು ಬಿಸಿಲಿನ ತುಣುಕು
ನನಗೆ ಆ ಗಳಿಗೆ ನೆನಪಿದೆ
ಬಿಸಿಲಿನ ತುಣುಕೊಂದು
ಸೂರ್ಯನ ಬೆರಳು ಹಿಡಿದು
ಕತ್ತಲೆಯ ಜಾತ್ರೆಯಲ್ಲಿ
ಅಲೆಯುತ್ತಾ ಹೋಗಿದ್ದು. ಭಯ, ಏಕಾಕಿತನಗಳಿಗೆ
ಏನೋ ಸಂಬಂಧವಿರಬೇಕು,
ನನಗೂ, ಇದಕ್ಕೂ ಯಾವ ಸಂಬಂಧವಿಲ್ಲ.
ಆದರೂ ಕಳೆದುಹೋಗಿರುವ
ಈ ಮಗು ನನ್ನ ಕೈ ಹಿಡಿದಿದೆ.ನೀನು ಎಲ್ಲೂ ಸಿಕ್ಕುವುದಿಲ್ಲ,
ಬೆಚ್ಚನೆ ಉಸಿರೊಂದು ಕೈಯ ಸ್ಪರ್ಶಿಸುತ್ತಿದೆ
ಕೈಹಿಡಿದ ಸಂತೋಷವಿಲ್ಲ;
ಕೈ ಬಿಡುವುದೂ ಇಲ್ಲ
ಕತ್ತಲಿಗೆ ಗಡಿ ಇಲ್ಲ,
ಜಾತ್ರೆಯ ಗದ್ದಲದಲ್ಲಿ ಮೌನದ ಜಗತ್ತು
ಮತ್ತೆ;
ಬಿಸಿಲಿನ ಒಂದು ತುಣುಕಿನ ಹಾಗೆ
ನಿನ್ನ ನೆನಪು.
***
ನನ್ನ ವಿಳಾಸ
ಇವತ್ತು ನನ್ನ ಮನೆಯ ನಂಬರ್
ಅಳಿಸಿ ಹಾಕಿದ್ದೇನೆ.
ಗಲ್ಲಿಗೆ ಹಾಕಿದ್ದ
ಹೆಸರಿನ ಹಣೆಪಟ್ಟಿ ಕಿತ್ತೊಗೆದಿದ್ದೇನೆ.
ಮತ್ತೆ;
ಎಲ್ಲ ರಸ್ತೆಗಳ ಮೇಲಿದ್ದ
ದಾರಿಗಳ ಹೆಸರು ಒರೆಸಿದ್ದೇನೆ,
ನಿಮಗೇನಾದರೂ
ನನ್ನನ್ನು ಪಡೆಯಬೇಕಿದ್ದರೆ,
ಪ್ರತಿ ದೇಶದ, ಪ್ರತಿಯೊಂದು ನಗರದ
ಎಲ್ಲ ಗಲ್ಲಿಗಳ ಬಾಗಿಲು ಬಡಿಯಿರಿ.
ಇದು ಶಾಪ, ಇದು ವರ.
ಎಲ್ಲಾದರೊಂದು ಸ್ವತಂತ್ರ
ರೂಹಿನ ದರ್ಶನವಾದರೆ
ಅದೇ ನನ್ನ ಮನೆಯೆಂದು ತಿಳಿಯಿರಿ.
–ಅಮೃತಾ ಪ್ರೀತಂ





0 Comments