ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಲ್ಲಿ ಸೂರ್ಯ ಕೂಡ ಗಾಜಿಗಂಟಿ ಹುಟ್ಟಿ….

ಐಟಿ ಆಫೀಸು

ವಿಜಯ್ ಹೂಗಾರ್

ಸಮಯ ಹತ್ತಾಗುವದರೊಳಗೆ
ಒಂದೆರೆಡು ಸಲ ಮೆತ್ತಗೆ ಬಯ್ಯಿಸಿಕೊಂಡಿಲ್ಲ ಅಂದ್ರೆ
ಹೊತ್ತು ಮುಂದೆ ಸಾಗುವದೇ ಇಲ್ಲ ಇಲ್ಲಿ.
 
ಇಲ್ಲಿ ಸೂರ್ಯ ಕೂಡ ಗಾಜಿಗಂಟಿ ಹುಟ್ಟಿ
ಗಾಜಿಗಂಟೇ ಮೆತ್ತಗೆ ಇಳಿಯುತ್ತಾನೆ.
ಬೆಳಕಿನ ಸದ್ದು,
ಮಳೆಯ ವಾಸನೆ, ಗಾಳಿಯ ಸಿಟ್ಟು
ಎಂದೂ ಇಲ್ಲಿಯವರೆಗೆ ತಲುಪಿಲ್ಲ.
ರಾತ್ರಿಯಿಡಿ ಬೆಳಗುವದು ಇಲ್ಲಿಯ
ಫ್ಲೋರೋಸೆಂಟ್ಲೈಟು, ಕೆಮ್ಮುವ ನೆಪದಲ್ಲೂ
ಕಣ್ಣು ಮುಚ್ಚುವ ಹಾಗಿಲ್ಲ.

ಲಂಚಿನ ಉದ್ದನೆಯ ಕ್ಯೂನಲ್ಲಿ ನಿಂತು
ಒಂಚೂರು extra ಸ್ವೀಟಿಗಾಗಿ ಕಣ್ತೆರೆದಾಗ
‘ಇಸ್ಮೆಮೈ ಇತ್ನಾಹೀ ಆತಾ ಹೈ’ ಎಂಬ
ಹರಕು ಬಾಯಿಯಿಂದ ಬಂದ ಮಾತು
ಯಾರ ಕಿವಿಗೂ ಒಂಚೂರು ಚೆಲ್ಲದೇ
ಎದೆಗೆ ಇಳಿದು ಹೋಳಾದಾಗ
ಇದನ್ನು ಅವಮಾನ ಎಂಬುವದೇ ಅನುಮಾನ.
 
ಕ್ಯಾಬು ಏರಿ
ಮನೆಗೆ ಹೋಗುವಷ್ಟರಲ್ಲಿ
ವಾಚಾಳಿ ಡ್ರೈವರಿನ ಇನ್ಕಮ್ಮು
ನಮಗಿಂತ ಎರಡರಷ್ಟು ಅಂತ ತಿಳಿದಾಗ
ನಾಲಿಗೆ ಅಲ್ಲಿಂದಲೇ ಕಿಟಕಿಯಿಂದ ಜಿಗಿದುಬಿಟ್ಟಿತ್ತು.
‘ಮೊನ್ನೆ ತಾನೇ ಕೆ.ಆರ್.ಪುರಂ ಹತ್ರ ಒಂದು ಸೈಟ್ತಗೊಂಡೆ ಸರ್’
ಅಂದ ಮಾತು ಕಿವಿಯೊಳಗೆ ಇಳಿಯುವ ಸೀನೇ ಇರೋದಿಲ್ಲ.
 
ಲಿಫ್ಟಿನಲ್ಲಿ ಒತ್ತಿ ಬಂದ ನಗು,
ಅರಿವಿಗೆ ಬಾರದೇ ಬಂದು ಹೋಗುವ ಮಳೆ,
ಸೀರೆಯುಟ್ಟವಳ ನಡುಮುಟ್ಟುವ ಕಣ್ಣು,
ಬಗ್ಗಿದಾಗ ನಾಲಿಗೆ ಹೊರಚಾಚುವ ಪಿಂಕ್ಪ್ಯಾಂಟಿ,
ತಿಂಗಳ ಕೊನೆಯ ಸಂಬಳದ ಚರ್ಚೆ,
ಇಳಿಸಂಜೆಗೆ ಮುಖಮಾಡಿ ನಿಂತ ಬೆರಗು,
ಭಾರದ ಬ್ಯಾಗು ಹೊತ್ತು ಮಳೆಯಲ್ಲಿ ಓಡಿ ಹಿಡಿದ ಬಸ್ಸು,
ವೆಲ್ನೆಸ್ರೂಮಿನ ಮೂಲೆಯಲ್ಲಿ ಸೊಟ್ಟಗೆ ಕುಳಿತ ತೂಕಮಾಪಕ,
ಐಡೆಂಟಿಟಿ ಕಾರ್ಡಿಗೆ ನೇಣು ಹಾಕಿಕೊಂಡ ತಿಂಗಳ ಇಸ್ಟಾಲ್ಮೆಂಟುಗಳು
ಟೀಂಡಿನ್ನ ರ್ಪಾರ್ಟಿಯಲ್ಲಿ ಕಂಠಪೂರ್ತಿ ಕುಡಿದು ರಸ್ತೆಯ ಪಕ್ಕ ಕಾರು ನಿಲ್ಲಿಸಿ ಮಾಡಿಕೊಂಡ ವಾಂತಿ,
ಲಂಚು ಮತ್ತೆ ಡಿನ್ನರಿನ ಮಧ್ಯ ಹೊಟ್ಟೆಯ ವಿಳಾಸ ಹುಡುಕಿಕೊಂಡು ಬರುವ ಹಸಿವು,
ಎಲ್ಲವು ಈ ಪರಿಸರದಲ್ಲಿ ಜಾಗೃತವಾಗಿ ಕರಗತವಾಗಿವೆ
ಎಲ್ಲವೂ ಇದ್ದರು ಇಲ್ಲದರ ಸಹವಾಸ,
ಇದ್ದದ್ದೇ ಕೈಲಾಸ, ಇದ್ದಲ್ಲೇ ಕೈಲಾಸ.
 

‍ಲೇಖಕರು G

4 July, 2014

2 Comments

  1. Prabhakar M. Nimbargi

    Good attempt of describing a min-microcosm. Aren’t there any positive aspects? In this way every walk of life is a microcosm by itself.

  2. Bhavya

    Chennagide… 🙂

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading