ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಲ್ಲಿ ಎಲೆಯೇ ಮಾವು..

 

 

 

ನೆಲಮಾವು

ಶಾಂತಿ ನಾಯಕ್  

 

 

 

ನಾನು ಹೊನ್ನಾವರಕ್ಕೆ ಬಂದ ಮೇಲೆ ಅಡುಗೆಯಲ್ಲಿ ಬಳಕೆಯಾಗುವ ಅನೇಕ ಅಪೂರ್ವ ಗಿಡಗಂಟಿಗಳ ಬಗ್ಗೆ ಮಾಹಿತಿ ಪಡೆದುಕೊಂಡೆ. ಅವುಗಳನ್ನು ಸಂದರ್ಭ ಬಂದಾಗ ನನ್ನ ಸಂಬಂಧಿಕರಿಗೆ ಪರಿಚಯವಿದ್ದವರಿಗೆ ತಿಳಿಸುತ್ತಿದ್ದೆ. ಒಮ್ಮೆ ನನ್ನ ಊರು ಸಣ್ಣ ಅಲಗೇರಿಗೆ ಹೋಗಿದ್ದೆ. ಅಲ್ಲಿಯ ನಮ್ಮ ಬತ್ತದ ಗದ್ದೆಯ ಬಳಿ ಹೋದಾಗ ಅಲ್ಲಿ ನೆಲಮಾವು ಇರಬಹುದು ಅನಿಸಿತು. ನನ್ನ ಭಾವನ ಸೊಸೆ ಚಂದ್ರಭಾಗಿಯ ಜೊತೆ ಗದ್ದೆಗಿಳಿದೆ.

ಅಲ್ಲಿ ನೆಲಮಾವಿನ ಪರಿಮಳ ಐದಡಿ ಎತ್ತರಕ್ಕೇರಿ ನನ ಮೂಗಿನವರೆಗೂ ತಲುಪಿತ್ತು. ‘ನಾನು ಇಲ್ಲೇ ಇದ್ದೇನೆ. ಕಾಲಡಿಯಲ್ಲಿದ್ದೇನೆ. ಬಗ್ಗಿ ನೋಡು’ ಎನ್ನುವಂತಿತ್ತು ಆ ಪರಿಮಳ. ಹೌದು ಅದು ನನ್ನ ಕಾಲ ಸುತ್ತ ಹರಡಿ ಬೆಳೆದಿತ್ತು.

ಇದು ನೆಲಮಾವು ಎಂದು ಕಿತ್ತು ತೋರಿಸಿದೆ. ನನ್ನ ಬಳಿ ಇದ್ದವರು ಮೂಸಿ ಮೂಸಿ ಅದರ ಪರಿಮಳವನ್ನು ಆಸ್ವಾದಿಸಿದರು. ಇದರ ಎಲೆಗೆ ಮಾವಿನ ಕಾಯಿಯ ಪರಿಮಳವಿರುತ್ತದೆ. ಆದ್ದರಿಂದ ಮಾವಿನ ಕಾಯಿ ಇಲ್ಲದ ದಿನಗಳಲ್ಲಿ ನೆಲಮಾವಿನೆಲೆಯ ತಂಬುಳಿ ಚಟ್ನಿ ತಯಾರಿಸಿ ಬಡಿಸಿದಾಗ ನಿಮ್ಮ ಅತಿಥಿ ಮಾವಿನ ಕಾಯಿಯಿಲ್ಲದ ದಿನಗಳಲ್ಲಿಯೂ ಇವರ ಮನೆಯಲ್ಲಿ ಮಾವಿನ ಕಾಯಿಯ ತಂಬುಳಿ ಮಾಡಿದ್ದಾರೆ ಎಂದುಕೊಳ್ಳಬಹುದು.

ಘಟ್ಟದ ಬಳಿಯಲ್ಲಿ ಇದರ ಪರಿಮಳ ಹೆಚ್ಚು. ನೆಲಮಾವು ರೇವೆಯುಳ್ಳ ಜವುಳು ಭೂಮಿಯಲ್ಲಿ ಬತ್ತದ ಗದ್ದೆಯಲ್ಲಿ ಜಲಬ್ರಾಹ್ಮಿಯಂತೆ ಹರಡಿ ಬೆಳೆಯುತ್ತದೆ. ಜಲಬ್ರಾಹ್ಮಿಯನ್ನು ಬಹು ಅಂಶಗಳಲ್ಲಿ ಹೋಲುತ್ತದೆ. ಎಲೆಯ ದೇಟಿನ ಸಂದುಗಳಲ್ಲಿ ಬೇರನ್ನು ಬಿಟ್ಟುಕೊಂಡು ಕುಡಿಯೊಡೆಯುತ್ತದೆ. ಜಲಬ್ರಾಹ್ಮಿಯ ಎಲೆಯ ಅಂಚು ಬೋಳಾದರೆ ನೆಲಮಾವಿನೆಲೆಯ ಅಂಚು ಗರಗಸದ ಹಲ್ಲುಗಳಂತಿರುತ್ತದೆ. ಹೂಗಳು ಗಂಟೆಯಾಕಾರದವು ಹೂವಿನ ಇಡೀ ಭಾಗವು ಮೇಲ್ಗಡೆ ಕತ್ತರಿಸಿಕೊಂಡು ೫ ಪಕಳೆಯಂತೆ ಕಾಣುತ್ತದೆ.

ಇವುಗಳಲ್ಲಿ ಒಂದು ಬದಿಯ ಎರಡು ಪಕಳೆಗಳ ಮೇಲೆ ಬಿಳಿಚುಕ್ಕೆ ಇದ್ದು ಇದರಿಂದಾಗಿ ಇದು ಒಂದೇ ಪಕಳೆಯೆಂಬಂತೆ ಭಾಸವಾಗುತ್ತದೆ. ಉಳಿದ ಮೂರು ಪಕಳೆಗಳು ಈ ಎರಡು ಪಕಳೆಗಳಿಗಿಂತ ಬೇರೆಯಾಗಿ ಕಾಣುತ್ತವೆ. ಜಾಂಬಳಿಬಣ್ಣದ ೨ ಎಂ.ಎಂ ಅಳತೆಯು ಚಿಕ್ಕ ಹೂ ಎಲೆಗಳ ದೇಟಿನ ಸಂದಿಯಲ್ಲಿ ಬೆಳೆಯುತ್ತದೆ. ನಾಲ್ಕು ಪುಂಕೇಸರ ಒಂದು ಸ್ತ್ರೀ ಕೇಸರವಿದ್ದು ಕೊತ್ತಂಬರಿ ಕಾಳಿನಷ್ಟು ಫಲ. ಫಲವು ರಕ್ಷಕ ದಳಗಳಿಂದ ಮುಚ್ಚಿರುತ್ತದೆ. ಫಲವು ಕಮಲದಂತೆ ಬಹು ಬೀಜವುಳ್ಳದ್ದು. ರುಚಿಯಲ್ಲಿ ಜಲಬ್ರಾಹ್ಮಿಯಷ್ಟು ಕಹಿಯಲ್ಲ.

ಜನಪದ ಜ್ಞಾನ : ಕರಾವಳಿ ತೀರದ ಮತ್ತು ಮಲೆನಾಡಿನ ಕೆಲವು ಗೃಹಿಣಿಯರಿಗೆ ಇದರ ಪರಿಚಯವಿದೆ. ಇದರ ಮಾವಿನ ಕಾಯಿಯ ಪರಿಮಳವು ಇವರನ್ನು ಇದರ ಅಡುಗೆಗೆ ಪ್ರೇರೇಪಿಸಿದೆ. ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದ ಬಳಿ ನೆಲಮಾವು ಎಂಬ ಊರಿದ್ದು, ಇಲ್ಲಿಯ ಮಠವೊಂದನ್ನು ನೆಲಮಾವು ಮಠವೆಂದು ಕರೆಯುತ್ತಾರೆ. ಇಲ್ಲಿ ನೆಲಮಾವು ಸಸ್ಯವು ಹೆಚ್ಚು ಪ್ರಮಾಣದಲ್ಲಿ ದೊರೆಯುತ್ತಿದ್ದು ಅದನ್ನು ಗೃಹಬಳಕೆಗಾಗಿ ಕೊಯ್ದು ತರಲು ಹೋಗುತ್ತಿದ್ದ ಜನ. ತಾವು ನೆಲಮಾವಿಗೆ ಅಂದರೆ ನೆಲಮಾವು ತರಲು ಹೋಗುತ್ತಿದ್ದೇವೆ ಎಂದು ಹೇಳುತ್ತಿದ್ದ ಕಾರಣ ಮುಂದೆ ಅದೇ ಹೆಸರು ಈ ಸ್ಥಳಕ್ಕೆ ಸ್ಥಿರವಾಗಿರಬಹುದು. ಈ ಗಿಡದ ವೈದ್ಯಕೀಯ ಗುಣದ ಬಗ್ಗೆ ಹೆಚ್ಚಿನ ಮಾಹಿತಿ ದೊರೆತಿಲ್ಲ.

ಜನಪದ ಅಡುಗೆ :

ತಂಬುಳಿ: ತೋರುಬೆರಳಷ್ಟು ಉದ್ದದ ಸುಮಾರು ಹತ್ತು ಕುಡಿಗಳನ್ನು ಎಂಟು ಮೆಣಸಿನಕಾಳು, ಅರ್ಧ, ಚಮಚ ಜೀರಿಗೆ, ಒಂದು ಕಪ್ಪು (ಸುಮಾರು ೫೦ ಗ್ರಾಂ) ತೆಂಗಿನಕಾಯಿಯ ಸುಳಿ ಇಷ್ಟನ್ನು ಕೂಡಿಸಿ ಅರೆಯಬೇಕು. ಕಲಕಕ್ಕೆ ಎರಡು ಕಪ್ಪು ದಪ್ಪ ಹುಳಿ ಮಜ್ಜಿಗೆ, ೨ ಚಮಚ ಉಪ್ಪು ಹಾಗೂ ೨ ಕಪ್ಪು ನೀರು ಬೆರಸಬೇಕು. ಒಟ್ಟು ಆರೆಂಟು ಕಪ್ ತಂಬುಳಿ ಸಿದ್ಧವಾಗುತ್ತದೆ. ಈ ಸಸ್ಯವು ರುಚಿಯಲ್ಲಿ ತುಸು ಕಹಿಯಾಗಿದ್ದು ಹೆಚ್ಚು ಕುಡಿಗಳನ್ನು ಬಳಸುವುದರಿಂದ ರುಚಿ ಕೆಡುತ್ತದೆ.
ಮಾವಿನಕಾಯಿಯ ಅಡುಗೆಗೂ ಇಂಗಿಗೂ ಅನ್ಯೋನ್ಯ ಸಂಬಂಧವಿರುತ್ತದೆಯಷ್ಟೆ. ಮಾವಿನಕಾಯಿಯ ಪರಿಮಳದ ಈ ನೆಲಮಾವನ್ನು ತಂಬುಳಿಗೆ ಬಳಸುವಾಗ ಕೂಡಾ ಇಂಗಿನ ಒಗ್ಗರಣೆಯಿದೆ.

ಗೊಜ್ಜು: ಬೆರಳಷ್ಟು ಉದ್ದದ ಹತ್ತು ಕುಡಿಗಳನ್ನು ೪ ಒಣಮೆಣಸು, ೨ ಚಮಚ ಎಣ್ಣೆ ಹಾಕಿ ಸಣ್ಣ ಉರಿಯಲ್ಲಿ ಬಾಡಿಸಿರಿ. ೧ ಕಪ್ಪು ಕಾಯಿಸುಳಿ, ಹುಣಸೆಹಣ್ಣು ಸ್ವಲ್ಪ, ೧ ಚಮಚ ಉಪ್ಪು, ೨ ಚಮಚ ಬೆಲ್ಲ ಸೇರಿಸಿ ಅರೆಯಿರಿ. ಚಟ್ನಿ ಸಿದ್ಧ.

ಸಾಧ್ಯತೆ: ಇದು ಮಾವಿನಕಾಯಿಯ ಪರಿಮಳವನ್ನು ಹೊಂದಿರುವ ಕಾರಣ ಮಾವಿನಕಾಯನ್ನು ಅಡುಗೆಯಲ್ಲಿ ಬಳಸುವಂತೆ ಇದನ್ನು ಗೊಜ್ಜು ತಂಬುಳಿಯಲ್ಲಿಯಲ್ಲದೆ ಚಟ್ನಿ, ಹಸಿಗಳಲ್ಲಿ ಬಳಸಬಹುದು. ಒಣಗಿಸಿದಾಗ ಇನ್ನಷ್ಟು ಪರಿಮಳ ಬೀರುವ ಇದನ್ನು ಒಣಗಿಸಿಟ್ಟು ಈ ಮೇಲಿನ ಅಡುಗೆಯಲ್ಲಿ, ಪಾನೀಯ ತಯಾರಿಕೆಯಲ್ಲಿ, ಸಿಹಿ ತಿಂಡಿಗಳಲ್ಲಿ ಬಳಸಬಹುದಾಗಿದೆ.

ಇದರ ಪರಿಚಯವಿಲ್ಲದವರು ಇದನ್ನು ಕಳೆಯೆಂದು ಬಗೆದು ಕಿತ್ತು ಕೊಚ್ಚಿ ನಾಶಪಡಿಸುತ್ತಿದ್ದಾರೆ. ಇಂತಹ ಅಪೂರ್ವ ಪರಿಮಳದ ಈ ಸಸ್ಯದ ವೈದ್ಯಕೀಯ ಹಾಗೂ ಆಹಾರ ಮೌಲ್ಯವನ್ನು ದೃಡೀಕರಿಸುವ, ಇದರ ಉಳುವಿಗೆ ಪ್ರಯತ್ನಿಸುವ ಕೆಲಸ ನಡೆಯಬೇಕಾಗಿದೆ. ‘ಗದ್ದೆ ಕೊಯ್ದ ಬಳಿಕ ನಿಮಗೆ ಯಾರಿಗೂ ತಿಳಿಸದೆ ಹೇರಳವಾಗಿ ಬೆಳೆಯುತ್ತದೆ. ದನಗಳು ಮೇಯುತ್ತವೆ. ದನಗಳ ಬಾಯಿಯಿಂದ ತಪ್ಪಿಸಿ ಬೆಳೆಯಗೊಟ್ಟರೆ ಒಂದೊಂದು ಗದ್ದೆ ಬಯಲಿನಲ್ಲಿ ಲಾರಿಗಟ್ಟಲೆ ಸಿಗಬಹುದು. ಆದರೆ ಪಾಲಕ್ ಸೊಪ್ಪು. ಕೊತ್ತಂಬರಿ ಸೊಪ್ಪುಗಳ ಮೋಹ ನೆಲಮಾವನ್ನು ಮರೆಸಿ ಬಿಟ್ಟಿದೆ.

If anyone knows kindly let me know the botanical name of this plant..

‍ಲೇಖಕರು avadhi

25 November, 2017

1 Comment

  1. Lalitha siddabasavayya

    ವಾಹ್,, ಒಳ್ಳೆಯ ಮಾಹಿತಿ ಮೇಡಮ್. ಈ ಕಡೆ ನೆಲಮಾವು ಕಂಡಿಲ್ಲ. ಇಂಥಹ ಸಸ್ಯ ಮಾಹಿತಿಯನ್ನು ಹೀಗೆ ಪ್ರಕಟಿಸದ ಹೊರತು ಅದಕ್ಕೆ ಉಳಿಗಾಲವಿಲ್ಲ. ಅದರ ಅಡುಗೆ ಉಪಯೋಗವೂ ಮರೆತು ಹೋಗಿಬಿಡುತ್ತದೆ. ನೆಲಮಾವಿನ ವೈದ್ಯಕೀಯ ಉಪಯೋಗ ಹಿರಿಯರಿಗೆ ಗೊತ್ತಿದ್ದೆ ಬಳಸಿರಬಹುದೆಂದು ನನ್ನ ಊಹೆ.

    ನಮ್ಮ ಕಡೆ ತಂಬುಳಿ ತಯಾರಿಕೆಯಿಲ್ಲ. ತಂಬುಳಿ ಬದಲಿಗೆ ಮಜ್ಜಿಗೆಗೆ ಸಣ್ಣವೆರಡು ಹೋಳು ಈರುಳ್ಳಿ , ನಾಲ್ಕೆಸಳು ಬೆಳ್ಳುಳ್ಳಿ , ತುಂಡು ಶುಂಠಿ, ಜೀರಿಗೆ ಮೆಂತ್ಯ ತಲಾ ನಾಲ್ಕು‌ಕಾಳು ಇವನ್ನು ಅರೆದು ಬೆರೆಸುತ್ತೇವೆ. ಮೇಲೆ ಸಣ್ಣಗೆ ಉತ್ತರಿಸಿದ ಕೊತ್ತಂಬರಿ ಸೊಪ್ಪು ಕರಿಬೇವನ್ನು ಉದುರಿಸುತ್ತೇವೆ. ಕೆಲವರು ಈರುಳ್ಳಿಯನ್ನು ಅತಿ ಸಣ್ಣಗೆ ಉತ್ತರಿಸಿ ಅರೆಯದೆಯೂ ಹಾಕುತ್ತಾರೆ. ಮೊಸರು ಕಡೆದು ಬೆಣ್ಣೆ ತೆಗೆದ ಮಜ್ಜಿಗೆಗೆ ಪ್ರಾಶಸ್ತ್ಯ ಹೆಚ್ಚು. ಮಜ್ಜಿಗೆಯಲ್ಲಿ ಜಿಡ್ಡಿರಬಾರದು ಮತ್ತು ಆದಷ್ಟೂ ನೀರುಮಜ್ಜಿಗೆ ಕುಡಿಯುವುದು ಇಲ್ಲಿಯ ಬಿಸಿಲಿಗೆ ತಂಪು ಎಂದು ಬಯಲುಸೀಮೆ ಜನ ಭಾವಿಸುತ್ತಾರೆ. (ಉಪ್ಪಿನ ಜೊತೆಗೆ ಚೂರು ಬೆಲ್ಲ, ಚೂರೆಂದರೆ ಚೂರೇ ಚೂರು ಬೆರೆಸುವುದೂ ಉಂಟು.)

    ಒಟ್ಟಾರೆ ನಾನಾ ಬಹಿರೂಪಗಳಲ್ಲಿ ಮಜ್ಜಿಗೆಯಂತೂ
    ಎಲ್ಲ ಕಡೆಯೂ ಇರುತ್ತದೆ. ನಮ್ಮ ತಾತನವರು ಊಟದ ಕೊನೆಯಲ್ಲಿ ಕಂಚಿನ ಗಂಗಳದ ತುಂಬ ಹೀಗೆ ಹದಮಾಡಿದ ಮಜ್ಜಿಗೆ ಬಿಡಿಸಿಕೊಂಡು ಕುಡಿದು ತೃಪ್ತಿ ಯಿಂದ ತೇಗಿ ಸೊಸೆಗೆ ” ತಾಯೀ ನಿನ್ನೊಟ್ಟೆ ತಣ್ಣಗಿರಲಮ್ಮ,, ಆ ನಮ್ಮಪ್ಪನ ಕಾವಿಗೆ ವೊಟ್ಟೆ ಕಾದು ಎಂಚಾಗಿತ್ತು,,,,, ಈ ಸಿವದಾನ ಹೋಗ್ತಲು ತಣ್ಣಗಾತಮ್ಮ” ಎನ್ನುತ್ತಿದ್ದರು.

    ಈಗೆಲ್ಲ ಮಜ್ಜಿಗೆಗೆ ಶಿವದಾನ ಎನ್ನುವ ಅಭ್ಯಾಸ ಮರೆತೇ ಹೋಗಿದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading