ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಲ್ಲಿ ಈ ಶಹರಿನ ಎದೆ ಮೇಲೆ ನನ್ನ ಹಿಮ್ಮಡಿಯಲಿ ನಿಂತು…

ನೀನು ಸಿಗುತ್ತಿಯ ದರಚೀಟಿಯಂತೆ

– ರಮೇಶ ಅರೋಲಿ

ಖರೀದಿಸದೆ ಬಿಟ್ಟ ಬಟ್ಟೆಯೊಳಗೆ ಸಿಕ್ಕಿಕೊಂಡು
ನೇತಾಡುವ ಈ ಗೊಂಬೆ ಸೊಂಟದಲ್ಲಿ
ಹಸಿವಿಗೆ ಚಡಪಡಿಸಿ ಕಾಗದವ ಜಗಿದು
ಹೊಟ್ಟೆ ಉಬ್ಬಿಸಿಕೊಂಡ ಆಕಳ ಜೋಡುಗಣ್ಣಲ್ಲಿ
ನಿನ್ನ ಹುಡುಕುತ್ತೇನೆ ಓ ಹಕ್ಕಿ ಮರಿಯೇ
ಸಿಕ್ಕ ಎಂಟಾಣೆಯ ಮೇಲೆ; ಚಲಿಸುವ ರೈಲಿನಲ್ಲಿ
ಪಾಚಿಗಟ್ಟಿದ ಗೋಡೆಯ ಮೇಲೆ

ಘರ್ ವಾಲಿಯ ಎಲೆಯಡಿಕೆಯಲಿ
ಸುಲ್ತಾನಳ ಕಿರುಗೆಜ್ಜೆಯಲಿ ಹುಡುಕುತ್ತೇನೆ
ಬೋಳಾದ ಉದ್ಯಾನದಲಿ;ಖಾಲಿ ಥೇಟರಿನಲಿ
ಮುನಿಸಿಕೊಂಡವಳೆ ನಿನ್ನ ಮುನಿಸಿಗಾಗಿ ಹೀಗೆಯೇ
 
ಇಲ್ಲಿ ಈ ಶಹರಿನ ಎದೆ ಮೇಲೆ
ನನ್ನ ಹಿಮ್ಮಡಿಯಲಿ ನಿಂತು
ಉಮ್ಮಳಿಸುವ ಒಂಟಿತನದಲಿ ಹುಡುಕುತ್ತೇನೆ
ಎದೆ ತೊಟ್ಟಿಗೆ ಕಾದಿರುವ ಹಸುಳೆಯಂತೆ
 
ಜೀಕುವ ತೂಗು ಸೇತುವೆ ಕೆಳಗೆ
ಹೂವಿಂಥ ಹುಡುಗಿಯರು ಹಿಡಿದ ಗುಲಾಬಿಯಲಿ
ಆಕಾಶ ಮುಚ್ಚಿರುವ ಅರೆನಗೆಯ ಮೋಡದಲಿ
ಬೀದಿನಾಯಿಯಂತೆ ಪರೇಶಾನಿಯಾಗಿ
ನಿನ್ನ ಹುಡುಕುತ್ತೇನೆ
ಹೂ ದಂಡೆಯಲಿ; ಸೆರೆ ಗುಂಡಿಯಲಿ
 
ಪಹಾಡ್ ಗಂಜಿನ ದಟ್ಟಣೆಯಲಿ
ಮೆಹದಿಪಟ್ನಂ ನ ಬುರುಜಿನ ಕೆಳಗೆ
ನಿಲುಗನ್ನಡಿಯಲಿ ಸಿಲುಕಿಕೊಂಡವಳೇ
ಸಿಗಬಹುದೇ ನೀನಿನ್ನು ತರಗೆಲೆಯ ಸಪ್ಪಳದಂತೆ
ಅಮಾವಾಸ್ಯೆಯ ಮಾಡಿನಲಿ ನಕ್ಷತ್ರದ ಸೂಡಿನಲಿ
ಸದ್ದಾಗಿ ಸರುಕಾಗಿ ಬೀದಿ ದೀಪದ ನೆರಳಾಗಿ…
 

‍ಲೇಖಕರು G

18 November, 2014

3 Comments

  1. samyuktha

    Very nice!

  2. gururaj katriguppe

    Thumbs sundara salugalu thanks. Kavige…

  3. vasudeva nadig

    padyada ottu aashaya arthavagalilla..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading