ಇ -ಓದು ಮತ್ತು ಮಕ್ಕಳ ಸಾಹಿತ್ಯ

ಜಯಶ್ರೀ ಬಿ ಕದ್ರಿ
ನಾವು ಪುಟ್ಟ ಮಕ್ಕಳಾಗಿದ್ದಾಗ ನಮ್ಮ ಅಜ್ಜಿಯನ್ನು ಕತೆ ಹೇಳೆಂದು ಕಾಡುತ್ತಿದ್ದೆವು. ಅಕ್ಕಿ ಹಸನು ಮಾಡುತ್ತಲೋ , ಹುಣಸೆ ಹಣ್ಣು ಆಯುತ್ತಲೋ ನಮ್ಮ ಪಾಪದ ಅಜ್ಜಿ ಮಾಂತ್ರಿಕ ಕತೆಗಳನ್ನು, ಜನಪದ ಕತೆಗಳನ್ನು, ಯಾವುದೋ ರಾಜಕುಮಾರಿಯನ್ನು ಮದುವೆಯಾದ ಹಳ್ಳಿ ಗಮಾರನ ಕತೆಯನ್ನು ಹೇಳುತ್ತಿದ್ದರೆ ಆ ಅದ್ಭುತ ಕಥನ ಶೈಲಿಗೆ, ಸ್ಠಳದಲ್ಲಿಯೇ ಘಟನೆಗಳನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುವ ಚಿತ್ರಕ ಶೈಲಿಗೆ ಬೆರಗಾಗುತ್ತಿದ್ದೆವು. (ಆಗ ಈಗಿನಂತೆ ಮನರಂಜನೆಯ ವಿವಿಧ ಸಾಧ್ಯತೆಗಳೂ ಇದ್ದಿರಲಿಲ್ಲವೆನ್ನಿ).
ಕಥೆಗಳಿಗೆ ಈ ಆಧುನಿಕ ಯುಗದಲ್ಲಿಯೂ ಅವುಗಳದ್ದೇ ಆದ ಶಕ್ತಿಯಿದೆ. ಇಲ್ಲವಾದಲ್ಲಿ ‘ಬಾಹುಬಲಿ’, ‘ರಂಗಿತರಂಗ’ದಂತಹ ಮೂವಿಗಳು ಜನಮಾನಸವನ್ನು ಹೇಗೆ ಗೆಲ್ಲಲು ಸಾಧ್ಯವಾಗುತ್ತದೆ? ಹೇಗೆ ಈಗಲೂ ‘ಹ್ಯಾರಿ ಪಾಟರ್’, ‘ಬಾಲ ಗಣೇಶ’ದಂತಹ ಮಕ್ಕಳ ಕತೆಗಳಿಗೆ ವೀಕ್ಷಕರು ಸಿಗುತ್ತಾರೆ? ಬಹುಶ; ನಮ್ಮ ಅಂತರಂಗದಲ್ಲೆಲ್ಲೋ ಹುದುಗಿರುವ ಎಳೆಯ ಮಗುವಿಗೆ ಕತೆಗಳ ಹಸಿವು ಇನ್ನೂ ಇದೆ. ಅದೂ ಅಲ್ಲದೆ ‘ಕಿಡಲ್ಟ್’ ಎನ್ನುವ ಪದ ಬೇರೆ ಇದೆಯಂತೆ. ‘ಕಿಡಲ್ಟ್’ ಎಂದರೆ ಮಕ್ಕಳ ಮನಸ್ಸನ್ನು ಹೊಂದಿರುವ ಅಡಲ್ಟ್. ಈ ರೀತಿಯ ಮನೋಭಾವ ಹೊಂದಿರುವವರು ಮಕ್ಕಳ ಕತೆಗಳನ್ನು ಓದುವುದು, ಕಾರ್ಟೂನ್ ನೋಡುವುದು ಹೀಗೆ ಆಗಾಗ ಮಕ್ಕಳ ಜಗತ್ತಿಗೆ ಎಸ್ಕೇಪ್ ಆಗುತ್ತಿರುತ್ತಾರಂತೆ. ಯಾಕೆಂದರೆ ಈಗ ಇದ್ದುದರಲ್ಲಿ ಮಕ್ಕಳ ಜಗತ್ತು ಮಾತ್ರ ತನ್ನ ನಿಷ್ಕಪಟತೆಯನ್ನು, ಮುಗ್ಧತೆಯನ್ನು ಉಳಿಸಿಕೊಂಡಿದೆ.
ಎಳೆಯ ಮಕ್ಕಳ ಮೇಲಿನ ದೌರ್ಜನ್ಯಗಳು , ದುರಂತಗಳು ನಮ್ಮನ್ನು ಗಾಢವಾಗಿ ಕಲಕುತ್ತವೆ. ಇನ್ನು ಮಕ್ಕಳ ಸಾಹಿತ್ಯವೂ ಇದನ್ನೇ ಹೇಳುತ್ತದೆ. ನಮ್ಮ ಎಲ್ಲ ರಾಜಕೀಯ ಪಾಲಿಸಿಗಳು, ವಿದ್ಯಾಭ್ಯಾಸ ಪದ್ಧತಿ ಎಲ್ಲವೂ ದೊಡ್ಡವರನ್ನು ಕೇಂದ್ರೀಕರಿಸಿ ಇರುವಂತಹದ್ದು. ಯಾವತ್ತಾದರೂ ಒಂದು ಮಗುವಿನ ಬಳಿ ಅದಕ್ಕೆ ಏನನ್ನು ಯಾವ ರೀತಿಯಲ್ಲಿ ಕಲಿಯಲು ಇಷ್ಟ ಎಂದು ಕೇಳುತ್ತೇವೆಯೆ? ಇಲ್ಲ. ನಾವು ಕೊಟ್ಟ ಸಿಲೆಬಸ್ ಅನ್ನು ಅದು ಕಲಿಯಬೇಕು ಹೀಗೆಲ್ಲ.
ಮಕ್ಕಳ ಮನಸ್ಸನ್ನು ಅರಳಿಸುವ ಪ್ರಮುಖ ಮಾಧ್ಯಮವೆಂದರೆ ಕತೆಗಳು, ಹಾಡುಗಳು ಹಾಗೂ ಇವನ್ನು ಅವರಿಗೆ ಮೊದಲಾಗಿ ಪರಿಚಯಿಸುವುದು ತಾಯಿ. ಹಾಗೆ ನೋಡುವುದಿದ್ದರೆ ಮಗು ಮೊದಲು ಕೇಳುವುದೇ ಸಾಹಿತ್ಯವನ್ನು, ತಾಯಿಯ ಲಾಲಿ ಹಾಡಿನ ಮೂಲಕ. ಯಾವ ಮಗು ತಾಯಿಯ ಬೆಚ್ಚನೆಯ ಮಡಿಲಿನಲ್ಲಿ ಕತೆಗಳನ್ನು ಕೇಳಿ ಬೆಳೆಯುತ್ತದೆಯೋ ಅದರ ಕಲ್ಪನೆಯ ಜಗತ್ತಿನಲ್ಲಿ ಬಣ್ಣಗಳಿರುತ್ತವೆ, ಸ್ಮೃತಿ ವಲಯದಲ್ಲಿ ಸೂಕ್ಷ್ಮವಾದ ಭಾವ ಲಾಲಿತ್ಯವಿರುತ್ತದೆ ಹಾಗೂ ಈ ಮಕ್ಕಳು ಒಂದು ರೀತಿಯ ಕೋಮಲ ಅಂತ;ಕರಣವನ್ನು ಬೆಳೆಸಿಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ.
ಹೆಚ್ಚು ಹೆಚ್ಚು ಮಕ್ಕಳು ಆಂಗ್ಲ ಮ್ನಾಧ್ಯಮದಲ್ಲಿ ಓದುತ್ತಿರುವ ಈ ಕಾಲ ಘಟ್ಟದಲ್ಲಿ ತುಂತುರು, ಬಾಲ ಮಂಗಳ, ಸಾಪ್ತಾಹಿಕಗಳ ಬಾಲ ವಿಭಾಗ, ಗುಬ್ಬಚ್ಚಿ ಗೂಡು ಮಕ್ಕಳ ಪತ್ರಿಕೆ ಹೊರತು ಪಡಿಸಿದರೆ ಮಕ್ಕಳ ಸಾಹಿತ್ಯ, ಶಿಶು ಸಾಹಿತಿಗಳು ಅಷ್ಟಾಗಿ ಕಾಣಬರುತ್ತಿಲ್ಲ. ಮಧ್ಯಮ ವರ್ಗದವರ ಮಕ್ಕಳು ಓದುವುದು ಟಿಂಕಲ್, ಮ್ಯಾಜಿಕ್ ಪಾಟ್ ಗಳಂತಹ ಕಾಮಿಕ್ಸ್ ಗಳನ್ನು. ಸ್ವಲ್ಪ ಬೆಳೆದಂತೆ ಎನಿಡ್ ಬ್ಲೈಟನ್ ನ ‘ಫೇಮಸ್ ಫೈವ್ ‘ , ಮಾಲೊರಿ ಟವರ್ಸ್, ಸೈಂಟ್ ಕ್ಲೇರ್ ಸೀರೀಸ್ ಹೀಗೆಲ್ಲ.
ಜೆ ಕೆ ರೌಲಿಂಗ್ ತನ್ನ ‘ಹ್ಯಾರಿ ಪಾಟರ್’ ಪುಸ್ತಕಗಳಲ್ಲಿ ಬಾಲಕನೊಬ್ಬನ ಅನುಭವಗಳನ್ನು ಚಿತ್ರಿಸಿದರೆ ರಾಲ್ಡ್ ದಾಲ್ ನಂತಹವರು ‘ಮಟಿಲ್ಡ’ ಎಂಬ ಹುಡುಗಿಯನ್ನು ಕೇಂದ್ರವಾಗಿಸಿ ಬರೆಯುತ್ತಾರೆ. ಇದು ಫಿಲಂ ಆಗಿದೆ ಕೂಡ). ಇದೇ ಲೇಖಕನ ‘ ಚಾರ್ಲ್ ಅಂಡ್ ದ ಚಾಕೊಲೇಟ್ ಫ್ಯಾಕ್ಟರಿ’ , ‘ಜೇಮ್ಸ್ ಅಂಡ್ ದ ಜೈಂಟ್ ಪೀಚ್’ ಕೂಡ ಜನಪ್ರಿಯವಾಗಿರುವ ಸಿನೆಮಾಗಳು, ಕತೆಗಳು. ಸುಸಾನ್ ಕೋಲಿನ್ಸ್, ಮಾರ್ಕರ್ಸ್ ಸುಸಾಕ್, ಹೀಗೆ ಇನ್ನೂ ಕೆಲವು ಕಾದಂಬರಿಕಾರರು. ಇನ್ನು ಬುಕ್ ಶಾಪ್ ಗಳಲ್ಲಿ ‘ಯಂಗ್ ಅಡಲ್ಟ್ ಫಿಕ್ಷನ್’ ಎಂಬ ಪ್ರತ್ಯೇಕ ವಿಭಾಗವೇ ಇದೆ. ಕನ್ನಡದಲ್ಲಾಗಲಿ, ಇಂಗ್ಲಿಷ್ ನಲ್ಲಾಗಲಿ ನಮ್ಮ ಮಕ್ಕಳು ಏನನಾದರೂ ಓದಲಿ ಎಂಬ ಪರಿಸ್ಠಿತಿಗೆ ನಾವು ಬಂದು ತಲುಪಿದ್ದೇವೆ.
ಇಲ್ಲಿಯೂ ತಂತ್ರಜ್ನಾನವೆನ್ನುವುದು ಒಂದು ವರವೇ. ಎಷ್ಟೋ ಜನ ತರುಣ ತರುಣಿಯರು ಆರಾಮವಾಗಿ ತಮಗೆ ಬೇಕಾದ ಪುಸಕಗಳನ್ನು ಮೊಬೈಲ್ ನಲ್ಲೇ ಡೌನ್ ಲೋಡ್ ಮಾಡಿಕೊಂಡು ಓದುತ್ತಿರುತ್ತಾರೆ. ಇನ್ನು ಯು ಟ್ಯೂಬ್ ನಲ್ಲಿ ಸಿಗುವ ಉತ್ತಮ ವಿಡಿಯೋಗಳು, ಫಿಲ್ಮ್ ಗಳು (ಹೆಚ್ಚಿನ ಕ್ಲಾಸಿಕ್ ಇಂಗ್ಲಿಷ್ ಕಾದಂಬರಿಗಳಿಗೆ ಫಿಲ್ಮ್ ಗಳಿವೆ), ವೆಬ್ ಮ್ಯಾಗಜಿನ್ ಗಳು ಹೀಗೆ ಓದು ಆಸಕ್ತಿದಾಯಕವೂ ಜ್ನಾನಪ್ರದವೂ ಆಗಿ ವಿಕಾಸವಾಗುತ್ತಿದೆ. ಹೊಸ ಕಾಲದ ಅಗತ್ಯಗಳಿಗೆ ತಕ್ಕಂತೆ ಬೇಕಾದಷ್ಟುಆಪ್ ಗಳಿವೆ. ಇ- ಪುಸ್ತಕಗಳಿವೆ, ಫ್ಲಿಪ್ ಕಾರ್ಟ್, ಅಮೆಜಾನ್ ನಂತಹ ಸೇವೆಗಳಿವೆ. ಒಟ್ಟಿನಲ್ಕ್ಲಿ ಅರಿವಿನ ದಿಗಂತಕ್ಕೆ ಎಲ್ಲೆಗಳಿಲ್ಲ.
ಮಕ್ಕಳ ಸಾಹಿತ್ಯವೆಂಬ ಪ್ರಕಾರವಲ್ಲದಿದ್ದರೂ ಭಾರತೀಯ ಕಥನ ಪರಂಪರೆಯಲ್ಲಿ ಕಥೆಗಳಿಗೆ ಬರವಿಲ್ಲ. ಹಾಗೆ ನೋಡುವುದಿದ್ದರೆ ನಮ್ಮ ಪುರಾಣಗಳ ಉಪಕಥೆಗಳು, ಅವುಗಳಲ್ಲಿನ ಅಂತರ್ ಸಂಬಂಧಗಳು, ಮಿಥ್ ಗಳು.. ಹೀಗೆ ಅದೊಂದು ಯಾವ ಹ್ಯಾರಿ ಪಾಟರ್ ಕತೆಗೆ ಕಡಿಮೆಯಿಲ್ಲದ ಬೆರಗು ಹುಟ್ಟಿಸುವ ಪ್ರಪಂಚ. ಇನ್ನು ನಮ್ಮ ಹಿರಿಯರು ಕೂಡ ಕತೆ ಹೇಳುವ ಪ್ರಕ್ರಿಯೆಯಲ್ಲಿ ಒದಗಿ ಬರುವ ಆತ್ಮೀಯತೆ, ಒಂದು ರೀತಿಯ ಮಾನಸಿಕವಾದ ‘ಹೀಲಿಂಗ್’, ಮುದ್ದು ಮಾಡುತ್ತಲೇ ತಿದ್ದುವ, ಅನುನಯಿಸಿ ಚುರುಕು ಮುಟ್ಟಿಸುವ ಜಾಣತನವನ್ನು ಮನಗಂಡಿರಬೇಕು. ಉದಾಹರಣೆಗೆ ಪಂಚತಂತ್ರ ಕತೆಗಳು, ಜಾತಕ ಕತೆಗಳು ಇತ್ಯಾದಿ. ಇನ್ನು ಈಸೋಪನ ಕತೆಗಳು, ಅರೇಬಿಯನ್ ನೈಟ್ಸ್ ಕತೆಗಳು, ಆಲಿಬಾಬಾ , ಸಿಂದಾಬಾದ್ ಕತೆಗಳು ಹೀಗೆ ಕತೆಗಳೆಂದರೆ ರಮ್ಯ ಪ್ರಪಂಚ. ಒಂದು ಕಾಲದಲ್ಲಿ ಚಂದಮಾಮ, ಬಾಲಮಿತ್ರ, ಅಮರಚಿತ್ರ ಕಥಾ, ಪುಟಾಣಿ ಹೀಗೆ ಅನೆಕ ಮುದ್ದಾದ ಪತ್ರಿಕೆಗಳು ಮಕ್ಕಳ ಕಣ್ಮನ ಸೂರೆಗೊಳ್ಳುತ್ತಿದ್ದವು.
ಕನ್ನಡದ ಮಟ್ಟಿಗೆ ಹೇಳುವುದಾದರೆ ಅನುಪಮಾ ನಿರಂಜನರ ‘ದಿನಕ್ಕೊಂದು ಕಥೆಗಳು’, ಜಿ ಪಿ ರಾಜರತ್ನಂ ಅವರ ‘ನಾಯಿಮರಿ’ ಹಾಡಿನಂತಹ ಪದ್ಯಗಳು, ಪಂಜೆ ಮಂಗೇಶರಾಯರ ‘ನಾಗರ ಹಾವೆ ಹಾವೊಳು ಹೂವೆ’ ಪದ್ಯ, ಕಯ್ಯಾರ ‘ಸಂತೆಗೆ ಹೋದನು ಭೀಮಣ್ಣ’ ಹೀಗೆ ಎಳೆಯ ಮಕ್ಕಳ ಮನಸ್ಸನ್ನು ವಿಕಾಸಗೊಳಿಸುವ ಹಲವು ಪಠ್ಯಗಳಿವೆ. ಇನ್ನು ‘ನಾಯಿ ಮರಿ’, ‘ಪಂಜರ ಶಾಲೆ’, ‘ಮಕ್ಕಳ ಮಾಯಾಲೋಕ’, ‘ನಕ್ಕಳಾ ರಾಜಕುಮಾರಿ’ಯಂತಹ ನಾಟಕಗಳನ್ನೂ ಇಲ್ಲಿ ಸ್ಮರಿಸಬಹುದು.
ಹಳ್ಳಿ ಶಾಲೆಯಲ್ಲಿ ಕಟ್ಟೆಯ ಸುತ್ತಲೂ ಮೇಷ್ಟ್ರು ಕತೆ ಹೇಳುವ ವಾತಾವರಣ ಈಗ ಇಲ್ಲವೆಂದೇ ಹೇಳಬಹುದು. ಈಗೇನಿದ್ದರೂ ಶಿಸ್ತಾಗಿ ಟೈ ಕಟ್ತಿ, ಬಿಳುಪಾದ ಸಾಕ್ಸ್, ಶೂ ಧರಿಸಿ ಇಂಗ್ಲಿಷ್ ನಲ್ಲಿ ಉಲಿಯುವ ಕಾಲ. ಹಾಗಿದ್ದರೂ ಮಕ್ಕಳ ಮನಸ್ಸೆನ್ನುವುದು ಅಮಾಯಕವೇ. ಅದು ‘ಬಾ ಬಾ ಬ್ಲಾಕ್ ಶೀಪ್’ ಹಾಡನ್ನೂ, ಪಿಂಗು, ಮಿಂಟಿ ಹೀಗೆಲ್ಲ ಕಾರ್ಟೂನ್ ಗಳನ್ನೂ, ಕನ್ನಡದ ಚಿಂಟು ಚಾನೆಲ್ ನ ಕತೆಗಳನ್ನೂ ಸಮಾನವಾಗಿ ಆನಂದಿಸಬಲ್ಲುದು. ಪುಟ್ಟ ಪುಟ್ಟ ಫ್ರಾಕ್, ಅಂಗಿ ಚಡ್ಡಿ ಧರಿಸಿದ ಆ ಮಕಳ ದಿವ್ಯ ಆನಂದವನ್ನು, ಬೆರಗುಗಣ್ಣಿನ ಹೊಳಪನ್ನು ನೋಡಿದಾಗೆಲ್ಲ ಕುವೆಂಪುರವರ, ಕೆ ಎಸ್ ನರವರ ವಾತ್ಸಲ್ಯ ಗೀತೆಗಳು ನೆನಪಾಗುತ್ತವೆ. ಇನ್ನು ದಕ್ಶಿಣ ಕನ್ನಡದ ಪ್ರಮುಖ ಮಕ್ಕಳ ಸಾಹಿತಿಯೆಂದರೆ ಪಳಕಳ ಸೀತಾರಾಮ ಭಟ್ಟರು.
ಇನ್ನು ಇಂಗ್ಲಿಷ್ ಭಾಷೆಯನ್ನು ತೆಗೆದುಕೊಂಡರೆ ‘ಗಲಿವರನ ಪಯಣಗಳು’, ‘ಸಿಂಡ್ರೆಲಾ ಕಥೆ, ಜಾರ್ಜ್ ಆರ್ವೆಲ್ ನ ‘ಎನಿಮಲ್ ಫಾರ್ಮ್, ಆರ್ ಎಲ್ ಸ್ಟೀವನಸನ್ ನ ಟ್ರೆಷರ್ ಐಲಾಂಡ್’ ವಿಲಿಯಮ್ ಗೋಲ್ಡಿಂಗ್ ನ ‘ಲಾರ್ಡ್ ಆಫ್ ದ ಫ್ಲೈಸ್’ , ಲೂಯಿಸ್ ಕರೋಲ್ ಳ ‘ ಅಲಿಸ್ ಇನ್ ವಂಡರ್ ಲ್ಯಾಂಡ್ ‘ ಹೀಗೆ ಮಕ್ಕಳ ಕಥೆಯೆಂದು ಭಾಸವಾದರೂ ದೊಡ್ದವರ ಜಗತ್ತನ್ನು ವಿಮರ್ಶಿಸುವ ಅನೇಕ ಕಥೆಗಳಿವೆ. ಅಲ್ಲಿಯೂ ಕೂಡ ದೊಡ್ದವರ ಜೀವನ ದೃಷ್ಟಿಯೇ ಢಾಳಾಗಿ ಕಾಣಲ್ಪಡುತ್ತದೆ. ಹಾಗೆ ನೋಡಿದರೆ ಕಾರ್ಟೂನ್ ಗಳಲ್ಲಿ ಕೂಡ ಹಿಂಸೆಗೆ ಬರವಿಲ್ಲ. ಉದಾಹರಣೆಗೆ ಟಾಮ್ ಅಂಡ್ ಜೆರಿಯಲ್ಲಿ ಜೆರಿ ಟಾಮ್ ನ ಮುಖವನ್ನು ಅಪ್ಪಚ್ಚಿ ಮಾಡುತ್ತದೆ, ಅದರ ಕತ್ತನ್ನು ಸ್ಪ್ರಿಂಗ್ ನಂತೆ ಒತ್ತುತ್ತದೆ ಹಾಗೂ ನಾಲ್ಕು ವರ್ಷದ ಎಳೆಯ ಮಗು ತಾನು ಕೂಡ ಹಾಗೆ ಮಾಡಿದರೆ ತಪ್ಪೇನಿಲ್ಲ ಎಂದುಕೊಂಡರೂ ಆಶ್ಚರ್ಯವಿಲ್ಲ.
ಮಾಂಟೆಸರಿ ಶಿಕ್ಷಣ ಪದ್ಧತಿಯ ಪ್ರಕಾರ ಮಕ್ಕಳ ಮನಸ್ಸು, ಮೆದುಳು ಗಭರ್ಾವಸ್ಠೆಯಿಂದ ಹಿಡಿದು ಆರು ವರ್ಷದ ವರೆಗೂ ಅತಿ ವೇಗದಲ್ಲಿ ಬೆಳೆಯುತ್ತಿರುತ್ತದಂತೆ. ಆ ಸಮಯದ ಅನುಭವಗಳು ಜೀವಮಾನವಿಡೀ ನಮ್ಮನ್ನು ರೂಪಿಸುತ್ತವೆ. ಬಣ್ಣ ಬಣ್ಣದ ಕತೆಗಳು, ಪಾಣಿ ಪಕ್ಷಿಗಳು, ಹೀಗೆ ಮಗು ಮನಸ್ಸನ್ನು ಮುದ್ದಾಗಿಟ್ಟುಕೊಳ್ಳುವುದು ನಮ್ಮ ಧರ್ಮ. ಹಾಗೆಯೇ ಜಗತ್ತಿನ ಕ್ರೌರ್ಯದಿಂದ ಒಂದಿಷ್ಟು ಸಮಯವಾದರೂ ಅವರನ್ನು ಕಾಪಿಡುವ ಜವಾಬ್ದಾರಿ ಕೂಡ.
ಈಗಿನ ಆಧುನಿಕ ಯುಗದಲ್ಲಿ ಶಿಶು ಸಾಹಿತ್ಯ ವಿರಳವೆಂದೇ ಹೇಳಬಹುದು. ಮಕ್ಕಳು ಕೂಡ ಪ್ರಬುದ್ಧರಂತೆಯೇ ವರ್ತಿಸುವ ರಿಯಾಲಿಟಿ ಶೋಗಳಿರಲಿ, ಅಂಕಗಳಿಗೆ ಒತ್ತು ಕೊಡುವ ವಿದ್ಯಾಭ್ಯಾಸ ವ್ಯವಸ್ಠೆ ಇರಲಿ, ಎಲ್ಲೋ ಒಂದು ಕಡೆ ಎಳೆಯ ಕಂದಮ್ಮಗಳನ್ನು ನಾವು ಕಾಯಿಯಾಗಿರುವಾಗಲೆ ಮಾಗಿಸುತ್ತಿದ್ದೇವೆ. ಅವರ ಎಳೆಯ ಮನದಲ್ಲಿ ನಮ್ಮ ಆಕಾಂಕ್ಷೆಗಳನ್ನು ಬಿತ್ತುತ್ತ, ಅವರ ಕನಸಿನ ಮೊಳಕೆಗೆ ವಾಸ್ತವದ ಬೇಲಿ ಕಟ್ತುತ್ತ, ನಮ್ಮದೇ ಮಕ್ಕಳ ಬಾಲ್ಯವನ್ನೂ, ಲವಲವಿಕೆಯನ್ನು ಕಸಿದುಕೊಳ್ಳುತ್ತಿದ್ದೇವೆ. ಇದು ಬಹುಶ: ಈ ಸ್ಪರ್ಧಾ ಯುಗದ ಅನಿವಾರ್ಯತೆ.
ದೇಶ ವಿದೇಶಗಳೆನ್ನದೆ ಮಕ್ಕಳ ಸಾಹಿತ್ಯದಲ್ಲಿ ಕೆಲವು ಸಾಮ್ಯತೆ ಗುರುತಿಸಬಹುದು. ಮಕ್ಕಳಿಗೆ ಕಿನ್ನರ ಲೋಕಕ್ಕೆ ಪಯಣಿಸುವ ಕತೆಗಳು, ವಿಸ್ಮಯ ಭರಿತ ಸಾಹಸ ಕಥಾನಕಗಳು ಬಲು ಇಷ್ಟ. ಉಳಿದ ಸಾಹಿತ್ಯದಂತೆ ಮಕ್ಕಳ ಸಾಹಿತ್ಯದಲ್ಲೂ ಕ್ಲೀಷೆಗಳಿಲ್ಲದಿಲ್ಲ. ಉದಾಹರಣೆಗೆ ಮಲತಾಯಿ ಕಾಟ, ಅನಾಥ ಪ್ರಜ್ನೆ ಕಾಡುವ ಮಕ್ಕಳು, ತಿರಸ್ಕಾರ, ನಿರಾಕರಣೆಗೊಳಗಾದವರು ಹೀಗೆ. ಹಾಗೆ ನೋಡುವುದಿದ್ದರೆ ಮಹಿಳಾ ಸಾಹಿತ್ಯದಂತೆ ಮಕ್ಕಳ ಸಾಹಿತ್ಯದಲ್ಲೂ ‘ಕುಟುಂಬ’ವೇ ಪ್ರಧಾನ ಅಂಶ. ಇದೀಗ ಕೆಲವು ಯುನಿವಸರ್ಿಟಿಗಳಲ್ಲಿ ಮಕ್ಕಳ ಸಾಹಿತ್ಯವೂ ಒಂದು ಅಧ್ಯಯನ ವಿಷಯವಾಗಿರುವುದು, ಅನೇಕ ಥೀಸಿಸ್ ಗಳು ಬರೆಯಲ್ಪಟ್ಟಿರುವುದು ಮಕ್ಕಳ ಸಾಹಿತ್ಯದ ಬೆಳವಣಿಗೆ ಸಹಾಯಕವೆಂದೇ ಹೇಳಬೇಕು.ಚಿಣ್ಣರ ಲೋಕಕ್ಕೆ ಶುಭವಾಗಲಿ!





ಒಳ್ಳೆಯ ಬರಹ.