ಹಿರಿಯರಿಗೆ ಎರಡು ಇರುವೆ ಕವಿತೆಗಳು
-ಚಿಂತಾಮಣಿ ಕೊಡ್ಲೆಕೆರೆ
1.ಇರುವೆ ಬಿಟ್ಟುಕೊಳ್ಳಬೇಡ
ಹೊತ್ತು ಹೋಗದೆಂದು ಇರುವೆ
ಬಿಟ್ಟುಕೊಳದಿರಿ
ಅದಕಾಗಿಯೆ ಕಟ್ಟಿರುವೆಯ
ಕಟ್ಟಿತರದಿರಿ!
ತಲೆ ತೂಗುತಲಿರಲು ನೀನು
ಹಾಡಿಗೆ
ಇರುವೆ ಹರಿಯುತಿತ್ತು
ಅದರ ಪಾಡಿಗೆ
ಇರುವೆ ಪಕ್ಕ ಹೋಗಿ ಅದನು
ಹಿಡಿದರೆ
ಸಿಟ್ಟಿಗೆದ್ದ ಇರುವೆ ನಿನ್ನ
ಕಡಿಯದೆ?
ಇರುವೆ ಬಿಟ್ಟುಕೊಳ್ಳಬೇಡ
ಸುಮ್ಮನೆ
ಹಾಡು ಕೇಳಿ ನಲಿಯುತಿರು
ತಮ್ಮನೆ
2.ಮರಳಿನೊಡನೆ ಸಕ್ಕರೆ
ಮರಳಿನೊಡನೆ ಸಕ್ಕರೆ
ಬೆರೆತು ಹೋಗಿದೆ
ಬೇರೆ ಹೇಗೆ ಮಾಡಲಿ
ತಿಳಿಯದಾಗಿದೆ! ಸಕ್ಕರೆಯನು ಪಡೆವ ವಿದ್ಯೆ
ಇರುವೆ ಬಲ್ಲುದು
ಇರುವೆ ಬಿಟ್ಟು ಇನ್ನಾರಿಗೂ
ಕಲಿಸಲೊಲ್ಲದು!
“ಅನುಕ್ಷಣವೂ ನಮ್ಮ ಹಾಗೆ
ದುಡಿಯಬಲ್ಲಿರಾ?
ಮರಳು ಬಿಟ್ಟು ಸಕ್ಕರೆ ಕಣ
ಹಿಡಿಯಬಲ್ಲಿರಾ?”
“ಇರುವೆಯಾಗು ಮರಳು ಬಿಡು
ಮರುಳು ಮಾನವ
ಜೊತೆಜೊತೆಗೇ ಸಕ್ಕರೆ
ಹೊತ್ತು ಸಾಗುವ!”






ಇರುವೆ ಬಿಟ್ಟುಕೊಳ್ಳಬೇಡ,
ಕವನ ಅರ್ಥಪೂರ್ಣವಾಗಿ ಮೂಡಿ ಬಂದಿದೆ. ಹೊತ್ತು ಹೋಗದು ಎಂದು ಅನಾವಶ್ಯಕ ವಿಷಯ ಗಳಲ್ಲಿ ತಲೆ ಹಾಕಿ ಸಮಸ್ಯೆಗಳನ್ನು ನಿಮ್ಮ ಮೈಮೇಲೆ ಹಾಕಿ ಕೊಳ್ಳಬೇಡಿ ಎಂಬ ಸಂದೇಶ ಇದೆ.
ಮರಳಿನೊಡನೆ ಸಕ್ಕರೆ,
ಕವಿತೆ ಮಾರ್ಮಿಕವಾಗಿದೆ,
ಬದುಕಿನಲ್ಲಿ ಪ್ರತಿ ಹೆಜ್ಜೆ ಸಕ್ಕರೆ ಹಾಗಿರುವ ಧನಾತ್ಮಕ ಅಂಶ ಗಳನ್ನು ಹೊತ್ತು ಸಾಗಬೇಕು, ಕಲ್ಲಿನ ತರಹ ಇರುವ ಋಣಾತ್ಮಕ ಅಂಶ ಗಳನ್ನು ಬಿಟ್ಟು. ಆಗ ಬದುಕು ಸಿಹಿ ಜೇನಾಗುವುದು.