ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇರುವೆ ಕಾಲಿಗೆ ಅಂಟಿದ ರಕ್ತ…

ಬಿದಲೋಟಿ ರಂಗನಾಥ್

ಆ ಶಿಲೆಯೆದುರು
ಮಿಡಿನಾಗರ ಬುಸುಗುಟ್ಟುತ್ತಲೇ ಇತ್ತು
ಇರುವೆ ಕಾಲಿಗೆ ಅಂಟಿದ ರಕ್ತ
ಕಾವ್ಯ ಬರೆಯುತಿತ್ತು

ಶಿಲೆ ಬಿಡುಗಣ್ಣು ಬಿಟ್ಟ ನಾರಿ
ಮೊಲೆ ಹಾಲು ನಂಜಾಗಿ ಬೇಸರದಿ ನಿಂತ ಪೋರಿ
ನೆಲದ ಹಾಡಿಗೆ ಕಿವಿಯಾದ
ಅರುಂದತಿಯ ಛಾಯೆ

ಹೊತ್ತು ಏರುವ ಬಿಸಿಲ ತಾಪಕೆ
ಇರುವೆ ಕಾಲಿನಲಿ ಚಕ್ರ ಮೂಡಿ
ಬರ ಬರನೇ ಚಲಿಸಿ
ಮೊಲೆ ಮೂಡಿ
ಯೋನಿಯೊಳಗೊಂದು
ಕರುಳ ಹಾರ ಮಾತಾಡಿ
ಶಿಲೆಯ ತುಟಿ ಅದುರಿ
ಜಡದೊಳಗೆ ಜೀವಕಳೆ ಹರಿದಾಡಿ
ನೆಲದ ಬೆವರು ಭಯದ ವಾಸನೆ
ವಾಂಛೆಯ ಕಣ್ಣಿನ ಬೆಳಕು

ನೋಡು ನೋಡುತ್ತಿದ್ದಂತೆ
ಶಿಲೆಯ ಮೇಲಿನಿಂದ ಜಾರಿದ
ಆ ಸಣ್ಣ ಇರುವೆ ಅಂಗಾತ ಬಿದ್ದಿತು
ಮೈ ತುಂಬಾ ಸುಟ್ಟ ಗಾಯದ ವಾಸನೆ !
ನಿಲ್ಲಲಾಗಲಿಲ್ಲ ಶಿಲೆಯೆದುರು
ಕಣ್ಣಲ್ಲಿ ಜೋಡಿ ಹಾವಿನ ತೆಕ್ಕೆ
ನೆಲವಿಲ್ಲದ ಹೆಜ್ಜೆ
ಕರುಳಿಲ್ಲದ ಬಸಿರು
ಕನಸಿಲ್ಲದ ಕನವರಿಕೆ

ಕಣ್ಣುಮಿಟುಕಿಸುವ ಹೊತ್ತು
ಬೆಂಕಿ ಮಳೆ ಸುರಿದು
ಜಾತಿ ಸುಟ್ಟ ಬೂದಿ
ಮೈ ತುಂಬಾ ಲೇಪಿಸಿ
ಚೀರಿತು ಕೊರಳು

ಕಿವಿಯಲ್ಲಿ ಓಂಕಾರದ ಸದ್ದು
ಆರುಮೂರೊಂಭತ್ತು ಗೂಡಿನ
ಭಯ ಮುದುರಿ
ಏಕಾಂತವು ಅಲುಗಿ
ನಡೆಯುತ್ತಿದ್ದವು ನೂರಾರು ಶಿಲೆಗಳು
ತುಟಿಯಲ್ಲಿ ನರಳುವ ಅಳುವನ್ನು
ಹರಿದ ಬದುಕಿನ ನೋವನ್ನು
ತಮಟೆ ನಾದದಲಿ ಮುಚ್ಚಿ
ಕರುಳು ಕಲೆತ ಮಾತಿಗೆ ಕಿವಿಯಾಗಲು..

ಕಣ್ಣರೆಪ್ಪೆಗಳ ಬಂಧಕೆ
ಒಳಗೆ ಕುಣಿದ ನವಿಲ ಹೆಜ್ಜೆಗಳು
ಹಸಿವು ಬಾಯಿ ತೆರೆಯುವ ಹೊತ್ತು
ಮೈ ತುಂಬಿದ ರೋಮಗಳು
ಉಡುಗಿದ ಗಾಯದ ಕಲೆಗಳು
ಮೌನತುಂಬಿ ನಡೆದವು…

ಅನುಭೂತಿಯಲಿ ಮಿಡಿದ ಎದೆಯ ಕರುಣೆಗೆ
ಸೋತು ಮುಚ್ಚಿದ ಕಣ್ಣು ತೆರೆದೆ
ಅಯ್ಯೋ ಶಿವನೆ..!
ಅಂಗಾತ ಬಿದ್ದ ಇರುವೆ ನಡೆಯುತ್ತಿದೆ…

‍ಲೇಖಕರು Admin

3 January, 2022

1 Comment

  1. ಎಂ.ಜವರಾಜ್

    -೧-
    “ಇರುವೆ ಕಾಲಿಗೆ ಅಂಟಿದ ರಕ್ತ/
    ಕಾವ್ಯ ಬರೆಯುತಿತ್ತು”
    -೨-
    “ಇರುವೆ ಕಾಲಿನಲಿ ಚಕ್ರ ಮೂಡಿ
    ಬರ ಬರನೇ ಚಲಿಸಿ/ಮೊಲೆ ಮೂಡಿ/
    ಯೋನಿಯೊಳಗೊಂದು/ಕರುಳ ಹಾರ ಮಾತಾಡಿ/ಶಿಲೆಯ ತುಟಿ ಅದುರಿ
    ಜಡದೊಳಗೆ ಜೀವಕಳೆ ಹರಿದಾಡಿ”
    -೩-
    “ಅಂಗಾತ ಬಿದ್ದ ಇರುವೆ ನಡೆಯುತ್ತಿದೆ…”

    ಇರುವೆ ಕಾಲಿಗೆ ಅಂಟಿದ ರಕ್ತ – ಕವಿತೆಯ ಆಳ
    ಮೊದಲ ಓದಿಗೆ ದಕ್ಕದ್ದು. ಇರುವೆ ಕಾಲಿನಲಿ ಅಂಟಿದ ರಕ್ತವು ‘ಕಾವ್ಯ ಬರೆಯುವ’ ಲಯದ ಕಲ್ಪನೆಯೇ ಕವಿಯ ಆಳದ ಕವಿತ್ವದ ಉತ್ಕೃಷ್ಟತೆಗೆ ದಕ್ಕಿದ ಗಟ್ಟಿ ಸಾಕ್ಷ್ಯ! ಬಿದಲೋಟಿ ಈ ಕಾಲದ ಮಹತ್ವದ ಕವಿ ಎಂಬುದಕ್ಕೆ ಮೇಲ್ಕಾಣಿಸಿದ ಸಾಲುಗಳು ಮಾತ್ರವಲ್ಲ ಆಗಾಗ ಹೀಗೆ ಬೆಳಕು ಕಾಣುತ್ತಿರುವ ಅವರ ಪ್ರತಿ ಕವಿತೆಗಳೂ ಪದೆಪದೆ ರುಜುವಾತು ಪಡಿಸುತ್ತಿವೆ. ಖುಷಿಯಾಗುತ್ತದೆ.
    *
    ಎಂ.ಜವರಾಜ್

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading