ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇರುಳಿನ ಮುಖವಾಡ ಹೊತ್ತ ಈ ಹಗಲು..

ಮುಖವಾಡಗಳು..!
ರುದ್ರಸ್ವಾಮಿ ಹರ್ತಿಕೋಟೆ
ಭವ್ಯ ಹೆಮ್ಮಾಲಿನ
ಮೆಟ್ಟಿಲ ಮೇಲೆ
ಪರಸ್ಪರ
ನಯನಗಳು ನಿರುಕಿಸಿ
ದಶನ ಕಾಂತಿಯ ಸವಿದು
ವಾರದೊಳಗೆ ಅವನೆದೆಗೆ ಒರಗಿ
ರೋಮಗಳ ಮೇಲೆ ಬೆರಳಾಡಿಸುತ್ತಿರುವಾಗ,
‘ಇವನಾದರೂ ಸುಖ ನೀಡಬಹುದೇ’
ಪಿಸುಗುಟ್ಟುತ್ತಿತ್ತು ಅವಳ ಎದೆಯ ದನಿ!
ಸಂತೆ ಬೀದಿಯಲಿ ಹಚ್ಚೆಯಾಕುವವಳ
ಮುಂದೆ ಕುಳಿತ ತರುಣ,
ಅವಳಿಗೆ ಕೈನೀಡಿ
ರೆಪ್ಪೆ ಮಿಟುಕಿಸದೇ
ಅವಳ ತನಿಮೊಲೆಗಳ
ಸವಿಯುತ್ತಿರುವಾಗ, ಅವಳು ಮಾತ್ರ ಅವನ ಕೈ ಮೇಲೆ ‘ಅಮ್ಮ’ ಎಂದು ಹಚ್ಚೆ ಹಾಕುತ್ತಿದ್ದಳು!
ರಾತ್ರಿ ಬಂದ ಜಾರನು
ಅವಳ ಜೊತೆ ಮಲಗಿ
ಸುಖಿಸುತ್ತಿರುವಾಗ,ಅವಳ ಮನದ ತುಂಬಾ
ಮಗನ ಖಾಸಗಿ ಶಾಲಾ ಶುಲ್ಕ ಕಟ್ಟುವ ಚಿಂತೆ!
ಉಸಿರುಗಟ್ಟಿದಂತೆ ಬದುಕಿ
ಇದ್ದನೊಬ್ಬ ಸೂನುವಿನ
ಬದುಕ ಬೆಳಗಿದ ತನುಮನಗಳೀಗ
ವೃದ್ಧಾಶ್ರಮದಲಿ ಕುಳಿತು
ಅವನ ಶ್ರೇಯಸ್ಸು ಬಯಸುತ್ತಿವೆ!
ಅದೆಷ್ಟು ಮುಖಗಳ ಕಂಡಿರಬಹುದು
ಈ ಹಗಲಿರುಳುಗಳು!?
ಕೇಳುವ ಬಯಕೆ!
ಹೇಳಬಹುದೇ ಸತ್ಯವಾ?
ಇರುಳಿನ ಮುಖವಾಡ ಹೊತ್ತ ಈ ಹಗಲು!
ಬೆಳಕೇ ಇಲ್ಲವೆಂಬಂತೆ ನಟಿಸುವ ಈ ಇರುಳು!

‍ಲೇಖಕರು avadhi

24 April, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading