ಸಂವರ್ತ ಸಾಹಿಲ್
ಚಿತ್ರ ಕೃಪೆ : ಪಿ ಮಹಮದ್
ದೇಶ-ಧರ್ಮದ ಭಕ್ತನೇ ಹೇಳು,
ಕಣ್ಣೆತ್ತಿ ಒಮ್ಮೆ ಕಣ್ಣಲ್ಲಿ ಕಣ್ಣಿಟ್ಟು ನೋಡು,
ನನಗೂ ಕೇಳುವಂತೆ ಒಮ್ಮೆ ಉತ್ತರಿಸು,
ಇದು ಯಾರ ನೆತ್ತರು, ಇಲ್ಲಿ ಯಾರು ಸತ್ತರು?
ನೆಲದೆದೆಯ ಮೇಲೆ ಉರಿಯುತ್ತಿರುವ
ಕೆಂಡದುಂಡೆಗಳು ಕೇಳುತ್ತಿವೆ
ನಮ್ಮವರಾಗದೆ ಹೋದ ಮಂದಿಯ
ಮೈಯಿಂದ ಹರಿಯುವ ರಕ್ತವು ಕೇಳುತ್ತಿದೆ
ಬೀದಿ-ಹಾದಿಯೂ ಚೀರಾಡುತ್ತಿವೆ
ಸಾಗರ-ದಡವೂ ಪ್ರಶ್ನಿಸುತ್ತಿದೆ
ಇದು ಯಾರ ನೆತ್ತರು, ಇಲ್ಲಿ ಯಾರು ಸತ್ತರು?
ವಿನಾಶಕ್ಕೆ ಕರೆಯ ನೀಡುವವರೇ
ಪ್ರೀತಿಯ ಸಂದೇಶ ರವಾನಿಸುವವರೇ
ಸುಡುವಗ್ನಿಗೆ ಯಾಕೆ ಬೆಚ್ಚಿರುವಿರಿ
ಬೆಂಕಿಗೆ ಆಹುತಿ ಸುರಿಯುವವರೇ
ಬಿರುಗಾಳಿಗೆ ಯಾಕೆ ಹೆದರಿರುವಿರಿ
ಅಲೆಗಳ ಅಬ್ಬರ ಹೆಚ್ಚಿಸುವವರೇ .
ನಿಮ್ಮ ಧ್ಯೇಯವಾಕ್ಯವ ಮರೆತಿರೇನು?
ಇದು ಯಾರ ನೆತ್ತರು, ಇಲ್ಲಿ ಯಾರು ಸತ್ತರು?
ದೇಶ-ಧರ್ಮದ ಭಕ್ತನೇ ಹೇಳು..
ಎದೆ ಮೇಲೆ ಕೈಯಿಟ್ಟು ಪ್ರತಿಜ್ಞೆ ಮಾಡಿಹೆವು
ಎಲ್ಲಾ ಬಗೆಯ ಕ್ರೌರ್ಯವ ಎದುರಿಸುವೆವು
ನೀ ರಾಜಿಯ ಕನಸು ಕಾಣುತ್ತಿರು
ನಾವು ನಿಲ್ಲದೆ ಹೀಗೆ ಮುನ್ನುಗ್ಗುವೆವು
ಈ ಹಾದಿಯ ಈ ಗುರಿಯ ಮೇಲಾಣೆ
ಗುರಿ ತಲುಪವ ತನಕ ಪ್ರಶ್ನೆಯ ಕೇಳುವೆವು
ಇದು ಯಾರ ನೆತ್ತರು, ಇಲ್ಲಿ ಯಾರು ಸತ್ತರು?
ಉರ್ದು ಮೂಲ : ಸಾಹಿರ್ ಲುಧಿಯಾನ್ವಿ
ಕನ್ನಡಕ್ಕೆ: ಸಂವರ್ತ ‘ಸಾಹಿಲ್’







arthpoorna anuvada sahil ji. it went straight into the heart. nice
song is perfect for present situation, thanks Samvrtha, ….
ಕಂಬನಿ ಉರುಳಿಸಿದ ಪದ್ಯ.