ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇತಿಹಾಸದ ಪುಟ ತಿರುವಿ ಓದುತ್ತಾಳೆ..

ಕುರುಹು

ದೀಪ್ತಿ ಭದ್ರಾವತಿ

ಇತಿಹಾಸದ ಪುಟ ತಿರುವಿ ಓದುತ್ತಾಳೆ
ಮಗಳು ಅಲೆಗ್ಸಾಂಡರನ ದಂಡಯಾತ್ರೆ
ಹಿಟ್ಲರನ ಸಂಗ್ರಾಮ
ನೆಪೋಲಿಯನ್ನನ್ನ ಸಾಹಸಗಾಥೆಗಳ..

footಅಲ್ಲಿ ಆ ಕಗ್ಗತ್ತಲ ತಂತಿಯ ನಡುವೆ ಅವಿತ
ಜಾಗದಿಂದ ಬಂದೂಕಿನ ಯೋಧನೊಬ್ಬ
ವೇದನೆಯಲಿ ನೋಡುತ್ತಾನೆ
ಎದುರು ಬೇಲಿಯಲಿ
ತನ್ನತ್ತಲೇ ಎವೆ ಇಕ್ಕಿರುವ
ಅಪರಿಚಿತ ತುಪಾಕಿಯವನ

ಅಕೋ ಇಲ್ಲಿ ಜಡಿ ಮಳೆಗೆ ಸೋತು ಸುರಿವ
ಛಾವಣಿಯ ಸರಿ ಪಡಿಸಲಾಗದ ಒಂಟಿ ಮುದುಕಿ
ಕಣ್ಣಿಗೆ ಎಣ್ಣೆ ಹನುಗಿಸಿ ಖಾಲಿ ರಸ್ತೆಯ
ಎಂದಿನಿಂದಲೋ ಕಾಯುತ್ತಲೇ
ಇದ್ದಾಳೆ

ಮಗಳು ಮತ್ತಷ್ಟು ಮಗದಷ್ಟು ಓದುತ್ತ
ಕೇಳುತ್ತಾಳೆ ಇದ್ದರೇನಮ್ಮ ಗಂಗರು, ಕದಂಬರು
ಕಲ್ಯಾಣದ ಚಾಲುಕ್ಯರು
ನಡೆದವೇನಮ್ಮ ಪ್ಲಾಸಿ ಕದನ,
ಬಾಬರನ ದಂಡಯಾತ್ರೆ , ನಾಜೀ ಸಂಘರ್ಷಗಳು,
ಹೀಗೇ ನೂರೆಂಟು

footನಾನು ಹೌದು ಎನ್ನುತ್ತೇನೆ
ಮತ್ತೆ ಕುರುಹುಗಳು..? ಪ್ರಶ್ನಿಸುತ್ತಾಳೆ
ಸ್ಥಾವರ ಶಾಶ್ವತವಲ್ಲ ಮಗಳೇ
ಉತ್ತರಿಸುತ್ತೇನೆ
ಮಾತು ಮುಗಿಯುವ ಮುನ್ನ ಕೇಳುತ್ತಾಳೆ
ಹಾಗಿದ್ದರೆ ಯುದ್ಧಗಳು ಜಂಗಮವೇನಮ್ಮ?

ಕೊರಳು ದಿಗಿಲು ಬೀಳುತ್ತದೆ
ಕನಸುಗಣ್ಣಿನ ಎಳೆ ಯೋಧರು ಕಣ್ಮರೆಯಾಗುತ್ತಾರೆ
ಮುದುಕಿ ಜಗದ ದೀಪ ಆರುತ್ತದೆ
ಚರಿತ್ರೆಯ ಪುಟಗಳು ಇನ್ನಷ್ಟು
ಭರ್ತಿಯಾಗುತ್ತವೆ..!

‍ಲೇಖಕರು Admin

6 August, 2016

2 Comments

  1. Renuka ramananda

    ತುಂಬಾ ಸೊಗಸಾದ ಕವನ ದೀಪ್ತಿ….

  2. Sangeeta Kalmane

    “ಚರಿತ್ರೆಯ ಪುಟಗಳು ಇನ್ನಷ್ಟು ಭತಿ೯ಯಾಗುತ್ತವೆ” ವಾಸ್ತವದ ಕಲ್ಪನೆ. ದಿಟವಾದ ಸಾಲುಗಳು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading