ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಇಂಡಿಯಾ ಮತ್ತು India's Daughter’ – ಗಿರಿಜಾ ಶಾಸ್ತ್ರಿ

ಭಾರತಮಾತೆಯನ್ನು ಪೂಜಿಸುವ ಈ ಭವ್ಯ ನಾಡಿನಲ್ಲಿ

ಗಿರಿಜಾಶಾಸ್ತ್ರಿ,

ಮುಂಬಯಿ


‘ಇಂಡಿಯಾಸ್ ಡಾಟರ್’ ಸಾಕ್ಷ್ಯಚಿತ್ರ ಪ್ರದರ್ಶನವನ್ನು ನಿಷೇಧಿಸಲಾಗಿದೆ. ಹಾಗೆ ನೋಡಿದರೆ ನಮ್ಮ ಭಾರತೀಯ ಸಾಂಸ್ಕೃತಿಕ ನಿರ್ವಚನಗಳಲ್ಲಿ ಲಾಗಾಯ್ತಿನಿಂದಲೂ ಮಹಿಳೆ ನಿಷೇಧಿಸಲ್ಪಟ್ಟವಳೇ. ಪಿತೃ ಪ್ರಧಾನ ವ್ಯವಸ್ಥೆಯ ಮೂಲಕ ಒಂದು ಕಡೆ ಸಂಸ್ಕೃತಿಯ ಹೆಸರಿನಲ್ಲಿ ಸಹನೆ, ತ್ಯಾಗ, ಬಲಿದಾನದಂತಹ ಮೌಲ್ಯಗಳ ಸಿದ್ಧ ಮಾದರಿಗೆ ಅವಳನ್ನು ಒಗ್ಗಿಸಲಾಗುತ್ತಿದ್ದರೆ, ಇನ್ನೊಂದು ಕಡೆ ಆ ಮೌಲ್ಯಗಳನ್ನೇ ತಮ್ಮ ಹಿತಾಸಕ್ತಿಗೆ ನಗದು ಮಾಡಿಕೊಳ್ಳಲಾಗುತ್ತಿದೆ. ಹೆಣ್ಣಿಗೆ ಇದರಿಂದಾಗಿ ಎರಡೂ ಕಡೆಯಿಂದ ನಷ್ಟವೇ. ಆಶ್ಚರ್ಯವೆಂದರೆ ಈ 21ನೆಯ ಶತಮಾನದ ‘ಇಂಡಿಯಾ’ದಲ್ಲೂ ಕೂಡ ಆಕೆ ಹೀಗೆ ಎರಡು ದೋಣಿಯ ಮೇಲೆ ಕಾಲಿಟ್ಟು ಪ್ರಯಾಣಿಸುವ ದುರಂತಕ್ಕೆ ಒಳಗಾಗಿರುವುದು. ಅವಳ ಸ್ಥಾನಮಾನದಲ್ಲಿ ಮೂಲಭೂತ ನೆಲೆಯಲ್ಲಿ ಯಾವ ಬದಲಾವಣೆಗಳೂ ಆಗದಿರುವುದನ್ನು ಹೇಳುತ್ತದೆ.

ನಮ್ಮ ಸರ್ಕಾರವು ಈ ಚಿತ್ರವನ್ನು ನಿಷೇಧಿಸಲು ಇರುವ ಮುಖ್ಯ ಕಾರಣವೆಂದರೆ ಅದು ನಮ್ಮ ಸಂಸ್ಕೃತಿಗೆ ಅವಹೇಳನಕಾರಿಯಾಗಿದೆ ಎನ್ನುವುದು. 21ನೇ ಶತಮಾನದ ಈ ವಿದ್ಯುನ್ಮಾನ ಯುಗದಲ್ಲೂ ಅನಾದಿಕಾಲದ ಮಹಿಳೆಯ ಯಥಾಸ್ಥಿತಿಯನ್ನು ಕಾಯ್ದುಕೊಂಡುಬಂದಿರುವುದು ನಮಗೆ ಅಪಮಾನಕರ ಸಂಗತಿಯಾಗುವುದಿಲ್ಲ್ಲ, ಬದಲಾಗಿ ಅದನ್ನು ಲೋಕಕ್ಕೆ ತೋರಿಸುವುದು ಮಾತ್ರ ಹೀನಾಯವಾದ ಸಂಗತಿಯಾಗಿದೆ. ಹೀಗೆ ನಮ್ಮ ಸಂಸ್ಕೃತಿಯಲ್ಲಿ ಮಹಿಳೆ ‘ಇರುವ’ ಮತ್ತು ಅವಳನ್ನು ‘ಕಾಣಿಸು’ವುದರ ನಡುವಿನ ದೊಡ್ಡ ಬಿರುಕನ್ನು ಲೆಸ್ಲಿ ವುಡ್ವಿನ್ ನಿರ್ದೇಶನದ ‘ಇಂಡಿಯಾಸ್ ಡಾಟರ್’ ಸಾಕ್ಷ್ಯಚಿತ್ರ ಅನಾವರಣ ಮಾಡುವುದರ ಮೂಲಕ, ನಮ್ಮ ಸಂಸ್ಕೃತಿಯ ಹೆಮ್ಮೆಗೆ ಗದಾಘಾತವನ್ನು ನೀಡಿದೆ. ಇದರ ಮೂಲಕ ಭಾರತಕ್ಕೆ ತನ್ನನ್ನು ತಾನು ನೋಡಿಕೊಳ್ಳಲು ಅಸಹ್ಯವೆನಿಸದೆ.
ಪಾರ್ಲಿಮೆಂಟಿನಲ್ಲಿ ಇದರ ಬಗ್ಗೆ ಕೋಲಾಹಲವೆದ್ದಿದೆ. ಪ್ರಸಿದ್ಧ ಹಿಂದಿ ಕವಿ ಜಾವೆದ್ ಅಖ್ತರ್ ಅವರು ‘ಇಡೀ ವ್ಯವಸ್ಥೆ ಹೇಗೆ ಅತ್ಯಾಚಾರಿಗಳ ಪರವಾಗಿ ಆಲೋಚಿಸುತ್ತದೆ ಎಂಬುದು ಈ ಚಿತ್ರದಿಂದ ಕೋಟ್ಯಾಂತರ ಜನರಿಗೆ ಗೊತ್ತಾಗಿ ಹೋಗಿದೆ. ಈ ಚಿತ್ರ ನಿರ್ಮಾಣ ಮಾಡಿದ್ದು ಬಹಳ ಒಳ್ಳೆಯದಾಯಿತು. ಅಸಹ್ಯಕರವಾಗಿರುವುದು ಚಿತ್ರವಲ್ಲ, (ಮಹಿಳೆಯರ ಬಗೆಗಿನ) ನಮ್ಮ ಆಲೋಚನೆಗಳು. ನಿಷೇಧಿಸಬೇಕಾಗಿರುವುದು ಚಿತ್ರವನ್ನಲ್ಲ ನಮ್ಮ ದೃಷ್ಟಿಕೋನವನ್ನು ಎಂದು ಪಾರ್ಲಿಮೆಂಟಿನಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ. ಪಾರ್ಲಿಮೆಂಟಿನ ಇನ್ನೊಬ್ಬ ಸದಸ್ಯೆ ಕಿರಣ್ ಖೇರ್, ಹೆಣ್ಣಿನ ನೋವು ಹಾಗೂ ಅಪಮಾನದ ಗೋರಿಯ ಮೇಲೆ ಹಾಸಿದ ಹೊಲಸು ರತ್ನಗಂಬಳಿಯ ಮೇಲೆ ನಾವೆಲ್ಲರೂ ಬಹಳ ಶೋಭಾಯಮಾನವಾಗಿ ನಡೆಯುತ್ತಿದ್ದೇವೆ, ಅದನ್ನು ಬಯಲಾಗಿಸಿದ ‘ಇಂಡಿಯಾಸ್ ಡಾಟರ್’ ಸಾಕ್ಷ್ಯ ಚಿತ್ರದ ನಿರ್ದೇಶಕಿಯ ಮೇಲೆ ಕಠಿಣ ಕ್ರಮ ಜರುಗಿಸಬೇಕೆಂದು ಆದೇಶ ಹೊರಡಿಸುತ್ತಿದ್ದೇವೆ, ಇದು ಎಂತಹ ವ್ಯಂಗ್ಯ! ಎಂದು ನಮ್ಮ ಸಾಮಾಜಿಕ ವೈರುಧ್ಯದ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಾವಾಗಲೂ ನಮ್ಮ ಸಂಸ್ಕೃತಿಯ, ಧರ್ಮದ ಮಾನವನ್ನು ಕಾಪಾಡಬೇಕಾಗಿರುವ ಹೊಣೆಗಾರಿಕೆ ಮಹಿಳೆಯರದೇ ಆಗಿದೆ. ಆದುದರಿಂದಲೇ ಯಾವುದಾದರೂ ಅನ್ಯಧರ್ಮವನ್ನು ಹೀನಾಯವಾಗಿ ಹಣಿಯಬೇಕೆಂದರೆ, ಆಯಾ ಧರ್ಮಕ್ಕೆ ಸಂಬಂಧ ಪಟ್ಟ ಹೆಣ್ಣುಮಕ್ಕಳ ಉಡಿಗೆ ಕೈಯಿಕ್ಕಿದರೆ ಸಾಕು, ಆ ಸಂಸ್ಕೃತಿ ಹೊತ್ತಿ ಉರಿದು ಬಿಡುತ್ತದೆ.
2012 ಡಿಸೆಂಬರ್ 16 ರಂದು ‘ನಿರ್ಭಯಾ’ ಎಂಬ ಹೆಸರಿನಿಂದ ಇಡೀ ದೇಶವನ್ನು ಅಲುಗಾಡಿಸಿದ ದೆಹಲಿಯ ಹುಡುಗಿ ಇಂದು ‘ಜ್ಯೋತಿ’ಯಾಗಿ, ಊಹಿಸಲೂ ಅಸಾಧ್ಯವಾದ, ಹೆಣ್ಣಿನ ಮೇಲೆ ಆಗುವ ಹಿಂಸೆಯ ಪರಾಕಾಷ್ಠೆಯನ್ನು ಈ ಸಿನಿಮಾದ ಮೂಲಕ ಬಯಲಾಗಿಸಿದ್ದಾಳೆ. ನಮ್ಮ ಸಾಂಸ್ಕೃತಿಕ ಅಪಮೌಲೀಕರಣದ ಮೇಲೆ ಬೆಳಕು ಚೆಲ್ಲಿದ್ದಾಳೆ. ಇದು ಕೇವಲ ಜ್ಯೋತಿಯ ಪೋಸ್ಟ್ಮಾರ್ಟಂ ಅಲ್ಲ ಬದಲಾಗಿ ನಮ್ಮ ಸಂಸ್ಕೃತಿಯ ಪೋಸ್ಟ್ಮಾರ್ಟಂ. ಅದಕ್ಕಾಗಿಯೇ ಇಡೀ ದೇಶ ಅದರ ವಿರುದ್ಧ ಮುಗಿಬಿದ್ದಿದೆ. ಈ ಚಿತ್ರಪ್ರದರ್ಶನಕ್ಕೆ ನಿಷೇಧವನ್ನು ಹೇರಿದುದಲ್ಲದೇ, ಈ ಚಿತ್ರಕ್ಕೆ ಸಂಬಂಧಿಸಿದಂತೆ ಯೂಟ್ಯೂಬ್ನ ಎಲ್ಲಾ ಸಂಪರ್ಕಗಳನ್ನು ಕತ್ತರಿಸಿ ಹಾಕುವಂತೆ ಆದೇಶ ಕೊಡುವುದರ ಮೂಲಕ ಭಾರತವು ಅಂತಾರಾಷ್ಟ್ರೀಯ ಆತ್ಮಹತ್ಯೆಯನ್ನು ಮಾಡಿಕೊಂಡಿದೆ ಎಂದು ನಿರ್ದೇಶಕಿ ಲೆಸ್ಲೀ ವುಡ್ವಿನ್ ಅಭಿಪ್ರಾಯ ಪಟ್ಟಿರುವುದು ಭಾರತ ಸರ್ಕಾರದ ಪೂರ್ವಗ್ರಹವನ್ನು ಬಯಲಿಗೆಳೆಯುತ್ತದೆ.
ಈ ಚಿತ್ರ ತೆರೆದುಕೊಳ್ಳುವುದು ಹಲವಾರು ಹದ್ದುಗಳು ಆಕಾಶದಲ್ಲಿ ಹಾರಾಡುತ್ತಿರುವ ದೃಶ್ಯದಿಂದ. ಇದು ಒಮ್ಮೆಲೆ ನಿರಂಜನ ಅವರ ‘ಕೊನೆಯ ಗಿರಾಕಿ’ ಕತೆಯನ್ನು ನೆನಪಿಗೆ ತರುತ್ತದೆ. ಅಸಹಾಯಕಳಾದ ಮೂಕ ಹುಡುಗಿಯೊಬ್ಬಳು ಬೀದಿ ಸೂಳೆಯಾಗುವ ಈ ಕತೆಯ ಕೊನೆಗೆ, ಹೆಣವಾಗಿ ಬಿದ್ದ ಅವಳ ಮೇಲೆ ಹಾರುವ ಗಿಡುಗ ‘ಕೊನೆಯ ಗಿರಾಕಿ’ ಯಾಗಿ ಅವಳ ಮಾಂಸಕ್ಕೆ ಹಾತೊರೆಯು ವ್ಯಂಗ್ಯವನ್ನು ಬಹಳ ಮಾರ್ಮಿಕವಾಗಿ ಈ ಕತೆ ಎತ್ತಿಹಿಡಿಯುತ್ತದೆ. ಆದರೆ ‘ಇಂಡಿಯಾಸ್ ಡಾಟರ್’ ಚಿತ್ರದಲ್ಲಿ ಕೇವಲ ಒಂದು ಗಿಡುಗವಲ್ಲ: ಹಲವಾರು ಗಿಡುಗಗಳು (ಹದ್ದುಗಳು) ಜ್ಯೋತಿಯ ಹೆಣದ ಮೇಲೆ ಎರಗುತ್ತವೆ.
ನಿರ್ದೇಶಕಿ ಈ ವಿಷಯದಲ್ಲಿ ಎಷ್ಟು ಸೂಕ್ಷ್ಮ್ಮವಾಗಿ ಎಂತಹ ಸಂಯದಿಂದ ಈ ಚಿತ್ರವನ್ನು ತಯಾರಿಸಿದ್ದಾಳೆಂದರೆ, ಜ್ಯೋತಿಯ ಭಾವಚಿತ್ರವನ್ನಾಗಲೀ ಅವಳನ್ನು ಯಾವ ಪಾತ್ರರೂಪದಲ್ಲಾಗಲೀ ಎಲ್ಲಿಯೂ ತೋರಿಸಿಲ್ಲ. (ಅವಳು ಬಟ್ಟೆ ಒಣಹಾಕುತ್ತಿರುವುದನ್ನು ಹಿಂಬದಿಯಿಂದ ತೋರಿಸುವ ಒಂದು ದೃಶ್ಯವನ್ನು ಬಿಟ್ಟರೆ). ಅದಕ್ಕೆ ಬದಲಾಗಿ, ಅವಳ ಮಾನಹಾನಿಗೆ, ಬರ್ಬರ ಹತ್ಯೆಗೆ ಕಾರಣವಾದ ಬಸ್ಸು ಅವಳ ಪ್ರತೀಕವಾಗಿ ಇಡೀ ಚಿತ್ರದ ತುಂಬಾ ಓಡಾಡುತ್ತದೆ. ಅವಳ ಮೇಲೆ ಸಾಮೂಹಿಕ ಬಲಾತ್ಕಾರ ನಡೆದ ದೃಶ್ಯವಾಗಲೀ, ಅವಳನ್ನೂ, ಅವಳ ಕರುಳನ್ನೂ ಬಸ್ಸಿನಿಂದ ಹೊರಗೆ ಎಸೆದ ಸಂಗತಿಗಳಾಗಲೀ ದೃಶ್ಯವಾಗಿ ನಮ್ಮ ಕಣ್ಣಮುಂದೆ ಬರುವುದಿಲ್ಲ. ಅವುಗಳನ್ನು ಹಸಿ ಹಸಿಯಾಗಿ ತೋರಿಸಿ ವೀಕ್ಷಕರ ಭಾವನೆಗಳನ್ನು ಪರಚೋದಿಸುವುದರ ಮೂಲಕ ಅದನ್ನು ನಗದು ಮಾಡಿಕೊಳ್ಳುವುದಿಲ್ಲ ಎಂಬುದು ಬಹಳ ಮುಖ್ಯ ಅಂಶವಾಗುತ್ತದೆ. ಜ್ಯೋತಿ, ಅವನೀಂದ್ರ ಪಾಂಡೆ ಎನ್ನುವ ತನ್ನ ಗೆಳೆಯನ ಜೊತೆ ಸಿನಿಮಾ ನೋಡಿಕೊಂಡು ವಾಪಸ್ಸು ಬಸ್ಸಿನಲ್ಲಿ ಬರುವಾಗ ಬಸ್ ಚಾಲಕ ಮುಖೇಶ್ ಸಿಂಗ್ ಮತ್ತು ಅವನ ಸಹೋದರ ರಾಮ್ ಸಿಂಗ್ ಹಾಗೂ ಅವರ ಗೆಳೆಯರ ನಡುವೆ ನಡೆದ ಮಾತಿನ ಚಕಮಕಿ ಜಗಳಕ್ಕೆ ತಿರುಗಿ ಆನಂತರ, ಅವನೀಂದ್ರ ಪಾಂಡೆಯನ್ನು ಹೊಡೆದು ಘಾಸಿಗೊಳಿಸಿ, ಜ್ಯೋತಿಯ ಹತ್ಯೆಯಲ್ಲಿ ಪರ್ಯವಸಾನವಾದದ್ದು ಎಲ್ಲರಿಗೆ ತಿಳಿದಿರುವ ಸಂಗತಿ.

ಆಶ್ಚರ್ಯವೆಂದರೆ ಇಲ್ಲಿ ಅಂತಹ ಪ್ರತ್ಯಕ್ಷ ಸಾಕ್ಷಿಯಾದ ಅವನೀಂದ್ರ ಪಾಂಡೆಯ ಸಂದರ್ಶನವನ್ನು ಈ ಚಿತ್ರದಲ್ಲಿ ಕೈಬಿಡಲಾಗಿದೆ. ಅದಕ್ಕೆ ಕಾರಣ ಗೊತ್ತಾಗುವುದಿಲ್ಲ. ಅದರ ಬದಲಾಗಿ ಜ್ಯೋತಿಯ ಶಿಕ್ಷಕನಾದ ಸತೇಂದ್ರನನ್ನು ಮುಖ್ಯ ಸಾಕ್ಷಿಯಾಗಿ ಬಳಸಿಕೊಂಡು ಅವನನ್ನು ಬಹಳ ಸಲ ತೋರಿಸಲಾಗಿದೆ. ಈ ಸತೇಂದ್ರನ ಬಗ್ಗೆ ತಾನು ಕೇಳಿಯೇ ಇಲ್ಲವೆಂದೂ, ಅಲ್ಲಿ ನಡೆದಿರುವ ಸತ್ಯಸಂಗತಿ ತನಗೆ ಮಾತ್ರ ಗೊತ್ತಿರುವುದೆಂದೂ, ಚಿತ್ರದಲ್ಲಿ ಜ್ಯೋತಿಯ ಅಭಿಪ್ರ್ರಾಯಗಳ ದಾಖಲೆಯೇ ಇಲ್ಲವೆಂದೂ, ಆದುದರಿಂದ ಈ ಚಿತ್ರ ಸತ್ಯಕ್ಕೆ ದೂರವಾದುದೆಂಬ ಆರೋಪವನ್ನು ಅವನೀಂದ್ರ ಪಾಂಡೆ ಈ ಚಿತ್ರದ ನಿರ್ದೇಶಕಿಯಾದ ಲೆಸ್ಲಿ ವುಡ್ ವಿನ್ ಳಿಗೆ ಹೇಳಿದನೆನ್ನಲಾದ ಸಂಗತಿಯನ್ನು ಮಾಚರ್್ 10 ರ ಸಿ.ಬಿ.ಎನ್-ಐ.ಬಿ.ನ್. ವರದಿಯೊಂದು ಪ್ರಕಟಿಸಿದೆ. ಆದರೆ ಜ್ಯೋತಿಯ ಅಭಿರುಚಿ, ಕನಸು ಆದರ್ಶಗಳ ಬಗ್ಗೆ ಅವಳ ಹೆತ್ತವರು ಈ ಚಿತ್ರದಲ್ಲಿ ಅನೇಕ ಬಾರಿ ಹೇಳಿಕೊಂಡಿದ್ದಾರೆ. ಹೀಗೆ ಸ್ವತಃ ಸಾಕ್ಷಿಯಾದ ಅವನೀಂದ್ರನೇ ಜ್ಯೋತಿಗೆ ಸಾಮಾಜಿಕ ನ್ಯಾಯವನ್ನು ಒದಗಿಸ ಬೇಕೆನ್ನುವ ಈ ಚಿತ್ರದ ವಿರುದ್ಧ ಮಾತನಾಡಿದ್ದಾನೆ ಎಂಬುದು ಸಂಶಯಕ್ಕೆ ಆಸ್ಪದ ನೀಡುತ್ತದೆ. ಹಾಗೆಯೇ ಅವನ ಸಂದರ್ಶನವನ್ನು ಕೈಬಿಡಲಾಗಿರುವ ಸಂಗತಿಯ ಮೇಲೂ ಬೆಳಕನ್ನು ಚೆಲ್ಲುತ್ತದೆ.
ಇಲ್ಲಿ ಅಪರಾಧಿಯ ಪರವಾದ ವಕೀಲರನ್ನು ಮಾತ್ರ ಸಂದಶರ್ಿಸಲಾಗಿದೆ. ಪಬ್ಲಿಕ್ ಪ್ರಾಸಿಕ್ಯೂಟರ್ ಅವರ ಗೈರು ಹಾಜರಿ ಎದ್ದು ಕಾಣುತ್ತದೆ. ಅವರ ಸಂದರ್ಶನವನ್ನೂ ತೋರಿಸಿದ್ದರೆ ಈ ಚಿತ್ರದ ಬಗೆಗೆ ಎದ್ದಿರುವ ಅನುಮಾನಗಳು ಪರಿಹಾರವಾಗುತ್ತಿದ್ದುವೋ ಏನೋ. ಆದರೆ ಯಾವ ವಾದಗಳೂ, ಅಭಿಪ್ರ್ರಾಯಗಳೂ ಕೂಡ ಜ್ಯೋತಿಯ ಮೇಲೆ ಆದಂತಹ ಬರ್ಬರ ಕೃತ್ಯವನ್ನು ಸಮರ್ಥಿಸಲಾರದು ಎಂಬುದಂತೂ ಕೊನೆಗೆ ಉಳಿಯುವ ಸತ್ಯ.
ಈ ಚಿತ್ರ ಪ್ರದರ್ಶನಕ್ಕೆ ಹಾಕಿರುವ ನಿಷೇಧವನ್ನು ಬೆಂಬಲಿಸುತ್ತಾ, ಮರಣದಂಡನೆಗೆ ಗುರಿಯಾಗಿರುವ ಅಪರಾಧಿಯನ್ನು ನಿಷ್ಠುರ ನಿಯಮಗಳಿರುವ ಜೈಲಿನೊಳಗೆ ಸಂದರ್ಶಿಸಲು ಸಾಧ್ಯವಾದುದರ ಬಗ್ಗೆ ಅನೇಕರು ಆಕ್ಷೇಪಗಳನ್ನು ಎತ್ತಿದ್ದಾರೆ. ಹಾಗೆಯೇ, ಜಾಗತಿಕ ಮಾರುಕಟ್ಟೆಯಲ್ಲಿ ಇಂಡಿಯಾದ ಮೌಲ್ಯ ಇಳಿಯುವ ಭಯದಿಂದ ಈ ಚಿತ್ರವನ್ನು ತಡೆಹಿಡಿಯಲಾಗಿದೆ ಎನ್ನುವ ಮಾತುಗಳೂ ಗಾಳಿಯಲ್ಲಿ ಹಾರಾಡುತ್ತಿವೆ.
ನಮ್ಮ ಸಾಂಸ್ಕೃತಿಕ ವಾಗ್ವಾದಗಳಿಗೆ, ಮಾನ ಅವಮಾನಗಳಿಗೆ, ಆಥರ್ಿಕ ಲಾಭ ನಷ್ಟಗಳಿಗೆ ಜ್ಯೋತಿಯ ಪ್ರಸಂಗವನ್ನು, ಅವಳ ತಾಯಿ ತಂದೆಯರ ಕಣ್ಣೀರನ್ನು ಎಷ್ಟು ಸಮರ್ಥವಾಗಿ, ಜಾಣ್ಮೆಯಿಂದ ನಮ್ಮ ವ್ಯವಸ್ಥೆ ಬಳಸಿಕೊಳ್ಳುತ್ತಿದೆ ಎಂಬುದನ್ನು ಇದು ಎತ್ತಿತೋರಿಸುತ್ತದೆ. ಆದುದರಿಂದಲೇ ಚಿತ್ರದ ಪ್ರಾರಂಭದಲ್ಲಿ ಹಾರಾಡುವ ಹದ್ದುಗಳು ಈ ವ್ಯವಸ್ಥೆಯ ಅನಂತ ಕ್ರೂರ ರೂಪಗಳನ್ನು ಪರಿಣಾಮಕಾರಿಯಾಗಿ ತೆರೆದಿಡುತ್ತವೆ.
ಆದರೆ ನಮ್ಮ ದೇಶದಲ್ಲಿ ಇಂದು ಮಹಿಳಾ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಕರ್ಾರೀ ಹಾಗೂ ಸಕರ್ಾರೇತರ ಸಂಸ್ಥೆಗಳು ಹಲವಾರು ಯೋಜನೆಗಳನ್ನು ಜಾರಿಗೆತಂದಿವೆ. ಈ ವಿಷಯಗಳ ಬಗ್ಗೆ ಈ ಚಿತ್ರ ಮೌನ ವಹಿಸಿರುವುದನ್ನು ಕಾಣಬಹುದಾಗಿದೆ. ಇದರಿಂದಾಗಿ ಜಾಗತಿಕ ನೆಲೆಯಲ್ಲಿ ಭಾರತದ ಬಗ್ಗೆ ಕಪ್ಪು ಬಿಳುಪಿನ ಅಭಿಪ್ರಾಯಗಳನ್ನು ಹೊಂದುವ ಅಪಾಯವೂ ಇದೆ. ಹದ್ದುಗಳು ಭಾರತದ ಆಕಾಶದ ಮೇಲೆ ಮಾತ್ರ ಹಾರಾಡುವುದಿಲ್ಲ. ಹದ್ದುಗಳಿಗೆ ಸರಹದ್ದುಗಳಿಲ್ಲ, ಎಂಬ ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡೇ ನಾವು ಈ ಚಿತ್ರವನ್ನು ವೀಕ್ಷಿಸಬೇಕಾಗಿದೆ.
ಜ್ಯೋತಿ ಹುಟ್ಟಿದಾಗ ಸಂಭ್ರಮದಿಂದ ಅವಳ ತಾಯಿ ತಂದೆಯರು ಸಿಹಿ ಹಂಚಿದಾಗ, ‘ಗಂಡು ಮಗು ಹುಟ್ಟಿದಾಗ ಸಿಹಿ ಹಂಚುವಂತೆ ಸಂಭ್ರಮಿಸುತ್ತ್ತಿದ್ದಾರೆ’ ಎಂದು ಜನ ಅವರನ್ನು ಆಡಿಕೊಂಡರಂತೆ. ‘ಜ್ಯೋತಿ ನಮ್ಮ ಮನೆಯ ಬೆಳಕಾಗಿ ಬಂದಳು. ನಮಗೆ ಹೆಣ್ಣು ಮತ್ತು ಗಂಡು ಎರಡೂ ಒಂದೇ’ ಎನ್ನುತ್ತಾರೆ ಅವಳ ತಾಯಿ ತಂದೆ. ಹೆಣ್ಣಿನ ಮೇಲೆ ಆಗುತ್ತಿರುವ ಅನಾಚಾರಗಳಿಗೆಲ್ಲಾ, ಹೆಣ್ಣು-ಗಂಡು ಮಕ್ಕಳ ಪೋಷಣೆಯಲ್ಲಿ ಪೋಷಕರು ತೋರುವ ಈ ತಾರತಮ್ಯ ಭಾವನೆಯೇ ಕಾರಣವಾಗಿದೆ. ಶೀಲಾ ದೀಕ್ಷಿತ್ ಅವರು ಮನೆಗಳಲ್ಲಿ ಮಕ್ಕಳನ್ನು ಪೋಷಿಸುವಾಗ ಹೆಣ್ಣು ಮಕ್ಕಳಿಗೆ ಕಡಿಮೆ ಪ್ರಾಮುಖ್ಯತೆ ಕೊಟ್ಟು ಗಂಡು ಮಕ್ಕಳಿಗೆ ಹೆಚ್ಚಿನ ಪ್ರಾಶಸ್ತ್ಯ ಕೊಡಲಾಗುತ್ತದೆ. ಈ ತಾರತಮ್ಯವೇ, ಕಡಿಮೆ ಪ್ರಾಮುಖ್ಯತೆ ಇರುವ ಹೆಣ್ಣುಗಳ ಮೇಲೆ ಏನು ಮಾಡಿದರೂ ನಡೆಯುತ್ತದೆ ಎನ್ನುವ ದಬ್ಬಾಳಿಕೆಯ ಧೋರಣೆಯನ್ನು, ನಮ್ಮ ಗಂಡು ಮಕ್ಕಳಲ್ಲಿ ಬೆಳೆಸುತ್ತದೆ ಎಂದಿದ್ದಾರೆ. ಅದಕ್ಕೇ ಬಹಶಃ ಕಿರಣ್ ಖೇರ್ ಅವರು ನೆಲಮೂಲ ಬದಲಾವಣೆಯಾಗದೇ ನಮ್ಮ ಸಮಾಜ ಸುಧಾರಿಸಲು ಸಾಧ್ಯವಿಲ್ಲ. ‘ನಾವು ಶಾಲೆಯಲ್ಲಿಯೇ ಮಕ್ಕಳಿಗೆ ಇಂತಹುದರ ಮೇಲೆ ಬೆಳಕು ಚೆಲ್ಲುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು’ ಎನ್ನುತ್ತಾರೆ. ಇದರ ಜೊತೆಗೆ ಸಮಾನತೆಯ ಪರಿಕಲ್ಪನೆಯನ್ನು ಮನೆಯಿಂದಲೇ ಬೆಳಸಬೇಕು. ಅದು ಬದುಕಿನ ಭಾಗವಾದಾಗ ಮಾತ್ರ ಬದಲಾವಣೆಯಾಗಲು ಸಾಧ್ಯ.
ಅನಾದಿ ಕಾಲದಿಂದಲೂ ಪುರುಷ ಪ್ರಾಧಾನ್ಯವಾದ ಆಲೋಚನೆಗಳನ್ನು ನಮ್ಮ ಸಮಾಜ ಪೋಷಿಸಿಕೊಂಡು ಬರುತ್ತಿದೆ. ಆದುದರಿಂದಲೇ ಜ್ಯೋತಿಯ ಮೇಲೆ ಅತ್ಯಾಚಾರವೆಸಗಿದ ದುಷ್ಕರ್ಮಿಗಳು, ಅಂತಹವರಿಗೆ ವಕಾಲತ್ತು ವಹಿಸಿದ ವಕೀಲರೆಲ್ಲರೂ ನಮ್ಮ ಸಂಸ್ಕೃತಿಯ ಮಾನವನ್ನು ಕಾಪಾಡುವ, ಅದರ ಹೆಮ್ಮೆಯನ್ನು ಎತ್ತಿಹಿಡಿಯುವ ಏಕೈಕ ವಾರಸುದಾರರೆಂಬಂತೆ ನಡೆದುಕೊಂಡಿದ್ದಾರೆ. ಕೆಲವು ಧರ್ಮಗುರುಗಳೂ, ರಾಜಕಾರಣಿಗಳೂ ಅತ್ಯಾಚಾರದಂತಹ ಘೋರ ಕೃತ್ಯದಲ್ಲಿ ಹೆಣ್ಣನ್ನೇ ಅಪರಾಧಿಯ ಕಟಕಟೆಯೊಳಗೆ ನಿಲ್ಲಿಸಿದ್ದಾರೆ, ಉದಾಹರಣೆಗೆ-
ಮಹಿಳೆಯರು ಅತ್ಯಾಚಾರವನ್ನು ಬಯಸುವುದಿಲ್ಲವೆಂದಲ್ಲ. ಕೆಲವೊಮ್ಮೆ ಅವರು ಅದನ್ನು ಬಯಸುತ್ತಾರೆ, ಆದರೆ ಹೊರನೋಟಕ್ಕೆ ಅದನ್ನು ಪ್ರತಿಭಟಿಸುವಂತೆ ಕಾಣುತ್ತಾರೆ- ಸ್ವ್ವಾಮಿ ಪ್ರಭುಪಾದ (ಇಸ್ಕಾನ್)
ಕೇವಲ 5-6 ಜನರು ಮಾತ್ರ ಅಪರಾದಿಗಳಲ್ಲ. ಚಪ್ಪಾಳೆಯನ್ನು ಒಂದೇ ಕೈಯಿನಿಂದ ಹೊಡೆಯಲಾಗುವುದಿಲ್ಲ, ಅತ್ಯಾಚಾರಕ್ಕೆ ಒಳಗಾದ ಹೆಣ್ಣು ಮಗಳೂ ಅಷ್ಟೇ ತಪ್ಪಿತಸ್ಥಳು. ಅವಳು ಅತ್ಯಾಚಾರಿಗಳನ್ನು ‘ಅಣ್ಣಾ…’ ಎಂದು ಕರೆದು ಕೈಮುಗಿದು ಬೇಡಿಕೊಂಡಿದ್ದರೆ ಅವಳಿಗೆ ಈ ಸ್ಥಿತಿ ಬರುತ್ತಿರಲಿಲ್ಲ.- ಆಸಾರಾಂ.
ಬದಾಯೂನ್ ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಿಸಿದಂತೆ, ಅತ್ಯಾಚಾರವು ಹೆಣ್ಣುಗಂಡುಗಳ ನಡುವಿನ ಒಂದು ಸಾಮಾಜಿಕ ಅಪರಾಧ. ಅದು ಕೆಲವೊಮ್ಮೆ ಸರಿ ಇನ್ನು ಕೆಲವೊಮ್ಮೆ ತಪ್ಪು – ಬಾಬುಲಾಲ್ ಗೌರ್, ಬಿ.ಜೆಪಿ. ಕ್ಯಾಬಿನೆಟ್ ಮಂತ್ರಿ, ಮಧ್ಯಪ್ರದೇಶ.
ಹೆಣ್ಣು ತನ್ನ ನೈತಿಕ ಮಿತಿಯನ್ನು ಮೀರಿದಾಗ ಇಂತಹ ಅತ್ಯಾಚಾರಗಳು ನಡೆಯುತ್ತವೆ. – ಕೈಲಾಶ್ ವಿಜಯ್ ವಾರಿಗೀಯ, ಬಿ.ಜೆ.ಪಿ. ಎಂ.ಎಲ್.ಎ. ಮಧ್ಯಪ್ರದೇಶ.
ಹೆಣ್ಣಿನ ಮೇಲೆ ದೈಹಿಕವಾಗಿ ಅತ್ಯಾಚಾರ ಮಾಡುವವರಿಗೆಲ್ಲಾ, ನಿರಂತರವಾಗಿ ಸಾಂಸ್ಕೃತಿಕ ಅತ್ಯಾಚಾರ ಎಸಗುತ್ತಿರುವವರ ಇಂತಹ ಪ್ರಭಾವೀ ಪುರುಷರ ಕುಮ್ಮಕ್ಕು ಪ್ರಬಲವಾಗಿದೆ ಎಂಬುದನ್ನು ಮೇಲಿನ ಹೇಳಿಕೆಗಳು ಸಾಬೀತು ಪಡಿಸುತ್ತವೆ. ವಕೀಲರ ಹಾಗೂ ಅತ್ಯಾಚಾರಿಯ ಕೆಳಗಿನ ಹೇಳಿಕೆಗಳು ಅದನ್ನು ಸಮಥರ್ಿಸುತ್ತವೆ:
ನಮ್ಮ ಸಂಸ್ಕೃತಿಯಲ್ಲಿ ಹೆಣ್ಣುಗಂಡುಗಳ ನಡುವಿನ ಸ್ನೇಹ?! ಕ್ಷಮಿಸಿ, ನಮ್ಮ ಸಮಾಜದಲ್ಲಿ ಅದಕ್ಕೆ ಯಾವ ಸ್ಥಾನವೂ ಇಲ್ಲ. ಹೆಣ್ಣೆಂದರೆ ಗಂಡಿಗೆ ಎಂದೂ ಭೋಗದ ವಸ್ತುವೇ. ನಮ್ಮದು ಉತ್ತಮ ಸಂಸ್ಕೃತಿ. ಇಲ್ಲಿ ನಮ್ಮ ಹೆಣ್ಣುಗಳಿಗೆ ಯಾವುದೇ ಸ್ಥಾನವಿಲ್ಲ. ನಮ್ಮ ಸಮಾಜದಲ್ಲಿ ಹೆಣ್ಣು ಮಕ್ಕಳನ್ನು ಸಂಜೆಯನಂತರ ಹೊರಗೆ ಹೋಗಲು ನಾವು ಬಿಡುವುದಿಲ್ಲ. ಹೆಣ್ಣೆಂದರೆ ಹೂವಿನಂತೆ ನಾಜೂಕಾದವಳು, ಗಂಡೆಂದರೆ ಮುಳ್ಳಿನಂತೆ ಗಡುಸಾದವನು. ಹೂವು ಎಂದೂ ಮುಳ್ಳಿನ ರಕ್ಷಣೆಯಲ್ಲೇ ಇರಬೇಕು.. ಹೂವನ್ನು ಚರಂಡಿಯಲ್ಲಿ ಬಿಸಾಡಿದರೆ ಮಲಿನವಾಗುತ್ತದೆ. ದೇವರ ಮುಡಿಗೇರಿಸಿದರೆ ಪವಿತ್ರವಾಗುತ್ತದೆ. ಹೆಣ್ಣು ಅಮೂಲ್ಯವಾದ ರತ್ನ. ಬೀದಿಯಲ್ಲಿ ಇಟ್ಟರೆ ‘ನಾಯಿಗಳು’ ಕೊಂಡು ಹೋಗುತ್ತವೆ. ಅದನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಅದನ್ನು ಹೇಗೆ ಕಾಪಾಡಬೇಕು ಎಂಬುದರ ವಿವೇಚನೆ ಇರಬೇಕು … ನಮ್ಮ ಜನ ಸಿನಿಮಾಗಳನ್ನು ನೋಡಿ ನಮ್ಮ ಸಂಸ್ಕೃತಿಯನ್ನು ಗಾಳಿಗೆ ತೂರಿದ್ದಾರೆ. ಭ್ರಾಮಕ ಪ್ರಪಂಚದಲ್ಲಿ ಇರುವ ಅವರು ಏನನ್ನಾದರೂ ಮಾಡಲು ಸಾಧ್ಯ ಎಂಬ ಭ್ರಮೆಯಲ್ಲಿದ್ದಾರೆ ( ಎಂ.ಎಲ್ ಶರ್ಮ, ಅಪರಾಧಿ ಪರ ವಕೀಲ).
ನಮ್ಮ ಹೆಣ್ಣು ಮಕ್ಕಳು ರಾತ್ರಿಯ ಹೊತ್ತು ಹೊರಗೆ ಹೋಗುವುದು ಅನಿವಾರ್ಯವಾದರೆ ಅವರು, ಚಿಕ್ಕಪ್ಪ, ಮಾವ, ಅಜ್ಜ ಮುಂತಾದ ತಮ್ಮ ಕುಟುಂಬದ ಸದಸ್ಯರ ಜೊತೆ ಹೋಗಬಹುದಲ್ಲದೇ, ಅಪರಿಚಿತ ವ್ಯಕ್ತಿಯೊಂದಿಗೆ ಅಲ್ಲ. .. ನನ್ನ ಮಗಳೋ, ಸೋದರಿಯೋ ವಿವಾಹ ಪೂರ್ವ ಸಂಬಂಧದಲ್ಲಿ ತೊಡಗಿದ್ದೇ ಆದಲ್ಲಿ ಅವಳ ಮೇಲೆ ನನ್ನ ಕುಟುಂಬದ ಎಲ್ಲ ಸದಸ್ಯರ ಎದುರು ಪೆಟ್ರೋಲ್ ಸುರಿದು ಸುಟ್ಟುಹಾಕುತ್ತಿದ್ದೆ (ಎ.ಪಿ ಸಿಂಗ್, ಅಪರಾಧಿ ಪರ ವಕೀಲ).

.. .. .. ಒಂದು ಕೈಯಿಂದ ಚಪ್ಪಾಳೆ ತಟ್ಟಲು ಸಾಧ್ಯವಿಲ್ಲ. ಮಯರ್ಾದಸ್ಥ ಹೆಣ್ಣು ಮಕ್ಕಳು ಯಾರೂ ರಾತ್ರಿ ಒಂಬತ್ತರ ಮೇಲೆ ಬೀದಿಯಲ್ಲಿ ತಿರುಗಾಡುವುದಿಲ್ಲ. ಅಂತಹ ಹೆಣ್ಣು ಮಕ್ಕಳು ಏನಾದರೂ ಅತ್ಯಾಚಾರಕ್ಕೆ ಒಳಗಾದರೆ ಗಂಡಸರಿಗಿಂತ ಹೆಚ್ಚು ಅವರೇ ಜವಾಬ್ದಾರರು … ಹೆಣ್ಣು-ಗಂಡು ಸಮಾನರಲ್ಲ. ಹೆಣ್ಣು ಮಕ್ಕಳ ಕೆಲಸ ಮನೆಯಲ್ಲಿ ಅಡುಗೆ ಕೋಣೆಯಲ್ಲಿ, ಅದು ಬಿಟ್ಟು ರಾತ್ರಿಯ ಹೊತ್ತು ಡಿಸ್ಕೋಗಳಿಗೆ ಹೋಗುವುದು, ಕೆಟ್ಟ ಕೆಲಸಗಳನ್ನು ಮಾಡುವುದು, ಅಶ್ಲೀಲವಾಗಿ ಉಡುಪು ಧರಿಸಿ ಓಡಾಡಿದರೆ ಆಗುವುದು ಹೀಗೆಯೇ…. (ಅತ್ಯಾಚಾರಿ, ಬಸ್ಸಿನ ಡ್ರೈವರ್, ಮುಖೇಶ್).
ಧರ್ಮಗುರುಗಳೂ, ರಾಜಕಾರಣಿಗಳೂ ಸೇರಿದಂತೆ ಮೇಲಿನ ಎಲ್ಲರ ಮಾತುಗಳಲ್ಲಿ ಯಾವ ವ್ಯತ್ಯಾಸವನ್ನೂ ಕಾಣದಿರುವುದು ನಮ್ಮ ಸಾಮಾಜಿಕ ದುರಂತವಾಗಿದೆ. ಧರ್ಮ ಮತ್ತು ರಾಜಕಾರಣ ಎಂದಿನಿಂದಲೂ ಹೆಣ್ಣನ್ನು ಬೇಟೆಯಾಡುತ್ತಿರುವ ಸಂಗತಿಯನ್ನು ಇವು ಸಮರ್ಥವಾಗಿ ಬಯಲಿಗೆಳೆಯುತ್ತವೆ.
ನಾಟಕಕಾರ, ನಿದರ್ರ್ೆಶಕ ಎಸ್.ಎನ್. ಸೇತುರಾಮ್ ಅವರು ಒಂದು ಕಡೆ, ಯಾವನೋ ಹೊರಗಿನವನು ಬಂದು ಹೆಣ್ಣುಮಗಳ ಮೇಲೆ ಅತ್ಯಾಚಾರ ಮಾಡುವುದನ್ನು ಕಲ್ಪಿಸಿಕೊಳ್ಳಬಹುದು. ಆದರೆ ಮನೆಯಲ್ಲೇ ಚಿಕ್ಕಪ್ಪನೋ, ದೊಡ್ಡಪ್ಪನೋ, ಮಾವನೋ, ಅಣ್ಣನೋ, ಅಜ್ಜನೋ ಮಾಡುವುದನ್ನು ಹೇಗೆ ಕಲ್ಪಸಿಕೊಳ್ಳುವುದು? ಎಂದು ಕೇಳುತ್ತಾರೆ. ಇದಕ್ಕೆ ನಮ್ಮ ಧರ್ಮಗುರುಗಳಲ್ಲಾಗಲೀ, ಸರ್ಕಾದಲ್ಲಾಗಲೀ, ವಕೀಲರ ಇಲ್ಲವೇ, ಅತ್ಯಾಚಾರಿಗಳ ಬಳಿಯಾಗಲೀ ಏನು ಉತ್ತರವಿದೆ? ಮರ್ಯಾದಸ್ಥ ಹೆಣ್ಣು ಮಕ್ಕಳು ಮನೆಯ ಹೊಸ್ತಿಲಾಚೆ ಕಾಲಿಡುವುದಿಲ್ಲ, ಅವರನ್ನು ನಾವು ಮನೆಯಲ್ಲಿ ಸುರಕ್ಷಿತವಾಗಿ ಕಾಪಾಡುತ್ತಿದ್ದೇವೆ ಎಂದು ಹೆಮ್ಮೆ ಪಡುವ ಪುರುಷರು ಇದಕ್ಕೆ ಏನು ಹೇಳುತ್ತಾರೆ?
ಜಗತ್ತಿನಲ್ಲ್ಲಿ ಅತಿ ಹೆಚ್ಚು ಅತ್ಯಾಚಾರಗಳು ನಡೆಯುವ ಹತ್ತು ದೇಶಗಳ ಯಾದಿಯಲ್ಲಿ ನಮ್ಮ ದೇಶ ನಾಲ್ಕನೆಯ ಸ್ಥಾನದಲ್ಲಿದೆಯಂತೆ. ಅಮೆರಿಕಾಕ್ಕೆ ಮೊದಲ ಸ್ಥಾನವಾದರೆ, ಇಥಿಯೋಪಿಯಾಕ್ಕೆ ಹತ್ತನೆಯ ಸ್ಥಾನ. ಇಂತಹ ಬರ್ಬರ ಕೃತ್ಯಗಳಲ್ಲಿ ನಮ್ಮ ಜೊತೆಗೆ ಸಾಕಷ್ಟು ಬೇರೇ ದೇಶಗಳೂ ಇವೆ, ಅದರಿಂದ ನಾವೇನೂ ನಾಚಿಕೆ ಪಡಬೇಕಾಗಿಲ್ಲ ಎನ್ನುವ ಸಮಾಧಾನ ನಮ್ಮದು. ‘ಇಂಡಿಯಾಸ್ ಡಾಟರ್’ ಒದಗಿಸುವ ಅಂಕಿಅಂಶಗಳ ಪ್ರಕಾರ ನಮ್ಮ ದೇಶದಲ್ಲಿ ಮಹಿಳೆಯರ ಮೇಲೆ ಪ್ರತಿ 20 ನಿಮಿಷಕ್ಕೊಂದು ಅತ್ಯಾಚಾರಗಳು ನಡೆಯುತ್ತಿವೆ. ಆದರೆ ಅವುಗಳಲ್ಲಿ ಹೆಚ್ಚಿನವುಗಳ ವಿರುದ್ಧ ಮೊಕದ್ದಮೆಗಳು ದಾಖಲಾಗುವುದಿಲ್ಲ. ದೆಹಲಿ ‘ರೇಪ್ ರಾಜಧಾನಿ’ ಎಂದೇ ಕುಪ್ರಸಿದ್ಧವಾಗಿರುವಾಗ, ‘ಎಲ್ಲ ನಗರಗಳ ಹಾಗೆ ದೆಹಲಿ ಬಹಳ ಸುರಕ್ಷಿತ ನಗರ’ ಎಂದು ಪೋಲೀಸ್ ಕಮೀಷನರ್ ಅವರು ಈ ಚಿತ್ರದಲ್ಲಿ ಅಭಿಪ್ರಾಯ ಪಡುವುದು ಹಾಸ್ಯಾಸ್ಪದವೆನಿಸುತ್ತದೆ.
ತನಗೆ ಮರಣದಂಡನೆ ವಿಧಿಸಿದುದರಿಂದಾಗಿ ಹೆಣ್ಣುಮಕ್ಕಳಿಗೆ ಇನ್ನೂ ಹೆಚ್ಚು ಅಪಾಯವಿರುವುದೆಂದೂ, ಇದುವರೆಗೆ, ತಾವು ಬಲಾತ್ಕರಿಸಿದ ಹೆಣ್ಣನ್ನು ಅತ್ಯಾಚಾರಿಗಳು, ಮಯರ್ಾದೆಯೇ ಮುಖ್ಯವಾದ ಅವಳು ಯಾರಿಗೂ ಹೇಳಲಾರಳು ಎಂಬ ಭರವಸೆಯಿಂದ ಬಿಟ್ಟು ಬಿಡುತ್ತಿದ್ದರು. ಆದರೆ ಈಗ ಹಾಗಲ್ಲ ಅವಳು ಬಾಯಿಬಿಡಲು ಅವಳನ್ನು ಜೀವಸಹಿತ ಉಳಿಸುವುದೇ ಇಲ್ಲ ಎಂದಿದ್ದಾನೆ ಅತ್ಯಾಚಾರಿಯಾದ ಮುಖೇಶ್. ಈ ವಿಷಯದಲ್ಲಿ ಶಿಕ್ಷೆಯಾಗುವುದು ಅಪರಾಧಿಗಲ್ಲ, ಬದಲಾಗಿ ಅದಕ್ಕೆ ಬಲಿಯಾದವಳಿಗೆ. ಇದು ನಮ್ಮ ವ್ಯವಸ್ಥೆಯ ಗೋಮುಖ ವ್ಯಾಘ್ರತೆಯ ಸ್ವರೂಪದ ಪ್ರತೀಕವಾಗಿದೆ. ಅತ್ಯಾಚಾರವೆನ್ನುವುದು, ಕೇವಲ ಅದಕ್ಕೆ ಬಲಿಯಾದವಳೊಬ್ಬಳ ಸಮಸ್ಯೆಯಲ್ಲ. ಅದು ನಮ್ಮ ಇಡೀ ಸಮಾಜದ ಸಮಸ್ಯೆ. ಹಾಗೆ ನೋಡಿದರೆ ಅತ್ಯಾಚಾರಿ ಕೂಡ ಬಲಿಪಶುವೇ. ಅಕ್ಷಯ್ ಠಾಕೂರ್ ಎಂಬ ಅತ್ಯಾಚಾರಿಯ ಹೆಂಡತಿ ನಾನೂ ಕೂಡ ಈ ದೇಶದ ಮಗಳಲ್ಲವಾ? ನನಗೂ ಬದುಕುವ ಹಕ್ಕು ಇಲ್ಲವೇ? ನನ್ನ ಗಂಡನನ್ನು ಗಲ್ಲಿಗೇರಿಸಿದ ಮೇಲೆ ನನ್ನನ್ನು ಕಾಪಾಡುವರಾರು? ನಾನು ಏತಕ್ಕಾಗಿ ಬದುಕಬೇಕು? ಎನ್ನುತ್ತಾಳೆ.
ಜೈಲಿನ ಮನೋರೋಗ ತಜ್ಞರು ಇದಕ್ಕೆ ನಮ್ಮ ಸಮಾಜದಲ್ಲಿರುವ ಬಡತನ ರೋಗ, ಅನಕ್ಷರತೆ ಕಾರಣ ಎನ್ನುತ್ತಾರೆ. ಜೋಪಡಿಗಳಲ್ಲಿ ಬದುಕುವವರಿಗೆ, ಹೆಂಡತಿಯರ ಮೇಲಿನ ಹಿಂಸೆಯಾಗಲೀ, ಅತ್ಯಾಚಾರವಾಗಲೀ, ವೇಶ್ಯಾವೃತ್ತಿಯಾಗಲೀ ಯಾವುದೂ ಹೊಸದಲ್ಲ. ಇಂತಹ ಬದುಕಿನ ಮೂಲಕ, ಹೆಣ್ಣಿನ ಮೇಲೆ ದಬ್ಬಾಳಿಕೆ ನಡೆಸುವುದು ಗಂಡಿನ ಹಕ್ಕು ಎಂಬುದನ್ನು ಅವರ ತಿಳಿದುಕೊಂಡಿರುತ್ತಾರೆ. ಪ್ರತಿಯೊಬ್ಬರಿಗೂ ಸುಖಪಡುವ ಹಕ್ಕಿದೆ. ಹಣವಂತರು ಹಣ ಚೆಲ್ಲಿ ಅದನ್ನು ಪಡೆದುಕೊಂಡರೆ, ನಾವು ಬಡವರು ಅದನ್ನು ನಮ್ಮ ಸಾಹಸದಿಂದ ಪಡೆದುಕೊಳ್ಳುತ್ತೇವೆ ಎನ್ನುತ್ತಾರೆ. ಇಂತಹ ಅಪರಾಧಗಳನ್ನು ಎಸಗುವ ಅವರ ವಿರುದ್ಧ ಕ್ರಮ ತೆಗೆದುಕೊಂಡಾಗ ಅದು ಅವರಿಗೆ ಆಶ್ಚ್ಚರ್ಯವಾಗುವುದು ಸಹಜ, ಎಂದು ಅಭಿಪ್ರಾಯ ಪಡುತ್ತಾರೆ.
ಪಾರ್ಲಿಮೆಂಟಿನ 250 ಸದಸ್ಯರ ವಿರುದ್ಧ ದರೋಡೆಯ, ಕೊಲೆ, ಅತ್ಯಾಚಾರಗಳ ಮೊಕದ್ದಮೆಗಳು ಇನ್ನೂ ಇತ್ಯರ್ಥವಾಗದೇ ಉಳಿದಿವೆ. ಅಂತಹ ಪ್ರಭಾವೀ ವ್ಯಕ್ತಿಗಳ ಮೇಲಿನ ಮೊಕದ್ದಮೆಯನ್ನು ಯಾರಾದರೂ ಫಾಸ್ಟ್ ಟ್ರ್ಯಾಕ್ ಗೆ ಹಾಕಿದ್ದಾರೆಯೇ? ದಿನ ನಿತ್ಯದ ಹಿಯರಿಂಗ್ಗೆ ಅವು ಬರುತ್ತಿವೆಯೇ? ಎಂದು ಅಪರಾಧಿ ಪರ ವಕೀಲರು ಕೇಳುವುದು ನ್ಯಾಯ ಸಮ್ಮತವೇ ಆಗಿದೆ. ಆಳುವವರೇ ಭ್ರಷ್ಟರಾದಾಗ ಅವರಿಂದ ಇನ್ನೆಂತಹ ರಕ್ಷಣೆಯನ್ನು ನಿರೀಕ್ಷಿಸಬಹುದು?
ಜಗತ್ತಿನಲ್ಲಿ ಎಲ್ಲಿಯೂ ಅತ್ಯಾಚಾರ ನಡೆದಿಲ್ಲವೇ? ಹಾಗೆ ಎಲ್ಲರಿಗೂ ಗಲ್ಲು ಶಿಕ್ಷೆಯಾಗಿದೆಯೇ? ಈ ಮುದಿಕಾಲದಲ್ಲಿ ಆಸರೆಯಾಗಬೇಕಿದ್ದ ಮಗನನ್ನು ಕಳೆದುಕೊಂಡರೆ ನಮಗಾರು ದಿಕ್ಕು? ಎನ್ನುತ್ತಾರೆ ಅಪರಾಧಿಯ ಪೋಷಕರು.
ಅತ್ಯಾಚಾರ ರಿವ್ಯೂ ಕಮಿಟಿಯ ಸದಸ್ಯರೂ, ಸುಪ್ರೀಮ್ ಕೋರ್ಟ್ ನ ನಿವೃತ್ತ ನ್ಯಾಯಾಧೀಶರೂ ಆದ ಲೀಲಾ ಸೇಥಿಯವರು, ಜ್ಯೋತಿಯ ಮೇಲಿನ ಹಲ್ಲೆಯು ಕ್ರೂರವಾದುದೆಂದು ಹೇಳುತ್ತಲೇ ಇದಕ್ಕೆ ಸ್ತ್ರೀ ಪುರುಷರ ಪರಿಮಾಣವು ಸಮಾಜದಲ್ಲಿ ಕಡಿಮೆಯಾಗುತ್ತಿರುವುದೂ ಒಂದು ಕಾರಣವಾಗಿದೆ. ಶಿಕ್ಷಣವೊಂದೇ ಇದಕ್ಕೆ ಪರಿಹಾರ ಎನ್ನುತ್ತಾರೆ. ಜ್ಯೋತಿಯ ಮೇಲೆ ನಡೆದ ಹಲ್ಲೆಯ ನಂತರ ಅತ್ಯಾಚಾರದ ಬಗೆಗಿನ ಮೊಕದ್ದಮೆಗಳ ವಿಷಯವಾಗಿ ಸಂವಿಧಾನದಲ್ಲಿ ತಿದ್ದುಪಡಿಯನ್ನು ತಂದ ವರ್ಮ ಕಮಿಟಿಯ ಕುರಿತು ಪ್ರಸ್ತಾಪಿಸುತ್ತಾ, ಇದುವರೆಗೂ ಇಂತಹ ತಿದ್ದುಪಡಿಯೊಂದು ಸಾಧ್ಯವಾಗದೇ ಹೋದದ್ದಕ್ಕೆ ಪಿತೃಪ್ರಧಾನ ವ್ಯವಸ್ಥೆಯೇ ಕಾರಣ, ಪುರುಷಪ್ರಾಧಾನ್ಯತೆ ಎಂಬುದು ನಮ್ಮ ಸ್ತ್ರೀ ಪುರುಷರಲ್ಲಿ ಆಳವಾಗಿ ಬೇರೂರಿ ಬಿಟ್ಟಿದೆ. ಯಾವುದೇ ನಾಯಕರಿಲ್ಲದೇ, ಯಾವುದೇ ರಾಜಕೀಯ ಪಕ್ಷದ ಒತ್ತಾಸೆಯಿಲ್ಲದೇ ಜ್ಯೋತಿಗೆ ಆದ ಅನ್ಯಾಯದ ವಿರುದ್ಧ ಇಡೀ ಯುವಜನಾಂಗ ಬಂಡೆದ್ದು ಬೀದಿಗಿಳಿದದ್ದು, ಅಶ್ರುವಾಯುವಿಗಾಗಲೀ, ಪೋಲೀಸರ ಹೊಡೆತಕ್ಕಾಗಿ ಆಗಲೀ ಬಗ್ಗದೆ, ಒಂದು ತಿಂಗಳ ಕಾಲ ಪ್ರತಿಭಟನೆಯನ್ನು ನಡೆಸಿದ್ದು, ಸಾಮಾಜಿಕ ಬದಲಾವಣೆಗಾಗಿ ಜನತೆ ಹಾತೊರೆಯುತ್ತಿರುವುದರ ಪ್ರತೀಕವಾಗಿದೆ ಎನ್ನುತ್ತಾರೆ. ಇದು ಪಿತೃಪ್ರಧಾನ ವ್ಯವಸ್ಥೆಯ ಅಡಿಪಾಯ ಅಲುಗಾಡುತ್ತಿರುವುದರ ಸೂಚನೆಯೂ ಆಗಿದೆ. ಈ ದೆಸೆಯಲ್ಲಿ, ಹೆಣ್ಣಿನ ಮೇಲೆ ಹೆಚ್ಚುತ್ತಿರುವ ಹಲ್ಲೆ, ಪಿತೃಪ್ರಧಾನ ವ್ಯವಸ್ಥೆಯ ಭಯ, ತಲ್ಲಣಗಳ ಪ್ರತೀಕವೇ ಆಗಿದೆ.
ತಾನು ಡಾಕ್ಟರ್ ಆಗಬೇಕು, ಆನಂತರ ಬಡವರಿಗೆ ವೈದ್ಯಕೀಯ ನೆರವು, ತನ್ನ ಕುಗ್ರಾಮದಲ್ಲೊಂದು ಆಸ್ಪತ್ರೆ ಮುಂತಾದ ದೊಡ್ಡ ಕನಸುಗಳನ್ನು ಹೊತ್ತುಕೊಂಡು, ಇನ್ನೇನು ಗರಿಬಿಚ್ಚಿ ಹಾರಾಡಲು ತಯಾರಾಗಿದ್ದ ಜ್ಯೋತಿಯ ರೆಕ್ಕೆಗಳನ್ನು ಕತ್ತರಿಸಲಾಯಿತು. ಹೆಣ್ಣು ಹಾರಾಡುವುದೇ ದೊಡ್ಡ ಅಪರಾಧವೆಂಬ ಕಾರಣಕ್ಕಾಗಿ ನಿರ್ದಯವಾಗಿ ಆಕೆಯ ಕರುಳನ್ನೇ ಬಗೆದು ಹತ್ಯೆಮಾಡಲಾಯಿತು. ಹಾಗೆ ಮಾಡಿದವರಿಗೆ ಯಾವ ಮಹತ್ವಾಕಾಂಕ್ಷೆಗಳೂ ಇರಲಿಲ್ಲ. ಬೀದಿ ಕಾಮಣ್ಣರೂ ಈ ಸಂಸ್ಕೃತಿಯ ಚುಕ್ಕ್ಕಾಣಿಯನ್ನು ಹಿಡಿಯಲು ಅನುಮತಿ ಕೊಡುವ ಸಮಾಜವೇ, ಹೆಣ್ಣು ವಿದ್ಯಾವಂತಳಾದರೂ, ಮಹತ್ವಾಕಾಂಕ್ಷೆಯುಳ್ಳವಳಾದರೂ ಅವಳಿಗೆ ಮಾತ್ರ ಅದನ್ನು ನಿಷೇಧಿಸುತ್ತದೆ.
ಆಕ್ಸ್ಫéಡರ್್ ವಿಶ್ವವಿದ್ಯಾಲಯದಲ್ಲಿ ಇತಿಹಾಸಕಾರಳೂ, ಲೇಖಕಿಯೂ ಆಗಿರುವ ಮರಿಯಾ ಮಿಶ್ರಾ ಎನ್ನುವ ಮಹಿಳೆ, 20 ವರುಷಗಳಿಂದ ಭಾರತದ ಆರ್ಥಿಕ ವ್ಯವಸ್ಥೆಯಲ್ಲಾದ ಬದಲಾವಣೆ ಹೆಣ್ಣಿಗೆ ಅನೇಕ ಅವಕಾಶಗಳನ್ನು ತೆರೆಯಿತು. ಇದರ ಫಲವಾಗಿ ಮಹಿಳೆಯರು ಹೊರಬರತೊಡಗಿದರು. ಜ್ಯೋತಿಯ ಮೇಲೆ ನಡೆದ ಅಮಾನುಷ ಹಲ್ಲೆಯು, ಹೀಗೆ ಸಮಾಜ ಹಾಕಿದ ಲಕ್ಷ್ಮಣರೇಖೆಯನ್ನು ಮಹಿಳೆಯರು ದಾಟುತ್ತಿರುವುದರ ವಿರುದ್ಧ ಸಾಂಪ್ರದಾಯಿಕ ಸಮಾಜವೊಂದು ಮೊಳಗಿಸುವ ಎಚ್ಚರಿಕೆ ಗಂಟೆಯಾಗಿದೆ. ಇದೊಂದು ಸಾಂಸ್ಕೃತಿಕ ಲಜ್ಜೆಗೇಡಿತನವಾಗಿದೆ ಎನ್ನುತ್ತಾರೆ.
ಜಯಾ ಬಚ್ಚನ್ ಅವರು ಪಾರ್ಲಿಮೆಂಟಿನ ಸಭೆಯೊಂದರಲ್ಲಿ ‘ಅತ್ಯಾಚಾರಿಗಳನ್ನು ಜೈಲಿನಿಂದ ಬಿಡುಗಡೆ ಮಾಡಿ, ಅವರಿಗೆ ನಾವು ಬುದ್ಧಿ ಕಲಿಸುತ್ತೇವೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಉತ್ತರವೋ ಎಂಬಂತೆ ಈ ಚಿತ್ರದಲ್ಲಿ, ‘ಸಾಮಾಜಿಕ ಅಭಿಪ್ರಾಯಗಳ ಮೇಲೆ ಶಿಕ್ಷೆಯನ್ನು ವಿಧಿಸುವುದು ನಮ್ಮ ರೀತಿಯಲ್ಲ. ಕೈ ಕತ್ತರಿಸುವ, ತಲೆ ಕಡಿಯುವ ಶಿಕ್ಷೆಗಳು ಬೇರೆ ದೇಶಗಳಲ್ಲಿವೆ, ಆದರೆ ಭಾರತಕ್ಕೆ ಸಹಿಷ್ಣುತೆಯ ದೊಡ್ಡ ಚರಿತ್ರೆ ಇದೆ. ಅದು ನಮ್ಮ ಜಾಯಮಾನವಲ್ಲ. ಕಾನೂನನ್ನು ಯಾರೂ ಕೈಗೆ ತೆಗೆದುಕೊಳ್ಳುವ ಹಾಗಿಲ್ಲ, ಎಂದು ಆಮೋದ್ ಕಾಂತ್ (‘ಪ್ರಯಾಸ್’ ಎಂಬ ಅತ್ಯಾಚಾರಕ್ಕೆ ಬಲಿಯಾದವರು ಮತ್ತು ಬಾಲಾಪರಾಧಿಗಳ ಎನ್.ಜಿ.ಓ. ಮುಖ್ಯಸ್ಥರು ) ಅಭಿಪ್ರಾಯ ಪಟ್ಟಿದ್ದಾರೆ. ಇತ್ತೀಚೆಗೆ ನಾಗಾಲ್ಯಾಂಡಿನಲ್ಲಿ ಆದ ನಿರಪರಾಧಿ ಒಬ್ಬನ ಬರ್ಬರ ಕೊಲೆ, ಈ ನಿಟ್ಟಿನಲ್ಲಿ ನಡೆಯುವ ಆಭಾಸಗಳಿಗೆ ಸಾಕ್ಷಿಯಾಗಿರುವುದಲ್ಲದೆ, ಅಮೋದ್ ಅವರ ವಾದವನ್ನು ಪುಷ್ಠೀಕರಿಸುತ್ತದೆ.
ಜ್ಯೋತಿಯ ಬಲಿದಾನ ನಮ್ಮ ಪಿತೃಪ್ರಧಾನ ಪೂರ್ವಗ್ರಹಿಕೆಗಳ ವಿರುದ್ಧ ಇಡೀ ಜಗತ್ತು ದನಿ ಎತ್ತುವಂತೆ ಮಾಡಿದೆ. ಇದು ಅವಳ ತಾಯಿತಂದೆಗಳಿಗೂ ಹೆಮ್ಮೆಯನ್ನು ತಂದಿದೆ. ಅವರು ಹೇಳುತ್ತಾರೆ, ಅಂಧಕಾರದ ಕೂಪದೊಳಗೆ ಅವಳು ತನ್ನ ಪ್ರಕಾಶವನ್ನು ಬೆಳಗಿಸಿ ಹೋಗಿದ್ದಾಳೆ. ಇಡೀ ಜಗತ್ತು ಅದನ್ನು ಕಂಡಿದೆ. ಆದರೆ ಮಹಿಳೆ ಎಂದರೆ ಏನು? ಅವಳನ್ನು ನಮ್ಮ ಸಮಾಜದಲ್ಲಿ ಹೇಗೆ ನೋಡಲಾಗುತ್ತಿದೆ? ಎಂಬ ಪ್ರಶ್ನೆಗಳನ್ನೂ ಜೊತೆಗೆ ಬಿಟ್ಟು ಹೋಗಿದ್ದಾಳೆ.
ಹೆಣ್ಣಿನ ಮೇಲೆ ಆಗುತ್ತಿರುವ ಇಂತಹ ಬರ್ಬರ ಹಿಂಸೆಗಳಿಗೆ, ನಮ್ಮ ಸಂಸ್ಕೃತಿಯಲ್ಲಿ ಅವಳ ಬಗೆಗೆ ಇರುವ ನೇತ್ಯಾತ್ಮಕ ಗ್ರಹಿಕೆಗಳೇ ಬಹಳ ಮುಖ್ಯ ಕಾರಣ ಎನ್ನುತ್ತಾರೆ ಮನೋವಿಜ್ಞಾನಿಗಳು. ಹೆಣ್ಣು ಗಂಡುಗಳ ನಡುವಿನ ತಾರತಮ್ಯ ಎನ್ನುವುದು ನಮ್ಮ ರಕ್ತದಲ್ಲಿಯೇ ಇದೆ. ಎಲ್ಲಿಯವರೆಗೆ ಈ ತಾರತಮ್ಯ ಭಾವನೆ ನಮ್ಮ ಮನೆ ಮನೆಗಳ ನಿತ್ಯ ಬದುಕಿನಲ್ಲಿ ನಿಮರ್ೂಲವಾಗುವುದಿಲ್ಲವೋ, ಮಹಿಳೆಯರ ಬಗೆಗಿನ ನಮ್ಮ ದೃಷ್ಟ್ಟಿಕೋನ ಬದಲಾಗುವುದಿಲ್ಲವೋ, ಅವರ ಮೇಲೆ ಸಂಸ್ಕೃತಿಯ ಹೆಸರಿನಲ್ಲಿ ನಡೆಯುವ ಶೋಷಣೆ ನಿಲ್ಲುವುದಿಲ್ಲವೋ, ಅಲ್ಲಿಯವರೆಗೆ ಅತ್ಯಾಚಾರಿಗಳನ್ನು ಕೇವಲ ಗಲ್ಲಿಗೇರಿಸುವುದರಿಂದ ಅತ್ಯಾಚಾರವನ್ನು ತಡೆಗಟ್ಟಲು ಸಾಧ್ಯವಿಲ್ಲ. ‘ಬಿರುಗಾಳಿ ಬಂದು ಹೋಯಿತು, ಆನಂತರ ಏನು?’ ಎಂದು ಜ್ಯೋತಿಯ ತಂದೆಯವರು ಕೇಳುತ್ತಾರೆ. ಕ್ಷಣಿಕವಾದ ಭಾವೋದ್ವೇಗದಿಂದ ಏನೂ ಸಿದ್ಧಿಸುವುದಿಲ್ಲ. ‘ಇಂಡಿಯಾಸ್ ಡಾಟರ್’ ಚಿತ್ರವು ತೆರೆಕಂಡು ನಮ್ಮ ಜನರ ಕಣ್ಣನ್ನು ತೆರೆಸುವಂತಾಗಬೇಕಿದೆ. ಇದಕ್ಕೆ ನಮ್ಮ ಪ್ರಭುತ್ವದ ಅಧಿಕಾರದ ಚುಕ್ಕ್ಕಾಣಿಯನ್ನು ಹಿಡಿದಿರುವವರ ದೃಷ್ಟಿಕೋನ ಬದಲಾಗಬೇಕಾಗಿದೆ. ಇಂತಹ ಚಿತ್ರವೊಂದು ತೆರೆಕಾಣಲೂ ಚಳವಳಿ ಹೂಡಬೇಕಾಗಿರುವುದು ನಮ್ಮ ದುರಂತವಾಗಿದೆ. ಹೀಗೆ ಪಟ್ಟಭದ್ರ ಆಡಳಿತಕ್ಕೆ ಒಗ್ಗದ ‘ಸಾಂಸ್ಕೃತಿಕ ಉತ್ಪನ್ನಗಳ’ ಮೇಲೆ ನಿರಂತರವಾಗಿ ಹೇರುತ್ತಿರುವ ‘ನಿಷೇಧಸಂಸ್ಕೃತಿ’ ಇತ್ತೀಚೆಗೆ ಹೆಚ್ಚುತ್ತಿರುವುದೂ ನಮ್ಮ ದುರದೃಷ್ಟವಾಗಿದೆ.
 

‍ಲೇಖಕರು G

11 April, 2015

4 Comments

  1. Sanjeev

    the school child will call the teacher sir or may be uncle
    even she have to call sir as brother….
    it is our mind set…………

    • girijashastry

      Thanq mr. Sanjeev

  2. prathibha nandakumar

    very good girija

    • girijashastry

      thanq pratibha

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading