ಪಿ ಶೇಷಾದ್ರಿ ನಿರ್ದೇಶನದ, ಶಿವರಾಮ ಕಾರಂತರ ‘ಮೂಕಜ್ಜಿಯ ಕನಸುಗಳು’ ಚಿತ್ರದ ಬಗ್ಗೆ ಪ್ರೊ ಸಿ ಎನ್ ಆರ್ ಅವರು ವಿವರವಾದ ನೋಟವನ್ನು ಹರಿಸಿದ್ದರು. ಇದರಲ್ಲಿ ಒಂದು ಚಿತ್ರ ಮೂಲ ಕೃತಿಗೆ ನಿಷ್ಠವಾಗಿರಬೇಕೇ ಬೇಡವೇ? ಎನ್ನುವ ಪ್ರಶ್ನೆಯನ್ನು ಮುಂದುಮಾಡಿದ್ದರು.
ಇದಕ್ಕೆ ಜೋಗಿ ಪ್ರತಿಕ್ರಿಯಿಸಿದ್ದರು. ಅದು ಇಲ್ಲಿದೆ
ಈ ಪ್ರತಿಕ್ರಿಯೆಗೆ ಪ್ರೊ ಸಿ ಎನ್ ಆರ್ ಕೊಟ್ಟ ಉತ್ತರ ಇಲ್ಲಿದೆ–
‘ಅವಧಿ’ ಓದುಗರಾದ ಪಲ್ಲವಿ ಹೆಗಡೆ ಅವರ ಅನಿಸಿಕೆ ಇಲ್ಲಿದೆ-
ಬಿ ಸುರೇಶ್ ಬರೆದಿರುವುದು ಇಲ್ಲಿದೆ-
ಜೋಗಿ ಹಾಗೂ ಸಿಎನ್ನಾರ್ ಅವರ ಚರ್ಚೆಯನ್ನು ಇಟ್ಟುಕೊಂಡು ಪ್ರತಿಭಾ ನಂದಕುಮಾರ್ ಅವರು ನೀಡಿದ ಪ್ರತಿಕ್ರಿಯೆ ಇದು
ಪ್ರೊ ಸಿಎನ್ನಾರ್ ಅವರು ಪ್ರತಿಭಾ ನಂದಕುಮಾರ್ ಅವರಿಗೆ ಪ್ರತಿಕ್ರಿಯಿಸಿದ್ದಾರೆ. ಅದು ಇಲ್ಲಿದೆ
ಪ್ರತಿಭಾ ನಂದಕುಮಾರ್ ಅವರು ಚರ್ಚೆಯನ್ನು ಇನ್ನಷ್ಟು ವಿಸ್ತರಿಸಿದ್ದಾರೆ. ಅದು ಇಲ್ಲಿದೆ
ಈಗ ಇಂಗ್ಲೆಂಡ್ ನಿಂದ ಬಿ ಪ್ರೇಮಲತಾ ತಮ್ಮ ನೋಟವನ್ನು ಹಂಚಿಕೊಂಡಿದ್ದಾರೆ
ಈ ಚರ್ಚೆಯಲ್ಲಿ ನೀವೂ ಭಾಗವಹಿಸಬಹುದು
avadhimag@gmail.com ಗೆ ನಿಮ್ಮ ಅನಿಸಿಕೆಯನ್ನುಕಳಿಸಿಕೊಡಿ
ಡಾ. ಪ್ರೇಮಲತ ಬಿ
ಕಾರಂತರನ್ನು ಧಾರವಾಡದಲ್ಲಿ ಮೊದಲು ಭೇಟಿ ಮಾಡಿದಾಗ ನನಗೆ 13 ವರ್ಷ. ಬಹಳಷ್ಟು ಮಕ್ಕಳ ಸಾಹಿತ್ಯವನ್ನು ಕೂಡ ರಚಿಸಿರುವ ಕಾರಂತರು ರಾಜ್ಯಮಟ್ಟದ ದ್ವಿತೀಯ ಮಕ್ಕಳ ಸಾಹಿತ್ಯ ಸಮ್ಮೇಳನಕ್ಕೆ ಅತಿಥಿಗಳಾಗಿ ಆಗಮಿಸಿದ್ದರು. ಸಿದ್ದಯ್ಯ ಪುರಾಣಿಕರ ಅಧ್ಯಕ್ಷತೆಯಲ್ಲಿ ನಡೆದ ಈ ಸಮ್ಮೇಳನದಲ್ಲಿ ಮಕ್ಕಳ ಗೋಷ್ಟಿಯ ಅಧ್ಯಕ್ಷಳಾಗಿದ್ದ ನನಗೆ ಶಿವರಾಮ ಕಾರಂತರೊಡನೆ ಒಂದೆರಡು ಮಾತಾಡುವ ಅವಕಾಶ ದೊರೆತಿತ್ತು. ಆದರೆ ಏನು ಮಾತಾಡುವುದೆಂಬುದು ನನಗೆ ತಿಳಿದಿರಲಿಲ್ಲ. ಕಾರಂತರ ಕೋಪದ ಬಗ್ಗೆ ಕೇಳಿದ್ದ ನನಗೆ ಅಂದು ಕಾಣಸಿಕ್ಕಿದ್ದು ನಗುಮೊಗದ ಕಾರಂತಜ್ಜ.
ಮುಂದೆ ಇವರ ಕಾದಂಬರಿಗಳನ್ನೆಲ್ಲ ಆಸ್ಥೆಯಿಂದ ಓದಿದ್ದಾಯಿತು. ಬೇರೆ ಹಲವರದ್ದು ಕೂಡ.
ಜ್ಞಾನಪೀಠ ಪ್ರಶಸ್ತಿ ವಿಜೇತ ಕಾದಂಬರಿ ‘ಮೂಕಜ್ಜಿಯ ಕನಸುಗಳ’ನ್ನು ಸಿನಿಮಾ ಮಾಡಲಾಗಿದೆ ಎಂದು ಕೇಳಿಯೇ ನನಗೆ ಅಚ್ಚರಿಯಾಗಿದೆ. ವೈಚಾರಿಕತೆಯ ಬೇರನ್ನೇ ಗಿಡವಾಗಿ ಹೊರಡಿಸಿ ಮರವಾಗಿ ಬೆಳೆಸುವ ಈ ಕಾದಂಬರಿಯ ಬಗ್ಗೆ ಪ್ರೊ. ಸಿಎನ್ನಾರ್ ಹೇಳಿರುವುದು ಬಹಳ ಸತ್ಯ. ಈ ಕಥೆಗೆ ಕಾಲ, ದೇಶ, ಭಾಷೆಯ ಮಿತಿಯಿಲ್ಲ. ಅಂತೆಯೇ ಅದನ್ನು ದೃಶ್ಯಮಾಧ್ಯಮಕ್ಕೆ ಅಳವಡಿಸಿರುವ ಪಿ. ಶೇಷಾದ್ರಿಯವರ ಪ್ರಯತ್ನ ಮತ್ತು ಪ್ರತಿಭೆ ಕೂಡ ಅತಿ ಶ್ಲಾಘನೀಯ.
ದೂರದ ಇಂಗ್ಲೆಂಡಿನಲ್ಲಿರುವ ನನಗೆ ಈ ಸಿನಿಮಾ ನೋಡುವ ಅವಕಾಶ ಒದಗಿಲ್ಲ. ಆದರೆ ಶೇಷಾದ್ರಿಯವರ ಹಲವು ಸಿನಿಮಾಗಳನ್ನು ನಾನು ನೋಡಿದ್ದೇನೆ. ಅದು ಬಹುಶಃ ಕನ್ನಡ ಭಾಷೆಯಲ್ಲಿ ಪ್ರಶಸ್ತಿ ಪಡೆದ ಸಿನಿಮಾಗಳನ್ನೆಲ್ಲ ನೋಡುವ ತುಡಿತದಿಂದಲೇ ಇರಬೇಕು. ಇಲ್ಲಿದ್ದುಕೊಂಡು ಇಂಗ್ಲಿಷ್, ಜಪಾನ್, ಇರಾನ್, ಚೈನಾ, ಸ್ವೀಡಿಶ್, ಜರ್ಮನ್, ಪೋಲಿಶ್ ಮತ್ತಿತರ ಭಾಷೆಯ ಚಿತ್ರಗಳನ್ನು ಕೂಡ ನೋಡುವುದು ಹವ್ಯಾಸವಾಗಿ ಮುಂದುವರೆದಿರುವ ಕಾರಣ ನನ್ನದೀಗ ಒಂದೇ ಒಂದು ಭಾಷೆಯಾಗಿ ಹೋಗಿದೆ. ಅದು ’ಇಂಗ್ಲಿಷ್ ಸಬ್ ಟೈಟಲ್ಸ್ ’ ಭಾಷೆ. ಹಾಗಾಗಿ ಸಿಎನ್ನಾರ್ ಹೇಳಿರುವಂತೆ, ಕನ್ನಡದ ಸಂಭಾಷಣೆಯ ತಾತ್ಪರ್ಯ ಅನುವಾದದಲ್ಲಿ ಕಳೆದುಹೋಗಿದ್ದರೆ ಅದನ್ನು ಸರಿಪಡಿಸುವುದು ಇಂತಹ ಒಂದು ಉತ್ತಮ ಚಿತ್ರ ಭಾಷೆಯ ಮಿತಿಯಲ್ಲಿ, ಮಿತಗೊಳ್ಳದಿರಲು ಸಾಧ್ಯವಾಗುತ್ತದೆ.
ವೈಚಾರಿಕತೆಗೆ ಗಡಿಗಳ ಬೇಲಿಯಿಲ್ಲದಿದ್ದರೂ ಸಂಸ್ಕೃತಿಯೊಂದರ ಆಚರಣೆಗಳ ಅರಿವಿದ್ದಲ್ಲಿ ಆ ಚಿತ್ರ ನೋಡುಗನಿಗೆ ಆಪ್ತವಾಗುತ್ತದೆ. ಆ ಕಾರಣಕ್ಕೆ ವೈಚಾರಿಕ ಸಾಹಿತ್ಯ ಮತ್ತು ಸಿನಿಮಾಗಳು ಒಂದು ವರ್ಗದ ಜನರ ಮಿತಿಯಲ್ಲಿ ಹೆಚ್ಚು ಅರ್ಥ ಪಡೆದುಕೊಂಡರೆ ಇನ್ನೊಂದು ದೊಡ್ಡ ವರ್ಗದವರಲ್ಲಿ ಆ ಮಿತಿಯನ್ನು ದಾಟಿ ವಿಶಾಲ ಅರ್ಥಗಳನ್ನು ಪಡೆದುಕೊಳ್ಳುವ ಸಾಧ್ಯತೆಗಳಿವೆ. ಈ ಎರಡೂ ಸಾಧ್ಯತೆಗಳಲ್ಲಿ ನಿರ್ದೇಶಕ ಯಾವುದನ್ನು ಆರಿಸಿಕೊಳ್ಳುತ್ತಾನೆ ಎನ್ನುವ ನಿಟ್ಟಿನಲ್ಲಿ ವೈಚಾರಿಕತೆಯನ್ನು ಪದಗಳಲ್ಲಿ ಇಡುತ್ತಾನೋ, ಪ್ರತಿಮೆ ಮತ್ತು ರೂಪಕಗಳ ಮೂಲಕ ಕೊನೆಯಿಲ್ಲದ ಸಾಧ್ಯತೆಗಳನ್ನಾಗಿ ಮಾಡಿ ಹೊಸತಿಗೆ ನಾಂದಿ ಹಾಡುತ್ತಾನೋ ಎನ್ನುವುದನ್ನು ಆಯ್ದುಕೊಳ್ಳುತ್ತಾನೆ ಎನ್ನುವುದು ನನ್ನ ಅಭಿಪ್ರಾಯ.
ಕಲಾತ್ಮಕ ಚಿತ್ರಗಳಲ್ಲಿ ಉದ್ದುದ್ದ ಸಂಭಾಷಣೆ, ಭಾಷಣಗಳನ್ನು ನಾನು ಕಂಡಿರುವುದು ಬಹಳ ಕಡಿಮೆ. ಯಾಕೆಂದರೆ ಇವು ಧಾರವಾಹಿಗಳಲ್ಲ. ಸಿನಿಮಾಗಳಿಗೆ ಸಮಯದ ಮಿತಿಯಿದೆ. ನೋಡುಗನನ್ನು ಕಥೆಯೊಡನೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಬೆಸೆದಿಡುವ ಸಮಯಕ್ಕೆ ಕೂಡ ಬಹಳ ಕಡಿಮೆ ಮಿತಿಯಿದೆ. ವಿಚಾರಗಳ ಎರಡು ಮಗ್ಗುಲುಗಳನ್ನು ತೆರೆದಿಡಲು ಬೇರೆಯೇ ಎರಡು ದಿನಗಳನ್ನು ಬಳಸಿ ಹೇಳಲು ಧಾರವಾಹಿಗಳಲ್ಲಿ ಸಾಧ್ಯವಿದ್ದರೂ ಇದು ಸಿನಿಮಾಕ್ಕೆ ಒಗ್ಗುವುದಿಲ್ಲ. ಇದು ವೈಜ್ಞಾನಿಕವಾಗಿ ಧೃಡವಾಗಿರುವ ಸತ್ಯ. ಉದಾಹರಣೆಗೆ 20 ಸೆಕೆಂಡುಗಳಿಗಿಂತ ಹೆಚ್ಚಿನ ಉದ್ದದ ಒಂದು ಜಾಹೀರಾತು ನೋಡುಗನ ಗಮನದಲ್ಲ ಉಳಿಯುವುದಿಲ್ಲ.
ಕಲಾತ್ಮಕ ಸಿನಿಮಾಗಳನ್ನು ನೋಡುವ ಜನರಿಗೆ ಇತರರಿಗಿಂತ ಹೆಚ್ಚಿನ ವೈಚಾರಿಕತೆಯ ಹಸಿವಿರುತ್ತದಾದರೂ, ಅವರ ಆ ಹಸಿವು ಹಿಂಗುವುದು ದೃಶ್ಯ-ಶ್ರವಣ ಸಂವೇದನೆಗಳ ಮೂಲಕವೂ ಹೌದಾಗುತ್ತದೆ.ಸಿನಿಮಾಕ್ಕೆ ಕಾದಂಬರಿಗಳಿಗಿಲ್ಲದ ಆ ಹೊಸ ಆಯಾಮಗಳನ್ನು ಬಳಸಿಕೊಳ್ಳುವ ಸಾಧ್ಯತೆಗಳಿವೆ. ಬರಿಯ ಸಂಭಾಷಣೆ ಅಥವಾ ಪದಗಳ ಮೂಲಕವೊಂದರಲ್ಲೇ ವೈಚಾರಿಕತೆಯನ್ನು ದಾಟಿಸುವ ಬದಲು ಸಾಂಕೇತಿಕತೆ, ಸಂಗೀತ, ಮಳೆ, ಪ್ರಕೃತಿ ಇತ್ಯಾದಿ ಹಲವು ಪ್ರಚೋದನೆಗಳನ್ನು ಬಳಸಿಯೂ ಮಾಡಲು ಸಾಧ್ಯವಿದೆ.
ಆದರ ರಾಜಕೀಯವಾಗಿ ಮತ್ತು ಧಾರ್ಮಿಕವಾಗಿ ಕಾಲ ಎನ್ನುವುದು ಹಲವು ಅಡಚಣೆಗಳನ್ನು ಸೃಷ್ಟಿಸುವುದು ಕಲಾವಿದನ ಶಾಪ. ಇದು ಚಾರಿತ್ರಿಕವಾಗಿ ನಡೆದುಬಂದಿರುವ ಮತ್ತು ಪುನಾರಾವರ್ತಿತವಾಗಿರುವ ವಿಚಾರವೂ ಹೌದು. ಪದಗಳಿಗೆ ಲಿಂಗಗಳ ಬಗ್ಗೆ, ಲೈಂಗಿಕತೆಯ, ಧಾರ್ಮಿಕತೆಯ ಬಗ್ಗೆ ದೊರಕುವ ಸ್ವಾತಂತ್ಯ್ರ, ದೃಶ್ಯ ಮಾಧ್ಯಮದಲ್ಲಿ ಮೊಟಕಾಗುವುದು ಕೂಡ ಅಷ್ಟೇ ಸತ್ಯ. ಇದಕ್ಕೆ ಕಾರಣ, ಇದನ್ನು ತೋರಿಸಲಾಗುವುದಿಲ್ಲವೆಂದಲ್ಲ. ಬದಲಿಗೆ ತೋರಿಸಿದರೆ ಅದು ಹಲವೆಡೆಯಿಂದ ನಿಷೇದಗಳಿಗೆ ತುತ್ತಾಗುವ ಭಯದಿಂದ.
ಇದನ್ನೆಲ್ಲ ಮೊದಲಿಗೇ ವಿಮರ್ಶಿಸಿ, ವಿಭಾಗೀಕರಿಸಿ ಮೂಕಜ್ಜಿಯ ಕನಸುಗಳು ಸಿನಿಮಾ ಯಥಾವತ್ ಕಾದಂಬರಿಯ ಕಥೆಯನ್ನು ಅಥವಾ ವೈಚಾರೀಕತೆಯನ್ನು ಪ್ರತಿಪಾದಿಸದೆ ಕೆಲೆವೆಡೆ ಮೊಟಕಾಗಿರುವುದನ್ನು ಇಂದಿನ ರಾಜಕೀಯ, ಧಾರ್ಮಿಕ ತೀವ್ರ ಸಂವೇದನೆಗಳ ಹಿನ್ನೆಲೆಯಲ್ಲಿಯೂ ವಿಮರ್ಶಿಸಿರುವ ಸಿಎನ್ನಾರ್ ಅವರಿಗೆ ಚಿತ್ರದ ವೈಚಾರಿಕತೆಯ ಆಳ ಅಳ್ಳಕವಾಗಿ ಕಂಡಿದ್ದಲ್ಲಿ ಅದೊಂದು ಪ್ರಾಮಾಣಿಕ ಅಭಿಪ್ರಾಯವಾಗಿರುವ ಸಾಧ್ಯತೆಗಳಿವೆ.
ವೈಚಾರಿಕತೆಯನ್ನು ಉದ್ದ ಸಂಭಾಷಣೆಗಳಲ್ಲಿ, ಮಾತುಕತೆಯಲ್ಲಿ ತೋರಿಸಿರುವ ಹಲವು ಉದಾಹರಣೆಗಳಿದ್ದರೂ ಅವು ನಿರ್ದೇಶಕನ ಆದ್ಯತೆಯೇ ಅಲ್ಲವೇ ಎನ್ನುವುದರಲ್ಲಿ ಆ ವಿಚಾರದ ಬಗ್ಗೆ ಹೆಚ್ಚಿನ ಚರ್ಚೆಯ ಅಗತ್ಯವಿಲ್ಲದೆ ನಿಲ್ಲಿಸಬಹುದು.
ಸ್ಥಿರ ಆಧ್ಯಾತ್ಮ, ದೇವರು, ಧಾರ್ಮಿಕತೆಯ ನೆಲೆಯಲ್ಲಿ ಬಹುತೇಕ ಜನರು ಉದ್ದುದ್ದ ಸಂಭಾಷಣೆಗಳನ್ನು ಸ್ವೀಕರಿಸುತ್ತಾದಾದರೂ ವಿಚಾರವಂತ, ಚಿಂತನ ಶೀಲ ನೋಡುಗ ಚಲನಶೀಲ ಗುಣಗಳನ್ನು ಹೊಂದಿದ್ದಲ್ಲಿ ನಡುವೆಯೇ ಹಲವು ತಾಕಲಾಟ, ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕಲು ಶುರುಮಾಡುತ್ತಾನೆ. ಕಾದಂಬರಿಯನ್ನು ಓದುವುದನ್ನು ನಿಲ್ಲಿಸುವುದು ಸಾಧ್ಯವಾದರೂ ಸಿನಿಮಾವನ್ನು ನಿಲ್ಲಿಸಲಾಗದ ಕಾರಣ ನಡು ನಡುವೆ ಕೆಲವು ಮೌನಗಳು, ನೋಟಗಳು, ಅಭಿವ್ಯಕ್ತಿಗಳು- ಆ ಎಲ್ಲವನ್ನೂ ಹೇಳಲು ಶಕ್ತವಾಗುತ್ತವೆ. ನೋಡುಗನ ಹಲವು ಪ್ರಶ್ನೆಗಳಿಗೆ ಕೆಲವು ನಿರ್ಧಿಷ್ಟ ಅಥವಾ ಅನಿರ್ಧಿಷ್ಟ ಉತ್ತರಗಳನ್ನು ಕೂಡ ದೊರಕಿಸುತ್ತವೆ.
ಆದರೆ ಮೂಕಜ್ಜಿಯ ಕನಸುಗಳು ಕಾದಂಬರಿ ಆಧಾರಿತ ಎನ್ನಬಹುದಾದ ಚಿತ್ರವೇ ಅಥವಾ ಮೂಕಜ್ಜಿಯ ಕನಸುಗಳು ಎನ್ನುವ ಮೂಲ ಕಾದಂಬರಿಯನ್ನೇ ಚಿತ್ರವನ್ನಾಗಿಸಲಾಗಿದೆಯೇ ಎನ್ನುವ ಬಗ್ಗೆ ಪ್ರತಿಯೊಬ್ಬರ ಅಭಿಪ್ರಾಯಗಳೂ ಅವರವರ ಸಂತೃಪ್ತಿಯನ್ನು ಆಧರಿಸಿ ನಿರ್ಧರಿಸಬೇಕಾದ ವಿಚಾರವಾಗುತ್ತದೆ.
ಸಿಎನ್ನಾರ್-ಮೂಲ ಕಾದಂಬರಿಯ ಬಗೆಗಿರುವ ಹಲವು ಟೀಕೆಗಳನ್ನು (ತಿರಸ್ಕರಿಸಿದರು ಎನ್ನುವ ಪದ ಒಪ್ಪುವುದಿಲ್ಲ) ಉಲ್ಲೇಖಿಸಿದ್ದಾರೆ.
ಕಾದಂಬರಿಯನ್ನು ತಿರಸ್ಕರಿಸುವವರು, ಮೂಕಜ್ಜಿಯ ಕನಸುಗಳು ಕೃತಿಯಲ್ಲಿ “ಕಾರಂತರ ವೈವಿಧ್ಯಮಯವಾದ ಆಸಕ್ತಿಗಳ ಕೇಂದ್ರೀಕರಣವಿಲ್ಲ. ಕಾರಂತರಿಗೆ ಸಾಂಸ್ಕೃತಿಕ ಮಾನವ ಶಾಸ್ತ್ರದಲ್ಲಿರುವ ಆಸಕ್ತಿಯೊಂದೇ ಇಲ್ಲಿ ಮುಖ್ಯವಾಗಿದೆ” ( ಗಿರಡ್ಡಿ ಗೋವಿಂದರಾಜ), “ಜೀವನ ಸಂಬಂಧಗಳ ಕೊರತೆ ಇದೆ ಎಂಬ ಕಾರಣಕ್ಕಾಗಿಯೇ ಅದು ಡಲ್ಲಾದ ವೈಚಾರಿಕ ಥೀಸಿಸ್ ಆಗಿಬಿಟ್ಟಿದೆ” (ಡಿ. ಆರ್. ನಾಗರಾಜ್), ಎಂದು ವಿಮರ್ಶಕರು ತೀರ್ಮಾನಿಸುತ್ತಾರೆ. (ಎರಡೂ ಉಲ್ಲೇಖಗಳು ಟಿ. ಪಿ. ಅಶೋಕ ಸಂಪಾದಿಸಿರುವ ಶಿವರಾಮ ಕಾರಂತ: ಈ ಶತಮಾನದ ನೋಟ [ಕನ್ನಡ ವಿ.ವಿ., 1993] ಎಂಬ ವಿಮರ್ಶನ ಕೃತಿಯಿಂದ ಉದ್ಧರಿಸಲ್ಪಟ್ಟಿವೆ.) ಇದೇ ಬಗೆಯ ಆಕ್ಷೇಪಗಳನ್ನು ಇನ್ನೂ ಅನೇಕ ವಿಮರ್ಶಕರು ಎತ್ತಿದ್ದಾರೆ.
ಅರ್ಥಾತ್, ಜ್ಞಾನಪೀಠ ಪ್ರಶಸ್ತಿಗೆ ಈ ಕಾದಂಬರಿಯನ್ನು ಉಲ್ಲೇಖಿಸಿರುವುದು ಅದರ ಪ್ರಖರ ವೈಚಾರಿಕತೆಗಾಗಿಯೇ; ಹಾಗೆಯೇ ಅದನ್ನು ಒಂದು ‘ಥೀಸಿಸ್ ಕಾದಂಬರಿ’ ಎಂದು ತಿರಸ್ಕರಿಸುವುದೂ ಅದರ ವೈಚಾರಿಕತೆಗಾಗಿಯೇ –ಅಷ್ಟರ ಮಟ್ಟಿಗೆ ಕೃತಿಯಲ್ಲಿ ವೈಚಾರಿಕತೆ ಹಾಸುಹೊಕ್ಕಾಗಿದೆ. ಆದರೆ, ಸರಿ ಸುಮಾರು ಎಲ್ಲಾ ಬಗೆಯ ವೈಚಾರಿಕತೆಯನ್ನೂ ಶೇಷಾದ್ರಿ ಅವರ ಚಿತ್ರ ಹೊರಗಿಡುತ್ತದೆ; ಎಂದರೆ, ಕೃತಿಯ ವೈಶಿಷ್ಟ್ಯವನ್ನೇ ನಿರಾಕರಿಸುತ್ತದೆ. ಇದು ಎಷ್ಟು ಸ್ವೀಕಾರಾರ್ಹ?
ಮೇಲಿನ ಸೃಜನಾತ್ಮಕ ಟೀಕೆಯ ವಿಮರ್ಶೆಯಂತೆಯೆ ಸಿಎನ್ನಾರ್ ಸಿನಿಮಾದ ಎಲ್ಲ ಉತ್ತಮಗಳ ಪಟ್ಟಿಯನ್ನು ಮೊದಲಿಗೇ ನೀಡಿ ತಮ್ಮ ಎರಡನೇ ದೃಷ್ಟಿಕೋನವನ್ನು ಧ್ವನಿಸುವ ಮೂಲಕ ಚರ್ಚೆಗೆ ಅನುವು ಮಾಡಿಕೊಟ್ಟಿದ್ದಾರೆ.
ಮೇರು ನಿರ್ದೇಶಕ ಡಾ. ಗಿರೀಶ್ ಕಾಸರವಳ್ಳಿಯವರ 14 ಪ್ರಶಸ್ತಿ ವಿಜೇತ ಚಿತ್ರಗಳಲ್ಲಿ 13 ನ್ನು ಕನ್ನಡ ಸಾಹಿತ್ಯದ ಕಥೆ ಅಥವಾ ಕಾದಂಬರಿಯನ್ನಾಧರಿಸಿಯೇ ಮಾಡಿದ್ದಾರೆ. ಮತ್ತೊಂದು ಅವರದೇ ಸ್ವತಂತ್ರ ಕಥೆ. ಸಾಹಿತ್ಯವನ್ನು ಆಧರಿಸಿ ಮಾಡಿದ ಎಲ್ಲ ಚಿತ್ರಗಳ ಕಥೆಗಳಿಗೂ ಅವರು ಹೊಸ ಆಯಾಮಗಳನ್ನು ನೀಡಿದ್ದಾರೆ. ಸಣ್ಣ ಕಥೆಗಳನ್ನು ಸಿನಿಮಾವನ್ನಾಗಿಸಿದ್ದಾರೆ. ದೊಡ್ಡ ಕಾದಂಬರಿಗಳನ್ನು ಮೊಟಕುಗೊಳಿಸಿ ಹೊಸ ಹಂದರಗಳಲ್ಲಿ ಕಥೆಯನ್ನು ಬಿಡಿಸಿದ್ದಾರೆ. ಒಟ್ಟಿನಲ್ಲಿ ಕಥೆ ಅದೇ ಆಗಿಲ್ಲದೆಯೂ ಇರಬಹುದು. ಉದಾಹರಣೆಗೆ ವೈದೇಹಿ ಬರೆದಿರುವ ಕಥೆ ಗುಲಾಬಿ ಟಾಕೀಸಿ ನ ’ಗುಲಾಬಿ ’ ನಿಜ ಕಥೆಯಲ್ಲಿ ಕ್ರಿಶ್ಸ್ಚಿಯನ್ ಮಹಿಳೆ. ಸಿನಿಮಾದಲ್ಲಿ ಮುಸ್ಲಿಂ ಮಹಿಳೆ (ಗುಲ್ನಾಬಿ). ಅಲ್ಲಿಂದ ಕಥೆಯ ತಿರುವುಗಳು ಬದಲಾಗುತ್ತವೆ. ಎಸ್. ಎಲ್, ಬೈರಪ್ಪ ಕೂಡ ತನ್ನ ಕಾದಂಬರಿಯ ಕಥೆ ಸಿನಿಮಾದಲ್ಲಿ ಬದಲಾದ ಬಗ್ಗೆ ಯಾವುದೇ ವಿರೋಧ ಒಡ್ಡದೆ ಒಪ್ಪಿಕೊಂಡಿದ್ದು ಆ ನಿರ್ದೇಶಕನ ಸಾರ್ಥಕತೆ ಮತ್ತು ಸೃಜನಶೀಲತೆಯಾಗುತ್ತದೆ.
ಸಾಹಿತ್ಯವನ್ನು ಆಧರಿಸಿ ಸಿನಿಮಾ ಮಾಡುವ ಸೃಜನಶೀಲ ನಿರ್ದೇಶಕ ಕೂಡ ಒಬ್ಬ ಓದುಗನೇ ಆಗಿರುತ್ತಾನೆ. ಒಂದು ಸಾಹಿತ್ಯಕ ಕೃತಿ ಒಬ್ಬರನ್ನು ಎಷ್ಟರ ಮಟ್ಟಿಗೆ ಪ್ರಚೋದಿಸುತ್ತದೆ ಅಥವಾ ಪ್ರೇರೇಪಿಸುತ್ತದೆ ಎನ್ನುವುದಕ್ಕೆ ಸಾಕ್ಷಿ ಆತ ಆ ಕೃತಿಯನ್ನು ದೃಶ್ಯ ಮಾಧ್ಯಮಕ್ಕಿಳಿಸುವ ಸಾಹಸಕ್ಕೆ ಕೈ ಹಾಕುವುದರಲ್ಲಿಯೇ ತಿಳಿಯುತ್ತದೆ. ಆದರೆ ಈ ಎರಡನೇ ಮಾಧ್ಯಮಕ್ಕೆ ಕೃತಿಯನ್ನು ಆತ ಅನುವಾದಿಸುತ್ತಾನೋ, ಅಳವಡಿಸುತ್ತಾನೆಯೋ ಅದು ಅವನ ದೃಷ್ಟಿಕೋನ ಮತ್ತು ಶಕ್ತಿಯೇ ಹೊರತು ಮೂಲ ಕೃತಿಗೆ ಸಲ್ಲಿಸುವ ನಿಷ್ಠೆಯ ಅಳತೆಗೋಲಾಗುವುದಿಲ್ಲ.
ಅಂತೆಯೇ ಮೂಕಜ್ಜಿಯ ಕನಸು-ಕಾದಂಬರಿಯ ವೈಚಾರಿಕತೆಯನ್ನು ಅಲ್ಪವೋ, ಅರೆಬರೆಯೋ, ಪೂರ್ಣವಾಗಿಯೋ ಹೊರಗಿಟ್ಟು ಕೂಡ ಸಿನಿಮಾ ಹೊಸ ವೈಚಾರಿಕತೆಗೆ ನಾಂದಿ ಹಾಡಿ ಯಶಸ್ವಿಯಾಗಿದ್ದಲ್ಲಿ ಅಥವಾ ಆ ಒಂದು ಕಾದಂಬರಿ ಪರ್ಯಾಯ ಸಿನಿಮಾವೊಂದಕ್ಕೆ ಸ್ಪೂರ್ತಿಯಾಗಿದ್ದಲ್ಲಿ ಅದು ನೋಡುಗನ ಲಾಭವೇ ಹೊರತು ನಷ್ಟವಲ್ಲ.
ಈ ದೃಷ್ಟಿಯಿಂದ ಮೂಕಜ್ಜಿಯ ಕನಸುಗಳು ಸಿನಿಮಾ ಕನ್ನಡದ ಮೇರು ಕಾದಂಬರಿಯನ್ನು ಮತ್ತೊಮ್ಮೆ ಜೀವಂತಗೊಳಿಸಿದ್ದಲ್ಲಿ, ಮತ್ತೊಮ್ಮೆ ಹೊಸ ತಲೆಮಾರಿನ ಓದುಗನನ್ನು ಕಾದಂಬರಿ ಓದಲು ಪ್ರಚೋದಿಸಿದಲ್ಲಿ ಅದು ಸಾರ್ಥಕವಾದಂತೆಯೇ ಸರಿ. ಯಾಕೆಂದರೆ ಭಾವ ಪರವಶನಾಗಿ ಓದುವ ಕಾದಂಬರಿ ಇದಲ್ಲ. ವೈಚಾರಿಕತೆಯ ಸುಳಿಗೆ ತನ್ನನು ಒಡ್ಡಿಕೊಳ್ಳುವ ಓದುಗನಿಗೆ ಮಾತ್ರ ಈ ಕಾದಂಬರಿ ದಕ್ಕುತ್ತದೆ. ಸಿಎನ್ನಾರ್ ಅವರೇ ಮೊದಲಿಗೆ ಹೊಗಳಿದಂತೆ ಪ್ರೇಕ್ಷಕ ಹಾಗೆ ಸಿಲುಕುವಂತೆ ಸಿನಿಮಾ ಪ್ರಚೋದಿಸಿದಲ್ಲಿ ನ್ಯಾಯ ದೊರಕಿದಂತೆಯೇ ಸರಿ. ಹಾಗೆಯೇ ಆ ಓದುಗ /ನೋಡುಗ ಹೊಸ ವೈಚಾರಿಕತೆಯ ಸಾಧ್ಯತೆಗಳಿಗೆ ತೆರೆದುಕೊಂಡಲ್ಲಿ ಜೋಗಿ ಹೇಳುವಂತೆ- ಅದು ಕೂಡ ಸ್ತುತ್ಯವೇ.
ಮೂಕಜ್ಜಿಯ ಕನಸುಗಳನ್ನು ಸಿನಿಮಾವನ್ನಾಗಿಸಿರುವ ತಂಡದ ಎಲ್ಲರಿಗೆ ಮತ್ತು ಪಿ. ಶೇಷಾದ್ರಿಯವರಿಗೆ ಹಾರ್ದಿಕ ಅಭಿನಂದನೆಗಳು.






” ಮೂಕಜ್ಜಿಯ ಕನಸುಗಳು” ಚಿತ್ರ ನಾನು ಇನ್ನೂ ನೋಡಿಲ್ಲ.ಆದರೆ ಆ ಕಾದಂಬರಿ ಓದಿದಾಗ ಮೂಕಜ್ಜಿಯ ಪ್ರಖರ ವೈಚಾರಿಕತೆಯ ಹರಿವಿಗೆ ಬೆರಗಾಗಿದ್ದೇನೆ.ಆ ಕಾದಂಬರಿಯುದ್ದಕ್ಕೂ ಯಾವುದೇ ಒಂದು ನಿರ್ದಿಷ್ಟ ಕಥಾ ಹಂದರ ನನಗೆ ಸಿಕ್ಕಿಲ್ಲ.ಆದರೆ ವೈಚಾರಿಕತೆಯ ಕಡಲಿನಲ್ಲಿ ಮುಳುಗಿ ಹೋಗಿದ್ದೇನೆ ಎಂಬುದು ನಿಜ.ಇದನ್ನು ಒಂದು ಸಿನಿಮಾದ ಚೌಕಟ್ಟಿನಲ್ಲಿ ಮೂಡಿಸುವ ಸಾಹಸ ನಿಜವಾಗಿಯೂ ಶ್ಲಾಘನೀಯ.ಮೂಕಜ್ಜಿ ಎಚ್ಚರದಲ್ಲಿಯೇ ದೂರ ದಿಗಂತದತ್ತ ದಿಟ್ಟಿ ನೆಟ್ಟು ಯಾರೂ ಕಾಣದ್ದನ್ನು ಕಾಣುತ್ತ ಹೇಳುತ್ತಾ ಹೋಗುವಲ್ಲಿ ಮೂಡುವ ವಿಚಿತ್ರ ಪ್ರಭಾವವನ್ನು ದೃಶ್ಯ ಮಾಧ್ಯಮ ದಲ್ಲಿ ತೋರಿಸಿ ನೋಡುಗನನ್ನು ಒಂದು ಪ್ರಚಂಡ ವಿಚಾರ ಲಹರಿಯಲ್ಲಿ ತೇಲಿಸಿ ಬಿಡುವ ಸಾಧ್ಯತೆ ತುಂಬಾ ಪರಿಣಾಮಕಾರಿಯಾದೀತು.ಮೂಕಜ್ಜಿಯ ಒಂದೊಂದು ನೋಟಗಳ
ನಿರೂಪಣೆ ನೇರವಾಗಿ ಒಂದೊಂದು ಕಥೆ ಹೇಳ್ತಾ ಹೋಗ್ತಿದೆ.ನಿತ್ಯ ಸಂಸಾರದ ಗುಟ್ಟು , ಸಂಗತಿಗಳನ್ನು ದೇವರಲ್ಲಿಯೂ ಕಾಣುವ ಕನಸುಗಳೋ , ಹಳವಂಡವೋ ಯಾವುದೋ ಲೋಕದಲ್ಲಿ ತೇಲಿಬಿಡುವುದರಲ್ಲಿ ಎರಡು ಮಾತಿಲ್ಲ.ಆ ಉದ್ದುದ್ದ ದಟ್ಟವಾದ ಮಾತುಗಳು ಓದುವಾಗ ಬೀರುವ , ಹೊಂದಿರುವ ಗಾಢತೆ ತೆಳುವಾಗಿ ಹೋಗಬಹುದು ಸಂಭಾಷಣೆಯಲ್ಲಿ.ಮೂಕಜ್ಜಿಯ ಮಾತುಗಳು ಹೇಳುವ ಸತ್ಯ ನಿರಂತರ, ಅನಿಸುವಷ್ಟು ಸತ್ಯ.ದೇವ ಒಬ್ಬ ನಾಮ ಹಲವು ಎಂಬ ದನ್ನು ಸರಳವಾಗಿ ಹೇಳ್ತಾಳೆ ಮೂಕಜ್ಜಿ.
ಒಮ್ಮೊಮ್ಮೆ ಅಜ್ಜಿ ನಾಸ್ತಿಕಳೋ ಎಂಬ ಸಂಶಯ ತಲೆದೋರಿದರೆ
ಮರುಕ್ಷಣ”ಅಮ್ಮನ ಹತ್ತಿರ ಹೋಗೋದಿಕ್ಕೆ ಹೆದರಿಕೆ ಯಾಕೆ” ಎನ್ನುತ್ತ ಈ ಜೀವದ ಅಂತಿಮ ಗಮ್ಯ ಆ ತಾಯಿಯ ಆವಾಸವೇ
ಎಂದು ಹೇಳಿ ಅದನ ,ಆ ಭಾವನೆ ಸುಳ್ಳು ಮಾಡ್ತಾಳೆ.ಇದನ್ನೆಲ್ಲ ನೋಡುಗನ ಮನಸ್ಸಿನಲ್ಲಿ ಮೂಡುವ ವಿಚಾರಗಳ ಸುಳಿಯಲ್ಲಿ ಸಾಂಕೇತಿಕ ವಾಗೂ ಮೂಡಿಸುವ ಸಾಧ್ಯತೆ ಇದೆ ಏನೋ.
ಒಟ್ಟಿನಲ್ಲಿ ಈ ಚಿತ್ರ ನಿರ್ದೇಶಕ ಹಾಗೂ ಪ್ರೇಕ್ಷಕ ಇಬ್ಬರಿಗೂ ಒಂದು ಸವಾಲು.ಈ ಅಪ್ರತಿಮ ಕಾದಂಬರಿ ಯನ್ನು ಚಿತ್ರ ವಾಗಿ ಪ್ರಸ್ತುತ ಪಡಿಸಿದ ಶೇಷಾದ್ರಿ ಹಾಗೂ ಅವರ ತಂಡಕ್ಕೆ ಹಾರ್ದಿಕ ಅಭಿನಂದನೆಗಳು.
ಸರೋಜಿನಿ ಪಡಸಲಗಿ
ಕಡಲಾಚೆಯಿದ್ದೂ ಕನ್ನಡ ಸಾಹಿತ್ಯ-ಚಲನಚಿತ್ರ-ಸಂಸ್ಕೃತಿ ಇವುಗಳ ಬಗ್ಗೆ ತೀವ್ರ ಆಸಕ್ತಿಯಿದ್ದು, ಈ ಚರ್ಚೆಯಲ್ಲಿ ಭಾಗವಹಿಸಿರುವ, ಚರ್ಚೆಗೆ ಮತ್ತೊಂದು ಆಯಾಮವನ್ನು ಕೊಟ್ಟಿರುವ ಡಾ. ಪ್ರೇಮಲತಾ ಅವರಿಗೆ ಹಾಗೂ ಚರ್ಚೆಯಲ್ಲಿ ನೇರವಾಗಿ ಭಾಗವಹಿಸಿರುವ ಶ್ರೀಮತಿ ಸರೋಜಿನಿ ಪಡಸಲಗಿ ಅವರಿಗೆ ಹಾರ್ದಿಕ ಧನ್ಯವಾದಗಳು. ಸಿ. ಎನ್. ರಾಮಚಂದ್ರನ್
ಡಾ. ಪ್ರೇಮಲತಾ ಅವರಿಗೆ,
ನಿಮ್ಮ ಪ್ರತಿಕ್ರಿಯೆ ಅನೇಕ ಕಾರಣಗಳಿಗೆ ಮುಖ್ಯ. ಸದ್ಯಕ್ಕೆ ಬೇರೇನೋ ಬರೆಯುತ್ತಾ ಇದ್ದೇನೆ. ಹೀಗಾಗಿ ಪ್ರತಿಕ್ರಿಯಿಸಲು ಆಗುತ್ತಿಲ್ಲ. ಈ ತಿಂಗಳ ಕೊನೆಯಲ್ಲಿ ಮಾತಾಡುವೆ.
ಸರೋಜಿನಿಯವರ ಉತ್ತರವೂ ಆಸಕ್ತಿ ಹುಟ್ಟಿಸಿತು.
ಇಂಥ ಚರ್ಚೆಗಳಲ್ಲಿ ನೀವು ಭಾಗವಹಿಸುತ್ತಿರುವುದು ಸಂತೋಷ.
ಶುಭವಾಗಲಿ.