ದಿಲಾವರ್ ರಾಮದುರ್ಗ
ಇಂಗ್ಲಿಷ್ ವಿಂಗ್ಲಿಷ್ ಮತ್ತು ಲೈಫ್ ಆಫ್ ಪೈ… ಇವೆರಡೂ ಚಿತ್ರಗಳನ್ನು ನೋಡಿದೆ. ಮೊದಲನೆಯದು ಎಂಜಾಯೇಬಲ್. ಹಿಂದೂಸ್ತಾನಿ ಗೃಹಿಣಿಗೆ ಕೀಳರಿಮೆಯನ್ನು ತೊಲಗಿಸಿಕೊಳ್ಳಲು ಪ್ರೇರೇಪಿಸುತ್ತ ಇಂಗ್ಲಿಷ್ ವ್ಯಾಮೋಹ ಬೆಳೆಸುವ ಯತ್ನವೂ ಆಗಿ ಕಾಣಿಸಿತು. ಆ ಮೂಲಕ ವಾಲಮಾರ್ಟ್ ಮತ್ತಿತರ ವಿದೇಶಿ ಬಂಡವಾಳದ ಆಗಮನಕ್ಕೆ ಇಂಡಿಯನ್ ಮನಸ್ಥಿತಿಯನ್ನು ಒಳಗಿನಿಂದಲೇ ರೂಪಿಸುವುದಕ್ಕೆ ಹಾಕುತ್ತಿರುವ ಪೀಠಿಕೆ ಇದು ಅನಿಸತೊಡಗಿತು.
ಎರಡನೆಯದು ಲೈಫ್ ಆಫ್ ಪೈ… ಈ ಸಿನಿಮಾ ನೋಡಿದ ಮೇಲೆ ಇಲ್ಲಿನ ಚಿಂತನೆಗಳನ್ನು ಲೈಟಾಗಿ ಛೇಡಿಸುತ್ತ, ಇಂಟರನ್ಯಾಷನಲ್ ಸಿನಿ ವ್ಯಾಪಾರಿಗಳು ಆಧುನಿಕತೆಯ ನೆಪದಲ್ಲಿ ಮತ್ತು ಗ್ಲೋಬಲ್ ಪರ್ಸಸ್ಪೆಕ್ಟಿವ್ ನೆಲೆಯಲ್ಲಿ ಇಲ್ಲಿನ ಸಿನಿಮಾಗಳನ್ನು ಕಟ್ಟಿಕೊಡುವ ಯತ್ನ ಮಾಡಿದ್ದು ಎಂದು ನನಗನ್ನಿಸಲು ಶುರುವಾಗಿದೆ. ಇನ್ನು ಹೃದಯದಲ್ಲಿ ಸುಳಿದಾಡುತ್ತಿದ್ದ ಯಶ್ ಚೋಪ್ರಾ, ಕರನ್ ಜೋಹರ್ ಸಿನಿಮಾಗಳಿಗಿಂತ ಇಂಥ ಗ್ಲೋಬಲ್ ಪರ್ಸಸ್ಪೆಕ್ಟಿವ್ ಸಿನಿಮಾಗಳು ನಮ್ಮ ಕಣ್ಮುಂದೆ ಹರಿದಾಡಲು ಶುರುವಿಟ್ಟುಕೊಳ್ಳುವ ದಿನಗಳು ದೂರವಿಲ್ಲ. ನಮ್ಮೂರ ಸಿನಿಮಾ ಟಾಕೀಸಿನಲ್ಲಿ ಸಿನಿಮಾ ನೋಡಿ, ಯಾರೇ ಕೂಗಾಡಲಿ, ಊರೇ ಹೋರಾಡಲಿ ನಿನ್ನ ನೆಮ್ಮದಿಗೆ ಭಂಗವಿಲ್ಲ… ಹಾಡು ಗುನುಗುತ್ತ ನಲಿಯುತ್ತಿದ್ದ ದಿನಗಳಿಂದ ನಾವೆಲ್ಲ ದೂರ ಸರಿದು ಐನಾಕ್ಸ್, ಮಾಲ್ ಗಳಲ್ಲಿ ಕಡ್ಡಾಯವಾಗಿ ಪಾಪಕಾರ್ನ್, ಪೆಪ್ಸಿ ಜತೆಗೆ ಸಿನಿಮಾ ಸವಿದು ಗ್ಲೋಬಲ್ ಪರ್ಸಸ್ಪೆಕ್ಟಿವ್ ಮನದೊಳಕ್ಕಿಳಿಸುವುದು ಶುರುವಾಗಲಿದೆ. ಅಷ್ಟಕ್ಕೂ ನಮ್ಮದು ಅನ್ನೋದು ನಮಗಾದರೂ ಎಲ್ಲಿತ್ತು? ಏನಿದ್ದರೂ ಪರ್ಷಿಯನ್ನರು, ಬ್ರಿಟಿಷರು ಮತ್ತಿತರರಿಂದ ಕಲಿತಿದ್ದು, ಪಡೆದಿದ್ದು… ಇನ್ನು ಅದಕ್ಕೆ ಮತ್ತಷ್ಟು ಸೇರುತ್ತಿದೆ. ಆ ನೆಲೆಯಲ್ಲಿ ನಾವೆಲ್ಲ ಗ್ಲೋಬಲ್ ಸಿಟಿಜನ್ ಆಗುತ್ತಿದ್ದೇವೆ. ಪರಿಪೂರ್ಣತೆಯತ್ತ ಸಾಗುವುದು ಎಂದರೆ ಇದೇನಾ?
ಲೈಫ್ ಆಫ್ ಪೈ… ಸಿನಿಮಾ ಮೇಕಿಂಗ್ ಸೊಗಸಾಗಿದೆ. ವಾಟರ್ ವರ್ಲ್ಡ್ ನಷ್ಟು ಮಾನವೀಯವಾಗಿ ನನ್ನನ್ನು ಸಿನಿಮಾ ತೊಡಗಿಸಿಕೊಳ್ಳಲಿಲ್ಲ. ಆದರೂ ಸಿನಿಮಾದ ಮೂಲಕ ಹೇಳಬಯಸಿದ ಆಶಯ ನನ್ನ ಹಿಡಿದಿಟ್ಟಿತು.






0 Comments