ಆಮ್ ಆದ್ಮಿಗೆ ಪಕ್ಷ ಬೇಡ ಪರಿಹಾರ ಬೇಕು
ಭಾರತದ ರಾಜಕಾರಣದಲ್ಲಿ ರಾಜಕೀಯ ಪಕ್ಷ ಸ್ಥಾಪಿಸುವುದೆಂದರೆ ಷಾಪಿಂಗ್ ಮಾಲ್ನಲ್ಲಿ ಸರಕುಗಳನ್ನು ಖರೀದಿಸುವಷ್ಟೇ ಸುಲಭ ಎನಿಸಿದೆ. ರಾಜಕೀಯಕ್ಕೆ ಬೇಕಾದ ಸಿದ್ಧವಸ್ತುಗಳು ಈ ಮಾಲ್ನ ಕಪಾಟುಗಳಲ್ಲಿ ವ್ಯವಸ್ಥಿತವಾಗಿ ಜೋಡಿಸಲ್ಪಟ್ಟಿವೆ. ರಾಜಕೀಯ ನಾಯಕರುಗಳು ಅಥವಾ ಜನಪರ ಹೋರಾಟಗಾರರು ತಮಗೆ ಬೇಕಾದ ಸರಕುಗಳನ್ನು, ಪರಿಕರಗಳನ್ನು ತಳ್ಳುಗಾಡಿಯಲ್ಲಿ ತುಂಬಿಸಿಕೊಂಡು ತಮ್ಮದೇ ಆದ ಒಂದು ನಿದರ್ಿಷ್ಟ ಸ್ವರೂಪದ ಪಕ್ಷವನ್ನು ಸ್ಥಾಪಿಸಲು ಭೂಮಿಕೆ ಸಿದ್ಧವಾಗಿದೆ. ಕನರ್ಾಟಕದ ಸಂದರ್ಭದಲ್ಲಿ ಶ್ರೀರಾಮುಲು ಅವರ ಬಿಎಸ್ಆರ್ ಪಕ್ಷ, ಅಶೋಕ್ ಖೇಣಿಯವರ ಕನ್ನಡ ಮಕ್ಕಳ ಪಕ್ಷ, ಯಡಿಯೂರಪ್ಪನವರ ಕೆಜೆಪಿ ಪಕ್ಷಗಳು ಉದಯಿಸಿರುವ ರೀತಿ ನೋಡಿದರೆ ಭಾರತದ ಈ ಸಂದರ್ಭವನ್ನು ಗ್ರಹಿಸಬಹುದು. ಈ ಸಂದರ್ಭದಲ್ಲೇ ಭ್ರಷ್ಟಾಚಾರ ವಿರುದ್ಧ ಭಾರತ ಸಂಘಟನೆಯ ಅರವಿಂದ ಕೇಜ್ರಿವಾಲ್ ತಮ್ಮ ನೂತನ ಪಕ್ಷ ಆಮ್ ಆದ್ಮಿ ಪಕ್ಷವನ್ನು ಸ್ಥಾಪಿಸಿದ್ದಾರೆ. ಭಾರತದ ಸಂವಿಧಾನಕ್ಕೆ ಅಂಗೀಕಾರ ದೊರೆತ ದಿನದಂದೇ ತಮ್ಮ ಪಕ್ಷವನ್ನು ಸ್ಥಾಪಿಸುವ ಮೂಲಕ ಕೇಜ್ರಿವಾಲ್ ತಾವು ಎಷ್ಟೇ ವಿಭಿನ್ನ ರಾಜಕಾರಣಿಯಾದರೂ ಜನಪ್ರಿಯತೆ, ಜನಾಕರ್ಷಣೆ ಮತ್ತು ಘೋಷಣೆಗಳ ಚೌಕಟ್ಟಿನಿಂದ ಹೊರಬಂದಿಲ್ಲ ಎಂದು ನಿರೂಪಿಸಿದ್ದಾರೆ. ಪಕ್ಷದ ಹೆಸರೇ ಇದರ ದಿಕ್ಸೂಚಿಯಾಗಿದೆ.
ಬಹುದಿನಗಳ ನಿರೀಕ್ಷೆಯ ನಂತರ ಸಾಮಾಜಿಕ ಕಾರ್ಯಕರ್ತ ಹಾಗೂ ಭ್ರಷ್ಟಾಚಾರ ವಿರೋಧಿ ಅಂದೊಲನ ಕಾರ್ಯಕರ್ತ ಅರವಿಂದ ಕೇಜ್ರಿವಾಲ್ ಅವರ ನೂತನ ಪಕ್ಷ ಉದಯಿಸಿದೆ. ಆಮ್ ಆದ್ಮಿ ಪಾಟರ್ಿ ಅಥರ್ಾತ್ ಜನಸಾಮಾನ್ಯರ ಪಕ್ಷ ಎಂದು ಹೆಸರಿಡುವ ಮೂಲಕ ಕೇಜ್ರಿವಾಲ್ ತಮ್ಮ ಪಕ್ಷದ ಮೂಲ ಸಿದ್ಧಾಂತವನ್ನು ಸ್ಪಷ್ಟಪಡಿಸಿದ್ದರೂ ಕೇವಲ ಪಕ್ಷದ ಹೆಸರಿನಿಂದ ಮಾತ್ರ ಸಿದ್ಧಾಂತ, ತತ್ವ ಮತ್ತು ಆದರ್ಶಗಳು ನಿರೂಪಿತವಾಗುವುದಿಲ್ಲ ಎಂಬ ಸತ್ಯವನ್ನು ಕೇಜ್ರಿವಾಲ್ ಮತ್ತು ತಂಡದವರು ಗ್ರಹಿಸುವುದು ಅಗತ್ಯವಾಗಿದೆ. ಭಾರತದ ರಾಜಕಾರಣದಲ್ಲಿ ಪ್ರತಿಯೊಂದು ಪಕ್ಷವೂ ಸಹ ಆಮ್ ಆದ್ಮಿಗಾಗಿಯೇ ಜನಿಸಿದೆ. ಅಥವಾ ಹಾಗೆ ನಂಬಲಾಗಿದೆ. ನಿಜ, ಕೇಜ್ರಿವಾಲ್ ಹೇಳಿರುವಂತೆ ಈ ನೂತನ ಪಕ್ಷ ಭಾರತದಲ್ಲಿ ರಾಜಕೀಯವನ್ನು ಗ್ರಹಿಸುವ ಪರಿಯನ್ನೇ ಬದಲಾಯಿಸಲಿದೆ. ರಾಜಕೀಯ ಎಂದರೆ ಹೊಲಸು, ಭ್ರಷ್ಟಾಚಾರಗಳ ಆಗರ, ಸ್ವಜನಪಕ್ಷಪಾತದ ಮಾರ್ಗ, ರಾಜೀ ಸೂತ್ರಗಳ ಮಾರ್ಗ ಎಂದೆಲ್ಲಾ ಸಾರ್ವಜನಿಕರ ಅಭಿಪ್ರಾಯ ಮೂಡಿರುವುದೂ ಸತ್ಯವೇ ಆದರೂ ರಾಜಕೀಯ ಎಂದರೆ ಅಷ್ಟೇ ಅಲ್ಲ.
ರಾಜಕಾರಣ ಎಂದರೆ ಅಧಿಕಾರ ಹಿಡಿದು ಆಡಳಿತ ವ್ಯವಸ್ಥೆಯನ್ನು ನಿರ್ವಹಿಸುವುದೇ ಅಲ್ಲ . ಅಧಿಕಾರ ರಾಜಕಾರಣದ ಆಚೆಗೂ ಒಂದು ಜನಪರ ರಾಜಕಾರಣದ ಹೆಜ್ಜೆ ಗುರುತುಗಳು ಇರುತ್ತವೆ. ಬಹುಶಃ ಅಣ್ಣಾ ಹಜಾರೆ ತಮ್ಮ ಜನಾಂದೋಲನವನ್ನು ಆರಂಭಿಸುವ ಹಂತದಲ್ಲಿ ಈ ಸತ್ಯವನ್ನು ಕಂಡಿದ್ದಿರಬೇಕು. ಆದರೆ ತಮ್ಮ ಸುತ್ತಲಿನ ವಂಧಿಮಾಗಧರ ಹಾವಳಿಯಿಂದ ಹಜಾರೆಯ ಗ್ರಹಿಕೆಯಲ್ಲಿ ತಪ್ಪಾಗಿ ತಮ್ಮ ಮೂಲ ಉದ್ದೇಶವನ್ನೇ ಮರೆತು, ಕೊನೆಗೆ ವಿಭಜನೆಯ ಹಂತ ತಲುಪಿರಬೇಕು. ಚುನಾವಣೆ ಮತ್ತು ಅಧಿಕಾರ ರಾಜಕಾರಣದ ಚೌಕಟ್ಟಿನಿಂದ ಹೊರತಾದ ರಾಜಕಾರಣದಲ್ಲಿ ಪಕ್ಷದ ಪ್ರಸ್ತುತತೆ ಅರಿವಾಗುವುದು ಅಂತಿಮ ಹೆಜ್ಜೆಯಾಗಿಯೆ ಹೊರತು ಆರಂಭಿಕ ಹೆಜ್ಜೆಯಾಗಿ ಅಲ್ಲ. ಇಲ್ಲಿ ದೇಶದ ಜನಸಾಮಾನ್ಯರ ಅಥವಾ ಆಮ್ ಆದ್ಮಿಯ ನಾಡಿ ಮಿಡಿತವನ್ನು ಅರಿಯುವ ಪ್ರಕ್ರಿಯೆಯಿಂದ ಪಯಣ ಆರಂಭವಾಗುತ್ತದೆ. ಹಾಗಾದರೆ ಆರು ದಶಕಗಳ ಸ್ವತಂತ್ರ ಆಳ್ವಿಕೆಯನ್ನು ಕಂಡ ನಂತರವೂ ದೇಶದ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ವ್ಯವಸ್ಥೆಯ ಬಗ್ಗೆ ಭ್ರಮನಿರಸನ ಹೊಂದಿರುವ ಅಸಂಖ್ಯಾತ ಜನತೆಯ ನಾಡಿ ಮಿಡಿತವೇನು ?
ಈ ಬೃಹತ್ ಪ್ರಶ್ನೆಯೊಂದಿಗೆ ಮೊದಲ ಹೆಜ್ಜೆ ಇಡದ ಯಾವುದೇ ರಾಜಕೀಯ ವ್ಯಕ್ತಿ ಅಥವಾ ಪಕ್ಷ ಊರ್ಜಿತವಾಗುವುದಿಲ್ಲ. ಆದರು ಘೋಷಣೆಗಳ ಛಾಯೆಯಲ್ಲೇ ಕಳೆದುಹೋಗುತ್ತಾರೆ. ವಾಟಾಳ್ ನಾಗರಾಜ್, ಸುಬ್ರಮಣ್ಯ ಸ್ವಾಮಿ ಕೆಲವು ನಿದರ್ಶನಗಳಷ್ಟೇ. ಇವರಲ್ಲಿ ಎಷ್ಟೇ ಬದ್ಧತೆ, ಪ್ರಾಮಾಣಿಕತೆ, ಜನಪರ ಕಾಳಜಿ ಇದ್ದರೂ ಜನರನ್ನು ಆಗಾಗ್ಗೆ ಬಡಿದೆಬ್ಬಿಸುವುದನ್ನು ಮೀರಿ ಏನನ್ನೂ ಸಾಧಿಸಲಾಗುವುದಿಲ್ಲ. ಆಗಿಯೂ ಇಲ್ಲ. ಬಹುಶಃ ಕೇಜ್ರಿವಾಲ್ ಈ ನಿಟ್ಟಿನಲ್ಲೇ ಸಾಗುವ ಸಾಧ್ಯತೆಗಳು ಕಂಡುಬರುತ್ತಿವೆ. ಇಲ್ಲಿ ದೇಶದ ಸಾರ್ವಭೌಮ ಜನತೆಯ ಮನದಾಳದ ಇಂಗಿತಗಳನ್ನು ಅರಿತು, ಜನಸಾಮಾನ್ಯರು ಎದುರಿಸುವ ಸಮಸ್ಯೆಗಳ ಆಳವನ್ನು ಅರಿತು. ಸಂವಿಧಾನದ ಚೌಕಟ್ಟಿನಲ್ಲಿ ಈ ಸಮಸ್ಯೆಗಳಿಗೆ ಶಾಶ್ವತವಲ್ಲದಿದ್ದರೂ ಸಮಯಕ್ಕೆ ತಕ್ಕಂತೆ ಪರಿಹಾರಗಳನ್ನ ಒದಗಿಸುವ ಒಂದು ಸಾರ್ವಜನಿಕ ವೇದಿಕೆಯಾಗಿ ರಾಜಕಾರಣವನ್ನು ನೋಡಬೇಕಿದೆ. ನೆಹರೂ, ಶಾಸ್ತ್ರಿ ಪ್ರತಿನಿಧಿಸಿದ ರಾಜಕೀಯ ವ್ಯವಸ್ಥೆಯನ್ನ ಪುನರ್ ಸೃಷ್ಟಿಸುವ ಯಾವುದೇ ಪ್ರಯತ್ನಗಳು ಹತಾಶ ಸ್ಥಿತಿ ತಲುಪುತ್ತವೆ. ಕಾರಣ ನೆಹರೂ ಕಾಲದ ರಾಜಕಾರಣವನ್ನು ಇಂದು ಮರಳಿ ತರಲಾಗುವುದಿಲ್ಲ. ಶಾಸ್ತ್ರಿಯವರಂತಹ ವ್ಯಕ್ತಿಗಳ ಮರುಸೃಷ್ಟಿ ಸಾಧ್ಯವಿಲ್ಲ. ಇಂದಿರಾಗಾಂಧಿಯಂತಹ ದಕ್ಷ ಆಡಳಿತಗಾರ್ತಿಯನ್ನು ನಿರೀಕ್ಷಿಸಲಾಗುವುದಿಲ್ಲ. ಆದರೂ ದೇಶದ ರಾಜಕಾರಣದಲ್ಲಿ ಹೊಸ ಬೆಳಕನ್ನು ಕಾಣುವ ಆಶಯಗಳನ್ನು ಹೊತ್ತು ಒಂದು ನೂತನ ರಾಜಕೀಯ ಪಕ್ಷವನ್ನು ಕಟ್ಟುವುದೇ ಆದರೆ, ಆ ಪಕ್ಷದ ಮೂಲ ತಳಹದಿಯಾಗಿ ಒಂದು ತತ್ವ, ಸಿದ್ಧಾಂತ ಮತ್ತು ಚೌಕಟ್ಟು ಅತ್ಯಗತ್ಯವಾಗಿರುತ್ತದೆ.
ಇಂದಿನ ರಾಜಕೀಯ ಸ್ಥಿತ್ಯಂತರಗಳಿಗೆ ಸುಭದ್ರ ಬುನಾದಿ ನಿರ್ಮಾಣವಾಗಿದ್ದೇ ನೆಹರೂ ಕಾಲಘಟ್ಟದಲ್ಲಿ ನಂತರ ಇಂದಿರಾ ಗಾಂಧಿಯ ಆಳ್ವಿಕೆಯಲ್ಲಿ ಎಂಬ ಸಂಗತಿಯನ್ನು ಅಲಕ್ಷಿಸುವಂತಿಲ್ಲ. ಯಾವುದೇ ಒಂದು ಸಮಾಜದಲ್ಲಿನ ಆಗುಹೋಗುಗಳು, ವಿದ್ಯಮಾನಗಳು ಧುತ್ತೆಂದು ಪ್ರತ್ಯಕ್ಷವಾಗುವುದಿಲ್ಲ. ಇತಿಹಾಸದ ಕಾಲಘಟ್ಟಗಳಿಂದ ಎಲ್ಲೋ ಒಂದು ಕಡೆ ವಿಭಿನ್ನ ಆಯಾಮಗಳನ್ನು ಅರಸುತ್ತಾ ತಮ್ಮದೇ ಆದ ಮಾರ್ಗಗಳನ್ನು ನಿರ್ಮಿಸಿಕೊಳ್ಳುವ ರಾಜಕೀಯ-ಸಾಮಾಜಿಕ ವ್ಯವಸ್ಥೆಗಳು ಒಂದು ನಿರ್ದಿಷ್ಟ ಕಾಲಾವಧಿಯಲ್ಲಿ ಹೊಸ ವಾಸ್ತವತೆಗಳಿಗೆ ಅನುಗುಣವಾಗಿ ತನ್ನದೇ ಆದ ವಿಶಿಷ್ಟ ಸ್ವರೂಪವನ್ನು ಪಡೆದುಕೊಳ್ಳುತ್ತವೆ. ಇಂದಿರಾ ಕಾಲದ ತುರ್ತುಪರಿಸ್ಥಿತಿ, 1990ರ ಕೋಮುವಾದಿ ರಾಜಕಾರಣ ಮತ್ತು ಪ್ರಸಕ್ತ ನವ ಉದಾರವಾದಿ ನೀತಿಗಳು ಈ ನಿಟ್ಟಿನಲ್ಲಿ ಸ್ಪಷ್ಟ ಉದಾಹರಣೆಗಳು. ಭಾರತದ ರಾಜಕಾರಣದಲ್ಲಿ ಭ್ರಷ್ಟಾಚಾರ ಇಂದು ಆಲದ ಮರದಂತೆ ಎಲ್ಲೆಡೆ ಬೇರುಗಳನ್ನು ಬಿಟ್ಟಿದ್ದರೆ ಇದರ ಕುಡಿ ಒಡೆದದ್ದು ಸ್ವಾತಂತ್ರ್ಯಾನಂತರದ ಆರಂಭಿಕ ದಿನಗಳಲ್ಲೇ ಎಂಬ ಅಂಶವನ್ನು ಅಲ್ಲಗಳೆಯುವಂತಿಲ್ಲ. ಹಾಗೊಮ್ಮೆ ಅಲ್ಲಗಳೆದರೆ ಅದು ಇತಿಹಾಸದ ಅವಗಣನೆಯಾಗುತ್ತದೆ ಅಥವಾ ಇತಿಹಾಸ ಪ್ರಜ್ಞೆಯ ಕೊರತೆಯ ಸಂಕೇತವಾಗುತ್ತದೆ.
ಪ್ರಸ್ತುತ ರಾಜಕಾರಣಿಗಳ ಭ್ರಷ್ಟಾಚಾರ ಹಗರಣಗಳನ್ನೇ ದೇಶದ ರಾಜಕೀಯ ವ್ಯವಸ್ಥೆಯ ಪ್ರಮುಖ ಸವಾಲು ಎಂದು ಪರಿಗಣಿಸಿ ಮುನ್ನಡೆದಿರುವ ಕೇಜ್ರಿವಾಲ್ ತಂಡ ಹೈಕಮಾಂಡ್ ಇಲ್ಲದ ರಾಜಕೀಯ ಪಕ್ಷ ಸ್ಥಾಪಿಸಿದೆ. ಆದರೆ ಪಕ್ಷದ ಮೊತ್ತ ಮೊದಲ ರಾಷ್ಟ್ರೀಯ ಕಾರ್ಯಕಾರಿಣಿಯನ್ನು ಚುನಾಯಿಸಿರುವುದು ಯಾರೆಂದು ಬಹಿರಂಗಪಡಿಸಿಲ್ಲ. ಪಕ್ಷದ ಸಂಸ್ಥಾಪನೆಯ ರೂವಾರಿಗಳಿಗೆ ಈ ಸಮಿತಿಯಲ್ಲಿ ಅವಕಾಶ ನೀಡಲೇಬೇಕೆಂಬ ರಾಜಕೀಯ ನಿಲುವನ್ನೇ ಕೇಜ್ರಿವಾಲ್ ತಂಡವೂ ಪ್ರದಶರ್ಿಸಿರುವುದು ಸಮಿತಿಯ ಸಂರಚನೆಯಲ್ಲೇ ಕಾಣುತ್ತಿದೆ. ಕಾಂಗ್ರೆಸ್ ಪಕ್ಷವನ್ನು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಯಾವುದೇ ಅಹಮಿಕೆ, ನಾಯಕತ್ವದ ಅಹಂಭಾವವಿಲ್ಲದೆ ಮುನ್ನಡೆಸಿದ ಗಾಂಧಿ ಸ್ವಾತಂತ್ರ್ಯ ಬಂದಕೂಡಲೇ ಅಧಿಕಾರ ರಾಜಕಾರಣದಿಂದ ದೂರ ಉಳಿದು, ಪಕ್ಷದಿಂದಲೂ ದೂರ ಉಳಿದಿದ್ದನ್ನು ಗಾಂಧಿ ಟೋಪಿಯ ಕೇಜ್ರಿವಾಲ್ ಬಹುಶಃ ಗಮನಿಸಿಲ್ಲ ಎನಿಸುತ್ತದೆ. ಗಮನಿಸಿದ್ದಲ್ಲಿ ತಾವು ರಾಷ್ಟ್ರೀಯ ಸಂಚಾಲಕರಾಗುತ್ತಿರಲಿಲ್ಲ. ಆಯ್ಕೆಯನ್ನು ಜನತೆಗೆ ಒಪ್ಪಿಸುತ್ತಿದ್ದರು.
ಇದನ್ನೇ ರಾಜಕಾರಣ ಎನ್ನುವುದು. ಕೇಜ್ರಿವಾಲ್ ಯಾವುದನ್ನು ಬದಲಾಯಿಸಲು ಹೊರಟಿದ್ದಾರೋ ಅದೇ ಪ್ರಕ್ರಿಯೆಗೆ ಬಲಿಯಾಗುತ್ತಿರುವುದು ವಿಪಯರ್ಾಸ. ಭ್ರಷ್ಟಾಚಾರ ಹಗರಣಗಳ ಸುತ್ತ ನಡೆಯುವ ಪ್ರಹಸನಗಳು ಜನಾಕರ್ಷಣೆಯ ಕೇಂದ್ರ ಬಿಂದುಗಳಾಗುತ್ತವೆ. ಆದರೆ ರಾಜಕೀಯ ಸಿದ್ಧಾಂತದ ಬುನಾದಿಯಾಗುವುದಿಲ್ಲ. ಈ ದೇಶದ ಸಮಸ್ಯೆ ಭ್ರಷ್ಟಾಚಾರ ಮಾತ್ರವಲ್ಲ. ಆರು ದಶಕಗಳ ಕಾಲ ಭ್ರಷ್ಟಾಚಾರವನ್ನು ಎದುರಿಸಿ ಭಾರತ ಸದೃಢ ರಾಷ್ಟ್ರವಾಗಿ ಮುನ್ನಡೆದಿದೆ. ಆದರೆ ಕೆಲವೇ ವರ್ಷಗಳ ಕೋಮುವಾದ, ಫ್ಯಾಸಿಸಂ, ಭಯೋತ್ಪಾದನೆಗಳು ದೇಶದ ಬುಡವನ್ನೇ ಅಲುಗಾಡಿಸಿವೆ. ಶತಮಾನಗಳ ಜಾತಿ ದೌರ್ಜನ್ಯ, ತಾರತಮ್ಯಗಳು ದೇಶವನ್ನು ಸುಭದ್ರವಾಗಿರಿಸಿವೆ. ಆದರೆ ಜಾತಿ ದೌರ್ಜನ್ಯದ ವಿರುದ್ಧ ನಡೆದ ಕೆಲವೇ ಜನಾಂದೋಲನಗಳು ಇಡೀ ಸಾಮಾಜಿಕ ವ್ಯವಸ್ಥೆಯನ್ನೇ ಏರುಪೇರು ಮಾಡುವ ಮಟ್ಟ ತಲುಪಿವೆ. ಪ್ರಭುತ್ವ ರಾಜಕಾರಣ ರಾಜಪ್ರಭುತ್ವ ಕಾಲಘಟ್ಟದಿಂದಲೂ ಬಲಿಷ್ಠವಾಗಿದ್ದರೂ, ಪ್ರಭುತ್ವದ ಪರಮಾಧಿಕಾರವನ್ನು ಪ್ರಶ್ನಿಸುವ ಸಣ್ಣ ಹೋರಾಟಗಳೂ ಸಹ ಆಳ್ವಿಕರನ್ನು ಕಂಗೆಡಿಸಿವೆ. ಈ ವಿದ್ಯಮಾನಗಳನ್ನು ಗಂಭೀರವಾಗಿ, ಸೂಕ್ಷ್ಮವಾಗಿ ಗಮನಿಸದೆ ಹೋದಲ್ಲಿ ಯಾವುದೇ ರಾಜಕೀಯ ಪಕ್ಷವೂ ತಾಕರ್ಿಕ ಅಂತ್ಯ ತಲುಪುವುದು ಅಸಾಧ್ಯ.
ಆದರೆ ಕೇಜ್ರಿವಾಲ್ ತಂಡದ ನೂತನ ಪಕ್ಷದಲ್ಲಿ ಈ ಯಾವುದೇ ಲಕ್ಷಣಗಳು ಕಂಡುಬರುತ್ತಿಲ್ಲ. ಭ್ರಷ್ಟಾಚಾರ ಹಗರಣ ಕಂಡೊಡನೆ ಚಂಗನೆ ಪ್ರತ್ಯಕ್ಷವಾಗಿ ಸಾರ್ವಜನಿಕರ ಮುಂದೆ ತಮ್ಮ ಪಕ್ಷದ ಸಾಮಥ್ರ್ಯವನ್ನು ಪ್ರದರ್ಶಿಸುವ ಪ್ರಹಸನಗಳು ಪ್ರಬುದ್ಧ ರಾಜಕೀಯ ಮಾರ್ಗವಾಗಿ ತೋರುವುದಿಲ್ಲ. ಭ್ರಷ್ಟಾಚಾರವನ್ನೂ ಮೀರಿದ ಸಮಸ್ಯೆಗಳು ದೇಶದ ರಾಜಕಾರಣವನ್ನು ಕಾಡುತ್ತಿವೆ ಎಂಬ ಸಂಗತಿಯನ್ನು ಕೇಜ್ರಿವಾಲ್ ಮನಗಾಣಬೇಕಿದೆ. ಚುನಾವಣಾ ಕೇಂದ್ರಿತ ರಾಜಕಾರಣ ರಾಜಕೀಯ ಧೃವೀಕರಣದ ಮತ್ತೊಂದು ಆಯಾಮವಾಗಬಹುದೇ ಹೊರತು, ಹೊಸ ರಾಜಕೀಯ ಸಂಸ್ಕೃತಿಗೆ ಪೂರಕವಾದ ವಾತಾವರಣ ಸೃಷ್ಟಿಸುವುದಿಲ್ಲ. ಹಾಗೆಯೇ ವಿಷಯಾಧಾರಿತ ತತ್ವ ಸಿದ್ಧಾಂತಗಳು ತಾತ್ಕಾಲಿಕವಾಗಿ ಜನಾಕರ್ಷಣೆಯ ಕೇಂದ್ರಗಳಾಗಿ ಪರಿಣಮಿಸಬಹುದು. ಆದರೆ ದೇಶದ ಸಾರ್ವಭೌಮ ಪ್ರಜೆಗಳ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಒದಗಿಸಲಾರವು. ಈ ನಿಟ್ಟಿನಲ್ಲಿ ಕೇಜ್ರಿವಾಲ್ ಬಹಳ ದೂರ ಕ್ರಮಿಸಬೇಕಿದೆ. ಯಶಸ್ಸಿನ ಹಾರೈಕೆಗಳೊಂದಿಗೇ ಎಚ್ಚರಿಕೆ ನೀಡುವುದೂ ಪ್ರಜ್ಞಾವಂತ ಸಮಾಜದ ಕರ್ತವ್ಯ ಅಲ್ಲವೇ ?






0 Comments