ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’.. ಆ ಹುಡುಗಿಯನ್ನು ‘ರೇಪ್ ಹುಡುಗಿ’ ಎಂದೇ ಕರೆಯುತ್ತಿದ್ದರು’ – ಜಯಶ್ರೀ ಕಾಸರವಳ್ಳಿ

ಅವಳನ್ನು ಎಲ್ಲರೂ ಗುರಿತಿಸೋದೇ ಹಾಗೆ

ಜಯಶ್ರೀ ಕಾಸರವಳ್ಳಿ

ಗಾಂಧಿ ಹುಟ್ಟಿದ ನಾಡಿನಲ್ಲಿ ಅಹಿಂಸೆ, ತಾಳ್ಮೆ, ಸಂಯಮ ಎಂಬ ಪರಮೋಚ್ಛ ಪದಗಳೆಲ್ಲಾ ರಾತ್ರಿ ಬೆಳಗಾಗುವುದರಲ್ಲಿ ಅರ್ಥ ಕಳೆದುಕೊಳ್ಳುತ್ತಿರುವ ಅರ್ಥಹೀನ ಪಲ್ಲಟದಲ್ಲಿ ಆಡುವ ಮಾತಿಗೆ ಅರ್ಥವಿದೆಯೇ ಅನ್ನುವುದಕಿಂತ ಆಕ್ರೋಶವಿಲ್ಲದೇ ಜನಸಾಮಾನ್ಯರಿಗೆ ಬದುಕಲಿಕ್ಕೆ ಅನ್ಯ ಮಾರ್ಗವಿಲ್ಲವೆಂಬ ನೆಲೆಗಟ್ಟಿಗೆ ಬಂದು ತಲುಪಿದ್ದೇವೆ ಎಂದರೇ ಹೆಚ್ಚು ಸಮಂಜಸ.

ಒಂದುಕಡೆ ತಿಳಿಗೇಡಿಗಳ ಕುತಂತ್ರಕ್ಕೆ ಘನವಂತ ರಾಜಮರ್ಯಾದೆ ಬೀದಿಗೆಳೆದೆನೆಂಬ ಅವಮಾನ ಸಹಿಸಲಾಗದೇ ಗಂಡ ಮಕ್ಕಳೆಂಬ ವ್ಯಾಮೋಹವನ್ನೂ ತ್ಯಜಿಸಿ ಅತ್ಮಹತ್ಯೆಗೆ ಶರಣಾಗುವ ನಿಷ್ಪಾಪ ಮುಗ್ಧ ಹೆಣ್ಣಿನ ಕತೆಯಿನ್ನು ಹೃದಯವಿರುವವರ ಹೃದಯದಲ್ಲಿ ಶಾಶ್ವತವಾಗಿ ಉಳಿದು ಇನ್ನೂ ಮಿಡಿಯುತ್ತಿರುವಾಗಲೇ,ಅದಕ್ಕಿಂತ ಘೋರವಾದ,ಬೀಭತ್ಸವಾದ ಬರ್ಬರ ಘಟನೆ ಇಡೀ ದೇಶವನ್ನೇ ನಡುಗಿಸುತ್ತಿದೆ! ಇದರ ನಡುವೆಯೇ ಗುಜರಾತ್ನಲ್ಲಿ ನರೇಂದ್ರ ಮೋದಿಯ ವಿಜಯೋತ್ಸವ! ಸಚಿನ್ನ ಅಸಫಲತೆ, ದೋಣಿ ಕಫ್ತಾನ್ಗಿರಿಯ ಕಳಪೆ ಪ್ರದರ್ಶನ ಎಂದು ದೇಶಕ್ಕೆ ದೇಶವೇ ಚಿಂತಾಕ್ರಾಂತರಾಗಿ ಓಲಾಡುತ್ತಿರುವಾಗ ಒಂದಕ್ಕೊಂದು ಸಂಬಧವಿಲ್ಲದಂತೆ ಹರಿದು ಚಿಂದಿಯಾದ ಬದುಕಿನ ಮಹಾಯಾತ್ರೆಯಲ್ಲಿ ನಮ್ಮಂತಹ ಜನಸಾಮಾನ್ಯರು ಎಲ್ಲಿ-ಹೇಗೆ ಬದುಕಬೇಕೋ ತಿಳಿಯದೇ ಸುಮ್ಮನೆ ಹಳಹಳಿಸುತ್ತಾ ದಿನದೂಡುತ್ತಿರುತ್ತೇವೆ. ದಿನ ಬೆಳಗಾದರೆ ಏರುವ ತುಟ್ಟಿ ಧಾರಣೆಯಲ್ಲಿ ಬಂಡಿ ಎಳೆಯುವುದಕ್ಕೇ ಮುಷ್ಠಿ ಜೀವ ಸಾಲದೆಂಬ ಅನಿಶ್ಚಿತ ಬದುಕಿನ ಅನಿವಾರ್ಯ ಸ್ಥಿತಿಯಲ್ಲಿ ಬದುಕುವುದೇ ದುಸ್ಥರವಾಗಿರುವಾಗ ನಮ್ಮ ಒಂದೇ ಒಂದು ಮಗುವಿಗೂ ಸಭದ್ರವಾದ ಭವಿಷ್ಯವಿಲ್ಲವೆಂದಾದರೆ?ನಮ್ಮೆಲ್ಲರ ಬದುಕಿನ ಸಹಜ ಹಂಬಲದ ಅತಿ ಚಿಕ್ಕ ಕನಸಿನ ಕೂಸು ಚೊಕ್ಕವಾಗಿ ಉಳಿಯುವುದಿಲ್ಲವೆಂದರೆ? ಪಟ್ಟಭದ್ರ ಹಿತಾಶಕ್ತಿಗಳಿಗೆ ನಮ್ಮ ನಿರಂತರ ಪ್ರಲೋಭನೆಗಳು ಅರ್ಥವಂತಿಗೆಯಿಂದ ಕೂಡಿದ್ದು ಅನ್ನುವುದು ಅರ್ಥವಾಗುವುದಾದರೂ ಎಂದು?

ದಿನಚರಿಯ ಅಂಗವಾಗಿಹೋದ ಒಂದು ಅತ್ಮಹತ್ಯೆ,ಒಂದು ರೇಪ್, ಒಂದು ಕೊಲೆಗೆ ಸಮುದಾಯಕ್ಕೆ ಸಮುದಾಯವೇ ಬಂಡೆದ್ದರೂ, ಮಾದ್ಯಮಗಳು ಇಷ್ಟೆಲ್ಲಾ ಎಚ್ಚೆತ್ತು ಪುಂಖಾನುಪುಂಖ ವರದಿ ಒಪ್ಪಿಸಿದರೂ ಯಾವ ಬದಲಾವಣೆಯೂ ಕಾಣಲು ಅಸಾದ್ಯವೆನ್ನಿಸುವಂತಹ ವ್ಯವಸ್ಥಿತ ನಾಗರೀಕ ಸಮಾಜದಲ್ಲಿ ಇಂದು ನಾವಿದೀವಿ. ಕಡೇಪಕ್ಷ ಜನಸಾಮಾನ್ಯರಲ್ಲಿ ಸಂಪೂರ್ಣ ನಶಿಸಿಹೋಗುತ್ತಿದ್ದ ತಮ್ಮ ಜನ್ಮ ಸಿದ್ಧ ಹಕ್ಕಿನ ಹೋರಾಟದ ಅರಿವನ್ನು ಮೂಡಿಸುವುದರಲ್ಲಿ ಅಣ್ಣಾ ಹಜಾರೆ ಮತ್ತು ಅರವಿಂದ್ ಕೇಜ್ರಿವಾಲ್ಅವರು ಪರೋಕ್ಷವಾಗಿಯಾದರೂ ಕಾರಣವಾಗಿರುವುದು ಸಂತಸದ ಸಂಗತಿ.ಮಾಧ್ಯಮಗಳು ಎಷ್ಟೇ ಚಿರಿಪಿರಿ ಎಂದು ಚಿಟಿಗುಟ್ಟಿ ಸುದ್ದಿ ಪಿರಿಪಿರಿಯಾಗುವಷ್ಟು ವಟಗುಟ್ಟಿದರೂ ಅಪೇಕ್ಷಿತ ಫಲಿತಾಂಶ ಎಲ್ಲೋ ಇಲ್ಲ. ಆರ್ಭಟದಿಂದ ಬಿತ್ತರಿಸಿದ ಒಂದು ಸುದ್ದಿ ಬಂದಷ್ಟೇ ಶೀಘ್ರದಲ್ಲಿ ನೇಪಥ್ಯ ಸೇರುತ್ತಿದ್ದಂತೇ ಮತ್ತೊಂದು ಬ್ರೇಕಿಂಗ್ ನೀವ್ಸ್ ತಯಾರಾಗಿ ನಿಂತಿರುತ್ತದೆ.

“Sex trafficking has become global epidemic affecting women as well as young boys” ಅಂತ ಅಮೇರಿಕದ ಖ್ಯಾತ ವಿಮನ್ ರೈಟ್ ಆಕ್ಟಿವಿಷ್ಟ್, ಬರಹಗಾರ್ತಿ ಗ್ಲೋರಿಯಾ ಸ್ಟೇನಿಮ್ ಒಂದುಕಡೆ ಹೇಳಿದ್ದಾರೆ.ಇದು ಪ್ರಪಂಚದಾದ್ಯಂತ ಹರಡಿರುವ ಸಾಂಕ್ರಾಮಿಕ ರೋಗ.ಯಾರು,ಯಾವಾಗ,ಎಲ್ಲಿ ಇದಕ್ಕೆ ಬಲಿಯಾಗುತ್ತಾರೆಂದೇ ತಿಳಿಯದಷ್ಟು ಅತಂತ್ರ ಬದುಕಿನ ಅಭದ್ರ ಮೋಟು ಗೋಡೆಯನ್ನೇರಿ ಕುಳಿತ ನಾವು, ಇದರ ಪರಿವೆಯೇ ಇಲ್ಲದೇ ಕನಸಿನ ಭ್ರಮೆಯಲ್ಲಿ ತೇಲಾಡುತ್ತಿರುತ್ತೇವೆ.ಪ್ರಪಂಚದಾದ್ಯಂತ ಪ್ರತಿ ನಿಮಿಷಕ್ಕೆ ಅದೆಷ್ಟೋ ಹೆಣ್ಣುಗಳು ರೇಪ್ಗೆ ಒಳಗಾಗುವ ಇತಿಹಾಸ ಹೊಂದಿರುವ ನಮಗೆ ಸುರಕ್ಷತೆಯಾದರೂ ಎಲ್ಲಿದೆ?ಎಷ್ಟು ಪ್ರಕರಣ ಬೆಳಕಿಗೆ ಬರುತ್ತೆ, ಅದೆಷ್ಟು ಹಾಗೇ ಮುಚ್ಚಿಹೋಗುತ್ತೆ, ಲೆಕ್ಕವಿಟ್ಟವರ್ಯಾರು?

ಇಲ್ಲೊಂದು ನಾನು ಮದರಾಸಿನಲ್ಲಿದ್ದಾಗ ನಡೆದ ಒಂದು ಸಣ್ಣ ಪ್ರಸಂಗವನ್ನು ಪ್ರಸ್ತಾಪಿಸುವುದು ಒಳಿತು. ನಾವು ಮದರಾಸಿಗೆ ಹೋದ ಹೊಸತರಲ್ಲಿ ಪರಿಚಯವಾದ ಕನ್ನಡ ಕುಟುಂಬವಿದ್ದ ಒಂದು ಅಪಾರ್ಟ್ ಮೆಂಟ್ನಲ್ಲಿ, ಅವರ ಫ್ಲಾಟ್ ಪಕ್ಕದ ಮನೆಯಲ್ಲಿ ಹದಿನೈದು ವರುಷದ ಹುಡುಗಿ ಒಬ್ಬಳಿದ್ದಳು. ಹನ್ನೆರಡು ವರುಷವಿರುವಾಗ ಆ ಹುಡುಗಿ ರೇಪ್ಗೆ ಒಳಗಾಗಿ ಸುದ್ದಿಮಾದ್ಯಮಗಳಲ್ಲಿ ಸಾಕಷ್ಟು ಪ್ರಚಾರವಾಗಿತ್ತು.ಇಡೀ ಅಪಾರ್ಟ್ ಮೆಂಟ್ನಲ್ಲಿ ಆ ಹುಡುಗಿಯನ್ನು ‘ರೇಪ್ ಹುಡುಗಿ’ ಎಂದೇ ಕರೆಯುತ್ತಿದ್ದರು. ‘ಎಂತಹ ಅನ್ಯಾಯ! ಇದರಲ್ಲಿ ಆ ಹುಡುಗಿಯ ತಪ್ಪೇನಿದೆ? ನೀವಾದರೂ ನಿಮ್ಮ ಅಸೋಷಿಯೇಶನ್ನಲ್ಲಿ ಈ ವಿಷಯ ಎತ್ತಿ ಆ ಹುಡುಗಿಯನ್ನು ಎಲ್ಲರ ಹಾಗೆ ಕರೆಯುವ ಹಾಗೆ ಮಾಡಿ’. ಎಂಬ ಅಭಿಪ್ರಾಯವನ್ನ ಆ ಕನ್ನಡದ ಹೆಣ್ಣಿಗೆ ನೀಡಿದೆ. ‘ಅಯ್ಯೋ, ಆಕೇನ ಎಲ್ಲಾ ಗುರಿತಿಸೋದೇ ಹಾಗೆ.ಯಾವಾಗ ನೋಡಿದರೂ ಆ ಹುಡುಗಿ ನಗುತ್ತಾನೇ ಇರುತ್ತೆ.ಅದಕ್ಕಿಲ್ಲದ ಫೀಲಿಂಗ್ ನಿಮಗ್ಯಾಕೆ?’ ಎಂದರು ಆ ಮಹಾತಾಯಿ!

ನಗು ಸಹಜ ಧರ್ಮ ಎಂದ ಕವಿಯನ್ನ ಅಖಾಡಕ್ಕೆ ಕರೆಯಬೇಕು! ಒಂದು ಹೆಣ್ಣಿನ ಮಾನಸಿಕ ಕ್ಷೊಭೆ, ತುಮುಲ,ಭಾವನೆಗಳು,ನಗು ಮೆತ್ತಿದ ಮೊಗದ ಹಿಂದಿನ ಹಿಂಡಿ ಹಿಪ್ಪೆ ಮಾಡುವ ಶಾಶ್ವತ ನೋವಿನ,ತನ್ನದಲ್ಲದ ತಪ್ಪಿಗೆ ಮಸಿ ಬಳಿದ ಚಾರಿತ್ರದ ಬಾಧೆಯನ್ನು ಶಿಲುಬೆಯಂತೆ ನಿರಂತರವಾಗಿ ಹೊರುವ ಅನಿವಾರ್ಯ ಕರ್ಮವನ್ನ ನಮ್ಮಂತೆ ಬದುಕು ಹೊತ್ತ ಆ ಮತ್ತೊಂದು ಹೆಣ್ಣಿಗೆ ಹಾಗಾದರೆ ನಿಜಕ್ಕೂ ಅರ್ಥವಾಗಲೇ ಇಲ್ಲವೇ?

 

‍ಲೇಖಕರು G

25 December, 2012

4 Comments

  1. bharathi

    rape hudugi !! entha insensitive jana …

  2. D.Ravivarma

    “Sex trafficking has become global epidemic affecting women as well as young boys” ಅಂತ ಅಮೇರಿಕದ ಖ್ಯಾತ ವಿಮನ್ ರೈಟ್ ಆಕ್ಟಿವಿಷ್ಟ್, ಬರಹಗಾರ್ತಿ ಗ್ಲೋರಿಯಾ ಸ್ಟೇನಿಮ್ ಒಂದುಕಡೆ ಹೇಳಿದ್ದಾರೆ.ಇದು ಪ್ರಪಂಚದಾದ್ಯಂತ ಹರಡಿರುವ ಸಾಂಕ್ರಾಮಿಕ ರೋಗ.ಯಾರು,ಯಾವಾಗ,ಎಲ್ಲಿ ಇದಕ್ಕೆ ಬಲಿಯಾಗುತ್ತಾರೆಂದೇ ತಿಳಿಯದಷ್ಟು ಅತಂತ್ರ ಬದುಕಿನ ಅಭದ್ರ ಮೋಟು ಗೋಡೆಯನ್ನೇರಿ ಕುಳಿತ ನಾವು, ಇದರ ಪರಿವೆಯೇ ಇಲ್ಲದೇ ಕನಸಿನ ಭ್ರಮೆಯಲ್ಲಿ ತೇಲಾಡುತ್ತಿರುತ್ತೇವೆ.ಪ್ರಪಂಚದಾದ್ಯಂತ ಪ್ರತಿ ನಿಮಿಷಕ್ಕೆ ಅದೆಷ್ಟೋ ಹೆಣ್ಣುಗಳು ರೇಪ್ಗೆ ಒಳಗಾಗುವ ಇತಿಹಾಸ ಹೊಂದಿರುವ ನಮಗೆ ಸುರಕ್ಷತೆಯಾದರೂ ಎಲ್ಲಿದೆ?ಎಷ್ಟು ಪ್ರಕರಣ ಬೆಳಕಿಗೆ ಬರುತ್ತೆ, ಅದೆಷ್ಟು ಹಾಗೇ ಮುಚ್ಚಿಹೋಗುತ್ತೆ, ಲೆಕ್ಕವಿಟ್ಟವರ್ಯಾರು?….this is ultimate truth…

  3. Roopa

    rape hudugi. che janaralla ee thara manobhaavane hondiro samaajakke modalu chikitse aagabekide

  4. Prasad V Murthy

    ಮನಸ್ಸು ಹಿಡಿಯಾಯ್ತು. ಪಾಪದ ಆ ಹೆಣ್ಣು ಮಗಳ ಜೀವನದ ದುರಂತ ತಿಳಿದು, ನಾವೆಷ್ಟು ಅಸಹನೀಯ ಸಮಾಜದ ಭಾಗವಾಗಿದ್ದೇವೆ ಎಂದು ಅಸಹ್ಯವಾಯ್ತು. ದೈಹಿಕ ಮತ್ತು ಮಾನಸಿಕ ಅತ್ಯಾಚ್ಯಾರಗಳನ್ನು ಮಾಡುವಂತಹ ಮೃಗೀಯ ಮನಸ್ಥಿತಿಗಳ ಕಾಲು ಮುರಿಯಬೇಕು. ಈ ವಿಷಯದಲ್ಲಿ ಸರ್ಕಾರ ಅವರನ್ನು ತಕ್ಷಣವೇ ಶಿಕ್ಷಿಸುವ ಎದೆಗಾರಿಕೆ ತೋರಿಸಬೇಕು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading