
ಕತೆಯಾಗುವ ಕ್ಷಣಗಳು
ಶಾಲೆಯಿಂದ ಮನೆಗೆ ಬಂದ ಮಗ ಅವಸರಿಸುತ್ತಾನೆ ತಾನೀಗಲೇ ಊರ ಮಾರಿಯ ಜಾತ್ರೆಗೆ ಹೋಗಬೇಕೆಂದು.
ಯಾವಾಗಲೂ ಇಲ್ಲದ ಉತ್ಸಾಹ ಇಂದೇಕೆ ಎಂದು ಪ್ರಶ್ನಿಸಿದರೆ, ಆಯಾದ್ ಹಬ್ಬಕ್ಕೆ ಬರಲೇಬೇಕು ಎಂದಿದ್ದಾನೆ. ಹಬ್ಬ ನಡೆಯುವುದು ಅವನ ಮನೆಯೆದುರಿಗೆ ಗೊತ್ತಾ? ಎಂದು ಪ್ರಶ್ನಿಸುವುದರೊಂದಿಗೆ ಅಲ್ಲಿ ಅವರು ಏನೇನು ಸಾಹಸಗಳನ್ನೆಲ್ಲ ಮಾಡಬೇಕೆಂದಿದ್ದಾರೆಂಬ ವಿವರಗಳನ್ನೂ ನೀಡುತ್ತಾನೆ.
ಅರೆ! ಎಂಥಹ ಗಳಿಗೆ! ಊರ ಮಾರಿಯ ಜಾತ್ರೆ ಅಯಾದ್ ನ ಮನೆಯೆದುರೇ ನಡೆಯುತ್ತದೆ ಮತ್ತು ಅದಕ್ಕವನು ನಮ್ಮನ್ನು ಕರೆಯುತ್ತಾನೆ ಎಂದೆನಿಸಿ ಮನಸ್ಸೆಲ್ಲಾ ಪುಳಕಗೊಳ್ಳುತ್ತದೆ. ಉತ್ಸಾಹದಿಂದ ಹೋದರೆ ಮಕ್ಕಳಿಬ್ಬರೂ ಮೈಮರೆತು ಜಾತ್ರೆಯಲ್ಲಿ ಇರುವ ಆಟವನ್ನೆಲ್ಲಾ ಆಡುತ್ತ ಖುಶಿಪಡುತ್ತಾರೆ. ಅಮ್ಮಂದಿರಿಗೆ ಕೇವಲ ಅವರ ಖುಶಿಯನ್ನು ನೋಡುವ ಕೆಲಸವಷ್ಟೆ.
ಗಣೇಶನ ಹಬ್ಬಕ್ಕೆ ಆಯಾದ್ ಬರಲೇಬೇಕೆಂಬುದು ಮಗನ ಆಗ್ರಹ. ಬರುತ್ತಾನೋ ಇಲ್ಲವೋ ಎಂಬ ಆತಂಕ ಅಮ್ಮನಿಗೆ. ಕೊನೆಗೊಂದು ಫೋನ್ ಕರೆ ಬರುತ್ತದೆ. ನಾನು ಬರಬೇಕೆಂದಿದ್ದೆ. ಅಪ್ಪ ಊರಿನಲ್ಲಿಲ್ಲ. ಮುಂದಿನ ಸಲ ಖಂಡಿತ ಬರುತ್ತೇನೆ. ಮಗನ ಮುಖ ಚಿಕ್ಕದಾಗುತ್ತದೆ. ಮನಸ್ಸಲ್ಲೇ ಅಮ್ಮ ಅಂದುಕೊಳ್ಳುತ್ತಾಳೆ, ಬಹುಶ: ಗಣಪತಿಯನ್ನೆಲ್ಲ ಇಟ್ಟಿಲ್ಲ ಎಂದು ಹೇಳಬೇಕಿತ್ತೇನೋ? ಜೊತೆಯಲ್ಲಿ ನಾವಿಬ್ಬರೇ ಇದ್ದೇವೆ ಎಂಬುದನ್ನು ಕೂಡಾ. ಆಗ ಅವನ ಅಮ್ಮ ಕರೆದುಕೊಂಡು ಬರುತ್ತಿದ್ದರೇನೋ? ಅಥವಾ ಯಾಕೆ ಹಾಗೆಲ್ಲ ವಿಶೇಷ ಏರ್ಪಾಡು ಮಾಡಬೇಕು? ಬಂದರೆ ಏನಾಗುತ್ತಿತ್ತು?.. ದ್ವಂದ್ವಗಳನ್ನು ಮಗುವಿನೆದುರು ತೋರ್ಪಡಿಸದೇ ಮುಂದಿನ ಸಲ ಆಯಾದ್ ಖಂಡಿತಾ ಬರುತ್ತಾನೆಂಬ ಆಸೆಯನ್ನು ಮಗುವಿನಲ್ಲಿ ಜೀವಂತವಾಗಿಡುತ್ತಾಳೆ.
ಪ್ರಾಜೆಕ್ಟ್ ಮಾಡಲು ಆಯಾದ್ ಮನೆಗೆ ಹೋಗುತ್ತಾನೆ ಮಗ. ಅವರ ಮನೆಯಲ್ಲಿ ಕಂಪ್ಯೂಟರ್, ನೆಟ್ ಎಲ್ಲವೂ ಇದೆಯೆಂಬುದು ನೆವವಷ್ಟೆ. ಆಯಾದ್ ನ ತಂಗಿ ಆಸಿಯಾಳ ಮುದ್ದು ಮಾತನ್ನು ಕೇಳಬೇಕೆಂಬುದು ಅಸಲಿ ಕಾರಣ. ಅದು ಅಮ್ಮನಿಗೂ ಗೊತ್ತು. ಮನೆಗೆ ಬಂದ ಮೇಲೆ ಆಯಾದ್ ಬಯ್ಯಾ, ಆಯಾದ್ ಬಯ್ಯಾ ಎಂದು ಕರೆಯುತ್ತ ಮನೆತುಂಬ ಓಡಾಡುವ ಅವಳ ಕತೆಯನ್ನು ಎಷ್ಟು ಹೇಳಿದರೂ ಇವನಿಗೆ ದಣಿವಿಲ್ಲ.
ಊಟಕ್ಕೆ ಮನೆಗೆ ಬಂದ ಮಗ ಹೇಳುತ್ತಾನೆ, ಅಮ್ಮಾ, ಇವತ್ತು ಆಯಾದ್ ನ ಅಮ್ಮ ನನಗೆ ಅಂತ ವೆಜ್ ಅಡಿಗೆಯನ್ನೇ ಮಾಡಿದ್ದರಂತೆ. ನಾನು ಮನೆಗೆ ಹೋಗ್ತೇನೆ ಅಂದಾಗ ಬೇಜಾರು ಮಾಡಿಕೊಂಡರು. ನಾನು ನಿನ್ನ ಹತ್ತಿರ ಹೇಳಿ ಹೋಗಿರಲಿಲ್ಲ ಅಂತ ಊಟ ಮಾಡದೇ ಬಂದೆ ಇನ್ನೊಮ್ಮೆ ಹೋಗುವಾಗ ಇವನ ಆ ಪ್ರಶ್ನೆಗೆ ತಾನು ಉತ್ತರಿಸಲೇಬೇಕಾಗುತ್ತದೆಯೆಂಬ ಸತ್ಯ ಅಮ್ಮನಿಗೆ ಗೊತ್ತು.
ಈ ಸಲ ಈದ್ ಗೆ ನಾನು ಆಯಾದ್ ಗೆ ವಿಶ್ ಮಾಡಲೇಬೇಕು ಎಂದು ಬೆಳಿಗ್ಗೆ ಬೇಗ ಎದ್ದು ಫೋನ್ ಮಾಡುವ ಮಗನನ್ನು ಸಂಜೆ ಮರೆಯದೇ ಮಸೀದಿಗೆ ಬರಲು ಕರೆಯುತ್ತಾನೆ ಆಯಾದ್. ಹೋಗಬಹುದೇ..? ಪ್ರಶ್ನೆ ಭೂತಾಕಾರವಾಗಿ ನಿಲ್ಲುತ್ತದೆ ಅಮ್ಮನೆದುರು. ಸಂಜೆ ಆಟದಲ್ಲಿ ಮೈಮರೆತ ಮಗನಿಗೆ ನೆನಪಾಗದಿರಲೆಂದು ಅಮ್ಮ ಪ್ರಾರ್ಥಿಸುತ್ತಾಳೆ. ಮರುದಿನ ಮಗ ಹೇಳುತ್ತಾನೆ. ನಿನ್ನೆ ಎಂಥ ಚಾನ್ಸ್ ಮಿಸ್ ಮಾಡ್ಕೊಂಡೆ. ಸಂಜೆ ಮಸೀದಿಯಲ್ಲಿ ಆಯಾದ್ ನೇ ಡ್ರೈಫ್ರುಟ್ಸ್ ಎಲ್ಲ ಹಂಚಿದ್ದಂತೆ. ನೀನು ಬಂದರೆ ಎಲ್ಲರಿಗಿಂತ ಹೆಚ್ಚು ಕೊಡ್ತಿದ್ದೆ ಎಂದ. ಹೋಗಬಹುದಿತ್ತಾ?…. ಅಮ್ಮ ಯೋಚಿಸುತ್ತಾಳೆ. ಛೇ, ಅವನ ಅಮ್ಮನನ್ನಾದರೂ ಪರಿಚಯ ಮಾಡಿಕೊಳ್ಳಬೇಕು, ಅವರಿಗೋ ಕನ್ನಡವೇ ಬರವುದಿಲ್ಲವಂತೆ. ನನಗೆ ಅವರಾಡುವ ಭಾಷೆ ಬಾರದು.
ಅಮ್ಮನ ಬಾಲ್ಯ ಹೀಗಿರಲೇ ಇಲ್ಲ. ಎಷ್ಟು ಚೆನ್ನಾಗಿ ನೆನಪಿದೆ. ದುಬೈನಲ್ಲಿರುವ ದೊಡ್ಡ ಸಾಹೇಬರು ಮತ್ತು ಸಣ್ಣ ಸಾಹೇಬರು ಊರಿಗೆ ಬಂದಾಗಲೆಲ್ಲ ಮನೆಯವರೆಗೂ ಬಂದು ಎಲ್ಲರಿಗೂ ಉಡುಗೊರೆ ನೀಡಿ ಹೋಗುವುದು. ಅವರು ತರುವ ಸೋಪಿನಲ್ಲಿ ಅದೆಂಥ ಪರಿಮಳ! ಆ ಸೋಪು ಬಚ್ಚಲುಮನೆಗೆ ಹೋಗದೇ ನಾಲ್ಕು ತುಂಡಾಗಿ ಅಪ್ಪ, ಅಮ್ಮ, ಅತ್ತೆ, ಚಿಕ್ಕಪ್ಪನ ಟ್ರಂಕ್ ನಡಿಯಲ್ಲಿ ಪರಿಮಳ ದ್ರವ್ಯವಾಗಿ ಕುಳಿತಿರುತ್ತಿತ್ತು. ಶಿಕಾರಿಗೆಂದು ಬರುವ ಅವರು ತರುವ ಟಾರ್ಚ್ ಅಂತೂ ಇಡೀ ಊರನ್ನೇ ಬೆಳಗಿಸುವಷ್ಟು ಪ್ರಕಾಶಮಾನವಾಗಿರುತ್ತಿತ್ತು.
ಅಲ್ಲೇ ಯಾರದಾದರೂ ಮನೆಯ ಚಾವಡಿಯಲ್ಲಿ ಮಲಗಿ, ಬಾಡೂಟವುಂಡು, ಮಿಕ್ಕಿದ್ದನ್ನು ಮನೆಯವರಿಗೆಂದು ಕಟ್ಟಿಸಿಕೊಂಡು ಹೋಗುತ್ತಿದ್ದರಲ್ಲ. ಅವರೂರಿಗೆ ಬಂದರೆ ಬರಲೇಬೇಕೆಂದು ಹಕ್ಕೊತ್ತಾಯ ಮಾಡಿ ಹೊಗುತ್ತಿದ್ದರಲ್ಲ. ಹಾಗೆ ಹೋದವರೆಲ್ಲ ಅವರ ಮನೆಯ ಸೊಬಗನ್ನು ವರ್ಣಿಸುವವರೆ. ಊರಿಗೆ ರೇಡಿಯೋ ಎಂಬ ಮಾತನಾಡುವ ಪೆಟ್ಟಿಗೆ ಕಾಲಿಟ್ಟದ್ದೇ ಅವರಿಂದಾಗಿ. ರೇಡಿಯೋ ಇದ್ದ ಮನೆಯವರು ಇಡೀ ಊರಿಗೇ ಕೇಳುವಂತೆ ಕೂಗಿಸುತ್ತಿದ್ದರಿಂದ ಅದು ಅಕ್ಷರಶಃ ಊರಿನ ರೇಡಿಯೋವೇ ಆಗಿಬಿಟ್ಟಿತ್ತು.
ಅಮ್ಮ ನೆನಪಿಸಿಕೊಳ್ಳುತ್ತಾಳೆ. ಒಮ್ಮೆ ದೊಡ್ಡ ಸಾಹೇಬರು ಟೇಪ್ ರೆಕಾರ್ಡರ್ ಎಂಬ ವಿನೂತನ ಪೆಟ್ಟಗೆಯೊಂದನ್ನು ಊರಿಗೆ ತಂದಿದ್ದರು. ಅದರಲ್ಲಿ ಕ್ಯಾಸೆಟ್ ತುರುಕಿಸಿ ನಾವೇನು ಮಾತನಾಡಿದರೂ ಅದು ಅದನ್ನೇ ಪುನಃ ಹೇಳುವ ಪರಿ ಊರಿನವರೆಲ್ಲ ಮೂಗಿನ ಮೇಲೆ ಬೆರಳಿಡುವಂತೆ ಮಾಡಿತ್ತು. ನಾವೋ ವರ್ಷಕ್ಕೋ, ಎರಡು ವರ್ಷಕ್ಕೋ ಬರುವವರು. ಹೋದಮೇಲೆ ನಿಮ್ಮದೆಲ್ಲ ನೆನಪಾಗುತ್ತದೆ, ಅದಕ್ಕಾಗಿ ನೀವೆಲ್ಲ ಹಾಡು ಹೇಳಿ, ನಾವದನ್ನು ರೆಕಾರ್ಡ ಮಾಡಿಕೊಂಡು ಹೋಗಿ ಕೇಳುತ್ತೇವೆ ಎಂದಾಗ ಊರ ಹೆಂಗಸರೆಲ್ಲ ನಾಚಿ, ಹಾಡಲು ಹೆದರಿ ಹಿಂದೆ ಸರಿದಿದ್ದರು.
ಆದರೆ ಸುಬ್ಬಣ್ಣ ಭಟ್ಟರು ಮಾತ್ರ ತಮ್ಮ ಮೃದಂಗದೊಡನೆ ಹಾಜರಾಗಿ ನಾಲ್ಕು ಯಕ್ಷಗಾನದ ಹಾಡನ್ನು ಹಾಡಿದ್ದರು. ಹಾಡುವಾಗ ಯಾರೂ ಮಾತನಾಡಬಾರದೆಂದು ತಾಕೀತು ಮಾಡಿದ್ದರಿಂದ ಎಲ್ಲರೂ ಉಸಿರನ್ನೂ ತೆಗೆಯಬಾರದೆಂಬಂತೆ ಬಿಗಿಹಿಡಿದು ನಿಂತಿದ್ದರು. ಸಾಹೇಬರು ಅದನ್ನು ರಿಪ್ಲೇ ಮಾಡಿದಾಗ ಪೆಟ್ಟಿಗೆಯೊಳಗಿಂದ ಸುಬ್ಬಣ್ಣಭಟ್ಟರ ಗಾಯನ ಥೇಟ್ ಅವರೇ ಹಾಡಿದಂತೆ ಕೇಳಿದಾಗ ಜನ ಬೆರಗಾಗಿ ತಲೆದೂಗಿದ್ದರು.
ತಾನೂ ಜನರ ಒತ್ತಾಯಕ್ಕೆ ಸೋತು ‘ಕನಕನಿಗೊಲಿದ ಗೋವಿಂದ| ನಮ್ಮನು ಕಾಯೋ ಮುಕುಂದ|’ ಎಂಬ ಕೀರ್ತನೆ ಹಾಡಿದ ನೆನಪು. ಆಗ ಊರ ಹೆಂಗಸರಿಗೆಲ್ಲ ಧೈರ್ಯ ಬಂದು ಅಮ್ಮೆಣ್ಣು ತನ್ನ ಗುಂಪಿನೊಂದಿಗೆ ಕುಳಿತು ಜಿನ್ನೋಡಮ್ಮನ ಮಹಿಮೆ ಹಾಡಿದ್ದಳು. ಸುವ್ವೀ.. ಎಂದು ಸ್ವರ ನಡುಗಿಸುತ್ತಾ ಹಾಡಬೇಕಾದ ಆ ಹಾಡು ಆವತ್ತಂತೂ ಹೆಚ್ಚೇ ನಡುಗಿತ್ತು. ಬಹುಶಃ ಸಾಹೇಬರು ಮನೆಗೆ ಹೋಗಿ ಇವರೆಲ್ಲ ನೆನಪಾದಾಗ ಗೋವಿಂದನ ಹಾಡು, ಜಿನ್ನೋಡಮ್ಮನ ಮಹಿಮೆಯನ್ನೆಲ್ಲ ಕೇಳುತ್ತಿದ್ದರೇನೋ?
ಛೇ! ಕಾಲ ಹಾಗೇ ಇದ್ದಿದ್ದರೆ ಎಷ್ಟು ಚೆನ್ನಾಗಿತ್ತು? ಅಮ್ಮ ಮೀನು ಮಾರಲು ಬರುವ ಬಾಯೆಯ ಹತ್ತಿರ ತಾಸುಗಟ್ಟಲೇ ಹರಟುವಂತೆ ತಾನೂ ಆಯಾದನ ಅಮ್ಮನೊಂದಿಗೆ ಹರಟಬಹುದಿತ್ತೇನೋ? ಭಾಷೆ ಯಾಕೆ ಬೇಕು ಮಾತನಾಡಲು? ಹೃದಯವಿದ್ದರೆ ಸಾಕು. ಬಾಯೆಯ ನೆನಪಾದದ್ದೇ ಅಮ್ಮನಿಗೆ ಎಷ್ಟು ನಗೆ ಬಂತು?
ಹೌದು ಅವಳು ಒಂದು ದಿನ ಇದ್ದಕ್ಕಿದ್ದಂತೆ ಬಂದು ಅಮ್ಮನೊಂದಿಗೆ ಮೀನಿನ ಹಣ ಕೊಡುವಂತೆ ಕೇಳಿ ಜಗಳಕ್ಕೇ ನಿಂತಳಲ್ಲ. ಅಮ್ಮ ತಾವು ಮೀನು ತಿನ್ನುವ ಜಾತಿಯಲ್ಲವೆಂದು ಬಗೆಬಗೆಯಾಗಿ ತಿಳಿಸಿ ಹೇಳಿದರೂ ಅವಳು ಮಾತ್ರ ತನ್ನ ಪಟ್ಟು ಸಡಿಲಿಸುತ್ತಿರಲಿಲ್ಲ. ದುಡ್ಡು ಕೊಡಬೇಕಾದ್ರೆ ಎಲ್ಲರೂ ಹಾಗೇ ಅನ್ನೋದು. ಹಿಂದಿನ ಸಲ ಬಂದಾಗ ನೀವೇ ತಾನೆ ನನ್ನ ಹತ್ತಿರ ಜಾರಿಮೀನು ತೆಕೊಂಡಿದ್ದು? ಈಗ ನೋಡಿದ್ರೆ ನಾವು ಮೀನೇ ತಿನ್ನಲ್ಲ ಅಂತ ಬಂಮ್ಡ ಬಾರಿಸ್ತಿದ್ದೀರಿ. ನೀವು ಏನೇ ಹೇಳಿ, ಕಳೆದ ಸಲದ ಬಾಕಿ ಕೊಡುವವರೆಗೂ ಇಲ್ಲಿಂದ ಕದಲುವುದಿಲ್ಲ ಎಂದು ಬಾಗಿಲ ಬಳಿ ಝಂಡಾ ಊರಿಯೇಬಿಟ್ಟಿದ್ದಳು.
ಅಮ್ಮ ದಾರಿಗಾಣದೇ ತೋಟದಲ್ಲಿ ಕೆಲಸ ಮಾಡುತ್ತಿದ್ದ ತಿಮ್ಮನನ್ನು ಕರೆದು ಪರಿಸ್ಥಿತಿಯನ್ನು ತಿಳಿಯಾಗಿಸಿದ್ದಳು. ಅವಳು ಹೊಸಬಳಾದ್ದರಿಂದ ಯಾರದೋ ಮನೆಯನ್ನು ಈ ಮನೆಯೆಂದು ತಪ್ಪುತಿಳಿದಿದ್ದಳು. ಅಂದಿನಿಂದ ಪ್ರತಿಸಲ ಊರಿಗೆ ಬಂದಾಗಲೂ ಅಮ್ಮನನ್ನು ಮಾತಾಡಿಸಿ, ಮಜ್ಜಿಗೆ ಕುಡಿದೇ ಹೋಗುತ್ತಿದ್ದಳು.
ಹಾಗೆ ಬಂದವಳೊಂದಿಗೆ ಅಮ್ಮ ಕಷ್ಟ ಸುಖ ಹೆಳುತ್ತ ವಿಚಾರಿಸುತ್ತ ಎಷ್ಟು ಹರಟೆ ಹೊಡೆಯುತ್ತಿದ್ದಳು. ಆಗಲೇ ಅಲ್ಲವೇ ಅವರ ರೀತಿ ರಿವಾಜುಗಳ ವಿಷಯವೆಲ್ಲ ನಮಗೆಲ್ಲ ತಿಳಿದದ್ದು. ಕೊನೆಯಲ್ಲಿ ಅಮ್ಮ, ಅಂತೂ ಹೆಣ್ಣು ಅಂದಮ್ಯಾಲೆ ಯಾರಿಗೂ ತಪ್ಪಿದ್ದಲ್ಲ ನೋಡು ಕಷ್ಟ. ಅಂತಹ ಸೀತೆಯನ್ನೇ ಬಿಟ್ಟಿಲ್ಲ ಅಂದಮ್ಯಾಲೆ ನಮ್ಮದ್ಯಾವ ಲೆಕ್ಕ? ಎಂದು ಮಾತು ಮುಗಿಸುತ್ತಿದ್ದಳಾಗಿ ಕೊನೆಕೊನೆಗೆ ಈ ಮಾತನ್ನು ಅಮ್ಮ ಹೇಳುವ ಮೊದಲೇ ಅವಳು ಹೇಳಿಬಿಡುತ್ತಿದ್ದಳು.
ಆಯಾದ್ ನ ಹತ್ತಿರ ಮಾತಾಡಬಾರದಂತೆ, ನನ್ನ ಗೆಳೆಯರೆಲ್ಲ ಹೇಳ್ತಾರಪ್ಪ. ಅವರೆಂತದ್ದೋ ಎಲ್ಲ ಮಾಡ್ತಾರಂತೆ ಅವನ ಜಾತಿಯವರು ಎನ್ನುತ್ತಾನೆ ಮಗ. ಅಮ್ಮನ ಮುಖದಲ್ಲೀಗ ಚಿಂತೆಯ ಗೆರೆಗಳು. ಮಾತಾಡಬೇಕು ಪುಟ್ಟಾ ಎನ್ನುತ್ತಾಳೆ ಅಮ್ಮ. ಯಾಕೆ? ಮಾತಾಡದಿದ್ದರೆ ಏನಾಗುತ್ತೆ? ಅಂತಾರೆ ನನ್ನ ಫ್ರೆಂಡ್ಸ್.
![]()
ಅಮ್ಮ ಪುಟ್ಟನನ್ನು ಎದೆಗೊರಗಿಸಿ ಹೇಳುತ್ತಾಳೆ, ನೋಡು ನೀವಿಬ್ರೂ ಮಾತಾಡಲ್ಲ ಅಂತಿಟ್ಕೊ. ಇಬ್ರೂ ದೊಡ್ಡವರಾಗ್ತೀರಿ. ಪೇಟೆ ಕಾಲೇಜಿಗೆ ಹೋಗ್ತೀರಿ. ಒಂದಿನ ಸಂಜೆಯಾಗಿದೆ. ಇಬ್ರೂ ಬಸ್ ಸ್ಟಾಂಡಿನಲ್ಲಿ ಇಳಿತೀರಿ. ಮನೆ ಕಡೆ ನಡಿತೀರಿ. ಅವನು ರಸ್ತೆಯ ಆ ಬದಿಯಲ್ಲಿ, ನೀನು ರಸ್ತೆಯ ಈ ಬದಿಯಲ್ಲಿ. ನಿಂಗೆ ಹೆದರಿಕೆ ಅವನೇನಾದ್ರೂ ಮಾಡ್ತಾನೇನೋ ಅಂತ. ಆ ಬದಿಯಲ್ಲಿ ಅವನಿಗೂ ಹೆದರಿಕೆ, ನೀನೇನಾದ್ರೂ ಮಾಡಿದ್ರೆ ಅಂತ. ಅಂತೂ ಮನೆ ಸೇರ್ತೀರಿ. ಇಬ್ಬರೂ ಬೆವರಿ, ಬೆವರಿ ಒದ್ದೆಯಾಗಿರ್ತೀರಿ. ಆದ್ರೆ ಯಾರಿಗೆ ಯಾರೂ ಏನೂ ಮಾಡಿರಲ್ಲ. ಪ್ರತಿ ಸಲವೂ ಹೀಗೆ ಆಗತ್ತೆ.
ಅದರ ಬದಲು ಇಬ್ರೂ ಮಾತಾಡ್ತೀರಿ ಅಂತಿಟ್ಕೊ. ಒಬ್ಬರಿಗೊಬ್ಬರು ಜೊತೆಯಾಗಿ, ಹಾಯಾಗಿ ಹರಟಿಕೊಂಡು ಬರಬಹುದಲ್ವಾ? ಮಗ ತಟ್ಟನೆ ಅಮ್ಮನೆಡೆಗೆ ತಿರುಗಿ ಹೇಳುತ್ತಾನೆ, ಹೌದು, ಆಯಾದ್ ಮಾತ್ರ ಎಂದಿಗೂ ನನಗೆ ಏನೂ ಮಾಡಲ್ಲ. ಅಲ್ಲ ಯಾರಿಗೂ ಏನೂ ಮಾಡಲ್ಲ. ಯಾಕಂದ್ರೆ ಅವನು ಒಳ್ಳೆಯವನು ಅಮ್ಮ ಮಗನ ಕೆನ್ನೆ ಸವರಿ ಹೇಳುತ್ತಾಳೆ, ನೀವಿಬ್ರೂ ಒಳ್ಳೆಯವರು
ಈ ಸಂಬಂಧ ಹೀಗೇ ಇರಲೆಂದು ಎಲ್ಲ ಅಮ್ಮಂದಿರ ಮನವೂ ಪ್ರಾರ್ಥಿಸುತ್ತದೆ. ಮತ್ತು ಆ ವಿನಂತಿಗೆ ಅಲ್ಲಾಹು, ಗೋವಿಂದ ಇಬ್ಬರೂ ರುಜು ಮಾಡುತ್ತಾರೆ.





0 Comments