ಆ ಬತ್ತದ ಬುತ್ತಿಯಲ್ಲಿ..

ಸಾಯಿಲಕ್ಷ್ಮಿ ಅಯ್ಯರ್

**

ಪಾತ್ರೆಗಳಲ್ಲಿ ಪ್ರಧಾನ ಸ್ಥಾನ ಡಬ್ನಿಗಳಿಗೆ. ಎಂತೆಂತಹ ಡಬ್ಬಿ ತಂದಿಟ್ಟರೂ. ಅವುಗಳು ಪ್ರಯಾಣ ಹೊರಡುವುದು ಖಚಿತ. ನಾವು ಡಬ್ಬಿಗಳಲ್ಲಿ ತುಂಬಿಸಿಕೊಟ್ಟರೆ, ಕೆಲವರು ಅದರಲ್ಲಿ ಮತ್ತೇನಾದರು ಹಾಕಿ ಕಳಿಸುವುದು ಸಂಪ್ರದಾಯ. ಕೆಲವರು ಯಾವ ಮುಲಾಜು ಇಲ್ಲದೆ ಖಾಲಿ ಡಬ್ಬಿ ಹಿಂತಿರುಗಿಸುವುದು ಅವರ ವಾಡಿಕೆ. ಇನ್ನು ಹಲವರು ಡಬ್ಬಿ ವಾಪಸ್ ಮಾಡುವುದೇ ದೊಡ್ಡ ಮಾತು. ಈಗಂತೂ ಹೋಟೆಲಿನ ಪಾರ್ಸಲ್ ಪ್ಲಾಸ್ಟಿಕ್ ಡಬ್ಬಿಗಳು ನಮ್ಮ ನೆರವಿಗೆ ಬಂದಿವೆ. ಅದರಲ್ಲಿ ತುಂಬಿ ಕೊಟ್ಟು ನಾವು ಮರೆತು ನೆಮ್ಮದಿಯಾಗಿರಬಹುದೆನ್ನಿ. ಅದರಲ್ಲಿ ಹಾಗೆ ಹಂಚಲು‌ ನಾವು ಪದೇಪದೇ ಹೋಟೆಲಿಗೆ ಭೇಟಿ ನೀಡುವುದು ಸಾಧ್ಯವಿಲ್ಲದ ಸಮಾಚಾರ. ನನ್ನಪ್ಪ ಸತ್ಯನಾರಾಯಣ ಐಯ್ಯರ್ ಎಜೀಸ್ ಆಫೀಸಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ, ಒಂದು ಉತ್ಕೃಷ್ಠ ಡಬ್ಬಿಯಲ್ಲಿ ಊಟ ಕೊಂಡೊಯ್ಯುತ್ತಿದ್ದರು.

ಅಪ್ಪನ ನೆನಪಲ್ಲಿ ಆ ಸ್ಟೀಲ್ ಡಬ್ಬಿ ಈಗ ನನ್ನ ಬಳಿ ಇದೆ. ಅದರ ವಿಶೇಷವೆಂದರೆ ನೀರು ಸಹ ಆ ಡಬ್ಬಿಯಿಂದ ಅಲುಗಾಡಿ ಹೊರ ಜಾರದು. ನಾನು ಅದನ್ನು ಬಲು ಪ್ರೀತಿಯಿಂದ ಜೋಪಾನ ಮಾಡಿದ್ದೆ. ಹೀಗಿರುವಾಗ ಮೀನಾ ಚಿಕ್ಕಮ್ಮನಿಗೆ ಅವಸರದಲ್ಲಿ ಅದರಲ್ಲಿ ವಾಂಗೀ ಬಾತ್ ತುಂಬಿಸಿ ಕಳುಹಿದ್ದೆ. ಈ ಮೀನ ಚಿಕ್ಕಮ್ಮ ನನ್ನ ಗಂಡನ ಕುಟುಂಬದಲ್ಲಿ ಪ್ರಮುಖ ಸ್ಥಾನ ಅಲಂಕರಿಸಿ ಜನಪ್ರಿಯತೆ ಗಳಿಸಿದವರು. ಅವರಿಗೆ ತಲೆಕೂದಲಿನಷ್ಟು ಬಳಗ. ಅವರ ಮನೆಯೆಂದರೆ ಪೂರ್ಣಯ್ಯನ ಛತ್ರವಿದ್ದಂತೆ. ಬಂಧುಬಳಗದವರಿಗೆ ಕೇಂದ್ರಸ್ಥಾನ. ಊಟೋಪಚಾರ, ಪಾರ್ಸಲ್ ಸೇವೆ ಎಲ್ಲವೂ ಅಡೆತಡೆಯಿಲ್ಲದೆ ನಿರಂತರವಾಗಿ ನಡೆಯುವ ಮನೆ. ಗಾಂಧಿ ಬಜಾರಿನಂತಹ ಮುಖ್ಯ ಬಡಾವಣೆ, ಕೇಳಬೇಕೇ? ಮದುವೆ ಮಾತುಕತೆಯಿರಲಿ, ಆಸ್ಪತ್ರೆಗೆ ದಾಖಲಾದ ರೋಗಿಗಳ ಸಂಬಂಧಿಕರ ವಾಸ್ತವ್ಯವಿರಲಿ, ದೂರದ ಊರಿಂದ ಕೆಲಸಕಾರ್ಯದ ನಿಮಿತ್ತ ಬಂದಿಳಿದ ಜನರಿರಲಿ, ಓದುವ ಹುಡುಗರಿರಲಿ ಈ ಎಲ್ಲರಿಗೂ ಮೀನಾಮನೆ ಆಲದಮರದಂತೆ ಆಶ್ರಯ ತಾಣ.

ಹೋಗಿ ಹೋಗಿ ಅಲ್ಲಿ ನಮ್ಮಪ್ಪನ ಡಬ್ಬಿ ಸಿಕ್ಕಿ ಹಾಕಿಕೊಂಡು ಬಿಟ್ಟಿತು. ಭರದಿ ಹರಿವ ನದಿಗೆ ಡಬ್ಬಿ ಎಸೆದು ಹುಡುಕಿದಂತೆ. ಅಪ್ಪನಿಲ್ಲದ ನನಗೆ ಆ ಡಬ್ಬಿಯೊಡನೆ ಭಾವನಾತ್ಮಕ ಅನುಬಂಧ. ಆಗ ನನ್ನ ದೈಹಿಕ ಪರಿಸ್ಥಿಯೂ ನಾಜೂಕಾಗಿತ್ತು. ಮೀನಾ ಒಮ್ಮೆ ಬಂದಾಗ ಗಂಡನ ಕಣ್ಣು ತಪ್ಪಿಸಿ, ರಹಸ್ಯವಾಗಿ ಡಬ್ಬಿಯ ಪ್ರಸ್ತಾಪ ಮಾಡಿದೆ. “ಹೇಗಿತ್ತು ಹೇಳು ಆ ಡಬ್ಬಿ?” ಎಂದು ಪ್ರಶ್ನಿಸಿದ ಮೀನಾ ಚಿಕ್ಕಮ್ಮ ನನ್ನಿಂದ ಅದರ ವಿವರ ಪಡೆದು ನಿರ್ಗಮಿಸಿದರು. ಕೇವಲ ಹದಿನೈದು ದಿನಗಳಲ್ಲಿ ಅಕೆ ಡಬ್ಬಿ ಸಮೇತ ಬಂದಿಳಿದರು. ಅವರ ಮಾತಲ್ಲೆ ಹೇಳುವುದಾದರೆ ಆಕೆ ಮಾಡಿದ್ದಿಷ್ಟೇ. “ನೋಡು ಆ ಡಬ್ಬಿ ನೆವ ಮಾಡಿಕೊಂಡು ಈ ಊರಿನಲ್ಲಿರೋ ಎಲ್ಲ ಸಂಬಂಧಿಕರ ಮನೆಗೂ ಹೋದೆ. ನುಗ್ಗಿದ್ದು ನೇರ ಆಡುಗೆ ಮನೆಗೆ. ಅವರಿಗೆಲ್ಲ ಆಶ್ಚರ್ಯ‌ ನನ್ನ ಹುಡುಕಾಟ, ಧಾವಂತ‌ ನೋಡಿ, ‘ಇದೇನ್ ಮೀನಮ್ಮ?’ ಅಂದರು. ನಾನು ಅವರಿಗೆ ‘ದಯವಿಟ್ಟು ತಪ್ಪು ತಿಳೀಬೇಡಿ. ನನ್ನ ಸೊಸೆ ಡಬ್ಬಿ ಒಂದು ನಮ್ಮನೆಗೆ ಬಂದಿದ್ದು ಸಂಚಾರ ಹೊರಟಿದೆ. ನಿಮ್ಮಗಳ ಯಾರದ್ದಾದರೂ ಮನೆ ಸೆರಿದೆಯೇನೋ ಕೇಳಿ ಸಿಕ್ಕರೆ ಹಿಡಕೊಂಡು ಹೋಗೋಣಾಂತ ಬಂದಿದೀನಿ. ನನ್ನ ಸೊಸೆ ಬಸುರಿ. ಸಾಲದ್ದಕ್ಕೆ ಅದು ಅವರಪ್ಪನ ಡಬ್ಬಿ. ಅವಳ ಬಯಕೆ ಪೂರೈಸಬೇಕೂಂತ” ಅಂದೆ.

ಹೀಗೆ ಎಲ್ಲರ ಮನೆ ಅಲೆದೆ. ಕಡೆಗೆ ಸೀನು ಮನೇಲಿ ನಿನ್ನ ಡಬ್ಬಿ ಸಿಕ್ಕಿತು. ತೆಗೋ. ಜೋಪಾನ, ಒಪ್ಪಸಿದೀನಿ, ಒಪ್ಪಸಿದೀನಿ, ಒಪ್ಪಸಿದೀನಿ’ ಅಂತೂ ನನ್ನಪ್ಪನ ಡಬ್ಬಿ ನನ್ನ ಕೈ ಸೇರಿತು. ಮೀನಾ ಚಿಕ್ಕಮ್ಮ ಈ ನೆವದಲ್ಲಿ ಅನೇಕ ಸಂಬಂಧಿಕರ ಮನೆ ಹೊಕ್ಕು ಬಂದರು. ಪುಣ್ಯವಂತೆ ಮೀನಮ್ಮನ ಪಾದಧೂಳಿ ತಮ್ಮನೆ ಸ್ಪರ್ಶ ಮಾಡಿದ್ದು ಉಳಿದವರ ಪಾಲಿಗೆ ಮಹಾ ಪ್ರಸಾದವೇ ಸರಿ. ಕಾಲ ಸರಿದಂತೆ ಸ್ನೇಹಜೀವಿ ಮೀನಾ ಕಿಡ್ನಿ ವೈಫಲ್ಯದಿಂದ ಸಾವಿಗೆ ಶರಣಾಗಿದ್ದು ನಮ್ಮ ಬದುಕಿನ ಬಹು ದೊಡ್ಡ ನಷ್ಟ. ಈಗಲೂ ನಮ್ಮ ಸುಖ ಸಂತೋಷದ ದಿನಗಳಲ್ಲಿ ಆಕೆ ನಮ್ಮ ಜೊತೆ ಇರಬೇಕಿತ್ತು. ಅದೆಷ್ಟು ಸಂಭ್ರಮ ಪಡುತ್ತಿದ್ದರು ಎಂಬ ಕೊರತೆ ನಮ್ಮನ್ನು ಕಾಡುತ್ತಿರುತ್ತದೆ. ಈ ದಿಸೆಯಲ್ಲಿ ಮೀನಾ ಚಿಕ್ಕಮ್ಮನ ಡಬ್ಬಿ ಮರಳಿ ಪಡೆಯುವ ಛಲ ಅನುಕರಣ ಯೋಗ್ಯವಲ್ಲದಿದ್ದರೂ ಪ್ರಶಂಸನೀಯ.

‍ಲೇಖಕರು Admin MM

April 10, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: