ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆ ತಾಯಿಯ ಬಿರಿದ ಪಾದಗಳ ಕಂಡಿರಾ..

ಜ್ಯೋತಿ ಎ.

ಆ ತಾಯಿಯ ಬಿರಿದ ಪಾದಗಳ ಕಂಡಿರಾ
ಚರ್ಮದ ಹೊದಿಕೆ ಹರಿದಿದೆ
ಮಾಂಸವಂತೂ ಕಾಣುವುದೇ ಇಲ್ಲ
ತೊಗಲು ಪೂರ್ಣ ಸುಲಿದಿದ್ದರೂ
ಸೋರಲು ಹನಿರಕ್ತವೂ ಅದರಲ್ಲಿಲ್ಲ
ಬದುಕಿದ್ದಾಳೆಂಬುದಕ್ಕೆ ಸಾಕ್ಷಿಯಂತೆ
ಒಂದಿಷ್ಟು ಕೆಂಪು ಕಲೆ ಹೆಪ್ಪುಗಟ್ಟಿದೆ ಅಲ್ಲಲ್ಲಿ

ಆ ತಾಯಿಯ ಬಿರಿದ ಪಾದಗಳ ಕಂಡಿರಾ
ಹೊಟ್ಟೆ ಬೆನ್ನುಗಳೊಂದಾಗಿ
ಬೆವರ ಧಾರೆಯಲಿ ತೊಯ್ದವಳು
ಅವಳೇ ಭೂಮಿಯ ಹದಗೊಳಿಸಿದವಳು
ಅನ್ನದ ಬೀಜವ ಬಿತ್ತಿದವಳು
ನೀರೆರೆದು ಧರೆಗೆ ಊಟವನಿಟ್ಟವಳು
ಬಿಸಿಲ ಬೇಗೆಯಲಿ ತಾ ಬೆಂದು
ಮಳೆಯಲಿ ಮೈಕೈ ಎಲ್ಲಾ ನೆಂದು
ಭೂಮಿಯ ಕಳೆಯ ತೆಗೆದವಳು
ಕೊರೆಯುವ ಚಳಿಯೆನ್ನದೆ
ನೋವುಗಳ ಮರೆತವಳು
ನಮ್ಮೆಲ್ಲರಿಗೂ ಕೂಳ ಕೊಟ್ಟು
ತಾನು ಧೂಳ ಸೇವಿಸಿದವಳು

ಕಂಡಿರಾ ಆ ತಾಯಿಯ ಬಿರಿದ ಪಾದಗಳ
ನೆಲಕೆಂದೂ ಪಾದ ಸೋಕಿಸಿರದ
ದರ್ಬಾರಿನ ಮಹಾಜನರೆ
ಅರ್ಥ ಮಾಡಿಕೊಳ್ಳಿರೊಮ್ಮೆಯಾದರೂ
ಅವಳಂತರಾಳದ ನೋವುಗಳ
ಆ ತಾಯಿಯ ಬಿರಿದ ಪಾದಗಳು
ಈ ನೆಲದ ಬಿರಿದ ಮೌನ ಮನಗಳೆಂಬುದನ್ನ

 

‍ಲೇಖಕರು Avadhi GK

15 March, 2018

1 Comment

  1. nutana doshetty

    Aa paadada novininda ella edegalalloo selaku.

    jyothi ..olleya spandane

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading