ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಆಹಾ, ಹೊಸ ಮಳೆಯ ಹಸಿ ಮಣ್ಣು…' – ಜಯಶ್ರೀ ದೇಶಪಾಂಡೆ

ಜಯಶ್ರೀ ದೇಶಪಾಂಡೆ


ಮನಸು ಹಿಗ್ಗುತ್ತದೆ..ಮತ್ತೆ ಮೂಗರಳುತ್ತದೆ,
ಹೊಸ ಮಣ್ಣಿನ ಹಸಿ ಘಮದ ನೆನಪು ಮರುಕಳಿಸಿ ಬ೦ದು,
ಅ೦ದೆಲ್ಲ ಆಘ್ರಾಣಿಸಿದ ಆ ಪರಿಮಳವು,
ಆ ಹಸಿಯು ಇ೦ದೂ ಅಷ್ಟೇ ಹೊಸದೆ೦ದು,
ಅದು ಹೇಗೆ೦ದು? ಯಾಕಿರಬಹುದೆ೦ದು
ಅಚ್ಚರಿಪಡುತ್ತದೆ ಮನ! ಬೆರಗುವಡೆಯುತ್ತದೆ..
 
ಅ೦ದಿನ ಮಳೆಗೂ ಇ೦ದಿನ ಮಳೆಗೂ ವ್ಯತ್ಯಾಸವು೦ಟೆ? ಇರಬಹುದೇ?
ಇಲ್ಲ..ಅದೇ ಆಕಾಶ, ಅದೇ ಮೋಡಗಳು.
ಅ೦ತೆಯೇ ಘುಡಘುಡಿಸಿ ತೇಲುವ ಮೇಘಗಳು ,
ಬಿಳಿಮೋಡ ಕರಿಯಾಗಿ ನೀರಹನಿಗಳ ಹೊತ್ತು
ಭಾರದ ಬಿ೦ದಿಗೆಯಾಗಿ ತು೦ಬಿಯೂ ತುಳುಕಲಾರದೆ
ತಟ್ಟನೆ ಬೋರಲಾಗಿ ಭೂಮಿಯತ್ತ ಮುಖ ಮಾಡಿದರೆ
ಇಲ್ಲಿ ಅದೋ ಮುಸಲಧಾರೆ..ಕು೦ಭ ದ್ರೋಣ!
ಅ೦ತೆಲ್ಲ ಕವಿಗಳ ಮನದಲ್ಲಿ ಬೆರಗು ಮೂಡಿಸಿ ,
ಹೊಸ ಹುಕಿಗಳ ಉಕ್ಕುಕ್ಕಿ ತರಿಸಿ ಹೊಗಳಿಸಿಕೊಳ್ಳುವ ಹೊಸ ಮಳೆ.
 
ಬಿಸಿಲಿನ ಕಾವಿಗೆ, ಗ್ರೀಷ್ಮನೆ೦ಬ ಮಾಸದ
ಕಡು ಸೂರ್ಯನ ಝಳಪಿಗೆ ಗೆರೆಗೆರೆಯಾಗಿ ಬಿರಿದ ಭೂಮಿ ,
ಒಣ ಒಡಲಿನಲ್ಲೊ೦ದಿಷ್ಟು ಹಸಿ ಇಳಿಯಬಾರದೇ ಎ೦ದು
ಚಡಪಡಿಸುತ್ತ ಬಾಯಾರಿ ಬಸವಳಿದು ಬೇಡುತ್ತ
ಕಾದು ಕೆ0ಡದ೦ತಾಗುತ್ತಿರಲು, ಆಕಾಶ ಕೃಪೆದೋರಿ ಕೊಡುವ ಮಳೆ!!
 
ಅ೦ತೆಯೇ, ಕಾಯ್ದ ಆ ಭೂಮಿಯ ಮೇಲಿನ ಕಾವಿಗೆ
ಹೆ೦ಚಿನ ಮೇಲಿಟ್ಟ ಹಪ್ಪಳದ೦ತೆ
ಒದ್ದಾಡುವ ನಾವು ನೀವೆಲ್ಲ
ಅದೇ ಆಗ, ಮೊದಲ ಧಾರೆಯಾಗಿ ಇಳಿದ ಮಳೆಯ
ಗಜ್ಜುಗದ ಗಾತ್ರದ ನೀರಹನಿಯ ಪೆಟ್ಟಿಗೆ ಹಸಿಗೊ0ಡ
ನೆಲವದು ಎಬ್ಬಿಸಿ ಹರಡಿಸಿದ ಒದ್ದೆಯ ಆ
ಘಮಲಿಗೆ ಹುಚ್ಚಾದವರಲ್ಲವೇ?
 
ಮೊದಲ ಮಳೆಯ ಹಸಿ ಮಣ್ಣಿನ ವಾಸನೆಗೆ ಮರುಳಾದವರಲ್ಲವೇ ?
ಅಲ್ಲವೇ ಹೇಳಿ…!?
 

‍ಲೇಖಕರು G

29 May, 2015

1 Comment

  1. bidaloti Ranganath

    ಕವಿತೆ ಚನ್ನಾಗಿದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading