ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆರ್. ವಿಜಯರಾಘವನ್ ಅನುವಾದಿಸಿದ ‘ಪ್ರೀತಿಯ ಬದುಕು’

ಆಲಿಸ್ ಮುನ್ರೊ

ಆರ್. ವಿಜಯರಾಘವನ್

ನಾನು ಚಿಕ್ಕವಳಿದ್ದಾಗ ವಾಸವಿದ್ದದ್ದು ಆ ಉದ್ದದ ರಸ್ತೆಯ ಕೊನೆಯಲ್ಲಿಯೋ, ನನಗೆ ಮಾತ್ರವೇ ಉದ್ದವಾಗಿ ಕಾಣುವ ರಸ್ತೆಯ ಕೊನೆಯಲ್ಲಿಯೋ, ಅಂತೂ ಅಲ್ಲಿ. ನಾನು ಮೊದಲು ಪ್ರಾಥಮಿಕ ಶಾಲೆಯಿಂದ, ನಂತರ ಪ್ರೌಢಶಾಲೆಯಿಂದ ಮನೆಗೆ ಮರಳಿ ಹೋಗುತ್ತಿದ್ದಾಗ ನನ್ನ ಹಿಂದೆ ಬಿಟ್ಟು ಬಂದ ನಿಜಾರ್ಥದ ಪಟ್ಟಣವಿರುತ್ತಿತ್ತು. ಅದರಲ್ಲಿ ಎಡೆಬಿಡದ ಚಟುವಟಿಕೆಗಳು ಇರುತ್ತಿದ್ದವು. ಪಾದಚಾರಿ ಮಾರ್ಗಗಳು ಇದ್ದವು. ಕತ್ತಲೆಯ ನಂತರ ಬೀದಿ ದೀಪಗಳು ಹೊತ್ತಿಕೊಳ್ಳುವ ನಿಜವಾದ ಪಟ್ಟಣವಾಗಿತ್ತದು. ಪಟ್ಟಣದ ಕೊನೆಯನ್ನು ಗುರುತಿಸುವ ಹಾಗೆ ಮೈಟ್‌ಲ್ಯಾಂಡ್ ನದಿಯ ಎರಡು ಸೇತುವೆಗಳಿದ್ದವು: ಒಂದು ಇಕ್ಕಟ್ಟಾದ ಕಬ್ಬಿಣದ ಸೇತುವೆ. ಅಲ್ಲಿ ಕಾರುಗಳು ಕೆಲವೊಮ್ಮೆ ಮೊದಲು ಯಾರು ಹಿಂದೆ ಸರಿಯಬೇಕು, ಮೊದಲು ಯಾರು ಮುಂದೆ ಹೋಗಬೇಕೆಂಬುದು ನಿರ್ಣಯವಾಗದೆ ತೊಂದರೆಗೆ ಸಿಲುಕುತ್ತಿರುತ್ತವೆ. ಅದರ ಮೇಲೆ ಮರದ ಹಲಗೆಗಳ ಕಾಲುದಾರಿಯಿತ್ತು. ನಡುನಡುವೆ ಅದರ ಒಂದೊಂದು ಹಲಗೆ ಕಳಚಿಕೊಂಡಿರುತ್ತಿತ್ತು. ಆದರ ಮೇಲಿಂದ ನೀವು ಥಳಥಳನೆ ಹೊಳೆಯುತ್ತ ಅವಸರವಸರ ಹರಿವ ನದಿಯ ನೀರನ್ನು ನೇರವಾಗಿ ನೋಡಬಹುದಿತ್ತು. ನಾನು ಅದನ್ನು ತುಂಬ ಇಷ್ಟಪಡುತ್ತಿದ್ದೆ. ಆದರೆ ಯಾರೋ ಯಾವಾಗಲೋ ಬಂದು  ಹಳೆಯದರ ಜಾಗದಲ್ಲಿ ಹೊಸ ಹಲಗೆ ಹಾಸಿ ಬಿಡುತ್ತಿದ್ದರು. ಸೇತುವೆ ದಾಟಿದರೆ ಸ್ವಲ್ಪ ಹಳ್ಳ. ಒಂದೆರಡು ಕಾಯಿಲೆ ಬಂದಂತಿರುವ ಮನೆಗಳು. ಅವು ಪ್ರತಿ ವಸಂತಕಾಲದಲ್ಲಿ ನೆರೆ ಬಂದು ಮುಳುಗುತ್ತಿದ್ದವು. ಆದರೆ ಆ ವಿಚಿತ್ರ ಜನರು ಯಾವಾಗಲೂ ಮರಳಿ ಬಂದು ಹೇಗಾದರೂ ಮಾಡಿ ಅಲ್ಲಿಯೇ ವಾಸಿಸುತ್ತಿದ್ದರು. ತದನಂತರ ಮತ್ತೊಂದು ಸೇತುವೆ, ಗಿರಣಿಯ ಹೊರಬರುವ ಮಾಲಿನ್ಯದ ಕಾಲುವೆಯ ಮೇಲೆ ಅದಿತ್ತು. ಅದು ಕಿರಿದಾಗಿದ್ದರೂ ನಿಮ್ಮನ್ನು ಮುಳುಗಿಸುವಷ್ಟು ಆಳವಾಗಿತ್ತು. ಅದರ ನಂತರ ರಸ್ತೆ ವಿಭಜಿಸಲಾಗಿತ್ತು. ಅದರ ಒಂದು ಕವಲು ದಕ್ಷಿಣಕ್ಕೆ ಬೆಟ್ಟದ ಮೇಲಕ್ಕೆ ಹೋಗುತ್ತಿತ್ತು. ಹೊರಳಿ ನದಿಯ ಮೇಲೆ ಮತ್ತೆ ಅದು ನಿಜವಾದ ಹೆದ್ದಾರಿಯಾಗುತ್ತಿತ್ತು. ಇನ್ನೊಂದು ಕವಲು ಹಳೆಯ ಜಾತ್ರೆ ಮಾಳದ ಸುತ್ತ ಸುತ್ತಿ ಪಶ್ಚಿಮಕ್ಕೆ ತಿರುಗುತ್ತಿತ್ತು.

ಆ ಪಶ್ಚಿಮ ದಿಕ್ಕಿನ ರಸ್ತೆ ನನ್ನದಾಗಿತ್ತು. ಅಲ್ಲಿ ಉತ್ತರಕ್ಕೆ ಹೋಗುವ ರಸ್ತೆಯೂ ಇತ್ತು. ಅದು ಚಿಕ್ಕದು. ನಿಜವಾದ ಅರ್ಥದಲ್ಲಿ ಅದೊಂದು ಕಾಲುದಾರಿ. ಪಟ್ಟಣದಲ್ಲಿರುವಂತೆ ಹಲವಾರು ಮನೆಗಳು ಒಟ್ಟೊಟ್ಟಿಗೆ ಹತ್ತಿರ ಹತ್ತಿರದಲ್ಲಿವೆ. ಅವುಗಳಲ್ಲಿ ಒಂದು ಮನೆಯ ಕಿಟಕಿಯಲ್ಲಿ ‘ಸಲಾಡಾ ಟೀ’ ಎಂಬ ನಾಮಫಲಕ ಇತ್ತು. ಅಲ್ಲಿ ಒಮ್ಮೆ ದಿನಸಿ ಸಾಮಗ್ರಿಗಳು ಮಾರಾಟಕ್ಕಿದ್ದವು ಎಂಬುದಕ್ಕೆ ಅದು ಪುರಾವೆಯಂತಿತ್ತು. ಅದರ ನಂತರ ಒಂದು ಶಾಲೆ. ಅದರಲ್ಲಿ ನಾನು ನನ್ನ ಜೀವನದ ಎರಡು ವರ್ಷಗಳ ಕಾಲ ಓದಿದ್ದೇನೆ. ಆ ವರ್ಷಗಳ ನಂತರ ಅದನ್ನು ಮತ್ತೆ ಎಂದಿಗೂ ನೋಡಬಾರದೆಂದು ನಾನು ಬಯಸಿದ್ದೆ.

ನನ್ನ ತಾಯಿಯ ಒತ್ತಾಯದಿಂದ ನನ್ನ ತಂದೆ ಪಟ್ಟಣದಲ್ಲಿ ಹಳೆಯ ಶೆಡ್ ಖರೀದಿಸಿದರು. ಇದರಿಂದ ಅವರು ಪಟ್ಟಣ ತೆರಿಗೆ ಪಾವತಿಸುತ್ತಾರೆ. ಆಗಷ್ಟೇ ನಾನು ಪಟ್ಟಣದ ಶಾಲೆಗೆ ಹೋಗಬಹುದು ಎಂಬ ಉದ್ದೇಶ. ಅಂದಂತೆ ಅವರು  ಅದನ್ನು ಮಾಡಬೇಕಾಗಿರಲಿಲ್ಲ ಎಂಬುದು ಬಳಿಕ ತಿಳಿದ ಸಂಗತಿ. ಏಕೆಂದರೆ ಅದೇ ವರ್ಷದಲ್ಲಿ, ನಾನು ಪಟ್ಟಣದಲ್ಲಿ ಶಾಲೆಗೆ ಹೋಗಲು ಪ್ರಾರಂಭಿಸಿದ ತಿಂಗಳಲ್ಲಿಯೇ, ಜರ್ಮನಿಯೊಂದಿಗೆ ಯುದ್ಧ ಘೋಷಿಸಲಾಯಿತು. ವಿಸ್ಮಯವೊಂದು ಘಟಿಸಿದಂತೆ ಹಳೆಯ ಶಾಲೆಯಲ್ಲಿ ನನ್ನ ಬೆದರಿಸಿ ನನ್ನ ಊಟದ ಬ್ಯಾಗನ್ನು ಕಿತ್ತುಕೊಂಡು ನನ್ನನ್ನು ಹೊಡೆಯುವುದಾಗಿ ಬೆದರಿಕೆ ಹಾಕಿದ ಆ ಉದ್ಧಟರು ಮತ್ತು ಆ ಕೋಲಾಹಲದ ಮಧ್ಯೆ ಯಾರೂ ಏನನ್ನೂ ಕಲಿಯುವುದಿಲ್ಲ ಎಂದು ತೋರುತ್ತಿದ್ದ ಶಾಲೆ ಶಾಂತವಾಗಿದ್ದವು. ಶೀಘ್ರದಲ್ಲೇ ಅದು ಕೇವಲ ಒಂದು ಕೋಣೆಯ ಮತ್ತು ಒಬ್ಬ ಶಿಕ್ಷಕನನ್ನು ಮಾತ್ರ ಹೊಂದಿದ ಶಾಲೆಯಾಗಿ ಮಾರ್ಪಟ್ಟಿತ್ತು. ಅವರು ಮಕ್ಕಳಿಗೆ ಬಹುಶಃ ಯಾವಾಗಲೂ ಬಿಡುವೇ ಕೊಡಲಿಲ್ಲ. ಯಾವಾಗಲೂ ನನ್ನನ್ನು ನನ್ನ ಫಕ್ ಮಾಡು ಎಂದು ಆತಂಕಕಾರಿಯಾಗಿ, ರೆಟಾರಿಕಲ್ ಆಗಿ ಕೇಳುವ ಅದೇ ಹುಡುಗರು ಈಗ ಯುದ್ಧಕ್ಕೆ ಹೋದ ತಮ್ಮ ಹಿರಿಯ ಸಹೋದರರಂತೆ ತಾವೂ ಸೈನ್ಯಕ್ಕೆ ಸೇರಲು ಉತ್ಸುಕರಾಗಿದ್ದರು.

ಶಾಲೆಯ ಶೌಚಾಲಯಗಳು ಆಗ ಇದ್ದದ್ದಕ್ಕಿಂತ ಈಗ ಸುಧಾರಿಸಿದ್ದಾವೆಯೋ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ ಅವು ಆಗ ಮಾತ್ರ ಬಹಳವೇ ಕೆಟ್ಟದ್ದಾಗಿದ್ದವು. ನಾವು ಔಟ್‌ಹೌಸ್‌ ಮನೆಯಲ್ಲಿ ಆಶ್ರಯ ಪಡೆದಿದ್ದು, ಆದರೆ ಅದು ಸ್ವಚ್ಚವಾಗಿತ್ತು. ಅಲ್ಲದೆ ಲಿನೋಲಿಯಂ ನೆಲಹಾಸನ್ನು ಸಹ ಹೊಂದಿತ್ತು. ಆ ಶಾಲೆಯಲ್ಲಿ ಯಾವ್ಯಾವವೋ ತಿರಸ್ಕಾರದ ಕಾರಣಗಳಿಗಾಗಿ ಅಥವಾ ಬೇರೊಂದು ಕಾರಣದಿಂದ ಶೌಚಾಲಯವನ್ನು ಕುರಿತು ಯಾರೂ ತಲೆಕೆಡಿಸಿಕೊಳ್ಳಲಿಲ್ಲ. ಅನೇಕ ವಿಧಗಳಲ್ಲಿ ಪಟ್ಟಣದಲ್ಲಿ ಕಲಿಯುವುದು ನನಗೆ ಸುಲಭವೆಂದು ಅನ್ನಿಸಲಿಲ್ಲ. ಏಕೆಂದರೆ ಅಲ್ಲಿ ಎಲ್ಲರೂ ಒಂದನೇ ತರಗತಿಯಿಂದ ಒಟ್ಟಿಗೆ ಇದ್ದವರು. ನಾನು ಇನ್ನೂ ಕಲಿಯದ ಹಲವು ವಿಷಯಗಳಿದ್ದವು. ಆದರೆ ನನ್ನ ಹೊಸ ಶಾಲೆಯ ಶೌಚಾಲಯದ ಹಾಳಾಗದ ಆಸನಗಳನ್ನು ನೋಡುವುದು, ಅದರ ಫ್ಲಶ್ ಸೌಲಭ್ಯದ ಶೌಚಾಲಯಗಳ ಉದಾತ್ತ ನಾಗರೀಕ ಸದ್ದನ್ನು ಕೇಳುವುದು ಒಂದು ಸಮಾಧಾನಕರ ಅಂಶವಾಗಿತ್ತು.

ನನ್ನ ಮೊದಲ ಶಾಲೆಯಲ್ಲಿನ ಓದಿನ ಸಮಯದಲ್ಲಿ ನನಗೆ ಒಬ್ಬಳ ಸ್ನೇಹವಾಯಿತು. ನಾನು ಡಯೇನ್ ಎಂದು ಕರೆಯುತ್ತಿದ್ದ ಆ ಹುಡುಗಿ ನನ್ನ ಕಲಿಕೆಯ ಎರಡನೇ ವರ್ಷದ ನಡುವೆ ಒಂದು ಭಾಗದಲ್ಲಿ ಶಾಲೆ ಸೇರಿದ್ದಳು. ಅವಳು ನನ್ನ ವಯಸ್ಸಿನವಳೇ. ಅವಳು  ರಸ್ತೆಯಿಂದ ದೂರ, ಕಾಲುದಾರಿಯಿದ್ದ ಆ ಮನೆಗಳಲ್ಲಿ ಒಂದರಲ್ಲಿ ವಾಸಿಸುತ್ತಿದ್ದಳು. ಒಂದು ದಿನ ಅವಳು ನಿನಗೆ ಹೈಲ್ಯಾಂಡ್  ಫ್ಲಿಂಗ್ ಡಾನ್ಸ್ ಬರುವುದೇ ಎಂದು ಕೇಳಿದಳು. ನಾನು ಇಲ್ಲ ಎಂದೆ. ನಾನು ಕಲಿಸುವೆ ಎಂದು ಮುಂದಾದಳು. ಇದನ್ನು ಗಮನದಲ್ಲಿಟ್ಟುಕೊಂಡು ನಾನು ಶಾಲೆಯ ನಂತರ ಅವಳ ಮನೆಗೆ ಹೋದೆ. ಅವಳ ತಾಯಿ ಮೊದಲೇ ಸತ್ತು ಹೋಗಿದ್ದಳು. ಹಾಗಾಗಿ ಅವಳು ತಾತ-ಅಜ್ಜಿಯರೊಂದಿಗೆ ವಾಸಿಸಲು ಇಲ್ಲಿಗೆ ಬಂದಿದ್ದಳು.

ಹೈಲ್ಯಾಂಡ್ ಫ್ಲಿಂಗ್ ಡಾನ್ಸ್ ಮಾಡಲು ನಿನಗೆ ಕ್ಲಿಕಿಂಗ್ ಶೂಗಳು ಬೇಕಾಗುವುದೆಂದು ಅವಳು ನನಗೆ ಹೇಳಿದಳು. ಅವು ಅವಳ ಬಳಿ ಇದ್ದವು. ಆದರೆ ನನ್ನ ಬಳಿ ಇರಲಿಲ್ಲ. ಅದೃಷ್ಟಕ್ಕೆ ನಮ್ಮಿಬ್ಬರ ಪಾದಗಳೂ ಒಂದೇ ಸೈಜಿನದ್ದಾಗಿದ್ದವು. ಆದ್ದರಿಂದ ಅವಳು ನನಗೆ ಕಲಿಸಲು ಪ್ರಯತ್ನಿಸುವಾಗ ನಾವು ಕೊಂಚ ಅಡ್ಜಸ್ಟ್ ಮಾಡಿಕೊಳ್ಳಬಹುದು. ಹಾಗೇ ಮಾಡಿಕೊಂಡೆವು ಕೂಡ. ಅಭ್ಯಾಸದ ಕಡೆಗೆ ನಮ್ಮಿಬ್ಬರಿಗೂ ಬಾಯಾರಿಕೆಯಾಯಿತು. ಅವಳ ಅಜ್ಜಿ ನಮಗೆ ಕುಡಿಯಲು ನೀರನ್ನು ಕೊಟ್ಟರು. ಅದು ಶಾಲೆಯಲ್ಲಿದ್ದಂತೆ ತೋಡಿದ ಬಾವಿಯಿಂದ ತಂದ ಉಪ್ಪು ನೀರು. ನಮ್ಮ ಮನೆಯಲ್ಲಿ ಕೊರೆದ ಕೊಳವೆ ಬಾವಿಯಲ್ಲಿ ನಮಗೆ ದೊರೆತ ಸಿಹಿ ನೀರಿನ ಬಗ್ಗೆ ನಾನು ಅಜ್ಜಿಗೆ ವಿವರಿಸಿದೆ. ಅಜ್ಜಿ ಯಾವುದೇ ರೀತಿಯಲ್ಲು ಅದನ್ನು ತಪ್ಪೆಣಿಸಲಿಲ್ಲ. ನಾವೂ ಸಹ ಅಂತಹುದನ್ನು ಕೊರೆಸಬೇಕೆಂದು ಬಯಸಿದ್ದೆವು ಎಂದು ಹೇಳಿದರು ಅಷ್ಟೆ.

ಆದರೆ, ಶೀಘ್ರದಲ್ಲೇ ಶಾಲೆಗೆ ಹೋಗಿ ನಮ್ಮಿಬ್ಬರ ಹಂಚಿಕೆಯನ್ನು ಕಂಡುಕೊಂಡ ನನ್ನ ತಾಯಿ ಆ ಮನೆಯ ಬಳಿ ಬಂದರು.  ಅಂಗಳದಿಂದಲೇ ನನ್ನನ್ನು ಜೋರಾಗಿ ಕೂಗಿ ಕರೆದರು. ವಾಸ್ತವವಾಗಿ ರಸ್ತೆಯ ಬದಿಯಿಂದಲೇ ಅವರು ಜೋರಾಗಿ ಕಾರ್ ಹಾರ್ನ್ ಮಾಡಿದ್ದರು. ಅಜ್ಜಿಯ ಸ್ನೇಹಮಯಿ ಕರೆಗೆ ಅವರು ಯಾವುದೇ ರೀತಿಯಲ್ಲೂ ಪ್ರತಿಕ್ರಿಯಿಸಲಿಲ್ಲ. ನನ್ನ ತಾಯಿ ಸಾಮಾನ್ಯವಾಗಿ ಕಾರು ಓಡಿಸುತ್ತಿರಲಿಲ್ಲ. ಇವತ್ತು ಅವರು ಹಾಗೆ ಮಾಡುವಾಗ ಅವರ ಮುಖದಲ್ಲೊಂದು ಅಸ್ವಸ್ಥ ಗಂಭೀರತೆ ಇತ್ತು. ನಮ್ಮ ಮನೆಯೊಳಗೆ ಹೋಗುವಾಗ ಅವರು ನಾನು ಮತ್ತೆ ಅವಳ ಮನೆಗೆ ಪ್ರವೇಶಿಸುವಂತಿಲ್ಲ ಎಂಬ ಎಚ್ಚರಿಕೆ ಕೊಟ್ಟರು. ನಾನು ಅಮ್ಮನಿಗೆ ಹೈಲ್ಯಾಂಡ್ ಫ್ಲಿಂಗಿಂಗ್ ಡಾನ್ಸ್ ಬಗ್ಗೆ ಹೇಳಿದೆ. ನೀನು ಅದನ್ನು ಸರಿಯಾಗಿ ಒಳ್ಳೆಯವರ ಬಳಿಯೇ ಕಲಿಯಬಹುದು ಎಂದು ಅವರು  ಹೇಳಿದರು. ಆದರೆ ಆ ಮನೆಯಲ್ಲಿ ಅಲ್ಲ ಎಂದೂ ಸೇರಿಸಿದರು. ಇದೇನೂ ನನಗೆ ಕಷ್ಟದ ವಿಚಾರವಾಗಲಿಲ್ಲ. ಏಕೆಂದರೆ ಡಯೇನ್ ಕೆಲವೇ ದಿನಗಳಲ್ಲಿ ಶಾಲೆಗೆ ಬರುವುದನ್ನು ನಿಲ್ಲಿಸಿಬಿಟ್ಟಳು. ಅವಳನ್ನು ಬೇರೆ ಎಲ್ಲಿಗೋ ಕಳುಹಿಸಿರಬೇಕು. ಡಯೇನ್ ಅವರ ತಾಯಿ ಸತ್ತು ಹೋಗಿದ್ದಾರೆ ಎಂದು ನಾನು ನನ್ನ ತಾಯಿಗೆ ಹೇಳಿದೆ. ಅವರು  ಹೌದು, ನನಗೆ ಗೊತ್ತು ಎಂದರು.

ನಾನು ಆಗ ಕಾರಣ ಅರಸಿ ಹೋಗಲಿಲ್ಲ. ನಾನು ಯಾವಾಗ ಅದನ್ನು ತಿಳಿದುಕೊಂಡೆ ಎಂಬುದು ಕೂಡ ನನಗೆ ತಿಳಿದಿಲ್ಲ. ಆದರೆ ನನಗೆ ತಿಳಿದಿದ್ದಂತು ಭಯಾನಕವಾಗಿತ್ತು. ಡಯೇನ್‌ಳ ತಾಯಿ ವೇಶ್ಯೆಯಾಗಿದ್ದಳು. ಅದರಿಂದ ಬಂದ ಕಾಯಿಲೆಯಿಂದ ನರಳಿ ಮರಣ ಹೊಂದಿದ್ದಳು. ಅನೇಕ ವೇಶ್ಯೆಯರು ಅಂತಹುದೇ ರೋಗಗಳಿಗೆ ತುತ್ತಾಗುತ್ತಿದ್ದರೆಂದು ತೋರುತ್ತದೆ. ಅವಳು ಮನೆಯಲ್ಲಿ ತನ್ನ ಸಮಾಧಿ ಆಗಬೇಕೆಂದು ಬಯಸಿದ್ದಳು. ನಮ್ಮದೇ ಚರ್ಚ್‌ನ ಪಾದ್ರಿ ಅಂತಿಮ ವಿಧಿಯನ್ನು ನೆರವೇರಿಸಿದ್ದರು. ಆದರೆ ಅವರು ವಿಧಿಗೆ ಬಳಸಿದ ಒಂದು ಪಠ್ಯ ಭಾಗದ ಬಗ್ಗೆ ವಿವಾದವಿತ್ತು. ಅವರು ಅದನ್ನು ಬಿಟ್ಟುಬಿಡಬೇಕಾಗಿತ್ತು ಎಂದು ಕೆಲವರು ಭಾವಿಸಿದ್ದರು. ಆದರೆ ಅವರು ಸರಿಯಾದ ಕೆಲಸ ಮಾಡಿದ್ದಾರೆಂದು ನನ್ನ ತಾಯಿ ನಂಬಿದ್ದರು.

ಪಾಪದ ಕೆಲಸಕ್ಕೆ ದೊರೆವ ವೇತನವೆಂದರೆ ಸಾವು.

ನನ್ನ ತಾಯಿ ಇದನ್ನು ನನಗೆ ಬಹಳ ಸಮಯದ ನಂತರ ಹೇಳಿದ್ದರು. ಅಥವಾ ಬಹಳ ಸಮಯದ ನಂತರ ಅವರು ಅದನ್ನು ಹೇಳಿದಂತೆ ನನಗೆ ತೋರುತ್ತಿತ್ತು. ಆಗ್ಗೆ ನಾನು ಅವರು ಹೇಳಿದ ಅನೇಕ ವಿಷಯಗಳನ್ನು ದ್ವೇಷಿಸುವ ಹಂತದಲ್ಲಿದ್ದೆ. ವಿಶೇಷವಾಗಿ ಅವರು ಆ ನಡುಗುವಂಥ ಕರ್ಕಶ ಧ್ವನಿಯನ್ನು ಬಳಸಿದಾಗ ಅಥವಾ ರೋಮಾಂಚನಗೊಂಡಂತೆ ಯಾವುದೋ ಗಾಢನಂಬಿಕೆಯಲ್ಲಿ ಏನಾದರೂ ಹೇಳಿದಾಗ.

ನಾನು ಈಗ ಮತ್ತೆ ಮತ್ತೆ ಅಜ್ಜಿಯಲ್ಲಿಗೆ ಓಡುತ್ತಿದ್ದೆ. ಅವರು ಯಾವಾಗಲೂ ನನ್ನ ಕಂಡೊಡನೆ ನಸುನಗೆ ನಗುತ್ತಿದ್ದಳು. ನಾನು ಶಾಲೆಗೆ ಹೇಗೆ ತಪ್ಪದೆ ಹೋಗುತ್ತಿರುವೆ ಎಂಬುವ ವಿಚಾರ ಅದ್ಭುತವಾಗಿದೆ ಎಂದು ಹೇಳುತ್ತಿದ್ದಳು. ಅವಳು ಡಯೇನ್ ಬಗ್ಗೆ ಸಹ ಮಾತಾಡಿದ್ದಳು. ಅವಳು ಎಲ್ಲಿದ್ದರೂ, ಇರುವಲ್ಲಿಯೇ, ನಾನು ಮಾಡಿದಷ್ಟು ಕಾಲ ಅಲ್ಲದಿದ್ದರೂ, ಶಾಲೆಯಲ್ಲಿ ಸಾಕಷ್ಟು ಸಮಯ ಓದುವುದನ್ನು ಮುಂದುವರಿಸಿದ್ದಳು. ಅವಳ ಅಜ್ಜಿಯ ಮಾತಿನ ಪ್ರಕಾರ, ನಂತರ ಅವಳು ಟೊರೊಂಟೊದ ಒಂದು ರೆಸ್ಟೋರೆಂಟ್‌ನಲ್ಲಿ ಕೆಲಸಕ್ಕೆ ಸೇರಿಕೊಂಡಳು. ಅಲ್ಲಿ ಝಗಮಗಿಸುವ ಸೀಕ್ವಿನ್‌ಗಳನ್ನು ಹೊಂದಿರುವ ಉಡುಪನ್ನು ಧರಿಸುತ್ತಿದ್ದಳು. ಆ ಸಮಯದ ವೇಳೆಗೆ ನಾನು ಸಾಕಷ್ಟು ದೊಡ್ಡವಳಾಗಿದ್ದೆ. ಅದು ಬಹುಶಃ ಸೀಕ್ವಿನ್ ಉಡುಪನ್ನು ತೆಗೆವ ಸ್ಥಳವೂ ಹೌದು ಎಂದು ಭಾವಿಸುವಷ್ಟು ಕೀಳು ಮನೋಭಾವ ನನಗಿರಲಿಲ್ಲ.

ನಾನು ಓದಿಗೆ ಬಹಳ ಸಮಯ ತೆಗೆದುಕೊಳ್ಳುತ್ತಿದ್ದೇನೆ ಎಂದು ಭಾವಿಸಿದವರಲ್ಲಿ ಡಯೇನ್ ಳ ಅಜ್ಜಿ ಏಕೈಕ ವ್ಯಕ್ತಿಯೇನಲ್ಲ. ನನ್ನ ಮನೆಯ ರಸ್ತೆಯ ಉದ್ದಕ್ಕೂ, ಪಟ್ಟಣದಲ್ಲಿದ್ದಕ್ಕಿಂತಲೂ ಹೆಚ್ಚು ಮನೆಗಳಿದ್ದವು. ಆದರೆ ಅವರಲ್ಲಿ ಯಾರೂ ಸುತ್ತಲಿನ ಆಸ್ತಿಯಲ್ಲಿ ಹೆಚ್ಚಿನದನ್ನು ಹೊಂದಿರಲಿಲ್ಲ. ಅವುಗಳಲ್ಲಿ ಒಂದು, ಒಂದು ಸಣ್ಣ ಗುಡ್ಡದ ಮೇಲಿತ್ತು. ಅದು ಮೊದಲ ವಿಶ್ವಮಹಾಯುದ್ಧದಲ್ಲಿ ಪಾಲ್ಗೊಂಡಿದ್ದ ಒಂಟಿ ಕೈನ ಸೇನಾನಿ ವೈಟಿ ಸ್ಟ್ರೀಟ್ಸ್‌ಗೆ ಸೇರಿತ್ತು. ಅವನು ಕೆಲವು ಕುರಿಗಳನ್ನು ಸಾಕಿಕೊಂಡಿದ್ದ. ಆ ಹಲವು ವರ್ಷಗಳಲ್ಲಿ ನಾನು ಒಮ್ಮೆ ಮಾತ್ರ ಅವನ ಹೆಂಡತಿಯನ್ನು ನೋಡಿದ್ದೆ. ಅದೂ ಅವಳು ಪಂಪ್‌ನಲ್ಲಿ ಕುಡಿವ ನೀರಿನ ಪಾತ್ರೆ ತುಂಬುತ್ತಿದ್ದಾಗ. ನೀನು ಶಾಲೆಯಲ್ಲಿ ಬಹಳ ಸಮಯದಿಂದ ಇದ್ದೀಯ. ಪರೀಕ್ಷೆಯಲ್ಲಿ ಉತ್ತೀರ್ಣಳಾಗಲು ನಿನಗೆ ಎಂದಿಗೂ ಸಾಧ್ಯವಿಲ್ಲವೆಂಬುದು ಕರುಣಾಜನಕ ವಿಚಾರ. ಅದರೊಂದಿಗೆ ಓದಿಗೆ ನೀನು ಹೇಗೆ ಅಂತ್ಯ ಹಾಡಬಹುದು ಎಂದು ವೈಟಿ ತಮಾಷೆ ಮಾಡಲು ಇಷ್ಟಪಟ್ಟ. ಅದು ನಿಜವೆಂದು ನಟಿಸಿ ನಾನು ಕೂಡ ತಮಾಷೆ ಮಾಡಿದೆ. ಅವರು ನಿಜವಾಗಿಯೂ ನನ್ನ ಮಾತನ್ನು ನಂಬಿರುವರೆಂದು ನನಗೆ ಖಚಿತವಾಗಿ ತಿಳಿದಿರಲಿಲ್ಲ. ರಸ್ತೆಯ ಮೇಲೆ ಓಡಾಡುವ ಜನರನ್ನು ನೀವು ತಿಳಿದಿರುವ ರೀತಿ ಇದು. ಅವರು ಕೂಡ ನಿಮ್ಮನ್ನು ತಿಳಿದಿರುವ ಬಗೆಯೇ ಅದು. ನೀವು ಹಲೋ ಹೇಳುತ್ತೀರಿ, ಅವರು ಹಲೋ ಹೇಳುತ್ತಾರೆ. ವ್ಯವಧಾನವಿದ್ದರೆ ಹವಾಮಾನದ ಬಗ್ಗೆ ಏನಾದರೂ ಹೇಳಬಹುದು. ಅವರು ಕಾರಲ್ಲಿ ಹೊರಟಿದ್ದರೆ ನೀವು ನಡೆಯುತ್ತಿದ್ದರೆ ಅವರು ನಿಮಗೆ ಡ್ರಾಪ್ ನೀಡಬಹುದು. ಇದು ನಿಜವಾಗಲೂ ಹಳ್ಳಿ ಪ್ರದೇಶದಂತಲ್ಲ. ಅಲ್ಲಿನ ಜನರು ಸಾಮಾನ್ಯವಾಗಿ ಒಬ್ಬರು ಇನ್ನೊಬ್ಬರ  ಒಳಮನೆಗಳನ್ನು ತಿಳಿದಿರುತ್ತಿದ್ದರು. ಪ್ರತಿಯೊಬ್ಬರೂ ಹೆಚ್ಚು ಕಡಿಮೆ ಒಂದೇ ರೀತಿಯ ಜೀವನವನ್ನು ಜೀವಿಸುತ್ತಿದ್ದರು.

ನಾನೇನು ಪೂರ್ಣ ಐದು ಶ್ರೇಣಿಗಳನ್ನು ಮುಗಿಸಿದ ಎಲ್ಲರಿಗಿಂತಲೂ ಹೆಚ್ಚು ಸಮಯವನ್ನು ಪ್ರೌಢಶಾಲೆ ಮುಗಿಸಲು ತೆಗೆದುಕೊಳ್ಳಲಿಲ್ಲ. ಆದರೆ ಕೆಲವೇ ಕೆಲವು ವಿದ್ಯಾರ್ಥಿಗಳು ಅದನ್ನು ನನಗಿಂತ ಬೇಗನೆ ಮಾಡಿದರು. ಒಂಬತ್ತನೇ ತರಗತಿಯಲ್ಲಿ ಪ್ರೌಢಶಾಲೆಗೆ ಪ್ರವೇಶಿಸಿದಷ್ಟೇ ಸಂಖ್ಯೆಯ ಜನರು ಪಾಸಾಗಿ ಹೊರಬರುತ್ತಾರೆ ಎಂದು ಆ ದಿನಗಳಲ್ಲಿ ಯಾರೂ ನಿರೀಕ್ಷಿಸುತ್ತಿರಲಿಲ್ಲ. ಎಲ್ಲರೂ ಹದಿಮೂರನೇ ತರಗತಿಯ ಕೊನೆಯಲ್ಲಿ ವಿಷಯ ಜ್ಞಾನ ಮತ್ತು ಸರಿಯಾದ ವ್ಯಾಕರಣ ಬಳಕೆಯ ಚಾತುರ್ಯ ಗಳಿಸಿರುತ್ತಾರೆ. ಆ ಜನರು ಅರೆಕಾಲಿಕ ಉದ್ಯೋಗಗಳನ್ನು ಪಡೆಯುತ್ತಿದ್ದರು; ಕ್ರಮೇಣ ಪೂರ್ಣ ಸಮಯದ ಉದ್ಯೋಗಿಗಳಾಗಿ ನೇಮಕವಾಗುತ್ತಿದ್ದರು. ಆ ಕ್ರಮದಲ್ಲಿ ಅಥವಾ ಇನ್ನೊಂದರಲ್ಲಿ ಹುಡುಗಿಯರಿಗೆ ವಿವಾಹವಾಗುತ್ತಿತ್ತು, ಅವರಿಗೆ ಮಕ್ಕಳೂ ಆಗುತ್ತಿದ್ದವು. ಹದಿಮೂರನೇ ತರಗತಿಯಲ್ಲಿ, ಮೊದಲ ತರಗತಿಯ ವಿದ್ಯಾರ್ಥಿಗಳ ಪೈಕಿ ಕಾಲುಭಾಗದಷ್ಟು ಮಂದಿ ಮಾತ್ರ ಉಳಿದಿರುವಾಗ, ಪಾಂಡಿತ್ಯದ, ಗಂಭೀರ ಸಾಧನೆಯ ಪ್ರಜ್ಞೆಯಿರುತ್ತಿತ್ತು. ನಿಮಗೆ ಏನಾಯಿತು ಎಂಬುದರ ಹೊರತಾಗಿಯೂ ಏನೋ ಒಂದು ವಿಶೇಷ ರೀತಿಯ ಪ್ರಶಾಂತ ಕಾರ್ಯಸಾಧ್ಯವಲ್ಲದ್ದು ತಲೆಯಲ್ಲಿ ತೂಗುತ್ತಿತ್ತು.

ಆ ಮೊದಲ ಶಾಲೆಯಲ್ಲಿ ಇರಲಿ, ಒಂಬತ್ತನೇ ತರಗತಿಯಲ್ಲಿಯೂ ನಾನು ತಿಳಿದಿದ್ದಿದ್ದರಲ್ಲಿ ಹೆಚ್ಚಿನ ಜನರಿಂದ ನಾನು ಒಂದು ಜೀವಿತಾವಧಿಯಷ್ಟು ದೂರದಲ್ಲಿದ್ದೇನೆ ಎಂದು ನಾನು ಭಾವಿಸಿದೆ.

ನಾನು ನೆಲವನ್ನು ಸ್ವಚ್ಛಗೊಳಿಸಲು ಎಲೆಕ್ಟ್ರೋಲಕ್ಸ್ ಕ್ಲೀನರ್ ಅನ್ನು ಹೊರತೆಗೆದಾಗಲೆಲ್ಲ ನಮ್ಮ ಮನೆಯ ಊಟದ ಕೋಣೆಯ ಒಂದು ಮೂಲೆಯಲ್ಲಿ ಕಾಣುವ ಆ ವಸ್ತು ನನಗೆ ಸ್ವಲ್ಪ ಆಶ್ಚರ್ಯವನ್ನುಂಟು ಮಾಡುತ್ತಿತ್ತು. ಅದು ಏನೆಂದು ನನಗೆ ತಿಳಿದಿತ್ತು. ಗಾಲ್ಫ್ ಕ್ಲಬ್‌ಗಳು ಮತ್ತು ಚೆಂಡುಗಳು ಇದ್ದ ಹೊಸದಾಗಿ ಕಾಣುವ ಗಾಲ್ಫ್ ಕಿಟ್. ನಮ್ಮ ಮನೆಯಲ್ಲಿ ಅದು ಏನು ಮಾಡುತ್ತಿದೆ ಎಂದು ನಾನು ಆಶ್ಚರ್ಯಪಡುತ್ತಿದ್ದೆ. ನನಗೆ ಆ ಆಟದ ಬಗ್ಗೆ ಏನೂ ತಿಳಿದಿಲ್ಲ. ಆದರೆ ಅದನ್ನು ಆಡುವ ಜನರ ಬಗ್ಗೆ ನನ್ನವೇ ಆಲೋಚನೆಗಳು ಇದ್ದವು. ನನ್ನ ತಂದೆ ಅವರು ತೊಡುತ್ತಿದ್ದಂತಹ ಉಡುಪುಗಳನ್ನು ಧರಿಸಿದವರಲ್ಲ. ಆದರೂ ಅವರು ಪೇಟೆಗೆ ಹೋದಾಗ ಉತ್ತಮವಾದ ಕೆಲಸದ ಪ್ಯಾಂಟ್ ಧರಿಸುತ್ತಿದ್ದರು. ಸ್ವಲ್ಪ ಮಟ್ಟಿಗೆ ನನ್ನ ತಾಯಿ ಧರಿಸಬೇಕಾದ ಸ್ಫೋರ್ಟಿ ರೀತಿಯ ಬಟ್ಟೆ ತೊಡುವುದನ್ನು ಊಹಿಸಬಲ್ಲೆ. ಅವಳ ಹಾರುವ ನಯವಾದ ಕೂದಲ ಸುತ್ತಲೂ ಸ್ಕಾರ್ಫ್ ಕಟ್ಟಿಕೊಂಡು… ಆದರೆ ವಾಸ್ತವವಾಗಿ ಚೆಂಡನ್ನು ಹೋಲ್ ಗೆ ಸೇರಿಸಲು ಅವರು  ಪ್ರಯತ್ನಿಸುತ್ತಿದ್ದಿಲ್ಲ. ಅಂತಹ ಕಾರ್ಯದ ನಿರರ್ಥಕತೆ ಖಂಡಿತವಾಗಿಯೂ ಅವರನ್ನು ದೂರವಿರಿಸುತ್ತದೆ.

ಅವರು ಯಾವುದಾದರೊಂದು ಸಮಯದಲ್ಲಿ ವಿಭಿನ್ನವಾಗಿ ಯೋಚಿಸಿರಬೇಕು. ತಾನು ಮತ್ತು ನನ್ನ ತಂದೆ ಇಬ್ಬರೂ ತಮ್ಮನ್ನು ತಾವು ವಿಭಿನ್ನ ರೀತಿಯ ಒಂದಷ್ಟು ವಿರಾಮವನ್ನು ಅನುಭವಿಸಿದ ಜನರನ್ನಾಗಿ ಪರಿವರ್ತಿಸಿಕೊಳ್ಳಲಿದ್ದೇವೆ ಎಂದು ಭಾವಿಸಿರಬೇಕು. ಗಾಲ್ಫ್, ಡಿನ್ನರ್ ಪಾರ್ಟಿಗಳು. ಪ್ರಾಯಶಃ ತಮಗೆ ಕೆಲವು ನಿರ್ಬಂಧಗಳು ಇಲ್ಲ ಎಂದು ಅವರು ಸ್ವತಃ ಮನವರಿಕೆ ಮಾಡಿಕೊಂಡಿರಬಹುದು.

ನನ್ನ ತಾಯಿ ಬರಡು ಕೆನಡಿಯನ್ ಶೀಲ್ಡ್ ನಲ್ಲಿರುವ ಒಂದು ಫಾರ್ಮ್ ನಿಂದ ಹೊರಬರಲು ಯಶಸ್ವಿಯಾಗಿದ್ದಳು. ಅದು ನನ್ನ ತಂದೆ ಇದ್ದದ್ದಕ್ಕಿಂತಲೂ ಹೆಚ್ಚು ನಿರಾಶಾದಾಯಕವಾದ ಫಾರ್ಮ್. ಅಲ್ಲಿಂದ ಹೊರಬಂದ ಅವರು ಶಾಲಾ ಶಿಕ್ಷಕಿಯಾಗಿ ಸೇರಿಕೊಂಡಿದ್ದರು. ಆಕೆ ತನ್ನ ಸ್ವಂತ ಸಂಬಂಧಿಕರಿಗೆ ಸಹ ತನ್ನ ಬಳಿ ಸುಳಿಯುದೂ ಸುಲಭವಲ್ಲ ಎಂದೆಲ್ಲ ಮಾತನಾಡಿದ್ದರು. ಅಂತಹ ಪ್ರಯತ್ನದ ನಂತರ ತನಗೆ ಎಲ್ಲ ಕಡೆಯಿಂದಲೂ ಸ್ವಾಗತ ಸಿಕ್ಕೇ ಸಿಗುವುದು ಎಂಬ ಕಲ್ಪನೆ ಆಕೆಗೆ ಬಂದಿರಬಹುದು.

ನನ್ನ ತಂದೆಗೆ ಬೇರೆ ವಿಚಾರಗಳಿದ್ದವು. ಪಟ್ಟಣದ ಜನ ಅಥವಾ ಇನ್ನಿತರ ಯಾವುದೇ ಜನ ತನಗಿಂತ ಉತ್ತಮರು ಎಂದು ಅವರು ಭಾವಿಸಿರಲಿಲ್ಲ. ಆದರೆ ಬಹುಶಃ ಅವರು ಸಹ ಅದನ್ನೇ ಯೋಚಿಸುತ್ತಿರಬಹುದು ಎನ್ನುವುದನ್ನು ಮಾತ್ರ ಅವರು ನಂಬಿದ್ದರು. ಅದನ್ನು ವ್ಯಕ್ತಪಡಿಸಲು ಅವರಿಗೆ ಎಂದಿಗೂ ಅವಕಾಶ ಕೊಡದಿರಲು ಅವರು ನಿರ್ಧರಿಸಿದ್ದರು.

ಗಾಲ್ಫ್ ವಿಷಯದಲ್ಲಿ ಗೆದ್ದಿದ್ದು ಮಾತ್ರ  ನನ್ನ ತಂದೆಯೇ ಎಂದು ತೋರುತ್ತದೆ.

ಮಗ ಬೆಳೆದು ತಮ್ಮ ಪ್ರಶಸ್ತವಾದ ಜಮೀನನ್ನು ನೋಡಿಕೊಂಡು ಬದುಕಬೇಕೆಂದು ಹೆತ್ತವರು ನಿರೀಕ್ಷಿಸಿದ್ದರು. ಆದರೆ ಆ ರೀತಿಯ ಬದುಕಲ್ಲಿ ಅಪ್ಪ ತೃಪ್ತನಾದವರಲ್ಲ. ಅವರು ಮತ್ತು ನನ್ನ ತಾಯಿ ತಮ್ಮ ಆ ಸ್ಥಳವನ್ನು ಬಿಟ್ಟು ಗೊತ್ತಿಲ್ಲದ ಪಟ್ಟಣದ ಸಮೀಪದ ರಸ್ತೆಯ ಕೊನೆಯಲ್ಲಿದ್ದ ಈ ಜಮೀನನ್ನು ಖರೀದಿಸಿದಾಗ ಅವರ ಆಲೋಚನೆಯಿದ್ದಿದ್ದು ತಾವು ಮೊದಲು ಕೆಂಪು ನರಿಗಳನ್ನು ಸಾಕಿ, ನಂತರ ಮಿಂಕ್ ಸಾಕಾಣಿಕೆ ಮಾಡಿ ಶ್ರೀಮಂತರಾಗಬೇಕೆಂದು. ಬಾಲಕನಾಗಿದ್ದಾಗ ನನ್ನ ತಂದೆಗೆ ಜಮೀನಿನಲ್ಲಿ ತಂದೆ ತಾಯಿಗೆ ಸಹಾಯ ಮಾಡುವುದಕ್ಕಿಂತಲೂ, ಪ್ರೌಢಶಾಲೆಗೆ ಕಲಿಯಲು ಹೋಗುವುದಕ್ಕಿಂತಲೂ ಯುಕ್ತಿಯ ಆಟಗಳನ್ನಾಡುವುದು ಹೆಚ್ಚಿನ ಸಕ್ತಿಯಾಗಿತ್ತು. ಅದನ್ನವರು ಕಂಡುಕೊಂಡಿದ್ದರು. ಅದರಿಂದ ಅವರು ಹಿಂದೆಂದಿಗಿಂತಲೂ ಶ್ರೀಮಂತನಾಗುವುದನ್ನು ಕಲ್ಪಿಸಿಕೊಂಡಿದ್ದರು. ಈ ಆಲೋಚನೆ ಮನಸ್ಸಿಗೆ ಬಂದಿದ್ದೇ ಅವರು ಅದನ್ನು ಇಡೀ ಬದುಕಿನ ಧ್ಯೇಯವನ್ನಾಗಿ ಸ್ವೀಕರಿಸಿಯೇ ಬಿಟ್ಟಿದ್ದರು. ತಾನು ಯೋಚಿಸಿದಂತೆ ಬದುಕುತ್ತಲೂ ಇದ್ದರು. ಅವರು ತಾನು ಸಂಗ್ರಹಿಸಿದ ಯಾವತ್ತೂ ಹಣವನ್ನು, ಮತ್ತು ನನ್ನ ತಾಯಿ ಕೊಟ್ಟ ತನ್ನ ಶಿಕ್ಷಕ ವೃತ್ತಿಯ ಉಳಿತಾಯವನ್ನು ಅಲ್ಲಿ ತೊಡಗಿಸಿದ್ದರು. ಪ್ರಾಣಿಗಳು ವಾಸಿಸುವ ಗೂಡುಗಳನ್ನು, ಪಂಜರಗಳನ್ನು ಅವರು ನಿರ್ಮಿಸಿದರು. ಅವರ ಸೆರೆಯಲ್ಲಿದ್ದ ಜೀವಗಳನ್ನು ಕಾಯಲು ತಂತಿಯ ತಡೆಗೋಡೆಗಳನ್ನು ಹಾಕಿಸಿದರು. ಹನ್ನೆರಡು ಎಕರೆಯಷ್ಟು ದೊಡ್ಡದಾದ ಜಮೀನು ಅದಕ್ಕೆಲ್ಲ ಸರಿಯಾದ ಉದ್ದಳತೆಯದ್ದಾಗಿದ್ದು. ಸ್ವಂತ ಹಸುವಿಗೆ ಹುಲ್ಲು ಬೆಳೆಯಲು ಮತ್ತು ಅವಕ್ಕೆ ಮೇಯಲು ಸಾಕಷ್ಟು ಹುಲ್ಲುಗಾವಲು ಇತ್ತು. ಮುದಿ ಕುದುರೆಗಳು ನರಿಗಳಿಗೆ ಆಹಾರವಾಗಲು ಕಾಯುತ್ತ ಮೇಯಲು ಬೇಕಾದ ಹುಲ್ಲೂ ಸಾಲುವಷ್ಟಿತ್ತು. ಹುಲ್ಲುಗಾವಲು ನದಿಯವರೆಗೂ ಸಾಗಿತ್ತು. ಹನ್ನೆರಡು ಎಲ್ಮ್ ಮರಗಳ ನೆರಳೂ ಅಲ್ಲಿತ್ತು.

ಹಾಗೆಂದೇನೆ ಅಲ್ಲಿ ಕೊಲ್ಲುವುದು ಕೂಡ ಸಾಕಷ್ಟು ನಡೆಯುತ್ತಿತ್ತು. ಈಗ ನಾನು ಅದರ ಬಗ್ಗೆ ಯೋಚಿಸುತ್ತೇನೆ. ಹಳೆಯ ಕುದುರೆಗಳನ್ನು ಮಾಂಸವಾಗಿ ಪರಿವರ್ತಿಸಬೇಕಾಗಿತ್ತು. ತುಪ್ಪಳ ಹೊಂದಿರುವ ಪ್ರಾಣಿಗಳ ಪೈಕಿ ಕೇವಲ ತಳಿಯನ್ನು ಮುಂದುವರಿಸಲು ಬೇಕಾದವುಗಳನ್ನು ಉಳಿಸಿ ಬಾಕಿ ಪ್ರಾಣಿಗಳ ವಧೆಗೆ ಪ್ರತಿ ಶರತ್ಕಾಲವನ್ನು ಆರಿಸಿಕೊಳ್ಳಲಾಗುತ್ತಿತ್ತು. ನಾನು ಇದಕ್ಕೆ ಹೊಂದಿಕೊಂಡಿದ್ದೆ. ಹಾಗಾಗಿ ಎಲ್ಲವನ್ನೂ ಸುಲಭವಾಗಿ ನಿರ್ಲಕ್ಷಿಸಬಲ್ಲವಳಾಗಿದ್ದೆ. ನಾನು ಇಷ್ಟಪಟ್ಟ ಪುಸ್ತಕಗಳಲ್ಲಿ ಪರಿಶುದ್ಧವಾದ ಯಾವುದನ್ನಾದರೂ ಹೋಲುವಂತಹ ಒಂದು ದೃಶ್ಯವನ್ನು ನಿರ್ಮಿಸುತ್ತಿದ್ದೆ. ಉದಾಹರಣೆಗೆ ಗ್ರೀನ್ ಗೇಬಲ್ಸ್ ನ ಆನ್, ಅಥವಾ ಸಿಲ್ವರ್ ಬುಷ್ ನ ಪ್ಯಾಟ್. ಹುಲ್ಲುಗಾವಲು ಮತ್ತು ಹೊಳೆಯುವ ನದಿಯ ಮೇಲೆ ಕೊಂಬೆಗಳು ತೂಗಾಡುತ್ತಿದ್ದ ಎಲ್ಮ್ ಮರಗಳ ಸಹಾಯ ನನಗಿತ್ತು. ಹುಲ್ಲುಗಾವಲುಗಿಂತ ಮೇಲಿರುವ ದಂಡೆಯಿಂದ ಹರಿವ ಒಂದು ಆಶ್ಚರ್ಯಕರ ತೊರೆ. ಸಾವು ಹಣೆಯ ಮೇಲೆ ಬರೆದ ಕುದುರೆಗಳಿಗೆ, ಮುದಿ ಹಸುವಿಗೆ ಅದು ನೀರು ಒದಗಿಸುತ್ತಿತ್ತು. ನನಗೂ ಸಹ. ನಾನು ಅಲ್ಲಿಗೆ ಒಯ್ಯುತ್ತಿದ್ದ ತಗಡಿನ ಚೊಂಬಿನಿಂದ ನೀರು ಮೊಗೆಯುತ್ತಿದ್ದೆ. ತಾಜಾ ಸಗಣಿ ಗೊಬ್ಬರ ಅಲ್ಲಿ ಯಾವಾಗಲೂ ಇರುತ್ತಿತ್ತು. ಆದರೆ ನಾನು ಅದನ್ನು ನಿರ್ಲಕ್ಷಿಸುತ್ತಿದ್ದೆ. ಏಕೆಂದರೆ ಗ್ರೀನ್ ಗೇಬಲ್ಸ್‌ನಲ್ಲಿ ಅನ್ನಿ ಹಾಗೆಯೇ ಏನಾದರೂ ಮಾಡಿರಬೇಕು.

ಆ ದಿನಗಳಲ್ಲಿ ಕೆಲವೊಮ್ಮೆ ನಾನು ನನ್ನ ತಂದೆಗೆ ಸಹಾಯ ಮಾಡಬೇಕಾಗಿತ್ತು. ನನ್ನ ತಮ್ಮನಿಗೆ ಇನ್ನೂ ಸಾಕಷ್ಟು ವಯಸ್ಸಾಗಿರಲಿಲ್ಲ. ನಾನು ಶುದ್ಧ ನೀರನ್ನು ಪಂಪ್ ಮಾಡಿ ಗೂಡುಗಳ ಸಾಲಿನಲ್ಲಿ ಹಿಂದೆ ಮುಂದೆ ನಡೆದು, ಪ್ರಾಣಿಗಳ ಕುಡಿಯುವ ನೀರಿನ ಟಿನ್‌ಗಳನ್ನು ಸ್ವಚ್ಛಗೊಳಿಸಿ ಅವುಗಳನ್ನು ಮತ್ತೆ ತುಂಬಿಸುತ್ತಿದ್ದೆ. ನನಗೆ ಇದರಿಂದ ಆನಂದವಾಗುತ್ತಿತ್ತು. ಕೆಲಸದ ಪ್ರಾಮುಖ್ಯತೆಯನ್ನು, ಆಗಾಗ್ಗೆ ಏಕಾಂತವನ್ನು ನಾನು ಇಷ್ಟಪಡುತ್ತಿದ್ದೆ. ಆನಂತರ ನನ್ನ ತಾಯಿಗೆ ಸಹಾಯ ಮಾಡಲು ನಾನು ಮನೆಯಲ್ಲಿಯೇ ಇರಬೇಕಾಯಿತು. ನಾನು ಅಸಮಾಧಾನದಿಂದಲೂ, ಜಗಳಗಂಟಿತನದ ಟೀಕೆಗಳಿಂದಲೂ ತುಂಬಿ ಹೋಗಿದ್ದೆ. ಅದನ್ನು “ಎದುರು ಮಾತನಾಡುವುದು” ಎಂದು ಕರೆಯಲಾಗುತ್ತಿತ್ತು. ನಾನು ಅವರ ಭಾವನೆಗಳನ್ನು ನೋಯಿಸಿದೆನೆಂದು ಅಮ್ಮ  ಹೇಳುತ್ತಿದ್ದಳು. ಇದರ ಫಲಿತಾಂಶ ಅವರು ನನ್ನ ಮೇಲೆ ನನ್ನ ತಂದೆಗೆ ದೂರು ಹೇಳಲು ಕೊಟ್ಟಿಗೆಗೆ ಹೋಗುವುದು. ಅವರು ಕೆಲಸ ಬಿಟ್ಟು ತನ್ನ ಬೆಲ್ಟ್ ಕಳಚಿ ನನ್ನ ಹೊಡೆಯುತ್ತಿದ್ದರು. ಅಷ್ಟರ ಮಟ್ಟಿಗೆ ಅವರ ಕೆಲಸಕ್ಕೆ ಅಡ್ಡಿಯಾಗುತ್ತಿತ್ತು. (ಇದೇನೂ ಆ ಸಮಯದಲ್ಲಿ ಅಸಾಮಾನ್ಯ ಶಿಕ್ಷೆಯಾಗಿರಲಿಲ್ಲ.) ನಂತರ ನಾನು ಹಾಸಿಗೆಯಲ್ಲಿ ಅಳುತ್ತಾ ಮಲಗಿರುತ್ತಿದ್ದೆ. ಮನೆಯಿಂದ ಓಡಿಹೋಗುವ ಯೋಜನೆಗಳನ್ನು ಸಹ ಮಾಡುತ್ತಿದ್ದೆ. ಆದರೆ ಆ ಹಂತವು ಸಹ ಸಂದುಹೋಯಿತು. ನನ್ನ ಹದಿಹರೆಯದಲ್ಲಿ ನಾನು ಇಂತಹ ಭಾವನೆಗಳನ್ನು ಹಿಡಿತಕ್ಕೆ ತಂದುಕೊಂಡಿದ್ದೆ. ತಮಾಷೆಯ ವ್ಯಕ್ತಿತ್ವವನ್ನೂ ಬೆಳೆಸಿಕೊಂಡಿದ್ದೆ. ಪಟ್ಟಣದಲ್ಲಿ ಕೇಳಿದ ಅಥವಾ ಶಾಲೆಯಲ್ಲಿ ಸಂಭವಿಸಿದ ವಿಷಯಗಳನ್ನು ತಮಾಷೆಯಾಗಿ ನಿರೂಪಿಸುವುದಕ್ಕೆ ನಾನು ಹೆಸರುವಾಸಿಯಾಗಿದ್ದೆ.

ನಮ್ಮ ಮನೆ ಸಾಕಷ್ಟು ದೊಡ್ಡದಾಗಿತ್ತು. ಅದನ್ನು ಯಾವಾಗ ನಿರ್ಮಿಸಲಾಗಿತ್ತು ಎಂದು ನನಗೆ ತಿಳಿದಿರಲಿಲ್ಲ. ಆದರೆ ಅದರ ವಯಸ್ಸು ಒಂದು ಶತಮಾನಕ್ಕಿಂತ ಕಡಿಮೆಯಾಗಿರಬೇಕು. ಏಕೆಂದರೆ 1858ರಲ್ಲಿ ಈಗ ಕಣ್ಮರೆಯಾಗಿರುವ ಬೊಡ್ಮಿನ್ ಎಂಬ ಸ್ಥಳದಲ್ಲಿ ಆ ಮೊದಲ ವಸಾಹತುಗಾರ ತನಗಾಗಿ ಸ್ವತಃ ದೋಣಿಯೊಂದನ್ನು ನಿರ್ಮಿಸಿಕೊಂಡಿದ್ದ. ಅದರಲ್ಲಿಯೇ ನದಿಯಲ್ಲಿ ಸಾಗಿ ಬಂದು ಇಲ್ಲಿ ನಿಂತು ಭೂಮಿಯ ಮೇಲಿನ ಮರಗಳನ್ನು ತೆರವುಗೊಳಿಸಿ ಮನೆ ಕಟ್ಟಿಕೊಂಡಿದ್ದ. ಅದು ನಂತರ ಬೆಳೆದು ಈ ಇಡೀ ಗ್ರಾಮವಾಯಿತು. ಆ ಆರಂಭದ ಹಳ್ಳಿಗೆ ಶೀಘ್ರದಲ್ಲೇ ಒಂದು ಮರಕೊಯ್ಯುವ ಮಿಲ್, ಒಂದು ಹೋಟೆಲ್, ಮೂರು ಚರ್ಚುಗಳು ಮತ್ತು ಒಂದು ಶಾಲೆ ಬಂದವು. ಅದೇ ಶಾಲೆ ನನ್ನ ಮೊದಲ ಶಾಲೆಯಾಗಿತ್ತು. ಅದೆಂದರೆ ನನಗೆ ವಿಪರೀತ ಭಯವಿತ್ತು. ನಂತರ ನದಿಗೆ ಅಡ್ಡಲಾಗಿ ಒಂದು ಸೇತುವೆಯನ್ನು ನಿರ್ಮಿಸಲಾಯಿತು. ಅದರಿಂದ ನದಿಯ ಇನ್ನೊಂದು ಬದಿಯಲ್ಲಿನ ಎತ್ತರದ ನೆಲದ ಮೇಲೆ ವಾಸಿಸಲು ಎಷ್ಟು ಅನುಕೂಲಕರವಾಗಿದೆ ಎಂದು ಜನರಿಗೆ ತಿಳಿಯಲು ಶುರುವಾಯಿತು. ಮೂಲ ವಸಾಹತು ಅಪಖ್ಯಾತಿಗೆ ಇಳಿಯಿತು. ವಿಚಿತ್ರವೆಂದರೆ ಅದು ನಾನು ಈಗ ಹೇಳಿದ ಅರ್ಧ ಗ್ರಾಮ.

ನಮ್ಮ ಮನೆ ಆ ಮುಂಚಿನ ವಸಾಹತು ಪ್ರದೇಶದಲ್ಲಿ ಕಟ್ಟಿದ ಮೊದಲನೆಯ ಮನೆಯಾಗಿರಲಿಲ್ಲ. ಏಕೆಂದರೆ ಅದು ಇಟ್ಟಿಗೆಯ ಚಾವಣಿಯದು, ಕೇವಲ ಮರದಿಂದ ಕೂಡಿತ್ತು. ಅದಕ್ಕೆ ಬಹಳ ಕಾಲದ ನಂತರ ಮೇಲಿನ ಮಾಳಿಗೆ ಹಾಕಲಾಗಿತ್ತು. ಅದು ಹಳ್ಳಿಗೆ ಬೆನ್ನು ತಿರುಗಿಸಿತ್ತು. ಇದು ಪಶ್ಚಿಮಕ್ಕೆ ಇದ್ದ ಸ್ವಲ್ಪ ಇಳಿಜಾರಿನ ಬಯಲಿಗೆ ಗುಪ್ತ ಗಡಿರೇಖೆ ನಿರ್ಮಿಸಿತ್ತು. ಅಲ್ಲಿ ನದಿ ತಿರುಗಿ ಅದನ್ನು ಬಿಗ್ ಬೆಂಡ್ ಎಂದು ಕರೆಯಲಾಗಿತ್ತು. ನದಿಯ ಆಚೆಗೆ ಗಾಢವಾದ ನಿತ್ಯಹರಿದ್ವರ್ಣ ಮರಗಳ ಒಂದು ಪಟ್ಟಿ ಇತ್ತು. ಬಹುಶಃ ದೇವದಾರು ಮರಗಳಿರಬಹುದು. ಆದರೆ ಅದೇ ಎಂದು ಹೇಳಲು ಅದು ತುಂಬಾ ದೂರವಿದೆ. ಇನ್ನೂ ದೂರದಲ್ಲಿ, ಮತ್ತೊಂದು ಬೆಟ್ಟದ ಪಕ್ಕದಲ್ಲಿ, ಇನ್ನೊಂದು ಮನೆ ಇತ್ತು. ಅಷ್ಟು ದೂರದಿಂದ ಸ್ವಲ್ಪ ಚಿಕ್ಕದಾಗಿ ಕಾಣುತ್ತಿತ್ತು. ನಮ್ಮ ಮನೆಗೆ ಅದು ಎದುರು. ಆದರೆ ನಾವು ಎಂದಿಗೂ ಪರಸ್ಪರ ಭೇಟಿ ನೀಡಿದ್ದಿಲ್ಲ ಅಥವಾ ಪರಸ್ಪರ ತಿಳಿದುಕೊಂಡಿದ್ದಿಲ್ಲ. ಅದು ಕಥೆಯೊಂದರಲ್ಲಿ ಇರುವ ಕುಬ್ಜರ ಮನೆಯಂತೆ. ಅಲ್ಲಿ ವಾಸಿಸುತ್ತಿದ್ದ, ಅಥವಾ ಒಂದು ಕಾಲದಲ್ಲಿ ಅಲ್ಲಿ ವಾಸವಾಗಿದ್ದ ಮನುಷ್ಯನ ಹೆಸರು ನಮಗೆ ತಿಳಿದಿತ್ತು. ಈ ಅನಿಶ್ಚಿತತೆ ಏಕೆಂದರೆ ಅವನು ಈ ವೇಳೆಗೆ ಸತ್ತಿರಬಹುದು. ರೋಲಿ ಗ್ರೇನ್ ಅವನ ಹೆಸರು. ಅವರ ಗಿಡ್ಡ ಹೆಸರಿನ ಹೊರತಾಗಿಯೂ, ನಾನು ಈಗ ಬರೆಯುತ್ತಿರುವ ವಿಷಯದಲ್ಲಿ ಅವನಿಗೆ ಹೆಚ್ಚಿನ ಪಾತ್ರವಿಲ್ಲ. ಏಕೆಂದರೆ ಇದು ಕಥೆಯಲ್ಲ, ಜೀವನ ಮಾತ್ರ.

ನನ್ನ ತಾಯಿಗೆ ನಾನು ಹುಟ್ಟುವ ಮೊದಲು ಎರಡು ಬಾರಿ ಗರ್ಭಪಾತವಾಗಿತ್ತು. ಆದ್ದರಿಂದ 1931ರಲ್ಲಿ ನಾನು ಹುಟ್ಟಿದಾಗ ಅದು ಅವಳಿಗೆ ಸ್ವಲ್ಪ ತೃಪ್ತಿ ತಂದಿರಬೇಕು. ಆದರೆ ಕಾಲ ಭರವಸೆಯನ್ನು ತುಸುತುಸುವೆ ಕಡಿಮೆ ಮಾಡುತ್ತಿತ್ತು. ಸತ್ಯವೆಂದರೆ ನನ್ನ ತಂದೆ ಸ್ವಲ್ಪ ತಡವಾಗಿ ತುಪ್ಪಳದ ವ್ಯವಹಾರಕ್ಕೆ ಇಳಿದಿದ್ದರು. ಇಪ್ಪತ್ತರ ದಶಕದ ಮಧ್ಯಭಾಗದಲ್ಲಿ, ತುಪ್ಪಳಗಳು ಹೊಸದಾಗಿ ಜನಪ್ರಿಯವಾಗಿದ್ದವು. ಜನರಲ್ಲಿ ಹಣವಿತ್ತು. ಆಗಲಾದರೆ ಅವರು ನಿರೀಕ್ಷಿಸಿದ ಯಶಸ್ಸು ದೊರೆಯಬಹುದಾಗಿತ್ತು. ಆದರೆ ಅವರು ಆಗ ತಮ್ಮ ವಹಿವಾಟು ಪ್ರಾರಂಭಿಸಿರಲಿಲ್ಲ. ಇದ್ದರೂ, ಯುದ್ಧದವರೆಗೂ, ಯುದ್ಧದ ಕಾಲದಲ್ಲಿ ಸಹ ನಾವು ಬದುಕುವುದಕ್ಕೆ ಸಾಕಾಗುವಷ್ಟು ಸಂಪಾದನೆಯಾಗುತ್ತಿತ್ತು. ಯುದ್ಧ ಮುಗಿದಾಗಲೂ ತುಪ್ಪಳ ಮಾರಾಟಕ್ಕೆ ಪ್ರೋತ್ಸಾಹದಾಯಕ ವಾತಾವರಣವಿದ್ದಿರಬೇಕು. ಏಕೆಂದರೆ ಅದೇ ಬೇಸಿಗೆಯಲ್ಲಿ ನನ್ನ ತಂದೆ ಮನೆಯನ್ನು ರಿಪೇರಿ ಮಾಡಿಸಿದರು. ಸಾಂಪ್ರದಾಯಿಕ ಕೆಂಪು ಇಟ್ಟಿಗೆಯ ಮೇಲೆ ಕಂದು ಬಣ್ಣ ಹೊಡೆಸಿದರು. ಇಟ್ಟಿಗೆಗಳು ಮತ್ತು ಬೋರ್ಡ್‌ಗಳನ್ನು ಜೋಡಿಸಿದ ವಿಧಾನದಲ್ಲಿ ಕೆಲವು ಸಮಸ್ಯೆಗಳಿದ್ದವು. ಅದರಿಂದ ಥಂಡಿಯನ್ನು ಹೊರಗಿಡಲಾಗುತ್ತಿರಲಿಲ್ಲ. ಆ ಕೆಲಸವನ್ನೇ ಅಲ್ಲವೇ ಅದು ಮಾಡಬೇಕಾಗಿದ್ದದ್ದು? ಬಣ್ಣದ ಒಂದು ಕೋಟ್ ಅದಕ್ಕೆ ಸಹಾಯ ಮಾಡುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಅದು ಎಂದಿಗೂ ಆ ಉಪಕಾರವನ್ನು ಮಾಡಲಿಲ್ಲ ಎಂಬುದು ನನಗೆ ನೆನಪಿದೆ. ಆದರೆ ಜೊತೆಗೆ ನಮಗೆ ಇನ್ನೊಂದು ಬಚ್ಚಲು ಸಿಕ್ಕಿತು. ಬಳಕೆಯಾಗದ ಆಹಾರದ ಎಲಿವೇಟರ್  ಅಡುಗೆ ಮನೆಯ ಬೀರುಗಳಾದವು. ತೆರೆದ ಮೆಟ್ಟಿಲುಗಳಿದ್ದ ದೊಡ್ಡ ಊಟದ ಕೋಣೆಯು ಒಳಮೆಟ್ಟಿಲುಗಳನ್ನು ಹೊಂದಿರುವ ಕೋಣೆಯಾಗಿ ಬದಲಾಯಿತು. ಆ ಬದಲಾವಣೆ ಹೀಗೇ ಎಂದು ಹೇಳಲಾಗದ ರೀತಿಯಲ್ಲಿ ನನಗೆ ಸಾಂತ್ವನ ನೀಡಿತು. ನನ್ನ ತಂದೆ ನನ್ನನ್ನು ಹೊಡೆದದ್ದು ಯಾವಾಗಲೂ ಆ ಹಳೆಯ ಕೋಣೆಯಲ್ಲಿಯೇ. ಆ ಎಲ್ಲ ದುಃಖ ಮತ್ತು ಅವಮಾನಕ್ಕಾಗಿ ಸಾಯಬೇಕೆಂದು ನಾನು ಬಯಸುತ್ತ ಇದ್ದದ್ದು ಕೂಡ ಅಲ್ಲಿಯೇ. ಈಗ ಮನೆಯಲ್ಲಿನ ಮಾರ್ಪಾಡುಗಳ ದೆಸೆಯಿಂದ ಅಂತಹದು ಸಂಭವಿಸುವುದನ್ನು  ಊಹಿಸಿಕೊಳ್ಳುವುದು ಸಹ ಕಷ್ಟಕರವಾಗಿದೆ. ನಾನು ಪ್ರೌಢಶಾಲೆಯಲ್ಲಿದ್ದೆ. ಪ್ರತಿವರ್ಷ ಹಿಂದಿನ ವರ್ಷಕ್ಕಿಂತ ಉತ್ತಮವಾಗಿ ಓದುತ್ತಿದ್ದೆ, ಕಲಿಯುತ್ತಿದ್ದೆ. ಏಕೆಂದರೆ ಹೆಮ್ ಸ್ಟಿಚಿಂಗ್ ಮಾಡುವುದು ಮತ್ತು ನೇರವಾದ ಪೆನ್ನಿನಿಂದ ಬರೆಯುವಂತಹ ಚಟುವಟಿಕೆಗಳನ್ನು ಕೈಬಿಡಲಾಯಿತು. ಸಮಾಜ ಶಾಸ್ತ್ರ ಇತಿಹಾಸವಾಯಿತು. ಲ್ಯಾಟಿನ್ ಭಾಷೆಯನ್ನು ಕಲಿಯಬಹುದು ಎಂದೂ ಪರವಾನಗಿ ಸಿಕ್ಕಿತು.

ಆದಾಗ್ಯೂ, ಆ ಪುನರ್ನಿರ್ಮಾಣದ ಆಶಾವಾದದ ನಂತರ, ನಮ್ಮ ವ್ಯವಹಾರವು ಮತ್ತೆ ಒಣಗಿಹೋಯಿತು. ಈ ಬಾರಿ ಅದು ಹಿಂತಿರುಗಲಿಲ್ಲ. ನನ್ನ ತಂದೆ ಎಲ್ಲಾ ಕೆಂಪುನರಿಗಳನ್ನು, ನಂತರ ಮಿಂಕ್ ಗಳನ್ನು ಮೂರು ಕಾಸಿಗೆ ಸೀದರು. ಅವರು ಎಷ್ಟು ಕಡಿಮೆ ಹಣ ಪಡೆದರು ಎಂದರೆ ಅದು ಅವರಿಗೆ ಆಘಾತಕಾರಿಯಾಗಿತ್ತು. ನಂತರ, ಅಂದರೆ ಅವರು ಫೌಂಡರಿಯಲ್ಲಿ ಕಾಯುವ ಕೆಲಸಕ್ಕೆ ಹೋಗುವ ಮೊದಲು, ಅವರ ಆ ಉದ್ಯಮವು ಹುಟ್ಟಿದ ಮತ್ತು ಸತ್ತಿದ್ದ ಶೆಡ್ಡುಗಳನ್ನು ಕೆಡವುವ ಕೆಲಸ ಮಾಡಿದರು.  ಮಧ್ಯರಾತ್ರಿಯವರೆಗೆ ಅವರು ಮನೆಗೆ ಬರುತ್ತಿರಲಿಲ್ಲ. ನಾನು ಶಾಲೆಯಿಂದ ಮನೆಗೆ ಬಂದ ಕೂಡಲೇ, ನನ್ನ ತಂದೆಯ ರಾತ್ರಿಯ ಊಟ ಸಿದ್ಧ ಮಾಡುವ ಕೆಲಸಕ್ಕೆ ಹೋಗುತ್ತಿದ್ದೆ. ನಾನು ಹಂದಿಯ ಕಾಟೇಜ್ ರೋಲಿನ ಎರಡು ತುಂಡುಗಳನ್ನು ಹುರಿದು ಅವುಗಳ ಮೇಲೆ ಸಾಕಷ್ಟು ಕೆಚಪ್ ಹಾಕಿಡುತ್ತಿದ್ದೆ. ಅವನ ಥರ್ಮೋಸ್ ಅನ್ನು ಕಡು ಕಪ್ಪು ಚಹಾದಿಂದ ತುಂಬಿಡುತ್ತಿದ್ದೆ. ತೌಡಿನ ಮಫಿನ್ ಮೇಲೆ ಜಾಮನ್ನು ಹಾಕಿಡುತ್ತಿದ್ದೆ. ಅಥವಾ ಬಹುಶಃ ಮನೆಯಲ್ಲಿ ತಯಾರಿಸಿದ ಪೈನ ದೊಡ್ಡ ತುಂಡು. ಕೆಲವೊಮ್ಮೆ ಶನಿವಾರದಂದು ನಾನು ಪೈ ತಯಾರಿಸುತ್ತಿದ್ದೆ. ಕೆಲವೊಮ್ಮೆ ನನ್ನ ತಾಯಿ. ಆದರೂ ಅವರು ಪೈ ಬೇಕ್ ಮಾಡುವುದರ ಗುಣಮಟ್ಟದ ಬಗ್ಗೆ ಈಗ ದಿನೇ ದಿನೇ ಹೆಚ್ಚು ವಿಶ್ವಾಸವಿಡುವಂತಿಲ್ಲ.

ನಮ್ಮ ಮೇಲೆ ಏನೋ ಒಂದು ಇನ್ನಷ್ಟು ವಿನಾಶಕಾರಿಯಾಗಿರುವುದು ಬಂದೆರಗಿದ್ದು ಅನಿರೀಕ್ಷಿತವಾಗಿತ್ತು ಮತ್ತು ತಂದೆಯ ಆದಾಯದ ನಷ್ಟಕ್ಕಿಂತ ಹೆಚ್ಚು ಕ್ಲೇಷವನ್ನುಂಟುಮಾಡಿತ್ತು. ಆದರೂ ನಮಗೆ ಅದು ಏಕೆಂದು ಇನ್ನೂ ಅರ್ಥವಾಗಿಲ್ಲ. ಅದು ನನ್ನ ತಾಯಿಯ ಮೇಲಿನ ಪಾರ್ಕಿನ್ಸನ್ ಕಾಯಿಲೆಯ ಆರಂಭಿಕ ಆಕ್ರಮಣವಾಗಿತ್ತು. ಅದು ನನ್ನ ತಾಯಿ ತನ್ನ ನಲವತ್ತರ ಹರೆಯದಲ್ಲಿದ್ದಾಗಲೇ ತೋರಿಬಿಟ್ಟಿತು. ಮೊದಲಿಗೆ, ಅದು ತುಂಬಾ ಕೆಟ್ಟದ್ದಾಗಿದೆ ಅನಿಸಿರಲಿಲ್ಲ. ಅಪರೂಪಕ್ಕೆ ಅವಳ ಕಣ್ಣುಗಳು  ಅಲೆದಾಡುವ ರೀತಿಯಲ್ಲಿ ಅವಳ ತಲೆಯಲ್ಲೇ ತಿರುಗಿದವು. ಜೊಲ್ಲು ಅತಿಯಾಗಿ ಸುರಿದದ್ದು ಅವಳ ತುಟಿಗಳ ಸುತ್ತಲೂ ಗೋಚರಿಸಿತು. ಸ್ವಲ್ಪ ಸಹಾಯದಿಂದ ಅವರು ಬೆಳಗ್ಗೆ ಬಟ್ಟೆ ಧರಿಸಬಹುದಿತ್ತು. ಮನೆಯ ಸುತ್ತಲೂ ಅದೂ ಇದೂ ಮಾಡಲು ಅವರಿಗೆ ಸಾಧ್ಯವಾಗುತ್ತಿತ್ತು. ಆಶ್ಚರ್ಯಕರ ವಿಚಾರವೆಂದರೆ ಅವರು ಬಹಳ ಕಾಲದವರೆಗೆ ತನ್ನಲ್ಲಿ ಸ್ವಲ್ಪ ಶಕ್ತಿಯನ್ನ ಆದರೂ ಹಿಡಿದಿರಿಸಿಕೊಂಡಿದ್ದಳು.

ಇದು ತುಂಬಾ ಅತಿ ಎಂದು ನೀವು ಭಾವಿಸುತ್ತೀರಿ. ವ್ಯಾಪಾರ ವ್ಯವಹಾರಗಳು ಹೋಗಿವೆ. ನನ್ನ ತಾಯಿಯ ಆರೋಗ್ಯ ಕೆಡುತ್ತಾ ಹೋಗುತ್ತಿದೆ. ಇದು ಕತೆಯಲ್ಲಿ ನಿರೂಪಣೆ ಮಾಡಿದಂತಲ್ಲ. ಆದರೆ ವಿಚಿತ್ರವೆಂದರೆ ನನಗೆ ಆ ಸಮಯ ದುಃಖಕರವಾಗಿತ್ತು ಎಂದು ನೆನಪಿಲ್ಲ. ಮನೆಯಲ್ಲಿ  ವಿಶೇಷವಾಗಿ ನಿರಾಶಾದಾಯಕ ಮನಸ್ಥಿತಿ ಇರಲಿಲ್ಲ. ಬಹುಶಃ ನನ್ನ ತಾಯಿಯ ಸ್ಥಿತಿ ಯಾವುದೇ ಕಾರಣಕ್ಕೂ ಉತ್ತಮವಾಗುವುದಿಲ್ಲ ಎಂದು ಗೊತ್ತಿತ್ತು. ಆದರೆ ಇನ್ನೂ ಹೆಚ್ಚಿನ ಪಾಲು ಕೆಟ್ಟದಾಗುವುದೇ ನಿಜ ಎಂಬುದು ಆಗ ಅರ್ಥವಾಗಿರಲಿಲ್ಲ. ನನ್ನ ತಂದೆಯ ಕುರಿತು ಹೇಳುವುದೆಂದರೆ ಅವರು ಗಟ್ಟಿಗರು; ಗಟ್ಟಿತನವನ್ನು ದೀರ್ಘಕಾಲ ಹೊಂದಿದ್ದರು. ಅವರು ಫೌಂಡರಿಯಲ್ಲಿ ಕೆಲಸ ಮಾಡುತ್ತಿದ್ದ ಇತರ ಪುರುಷರ ಕುರಿತು ಪ್ರೀತಿ ಬೆಳಸಿಕೊಂಡರು. ಅವರಲ್ಲಿ ಹಲವರು ತಂದೆಯಂತೆಯೇ ಬದುಕುವವರು. ಜೀವನದಲ್ಲಿ ಒಂದು ರೀತಿಯ ದುಃಸ್ಥಿತಿಗೆ ಇಳಿದವರು ಅಥವಾ ಬದುಕಿನ ಹೆಚ್ಚುವರಿ ಹೊರೆ ಹೊರುತ್ತಿದ್ದವರು. ರಾತ್ರಿಯ ಮೊದಲ ಪಾಳಿಯ ಕಾವಲುಗಾರನಾಗಿರುವುದರ ಜೊತೆಗೆ ತಾನು ಮಾಡಿದ ಸವಾಲಿನ ಕೆಲಸವನ್ನು ಅಪ್ಪ ಇಷ್ಟಪಟ್ಟರು. ಆ ಕೆಲಸ ಕರಗಿದ ಲೋಹವನ್ನು ಅಚ್ಚುಗಳಲ್ಲಿ ಸುರಿಯುವುದನ್ನು ಒಳಗೊಂಡಿತ್ತು. ಅವರ ಫೌಂಡ್ರಿ ಹಳೆಯ-ಶೈಲಿಯ ಸ್ಟೌಗಳನ್ನು ತಯಾರಿಸುತ್ತಿತ್ತು. ಅವು ಪ್ರಪಂಚದಾದ್ಯಂತ ಮಾರಾಟವಾಗುತ್ತಿದ್ದವು. ಅದು ಅಪಾಯಕಾರಿ ಕೆಲಸ, ಆದರೆ ನನ್ನ ತಂದೆ ಹೇಳುವಂತೆ ಕೆಲಸದ ಮೇಲೆ ಗಮನಹರಿಸುವ ಜವಾಬ್ದಾರಿ ನಿಮ್ಮದಾಗಿದೆ. ಮಾಡುವ ಕೆಲಸಕ್ಕೆ ತಕ್ಕ ವೇತನವಿತ್ತು. ಅವರಿಗೆ ಅದು ಒಂದು ಸ್ವಂತಿಕೆಯ ಭಾವವನ್ನು ಕೊಟ್ಟಿತ್ತು.

ಈ ಕಠಿಣ ಮತ್ತು ಅಪಾಯಕಾರಿ ಕೆಲಸವನ್ನು ಮಾಡಹೊರಡಲು ಸಹ ಅವರು ಸಂತೋಷಪಟ್ಟಿದ್ದರು ಎಂದು ನಾನು ನಂಬುತ್ತೇನೆ. ಅದಕ್ಕಿದ್ದ ಕಾರಣಗಳಲ್ಲೊಂದು ಮನೆಯಿಂದ ಹೊರಗಿರಲು ಅವಕಾಶ. ಇನ್ನೊಂದು ತಮ್ಮದೇ ಆದ ಸಮಸ್ಯೆಗಳನ್ನು ಹೊಂದಿದ್ದರೂ ಅವನ್ನು ಉತ್ತಮವಾಗಿ ನಿಭಾಯಿಸಿದ ಇತರ ಪುರುಷರ ಸಹವಾಸದಲ್ಲಿ ಕಾಲ ಕಳೆಯುವುದು. ಅವರು ಹೋದ ನಂತರ ನಾನು ರಾತ್ರಿಯ ಊಟಕ್ಕೆ ಸಿದ್ಧತೆಯನ್ನು ಪ್ರಾರಂಭಿಸುತ್ತಿದ್ದೆ. ಸೇವಿಗೆ ಅಥವಾ ಆಮ್ಲೆಟ್‌ಗಳಂತಹ ವಿಶೇಷವೆಂದು ನಾನು ಭಾವಿಸಿದ ಅಡುಗೆಗಳನ್ನು ಅವುಗಳಿಗೆ ಬೇಕಾದ ವಸ್ತುಗಳು ಅಗ್ಗವಾಗಿರುವವರೆಗೂ ನಾನು ಮಾಡಬಲ್ಲವಳಿದ್ದೆ. ಅಡಿಗೆ ಮುಗಿದ ನಂತರ ಪಾತ್ರೆ ತೊಳೆದ ಮೇಲೆ ನನ್ನ ತಂಗಿ ಅವುಗಳನ್ನು ಒರೆಸಬೇಕಾಗಿತ್ತು. ನನ್ನ ತಮ್ಮನನ್ನು ಪಾತ್ರೆ ತೊಳೆದ ಮುಸುರೆ ನೀರನ್ನು ಕತ್ತಲು ಕವಿದ ಮೈದಾನದಲ್ಲಿ ಚೆಲ್ಲಲು ಒತ್ತಾಯಿಸಬೇಕಾಗಿತ್ತು (ನಾನು ಅದನ್ನು ನಾನೇ ಮಾಡಬಹುದಿತ್ತು. ಆದರೆ ಆದೇಶಗಳನ್ನು ನೀಡಲು ನನಗೆ ಇಷ್ಟವಾಗುತ್ತಿತ್ತು).

ನಾನು ನೆಲದ ಮೇಲೆ ಬಿಸಿ ಕಾಯಿಸುವ ಒಲೆಯ ಮುಂದೆ ಕುಳಿತುಕೊಂಡೆ. ಅದು ಅದರ ಬಾಗಿಲನ್ನು ಎಲ್ಲೋ ಕಳೆದುಕೊಂಡಿತ್ತು. ಅಲ್ಲಿ ಕುಳಿತೇ ನಾನು ಪಟ್ಟಣದ ಗ್ರಂಥಾಲಯದಿಂದ ಎರವಲು ಪಡೆದ ದೊಡ್ಡ ಕಾದಂಬರಿಗಳನ್ನು ಓದಿದೆ: ಇಂಡಿಪೆಂಡೆಂಟ್ ಪೀಪಲ್ ಅದರಲ್ಲೊಂದು. ಅದು ಐಸ್ಲ್ಯಾಂಡ್ನಲ್ಲಿನ ಜನರ ಜೀವನದ ಬಗ್ಗೆ ಬರೆದಿರುವುದು. ಆ ಬದುಕು ನಮ್ಮದಕ್ಕಿಂತ ಕಠಿಣವಾಗಿದೆ. ಆದರೆ ಅದಕ್ಕೆ ಹತಾಶ ಭವ್ಯತೆ, ಹಳೆಯ ನೆನಪುಗಳು ಇವೆ. ಇದು ನನಗೆ ಏನೂ ಅರ್ಥವಾಗಲಿಲ್ಲ. ಆದರೆ ಆ ಕಾರಣಕ್ಕೆ ಕ್ಷಯರೋಗದ ಬಗ್ಗೆ ಇರುವ ದಿ ಮ್ಯಾಜಿಕ್ ಮೌಂಟೇನ್ ಅನ್ನು ಓದದೇ ಬಿಟ್ಟುಕೊಡಬೇಕಾಗಿಲ್ಲ. ಅದರಲ್ಲಿ ಒಂದು ಬದಿಯಲ್ಲಿ ಜೀವನದ ಒಂದು ಅತ್ಯದ್ಭುತವಾದ ಮತ್ತು ಪ್ರಗತಿಪರ ಕಲ್ಪನೆ ಎಂದು ತೋರುವ ಮತ್ತು ದುರಂತದ, ಕರಾಳ ಮತ್ತು ಹೇಗಾದರೂ ರೋಮಾಂಚಕವೆನಿಸುವ ಹತಾಶೆ ಮತ್ತೊಂದೆಡೆ. ಈ ಅಮೂಲ್ಯ ಸಮಯದಲ್ಲಿ ನಾನು ಎಂದೂ ಹೋಮ್ವರ್ಕ್ ಮಾಡಲಿಲ್ಲ. ಆದರೆ ಪರೀಕ್ಷೆಗಳು ಬಂದಾಗ ನಾನು ರಾತ್ರಿಯಿಡೀ ತಲೆ ಬಗ್ಗಿಸಿ ಓದಿ ಓದಿ ನಾನು ತಿಳಿದುಕೊಳ್ಳಬೇಕಾಗಿದ್ದ ಎಲ್ಲವನ್ನೂ ನನ್ನ ತಲೆಯಲ್ಲಿ ತುರುಕಿ ಉಳಿದುಕೊಂಡಿದ್ದೇನೆ. ನಾನು ವಿಶಿಷ್ಟವಾದ, ಅದ್ಭುತವಾದ ಅಲ್ಪಾವಧಿಯ ಸ್ಮರಣೆಯನ್ನು ಹೊಂದಿದ್ದೇನೆ. ಅದು ಅಗತ್ಯವಿರುವಾಗಲೆಲ್ಲ ಚೆನ್ನಾಗಿಯೇ ಕೆಲಸ ಮಾಡಿದೆ. ಹಲವಾರು ವಿಲಕ್ಷಣತೆಗಳ ಹೊರತಾಗಿಯೂ ನನ್ನನ್ನು ನಾನು ಅದೃಷ್ಟಶಾಲಿ ಎಂದು ನಂಬಿದ್ದೆ. ಕೆಲವೊಮ್ಮೆ ನನ್ನ ತಾಯಿ ಮತ್ತು ನಾನು ಮಾತನಾಡಿಕೊಳ್ಳುತ್ತಿದ್ದೆವು. ಅದು ಹೆಚ್ಚಾಗಿ ಅವರ ಬಾಲ್ಯದ ದಿನಗಳ ಬಗ್ಗೆ.

ಅವರು ವಿಶ್ವವನ್ನು ನೋಡುವ ವಿಧಾನವನ್ನು ನಾನು ಈಚೆಗಂತೂ ವಿರಳವಾಗಿಯೂ ಆಕ್ಷೇಪಿಸುವುದಿಲ್ಲ. ಹಲವಾರು ಬಾರಿ ಅವರು  ವೈಟಿ ಸ್ಟ್ರೀಟ್ಸ್ ಎಂಬ ಮಹಾಯುದ್ಧದ ಸೇನಾನಿಗೆ ಈಗ ಸೇರಿದ್ದ ಮನೆಯ ಕುರಿತು ಚಾಲತಿಯಲಿದ್ದ ಒಂದು ಕಥೆಯನ್ನು ನನಗೆ ಹೇಳಿದ್ದರು. ಆ ವ್ಯಕ್ತಿ ನನ್ನನ್ನು ಶಾಲೆಯ ಮೂಲಕ ಕರೆದೊಯ್ಯಲು ಹಿಡಿಯುತ್ತಿದ್ದ ಸಮಯದ ಬಗ್ಗೆ ಯಾವಾಗಲೂ ಆಶ್ಚರ್ಯ ಪಡುತ್ತಿದ್ದ. ಈ ಕಥೆ ಅವನ ಬಗ್ಗೆ ಅಲ್ಲ. ಆದರೆ ಅವನಿಗೂ ಮೊದಲು ಆ ಮನೆಯಲ್ಲಿ ವಾಸಿಸುತ್ತಿದ್ದ ಯಾರೋ ಒಬ್ಬರ ಬಗ್ಗೆ. ಶ್ರೀಮತಿ ನೆಟ್ಟರ್‌ಫೀಲ್ಡ್ ಎಂಬ ಮುದಿ ಹುಚ್ಚು ಮಹಿಳೆ ಆಕೆ. ಶ್ರೀಮತಿ ನೆಟ್ಟರ್‌ಫೀಲ್ಡ್ ತನಗೆ ಬೇಕಾದ ದಿನಸಿ ವಸ್ತುಗಳನ್ನು, ನಾವೆಲ್ಲರೂ ಮಾಡಿದಂತೆ, ಫೋನ್ ಮೂಲಕ ಆದೇಶಿಸಿ ಪಡೆದುಕೊಳ್ಳುತ್ತಿದ್ದಳು. ನನ್ನ ತಾಯಿ ಹೇಳಿದ್ದು, ಒಂದು ದಿನ ದಿನಸಿಯವ ಬೆಣ್ಣೆ ಹಾಕಲು ಮರೆತಿದ್ದಾನೆ ಅಥವಾ ಅವಳು ಅದನ್ನು ಬುಕ್ ಮಾಡಲೇ ಮರೆತಿದ್ದಾಳೆ. ಡೆಲಿವರಿ ಹುಡುಗ ಟ್ರಕ್‌ನ ಹಿಂಭಾಗವನ್ನು ತೆರೆದು ವಸ್ತುಗಳನ್ನ ಇಳಿಸುವಾಗ ಬೆಣ್ಣೆಯ ಪ್ಯಾಕೆಟ್ ಬರದಿದ್ದನ್ನು ಗಮನಿಸಿ ಅಸಮಾಧಾನಗೊಂಡಿದ್ದಳು. ಅವಳು ಒಂದು ರೀತಿಯಲ್ಲಿ ಜಗಳಕ್ಕೆ ತಯಾರಾಗಿದ್ದಳು ಅನ್ನಿಸುವ ಹಾಗೆ ಅವಳ ಕೈಲಿ ಒಂದು ಮಚ್ಚುಗತ್ತಿ ಇತ್ತು. ಕಿರಾಣಿ ಹುಡುಗನನ್ನು ಬಲಿಹಾಕುವ ಹಾಗೆ ಅವರು ಅದನ್ನು ಮೇಲೆತ್ತಿದ್ದಳು. ಅದು ನಿಜಕ್ಕೂ ಅವನ ತಪ್ಪಲ್ಲ. ಅವನು ಚಾಲಕನ ಆಸನಕ್ಕೆ ಓಡಿ ಹಿಂಬಾಗಿಲುಗಳನ್ನು ಮುಚ್ಚದೆಯೇ ಗಾಡಿ ಚಲಾಯಿಸಿದ್ದ.

ನಾನು ಆಗ ಆ ಬಗ್ಗೆ ಯೋಚಿಸಲಿಲ್ಲವಾದರೂ ಕಥೆಯ ಕುರಿತ ಕೆಲವು ವಿಷಯಗಳು ಗೊಂದಲಮಯವಾಗಿದ್ದವು. ಆಗ ನನ್ನ ತಾಯಿಯೂ ಇರಲಿಲ್ಲ. ದಿನಸಿ ವಸ್ತುಗಳಲ್ಲಿ ಬೆಣ್ಣೆಯೇ ಕಾಣೆಯಾಗಿದೆ ಎಂದು ವಯಸ್ಸಾದ ಆ ಮಹಿಳೆ ಅದು ಹೇಗೆ ಅಷ್ಟು ಖಚಿತವಾಗಿ ಹೇಳಬಹುದು? ಸರಕಿನ ಡೆಲಿವರಿಯಲ್ಲಿ ಏನಾದರೂ ದೋಷವಿದೆ ಎಂದು ತಿಳಿದಿರುವುದಕ್ಕಿಂತ ಮೊದಲು ಅವರು  ಏಕೆ ಮಚ್ಚುಗತ್ತಿಯನ್ನು ಹಿಡಿದಿದ್ದಳು? ಪ್ರಚೋದನೆಗಳು ಉಂಟಾಗಬಹುದಾದ ಸಂದರ್ಭಗಳಲ್ಲೆಲ್ಲ ಅವರು  ಸಾಮಾನ್ಯವಾಗಿ ಅದನ್ನು ತನ್ನೊಂದಿಗೆ ಒಯ್ದಿದ್ದಾಳೆಯೆ?

ಆದರೆ ಶ್ರೀಮತಿ ನೆಟ್ಟರ್ ಫೀಲ್ಡ್ ಚಿಕ್ಕವಳಿದ್ದಾಗ ಸಾಕಷ್ಟು ಸಂಯಮದ ಮಹಿಳೆಯಾಗಿದ್ದಳು ಎಂದು ಹೇಳಲಾಗಿದೆ. ಶ್ರೀಮತಿ ನೆಟ್ಟರ್ ಫೀಲ್ಡ್ ಬಗ್ಗೆ ಮತ್ತೊಂದು ಕಥೆ ಇತ್ತು. ಅದು ನನಗೆ ಆಸಕ್ತಿಯದಾಗಿತ್ತು. ಏಕೆಂದರೆ ಅದು ನನ್ನನ್ನು ಒಳಗೊಂಡಿತ್ತು ಮತ್ತು ನಮ್ಮ ಮನೆಯ ಆಜೂಬಾಜೂ ನಡೆದಿತ್ತು. ಅದು ಶರತ್ಕಾಲದ ಒಂದು ಸುಂದರ ದಿನವಾಗಿತ್ತು. ಹೊಸ ಹುಲ್ಲುಹಾಸಿನ ಸಣ್ಣ ಪ್ಯಾಚಿನಲ್ಲಿ ನನ್ನನ್ನು ಮಗುವಿನ ಗಾಡಿಯಲ್ಲಿ ಮಲಗಿಸಿ ಬಿಡಲಾಗಿತ್ತು. ಮಧ್ಯಾಹ್ನವಾಗಿತ್ತು, ನನ್ನ ತಂದೆ ದೂರ ಎಲ್ಲಿಯೋ ಹೋಗಿದ್ದ. ಬಹುಶಃ ಅವರು ಕೆಲವೊಮ್ಮೆ ಮಾಡುತ್ತಿದ್ದಂತೆ ಹಳೆಯ ಜಮೀನಿನಲ್ಲಿ ತಂದೆಗೆ ಸಹಾಯ ಮಾಡುತ್ತಿದ್ದರು ಅನ್ನಿಸುತ್ತದೆ. ನನ್ನ ತಾಯಿ ಸಿಂಕ್‌ನಲ್ಲಿ ಬಟ್ಟೆ ಒಗೆಯುತ್ತಿದ್ದರು. ಮೊದಲ ಮಗುವಿಗೆ ಕಸೂತಿ ಮಾಡಿದ ಬಟ್ಟೆ, ರಿಬ್ಬನ್ ಗಳು, ಮೃದುವಾದ ನೀರಿನಲ್ಲಿ ಎಚ್ಚರಿಕೆಯಿಂದ ಕೈಯಲ್ಲಿಯೇ ತೊಳೆಯಬೇಕಾದ ವಸ್ತುಗಳು ಹೀಗೆ ಅವರಲ್ಲಿ ಆಚರಣೆಯ ಸಂಭ್ರಮ ಹೊರೆಯಷ್ಟಿತ್ತು. ಅವರು  ಬಟ್ಟೆ ತೊಳೆದು ಸಿಂಕಿನಲ್ಲಿ ಹಿಂಡಿ ಹೊರಗಿಡುತ್ತಿದ್ದಳು. ಹೊರಗೆ ಏನಾಗುತ್ತಿದೆ ಎಂದು ನೋಡಲು ನನ್ನ ತಾಯಿಯ ಮುಂದೆ ಕಿಟಕಿ ಇರಲಿಲ್ಲ. ಉತ್ತರ ದಿಕ್ಕಿನ ಕಿಟಕಿಗೆ ಹೋಗಲು ಕೊಠಡಿಯನ್ನು ದಾಟಬೇಕಾಗಿತ್ತು. ಅಲ್ಲಿಂದ ಮೇಲ್ ಬಾಕ್ಸಿಂದ ಗೇಟಿನವರೆಗೂ ಇದ್ದ ಡ್ರೈವ್ ವೇಯ ನೋಟವನ್ನು ನೋಡಬಹುದಿತ್ತು.

ಡ್ರೈವ್ ವೇ ಅನ್ನು ನೋಡುವ ಸಲುವಾಗಿ ನನ್ನ ತಾಯಿ ಬಟ್ಟೆ ತೊಳೆಯುವುದು ಮತ್ತು ಹಿಂಡಿ ಒಣಗಿ ಹಾಕುವ ಕೆಲಸವನ್ನು ತೊರೆಯಲು ಏಕೆ ನಿರ್ಧರಿಸಿದರು? ಅವರು ಯಾವುದೇ ಜೊತೆಗಾರರನ್ನು ನಿರೀಕ್ಷಿಸುತ್ತಿರಲಿಲ್ಲ. ನನ್ನ ತಂದೆಯೂ ತಡವಾಗಿ ಬರಲಿಕ್ಕಿಲ್ಲ. ಬಹುಶಃ ಅಮ್ಮ ಕಿರಾಣಿ ಅಂಗಡಿಯಿಂದ ಏನನ್ನಾದರೂ ತರಲು ಕೇಳಿಕೊಂಡಿದ್ದಾರು. ಅವರು ರಾತ್ರಿಯೂಟಕ್ಕೆ ಏನಾದರೂ ಮಾಡುವವಳಿದ್ದರು ಅನಿಸುತ್ತದೆ. ಅದನ್ನು ತಯಾರಿಸಲು ಅವರು ಸಮಯಕ್ಕೆ ಮನೆಗೆ ಬರುತ್ತಾರೆಯೇ ಎಂದು ಅಮ್ಮ  ಯೋಚಿಸುತ್ತಿದ್ದರು. ಆ ದಿನಗಳಲ್ಲಿ ಅವರು ಅಡುಗೆಯಲ್ಲಿ ಸಾಕಷ್ಟು ಹೆಸರು ಮಾಡಿದವರು; ವಾಸ್ತವವಾಗಿ, ಅವರ ಅತ್ತೆ ಮತ್ತು ನನ್ನ ತಂದೆಯ ಕುಟುಂಬದ ಇತರ ಮಹಿಳೆಯರು ತಾವು ಸ್ವತಃ ತಮ್ಮ ಬಗ್ಗೆ ಭಾವಿಸಿರುವುದಕ್ಕಿಂತ ಹೆಚ್ಚಾಗಿ. ಆದರೆ ಅವರು ಹೇಳುವುದು ನೀವು ಅವಳ ಅಡುಗೆಗೆ ತಗಲುವ ವೆಚ್ಚವನ್ನು ನೋಡಿದ್ದೀರಾ? ಎಂದೇ! ಅದಕ್ಕೆ ಇವತ್ತಿನ ಸಪ್ಪರ್‌ನೊಂದಿಗೆ ಯಾವುದೇ ಸಂಬಂಧವಿಲ್ಲದಿರಬಹುದು. ಆದರೆ ಅವರು ಆಯ್ದುಕೊಳ್ಳುತ್ತಿದ್ದ ಬಟ್ಟೆಯ ಪ್ಯಾಟರ್ನನ್ನು ಕುರಿತು ಇರಬಹುದು, ಅಥವಾ ಅವರು ತಾನೇ ತಯಾರಿಸಲು ಬಯಸಿದ ಹೊಸ ಉಡುಪಿಗೆ ಬೇಕಾದ ಬಟ್ಟೆಯ ಕುರಿತು. ಅವರು ಅದನ್ನು ಏಕೆ ಮಾಡಿದರೆಂದು ಅವರು ಆಮೇಲೂ ಯಾವಾಗಲೂ ಹೇಳಲಿಲ್ಲ.

ನನ್ನ ತಾಯಿಯ ಅಡುಗೆಯ ಬಗ್ಗೆ ತಪ್ಪು ಅಭಿಪ್ರಾಯಗಳು ಮಾತ್ರವೆ ನನ್ನ ತಂದೆಯ ಕುಟುಂಬದವರ ಸಮಸ್ಯೆಯಾಗಿರಲಿಲ್ಲ. ಅವಳ ಬಟ್ಟೆಗಳ ಬಗ್ಗೆಯೂ ಸ್ವಲ್ಪ ಚರ್ಚೆ ನಡೆದಿರಬೇಕು. ಸಿಂಕಿನಲ್ಲಿ ವಸ್ತುಗಳನ್ನು ತೊಳೆಯುವಾಗಲೂ ಸಹ ಅವರು ಮಧ್ಯಾಹ್ನದ ಉಡುಗೆಯನ್ನು ಹೇಗೆ ಧರಿಸುತ್ತಿದ್ದರು ಎಂದು ನಾನು ಯೋಚಿಸುತ್ತೇನೆ. ಅವರು ಮಧ್ಯಾಹ್ನದ ಊಟದ ನಂತರ ಅರ್ಧ ಘಂಟೆಯ ಕಿರುನಿದ್ದೆ ತೆಗೆದುಕೊಳ್ಳುತ್ತಿದ್ದರು. ಅವರು ನಿದ್ದೆಯಿಂದ ಎದ್ದಮೇಲೆ ಯಾವಾಗಲೂ ಬೇರೆ ಉಡುಪು ಧರಿಸುತ್ತಿದ್ದರು. ನಾನು ಕಾಲಾನಂತರ ಆ ಛಾಯಾಚಿತ್ರಗಳನ್ನು ನೋಡಿದಾಗ ಆ ಕಾಲದ ಫ್ಯಾಷನ್‌ಗಳು ಅವಳಿಗೆ ಅಥವಾ ಯಾರಿಗೂ ಹೊಂದಿಕೆ ಆಗುತ್ತಿರಲಿಲ್ಲ ಎಂದು ಅನ್ನಿಸಿತ್ತು. ಉಡುಪುಗಳು ಆಕಾರವಿಲ್ಲದವು, ಬಾಬ್ ಮಾಡಿದ ಕೂದಲು ನನ್ನ ತಾಯಿಯ ದುಂಡು, ಮೃದುವಾದ ಮುಖಕ್ಕೆ ಸರಿಹೊಂದುತ್ತಿದ್ದಿಲ್ಲ. ಆದರೆ ಹತ್ತಿರ ವಾಸಿಸುತ್ತಿದ್ದ ನನ್ನ ತಂದೆಯ ಸ್ತ್ರೀ ಸಂಬಂಧಿಕರು ಅವಳ ಮೇಲೆ  ‌ಹೆಡಿಗೆಗಳನ್ನು ಇಡುವಷ್ಟು ಕೆಟ್ಟದಾಗಿ ಇದೆ ಎಂದು ಆರೋಪಿಸುವಂತೆ ಅಂತೂ ಅಲ್ಲ. ಅವರು ಹಳ್ಳಿಯಲ್ಲಿ ರೈತಕುಟುಂಬದಲ್ಲಿ ಬೆಳೆದಿದ್ದಾರೆ ಎಂದು ತೋರುತ್ತಿರಲಿಲ್ಲ. ಅವರು ಅಂಥದೊಂದು ಶೈಲಿಯಲ್ಲಿ ಕಾಣಬೇಕೆಂಬ ಉದ್ದೇಶದಿಂದ ಇರುವಂತೆಯೂ ಕಾಣುವುದಿಲ್ಲ.

ನನ್ನ ತಂದೆಯ ಕಾರು ಬರುತ್ತಿರುವುದನ್ನು ಅವರು ನೋಡಲಿಲ್ಲ. ಬದಲಾಗಿ, ಅವರು ಆ ವಯಸ್ಸಾದ ಮಹಿಳೆ, ಶ್ರೀಮತಿ ನೆಟ್ಟರ್ ಫೀಲ್ಡ್ ಳನ್ನ ಕಂಡಳು. ಶ್ರೀಮತಿ ನೆಟ್ಟರ್ ಫೀಲ್ಡ್ ತನ್ನ ಮನೆಯಿಂದಲೇ ನಡೆದು ಹೋಗಿರಬೇಕು. ಅದೇ ಮನೆ, ಬಹಳ ಸಮಯದ ನಂತರ ಆ ಮನೆಯಲ್ಲಿಯೇ ನನ್ನನ್ನು ಕೀಟಲೆ ಮಾಡಿದ ಒಬ್ಬ ಒಂಟಿಕೈನ ವ್ಯಕ್ತಿಯನ್ನು, ಕೇವಲ ಒಂದು ಬಾರಿ ಅವನ ಬಾಬ್ ಕೂದಲಿನ ಹೆಂಡತಿಯನ್ನು ಪಂಪ್‌ನ ಬಳಿಯಲ್ಲಿ ಕಂಡಿದ್ದೆ. ಆ ಮನೆಯಿಂದಲೇ, ನಾನು ಅವಳ ಬಗ್ಗೆ ಏನನ್ನೂ ತಿಳಿಯುವ ಮೊದಲೇ, ಆ ಹುಚ್ಚು ಹೆಂಗಸು ಬೆಣ್ಣೆಯ ಕಾರಣದಿಂದಾಗಿ ಡೆಲಿವರಿ ಹುಡುಗನನ್ನು ಮಚ್ಚುಕತ್ತಿಯೊಂದಿಗೆ ಹೊಡೆಯುವಂತೆ ಹಿಂಬಾಲಿಸಿದ್ದಳು.

ನಮ್ಮ ತಾಯಿ ಶ್ರೀಮತಿ ನೆಟ್ಟರ್ ಫೀಲ್ಡ್ ನಮ್ಮ ಮನೆಯ ಹಾದಿಯಲ್ಲಿ ಬರುತ್ತಿರುವುದನ್ನು ನೋಡುವ ಮೊದಲು ಬೇರೆಬೇರೆ ಸಮಯಗಳಲ್ಲಿ ಸಹ ಅವಳನ್ನು ನೋಡಿರಬೇಕು. ಬಹುಶಃ ಅವರು ಪರಸ್ಪರ ಮಾತನಾಡಿರಲಿಕ್ಕಿಲ್ಲ. ಅವರು ಮಾತನಾಡಿದ್ದರೂ ಆಡಿರಬಹುದು. ಇದು ಅನಿವಾರ್ಯವಲ್ಲ ಎಂದು ನನ್ನ ತಂದೆ ಹೇಳಿದ್ದರೂ ಸಹ, ನನ್ನ ತಾಯಿ ಅವಳ ವಿಷಯವನ್ನು ಅವರಿಗೆ ತಿಳಿಸಿರಬಹುದು. ಇದು ತೊಂದರೆಗೆ ಕಾರಣವಾಗಬಹುದು ಅವರು ಬಹುಶಃ ಹೇಳಿದ್ದಿರಬಹುದು. ನನ್ನ ತಾಯಿಯು ಶ್ರೀಮತಿ ನೆಟ್ಟರ್ ಫೀಲ್ಡ್ ರಂತೆ ಇರುವ ಎಲ್ಲ ಜನರ ಬಗ್ಗೆ ಸಹಾನುಭೂತಿ ಹೊಂದಿದ್ದರು; ಅವರು ಸಭ್ಯತೆಯ ಎಲ್ಲೆಯಲ್ಲಿ ಇರುವವರೆಗೂ.

ಆದರೆ ಈಗ ಅವರು  ಸ್ನೇಹ ಅಥವಾ ಸಭ್ಯತೆಯ ಬಗ್ಗೆ ಯೋಚಿಸುತ್ತಿರಲಿಲ್ಲ. ಅವರು  ತನ್ನ ಮಗುವನ್ನು ಗಾಡಿಯಿಂದ ನನ್ನನ್ನು ಎತ್ತಿಕೊಳ್ಳಲು ಅಡಿಗೆ ಮನೆಯ ಬಾಗಿಲಿನಿಂದ ಹೊರಗೆ ಓಡುತ್ತಿದ್ದಳು. ಅವರು ನಾನಿದ್ದ ಗಾಡಿಯನ್ನು ನನಗೆ ಹಾಸಿ ಹೊಚ್ಚಿದ್ದ ಕವರ್‌ಗಳನ್ನು ಅಲ್ಲೇ ಬಿಟ್ಟು ಮತ್ತೆ ಮನೆಯೊಳಗೆ ಓಡಿ, ಅಡಿಗೆ ಮನೆಯ ಬಾಗಿಲನ್ನು ಹಾಕಿಕೊಳ್ಳಲು ಪ್ರಯತ್ನಿಸಿದಳು. ಅವರು  ಮುಂಭಾಗದ ಬಾಗಿಲಿನ ಬಗ್ಗೆ ಚಿಂತಿಸಬೇಕಾಗಿರಲಿಲ್ಲ. ಅದು ಯಾವಾಗಲೂ ಲಾಕ್ ಆಗಿರುತ್ತಿತ್ತು. ಆದರೆ ಅಡಿಗೆ ಕೋಣೆಯ ಬಾಗಿಲಿನಲ್ಲೊಂದು ಸಮಸ್ಯೆ ಇತ್ತು. ನನಗೆ ತಿಳಿದ ಮಟ್ಟಿಗೆ, ಅದು ಎಂದೂ ಸರಿಯಾದ ಲಾಕ್ ಹೊಂದಿರಲಿಲ್ಲ. ರಾತ್ರಿಯಲ್ಲಿ ಅಡುಗೆಮನೆಯ ಕುರ್ಚಿಗಳಲ್ಲಿ ಒಂದನ್ನು ಆ ಬಾಗಿಲಿಗೆ ತಳ್ಳುವುದು ಮತ್ತು ಅದನ್ನು ಮತ್ತೊಂದು ಕುರ್ಚಿಯಿಂದ ಒತ್ತಿ ಬಾಗಿಲಿನ ಹಿಡಿಕೆಯ ಕೆಳಗೆ ಹಿಂದಕ್ಕೆ ತಿರುಗಿಸುವುದು ದಿನನಿತ್ಯದ ರೂಢಿಯಾಗಿತ್ತು. ಅಡುಗೆಮನೆಯ ಬಾಗಿಲಿನ ಮೂಲಕ ಒಳಗೆ ಪ್ರವೇಶಿಸಲು ಯಾರಾದರೂ ಬಾಗಿಲು ತಳ್ಳಿದರೆ ಭಯಂಕರವಾದ ಶಬ್ದವಾಗುತ್ತಿತ್ತು. ಸುರಕ್ಷತೆಯನ್ನು ಕಾಪಾಡಿಕೊಳ್ಳಲು ಉಳಿದಿದ್ದ ಸಾಕಷ್ಟು ಅಪಾಯಕಾರಿ ಮಾರ್ಗವೆಂದರೆ, ನನ್ನ ತಂದೆ ಮನೆಯಲ್ಲಿ ಡೆಸ್ಕ್ ಡ್ರಾಯರ್‌ನಲ್ಲಿ ಇಟ್ಟುಕೊಂಡಿದ್ದ ರಿವಾಲ್ವರ್ ಅನ್ನು ಬಳಸುವುದು. ನಿಯಮಿತವಾಗಿ ಕುದುರೆಗಳನ್ನು ಶೂಟ್ ಮಾಡಬೇಕಾದ ವ್ಯಕ್ತಿಯ ಮನೆಯಲ್ಲಿ ಸಹಜವಾಗಿ ಒಂದು ರೈಫಲ್ ಮತ್ತು ಒಂದೆರಡು ಶಾಟ್ ಗನ್ನುಗಳಿದ್ದವು. ಸಹಜವಾಗಿಯೇ ಅವುಗಳನ್ನು ಲೋಡ್ ಮಾಡಿರುತ್ತಿದ್ದಿಲ್ಲ.

ನನ್ನ ತಾಯಿ ಯಾವುದೇ ಶಸ್ತ್ರಾಸ್ತ್ರದ ಬಗ್ಗೆ ಯೋಚಿಸಿದ್ದರಾ? ಒಮ್ಮೆ ಅವರು ಬಾಗಿಲ ಹಿಡಿಕೆಯನ್ನು ಸರಿಮಾಡಿಸಿಕೊಂಡಿದ್ದರೆ ಸಾಕಿತ್ತು. ಅವರು ಎಂದಾದರೂ ತನ್ನ ಜೀವನದಲ್ಲಿ ಬಂದೂಕನ್ನು ಎತ್ತಿಕೊಂಡಿದ್ದರೆ ಅಥವಾ ಒಂದನ್ನು ಲೋಡ್ ಮಾಡಿದ್ದರೆ? ಆ ವಯಸ್ಸಾದ ಮಹಿಳೆ ಕೇವಲ ನೆರೆಹೊರೆಯವರಂತೆ ಭೇಟಿ ನೀಡಬಹುದೆಂಬುದು ಅವರ ಮನಸ್ಸಿನಲ್ಲಿ ಮೂಡಿತ್ತೇ? ನಾನು ಹಾಗೆ ಯೋಚಿಸುವುದಿಲ್ಲ. ಅವಳ ನಡಿಗೆಯಲ್ಲಿ ಏನೋ ವ್ಯತ್ಯಾಸ ಇದ್ದಿರಬೇಕು. ಹಾಗೆ ನೆರೆಕರೆಯಂತೆ ಬಾರದ ಮಹಿಳೆಯಂದು ಅಲ್ಲಿಗೆ ಬರುತ್ತಿದ್ದಳು. ಸ್ನೇಹದಲ್ಲಿ ಅವರು ನಮ್ಮ ರಸ್ತೆಯಲ್ಲಿ ಎಂದೂ ಬಂದಿರಲಿಲ್ಲ. ನನ್ನ ತಾಯಿ ಅಂದು ದೇವರನ್ನು ಪ್ರಾರ್ಥಿಸಿರುವ ಸಾಧ್ಯತೆಯಿದೆ. ಆದರೆ ಅದನ್ನು ಅವರು ಎಂದಿಗೂ ಉಲ್ಲೇಖಿಸಲಿಲ್ಲ.

ಗಾಡಿಯಲ್ಲಿನ ಕಂಬಳಿಗಳ ತನಿಖೆ ಮಾಡಲಾಗಿದೆ ಎಂದು ಅವಳಿಗೆ ತಿಳಿದಿತ್ತು. ಏಕೆಂದರೆ, ಅವರು ಅಡಿಗೆ ಮನೆಯ ಬಾಗಿಲಿನ ತೆರೆಯನ್ನು ಕೆಳಕ್ಕೆ ಎಳೆಯುವ ಮೊದಲು, ಆ ಕಂಬಳಿಗಳಲ್ಲಿ ಒಂದನ್ನು ನೆಲಕ್ಕೆ ಇಳಿಸಿರಿವುದನ್ನು ಅವರು ನೋಡಿದ್ದಳು. ಅದರ ನಂತರ ಅವರು ಬೇರೆ ಯಾವುದೇ ಕಿಟಕಿಯ ಮೇಲಿನ ತೆರೆಯನ್ನು ಕೆಳಗಿಳಿಸಲು ಪ್ರಯತ್ನಿಸಲಿಲ್ಲ. ಆದರೆ ಅವಳನ್ನು ಕಾಣಲಾಗದ ಒಂದು ಮೂಲೆಯಲ್ಲಿ ಅವಳ ತೋಳುಗಳಲ್ಲಿ ನನ್ನ ಅವುಚಿಕೊಂಡೇ ಇದ್ದಳು. ಯಾವುದೇ ಬಗೆಯ ಸಭ್ಯವಾದ ಬಾಗಿಲು ಬಡಿಯುವ ಕ್ರಿಯೆ ನಡೆಯಲಿಲ್ಲ. ಕುರ್ಚಿ ತಳ್ಳುವುದು ಇಲ್ಲ. ಯಾವುದೇ ಅಬ್ಬರ ಅಥವಾ ಶಬ್ದವಿಲ್ಲ. ಆಳುವ ಸ್ತಬ್ಧತೆ. ಎಂದರೆ ಮಹಿಳೆ ಮನಸ್ಸು ಬದಲಾಯಿಸಿ ಮನೆಗೆ ಹೋಗಿದ್ದಾಳೆ ಎಂಬ ಭರವಸೆಯಲ್ಲಿಯೇ ನನ್ನ ತಾಯಿ ಆ ಎಲಿವೇಟರ್ ಇದ್ದ ಸ್ಥಳದಲ್ಲಿ ತಲೆಮರೆಸಿಕೊಂಡಿದ್ದಳು. ಹಾಗಾಗಲಿಲ್ಲ. ಅವಳು  ಮನೆಯ ಸುತ್ತಲೂ ಓಡಾಡುತ್ತಿದ್ದಳು. ಅವಳದೇ ಸಮಯ ತೆಗೆದುಕೊಂಡು ಪ್ರತಿ ಕಿಟಕಿಯ ಬಳಿಯಲ್ಲೂ ನಿಲ್ಲುತ್ತಿದ್ದಳು. ಬಿರುಮಳೆಗೆ ಮುಚ್ಚುವ ಕಿಟಕಿಗಳು ಬೇಸಿಗೆಯಾದ್ದರಿಂದ ಮುಚ್ಚಿರಲಿಲ್ಲ. ಅವಳು ಒಂದೊಂದೆ ಕಿಟಕಿ ಗಾಜಿಗೆ ತನ್ನ ಮುಖ ಒತ್ತಿ ಒಳಗಿನದೆಲ್ಲವನ್ನೂ ನೋಡಬಹುದು. ಕಿಟಕಿ ಪರದೆಗಳು ಅಮ್ಮನಿಗೆ ತಲುಪಲಾಗದಷ್ಟು ಎತ್ತರದಲ್ಲಿದ್ದವು. ಏಕೆಂದರೆ ಆ ಹಗಲು ಸುಂದರವಾಗಿತ್ತು. ಆ ಮಹಿಳೆ ತುಂಬಾ ಎತ್ತರವಾಗಿರಲಿಲ್ಲ. ಆದರೆ ಒಳಗೆ ಇರುವುದನ್ನು ನೋಡಲು ಅವಳು ಕಾಲು ಕೈ ಮೈಗಳನ್ನು ಚಾಚಬೇಕಾಗಿರಲಿಲ್ಲ.

ನನ್ನ ತಾಯಿಗೆ ಇದು ಹೇಗೆ ಗೊತ್ತು? ಅವರು ನನ್ನನ್ನು ತನ್ನ ತೋಳುಗಳಲ್ಲಿ ಅವುಚಿ ಓಡುತ್ತಿದ್ದಾಳೆಂಬಂತೆ ಅತ್ತಿಂದಿತ್ತ ಮೆಲ್ಲಗೆ ಸಾಗುತ್ತಿದ್ದಾಳೆ. ಒಂದರ ನಂತರ ಒಂದು ಪೀಠೋಪಕರಣದ ಹಿಂದೆ ಅಡಗಿಕೊಳ್ಳುತ್ತಿದ್ದಾಳೆ. ಹೊರಗೆ ಇಣುಕಿ ನೋಡುತ್ತ ಭಯಭೀತಳಾಗಿದ್ದಾಳೆ. ಆ ದಿಟ್ಟಿಸುವ ಕಣ್ಣುಗಳನ್ನು ಭೇಟಿಯಾಗಲು, ಬಹುಶಃ ಒಂದು ವ್ಯಗ್ರ ನಗೆಬೀರಲು ಅಣಿಯಾದವಳಂತೆ. ಅವರು ಎಲಿವೇಟರ್ ಇದ್ದ ಜಾಗದ ಬಳಿಯೇ ಇದ್ದರು. ಅವರು ಇನ್ನೇನು ಮಾಡಬಹುದಿತ್ತು?

ಖಂಡಿತವಾಗಿಯೂ ನೆಲಮಾಳಿಗೆ ಇತ್ತು. ಅಲ್ಲಿನ ಕಿಟಕಿಗಳು ತುಂಬಾ ಚಿಕ್ಕದಾಗಿದ್ದು, ಯಾರಿಗೂ ಅವುಗಳ ಮೂಲಕ ನುಸುಳಿ ಬರಲು ಸಾಧ್ಯವಾಗುತ್ತಿರಲಿಲ್ಲ. ಆದರೆ ನೆಲಮಾಳಿಗೆಯ ಬಾಗಿಲಿಗೆ ಹಾಕಲು ಚಿಲಕವೇ ಇರಲಿಲ್ಲ. ಹೇಗಾದರೂ, ಆ ಕತ್ತಲೆಯಲ್ಲಿ ಸಿಕ್ಕಿಹಾಕಿಕೊಳ್ಳುವುದು ಹೆಚ್ಚು ಭಯಾನಕವಾಗಿದೆಯೆಂದು ಅಮ್ಮ ಭಾವಿಸಿದ್ದಳು. ಕೊನೆಗೂ ಆ ಮಹಿಳೆ ಮನೆಯೊಳಗೆ ದಾರಿ ಮಾಡಿಕೊಂಡು ನೆಲಮಾಳಿಗೆಯ ಮೆಟ್ಟಿಲುಗಳ ಇಳಿದು ಕೆಳಗೆ ಬಂದುಬಿಟ್ಟರೆ? ಮೇಲಿನ ಮಹಡಿಯಲ್ಲಿಯೂ ಕೋಣೆಗಳು ಇದ್ದವು. ಆದರೆ ಅಲ್ಲಿಗೆ ಹೋಗಲು ನನ್ನ ತಾಯಿ ದೊಡ್ಡದಾಗಿದ್ದ ಮುಖ್ಯ ಕೋಣೆಯನ್ನು ದಾಟಬೇಕಾಗಿತ್ತು. ಭವಿಷ್ಯದಲ್ಲಿ ನನಗೆ ಹೊಡೆತ ಬೀಳುವ ಕೋಣೆ. ಆದರೆ ಮೆಟ್ಟಿಲುಗಳನ್ನು ಮುಚ್ಚಿದ ನಂತರ ಅದು ತನ್ನ ದುಷ್ಕೃತ್ಯದ ಅವಕಾಶವನ್ನು ಎಂದೆಂದಿಗೂ ಕಳೆದುಕೊಂಡುಬಿಟ್ಟಿತು.

ನನ್ನ ತಾಯಿ ಈ ಕಥೆಯನ್ನು ಮೊದಲು ನನಗೆ ಹೇಳಿದ್ದು ಯಾವಾಗಲೋ? ನನಗೆ ಗೊತ್ತಿಲ್ಲ. ಆದರೆ ಬರಬರುತ್ತ ಕಥೆಯ ಹಿಂದಿನ ಆವೃತ್ತಿಗಳು ನಿಂತುಹೋದವು ಎಂದು ನನಗೆ ತೋರುತ್ತದೆ. ಶ್ರೀಮತಿ ನೆಟ್ಟರ್ ಫೀಲ್ಡ್ ತನ್ನ ಮುಖವನ್ನು, ಕೈಗಳನ್ನು ಕಿಟಕಿ ಗಾಜಿಗೆ ಒತ್ತುತ್ತಿದ್ದಳು ಎನ್ನುವುದು ಮರೆಯಾದ ಮೊದಲನೆಯದು. ಅಂದರೆ ನಂತರದ ಆವೃತ್ತಿಗಳಲ್ಲಿ ಕೇವಲ ನೋಡುವುದಕ್ಕೆ ಅದು ಅಂತ್ಯವಾಗುತ್ತಿತ್ತು. ಅವಳಿಗೆ ಅಸಹನೆ ಅಥವಾ ಕೋಪವಿತ್ತೆಂಬ ಹೊಸ ಅಂಶ ನಿರೂಪಣೆಯ ಮೇಲೆ ಹಿಡಿತ ಸಾಧಿಸಿತು. ನಂತರ ಗಲಾಟೆ ಮತ್ತು ದಬದಬ ಬಡಿಯುವುದು ಬಂತು. ಚೀರುವ ಬಗ್ಗೆ ಯಾವುದೇ ಉಲ್ಲೇಖವಿರಲಿಲ್ಲ. ವಯಸ್ಸಾದ ಮಹಿಳೆ ಅದನ್ನು ಮಾಡಲು ಬೇಕಾದಷ್ಟು ಉಸಿರು ಹೊಂದಿಲ್ಲದಿರಬಹುದು. ಅಥವಾ ಅವಳ ಶಕ್ತಿ ಮುಗಿದ ನಂತರ ಅವರು ತಾನು ಬಂದಿರುವುದೇಕೆಂದು ಮರೆತಿದ್ದಾಳು.

ಹೇಗಾದರೂ, ಅವಳು  ತನ್ನ ಪ್ರಯತ್ನವನ್ನು ಬಿಟ್ಟುಕೊಟ್ಟಳು; ಅವಳು ಮಾಡಿದ್ದು ಅಷ್ಟೆ. ಅವಳು ಎಲ್ಲಾ ಕಿಟಕಿ ಮತ್ತು ಬಾಗಿಲುಗಳ ಬಾಹ್ಯ ಶೋಧನೆಯ ಪ್ರವಾಸವನ್ನು ಮಾಡಿದ ನಂತರ ಅಲ್ಲಿಂದ ಹೊರಟುಹೋದಳು. ನನ್ನ ತಾಯಿ ಮೌನವಾಗಿ ಸುತ್ತಲೂ ನೋಡಲು ಧೈರ್ಯ ಪಡೆದದ್ದು ಆಮೇಲೆಯೇ. ಶ್ರೀಮತಿ ನೆಟ್ಟರ್ ಫೀಲ್ಡ್ ಬೇರೆಡೆ ಹೋಗಿದ್ದಾಳೆ ಎಂದು ತಾಯಿ ಆಮೇಲೆ ತೀರ್ಮಾನಿಸಿದರು. ಏನೇ ಆದರೂ, ನನ್ನ ತಂದೆ ಮನೆಗೆ ಬರುವವರೆಗೂ ಅವರು ಕುರ್ಚಿಯನ್ನು ಡೋರ್ನೋಬ್‌ನಿಂದ ತೆಗೆಯಲು ಹೋಗಲಿಲ್ಲ.

ಇದರ ಅರ್ಥ ನನ್ನ ತಾಯಿ ಈ ಬಗ್ಗೆ ಆಗಾಗ್ಗೆ ಮಾತನಾಡುತ್ತಾರೆ ಎಂದು ಸೂಚಿಸಲು ನಾನು ಹೇಳಿದೆ ಎಂದಲ್ಲ. ಇದು ನಾನು ತಿಳಿದುಕೊಂಡ ವಿಚಾರಸಂಗ್ರಹದ ಭಾಗವಾಗಿರಲಿಲ್ಲ ಮತ್ತು ಬಹುಪಾಲು ಇದರಲ್ಲಿ ನನಗೆ ಆಸಕ್ತಿಯಿರಲಿಲ್ಲ. ಪ್ರೌಢಶಾಲೆಗೆ ಹೋಗಲು ಅವರು ನಡೆಸಿದ ಹೋರಾಟ. ಅವರು  ಕಲಿಸಿದ ಶಾಲೆ. ಮಕ್ಕಳು ಕುದುರೆಯ ಮೇಲೆ ಬಂದ ಆಲ್ಬರ್ಟಾ ಮತ್ತು ಇತರೆ ಸ್ಥಳಗಳು. ಅವರು ಸಾಮಾನ್ಯ ಶಾಲೆಯಲ್ಲಿ ಹೊಂದಿದ್ದ ಸ್ನೇಹಿತರು. ಹೂಡಿದ್ದ ಮುಗ್ಧ ತಂತ್ರಗಳು – ಇವೆಲ್ಲ ನನ್ನ ವಿಚಾರ ಸಂಗ್ರಹದ  ಅಧ್ಯಾಯಗಳು.

ಅವರು  ಹೇಳುತ್ತಿರುವುದನ್ನು ನಾನು ಯಾವಾಗಲೂ ಅರ್ಥ ಮಾಡಿಕೊಳ್ಳಬಲ್ಲೆ. ಆದರೆ ಅವಳ ಧ್ವನಿ ದಪ್ಪಗಾಗಿ ಇತರ ಜನರಿಗೆ ಅದು ಅರ್ಥವಾಗದ ಹಾಗಾದ ನಂತರ ಆಗಾಗ್ಗೆ ನಾನು ಅವಳ ವ್ಯಾಖ್ಯಾನಕಾರಳಾಗಿರುತ್ತಿದ್ದೆ. ಕೆಲವೊಮ್ಮೆ ನಾನು ವಿಸ್ತಾರವಾದ ವಿಷಯಗಳನ್ನು ಅವರಿಗೆ ಪುನರಾವರ್ತಿಸಿ ಹೇಳಬೇಕಾಗಿ ಬಂದಾಗ ಅಥವಾ ಅವರು ಜೋಕ್ ಎಂದು ವಿಚಾರವನ್ನು ಭಾವಿಸಿದಾಗ ನಾನು ದುಃಖದಿಂದ ತುಂಬಿ ಹೋಗುತ್ತಿದ್ದೆ. ಅವರ ಜೊತೆ ಮಾತನಾಡುವುದನ್ನು ನಿಲ್ಲಿಸಿದ ಒಳ್ಳೆಯ ಜನರು ಆದಷ್ಟು ಬೇಗನೆ ದೂರವಾಗಲು ಹೆಣಗುತ್ತಿರುವುದನ್ನು ನಾನು ಕಾಣುತ್ತಿದ್ದೆ.

ಮುದುಕಿ ಶ್ರೀಮತಿ ನೆಟ್ಟರ್ ಫೀಲ್ಡ್ ನ ಆ ಆಗಮನ- ಅವರು ಅದನ್ನು ಹಾಗೆಯೇ ಕರೆಯುತ್ತಿದ್ದರು- ಕುರಿತು ನಾನು ಸದಾ ಮಾತನಾಡಬೇಕಾದ ಅಗತ್ಯವಿರಲಿಲ್ಲ. ಆದರೆ ನನಗೆ ಬಹಳ ಸಮಯದಿಂದ ಅದರ ಬಗ್ಗೆ ತಿಳಿದಿರಬೇಕು. ಆ ಮಹಿಳೆಯ ಗತಿ ನಂತರ ಏನಾಯಿತು ಎಂದು ಅವರು ತಿಳಿದಿದ್ದರೆ ಕೇಳಬೇಕೆಂಬ ಮನಸ್ಸು ಆಗಾಗ ಆಗುತ್ತಿತ್ತು. ಯಾವುದೋ ಸಮಯದಲ್ಲಿ ನಾನು ಅವಳನ್ನು ಕೇಳಿದೆ ಕೂಡ. “ಅವರು ಅವಳನ್ನು ಕರೆದೊಯ್ದರು” ಎಂದು ಅವರು ಹೇಳಿದರು. “ಓಹ್, ನಾನು ಹಾಗೆ ಭಾವಿಸುತ್ತೇನೆ. ಅವಳನ್ನು ಏಕಾಂಗಿಯಾಗಿ ಸಾಯಲು ಬಿಡಲಿಲ್ಲ.”

ನಾನು ಮದುವೆಯಾಗಿ ವ್ಯಾಂಕೋವರ್‌ಗೆ ಹೋದ ನಂತರವೂ, ನಾನು ಬೆಳೆದ ಊರಿನಿಂದ ಪ್ರಕಟವಾಗುವ ವಾರಪತ್ರಿಕೆಯನ್ನು ತರಿಸಿಕೊಳ್ಳುತ್ತಿದ್ದೆ. ನನ್ನ ಪ್ರಕಾರ, ಬಹುಶಃ ನನ್ನ ತಂದೆ ಮತ್ತು ಅವರ ಎರಡನೇ ಹೆಂಡತಿ, ಯಾರಾದರೂ, ನಾನು ಅದರ ಚಂದಾ ಹೊಂದಿದ್ದೇನೆ ಎಂದು ಖಚಿತಪಡಿಸಿಕೊಂಡಿರುತ್ತಾರೆ ಎಂದು ನಾನು ನಂಬಿದ್ದೆ. ಬಹಳ ಸಲ ನಾನು ಅದನ್ನು ವಿವರವಾಗಿ ನೋಡುತ್ತಿರಲಿಲ್ಲ. ಆದರೆ ಒಂದು ಬಾರಿ, ವಿವರವಾಗಿ ಓದುತ್ತಿದ್ದಾಗ, ನಾನು ನೆಟರ್ ಫೀಲ್ಡ್ ಎಂಬ ಹೆಸರನ್ನು ನೋಡಿದೆ. ಇದು ಪ್ರಸ್ತುತ ಆ ಪಟ್ಟಣದಲ್ಲಿ ವಾಸಿಸುತ್ತಿದ್ದ ಯಾರೊಬ್ಬರ ಹೆಸರಲ್ಲ, ಆದರೆ ಅದು ಖಚಿತವಾಗಿ ಒರೆಗಾನ್‌ನ ಪೋರ್ಟ್ ಲ್ಯಾಂಡಿ‌ನಲ್ಲಿರುವ ಮಹಿಳೆಯೊಬ್ಬರ ಮೊದಲ ಹೆಸರಾಗಿದೆ. ಅವರು ಪತ್ರಿಕೆಗೆ ಒಂದು ಪತ್ರ ಬರೆದಿದ್ದರು. ಈ ಮಹಿಳೆಯೂ ನನ್ನಂತೆಯೇ ಇನ್ನೂ ತನ್ನ ಊರಿನ ವಾರಪತ್ರಿಕೆಗೆ ಚಂದಾದಾರಳಾಗಿದ್ದರು. ಅವರು ಅಲ್ಲಿನ ತನ್ನ ಬಾಲ್ಯದ ಬಗ್ಗೆ ಒಂದು ಕವಿತೆಯನ್ನು ಬರೆದಿದ್ದರು.

ಸ್ಪಟಿಕದಂಥ ನದಿಯ ಮೇಲೆ ಇರುವ

ಹುಲ್ಲಿನ ಬೆಟ್ಟ ಗೊತ್ತು ನನಗೆ

ಶಾಂತಿ ಮತ್ತು ಸಂತೋಷದ ಸ್ಥಳವದು

ಒಂದು ನೆನಪು ಬಹಳ ಪ್ರಿಯವು ನನಗೆ

ಹಲವಾರು ಪದ್ಯಗಳು ಇದ್ದವು. ಓದುತ್ತ ಅವರು ನನಗೆ ಸೇರಿದವೆಂದು ಭಾವಿಸಿದ ಅದೇ ನದಿಗಳ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ನಾನು ಅರ್ಥಮಾಡಿಕೊಳ್ಳಲು ಪ್ರಾರಂಭಿಸಿದೆ. “ನಾನು ಕಳುಹಿಸುತ್ತಿರುವ ಸಾಲುಗಳನ್ನು ಆ ಹಳೆಯ ಬೆಟ್ಟದ ಬದಿಯ ನೆನಪುಗಳಿಂದ ಬರೆಯಲಾಗಿದೆ” ಎಂದು ಅವರು ಹೇಳಿದ್ದರು, “ಕಾಲಾನುಕಾಲಕ್ಕೂ ಗೌರವಯುತವಾದ ನಿಮ್ಮ ಪತ್ರಿಕೆಯಲ್ಲಿ ಸ್ವಲ್ಪ ಜಾಗಕ್ಕೆ ಇವು ಅರ್ಹರಾಗಿದ್ದರೆ, ನಾನು ನಿಮಗೆ ಧನ್ಯವಾದಗಳನ್ನು ಅರ್ಪಿಸುವೆ.”

ನದಿಯ ಮೇಲೆ ಸೂರ್ಯನ

ಅಡೆತಡೆರಹಿತ ಕಿರಣಗಳು ಆಡುತ್ತವೆ

ಆ ಬದಿಯ ದಂಡೆಯಲ್ಲಿ ಹೂವುಗಳು

ಸಂತಸದಿಂದ ಅರಳಿವೆ ಗಾಢ ವರ್ಣಗಳಲ್ಲಿ

ಅದು ನದಿಯ ನಮ್ಮ ಕಡೆಯ ದಂಡೆ ಆಗಿತ್ತು. ನನ್ನ ದಂಡೆಯದು. ಮತ್ತೊಂದು ಪದ್ಯವು ಮ್ಯಾಪಲ್‌ ಮರಗಳ ಕುರಿತಾಗಿತ್ತು. ಆದರೆ ಅಲ್ಲಿ ಅವರು ಅದನ್ನು ತಪ್ಪಾಗಿ ನೆನಪಿಸಿಕೊಳ್ಳುತ್ತಿದ್ದಾರೆ ಎಂದು ನಾನು ನಂಬುತ್ತೇನೆ. ಅವು ಎಲ್ಮ್‌ಗಳು. ಅವೆಲ್ಲವೂ ಡಚ್ ಎಲ್ಮ್ ಕಾಯಿಲೆಯಿಂದ ಒಣಗಿ ಹೋಗಿದ್ದವು. ಪತ್ರದ ಉಳಿದ ಭಾಗಗಳು ವಿಷಯಗಳನ್ನು ಮತ್ತಷ್ಟು ಸ್ಪಷ್ಟಪಡಿಸಿದವು. ಮಹಿಳೆ ತನ್ನ ತಂದೆಯ ಹೆಸರು ನೆಟ್ಟರ್ ಫೀಲ್ಡ್ ಎಂದು. 1883ರಲ್ಲಿ ಆತ ಸರ್ಕಾರದಿಂದ ಒಂದು ತುಂಡು ಭೂಮಿಯನ್ನು ಖರೀದಿಸಿದ್ದ. ಅದೇ ನಂತರ ಲೋವರ್ ಟೌನ್ ಎಂದು ಕರೆಯಲಾದ ಜಾಗ. ಭೂಮಿ ಮೈಟ್‌ಲ್ಯಾಂಡ್ ನದಿಯವರೆಗೆ ಚಾಚಿತ್ತು.

ಐರಿಸ್  ಹೂಗಿಡಗಳು ಸುತ್ತ ಬೆಳೆದ ಹೊಳೆದಂಡೆ

ಹರಡಿದ ಮ್ಯಾಪಲ್ ಗಳ ನೆರಳು

ನದಿಯ ವಿಸ್ತಾರ ನೀರ್ ಬಯಲಲ್ಲಿ

ಬಿಳಿ ಹೆಬ್ಬಾತುಗಳು, ಇನಾಕ್ಸ್‌ಗಳು ಹೆಕ್ಕುತ್ತಿವೆ

ಅವರು ಅಲ್ಲಿಂದ ಹೊರಟು ಹೋಗಿದ್ದರು, ನಾನು ಮಾಡಿದಂತೆಯೇ. ಹೊಳೆ ರಾಡಿಯಾಗಿ ಕುದುರೆಗಳ ಗೊರಸಿನಿಂದ ಕೆಸರಾದ ರೀತಿಯಲ್ಲಿಯೇ. ಸಹಜವಾಗಿಯೆ ಸಗಣಿ ಗೊಬ್ಬರವನ್ನು ಬಿಟ್ಟುಬಿಟ್ಟಿದ್ದರು. ವಾಸ್ತವವಾಗಿ, ನಾನು ಒಮ್ಮೆ ಕೆಲವು ಕವಿತೆಗಳನ್ನು ಓದಿದ್ದೆ. ಅವುಗಳು ಒಂದೇ ಸ್ವಭಾವ ಹೊಂದಿದ್ದವು. ಪ್ರಕೃತಿಯನ್ನು ಕೀರ್ತಿಸಿದ ಪದ್ಯಗಳು. ಅವುಗಳೆಲ್ಲವೂ ಈಗ ಕಳೆದುಹೋಗಿವೆ. ಬಹುಶಃ ಅದನ್ನು ನನ್ನಿಂದ ಮತ್ತೆ ಬರೆಯಲಾಗಿಲ್ಲ. ನಂತರ ಬರೆಯದಿರುವುದು ಸ್ವಲ್ಪ ಕಷ್ಟವಾಯಿತು. ನನ್ನ ತಾಯಿಯ ಬಗ್ಗೆ ನಾನು ತುಂಬಾ ಅಸಮಾಧಾನ ಹೊಂದಿದ್ದ ಸಮಯದಲ್ಲಿಯೇ ನಾನು ಅವುಗಳನ್ನು ರಚಿಸುತ್ತಿದ್ದೆ. ನನ್ನ ತಂದೆ ಬಡಿದು ಬುದ್ಧಿ ಹೇಳಿಯಾದರೂ ಸರಿಯೇ ನನ್ನಲ್ಲಿದ್ದ ನಿರ್ದಯತೆಯನ್ನು ನನ್ನಿಂದ ಹೊರದೂಡಲು ಪ್ರಯತ್ನ ಮಾಡುತ್ತಿದ್ದರು.

ಈ ಮಹಿಳೆ ತಾನು 1876ರಲ್ಲಿ ಜನಿಸಿದವಳು ಎಂದು ಹೇಳಿದ್ದಳು. ಅವಳು ಮದುವೆಯಾಗುವ ತನಕ ತನ್ನ ಯೌವನವನ್ನು ತನ್ನ ತಂದೆಯ ಮನೆಯಲ್ಲಿಯೆ ಕಳೆದಿದ್ದಳು. ಪಟ್ಟಣವು ಕೊನೆಗೊಂಡು ಬಯಲು ಪ್ರಾರಂಭವಾಗುವ ಎಡೆ ಅದು. ಅಲ್ಲಿಂದ ಸೂರ್ಯಾಸ್ತದ ನೋಟವನ್ನು ಕಾಣಬಹುದಿತ್ತು.

ನಮ್ಮ ಮನೆ.

ನಮ್ಮ ಮನೆಯೇ ನೆಟ್ಟರ್ ಫೀಲ್ಡ್ ಕುಟುಂಬ ವಾಸಿಸುತ್ತಿದ್ದ ಸ್ಥಳ. ಬಹುಶಃ ಇದು ನನ್ನ ತಾಯಿಗೆ ಯಾವತ್ತೂ ತಿಳಿದಿರಲಿಲ್ಲ. ಆ ವೃದ್ಧೆ ತನ್ನ ಸ್ವಂತ ಮನೆಯ ಕಿಟಕಿಗಳಲ್ಲಿ ನೋಡುತ್ತಿದ್ದಾಳೆ ಎಂದು ಅವಳಿಗೆ ಎಂದಿಗೂ ತಿಳಿಯಲಿಲ್ಲವೇ? ಇದು ಸಾಧ್ಯ. ನನ್ನ ಈ ವೃದ್ಧಾಪ್ಯದಲ್ಲಿ ದಾಖಲೆಗಳನ್ನು ಹುಡುಕುವ ಮತ್ತು ವಿಷಯಗಳನ್ನು ಅನ್ವೇಷಿಸುವ ಕಡುಬೇಸರದ ವ್ಯವಹಾರದಲ್ಲಿ ತೊಡಗಿ ತಲೆಕೆಡಿಸಿಕೊಳ್ಳುವಷ್ಟು ಆಸಕ್ತಿ ನನ್ನಲ್ಲಿ ಬೆಳೆದು ಬಿಟ್ಟಿದೆ. ನೆಟ್ಟರ್ ಫೀಲ್ಡ್ ಅದನ್ನು ಮಾರಾಟ ಮಾಡಿದ ಸಮಯ ಮತ್ತು ನನ್ನ ಹೆತ್ತವರು ಅದನ್ನು ಕೊಂಡ ಸಮಯದ ನಡುವೆ ಬೇರೆಬೇರೆ ಕುಟುಂಬಗಳು ಆ ಮನೆಯನ್ನು ಕೊಂಡಿದ್ದರೆಂಬುದನ್ನು ನಾನು ಕಂಡುಕೊಂಡಿದ್ದೇನೆ. ಆ ಮಹಿಳೆಗೆ ಇನ್ನೂ ಜೀವಿಸಲು ಆಯುಷ್ಯ ಹೇರಳವಾಗಿದ್ದಾಗಲೆ ಅದನ್ನು ಏಕೆ ಮಾರಾಟ ಮಾಡಲಾಯಿತು ಎಂದು ನಿಮಗೆ ಆಶ್ಚರ್ಯವಾಗಬಹುದು. ಅವಳು ವಿಧವೆಯಾಗಿ ಹೋದಳೇ, ಹಣದ ಕೊರತೆಯಿಂದ ನಲುಗಿದಳೇ? ಯಾರಿಗೆ ಗೊತ್ತು? ನನ್ನ ತಾಯಿ ಹೇಳಿದಂತೆ ಯಾರೋ ಬಂದು ಅವಳನ್ನು ಕರೆದುಕೊಂಡು ಹೋದರು. ಅವರು ಯಾರು? ಬಹುಶಃ ಅದು ಅವಳ ಮಗಳಿದ್ದಾಳು. ಕವನಗಳನ್ನು ಬರೆದ ಒರೆಗಾನ್‌ನಲ್ಲಿ ವಾಸಿಸುತ್ತಿದ್ದ ಅದೇ ಮಹಿಳೆ. ಬಹುಶಃ ಆ ಮಗಳು, ಬೆಳೆದ ಮತ್ತು ದೂರಕ್ಕೆ ಹೋದ ಆ ಮಗಳನ್ನೇ ಅವರು ಮಗುವಿನ ಗಾಡಿಯಲ್ಲಿ ಹುಡುಕುತ್ತಿದ್ದಳು. ನನ್ನ ತಾಯಿ ನನ್ನನ್ನು ಕವುಚಿ ಹಿಡಿದ ನಂತರ, ಅವರು ಹೇಳಿದಂತೆ ತನಗೆ ಪ್ರಿಯವಾದ ಜೀವಕ್ಕಾಗಿ ಹುಡುಕುತ್ತಿದ್ದಳು.

ನನ್ನ ವಯಸ್ಕ ಜೀವನದಲ್ಲಿ ನನ್ನ ಮಗಳು ಸ್ವಲ್ಪ ಸಮಯದವರೆಗೆ ಸಹ ನನ್ನಿಂದ ತುಂಬಾ ಎನಿಸುವಷ್ಟು ದೂರವಿರಲಿಲ್ಲ. ನನ್ನ ಸ್ವಂತ ಹೊಸ ಕುಟುಂಬ ಮತ್ತು ನನ್ನದೇ ಆದ ಅತೃಪ್ತಿಕರ ಬರವಣಿಗೆಯಲ್ಲಿ ನಾನು ತುಂಬಾ ತೊಡಗಿಕೊಂಡಿರದಿದ್ದರೆ ನಾನು ಅವಳಿಗೆ ಪತ್ರ ಬರೆಯಬಹುದಿತ್ತು, ಬಹುಶಃ ಭೇಟಿಯೂ ಆಗಬಹುದಿತ್ತು. ಆದರೆ ನಾನು ಮಾತನಾಡಲು ಇಷ್ಟಪಡುವ ವ್ಯಕ್ತಿ ನನ್ನ ತಾಯಿಯೇ. ಅವರು ನನಗೆ ಲಭ್ಯವಿರಲಿಲ್ಲ.

*****

ನನ್ನ ತಾಯಿ ಕೊನೆಯ ಬಾರಿ ಅನಾರೋಗ್ಯಕ್ಕೆ ತುತ್ತಾದಾಗಲಾಗಲೀ ಅವರ ಅಂತ್ಯಕ್ರಿಯೆಗಾಗಲಿ ನಾನು ಅವಳ ಮನೆಗೆ ಹೋಗಲಿಲ್ಲ. ನನಗೆ ಇಬ್ಬರು ಸಣ್ಣ ಮಕ್ಕಳಿದ್ದರು. ವ್ಯಾಂಕೋವರ್‌ನಲ್ಲಿ ಅವರನ್ನು ನೋಡಿಕೊಳ್ಳಲು ಯಾರೂ ಇರಲಿಲ್ಲ. ನಾವು ಹೋಗಿ ಬರಬಹುದಿತ್ತು. ಆದರೆ ನನ್ನ ಪತಿಗೆ ಔಪಚಾರಿಕ ನಡವಳಿಕೆಯ ಬಗ್ಗೆ ತಿರಸ್ಕಾರವಿತ್ತು. ಅದನ್ನು ಅವನ ಮೇಲೆ ಏಕೆ ದೂಷಿಸಬೇಕು? ನನಗೂ ಅದೇ ಅನಿಸಿತ್ತು. ಅವುಗಳನ್ನು ಕ್ಷಮಿಸಲಾಗದ ವಿಷಯಗಳೆಂದು ನಾವು ಹೇಳುತ್ತೇವೆ ಅಥವಾ ನಾವು ಎಂದಿಗೂ ನಮ್ಮನ್ನು ಕ್ಷಮಿಸುವುದಿಲ್ಲ. ಆದರೂ ನಾವು ಹಾಗೆಯೇ ನಡೆದುಕೊಳ್ಳುತ್ತೇವೆ-ನಾವು ಅದನ್ನು ಸಾರ್ವಕಾಲಿಕವಾಗಿ ಮಾಡುತ್ತಿರುತ್ತೇವೆ.

——–

ಲೇಖಕರ ಬಗ್ಗೆ

ಆಲಿಸ್ ಮುನ್ರೊ ಒಂಟಾರಿಯೊದ ವಿಂಗ್ ಹ್ಯಾಂನಲ್ಲಿ ಬೆಳೆದರು. ವೆಸ್ಟರ್ನ್ ಒಂಟಾರಿಯೊ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದರು. ಅವರು ಹನ್ನೆರಡು ಕಥೆಗಳ ಸಂಗ್ರಹ ಮತ್ತು ಆಯ್ದ ಕಥೆಗಳ ಎರಡು ಸಂಪುಟಗಳನ್ನು ಪ್ರಕಟಿಸಿದ್ದಾರೆ. ಕೆನಡಾದ ಮೂರು ಗವರ್ನರ್ ಜನರಲ್ ಸಾಹಿತ್ಯ ಪ್ರಶಸ್ತಿಗಳು, ಎರಡು ಗಿಲ್ಲರ್ ಬಹುಮಾನಗಳು, ಸಣ್ಣ ಕಥೆಗಾಗಿ ರಿಯಾ ಪ್ರಶಸ್ತಿ, ಲನ್ನನ್ ಸಾಹಿತ್ಯ ಪ್ರಶಸ್ತಿ, ಇಂಗ್ಲೆಂಡ್‌ನ ಡಬ್ಲ್ಯುಹೆಚ್ ಸ್ಮಿತ್ ಸಾಹಿತ್ಯ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಮತ್ತು ಬಹುಮಾನಗಳನ್ನು ಪಡೆದಿದ್ದಾರೆ.

ಯುನೈಟೆಡ್ ಸ್ಟೇಟ್ಸ್ನ ರಾಷ್ಟ್ರೀಯ ಪುಸ್ತಕ ವಿಮರ್ಶಕರ ವಲಯ ಪ್ರಶಸ್ತಿ, ಸಾಹಿತ್ಯದಲ್ಲಿ ಎಡ್ವರ್ಡ್ ಮ್ಯಾಕ್ಡೊವೆಲ್ ಪದಕ ಮತ್ತು ಮ್ಯಾನ್ ಬುಕರ್ ಅಂತರರಾಷ್ಟ್ರೀಯ ಪ್ರಶಸ್ತಿ ಲಭಿಸಿವೆ. ಅವರ ಕಥೆಗಳು ದಿ ನ್ಯೂಯಾರ್ಕರ್, ದಿ ಅಟ್ಲಾಂಟಿಕ್ ಮಾಸಿಕ, ಹಾರ್ಪರ್ಸ್ ಮ್ಯಾಗಜೀನ್, ಗ್ರ್ಯಾಂಟಾ ಮತ್ತು ಇತರ ಪ್ರಕಟಣೆಗಳಲ್ಲಿ ಪ್ರಕಟವಾಗಿವೆ ಮತ್ತು ಅವರ ಸಂಗ್ರಹಗಳನ್ನು ಹದಿಮೂರು ಭಾಷೆಗಳಿಗೆ ಅನುವಾದಿಸಲಾಗಿದೆ. ಆಲಿಸ್ ಮುನ್ರೊ ಒಂಟಾರಿಯೊದ ಕ್ಲಿಂಟನ್, ಹ್ಯುರಾನ್ ಸರೋವರದ ಬಳಿ ವಾಸಿಸುತ್ತಿದ್ದಾರೆ.

‍ಲೇಖಕರು nalike

4 August, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading