ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆರ್ ತಾರಿಣಿ ಶುಭದಾಯಿನಿ ಕವಿತೆ-ಕರುಣೆಯೆಂಬ ಜಂಭ…

ಆರ್ ತಾರಿಣಿ ಶುಭದಾಯಿನಿ

1. ಕರುಣೆಯೆಂಬ ಜಂಭ

ಇನ್ನೇನು ಅಪ್ಪಳಿಸಬೇಕು
ಕರುಣೆಯ ರಸ ಪುಳಕ್ಕನೆ ಸ್ಖಲಿಸಿ
ಬದಲಾಯಿಸಿಬಿಡುತ್ತದೆ ನೋಟವನ್ನು

ಅದು ಹಾಗಿರಲಿ,
ಎತ್ತಿಕೊಂಡು ರೋಷದಲಿ ಜಪ್ಪುವುದಕ್ಕೆ
ಸಿದ್ಧವಾಗಿದ್ದ ನಾನು ಯಾರು?
ಇಗೊ ಒದೆಸಿಕೊಂಡು ಒರಗಲು
ಕೈಯಲ್ಲಿ ಹಿಡಿಯಾಗಿರುವ ನೀನು ಯಾರು?

ಹಿಂದೆ ಬಂದರೆ ಒದೆಯಬೇಡಿ,
ಮುಂದೆ ಬಂದರ೦ತೂ ಮುದ್ದುಗರೆವವರಲ್ಲ
ನೀವು, ಆದರೂ ಲೋಕಾರೂಢಿ
ಮರುಕ ಬೇಡುವುದು
ಮನದ ಮೂಲೆಯಲ್ಲೆಲ್ಲೊ ಸ್ರವಿಸಿದ
ಒದ್ದೆ
ಮನ

ಮೆಲ್ಲಗೆ ಇಳಿಸಿಬಿಡುವೆ ಹೆಗಲಿಂದ
ಹೋಗು ಮಗೂ ಹೋಗು,
ಬದುಕಿಕೊ ಹೋಗು
ಬದುಕಿ ಬಾಳಿ ಬೆಟ್ಟಕಾನನದಲ್ಲಿ
ವಿಜೃಂಭಿಸಿ ರಾಜ್ಯ ಕಟ್ಟು
ಸಾಮ್ರಾಜ್ಯಗಳ ತುದಿಮೂಲೆಯಲ್ಲಿ
ಜೇಡ ಕಟ್ಟಿ ನೇತಾಡುವ ತನಕ
ಕಲ್ಲ ಸಾಫ್ ಮಾಡಿಸಿ ಶಾಸನ ಕೆತ್ತಿಸು
ಸುವರ್ಣಾಕ್ಷರದಲ್ಲಿ ಸಾಧನೆಗಳ ಮೆರೆಸು

ನಾನು
ನಾನು ಸಾಯುವೆ, ಸತ್ತು
ಬದುಕುವೆ, ಸತ್ಯದ
ಹಿಂಸೆಯ ಹಾದು
ಎಲ್ಲೊ ಆಳದಲ್ಲಿ ಉಳಿದಿರುವ
ಕಸರು ಅಹಂ ಆಗಾಗ ಹೆಡೆಯೆತ್ತಿ
ನನ್ನೊಳಗನ್ನ ಹುಸಿಗೊಳಿಸುವುದು

ಕಡೆಗೆ ತೋಳನ್ನೆ ನೆಚ್ಚಿ ಬದುಕಿದರೂ
ಮನದ ಕ್ಲೇಶವು ಕೆಡಿಸುವುದು ತನುವ
ಹೀಗೆ ಹೊಳೆವ ಕ್ಷಣದಲ್ಲಿ
ನಿನ್ನನಿಳಿಸುತ್ತಿರುವೆ
ಓಡು,
ತಪ್ಪಿಸಿಕೊ,
ನಶ್ವರದ ಎರಕದಿಂದ

   ******

2. ಗಂಡಸಿನ ಹುಲಿಮನಸ್ಸು

ಬಾ, ಬೆನ್ನಿಗೆ ಕೈಯಾನುವುದಿಲ್ಲ,
ಸ್ವಲ್ಪ ಹುಕ್ ಹಾಕು ರವಿಕೆಗೆ
ಎಂದು ಕರೆದರೆ ಅವನಿಗೆ
ಬೀಗುತ್ತಾನೆ
ಅವಳ ಕೈ ಅವಳ ಬೆನ್ನಿಗೆ ಎಟುಕದು
ಅವಳ ಕೈಲಿ ಹೀಗೆ ಆಗದ ಎಷ್ಟೋ ಕೆಲಸಗಳ ಪಟ್ಟಿಯಿದೆ
(ಬೇಕಿದ್ದರೆ ಪರಿಶೀಲಿಸಬಹುದು)
ಆ ಪಟ್ಟಿಯಲ್ಲಿ ಎಲ್ಲೊ ಐವತ್ತೊ ಅರವತ್ತನೆಯದು
ಕೈಗೆ ಹುಕ್ ನಿಲುಕದ ಕೆಲಸ

ಕೊಂಡಿ ಸಿಗಿಸುವುದು
ಸಿಗಿಸಿಕೊಳ್ಳುವುದು ಇಂದಿನದಲ್ಲ
ಅನಾದಿ ಕಾಲದ ವ್ಯವಹಾರ
ರೂಢಿ. ಗಂಟು ಹಾಕುವುದು ಅಫಿಶಿಯಲ್
ಸಂಬ೦ಧದ ಬೆಸುಗೆ

ಆಕ್ರಮಣಕಾರಿ ವಿದ್ಯೆ ಕಲಿತದ್ದೇ ಅರಿಯದಂತೆ ಹುಲಿ
ಬೆಳೆದು ಬಿಟ್ಟಿದೆ; ಉಗುರು, ಹಲ್ಲು ಕೋರೆದಾಡೆಗಳು
ಸಹಜ ಎಂದು ಭಾವಿಸಿದೆ

ರಕ್ತ ಹೀರುವ ಕಲೆ ಕರಗತವಾದಂತೆಲ್ಲ
ನೀನು ಪ್ರತೀಬಾರಿ ವಿಜೃಂಭಿಸುವೆ
ಅಗೊ ಕೂದಲಿನೆಳೆಯ ಗರ್ವ
ಮೀಸೆ ಕೊಂಕುವುದು
ಒಮ್ಮೊಮ್ಮೆ ಬಿಟ್ಟು ಬಿಡುವೆ,
‘ಹೋಗು ಬದುಕಿಕೊ, ನಾನೇ ಸಾಯುವೆ’
ಸಾವಿನಲ್ಲೂ ಮೆರೆಯುವ ನಿನ್ನ
ಔದಾರ್ಯ
ನಿನ್ನ ಇನ್ನೊಂದು ಕೋರೆಹಲ್ಲು

‍ಲೇಖಕರು avadhi

11 April, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading