ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆರ್ ಜಿ‌ ಹಳ್ಳಿ ನಾಗರಾಜ ಕವಿತೆ- ಒಗರು ಪ್ರೀತಿಯ ಒಂದು ಲಯ..

ಆರ್ ಜಿ‌ ಹಳ್ಳಿ ನಾಗರಾಜ

ಸೂರ್ಯ ಕಿರಣ ತಾಕುವ‌‌ಮುನ್ನ
ಮನವೆಂಬ ಉಯ್ಯಾಲೆಯಲ್ಲಿ
ತೊಯ್ದ ನೆನಪೆಷ್ಟೋ
ಕರಗಿ ನೀರಾಗಿ ಹರಿದವೆಷ್ಟೋ

ಆ ದಿನಮಾನದ ಒಂದು‌ ಸಂಜೆ
ಬರಿ ಸ್ಪರ್ಷದಲ್ಲೆ ಒಗರು ಪ್ರೀತಿ ತೋರಿ
ನಡು ಬಳಸಿದ ಗಳಿಗೆ ಉನ್ಮತ್ತತೆಯ
ಲಹರಿ ಉಕ್ಕಿದಾಗ
ಕಾಮಕೇಳಿಗೆ ತಡೆಯೊಡ್ಡಿ ಗುನುಗಿದ್ದೆ:
‘ಎಲ್ಲವನ್ನೂ‌ ಹಂಚುವೆ ಮುಕ್ತವಾಗಿ…
ಬೇಕಿದ್ದರೂ ಬೇಡದ ಗಳಿಗೆ ಇದು!’
ಹೊರಳಾಟ ಉರುಳಾಟದಲ್ಲಿ ಕಳೆಯಿತು ಆ ಕ್ಷಣಮಾನ

ಉರುಳಿದ ಚಕ್ರದಲ್ಲಿ ದಿನಗಳು
ಸುರಳಿ ಸುತ್ತಿ ಮತ್ತೆಲ್ಲೋ ಬಿಚ್ಚುವ ಗಳಿಗೆಗೆ ತವಕ

ಕಾದ ಹೆಂಚಿಗೆ ನೀ ಬಡಿದು ಬೆರಳು ಮೂಡಿಸಿದ ರೊಟ್ಟಿಯಲ್ಲಿ
ಕರಗದ ನಿನ್ನೊಲವ‌ ಚಿತ್ತಾರ…

ದಿನದ ಕಾಯಕದಲ್ಲಿ ಬೆಳಕನಿತ್ತ ಸೂರ್ಯ ಜಾರಿದ್ದಾನೆ
ಕತ್ತಲೊಡಲಿಗೆ
ತಂಪು ಬೆಳದಿಂಗಳನಿಟ್ಟ ಚಂದಿರನೂ ಮರೆಯಾಗಿದ್ದಾನೆ
ಅರುಂಧತಿಯ ಬೇಟೆಗೆ ಅಗಣಿತ ನಕ್ಷತ್ರಗಳ ಹುಡುಕಿ ಹೊರಟಿರುವೆ
ಕೂಡಿ ಬರಲಿಲ್ಲ ಕೂಡುವ‌ ಆ ಯೋಗಾಯೋಗ!

ಮತ್ತದೇ ಕಾವ್ಯ ಎಸ್ಸಮ್ಮೆಸ್ಸು ವಾಟ್ಸಪ್ಪು ಸಾಂತ್ವನ
ನವಿಲು ನಾಟ್ಯದ ಒಗರು ಪ್ರೀತಿ
ಕೋಳಿಕೂಗಿನ ನಸುಕಲ್ಲಿ ಕಾಮೋದ್ರೇಕ ಗಳಿಗೆ
ನಿನ್ನದೇ ವಿನ್ಯಾಸ ಮೂಡಿದ ಸೆಲ್ಫಿ ಪಟ
ಗೋಡೆಯೆಂಬ ಮನದೊಳಗೆ…

ಕನವರಿಕೆಯ ದಿನಗಳಲ್ಲೇ
ಹ್ಞೂ… ಹ್ಞೂಂ… ಹ್ಞೂ
ಕೂಡಿ ಬಂತೊಂದು ಮುಲುಕಾಟದ ಅನಿರೀಕ್ಷಿತ ಗಳಿಗೆ
ಮಟಮಟ ಮಧ್ಯಾಹ್ನ
ಮೈಯೆಲ್ಲ ಬೆವರುಕ್ಕಿದ ಉಪ್ಪುಪ್ಪು ಹನಿ
ಸೆಕೆಯೆಂಬ ಜಗದ ಆಟ
ಫಂಕಾ ಕೆಳಗಿನ ಅಪ್ಪುಗೆಯ ಒಪ್ಪಿಗೆಯ ದೇಹಕ್ಕು
ಹಿತವಲ್ಲದ ಹಿತದ ಸಮಯ!

ವರ್ಷಗಳುರುಳಿದ ಮನದ ಮೂಲೆಯಲ್ಲಿ
ಇಲ್ಲದ ಲೆಕ್ಕಾಚಾರಗಳಲ್ಲಿ ಮನವರಳಿ
ಚಂದಿರನ ತಂಪಿನ ಇಂಪುಗಾಳಿ ಅಲ್ಲೆಲ್ಲ…

‍ಲೇಖಕರು avadhi

17 May, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading