ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆರ್ ಜಿ‌ ಹಳ್ಳಿ ನಾಗರಾಜ್ ಹೊಸ ಕವಿತೆ- ಕಪ್ಪು ಬಿಳುಪು ಹಾಗೂ ಜೀವತಂತು

ಆರ್ ಜಿ‌ ಹಳ್ಳಿ ನಾಗರಾಜ್

ಕತ್ತಲಿಗೆ ಬೆಳಕು ಜೀವದುಸಿರು
ಕತ್ತಲ ಒಡಲು ಸೀಳಿ
ಬೆಳಕು ಕಣ್ ಸನ್ನೆ ಮಾಡಿದಾಗ
ಎರಡು ಜೀವಿಗಳಿಗೆ ಜೀವನೋತ್ಸಾಹ.

ಸಂಗಾತಿಯ ಕೈ ಹಿಡಿದು ಎದೆಗೊರಗಿ
ಕನಸು ಚೆಲ್ಲಿದ ಕ್ಯಾನ್ವಾಸಲ್ಲಿ
ತನ್ನುದ್ದ ದಾಟಿ ಬೆಳೆದ
ಪ್ರತಿಬಿಂಬದ್ದೂ ಕಚಗುಳಿಯ ಮಾತಿಲ್ಲಿ!

ಕಪ್ಪು ಬಿಳುಪಲ್ಲೂ ಬಣ್ಣಗಳ ಎರಚಿ
ಅಳಿದುಳಿದ ನಾಳೆಯ ಅರೆಕನಸಿಗೆ
ಮುಖಗವುಸು ಧರಿಸಿ
ಕೈಗಳ ಮತ್ತೆಮತ್ತೆ ಸ್ಯಾನಿಟೈಸ್ ಮಾಡಿ
ಕಾಲುಗಳ ಪಾದ ನೆನೆವಂತೆ ತೊಳೆದು
ಮನೆಯಲ್ಲೇ ಅಂತರ ಕಾದು ಗೋಡೆ ಆಶ್ರಯಿಸಿ
ಮುಖದ ನಗುವಿನ ಗೆರೆ ಅಳಿಸಿ
ಅಳುವಿನ ಹನಿಹನಿ ಕಣ್ಣೀರು ಒರಸುತ್ತ
ಸಾಗುವುದೆಲ್ಲಿಗೆ ಈ ಪಯಣ?

ಗುರಿ ಇದ್ದರೂ ಕನಸು ಚಿಗುರಬೇಕೀಗ
ಕನಸಿದ್ದರೂ ಹಗಲು ಕತ್ತಲೆಯ ಜಗದಲ್ಲಿ
ಹುಟ್ಟುವ ಸೂರ್ಯನು
ಕತ್ತಲೆಗೆ ಮತ್ತೆಮತ್ತೆ ಬೆಳಕು ನೀಡಿ
ಜೀವದುಸಿರ ಸಲಹಬೇಕಿಲ್ಲಿ….

ದಿನವೂ ಸರತಿಸಾಲಲ್ಲಿ ಸರದಿಗೆ ಕಾಯುತ್ತ
ತೋಳನೀಡಿ ನಿಂತಿದ್ದು ಜೀವದುಸಿರಿಗೆ
ಸೋಂಕಿಲ್ಲದ ಬದುಕಿನ ಚುಚ್ಚುಮದ್ದಿಗೆ!

ನಿಂತು ನಿಂತು ಸೋತ ಪಾದಗಳಲ್ಲಿ
ಅರೆಜೀವವಾದ ಹಲ ಕೆಲವರಿಗೆ
ಒಲಿಯಿತಂತೆ ಅದೃಷ್ಟ ವಸೂಲಿಬಾಜಿ ಇಲ್ಲದೆ!
ಸಿಕ್ಕಿತಂತೆ, ಸಿಕ್ಕೇಬಿಟ್ಟಿತಂತೆ! ಹೊಸ ಜೀವ!
ಮಿಡಿಯಿತಂತೆ…! ಅಲ್ಲೊಂದು ಜೀವತಂತು!
ರೆಕ್ಕೆಬಿಚ್ಚಿ ಹಾರಿದ ಬೆಳ್ಳಕ್ಕಿಯಂಥ ಜೀವದುಸಿರು!

‍ಲೇಖಕರು Avadhi

17 May, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading