ಆರರಿಂದ ಹತ್ತು: ವೈನ್ ಜೊತೆ ಪುಸ್ತಕಗಳೂ ಸಿಗುವಂತಾಗಲಿ…

ಹೇಮಾ ಖುರ್ಸಾಪೂರ

ಎಷ್ಟೊತ್ತಿಗೆ ಎದ್ದೆ? ಏನ್ ತಿಂದೆ? ಅಡುಗೆ? ಏನೇನ್ ಕೆಲಸ ಮಾಡಿದೆ?
ಕೊನೆಯ ಪ್ರಶ್ನೆ…
ಮತ್ತೆ..?
ಮತ್ತೇsss… ಅಂತ ಇನ್ನೊಮ್ಮೆ ಕೇಳಲು ಭಯವಾಗುತ್ತದೆ.
ಬಹುತೇಕರ ಮನೆಗಳಲ್ಲಿ ಈಗ ಆ ಅವರ ಅವರು ಹೋದರಂತೆ…
ಸಾಂತ್ವನಗೊಳ್ಳುವುದೂ ಅವರವರದೇ ಜವಾಬ್ದಾರಿ ಎನ್ನುವ ಸ್ಥಿತಿ.
ಅವವೇ ಮಾತುಗಳನ್ನ ಎಷ್ಟು ಜನರೊಂದಿಗೆ ಆಡುವುದು?
ಅವೇ ಅವೇ ಉತ್ತರಗಳನ್ನ ಎಷ್ಟಂತ ಕೇಳುವುದು?
ಎಷ್ಟು ಹೊತ್ತಿನವರೆಗೆ: Miss U, Hug U, ಈಗ ನೀ ಇದ್ದಿದರೆ ಎನ್ನುವ typing ಸಾಧ್ಯ?
ಪೇಪರ್, ಟಿವಿ, ಯೂಟ್ಯೂಬ್ ಲಿಸ್ಟಿನಲ್ಲೇ ಇಲ್ಲ…
ಅಮೆಜಾನ್, ನೆಟ್ ಫ್ಲಿಕ್ಸ್ ಗಳಲ್ಲಿ ಸಿನಿಮಾಗಳನ್ನ ನೋಡಿ, ಇಷ್ಟದ ನಟ/ಟಿಯರನ್ನ ಆರಾಧಿಸುವುದು,
ಭಾವಪ್ರಾಪ್ತಿಗೆ ದಕ್ಕಿಸಿಕೊಳ್ಳುವುದು??
ಅದೂ ಬೇಸರವಾಗುತ್ತದೆ.

‘ಪರ್ವ’ದ ಸಾಲುಗಳು ನೆನಪಾಗುತ್ತಿವೆ:

…ಕೃಷಿಕರು ಬಿಲ್ಲುಬಾಣಗಳ ಅಭ್ಯಾಸಕ್ಕೆ ಬರಬೇಕಿಲ್ಲವೆಂದು ರುಕ್ಮರಥನು ಹಳ್ಳಿಗಳಿಗೆಲ್ಲ ಸುದ್ದಿ ಕಳಿಸಿದ. ಜನರು ಸಮಾಧಾನದ ನಿಟ್ಟುಸಿರಿಟ್ಟರು. ಈ ಬಾರಿಯ ಮೊಳಕೆ ಚೆನ್ನಾಗಿ ಒಡೆದಿತ್ತು. ಕಳೆ ಕೀಳುವುದು ಬೇಲಿ ಹಾಕುವುದು ದನಕರುಗಳ ಪೋಷಣೆಗಳಲ್ಲಿ ಎಲ್ಲರೂ ನಿರತರಾದರು. ರುಕ್ಮರಥನಿಗಂತೂ ಆಡಳಿತದಲ್ಲಿ ಹೊತ್ತು ಕಳೆಯುತ್ತಿತ್ತು. ಸೈನಿಕರ ಸಿದ್ಧತೆಯ ಹೊಣೆ ಬಿದ್ದಿದ್ದ ವಜ್ರ ಅಜಯರಿಗೆ ಈಗ ಅದೂ ತಪ್ಪಿತು. ಸಮೃದ್ಧವಾಗಿ ಅಕ್ಕಿಯ ಮದ್ಯವಿತ್ತು. ಹಾಸಿಗೆಯಲ್ಲಿ ಮೇಲೆ ಬಿದ್ದು ಸೆಣಸುವ ಸುಂದರಿಯರಾದ ರಸಿಕ ದಾಸಿಯರಿದ್ದರು. ಆದರೆ ನಾಲ್ಕಾರು ದಿನಗಳಲ್ಲಿಯೇ ಅವರಿಗೆ ಲಂಪಟತೆಯು ಬೇಸರ ತಂದಿತು.

ಬಿಲ್ಲುಹುರಿಯನ್ನು ಠೇಂಕರಿಸುತ್ತಾ ಓಡುವುದು, ಓಡುವ ರಥದಿಂದ ಗುರಿಯಿಟ್ಟು ಹೊಡೆಯುವುದು, ಆನೆಯ ಮೇಲೆ ಕುಳಿತು ಕಾಡುಗಳ ಮುಳ್ಳುಗಂಟುಗಳನ್ನು ಸವರಿ ನುಗ್ಗಿ ದುಷ್ಟ ಮೃಗಗಳಿಗೆ ಗುರಿ ಇಟ್ಟು ಕೊಲ್ಲುವ ರೋಮಾಂಚನದ ಮುಂದೆ ಹಾಸಿಗೆಯದು ಸಪ್ಪೆ ಸುಖವೆನಿಸಿತು. ಒಂದು ದಿನ ಇಬ್ಬರೂ ಎದ್ದು ಮಾತನಾಡಿಕೊಂಡು ರಥ ಹತ್ತಿ ಅಭ್ಯಾಸದ ಬಯಲಿಗೆ ಹೋದರು. ಆದರೆ ಅಲ್ಲಿ ಯಾರೂ ಇಲ್ಲ. ಕ್ಷತ್ರಿಯರು ಕೂಡ. ಸಿಟ್ಟಿನಿಂದ ಯೋಧರಿಗೆ ಹೇಳಿಕಳಿಸಿದರು. ಒಬ್ಬೊಬ್ಬರಾಗಿ ಬಂದ ಸೈನಿಕರು ಗೌರವದಿಂದ ಕೈ ಮುಗಿದು ಬಿನ್ನವಿಸಿಕೊಂಡರು:

‘ಯುದ್ಧವೇ ಇಲ್ಲದ ಮೇಲೆ ಬರೀ ಅಭ್ಯಾಸವನ್ನು ಎಷ್ಟು ದಿನ ಮಾಡಿದರೂ ಅಷ್ಟೇಯೇ. ಬೇಟೆಗೀಟೆಯಾದರೆ ಆಡಬಹುದು.’

ಅವರ ಮಾತು ನಿಜವೆನ್ನಿಸಿತು. ಆನೆಗಳನ್ನು ಕರೆದುಕೊಂಡು ಬಿಲ್ಲು ಬಾಣ, ಭರ್ಜಿ, ಕತ್ತಿ, ಬಲೆಗಳೊಡನೆ ಕಾಡಿಗೆ ನುಗ್ಗಿದರು. ಮಳೆಯನ್ನು ತುಂಬಿಕೊಂಡ ಕಾಡು ಹಸುರಿನಿಂದ ಸಮೃದ್ಧವಾಗಿತ್ತು. ಜಿಂಕೆ ಮೊದಲಾದ ಮಾಂಸದ ಪ್ರಾಣಿಗಳೂ ಸಿಕ್ಕಿದವು. ಎರಡು ಚಿರತೆ ಒಂದು ಹುಲಿಯೂ ಬಿದ್ದವು. ಎಲ್ಲರಿಗೂ ರೋಮಾಂಚನದ ಸುಖ ಸಿಕ್ಕಿತು. ಮರುದಿನ ಮುಂದಿನ ಕಾಡು, ಇನ್ನೊಂದು ದಿನ ಅದರ ಪಕ್ಕದ್ದು, ಹೀಗೆ ಹದಿನೈದು ದಿನದಲ್ಲಿ ಮದ್ರದೇಶಕ್ಕೆ ಸೇರಿದ ಕಾಡುಗಳನ್ನೆಲ್ಲ ಶೋಧಿಸಿಯಾಯಿತು.

ಇನ್ನು ಮುಂದೆ ಒಂದು ತಿಂಗಳಾದರೂ ಯಾವ ಬೇಟೆಯೂ ಸಿಕ್ಕುವುದಿಲ್ಲ. ಮುಂದೆ ಏನು ಮಾಡಬೇಕೆಂದು ತಿಳಿಯಲಿಲ್ಲ. ಸೈನಿಕರು ಕೂಡ ಮರದಿಂದ ಇಳುಕಿದ ಹೆಂಡ ಮತ್ತು ತಮಗಾಗಿಯೇ ನಿಯೋಜಿತರಾಗಿದ್ದ ಹೆಂಗಸರಲ್ಲಿ ಮಗ್ನರಾದರು. ವಜ್ರ ಅಜಯರಂತೂ ಸರಿಯೇ ಸರಿ. ಆದರೆ ಮತ್ತೆ ಬೇಸರ. ಕಸುಬಿನ ಬೇಸರ ಕಳೆದುಕೊಳ್ಳಲು ಹೆಂಗಸಿದ್ದರೆ ಚನ್ನ: ಹೆಂಗಸರೇ ಕಸುಬಿನ ಕೇಂದ್ರವಾದರೆ ಅದಕ್ಕಿಂತ ಹೆಚ್ಚಿನ ಬೇಸರಿವಿಲ್ಲವೆಂದು ಅವರು ಬಹುಬೇಗ ಅರ್ಥ ಮಾಡಿಕೊಂಡರು. ಬೇಟೆಗೆ ಮುಗ್ಗಿದರು…

ಪ್ರೈಮರಿ ಶಾಲೆಯಲ್ಲಿ ಕಲಿತ ಸಮಾಜ ವಿಜ್ಞಾನದ ಪಾಠ ನೆನಪಾಗುತ್ತಿದೆ:

ಮನುಷ್ಯ ಸಂಘಜೀವಿ. ಗುಂಪಿನಲ್ಲಿ ಬದುಕು. ಸಮಾಜದಲ್ಲಿ ಒಬ್ಬನೇ ಬದುಕಲಾರ. ಒಬ್ಬರೇ ಬದುಕಬೇಕೆಂದರೂ ಹೊರಗಿನ ಜಗತ್ತು ಅನುಭವಗಳನ್ನು ಕೊಡಬೇಕು. ಸದ್ಯದ ಪರಿಸ್ಥಿತಿಯಲ್ಲಿ ಅದು ಸಾಧ್ಯವಿಲ್ಲ. ಎಂದಿಗೆ ಸಾಧ್ಯ? ಅದಕ್ಕೂ ಉತ್ತರವಿಲ್ಲ.

ಕೊರೊನಾ ಮೊದಲ ಅಲೆಯಲ್ಲಿ ನಾಗೇಶ್ ಹೆಗಡೆ ಅವರು ಒಂದು ಲೇಖನ ಬರೆದಿದ್ದರು.

‘ಈ ಸಮರದಲ್ಲಿ ಎದ್ದು ಕಾಣುವ ಯೋಧರೆಂದರೆ ವೈದ್ಯರು ಮತ್ತು ಪೊಲೀಸರು. ಆದರೆ ವೈದ್ಯರ ಶಸ್ತ್ರದಲ್ಲಿ ದಮ್‌ ಇಲ್ಲ. ಅದು ರೋಗಾಣುವನ್ನು ಕೊಲ್ಲಲಾರದು. ಪೊಲೀಸರ ಕೈಯಲ್ಲಿನ ಶಸ್ತ್ರಕ್ಕೂ ವೈರಿಗೂ ಸಂಬಂಧವೇ ಇಲ್ಲ. ಇನ್ನು ಮಾಧ್ಯಮಗಳ ತಮಟೆ, ಗಂಟೆ, ದೀಪ, ಜಾಗಟೆಗಳಂತೂ ಬರೀ ಗಲಾಟೆ. ವೈರಿಗೆ ಕಿವಿಯೇ ಇಲ್ಲ.

ಇದು ವಿಲಕ್ಷಣ ಸಮರ. ಇಷ್ಟು ವರ್ಷ ದೇಶವೇ ಒಂದು ದೇಹ ಎಂದು ಪರಿಗಣಿಸಿ ಯುದ್ಧಾಸ್ತ್ರಗಳನ್ನು ಪೇರಿಸಿಕೊಂಡು ಕೂತಿದ್ದೆವು. ಈಗಿನದು ಉಲ್ಟಾ ಪ್ರಸಂಗ. ಇಲ್ಲಿ ದೇಹವೇ ದೇಶ. ಇದರೊಳಗೆ ನುಗ್ಗಿದ ವೈರಿಯನ್ನು ಹಿಮ್ಮೆಟ್ಟಿಸುವ ಅಸ್ತ್ರ ನಮ್ಮಲ್ಲಿಲ್ಲ. ‘ಮುಖ ಮುಚ್ಚಿಕೊಳ್ಳಿ, ಮನೆಯಲ್ಲಿ ಅವಿತುಕೊಳ್ಳಿ’ ಎಂಬುದೇ ಸಮರದುಂದುಭಿ.

ಕೊರೊನಾವನ್ನು ಹಿಮ್ಮೆಟ್ಟಿಸಬಲ್ಲ ಲಸಿಕೆ ಬಂದನಂತರವೇ ಅಸಲೀ ಯುದ್ಧ…’ ಎಂದು.

ಈಗ, ಲಸಿಕೆ ಬಂದ ನಂತರದ ಸ್ಥಿತಿ ಯುದ್ದಾನಂತರದ ಪರಿಸ್ಥಿತಿಯ ಹಾಗೇ ಇದೆ. ಮೂರನೇ ಅಲೆಯಲ್ಲಿ ಮಕ್ಕಳನ್ನ ಹೆಚ್ಚು ಜಾಗರೂಕರನ್ನಾಗಿ ನೋಡಿಕೊಳ್ಳಬೇಕು ಕಟ್ಟೆಚ್ಚರಿಕೆ ಇದೆ.

ಮೊದ ಮೊದಲು: ಒಂದು ವೈರಸ್ ಎಷ್ಟು ದಿನ ಕಾಟ ಕೊಡಲು ಸಾಧ್ಯ? ಮಕ್ಕಳು ಮನೆಯಲ್ಲಿ ತಿಂದುಂಡು; ಓದಲಿ, ಆಡಲಿ ಎನ್ನುವ ದೊಡ್ಡ ಮಾರ್ಜಿನ್ ನೀಡಲಾಯಿತು. ಕ್ರಮೇಣ ಓದುವುದನ್ನು ಮಕ್ಕಳೇ ಕೈ ಬಿಟ್ಟು, ಉಂಡು ಆಡಿದರು. ಕೊರೊನಾ ಕಾಲ ಮುಗಿಯುವುದಿಲ್ಲವೆನಿಸಿತೆನೋ ಮಕ್ಕಳಿಗೆ ಆಟವೂ ಬೇಸರವಾಯಿತು. ಕೂತು ಮೊಬೈಲ್, ಟಿವಿ ನೋಡುವುದು ಈಗ ಅವರಿಗೆ ಜಾಸ್ತಿಯೇ ಹಿತವೆನಿಸುತ್ತಿದೆ.

ಕೊರನಾ ಈ ಪರಿಸ್ಥಿತಿಯ ಸರಿಯಾದ ಪ್ರಯೋಜನ ಪಡೆದುಕೊಳ್ಳುತ್ತಿರುವುದು ಬಹುರಾಷ್ಟ್ರೀಯ ಶೈಕ್ಷಣಿಕ ತಂತ್ರಜ್ಞಾನ ಕಂಪನಿಗಳು. ಟ್ಯಾಬ್ ನಲ್ಲಿ ಶೈಕ್ಷಣಿಕ ಪಾಠೋಪಕರಗಳನ್ನ ಪೂರೈಸುವ ಮೂಲಕ ಮಕ್ಕಳನ್ನ ಕೂತಲ್ಲಿಯೇ ಪಟ್ಟಾಗಿ ಕೂರಿಸುತ್ತಿದ್ದಾರೆ.

ಗುಲ್ಜಾರರ ಸಾಲುಗಳು ನೆನಪಾಗುತ್ತಿವೆ…

ಈಗ ನಮ್ಮ ಭೇಟಿಯೇ ಆಗುವುದಿಲ್ಲ, ತಿಂಗಳುಗಟ್ಟಲೆ.
ಇವುಗಳ ಸಾಂಗತ್ಯದಲ್ಲಿ ರಂಗೇರುತ್ತಿದ್ದ ಆ ಸಂಜೆಗಳೆಲ್ಲಾ
ಸವೆದು ಹೋಗುತ್ತಿವೆ ಇಂದು
ಬಹುತೇಕ ಕಂಪ್ಯೂಟರ್ ನ ಪರದೆಯ ಮುಂದೆ.

ನಾಲಿಗೆಗೆ ರುಚಿ ಏರುತ್ತಿತ್ತು
ಪುಟ ತಿರುಗಿಸುವಾಗಲೆಲ್ಲ,
ಈಗ ಬೆರಳು ಕ್ಲಿಕ್ ಮಾಡಿದಾಗ
ದಿಗಿಲಾಗುತ್ತದೆ.
ನೂರಾರು ಪರದೆಗಳು,
ಚಿತ್ರಗಳು
(ಅನುವಾದ: ಚಿದಂಬರ ನರೇಂದ್ರ)

ಈಗಾಗಲೇ ಬಹುತೇಕ ಪೋಷಕರು ಮಕ್ಕಳ ಈ ಮೊಬೈಲ್ ಮತ್ತು ಟಿವಿ ಗೀಳಿನ ಬಗ್ಗೆ ಮನೋವೈದ್ಯರ ಸಹಾಯಕ್ಕೆ ಧಾವಿಸುತ್ತಿದ್ದಾರೆ. ಚಿಕಿತ್ಸೆ ಸಮಾಲೋಚನೆಗಳ ನಂತರ ವೈದ್ಯರು ಪೋಷಕರಿಗೆ ಮತ್ತು ಮಕ್ಕಳಿಗೆ ಪುಸ್ತಕ ಓದುವುದನ್ನು ರೂಢಿಸಿಕೊಳ್ಳಿ, ಮಕ್ಕಳಿಗೂ ಕಲಿಸಿ ಎನ್ನುವ ಔಷಧಿಯನ್ನು ಬರೆಯುತ್ತಿದ್ದಾರೆ.

ಪುಸ್ತಕಗಳ ಜತೆ ಇದ್ದವರಿಗೆ ತೊಂದರೆ ಇಲ್ಲ… ಪುಸ್ತಕಗಳು ಬೇಕು ಎಂದವರು ತರಿಸಿಕೊಳ್ಳುವುದು ಹೇಗೆ? ಪುಸ್ತಕಗಳು ಮತ್ತು ಪುಸ್ತಕದ ಅಂಗಡಿಗಳು ನಮ್ಮ ಅಗತ್ಯ ವಸ್ತುಗಳ ಪಟ್ಟಿಯಲ್ಲಿ ಇಲ್ಲವೇ ಇಲ್ಲವಲ್ಲ!?? ಟಿ ಎಂ ಕೃಷ್ಣ ಅವರ Sebastian & Sons: A Brief History of Mrdangam Makers ಪುಸ್ತಕವನ್ನು ಮುಟ್ಟಿ ನೋಡುವ, ಓದುವ ಆಸೆ ಆಗ್ತಿದೆ!!

ಝೂಮ್, ಗೂಗಲ್ ಮೀಟ್ ಗಳಲ್ಲಿ ಒಬ್ಬರು ಮಾತನಾಡುವಾಗ ಮಿಕ್ಕವರೆಲ್ಲ ಮ್ಯೂಟ್ ನಲ್ಲಿರುವುದು ಸಕರಾಣ ಶಿಸ್ತು. ಆದರೆ ಮಾತನಾಡುವಾಗ ಮುಂದಿನವರಿಂದ ಪ್ರತಿಕ್ರಿಯೆ ಕೇಳಬೇಕು ಆಗಲೇ ಸಮಾಧಾನ. ಪ್ರತಿಕ್ರಿಯೆ ಇರದಿದ್ದರೆ, ಕೇಳ್ತಿದೆಯ? ಕೇಳ್ತಿದೆಯ? ಅಂತ ಮಾತನಾಡುವವರು ಎರಡು ಸಲ ಕನ್ಫರ್ಮ್ ಮಾಡಿಕೊಂಡು ಮುಂದುವರಿಯುತ್ತೇವೆ. ಪ್ರತಿಕ್ರಿಯೆ ಬಯಸದೇ ನಮ್ಮೊಂದಿಗೆ ನಮಗೆ ತೃಪ್ತಿಯಾಗುವಷ್ಟು ಸಂವಾದ ನಡೆಸುವುದು ಪುಸ್ತಕಗಳು ಮಾತ್ರ.

ಎದೆಮೇಲೆ ಒರಗಿಸಿಕೊಂಡು ಮಾತನಾಡುವುದು
ಮಡಿಲೊಳಗೆ ಮಲಗಿಸಿಕೊಂಡು ಆಪ್ತವಾಗುವುದು
ಮೊಣಕಾಲೂರಿ, ಹಣೆಯಿಂದ ಮುಟ್ಟಿ ದೀನರಾಗುವುದು
ಎಷ್ಟೆಲ್ಲಾ ಸಾಧ್ಯವಿತ್ತು….

ಗುಲ್ಜಾರರ ಕವಿತೆ (ಅನು: ಚಿದಂಬರ ನರೇಂದ್ರ )

ಕೊರತೆಯಿಲ್ಲ ಈಗ ಮಾಹಿತಿಗೆನೂ
ಆದರೆ ಪುಟಗಳ ನಡುವೆ
ಒಮ್ಮೊಮ್ಮೆ ಸಿಗುತ್ತಿದ್ದ ಆ ಒಣ ಹೂವುಗಳು,
ಪುಟ್ಟ ಪುಟ್ಟ ಘಮ ಘಮಿಸುವ ಚೀಟಿಗಳು,
ಬೇಡುವಾಗಿನ ಸರ್ಕಸ್ಸುಗಳು
ಹಿಂತಿರುಗಿಸದ ನೆಪಗಳು
ಬೀಳಿಸುವುದು
ಎತ್ತಿಕೊಡುವುದು
ಆ ಸಂಬಂಧದ ಎಳೆಗಳು ಈಗೆಲ್ಲಿ?

‍ಲೇಖಕರು Avadhi

May 20, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ವಾಸುದೇವ ಶರ್ಮಾ

    ಅಬ್ಬಾ! ಅಂತೂ ಅಂಕಣಗಿತ್ತಿ ಬಂದೆಯಲ್ಲ. ನೆನ್ನೆ ಅವಧಿಯ ಲೈವ್ ಚರ್ಚೆಯಲ್ಲಿ ಇದೇ ವಿಚಾರ.‌ ಮದಿರೆಗೆ ಮುಕ್ತ, ಮಧುರವಾದ ಪುಸ್ತಕಗಳಿಗ್ಯಾಕಿಲ್ಲ ಅಂತ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: