ಜಯಲಕ್ಷ್ಮಿ ಪಾಟೀಲ್
ಅದು ೧೯೭೭ರ ಮೇ ತಿಂಗಳ ಕೊನೆಯ ವಾರ. ಮದ್ಯಾಹ್ನದ ಹೊತ್ತು.
ಅವ್ವನ ಹೆರಿಗೆ ನಿಮಿತ್ತ ಬಿಜಾಪುರದ ವಾಟರ್ ಟ್ಯಾಂಕ್ (ಓಣಿ/ಏರಿಯಾ)ಲ್ಲಿ ತಿಂಗಳ ಮಟ್ಟಿಗೆ ಪುಟ್ಟ ಬಾಡಿಗೆ ಮನೆಯಲ್ಲಿದ್ದೆವು. ಈಗಾಗಲೇ ನಾಲ್ಕು ಹೆರಿಗೆಗಳು ತವರಿನಲ್ಲೇ ಆಗಿದ್ದರಿಂದ ಐದನೇಯದೂ ಅಲ್ಲಿಯೇ ಬೇಡ ಎಂದು ನಿರ್ಧರಿಸಿದ್ದರೆಂದು ತೋರುತ್ತದೆ. ಅಪ್ಪಾ ಬೇರೆ ಊರಲ್ಲಿ ಕೆಲಸ ಮಾಡುತ್ತಿದ್ದ.
ಅವ್ವ ನನ್ನ ಕೊನೆಯ ತಂಗಿಯನ್ನು ಹೆತ್ತು ಆಸ್ಪತ್ರೆಯಲ್ಲಿದ್ದಾಳೆ. ನಮ್ಮ ನೀಲವ್ವವ್ವ ಅಂದರೆ ದೊಡ್ಡ ಕಾಕಾನ ಹೆಂಡತಿ ನಮ್ಮನ್ನೆಲ್ಲ ನೋಡಿಕೊಳ್ಳಲೆಂದು ನಮ್ಮ ಜೊತೆಗೆ.
ಅದೊಂದು ಮದ್ಯಾಹ್ನ ಹನ್ನೆರಡರ ಆಸುಪಾಸಿನಲ್ಲಿ, ಎರಡು ವರ್ಷವೂ ತುಂಬಿರದ, ಆಗಷ್ಟೇ ನಡೆಯಲು ಕಲಿತಿದ್ದ ನನ್ನ ಸಣ್ಣ ತಮ್ಮ ಬಾಪು ಮನೆಯಲ್ಲಿ ಕಾಣುತ್ತಿಲ್ಲ! ನೋಡಿದವರು ಎತ್ತಿಕೊಳ್ಳದೆ ಇರಲಾರರು ಅಂಥಾ ಚಂದದ ಕೂಸವನು. ಅಡುಗೆ ಮಾಡಿಕೊಂಡು ಆಸ್ಪತ್ರೆಗೆ ಬುತ್ತಿ ಒಯ್ಯುವ ಧಾವಂತದಲ್ಲಿದ್ದ ನೀಲವ್ವವಗೆ ಬಾಪು ಹೊಸ್ತಿಲು ದಾಟಿ ಅದ್ಯಾವಾಗ ಮನೆಯಾಚೆ ಹೋದನೋ ಪಾಪ ಗೊತ್ತೇ ಆಗಿಲ್ಲ. ಆದರೆ ಅವನು ಮೆಟ್ಟಿಲ ಮೇಲೆ ಕುಳಿತಿದ್ದನ್ನ ನಾನು ನೋಡಿದ್ದೆ. ನನ್ನ ಗಮನ ಆಟದ ಕಡೆಗಿತ್ತಾದ್ದರಿಂದ ಅವನು ಅಲ್ಲಿದ್ದ ಎರಡು ಮೆಟ್ಟಿಲುಗಳನ್ನು ಇಳಿದಿದ್ದೂ ಗೊತ್ತಾಗಿರಲಿಲ್ಲ. ಎತ್ತರದ ಮೆಟ್ಟಿಲು ಅವು! ಆಟದ ನಡುವೆ ಮೆಟ್ಟಿಲ ಕಡೆಗೆ ನೋಡಿದರೆ ಬಾಪು ಅಲ್ಲಿಲ್ಲ!
ಕೆಳಗೇನಾದ್ರು ಬಿದ್ದುಬಿಟ್ಟನಾ ಎಂದು ಹೆದರಿಕೆಯಾಯ್ತು. ಅಷ್ಟರಲ್ಲಿ ಓಣಿಯವರೇ ದಾರಿಹೋಕರ್ಯಾರೋ, “ಏ ತಂಗಿ, ನಿಮ್ಮ ತಮ್ಮನ್ನ ಆ ರಾಮ ಕುಂಡಡಿ ಮಂದಿ ಎತಗೊಂಡು ಹ್ವಾದ್ರು ನೋಡು ಈ ಕಡಿಗೆ.” ಅಂದ್ರಾಯ್ತು. ಎದೆ ಧಸಕ್ ಅಂತು! “ಸುಳ್ಳ ಸುಳ್ಳ ಏನರೇ ಅನಬ್ಯಾಡ್ರಿ. ನಮ್ಮ ತಮ್ಮ ಮನ್ಯಾಗದಾನ” ಅಂದೆ ನಾನು. “ಏ ತಂಗಿ, ಇಲ್ಲಿ ಪಾಂವಟಣಿಗಿ ಮ್ಯಾಲಿದ್ದಾಂವ ನಿಮ್ಮ ತಮ್ಮನ ಹೌದಲ್ಲ? ಅಲ್ಲಿಂದ ಅಂವಾ ಹಗರ್ಕ ಕೆಳಗಿಳ್ದು ಬಂದು ರೋಡ್ ಮ್ಯಾಲೆ ಕುಂತಿದ್ದ. ಆ ಏಸ್ಯಾಗಾರ್ ಮಂದಿ ಎತಗೊಂಡು ಹೋಗಿದ್ದನ್ನ ನಾನ ನೋಡೀನಿ.”

ಅವ್ವ ಬೇ ಕೂಗಿದೆ ನಾನು ಜೋರಾಗಿ. ಚಿಕ್ಕಮ್ಮ/ಕಾಕುನ್ನ ಸಹ ನಾನು ಕರೀತಿದ್ದುದು ಅವ್ವಾ ಎಂದೇ. ಒಳಗೆ ರೊಟ್ಟಿ ಮಾಡುತ್ತಿದ್ದ ಅವ್ವ್ವನಿಗೆ ಕರೆದಿದ್ದು ರೊಟ್ಟಿ ಸಪ್ಪಳದಲ್ಲಿ ಕೇಳಿಸಿತಾ? ಅವ್ವ ಆಗೇನಾದರೂ ರಿಯಾಕ್ಟ್ ಮಾಡಿದಳಾ ನೆನಪಿಲ್ಲ ನನಗೀಗ. ಆದರೆ ಬಾಪುನ್ನ ಎತ್ತಿಕೊಂಡು ಹೋದರು ಅಂದವರೇ, ನನ್ನನ್ನ ಕರೆದುಕೊಂಡು ಹೋಗಿ ದೂರದಿಂದ ವೇಷಾಗಾರರೆಲ್ಲ ಉಳಿದುಕೊಂಡಿದ್ದ ಮನೆಯನ್ನು ತೋರಿಸಿ, “ಅಗಾ ಅದ ಮನಿ ಅವ್ರಿರೂದು. ಮದ್ಲ ಹೋಗಿ ನಿಮ್ಮ ತಮ್ಮನ್ನ ಕರ್ಕೊಂಡ್ ಬಾ. ಇಲ್ಲಿಕ್ಕಂದ್ರ ಯಾರಿಗರೆ ಮಾರ್ಕೊಂಡ್ರೂ ಮಾರ್ಕೊಂಡ್ರ ಅಂವನ್ನ. ಮಕ್ಕಳ್ನ ಕಳ್ವು ಮಾಡಿ ಯಾರಿಗರೆ ಮಾರಿ ರೊಕ್ಕಾ ತೊಗೋತಾರ್ ಅವ್ರು. ಚೋಲೊ ಮಂದಿ ಅಲ್ಲ ಅದು. ತಡಾ ಮಾಡಿದ್ರ ಆಮ್ಯಾಲೆ ನಿಮ್ಮ ತಮ್ಮ ಸಿಗ್ಲಿಕ್ಕಿಲ್ಲ. ಓಡು” ಅಂದ್ರು.
“ನೀವೂ ಬರ್ರೀ ನನ್ನ ಜತಿಗೆ ಅಂದೆ” ಅದ್ಯಾಕೆ ಅವ್ರು ಬರಲು ಹಿಂಜರಿದರೋ ಗೊತ್ತಿಲ್ಲ. ನಾನೊಬ್ಬಳೇ ಓಡಿಹೋಗಿ ಆ ವೇಷಾಗಾರರ ಮನೆಯ ಮುಂದೆ ನಿಂತೆ. ಬಾಗಿಲು ತೆರದೇ ಇತ್ತು. ಪಡಸಾಲೆಯಲ್ಲಿ ಕನಿಷ್ಠ ಆರೇಳು ಜನರಿದ್ದರು. ಬಾಗಿಲಲ್ಲಿ ನಿಂತು, “ಓ ರೀ, ನಮ್ಮ ತಮ್ಮನ್ನ ಕೊಡ್ರಿ” ಎಂದೆ ಜೋರಾಗಿ. ಅಲ್ಲಿದ್ದವರ ಮುಖದಲ್ಲಿ ಕಂಡ ಸಿಕ್ಕಿಬಿದ್ದ ಭಾವ ಇನ್ನೂ ನನ್ನ ಕಣ್ಣಿಗೆ ಕಟ್ಟಿದಂತಿದೆ. ಅದನ್ನೋಡಿಯೇ ಖಾತ್ರಿ ಆಯ್ತು ನನ್ನ ತಮ್ಮ ಅಲ್ಲಿಯೇ ಇದ್ದಾನೆಂದು. ಆದರೆ ಅವರ ನಡುವೆ ಕಾಣುತ್ತಿಲ್ಲ!
ಗದರಿಸಿದರು ನನ್ನ ಅವರು. “ಯಾ ತಮ್ಮ ಏನ್ ಕತಿ? ನಡಿ ನಡಿ ಇಲ್ಲಿಂದ ನೀ”
“ನಮ್ಮ ತಮ್ಮನ್ನ ಎತಗೊಂಡ್ ಬಂದೀರಿ ನೀವು ಗೊತ್ತತಿ ನನಗ. ಕೊಟ್ಟಬಿಡ್ರಿ ನನಗ. ಇಲ್ಲಿಕ್ಕಂದ್ರ ನಮ್ಮವ್ವಾರ್ನ ಕರ್ಕೊಂಡು ಬರ್ತೀನ್ನೋಡ್ರಿ ಮತ್ತ!” ಒಂಬತ್ತು ವರ್ಷದ ಹುಡುಗಿಯ ಮಾತಿಗೆ ಯಾರಾದ್ರೂ ಯಾಕೆ ಹೆದರ್ಯಾರು!? ಅವ್ರೂ ಹೆದರಲಿಲ್ಲ. ನಡಿ ಇಲ್ಲಿಂದ ಎಂದು ಗದರಿಸಿ ಓಡಿಸಿದರು. ಅಳುತ್ತಾ ಒಂದೇ ಉಸುರಿಗೆ ಮನೆಗೆ ಓಡಿದೆ. ನೀಲವ್ವವ್ವ ರೊಟ್ಟಿ ಮುಗಿಸಿ ಕೈ ತೊಳೆದುಕೊಳ್ಳುತ್ತಿದ್ದಳು. “ಎವ್ವಾ, ಬಾಪುನ್ನ ವೇಷಾಗಾರ್ರು ಎತಗೊಂಡು ಹೋಗ್ಯಾರ ಬೇ. ಕೊಡವಲ್ಲ್ಯಾಗ್ಯಾರ. ಬಾ ಬೇ ನೀ. ” ಅಂದೆ ಅಳುತ್ತಲೇ.
ಮೊದಲು ನನ್ನ ಮಾತನ್ನು ನಂಬದ ಅವ್ವ ನಂತರ ನನ್ನ ಅಳು ಮತ್ತು ಬಾಪು ಮನೆಯೊಳಗೆ ಮತ್ತು ಆಚೆ ಕಾಣ್ದಿದ್ದನ್ನು ನೋಡಿ, ನಡಿ ಎಂದು ಬಾಗಿಲನ್ನೂ ಹಾಕುವುದನ್ನು ಮರೆತು ನನ್ನ ಕೈ ಹಿಡಿದುಕೊಂಡು ಧಾಪುಗಾಲು ಹಾಕ ತೊಡಗಿದಳು. ಬಹುಶಃ ಆಗ ನೀಲವ್ವವ್ವ ಸಹ ಬಸುರಿ ಎಂದು ತೋರುತ್ತದೆ. ಹೊಟ್ಟೆ ಇದ್ದಂತೆ ಮಸುಕು ನೆನಪು. ಅದಕ್ಕೇ ಓಡಲು ಆಗಿರ್ಲಿಕ್ಕಿಲ್ಲ. ನನಗೋ, ನಾವು ಆ ವೇಷಾಗಾರರ ಮನೆ ತಲುಪುವಷ್ಟರಲ್ಲಿ ಎಲ್ಲಿ ಅವ್ರು ಬಾಪುನ್ನ ಯಾರಿಗಾದ್ರು ಮಾರಿ, ಕೊಂಡವರು ಅವ್ನನ್ನ ತಮ್ಮನೆಗೆ ತೊಗೊಂಡು ಹೋಗಿಬಿಟ್ಟಿದ್ದ್ರೆ ಅವ್ನು ಸಿಗಲ್ಲ. ನೀಲವ್ವವ್ವ ನಡ್ಯೋ ಬದ್ಲು ಓಡಬಾರ್ದಾ ಅನಿಸಿ ಅಳು ಇನ್ನೂ ಹೆಚ್ಚಾಗಿತ್ತು. ಮಕ್ಕಳನ್ನು ಕದ್ದ ಅರ್ಧ ಗಂಟೆಯೊಳಗೆ ಗಿರಾಕಿಯನ್ನು ಹುಡುಕಿ ಕದ್ದ ಕಂದನನ್ನು ಮಾರುವುದು ನಾನು ಯೋಚಿಸಿದಷ್ಟು ಸುಲಭವಲ್ಲ ಎಂದು ಅರ್ಥವಾಗುವ ವಯಸ್ಸೂ ಅಲ್ಲ ನಂದಾಗ.
ಅವರ ಮನೆ ತಲುಪಿದಾಗ ಮೊದಲಿದ್ದಷ್ಟು ಜನ ಈಗಲ್ಲಿರಲಿಲ್ಲ. ಒಂದಿಬ್ಬರು ಮಾತ್ರ. ಬಾಗಿಲಲ್ಲಿ ನಿಂತು ಅವ್ವ ಅಬ್ಬರಿಸಿದಳು. “ನಮ್ಮ ಹುಡುಗನ್ನ ಸುಮ್ನ ಕೊಡ್ತೀರ್ಯಾ ಹೆಂಗ?”
“ಯಾರ್ರೀ ನೀವು? ನಂ ಬಲ್ಲಿ ಯಾ ಹುಡುಗ್ನೂ ಇಲ್ಲ.” ಹೆದರಿಕೆ ಅವರ ಮುಖದಲ್ಲಿ ಸ್ಪಷ್ಟವಾಗಿತ್ತು. ನೀಲವ್ವವ್ವ ಜೋರಾಗಿ ಕೂಗಾಡ ತೊಡಗಿದಳು. ಪೋಲಿಸರನ್ನು ಕರೆದುಕೊಂಡು ಬರ್ತೀನಿ ಈಗ್ಲೆ ಅನ್ನೊ ಧಮ್ಕಿ ಕೊಟ್ಟ್ಳು. ಆಗ ಒಳಗಿಂದ ನನ್ನ ತಮ್ಮ ಬಾಪುನ್ನ ಎತ್ತಿಕೊಂಡು ಬಂದರು!
ನಿದ್ದೆಯಲ್ಲಿತ್ತು ಕಂದ. ಮತ್ತಿನದ್ದೇನಾದ್ರು ತಿನಿಸಿದ್ದ್ರಾ ಅವನಿಗೆ…? ಗೊತ್ತಿಲ್ಲ.
ಅವ್ವ ಬಾಪುನ್ನ ಎದೆಗವಚಿಕೊಂಡಳು. ಮನೆಗೆ ಬಂದೆವು. ಬಾಪು ಸಿಗದ ಹೋಗಿದ್ದ್ರ ಅಕ್ಕ ಮಾಮಾಗ ತೋರ್ಸಾಕ ನನಗ ಮಾರಿ ಉಳೀತಿದ್ದಿಲ್ಲ. ಕೆರಿ ಬಾವೀನೇ ಗತಿ ಆಕ್ಕಿತ್ತು. ದೇವ್ರು ದೊಡ್ಡಾಂವ ಕೂಶಿನ್ನ ಕೂದ್ಲು ಕೊಂಕಧಂಗ ಹೊಡಮಳ್ಳಿ ಕೊಟ್ಟ ಎಂದು ನಿಟ್ಟುಸಿರಿಟ್ಟಳು ನೀಲವ್ವವ್ವ.
ಇಂದಿಗೆ ಸರಿಯಾಗಿ ಒಂದು ತಿಂಗಳ ಹಿಂದೆ , ಅಕ್ಟೋಬರ್ ೨೫ರ ಸಂಜೆ ಆರೂವರೆ ಏಳರ ಹೊತ್ತಲ್ಲಿ ಸರ್ಜನ್ ಗಳೆದುರು ನನ್ನ ತಂಗಿ ಶಕುಂತಲಾ, ನಾನು ಗೋಗರೆಯುತ್ತಿದ್ದೆವು, “ಏನಾದ್ರು ಮಾಡಿ ನಮ್ಮ ತಮ್ಮನ್ನ ಉಳಿಸಿ ಡಾಕ್ಟ್ರೆ ನಿಮ್ಮ ಕಾಲಿಗೆ ಬೀಳ್ತೀವಿ”. ವೈದ್ಯರು ನಮ್ಮ ಕೈಲಾದ ಪ್ರಯತ್ನ ಮಾಡ್ತೀವಿ ಅಂದ್ರು. ದೊಡ್ಡೋರು ಅವ್ರು. ಆದ್ರ ದೇವ್ರು ಈ ಸಲ ದೊಡ್ಡಾಂವಾಗ್ಲಿಲ್ಲ…






ಕಣ್ಣುಗಳು ಹನಿಗೂಡಿದವು.