ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಆದರೀಗ ಮನೆ ಮುರಿದಿದೆ ಕೂಡುವುದಿಲ್ಲ ಅದಿನ್ನೆಂದಿಗೂ’ – ಜಯಶ್ರೀ ಭಟ್


(ಅನುವಾದ: ಜಯಶ್ರೀ ಭಟ್

By Philip Hobsbaum)

ಮುರಿದು ಬೀಳುತ್ತಿರುವ

ಅವರ ಬಾಳು ನನ್ನ ಕಣ್ಣಲ್ಲಿ ಕಂಡಿದ್ದೆ
ಅವರು ಪೇಲವವಾಗಿ ಬಂದು ಹೋಗುವುದನ್ನು
ಅವನ ಉಸ್ಸೆಂಬ ತೊಪ್ಪೆ ದೇಹ
ಅವಳ ನಿರಾಳತೆಯ ಸೋಗು
ಬಾಗಿಲ ಬಳಿ ನಿಂತ ಅವರನ್ನು ನೋಡಿದ್ದೆ ನಾನು
 
ನಾನೆಷ್ಟು ಕಾಲ ಸುಮ್ಮನಿದ್ದೆ
ಈಗಲೂ ಸಹ, ಈಗಂತೂ ನೆನಪೂ ಆಗುತ್ತಿಲ್ಲ ಅವಳು
ತನ್ನ ನೀಳ ಬೆರಳಲ್ಲಿ ನನ್ನ ಮೀಟುತ್ತಿದ್ದ ಕ್ಷಣ
ಹಾಗೇ ಅವನನ್ನೂ ಮುಟ್ಟತ್ತಿದ್ದಳೇನೋ ಆಗೊಮ್ಮೆ?
 
ಅವನ ತುಟಿ ನನ್ನ ಕಂಠದ ಮೇಲೆ
ಬೆಳಿಗ್ಗೆ ಸಂಜೆಗೊಮ್ಮೆ ಬಿಸಿ ಚುಂಬನ
ಮತ್ತೆ ದಿನವೆಲ್ಲ ನನಗೆ ತನನನ
ಆ ಬಿಗಿ ತುಟಿ ಈಗೆಲ್ಲಿ?
ಆ ಬಿಸಿ ಮುತ್ತು ಹೋಯಿತೆಲ್ಲಿ?
ಮುರಿದುಬಿದ್ದು ಮೋರಿ ಪಾಲಾಯಿತೇ?

ನನ್ನನ್ನು ನೆಲಕ್ಕೆ ಹಾಸಿ
ತಮ್ಮ ಪಾದ ಊರಿ
ಓಡಾಡುತ್ತಿದ್ದರು ಅವರದೆಷ್ಟೋ ಸಾರಿ
ಈಗೀಗ ಆ ಪಾದಗಳು ಕಾಲೂರಲೇ ಹಿಂತೆಗೆಯುತ್ತಿವೆ
ಬರೀ ಅಬ್ಬೇಪಾರಿಗಳ ಬೀದಿಯಾಗಿಹೋಗಿದೆ ನನ್ನ ಮೈ
ಸಡಿಲಾದ ಸೆಣಬಿನ ಹುರಿ
 
ಗೋಡೆ ಮೇಲ್ಚಾವಣಿಗೆಲ್ಲ
ಚೂರು ಚೂರೇ ಬಣ್ಣ ತುಂಬಿ
ತಮ್ಮ ಇಷ್ಟದಂತೆ ಮಾಡಿದ್ದರು ನನ್ನ
ನನಗೂ ಖುಶಿ ಆದರೂ
ಕಾಲನ ಕರೆಗೆ ಕೆರೆದು ಹೋಗುತ್ತಿದೆ ನೋಡಿ
ನನ್ನ ಗೋಡೆ
ಮನೆಯವರೇ ಇಲ್ಲದ ಮೇಲೆ
ಅದಿನ್ನೆಂಥಾ ಮನೆ?
 
ನನ್ನ ಕೈಗಳು ತಾನಾಗೇ ತಿರುಗುತ್ತವೆ
ಹಾಗೇ ಕಾಲವೂ ಸಹ
ಅವೆಲ್ಲ ಹಿಂದಿನ ಕಥೆ
ಯಾರೇ ಬಂದರೂ ನಾನೊಂದು ಕೂಗು ಕೂಗುತ್ತೇನೆ
ಆದರೂ ಕೆಲಸವಿಲ್ಲದೆ
ತುಕ್ಕುಹಿಡಿದ ನಾನೂ ಸಹ
ಮೂಕನಾಗಿದ್ದೇನೆ
 
ಒಲೆಯಲ್ಲೀಗ ಧೂಳು ತುಂಬಿದೆ
ಗಳಿಗೆ ಮಾಡಿಟ್ಟ ಪರದೆಗಳೂ
ಬರಿದೇ ನೇತಾಡುತ್ತಿವೆ
ಪುಸ್ತಕಗಳ ಮುಟ್ಟುವವರಿಲ್ಲ
ಕುರ್ಚಿಯ ಮೇಲೆ ಕೂರುವವರಿಲ್ಲ
ಚಳಿ ಹಿಡಿದ ಮನೆಯಲ್ಲೀಗ
ಅವು ಮುದುರಿ ಕೂತಿವೆ
 
ನನ್ನ ಕಣ್ಣಿಗೆ ಕಾಣುವುದಿಲ್ಲ ಈಗೇನೂ
ಅವರ ಜೀವನ ನಮಗೆ ಬಾಳು ಕೊಟ್ಟಿತ್ತು
ಆದರೀಗ ಮನೆ ಮುರಿದಿದೆ
ಕೂಡುವುದಿಲ್ಲ ಅದಿನ್ನೆಂದಿಗೂ
ಅವರ ವಿಚ್ಛೇದನ ನಮ್ಮ ವಿಭ್ರಮೆ
 

‍ಲೇಖಕರು G

6 May, 2014

4 Comments

  1. mmshaik

    nice..very nice..

  2. suchithra

    bahala chennagide…..

  3. Anonymous

    kavitheyali ondu mood ide,nice poem…
    -ARIF RAJA

  4. Jayashree bhat

    Thank you all for your comments!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading