ಡಾ ಪ್ರೀತಿ ಕೆ ಎ
ಆತ್ಮಗಳೆರಡು ಅನುಸಂಧಾನದಲ್ಲಿ
ತೊಡಗಿದ್ದವು
ಅವನಾತ್ಮ ಹೇಳಿತು-
ನಿನಗೆ ಏನೆಲ್ಲವನ್ನು ಕೊಟ್ಟೆ…
ನಿನಗಿಷ್ಟವಾದ ವಸ್ತ್ರ ಒಡವೆಗಳು
ಓಡಾಡಲು ಕಾರು
ಬೆಚ್ಚಗೆ ಇರಲೊಂದು ಸೂರು
ವಾರಾಂತ್ಯದ ಟ್ರಿಪ್ಪುಗಳು
ವರ್ಷಕ್ಕೊಂದು ಹೊಸ ಲೋಕಕ್ಕೆ ಟೂರು
ಆಗಾಗ್ಗೆ ಮುಡಿಗೇರಲು ಮಲ್ಲಿಗೆಯ ದಂಡು
ಅಪರೂಪಕ್ಕೊಮ್ಮೆ ತುಟಿಗೆ ಸೋಕಿಸಲು ವೈನು
ನೀನು ಬೇಕೆಂದು ಕೇಳಿದ್ದು
ಕೇಳದ್ದು ಎಲ್ಲವನ್ನೂ…
ಹೂಂ ಅನ್ನದ ಊಹೂಂ ಅನ್ನದ
ಅವಳಾತ್ಮವನ್ನು ಕೇಳಿತು-
ಇಷ್ಟೆಲ್ಲವನ್ನೂ ಕೊಟ್ಟ ನನಗೆ
ನೀನೇನು ಕೊಟ್ಟೆ ಹೇಳು?

ಅವಳಾತ್ಮ ಉತ್ತರಿಸಿತು-
ನಿನಗೆಂದು ಕೊಡಲು
ನನ್ನಲ್ಲಿ ಇದ್ದದ್ದಾದರೂ ಏನು?
ಆದರೂ ಕೊಟ್ಟೆ ಕೊಡಬಹುದಾದ್ದನ್ನು
ನಿರ್ವಾಜ್ಯ ಪ್ರೇಮ
ಪ್ರೀತಿ ಬೆರೆಸಿದ ಕಾಳಜಿ
ತುಸು ಅಂತಃಕರಣ
ಇಡಿ ಇಡಿಯಾದ ದೇಹ
ಢವಗುಟ್ಟುತ್ತಿದ್ದ ಹೃದಯ
ಇದ್ದೊಂದು ಆತ್ಮಗೌರವ
ಕೊನೆಗೆ ನನ್ನದೆಲ್ಲವನ್ನೂ
ಇಟ್ಟೆ ನಿನ್ನ ಪಾದದಡಿ..
ಅವನಾತ್ಮ ಸುರಿಸಿದ ಕಣ್ಣೀರು
ಈಗ ಅವಳಾತ್ಮವನ್ನು ಸೋಕಿಯೂ
ಸೋಕಲಿಲ್ಲ…!






0 Comments