-ಸುಶ್ರುತ ದೊಡ್ಡೇರಿ
ಮೌನಗಾಳ
ಕಲೆ: ಗುಜ್ಜಾರಪ್ಪ
ಇದ್ದಕ್ಕಿದ್ದಂತೆ ಮಧ್ಯರಾತ್ರಿಯಲ್ಲಿ ಸುರಿಯಲು ಶುರುವಿಡುವ ಮಳೆ
ಊರಲ್ಲಿ ಯಾರೋ ತೀರಿಕೊಂಡರಂತೆ ಎಂಬ ಸುದ್ದಿ
ಯಾಕೋ ನಿದ್ದೇನೇ ಬರ್ತಿಲ್ಲ ಅಂತ ಹುಡುಗಿಯ ಎಸ್ಸೆಮ್ಮೆಸ್ಸು
ಕರವೀರದ ಹೂವನ್ನು ಸೀಪಿದ ಸಿಹಿಯ ನೆನಪು
ಬಾನಿಯಲ್ಲಿ ನೆನೆಸಿಟ್ಟ ಮೈಲುತುತ್ತ ಕಂಡರೆ
ನಾಳೆ ಕೊಳೆ ಔಷಧಿ ಹೊಡೆಯಲು ಶೀನ ಬರುತ್ತಾನೋ ಇಲ್ಲವೋ ಚಿಂತೆ
ಈ ಆಗಸ್ಟ್ ತಿಂಗಳೇ ಹೀಗೆ
ಒಂದಕ್ಕೊಂದು ಸಂಬಂಧವಿಲ್ಲದ ಚಿತ್ರಗಳನ್ನು ಜೋಡಿಸಿ ಮಾಡಿದ ಕೊಲಾಜ್
ಅದರಲ್ಲೇ ಅರ್ಥ ಹುಡುಕುವ ಹುಂಬತನ
ಜಾರುವ ಬಚ್ಚಲುಕಲ್ಲಿಗೆ ಬ್ಲೀಚಿಂಗ್ ಪೌಡರ್ ಹೊಯ್ದು ತರೆದು ತರೆದು ಕೈನೋವು
ನಿಂಬೆಹಣ್ಣು ಹಿಂಡುವಾಗ ಬೀಜವೂ ಬಿದ್ದುಹೋಗಿ ಎಲ್ಲಾ ಕಹಿಕಹಿ
ಮಲ್ಲಿಗೆ ಕ್ಯಾಲೆಂಡರಿನಲ್ಲಿ ಸೈಕಲ್ ಪ್ಯೂರ್ ಅಗರಬತ್ತಿಯ ಜಾಹೀರಾತು
ಎಷ್ಟೇ ಪ್ರಯತ್ನಪಟ್ಟರೂ ನಗು ತಾರದ ಗಂಗಾವತಿ ಬೀಚಿಯ ಜೋಕು
ಛೇ, ಈ ಆಗಸ್ಟ್ ತಿಂಗಳೇ ಹೀಗೆ
ಊರ ಗಣಪೆ ಮಟ್ಟಿಯ ಮರೆಯಲ್ಲಿ ನೀಲಿಹೂವೊಂದು ಬಿಟ್ಟಂತೆ ಕನಸು
ಕಲಾಸಿಪಾಳ್ಯದ ಬೀದಿನಾಯಿ ಬೆದೆಗೆ ಬಂದು ಅಂಡರ್ಪಾಸ್ ಕೆಳಗೆ ಕಾಮಕೇಳಿ
ಕನ್ನಡ ನಿಘಂಟಿನ ಕೊನೇಪುಟದಲ್ಲಿ ಳಕಾರದ ಆತ್ಮಹತ್ಯೆ
ಮಿಥುನ ರಾಶಿಯನ್ನು ಹಾದುಹೋಗುವಾಗಲೆಲ್ಲ ಇನ್ಸಾಟ್-ಬಿ ಉಪಗ್ರಹಕ್ಕೆ ಏನೋ ಪುಳಕ
ಸೋರುತ್ತಿರುವ ನಲ್ಲಿ ಕೆಳಗಿನ ಬಕೇಟಿನಲ್ಲಿ ಕ್ಷಣಕೊಂದು ಅಲೆಯ ಉಂಗುರ
ಶನಿವಾರದ ಜಾಗರದ ಪರಿಣಾಮ, ಶಂಕರ ಭಾಗವತರ ಮದ್ದಲೆಗೆ ಭಾನುವಾರ ಮೈಕೈ ಸೆಳೆತ
ಏನು ಮಾಡೋದು, ಈ ಆಗಸ್ಟ್ ತಿಂಗಳೇ ಹೀಗೆ
ಟೀವಿಯಲ್ಲಿ ಕತ್ರೀನಾ ಕೈಫಿಗೆ ಈ ಚಳಿಯಲ್ಲೂ ದಿನಕ್ಕೆ ನೂರಾಎಂಟು ಸಲ ಸ್ನಾನ
ಅಂಬೋಲಿ ಘಾಟಿನಲ್ಲಿ ಹಸಿದ ಇಂಬಳದ ಅಂಗುಲ-ಅಂಗುಲ ನಡಿಗೆ
ನೈಟ್ ಬಸ್ಸು ನಿಂತ ಡಾಬಾದಲ್ಲಿ ಅಣ್ಣಾವ್ರ ಹಾಡಿನ ಉಸ್ತುವಾರಿ
ಅಲ್ಲಲ್ಲೆ ನಿಲ್ಲುವ ಮನಸುಗಳಿಗೆ, ಅರಳಲಣಿಯಾಗಿರುವ ಮೊಗ್ಗುಗಳಿಗೆ
ನೀರು ಜಿನುಗಿಸುತಿರುವ ಒರತೆಗಳಿಗೆ, ಅಂಚೆಪೆಟ್ಟಿಗೆಯಲ್ಲಿರುವ ಪತ್ರಗಳಿಗೆ
ಮುತ್ತಮಧುಗ್ರಾಹೀ ಅಧರಗಳಿಗೆ, ಬೆಳ್ಳಿನೂಪುರ ಘಲ್ಲುಘಲ್ಲೆನೆ ಉಷೆ
ಹೇಳಿದೆನಲ್ಲಾ, ಈ ಆಗಸ್ಟ್ ತಿಂಗಳೇ ಹೀಗೆ]]>
ಆಗಸ್ಟ್ ತಿಂಗಳೇ ಹೀಗೆ..
ನಿಮಗೆ ಇವೂ ಇಷ್ಟವಾಗಬಹುದು…





ವಾಹ್! ಒಂದು ಬೆಚ್ಚಗಿನ ಕವಿತೆ.
(ಈ ಆಗಸ್ಟ್ ತಿಂಗಳಿನಲ್ಲೂ)
Good one Sushrutha…
‘ಟೀವಿಯಲ್ಲಿ’ – looks like an extra word there. Isn’t iT?
Very good, Sushruth
jayadev
sushrutara khushiyada lahariyannu, adara anireekshita tiruvugalannu bareda kavigoo odisida geleya jogigoo abhinandanegalu
ananthamurthy