ಮಾಲಾ ಮ ಅಕ್ಕಿಶೆಟ್ಟಿ
ಅದೆಂಥ ಪ್ರಯಾಣ ನಾ ಕಾಣೆ
ಜೊತೆಗೂಡಿ ಹೆಜ್ಜೆಗಳ
ಅಕ್ಕ ಮತ್ತು ತಮ್ಮನ ಸಂಸಾರ
ಮಕ್ಕಳು,ಅವ್ವ ನಾನು ಮತ್ತೆ ಅಪ್ಪ
ವಿಶಾಲ ಸೇತುವೆ ದಾಟಲು
ಕೆಳಗೆ ನಿತ್ಯಹರಿದ್ವರ್ಣದ ಕಾಡಿನಂತೆ
ಹಾಲಿನ ನದಿ ಭೋರ್ಗರೆಯುತ್ತಿರಲು
ಈ ಕಡೆಯಿಂದ ಆ ಕಡೆ ನಮ್ಮ ನಡೆ
ಪ್ರಶಾಂತವಾಗಿ ಕಂಡ ನದಿ ಮತ್ತು ಸೇತುವೆ
ಅತ್ಯಾನಂದದಿಂದ ಹೆಜ್ಜೆ ಹಾಕಿ
ಸೇತುವೆಯ ನಟ್ಟನಡುವೆ ಬರಲು
ಪಕ್ಕ ಕಣ್ಣಾಡಿಸಿದರೆ ನೀರು ಒಮ್ಮೆಲೇ ಉಕ್ಕಿ
ಕತ್ತು ತಿರುಗಿಸಿ ಹಿಂದೆ ನೋಡಿ
ಪರ್ವತದೆತ್ತರದಲಿ ನೀರು ಹಿಮ್ಮೆಟ್ಟಿ,
ಹೊಳ್ಳಿ ಎದುರು ನೋಡಿದರೆ
ಅದೇ ನೀರು ಮನುಷ್ಯನ ನೂರು ಪಟ್ಟು ಎತ್ತರ

ಅಕ್ಕ ಪಕ್ಕ ಹಿಂದೆ ಮುಂದೆ
ಎಲ್ಲೆಲ್ಲೂ ಅನಿರೀಕ್ಷಿತ ನೀರೇ ನೀರು
ನಡುವೆ ನಾವೆಲ್ಲಾ! ನಮ್ಮ ಮತ್ತು ಮಕ್ಕಳ
ಚೀತ್ಕಾರ ಮುಗಿಲು ಮುಟ್ಟಿ
ನಾಲ್ಕೂ ಕಡೆ ಸುತ್ತುವರೆದ ನೀರು
ಭಯದ ಉದ್ಗಾರ ಎಲ್ಲರ ಕಣ್ಗಳಲಿ
ಅಪ್ಪನನ್ನು ಬಿಟ್ಟು!! ಬುದ್ಧ ಮಹಾವೀರರಿಗಿಂತ
ಶಾಂತ ಮುಖ, ಭಯದ ವಾಸನೆಯೇ ಇಲ್ಲ!
ಆಶ್ಚರ್ಯದಿಂದ ಅಪ್ಪನ ಕೈ
ಹಿಡಿದು ಅಪ್ಪಾ ಅಪ್ಪಾ ಕೂಗಿದೆ
ಸಪ್ತಸಾಗರಗಳಿಗೂ ಕೇಳುವಂತೆ
ಕನಸು ಭಗ್ನಗೊಂಡು ಎಚ್ಚತ್ತೆ
ಸತ್ತವರಿಗೆ ಯಾವ ಸಾವಿನ ಭಯ?
ಮರಳಿ ಬರುವುದುಂಟೇ?
ಮತ್ತೆ ಮತ್ತೆ ಸಾಯುವುದುಂಟೇ?
ನಿರಂಬಳ ಮುಖದ ಅಪ್ಪ






0 Comments