(ನಾಟಕ – ‘ಸೂರ್ಯಾಸ್ತದಿಂದ ಸುರ್ಯೋದಯದವರೆಗೆ’ -ಜುಲೈ ೫, ೨೦೧೫ , ಕಲಾಗ್ರಾಮ ಬೆಂಗಳೂರಿನಲ್ಲಿ ನೋಡಿದಾಗ ಅನಿಸಿದ್ದು)
ಅನಿಲ್ ತಾಳೀಕೋಟೆ
ಸರಿಸುಮಾರು ಮೂವತ್ತು ವರುಷಗಳ ಹಿಂದೆ ದೊಡ್ಡ ಬ್ಯಾನರಿನಲ್ಲಿ ನನಗೊಂದು ಸಣ್ಣ ನಿರ್ಜೀವ ಪಾತ್ರ. ಅದರ ಕಥೆ ಮತ್ತೆ ಧುತ್ತೆಂದು ಇಂದು ಎದುರು ಬಂದು ನಿಂತಿತು. ಸ್ವಲ್ಪ ವಿವರಣೆಯ ಅಗತ್ಯವಿದೆಯೇನೋ. ಬಾಗಿಲುಕೋಟೆಯಲ್ಲಿ, ಆಗ ಪಿಯುಸಿಯಲ್ಲಿ ಇರಬಹುದೇನೋ -ದೃವರಾಜ ದೇಶಪಾಂಡೆ ಎಂಬ ಯುವ ನಿರ್ದೇಶಕ ಪಡ್ಡೆ ಹುಡುಗರಾದ ನಮ್ಮನ್ನು ಹಾಕಿಕೊಂಡು ನಾಟಕ ಮಾಡುತ್ತೇನೆ ಎಂದಾಗ ಇಲ್ಲ ಎನ್ನುವ ಆಸ್ಪದವೆ ಇರಲಿಲ್ಲ. ವಕೀಲ ಕುಲಕರ್ಣಿ ರಾಜನಾಗಿ, ಬಿರಾದಾರ ಮಂತ್ರಿ ಇತ್ಯಾದಿ ಎನ್ನುತ್ತಾ ಸಾಲಾಗಿ ನಿಂತಿದ್ದ ನಾವು ನಾಲ್ಕೈದು ಹುಡುಗರಿಗೆ ಏನು ಪಾತ್ರ ಕೊಡುವದು ಎಂದು ತಲೆ ಕೆಡಿಸಿಕೊಂಡ ನಿರ್ದೇಶಕರು , ಕೊಡದಿದ್ದರೆ ನಾಟಕದ ಉಪಕರಣ/ಪ್ರಚಾರದ/ಪ್ರಸಾರದ ಹೊಣೆ ಹೊರುವವರಾರು ಎಂಬ ಅವ್ಯಕ್ತ ಆಶಯದಿಂದ ‘ಓಕೆ, ನೀವೆಲ್ಲ ಹಾಡಿ’ ಎಂದರು. ನಾವು ನಾಲ್ಕೂ ಜನ ಒಕ್ಕೊರಲಿನಿ೦ದ ಏನು ಹಾಡಿದೇವೋ ಆ ದೇವರಿಗೆ ಗೊತ್ತು. ನನಗೆ ನೆನಪಿರುವದು ದೃವರಾಜ ನನ್ನತ್ತ ನೋಡಿ ಕನಿಕರದಿಂದ ‘ನಿನ್ನ ಧ್ವನಿ ಸ್ವಲ್ಪ ಬೇರೆಯಾಗಿದೆ’, ನೀನು ಮರವಾಗಿ ನಿಂತು ತಲೆಯ ಮೇಲೆ ಹೂವಿನ ಕುಂಡೆ ಇಟ್ಕೋ’ ಎಂದರು. ‘ಜೈ’ ಎಂದೆ ನಾನು.
ಬಾಗಲಕೋಟೆಯ ಸಕ್ರಿ ಹೈಸ್ಖೊಲಿನಲ್ಲಿ ನಮ್ಮ ರಂಗ ತಾಲೀಮು -ಕಿಲ್ಲೆಯ ಕಿರಸೂರ ಮನೆಯಂಗಳದಲ್ಲಿ ರಂಗ ಪರಿಕರಗಳ ಸಾಲೆ ಸಾಲು. ಮರವಾಗಿ ನಿಂತು ರಿಹರ್ಸಲ್ ಮಾಡುತ್ತಿದ್ದ ನನ್ನ ನೋಡಿ ಆ ಕರುಣಾಮಯಿಗೆ ಅಯ್ಯೋ ಪಾಪ ಎನಿಸಿ ‘ಓಕೆ, ನೀನು ನಾಟಕದ ಮಧ್ಯದಲ್ಲಿ ಆ ಕುಂಡೆ ಕೆಳಗಿಟ್ಟು ರಾಜನೆದುರಿಗೆ ಹೋಗಿ “ಮಹಾರಾಜರೆ ಗೂಢಚಾರರು ಬಂದಿದ್ದಾರೆ”‘ ಎಂದು ಡೈಲಾಗ ಹೇಳಿ ಬಾ ಮಾರಾಯ ಎಂದರು. ಮರವಾದವನು ಜೀವ ಪಡೆದು ಮಾತನಾಡಿ ಮತ್ತೆ ಮರವಾಗಿ ನಿಲ್ಲುವದು, ಅದೂ ಭರಪೂರ ನಾಟಕದ ಮಧ್ಯದಲ್ಲಿ ಸಾಧ್ಯವೆ? ಸಾಧುವೆ? ಯೋಚಿಸುವ, ಕೇಳುವ ಧೈರ್ಯ, ಅಗತ್ಯವೇ ಇರಲಿಲ್ಲ. ಅದು ನಾಟಕವನ್ನೆ ಅಲ್ಲಾಡಿಸಿಬಿಡುವ ‘ಕೀ’ ಡೈಲಾಗ ಇರಬೇಕು ಎಂದೇನೂ ನಾನು ನಂಬಿರಲಿಲ್ಲ ಅಷ್ಟು ಸಿಕ್ಕಿದ್ದಕ್ಕೆ ಖುಷಿಯೋ ಖುಷಿ. ಅಂತೂ, ಇಂತೂ ಬಿಜಾಪೂರಕ್ಕೆ ನಮ್ಮೆಲ್ಲರನ್ನು ಕರೆದುಕೊಂಡು ಹೋಗಿ , ನಾಟಕ ಮಾಡಿಸಿದರು. ಅಲ್ಲಿಯೇ ಕನ್ನಡದ ಹಾಸ್ಯ ನಟನಾಗಿ ಹೊರಹೊಮ್ಮಿದ ಅಶೋಕ ಬಾದರದಿನ್ನಿ ಇದ್ದರೆಂದು ಯಾರೋ ಹೇಳಿದ ನೆನಪು. ಆ ನಾಟಕ ಸುರೇಂದ್ರ ಶರ್ಮಾರ ಹಿಂದಿ ಮೂಲದ್ದು. ಸಿದ್ದಲಿಂಗ ಪಟ್ಟಣಶೆಟ್ಟಿ ಕನ್ನಡಕ್ಕೆ ಅನುವಾದಿಸಿದ ನಾಟಕ ‘ಸೂರ್ಯಾಸ್ತದಿಂದ ಸುರ್ಯೋದಯದವರೆಗೆ’. ಬೆಂಗಳೂರಿನ ಕಲಾಗ್ರಾಮದಲ್ಲಿ ಅದರ ಪೋಸ್ಟರ್ ಮೊನ್ನೆ ನೋಡಿದ್ದೆ ಆ ನಾಟಕ ನೋಡಲೇ ಬೇಕೆಂಬ ಆಶೆ ಮೊಳಕೆ ಒಡೆಯಿತು.
ನನ್ನವಳಿಗೆ ಹೋದ ಸಾರಿ ಭಾರತಕ್ಕೆ ಬಂದಾಗ ನಾಟಕ ನೋಡಲಾರದೆ ಹೋದ ಸಂಕಟ ಧುತ್ತೆಂದು ಪ್ರತ್ಯಕ್ಷವಾಯಿತೋ ಏನೋ. ‘ಮಲೆಗಳಲ್ಲಿ ಮದುಮಗಳು’ ಕಲಾಗ್ರಾಮದಲ್ಲಿ ಆಗಿದ್ದನ್ನು ಓದಿದ್ದ ಅವಳಿಗೆ ಮಗಳ ನೃತ್ಯವನ್ನು ಹಟಹಿಡಿದು ಅಲ್ಲಿಯೇ ಆಯೋಜಿಸಿದ ಅಪ್ಪ, ತಮ್ಮನ ಮೇಲೆ ನೂರ್ಮಡಿಯಾದ ಗೌರವ. ಬೆಂಗಳೂರಿನಲ್ಲಿ ಇದ್ದಿದ್ದರೆ ಕನಿಷ್ಟ ನಾಲ್ಕು ಬಾರಿಯಾದರೂ ನೋಡಿರುತ್ತಿದ್ದೆ ಆ ನಾಟಕ ಎಂಬ ಹಳಹಳಿಕೆ. ಆರು ಘಂಟೆಯಿಂದಲೆ ನಡೀರಿ ಹೋಗೋಣ, ಆರೂವರೆಗೆ ನಾಟಕ, ಲೇಟ್ ಆಯ್ತು, ‘ಓಲಾ’ ಕರೆಯಲೆ ಎಂಬ ಕೇಳಿಕೆ ಹತ್ತೆಂಟು ಬಾರಿ. ಅವಳ ತಮ್ಮ ಶ್ರೀನಿಧಿಗೋ ಇಲ್ಲೆ ಇದ್ದೂ ಕಲಾಗ್ರಾಮದಲ್ಲಿ ದಿನವಹಿ ನಡೆಯುವ ನಾಟಕದಲ್ಲಿ ಒಂದನ್ನೂ ನೋಡಿರದ್ದಕ್ಕೆ ತುಂಬಾ ಬೇಜಾರಾಗಿತ್ತು. ‘ಓಲಾ, ಓತ್ಲಾ ಹೊಡೆಯಲಿ ,ನಡೆಯಿರಿ ಹೋಗುವಾ’ ಎಂದು ತನ್ನ ಹೆಂಡತಿಯನ್ನು ಸೆಳೆದುಕೊಂಡು ನಾವು ನಾಲ್ಕೂ ಜನವೂ ಸರಿಯಾಗಿ ೬:೪೦ಕ್ಕೆ ಕಲಾಗ್ರಾಮದಲ್ಲಿ ಠಳಾಯಿಸಿದೆವು. ಪ್ರಂಟ್ ಸೀಟ್ ಹಿಡಕೊಂಡೆ ನಾನು. ಸುತ್ತ ಮುತ್ತ ಹೆಣಕಿದ ಭಾವ ಹೇಳಿದ ‘ ಏ ಇನ್ನೂ ಸ್ಟಾರ್ಟ್ ಆಗುವದು ಲೇಟಂತೆ, ಅದಕ್ಕೂ ಮೊದಲು ಮತ್ತೇನೋ ಭಾಷಣವಂತೆ ನಡೀರಿ ಇಲ್ಲೆ ‘ನಮ್ಮೂರ ತಿಂಡಿಯಲ್ಲಿ ಸೂಪ್ ಕುಡಿದು ಬರೋಣ ಎಂದ. ಅಮೆರಿಕೆಯಿಂದ ಬಂದು ಬರೀ ಸೂಪ್ ಕುಡಿಯುತ್ತಿದ್ದರೆ ನನ್ನದೂ ಹೃತ್ತಿಕನ ಆಕಾರವಾಗಿರುತ್ತಿತ್ತು, ಇನ್ನೂ ದೊಡ್ಡಣ್ಣನಾಗಿಲ್ಲವಲ್ಲ ಅದೇ ಸಮಾಧಾನ -ಇರಲಿ. ಯಾಸ್ ಯುಸುವಲ್ ಲೇಟಾಗಿ ವಾಪಸ್ ಬಂದಾಗ ಆರಂಭವಾಗಿ ಐದು ನಿಮಿಷವಾಗಿತ್ತು. ನಾಟಕಮಂದಿರ ಭರ್ತಿಯಾಗಿತ್ತು. ಅದು ಹೇಗೋ ಮುಂದೆ ನಾಲ್ಕು ಸೀಟ್ ಖಾಲಿಯಿತ್ತು. ಕೂಡುವದೆ ತಡ ನನ್ನ ಹೆಂಡತಿ ಅಲ್ನೋಡ್ರಿ ಮುಂದ ಕೂತಾರಲಾ, ನಿಮ್ಮ ಪೇಸಬುಕ್ಕ ಪ್ರೆಂಡ ಹಡಪದ ಅವರು ಅಂದಳು. ಸಿನಿಮಾ ಹಾಲ ಅಥವಾ ಯಾವದೇ ಫಂಕ್ಷನ ಗಳಲ್ಲಿ ಏನೇ ಆದರೂ ಮಾತನಾಡಲಾರೆ ಎಂಬ ಅವಳ ಪ್ರೊಟೊಕಾಲ್ ತಾನೆ ಮುರಿದಿದ್ದು ಇದೇ ಮೊದಲನೆ ಸಲ. ಯಾಕೆಂದು ಗೊತ್ತಾಗಲು ತಡವಾಗಲಿಲ್ಲ. ಅದಾದ ಮರುಕ್ಷಣದಿಂದ ಒಂದೇ ಒಂದು ಶಬ್ದ ಹೊರಡಿಸದೆ ಮೈಯೆಲ್ಲಾ ಕಿವಿಯಾಗಿಸಿಕೊಂಡೆವು.
ನನ್ನದಂತೂ ಬಿಡಿ, ಪ್ರಪಂಚದ ಯಾವ ಬರಹವೂ, ಎಷ್ಟೇ ನುರಿತ ಲೇಖಕನ ಬರಹವೂ ಹಡಪದ ಅವರ ಆಳವಾದ ಧ್ವನಿಯನ್ನು ಅಕ್ಷರಗಳಲ್ಲಿ ಹಿಡಿದಿಡಲಾರದು, ಅದನ್ನು ವರ್ಣಿಸುವದು ನಯಾಗಾರವನ್ನು ಬೊಗಸೆಯಿಂದ ಅಳೆದಂತೆ ಎನಿಸುತ್ತದೆ. ಹಿಂದೂಸ್ತಾನಿ ಸಂಗೀತದಲ್ಲಿ ಅದ್ದಿ ತೆಗೆದ ಆ ಆಲಾಪಗಳ ಆಳ ಅಣು ಅಣುವಿನಲ್ಲಿ ಪ್ರವಹಿಸಿ ರಿಮಿಗುಟ್ಟುತ್ತ ಸಾರ್ಥಕವಾಯಿತು ಈ ದಿನ ಎನಿಸುವಂತೆ ಮಾಡಿತು. ರಂಗದ ಮೇಲಂತೂ ಮಿಂಚೋ, ಮಿಂಚು. ಮಲ್ಲರಾಜ್ಯದ ರಾಜನ ಕಡೆದಿಟ್ಟಂತಹ ದೇಹ, ಉದ್ದನೆ ನಿಲುವು, ಒಳ ಒಳಗೆ ತಿಂದು ಹಾಕುತ್ತಿರುವ ಷಂಡತನದಿಂದ ಜೋತು ಬಿದ್ದು ಹೋದ ಉದ್ದುದ್ದನೆಯ ತೋಳುಗಳು, ಆ ಕಹಿಯ ಸಹಿಸಲಾಸಾಧ್ಯವಾಗಿಸಿ ಸೋತು ಹೋದಂತಿರುವ ಆಳ ಕಣ್ಣಿನ ಮುಖ. ಯುದ್ದ ಮಾಡಿಯೇನು ಖುಷಿಯಿಂದ ಆದರೆ ಈ ಬೇಗುದಿಯ ಭಾರ ನಾ ತಾಳಲಾರೆ ಎಂದು -ತನ್ನ ಖಾಸಗಿತನವನ್ನು ಈ ಪರಿಯಲ್ಲಿ ತನ್ನೆದುರೆ ಬಿಚ್ಚಿ ಬಿಚ್ಚಿ ಚುಚ್ಚು ಮಾತುಗಳಿಂದ ಕಚ್ಚುತ್ತಿರುವ ಅಮಾತ್ಯ, ಪುರೊಹಿತ ಮತ್ತು ಸೇನಾಪತಿಯೆಂಬ ತ್ರಿಮೂರ್ತಿಗಳ ಮೇಲಿನ ಆಕ್ರೋಶ, ಏನೂ ಮಾಡಲಾಗದ ಅಸಹಾಯಕತೆಯ ಬಗ್ಗೆ ಮುರುಕ. ರಭಸಮಯವಾದ, ಮೈ ನೆವರೇಳಿಸುವ ಸಂಭಾಷಣೆಗಳು. ಕಥೆಯ ಗಡಚಿನ ವಸ್ತು, ರಂಗಕ್ಕೆ ತರಲು ಕಠಿಣವಾದ, ಸವಾಲಿನ ವಿಷಯ. ಒಂದನ್ನೆಳೆದರೆ ಇನ್ನೊಂದಕ್ಕೆ ಧಕ್ಕೆ ಯಾಗುವ ಧರ್ಮದ, ರಾಜ್ಯದ, ರಾಜಸೇವೆಯ ಗಂಭೀರ ಅಂಗಣದಿಂದ ವ್ಯಕ್ತಿ ಸ್ವಾತ್ರಂತ್ರ್ಯದ, ವಾಂಛೆಯ, ಹೆಣ್ಣಿನ ಅಭಿವ್ಯಕ್ತಿಯ, ಸಾರ್ಥಕತೆಯ ಅಂಗಳಕ್ಕೆ ಪುಟಿದು ನೆಗೆಯುವ -ಎಂದೆಂದಿಗೂ ಪ್ರಸ್ತುತವಾಗಿ ಉಳಿಯಬಹುದಾದ ಸವಾಲಿನ ಪ್ರಶ್ನೆಗಳು -ಉತ್ತರಕ್ಕಾಗಿ ತಡಕಾಡುತ್ತಿರುವ ಕಾಡುವ ಪಾತ್ರಗಳು.

ಹೆಣ್ಣುತನದ ಸಾರ್ಥಕತೆ ಮಾತೃತ್ವವೆ? ಅದೊಂದೆಯೇ? ತನ್ನತನವನ್ನು , ತನ್ನ ಆಶೆ, ಆಕಾಂಕ್ಷೆ, ವಾಂಛೆಗಳನ್ನು ಷಂಡ ಗಂಡನಿಗಾಗಿ ಬಲಿಕೊಡಬೇಕೆ? ತಪ್ಪು ಅವನದಲ್ಲದ ಮಾತ್ರಕ್ಕೆ ತಾನು ಅದಕ್ಕೆ ಕೊರಳೊಡ್ಡಿ ಎಲ್ಲಿಯವರೆಗೆ ಕೊರಗಬೇಕು? ಇಲ್ಲಿಯವರೆಗೆ ಅನುಭವಿಸಿದ್ದಕ್ಕೆ ಕೊನೆಯೆ ಇಲ್ಲವೆ ಎನ್ನುವ ಸವಾಲಿಗುತ್ತರ ಕಂಡುಕೊಳ್ಳಲು ಹೆಣಗುವ ನಾಯಕಿ ಶೀಲವತಿ, ಶೀಲಾಳಾಗಿ -ಜವಾನಿಯ ಮುಖವಾಗಿ ಮಾತ್ರವಲ್ಲ ಹೆಣ್ತನದ ಸಂಧಿಗ್ಧತೆಯನ್ನು ಬಿಚ್ಚಿ ತೂರಾಡಿ ಗಟ್ಟಿಯಾಗಿ, ಮನದಾಳದಲ್ಲಿ ನಿಲ್ಲುತ್ತಾಳೆ, ನೆರಳು-ಬೆಳಕಿನಾಟದಿ ನಾಯಕ-ರಾಜ-ದುರಂತ ನಾಯಕನಾಗಿ- ಯಾವುದು ಧರ್ಮ? ಹೆಂಡತಿಯನ್ನು ನಿಯೋಗಕ್ಕೆ ಅಟ್ಟಿ ದಹದಹಿಸುತ್ತ ಹೋಗುವದೋ – ಈ ಷಡ್ಯಂತ್ರಿಗಳಿಗಿಂತ ತನ್ನ ಷಂಡತನ ಮೇಲಾದದ್ದು , ಒಳ್ಳೆಯದು ಎಂದು ಕೊಳ್ಳುವದೋ? ಇವರೆನ್ನೆಲ್ಲಾ ಕಿತ್ತೊಗೆದು ಓಡಿಸಿ ಬಿಡಲೆ, ನಾನೆ ಓಡಿ ಹೋಗಲೆ -ನಾನೇಕೆ ಪರಿಸ್ಥಿತಿಯ ಕೈಗೊಂಬೆ. ತನ್ನ ಮೇಲೆ ತಾನೆ ರೇಜಿಗೆ ಪಟ್ಟುಕೊಳ್ಳುವ, ದಾಸಿಯಿಂದ ಹೆಂಡತಿಯ ನಿಯೋಗದ , ಆಯ್ಕೆಯ ವಿವರಗಳನ್ನು ಆಲಿಸಬೇಕಾಗಿ ಬಂದ ತನ್ನ ದೌರ್ಭಾಗ್ಯವನ್ನು ಪ್ರೇಕ್ಷಕರಿಗೆ ತಲುಪಿಸುವಲ್ಲಿ ರಾಜನ ಪಾತ್ರಧಾರಿಯದು ಪ್ರಬುದ್ಧ ಅಭಿನಯ.
ಹೆಣ್ಣಿಗೆ ತಾಯ್ತನವೇ ಅಂತಿಮವಾಗದ್ದಲ್ಲಿ ರಾಜ್ಯಕ್ಕೆ ಉತ್ತರಾಧಿಕಾರಿ ಕೊಡಬೇಕಾದ ಹೊಣೆಗಾರಿಕೆ ರಾಜಧರ್ಮ ವಿರೋಧಿಯೇ? ಯಾವುದನ್ನೂ ಪ್ರಶ್ನಿಸಲಾಗದ ಸಂಕಟ, ತಪ್ಪಲ್ಲದ ತನ್ನ ದೌರ್ಬಲ್ಯಕ್ಕೆಕಿ ಶಿಕ್ಷೆ? ಯಾರೂ ಉತ್ತರಿಸಲಾಗದ, ಉತ್ತರಿಸಲೊಲ್ಲದ ಕಗ್ಗಂಟಿನ ಸಮಸ್ಯೆಯನ್ನು , ತನ್ನ ಒಂಟಿತನವನ್ನು ದಾಸಿಯೊಂದಿಗೆ ಕಳೆಯುವಾಗಲೂ ಅವಳ ಗಂಡ ಅವಳ ಬಗ್ಗೆ ಚಿಂತಿಸದಿರಲು ತನ್ನ ಷಂಡತನವೆ ಕಾರಣ ಎಂದು ಹಲಬುವ ನಾಯಕ. ಇದೆಲ್ಲವನ್ನು ರಂಗದ ಮೇಲೆ ಮೋಹಕವಾಗಿ ಹಿಡಿದಿಟ್ಟಿದ್ದಾರೆ ರಾಣಿ,ರಾಜ ಪಾತ್ರಧಾರಿಗಳಾದ ತಾರಿಣಿ ಮತ್ತು ಮಹೇಶರು. ಸ್ಟೇಜ್ ಕೆಳಗೂ ಅಷ್ಟೆ ಗಂಭೀರತೆ -ಹಾರ್ಮೊನಿಯಂ ಹಿಡಿದು ಪ್ರತಿ ಸನ್ನಿವೇಶಕ್ಕೆ ತನ್ನ ಮಾಂತ್ರಿಕ ಧ್ವನಿಯನ್ನು ಏರಿಳಿಸುತ್ತ, ಮಂದ್ರವಾಗಿ, ಗಾಢವಾಗಿ, ಆದ್ರರಾಗಿ, ಕಟುವಾಗಿ, ಸಶಕ್ತವಾಗಿ, ಒಂದರಮೇಲೊಂದು ತೇಲುತ್ತಾ ಎಲ್ಲಾ ಸವಾಲುಗಳಿಲ್ಲಿ ಉತ್ತರವಿದೆಯೋ ನೋಡು, ಹುಡುಕು ನೀನೆ, ಉತ್ತರ ಕಂಡುಕೋ ಎನ್ನುವ ಆಲಾಪ.ಶಬ್ದಗಳು ಸೋಲುವ, ನಾ ಇನ್ನೂ ವರ್ಣಿಸಲಾರೆನಯ್ಯಾ ಎನಿಸುವಂತಹ ತರಂಗವಾಣಿ ರುಣು ರುಣಿಸುತ್ತಿದೆ ನನ್ನಲ್ಲಿನ್ನೂ.
ಎಲ್ಲವನ್ನು ಗ್ರೇಡ್ ಮಾಡಿ ಅದಕ್ಕೊಂದು ರೇಟಿಂಗ ಕೊಡುವದು ಅಮೆರಿಕನ್ನರ ಒಳ್ಳೆಯ ಬುದ್ದಿ, ಅರ್ಧ ಆಯುಷ್ಯ ಅಲ್ಲಿಯೇ ಕಳೆದವನಾದ್ದರಿಂದ ಆ ದುರ್(ಸು)ಬುದ್ದಿ ನನಗೂ ಅಂಟಿಕೊಂಡಿದೆ. ಇಡೀ ನಾಟಕದ ಜೀವಾಳಕ್ಕೆ ಮೊದಲನೆ ಸ್ಥಾನ ಎಂದೆನಾದರೂ ನಿರ್ಧರಿಸಬೇಕಾದರೆ ನಾನಂತೂ ರಾಮಚಂದ್ರ ಹಡಪದ ಎಂದು ಹೇಳುತ್ತೇನೆ.
ಒಂದು ಅದ್ಭುತ ಸಂಜೆಯನ್ನು ಈ ಸುಂದರ ನಾಟಕ ನೋಡಿ ಸಾರ್ಥಕಗೊಳಿಸಿಕೊಂಡೆ. ಬೆಂಗಳೂರಿನಲ್ಲಿದ್ದು , ಮನಮೋಹಕ ಕಲಾಗ್ರಾಮದ ಕಟ್ಟಡದಲ್ಲಿ ಇಂಥಹದನ್ನು ಪುಕ್ಕಟೆಯಾಗಿ ನೋಡಬಹುದಾದ ನೀವೆ ಧನ್ಯರು. ಕೊನೆಯಲ್ಲಿ ಮಾತನಾಡಿದ ಡಾ. ವಿಜಯಾ, ಶ್ರೀ ಗರುಡನಹಳ್ಳಿ ಮತ್ತು ಶ್ರೀಮತಿ ಶೆಟ್ಟಿ (ಸರಿಯಾಗಿ ನೆನಪಿಲ್ಲದ್ದಕ್ಕೆ ಕ್ಷಮೆ ಇರಲಿ) ಅತ್ಯಂತ ಸ್ಪುಟವಾಗಿ, ಸರಳವಾಗಿ ನಾಟಕದ ತಿರುಳನ್ನು ಬಗೆದು ಕೊಟ್ಟದ್ದಕ್ಕೆ ಮತ್ತು ನಾಟಕದ ಎಲ್ಲ ಸದಸ್ಯರಿಗೂ ನನ್ನ ಎರಡಕ್ಷರದ ನಮನಗಳು. ದೃಶ್ಯ-ಕಾವ್ಯದ ನಿರ್ವಹಣೆ, ನಂಜುಂಡೇಗೌಡರ ನೇತ್ರತ್ವ ನೆನೆಪಿನಲ್ಲಿ ಉಳಿಯುವಂತಹದು.
ಕೊನೆಯಲ್ಲಿ ನಂಜುಂಡೇಗೌಡರು ಸಿಡಿಸಿದ ಸುದ್ದಿ – ರಾಣಿಯಾಗಿ ನಟಿಸಿದ್ದ ತಾರಿಣಿಯವರು ಪ್ರವಾಸ ಮಾಡುತ್ತಿದ್ದವರು ನಾಟಕದ ಆರಂಭವಾದ ಮೇಲೆ ಬಂದಿಳಿದರೆಂಬುವದು. ಅದಕ್ಕಾಗಿ ಕೆಲನಿಮಿಷ ತಾತ್ಕಾಲಿಕವಾಗಿ ಯಶಸ್ವಿನಿ ಎಂಬವರನ್ನು ರಂಗದ ಮೇಲೆ ತರಬೇಕಾಯಿತೆಂದು ಹೇಳಿದ್ದು. ರಂಗಕರ್ಮಿ ಪ್ರಸನ್ನರವರನ್ನು ಪ್ರಸ್ತಾಪಿಸುತ್ತ ಶೆಟ್ಟಿ ಅವರು ನಾಟಕದ ತಯ್ಯಾರಿ ಮತ್ತು ಪ್ರಕ್ರಿಯೆಯ ಬಗ್ಗೆ ಹೇಳಿದ್ದು ಎಷ್ಟು ಸಮಂಜಸವಾಗಿತ್ತೆಂದರೆ ರಂಗದ ಮೇಲಿನ ಈ ಕೊನೆ ಘಳಿಗೆಯ ಬದಲಾವಣೆ ನಾಟಕದ ಪರಿಣಾಮಕ್ಕೆ, ಅಭಿನಯದ ಪರಕಾಷ್ಟತೆಗೆ ಯಾವುದೇ ಧಕ್ಕೆ ಉಂಟು ಮಾಡಲಿಲ್ಲ ಎಂಬುವದರಲ್ಲಿದೆ.
ಕೊನೆಗೆ ಬರುವಾಗ ನನ್ನ ಹೆಂಡತಿ ಹೇಳಿದ್ದು ‘ಹಡಪದ ರಂಥಹ ಧ್ವನಿ, ಹಿಡಿತ, ಕಲೆ ಇದ್ದರೆ ಖಂಡಿತ ಕೆಲಸ ಬಿಟ್ಟೇನು’ ಅವಳು ಕೆಲಸ ಬಿಡದಿರುವ ಬಗ್ಗೆ ನನಗೀಗ ನಿಶ್ಚಿಂತೆ.






ಸರ್ ನಾನು ಋಣಿಯಾಗಿರುವೆ ನಿಮಗೆ ಇ ಅಲ್ಪನನ್ನು ಹಾಡಿ ಹೊಗಳಿದಕ್ಕೋಸ್ಕರ..
Natakada bagge lekhana athmeyavagi pradhamshaneyavagi moodibandide. Lekhana anayasavagi odisikondu hoguttade kiriyara prayathnakke bennu tatti prothsajisida lekhakarige abhinandanegalu.