
ಸಿದ್ಧು ಪಿನಾಕಿ
ಸಂಡೇ. ಬೆಳಿಗ್ಗೆ ಒಂಬತ್ತಾದರೂ ಮಲಗೇ ಇದ್ದೆ. ರಾಜೇಶ್ವರಿ ಫೋನ್ ನಲ್ಲಿ ಮಾತನಾಡುತ್ತಿದ್ದಳು. ಅವಳ ದನಿಯಲ್ಲೇ ಗೊತ್ತಾಗಿತ್ತು. ಮಂಡ್ಯದಿಂದ ಅಮ್ಮ ಫೋನ್ ಮಾಡಿದ್ದು ಅಂತಾ. ಅದೇನೋ ಗದರುತ್ತದ್ದರು. ಇವಳು ಆಗಲ್ಲ, ನಾನು ಹೇಳಿದೆ ಹಾಗೆ ಹೀಗೆ ಅನ್ನುತ್ತಿದ್ದಳು. ರಮಿಗೆ ಬಂದು ಸ್ಪೀಕರ್ ಆನ್ ಮಾಡಿದಳು.
ಅವನು ಇನ್ನೂ ಎದ್ದಿಲ್ವ ಅಂದ ಅಮ್ಮ, ಅಲ್ಲಾ, ನೀನು ಗುಲ್ಬರ್ಗದಲ್ಲೇ ಓದಿ ಎಂಪಿಲ್ ( ಎಂಫಿಲ್ ) ಮಾಡಿಲ್ವ. ಮಂಡ್ಯದಲ್ಲಿ ಎಂತೆಂಥಾ ಸ್ಕೂಲ್ ಗಳವೆ ಗೊತ್ತಾ ಎನ್ನುತ್ತಿದ್ದರು. ಓಹೋ, ಆಗ ನನಗೆ ಅರ್ಥ ಆಯ್ತು. ಅಮ್ಮ ಏತಕ್ಕೆ ಕೂಗ್ತಾ ಇದ್ದಾರೆ ಅಂತ. ಆದದ್ದು ಇಷ್ಟು . ನಿನ್ನೆ ಬೆಳಿಗ್ಗೆ ನನ್ನ ಮಗ ಕೈ ಕಾಲನ್ನೆಲ್ಲಾ ಕೆರೆದುಕೊಳ್ತಾ ಇದ್ದ. ಇವಳೋ, ಆಫೀಸಿನಲ್ಲಿದ್ದ ನನಗೆ ಫೋನ್ಮಾಡಿದ್ಳು. ಸರೀ ಅಂತಾ ನಾನೂ ಬೇಗ ಹೊರಟೆ. ಡಾಕ್ಟರ್ ಬಳಿಗೆ ಹೋದ್ವಿ. ನಮ್ ಮನ್ನು ನೋಡಿ ನಕ್ಕ ಫ್ಯಾಮಿಲಿ ಡಾಕ್ಟರ್, ಎಲ್ಲಿ ಆಟ ಆಡೋಕೆ ಹೋಗಿದ್ದ ಅಂತಾ ಕೇಳಿದ್ರು. ಸರಿ ಬಂದಿದ್ದೆವಲ್ಲಾ, ಒಂದು ಆಯಿಂಟ್ ಮೆಂಟ್ ಬರೆದುಕೊಟ್ರು .
ಮನೆಗೆ ಬಂದ ನಂತರ, ಮಂಡ್ಯದಿಂದ ನನ್ನಕ್ಕ ಫೋನ್ ಮಾಡಿದ್ಳು. ರಾಜೇಶ್ವರಿ, ಹೀಗೆ ಹೀಗೆ ಡಾಕ್ಟರ್ ಹತ್ರ ಹೋಗಿ ಬಂದ್ವಿ ಅಂತಾ ಹೇಳಿದ್ದಾಳೆ. ಸರಿ, ಬೆಳಿಗ್ಗೆ ಅಮ್ಮ ಫೋನ್ ಮಾಡಿದವ್ರೇ, ಕುಂಕುಮಾರ್ಚನೆ ಶುರು ಮಾಡಿದ್ದಾರೆ. ಅಲ್ಲಾ ಕಣೇ, ಕೆರೆದುಕೊಂಡ್ರೆ, ಕೊಬ್ಬರಿಎಣ್ಣೆ ಉಗುರು ಬೆಚ್ಚಗೆ ಮಾಡಿ, ಮೈ ಕೈಗೆ ಹಚ್ಚಿ ಬಿಸಿ ನೀರಲ್ಲಿ ಸ್ನಾನ ಮಾಡಿಸಿದ್ರೆ ಸರಿ ಹೋಗ್ತಾ ಇತ್ತು. ಇಷ್ಟಕ್ಕೆಲ್ಲಾ ಡಾಕ್ಟರ್ ಹತ್ರ ಹೋಗಿದ್ರಾ ಅಂತಾ ಬೈಯುತ್ತಿದ್ದರು.
ನಮ್ಮ ಡಾಕ್ಟರ್, ನಮ್ಮನ್ನ ನೋಡಿ ನಕ್ಕಿದ್ದೂ ಇದಕ್ಕೇ ಅಂತಾ ಆಗ ಫ್ಲಾಶ್ ಆಯ್ತು. ಅಲ್ಲಿಂದ ಶುರುವಾದ ಅಮ್ಮನ ಮಾತು, ಸಿದ್ದಾರ್ಥನ ಸ್ಕೂಲ್ ಗೆ ಬಂದು ನಿಂತಿತ್ತು. ಅವನನ್ನು ಮಂಡ್ಯಕ್ಕೇ ಕಳಿಸಿ, ಇಲ್ಲೇ ಓದಿಸ್ತೀನಿ, ನಮ್ಮ ಬೀದಿಯಲ್ಲಿ ಮನೆಗೊಬ್ಬರಂತೆ ಅಮೆರಿಕಾದಲ್ಲಿದ್ದಾರೆ, ಅವರೆಲ್ಲಾ ಇಲ್ಲೇ ಓದಿಲ್ವಾ, ನಿನ್ನ ಗಂಡ ಏನು ಬೆಂಗಳೂರಲ್ಲೇ ಓದಿದ್ನ ಅನ್ನುತ್ತಿದ್ದರು. ಓ ಇದು ಯಾಕೋ ಇಲ್ಲಿಗೆ ನಿಲ್ಲೋಲ್ಲ ಅಂದುಕೊಂಡ ನಾನು, ಫೋನ್ ತೆಗೆದುಕೊಂಡು, ಹೇ ಇಡಮ್ಮಾ ಮಾಡ್ತೀನಿ ಅಮೇಲೆ ಅಂದು ಕಾಲ್ ಕಟ್ ಮಾಡ್ದೆ.
ಇನ್ನು ನನ್ನ ಮಾತು ಎಲ್ಲಿಗೆ ಹೋಗುತ್ತೆ ಅಂತಾ ಗೊತ್ತಾಗಿದ್ದೇ ತಡಾ, ರಾಜೇಶ್ವರಿ, ಮಲಗ್ರೀ ಎಂದು ಸಿದ್ದಾರ್ಥನ ರೂಂಗೆ ಹೋದ್ಲು. ನನ್ನ ಮನಸ್ಸು ಸೆಕೆಂಡಿ ನಲ್ಲೇ 210 ಕಿಲೋ ಮೀಟರ್ ದೂರದ ಕಬಿನಿ ಕಾಡಿಗೆ ಹೋಯ್ತು. ಅಸಲಿಗೆ ಕಥೆ ಶುರುವಾಗೋದೇ ಇಲ್ಲಿಂದ ಕಣ್ರೀ.
ಕಬಿನಿ ಹಿನ್ನೀರು, ನಾಗರಹೊಳೆ ಹಾಗೂ ಬಂಡೀಪುರ ಅಭಯಾರಣ್ಯವನ್ನು ಬೇರೆ ಬೇರೆ ಮಾಡುತ್ತೆ, ಕೇರಳಕ್ಕೆ ಹೋಗೋ ದಾರಿಯಲ್ಲೇ ಇದೆ ಬಳ್ಳೆ ಅರಣ್ಯ. ಈ ಬಳ್ಳೆ ಕ್ಯಾಂಪಿನಲ್ಲೇ ಇರೋದು ನಮ್ಮ ಅರ್ಜುನ. ಈ ಕಾಡಿನಲ್ಲೇ ಹುಟ್ಟಿ, ಬೆಳೆದವರು ಬುಡಕಟ್ಟು ಜನ. ರೇಂಜ್ ಆಫೀಸರ್ ಹೇಳಿದ ಕೆಲಸ ಮಾಡ್ಕೊಂಡು, ಅರ್ಜುನ ಹಾಗೂ ಇತರೇ ಆನೆಗಳ ಕಷ್ಟ ಸುಖ ವಿಚಾರಿಸಿಕೊಂಡು ಬದುಕುತ್ತಿರುವವರು ಇವರು. ಇವರಿಗೆ ಅಂಥಾ ದೊಡ್ಡ ಆಸೆ ಏನೂ ಇಲ್ಲ ಕಣ್ರೀ. ಹೆಚ್ಚೆಂದ್ರೆ, ಮಾವುತರಾಗ
ಬೇಕು, ಆಗ ಸರ್ಕಾರದಿಂದ ಸಂಬಳ ಬರುತ್ತೆ, ನಾವೂ ನಾಲ್ಕು ಕಾಸು ನೋಡಬಹುದು ಅನ್ನೋದೇ ಇವರ ಮಹದಾಸೆ. ಇಲ್ಲಾ ಅಂದ್ರೆ, ಕೇರಳಕ್ಕೋ, ಪಕ್ಕದ ಕೋಟೆಗೋ ದಿನಗೂಲಿ ಕೆಲಸಕ್ಕೆ ಹೋಗ್ತಾರೆ.
ಸರಿ, ಈಗ ಅಸಲೀ ಕತೆಗೆ ಬರ್ತೀನಿ ಕೇಳಿ. ಈ ಮಾವುತರ, ಕಾವಾಡಿಗಳ ಮಕ್ಕಳು ಇರ್ತಾರಲ್ಲ, ಹೇಗಿರ್ತಾರೆ ಗೊತ್ತಾ.! ಕಾಡಲ್ಲೇ ಹುಟ್ಟಿ, ಬೆಳೆವ ಇವ್ರಿಗೆ ಕಾಡೇ ಉಸಿರು. ಅರ್ಜುನನ ಮೇಲೆ ಕುಳಿತು, ದಟ್ಟ ಅರಣ್ಯಕ್ಕೆ ಹೋಗಿ, ಆನೆಗಳಿಗೆ ಸೊಪ್ಪು ತರ್ತಾರೆ. ಆನೆಗಳಿಗೆ ನದಿ ದಂಡೆಯಲ್ಲಿ ಸ್ನಾನ ಮಾಡಿಸ್ತಾರೆ. ಪಕ್ಕದಲ್ಲೇ ಕಾಡಾನೆಗಳು ನೀರು ಕುಡೀತ್ತಿದ್ರೆ, ಇವರು ಕೇರೇ ಮಾಡೋಲ್ಲ .
ಗುಡಿಸಲ ಪಕ್ಕದಲ್ಲೇ ಹುಲಿರಾಯ ಗುರಾಯಿಸ್ತಾ ಹೋಗ್ತಾನೆ, ಚಿರತೆಗಳು, ಕೋಳಿ ತಿನ್ನೋಕೆ ಬರ್ತವೆ. ಆನೆಗಳಂತೂ, ಇವರ ದೂರದ ಸಂಬಂಧಿಕರೇನೋ ಅನ್ನುವಂತೆ , ಗುಡಿಸಲ ಪಕ್ಕಕ್ಕೇ ಬಂದು ನಿಂತಿರುತ್ವೆ. ಈ ಮಕ್ಕಳು ಇದ್ಯಾವುದಕ್ಕೂ ಕೇರೇ ಮಾಡೋದಿಲ್ಲ. ಅದೇ ನಮಗೆ ಆಶ್ಚರ್ಯದ ಸಂಗತಿ. ಹೊಟ್ಟೆ ಹಸಿದ್ರೆ ಮಕ್ಕಳು ಮನೆಗೆ ಬರ್ತವೆ. ಕುಚುಲಕ್ಕಿ ಅನ್ನಕ್ಕೆ, ಉಪ್ಪಿನಕಾಯಿಹಾಕಿ ಕೊಟ್ರೆ, ಅದೇ ಸ್ವರ್ಗ ಇವರಿಗೆ.
ಪಾಪ ಕಣ್ರೀ, ಇವರ ಮೈಮೇಲೆ ಬಟ್ಟೆಯೇ ಇರೋಲ್ಲ. ಆ ಅಂಗಿ ಒಗೆದು ಅದೆಷ್ಟು ದಿನವಾಯ್ತೋ, ಗುಂಡಿಯಂತೂ ಒಂದೂ ಇಲ್ಲ. ಇನ್ನು ಕಾಚ ಅನ್ನೋದು ಕನಸಿನ ಮಾತೇ. ಗಂಟೆ ಅಳ್ಳಾಡಿಸಿಕೊಂಡೇ ಓಡಾಡ್ತಾರೆ ಈ ಗಂಡು ಮಕ್ಕಳು. ಇವಳನ್ನು ನೋಡಿ, ಅವರಪ್ಪನ ಅಂಡರ್ ವೇರ್ ಇದು. ಫುಲ್ ಏರ್ ಕಂಡಿಷನರ್ ಅಂಡ್ ವೇರ್ ಇದು. ಅದನ್ನೇ ಕಬಿನಿಯಲ್ಲಿ ಅದ್ದಿ, ಅಲ್ಲೇ ಒಣಗಿಸಿ, ಹಾಕ್ಕೋತ್ತಾಳೆ.
ನಾನು ಅರ್ಜುನನಿಗೆ ಕೊಬ್ಬರಿ ಬೆಲ್ಲ ತಿನ್ನಿಸುತ್ತಿದ್ರೆ, ರಾಜೇಶ್ವರಿ, ಬ್ಯಾಗ್ ನಿಂದ ಕವರ್ ತೆಗೀತಾಳೆ. ಅದ್ ಯಾವಾಗ ಇವನ್ನ ತೆಗೆದುಕೊಂಡಳೋ ಎಂದು ಆಶ್ಚರ್ಯ ಆಗುತ್ತೆ. ತಂದ ಬಟ್ಟೆಗಳನ್ನ ಆ ಮಕ್ಕಳಿಗೆ ಕೊಡ್ತಾಳೆ. ನನ್ನ ಮಗನಿಗೋ, ಇವರೆಲ್ಲಾ ಚಡ್ಡಿ ದೋಸ್ತಿಗಳು. ಇವನು ಅವರ ಹಿಂದೆ ಓಡಿದ್ರೆ, ರಾಜೇಶ್ವರಿಯೂ ಓಡ್ತಾಳೆ. ಲೇ ಬಿಡೇ, ಆಡಲಿ ಅಂದ್ರೆ, ರೀ ಅಲ್ಲಿ ಆನೆಗಳಿವೆ ಕಣ್ರೀ ಅಂತಾಳೆ. ಆ ಕಾಡ ಮಕ್ಕಳೋ, ಕಾಡಾನೆಗಳು ತಮ್ಮ ಮಾವನ ಮಕ್ಕಳೇನೋ ಅನ್ನುವಂತೆ, ತಮ್ಮ ಪಾಡಿಗೆ ತಾವು ನದಿಯಲ್ಲಿ ಬಿದ್ದು ಆಡುತ್ತಿರುತ್ತವೆ.
ಸಿದ್ದಾರ್ಥ, ಮೈ ಕೈ ಕೆರೆದುಕೊಂಡದ್ದಕ್ಕೇ, ಗಂಡ ಹೆಂಡತಿ ಡಾಕ್ಟರ್ ಬಳಿಗೆ ಓಡಿ ಹೋಗಿದ್ವಿ. ಈ ಮಕ್ಕಳು ಎಲ್ಲಿಯೂ ಕೆರೆದುಕೊಳ್ಳೋದಿಲ್ಲ. ಆನೆಯಂತೆ ಮೈಗೆಲ್ಲಾ ಮಣ್ಣು ಮೆತ್ತಿಕೊಳ್ತವೆ. ಅದ್ಯಾವುದೋ ಬಿಲಕ್ಕೆ ಕೈ ಹಾಕ್ತವೆ. ಚಡ್ಡಿಯನ್ನೇ ಹಾಕದೇ, ಬಿದ್ದು ಒದ್ದಾಡ್ತವೆ. ಅವರು ಒಂದು ಸಲವೂ ತಿಕ ಕೆರೆದುಕೊಂಡಿದ್ದನ್ನೇ ನೋಡಿಲ್ಲ ನಾನು.
ನನ್ನ ಮಗ ಕುಣಿದೂ, ಕುಣಿದೂ ಒಮ್ಮೆ ಕೆಮ್ಮಿದ್ರೆ, ಇವಳು, ಗುಲ್ಬರ್ಗಾಕ್ಕೆ ಫೋನ್ ಮಾಡ್ತಾಳೆ. ಅವರಮ್ಮನ ಜೊತೆ ಟೆಲಿ ಕಾನ್ಫರೆನ್ಸ್ ಬೇರೆ. ಅವರು, ಗುಲ್ಬರ್ಗಾ ಭಾಷೆಯಲ್ಲೇ, ಬೆಳ್ಳುಳ್ಳಿ ತಗೋ, ಅದು ತಗೋ, ಇದು ಹಾಕು ಸಾಕು ಅಂತಾರೆ. ಈ ಕಬಿನಿಯ ಮಕ್ಕಳಿಗೆ ಯಾರೂ ಏನೂ ಹಾಕೋದಿಲ್ಲ.
ಮನೆಗೆ ಬಂದವರೇ, ಕುಚುಲಕ್ಕಿ ಅನ್ನ, ಉಪ್ಪಿನಕಾಯಿ ತಿಂದು, ಕೋಳಿಗೂಡಿನ ಪಕ್ಕದಲ್ಲೇ ನಿದ್ದೆ ಹೋಗುತ್ತವೆ. ಯಥಾಪ್ರಕಾರ, ಬೆಳಿಗ್ಗೆ ಆನೆ ಘೀಳಿಟ್ಟಾಗಲೇ ಇವರಿಗೆ ಎಚ್ಚರ. ಮತ್ತದೇ ದಿನಚರಿ. ಕೇರಳಕ್ಕೆ ಹೋಗುವ, ಮೈಸೂರಿನ ಕಡೆ ಬರುವ ಕಾರು, ಬಸ್ಸುಗಳಿಗೆಲ್ಲಾ ಟಾಟಾ ಮಾಡುತ್ತಾ, ಸಾಕಾನೆಗಳ ಮೈ ಉಜ್ಜುತ್ತಾ ಆಟ ಶುರು.
ಅದೇಕೋ, ನಾನು ಬಂಡೀಪುರಕ್ಕೂ ಹೋಗ್ತಾ ಇರ್ತೇನೆ, ಬಿಳಿಗಿರಿ ರಂಗನ ಬೆಟ್ಟಕ್ಕೂ ಸುತ್ತುತ್ತಾ ಇರ್ತೇನೆ. ಆದ್ರೆ, ಈ ಕಬಿನಿ ಕಾಡಿನ ಮಕ್ಕಳನ್ನ ಸಿಕ್ಕಾಪಟ್ಟೆ ಹಚ್ಚೊಂಡಿದ್ದೇನೆ. ಅದಕ್ಕೇ ಹೇಳ್ತಾ ಇರ್ತೇನೆ, ಲೇ ಸಿದ್ದಾರ್ಥನೂ ಇನ್ನೊಂದು ವರ್ಷ ಇಲ್ಲೇ ಇರಲಿ, ಆಮೇಲೆ ಸ್ಕೂಲು ಗೀಲು ಅಂತಾ, ರಾಜೇಶ್ವರಿ, ಅಯ್ಯಪ್ಪಾ ಅಂತಾಳೆ.





0 Comments