'ಅಸಮಾನತೆ ಸೃಷ್ಟಿಸುವ ಜಾಣತನ' – ಯು ಆರ್ ಅನಂತಮೂರ್ತಿ

‘ಅವಧಿ’ ರೂಪಿಸಿದ ಯು ಆರ್ ಅನಂತಮೂರ್ತಿ ವಿಶೇಷ ಸಂಚಿಕೆಯಲ್ಲಿ ಪ್ರಕಟವಾಗಿದ್ದ ಬರಹ

***

ಅಸಮಾನತೆ ಸೃಷ್ಟಿಸುವ ಜಾಣತನ


ಸರ್ಕಾರ ಸಮಾನತೆಯನ್ನು ಸೃಷ್ಟಿಸಲು ಪ್ರಯತ್ನಿಸಬೇಕು. ಆದರೆ ಪ್ರಜಾಸತ್ತಾತ್ಮಕವಾದ ಸರ್ಕಾರ ಇದನ್ನು ಒತ್ತಾಯ ಪೂರ್ವಕವಾಗಿ ಮಾಡಲು ಸಾಧ್ಯವಿಲ್ಲ ಎಂಬುದು ನಾವೆಲ್ಲರೂ ಗ್ರಹಿಸಿರುವ ಅಂಶವೇ. ಆದರೆ ನಿಜದಲ್ಲಿ ನಾವು ಬೇಕೆಂದೇ ಅಸಮಾನತೆಯನ್ನು ಸೃಷ್ಟಿಸುವ ವ್ಯವಸ್ಥೆಯನ್ನು ತುಂಬ ಜಾಣತನದಿಂದ ಜಾರಿಗೆ ತರುತ್ತೇವೆ. ಕೇರಳದ ಉದಾಹರಣೆ ಯನ್ನು ತೆಗೆದುಕೊಂಡರೆ ಅಲ್ಲಿರುವ ಎಲ್ಲ ಸರ್ಕಾರಿ ಶಾಲೆಗಳ ಶಿಕ್ಷಕರೂ ಖಾಸಗಿ ಶಾಲೆಗಳ ಶಿಕ್ಷಕರಿಗಿಂತ ಹೆಚ್ಚು ಕಲಿತವರೂ ನುರಿತವರೂ ಆಗಿರುತ್ತಾರೆ. ಆದರೆ ಅಂತಹ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಲು ಜನರು ಹಿಂಜರಿಯುತ್ತಾರೆ. ಇಂಗ್ಲಿಷ್ ಮೀಡಿಯಂ ಶಾಲೆಗೆ ಹೋದರೆ ಮಾತ್ರ ತಮ್ಮ ಮಕ್ಕಳು ಮುಂದುವರಿಯುವುದು ಎಂದು ಅವರು ಭಾವಿಸುತ್ತಾರೆ. ಇಲ್ಲೊಂದು ನಿಜವಿದೆ. ಈ ಕಾಲದಲ್ಲಿ ನಮ್ಮ ಬುದ್ಧಿ ಬೆಳೆಯಲು ಇನ್ನೊಂದು ಭಾಷೆಯಾಗಿ ಇಂಗ್ಲಿಷ್ ಬೇಕೆಂದು ಮಾತ್ರ ನಾವು ತಿಳಿದಿರುವುದಲ್ಲ. ಬದಲಿಗೆ ಇಂಗ್ಲಿಷ್ ಗೊತ್ತಿದ್ದರೆ ಸಾಮಾಜಿಕ ಸ್ತರದ ಮೇಲ್ಮಟ್ಟದಲ್ಲಿ ನಮ್ಮ ಮಕ್ಕಳು ಇರುತ್ತಾರೆಂದು ಮಾತ್ರ ಭಾವಿಸುತ್ತೇವೆ. ಹೀಗೆ ಭಾವಿಸುವುದು ಕ್ರಮೇಣ ನಿಜವೂ ಆಗಿಬಿಡುವಂತಹ ವ್ಯವಸ್ಥೆ ಇದೆ. ಆದ್ದರಿಂದ ನಾವು ಇಂಗ್ಲಿಷ್ ಎಂಬ ಭಾಷೆಯನ್ನು ಜ್ಞಾನದ ಗಳಿಕೆಗಾಗಿ ಕಲಿಸಬೇಕೆಂದು ತಿಳಿಯುವುದರ ಬದಲಾಗಿ ನಮ್ಮ ಸಾಮಾಜಿಕ ಶ್ರೇಷ್ಠತೆಯನ್ನು ಉಳಿಸಿಕೊಳ್ಳಲು ಬಳಸುತ್ತೇವೆ. ಯಾವ ಸರ್ಕಾರವೂ ಸಮಾನತೆಯನ್ನು ಕಡ್ಡಾಯವಾಗಿ ಪ್ರಜೆಗಳ ಮೇಲೆ ಹೇರುವಂತಿಲ್ಲ. ಆದರೆ ಅಸಮಾನತೆಯನ್ನು ಸೃಷ್ಟಿಸುವಂಥ ವ್ಯವಸ್ಥೆಯನ್ನು ಹುಟ್ಟುಹಾಕುವುದೂ ಕೂಡಾ ಒಂದು ಪ್ರಜಾಸತ್ತಾತ್ಮಕ ಸರ್ಕಾರದ ಅಪರಾಧವಾಗುತ್ತದೆ. ನಮ್ಮ ರಾಜ್ಯಾಂಗಕ್ಕೆ ವಿರುದ್ಧವಾಗಿ ನಡೆದುಕೊಂಡಂತಾಗುತ್ತದೆ.
ನಮ್ಮ ಹಲವು ಖಾಸಗಿ ಶಾಲೆಗಳು ಇಂಗ್ಲಿಷನ್ನು ಚೆನ್ನಾಗಿ ಕಲಿಸುವಂತೆಯೇ ಉಳಿದೆಲ್ಲ ವಿಷಯಗಳನ್ನೂ ಅಷ್ಟೇ ಸೃಜನಾತ್ಮಕವಾಗಿ ಕಲಿಸುತ್ತಾರೆಂದು ತಿಳಿಯುವುದರಲ್ಲಿ ಒಂದು ಉತ್ಪ್ರೇಕ್ಷೆ ಇದೆ. ಆದರೆ ಯಾರಾದರೂ ಒಂದು ಉದ್ಯೋಗದ ಸಂದರ್ಶನಕ್ಕೆ ಹೋದಾಗ ಆತ ಎಷ್ಟು ಬಲ್ಲವ ಎನ್ನುವುದಕ್ಕಿಂತ ಎಷ್ಟು ಸಲೀಸಾಗಿ ಇಂಗ್ಲಿಷ್ ಮಾತನಾಡಬಲ್ಲ ಎಂಬುದೇ ಮುಖ್ಯವಾಗಿಬಿಡುತ್ತದೆ. ಹೀಗಾಗಿ ಮೇಲ್ಮಟ್ಟದ ಸಂವಹನದ ದೃಷ್ಟಿಯಿಂದ ಇಂಥ ಶಾಲೆಗಳು ತಾಯಿತಂದೆಯರಿಗೆ ಮಹತ್ವದ್ದಾಗಿ ಕಾಣಿಸುತ್ತಿವೆ. ಆದರೆ ನಿಜದಲ್ಲಿ ಒಂದು ಮನಸ್ಸು ಬೆಳೆಯಲು ಬೇಕಾದ ವಾತಾವರಣ ಬಾಯಿ ಪಾಠ ಮಾಡಿಸುವ ಖಾಸಗಿ ಶಾಲೆಗಳಿಂದಲೂ ದೊರೆಯುತ್ತಿಲ್ಲ. ಹಾಗೆಯೇ ಏನನ್ನೂ ಮಾಡದೆ ಶಾಲೆಯನ್ನು ನಡೆಸುವ ಮೋಸದ ಆಟ ಆಡುತ್ತಿರುವ ಸರ್ಕಾರಿ ಶಾಲೆಗಳಲ್ಲೂ ಇಲ್ಲ. ಆದರೆ ಎಲ್ಲ ಸರ್ಕಾರಿ ಶಾಲೆಗಳೂ ಈಗಿರುವುದಕ್ಕಿಂತ ಉತ್ತಮಗೊಳ್ಳುವ ಗುರಿಯನ್ನು ಒಂದೆರಡು ವರ್ಷಗಳಲ್ಲಿಯೇ ಸಾಧಿಸಬಹುದು. ಸರ್ಕಾರಿ ಶಾಲೆಗಳ ಶಿಕ್ಷಕರು ಒಂದು ಮಟ್ಟದ ಶಿಕ್ಷಣ ಮತ್ತು ಬೋಧಿಸುವ ತರಬೇತಿಯನ್ನು ಪಡೆದವರು. ಖಾಸಗಿ ಶಾಲೆಗಳಲ್ಲಿ ಇಂಥ ಶಿಕ್ಷಕರ ಸಂಖ್ಯೆ ಕಡಿಮೆ. ಆದ್ದರಿಂದ ಅಸಮಾನತೆ ಕಡಿಮೆ ಮಾಡುವ ದೃಷ್ಟಿಯಿಂದ ನಾವು ಸರ್ಕಾರಿ ಶಾಲೆಗಳನ್ನು ಜವಾಬ್ದಾರಿಯುತಗೊಳಿಸಬೇಕಾದ ಅಗತ್ಯವಿದೆ ಎಂದು ತಿಳಿಯಬೇಕು.
ಉಂಬರ್ಟೋ ಇಕೊನ ಲೇಖನ ಖಾಸಗಿ ಶಾಲೆಗಳ ಪರಿಕಲ್ಪನೆಗೆ ಸಂಬಂಧಿಸಿದ ಗಾಢ ಚಿಂತನೆಗಳನ್ನು ಒಳಗೊಂಡಿದೆ. ಅಸಮಾನತೆಯನ್ನು ಸೃಷ್ಟಿಸುವ ಜಾಣತನ ಯೂರೋಪಿನ ದೇಶಗಳ ಶೈಕ್ಷಣಿಕ ವ್ಯವಸ್ಥೆಯಲ್ಲಿ ನೆಲೆಯೂರಿದಷ್ಟು ಆಳವಾಗಿ ಇನ್ನೂ ಭಾರತದ ಮಟ್ಟದಲ್ಲಿ ನೆಲೆಯೂರಿಲ್ಲ ಎಂಬುದನ್ನು ನೆನಪಿಟ್ಟುಕೊಂಡೇ ಅವನ ಚಿಂತನೆಗಳನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಆದರೆ ಯಾವ ಶಾಲೆಗೆ ತಮ್ಮ ಮಗುವನ್ನು ಕಳುಹಿಸಬೇಕೆಂಬ ತಾಯಿ-ತಂದೆಯ ನಿರ್ಧಾರಕ್ಕೂ ಮತ್ತು ಒಳ್ಳೆಯ ಶಿಕ್ಷಣವನ್ನು ಬಯಸುವ ಸರ್ಕಾರದ ಸ್ವಾತಂತ್ರ್ಯಕ್ಕೂ ಅಡ್ಡಿಯಾಗದಂತೆ ಅನುಸರಿಸಬಹುದಾದ ಮಧ್ಯಮ ಮಾರ್ಗವೊಂದರ ಸೂಚನೆ ಇಕೋನ ಲೇಖನದಲ್ಲಿ ಇದೆ. ಪ್ರತಿ ಮಗುವಿಗೂ ಯಾವ ಶಾಲೆಗೆ ಸೇರಬೇಕಾದರೂ ಸಾಧ್ಯವಿರುವ ಒಂದು ಕೂಪನ್ ಕೊಡಬೇಕೆಂದು ಇಕೋ ಹೇಳುತ್ತಾನೆ. ಅಂದರೆ ಮಗು ಖಾಸಗಿ ಶಾಲೆಗೆ ಹೋದರೂ ಸಾಮಾನ್ಯ ಶಾಲೆಗೆ ಹೋದರೂ ಫೀಸ್ ಅಷ್ಟೇ. ಇದರಿಂದ ಎಲ್ಲ ಸಮಸ್ಯೆಗಳೂ ಬಗೆಹರಿಯದಿದ್ದರೂ ಜ್ಞಾನವನ್ನೇ ಕಮರ್ಷಿಯಲೈಸ್ ಮಾಡುವ ವ್ಯವಸ್ಥೆಯೊಂದನ್ನು ಹಿಮ್ಮೆಟ್ಟಿಸಬಹುದು.
ತರಗತಿಯ ಒಳಗಿನ ವಿದ್ಯಾರ್ಥಿ-ಶಿಕ್ಷಕನ ಸಂಬಂಧವನ್ನು ಅದರ ಹೊರಗಿರುವ ಯಾರೂ ಕಾನೂನು ಮಾಡಿ ನಿರ್ಣಯಿಸುವುದು ಸಾಧ್ಯವಿಲ್ಲ. ಒಬ್ಬ ವಿದ್ಯಾರ್ಥಿಯಾಗಿಯೂ ಶಿಕ್ಷಕನಾಗಿಯೂ ಇದ್ದ ನನ್ನ ಅನುಭವದಿಂದ ಹೇಳಬೇಕಾದರೆ ಶಾಲೆಯಲ್ಲಿ ಒಳ್ಳೆಯದೊಂದು ಹೂವಿನ ತೋಟ, ಗಾಳಿ ಬೆಳಕು ಒಳಬರುವ ದೊಡ್ಡ ಕಿಟಕಿ-ಬಾಗಿಲುಗಳು, ಮಕ್ಕಳಿಗೆ ಕೂರಲು ಅನುಕೂಲವಾದ ವ್ಯವಸ್ಥೆ. ಕುಡಿಯಲು ನೀರು, ಒಳ್ಳೆಯ ಶೌಚಾಲಯ ಮತ್ತು ಪುಸ್ತಕಗಳು ಮಾತ್ರವಲ್ಲದೆ; ತಮ್ಮ ಬಿಡುವಿನ ವೇಳೆಯಲ್ಲಿ ಮಕ್ಕಳು ಕೇಳಿಸಿಕೊಳ್ಳಬಹುದಾದ ಒಳ್ಳೆಯ ಸಂಗೀತ, ನೋಡಬಹುದಾದ ಒಳ್ಳೆಯ ಸಿನೆಮಾಗಳು ಇರುವ ಒಂದು ಗ್ರಂಥಾಲಯವನ್ನು ಎಲ್ಲ ಸಾಮಾನ್ಯ ಶಾಲೆಗಳಲ್ಲೂ ಕಡ್ಡಾಯ ಮಾಡಿದರೆ ಪ್ರಾಯಶಃ ತರಗತಿಯೊಳಗಿನ ವಾತಾವರಣ ಈಗಿರುವುದಕ್ಕಿಂತ ಹೆಚ್ಚು ಕ್ರಿಯಾಶೀಲವಾಗುತ್ತದೆ. ಬೇಕೆಂದೇ ಅಸಮಾನತೆಯನ್ನು ಸೃಷ್ಟಿಸುವ ಉದ್ದೇಶವುಳ್ಳ ನಾವು ಇದನ್ನು ಈವರೆಗೂ ಮಾಡಿಲ್ಲ.
ಮಕ್ಕಳು ಇಂಥದ್ದೇ ಶಾಲೆಗೆ ಹೋಗಬೇಕೆಂಬ ನಿಯಮ ರೂಪಿಸಲು ನಮಗೆ ಸಾಧ್ಯವಿಲ್ಲ ಎಂದಾದರೆ ಸರ್ಕಾರಿ ಶಾಲೆಗಳು ಎಲ್ಲ ದೃಷ್ಟಿಯಿಂದಲೂ ಗುಣಮಟ್ಟದಲ್ಲಿ ಮತ್ತು ವಾತಾವರಣದಲ್ಲಿ ಶ್ರೇಷ್ಠವಾಗಿರುವಂತೆ ನೋಡಿಕೊಳ್ಳಬೇಕು. ಜೊತೆಗೆ ಎಲ್ಲ ಮಕ್ಕಳಿಗೂ ಗ್ರಹಿಕೆಗೆ ಅಗತ್ಯವಾದಷ್ಟು ಇಂಗ್ಲಿಷು ಪ್ರಾರಂಭದಿಂದಲೇ ಹೇಳಿಕೊಡಬೇಕು. ಭಾರತದ ಬಹುಭಾಷಿಕ ವಾತಾವರಣದಿಂದ ಇಲ್ಲಿನ ಮಕ್ಕಳಿಗೆ ಭಾಷೆಗಳನ್ನು ಕಲಿಯುವ ಕ್ರಿಯೆ ಸುಲಭ. ಇಂಗ್ಲಿಷ್ ಹೇಳಿಕೊಡುವ ಕ್ರಿಯೆಯೂ ಈ ಸಹಜತೆಯಲ್ಲಿ ಒಳಗೊಂಡರೆ ಆ ಭಾಷೆ ಕೃತಕವಾಗಿ ಅಸಮಾನತೆ ಸೃಷ್ಟಿಸುವ ಸಾಧನವಾಗದಂತೆ ತಡೆಯಬಹುದು.
ಶ್ರೀ ಶ್ರೀ ಗುರೂಜಿ ಸರ್ಕಾರಿ ಶಾಲೆಗಳ ಬಗ್ಗೆ ಏನನ್ನೋ ಹೇಳಿ ಎಲ್ಲರನ್ನೂ ಕಂಗೆಡಿಸುತ್ತಿರುವಂತೆ ಕಾಣುತ್ತದೆ. ಆದರೆ ನನ್ನ ಪ್ರಕಾರ ಅವರು ಮಹಾ ಸಂತರೂ ಅಲ್ಲ, ವಿದ್ಯೆಯ ವಿಷಯದಲ್ಲಿ ದೊಡ್ಡ ಜ್ಞಾನಿಗಳೂ ಅಲ್ಲ. ಆದ್ದರಿಂದ ಅವರು ಮುಂದಿಟ್ಟ ವಿಚಾರಗಳನ್ನು ಚರ್ಚಿಸುವುದರಿಂದ ಪ್ರಯೋಜನವಿಲ್ಲ. ಕೇವಲ ತಮಿಳು ಗೊತ್ತಿದ್ದ ರಮಣರೋ, ಕೇವಲ ಬಂಗಾಳಿ ಗೊತ್ತಿದ್ದ ರಾಮಕೃಷ್ಣರೋ ಇಂಥ ಒಂದು ಮಾತನ್ನು ಹೇಳುತ್ತಿರಲಿಲ್ಲ. ಆದರೆ ರಾಮಕೃಷ್ಣರು ತಮ್ಮ ಶಿಷ್ಯಂದಿರಿಗೆ ಇಂಗ್ಲಿಷ್ ಬಂದರೆ ಒಳ್ಳೆಯದೆಂದು ತಿಳಿದಿದ್ದರೆಂದು ಕೇಳಿದ್ದೇನೆ. ಅಷ್ಟನ್ನು ಬಯಸುವುದರಿಂದ ಯಾವ ದುಷ್ಪರಿಣಾಮವೂ ಇಲ್ಲ. ರಾಜಾಜಿಯವರು ಇಂಗ್ಲಿಷನ್ನು ಸರಸ್ವತಿಯ ವರದಾನ ಎಂದಿದ್ದರು. ಆದರೆ ಸರಸ್ವತಿ ಉದ್ದೇಶಪೂರ್ವಕವಾಗಿ ಖಾಸಗಿ ಶಾಲೆಗಳಲ್ಲಿ ಮಾತ್ರ ವರಗಳನ್ನು ನೀಡಬಲ್ಲವಳು ಎಂದು ನಾನು ತಿಳಿದಿಲ್ಲ. ಸರ್ಕಾರಿ ಶಾಲೆಗಳಲ್ಲಿ ನಕ್ಸಲೀಯರು ಹೆಚ್ಚಾಗುತ್ತಿದ್ದಾರೆ ಎನ್ನುವುದನ್ನು ಯಾವ ಅಂಕಿ ಅಂಶಗಳಿಂದ ಶ್ರೀ ಶ್ರೀ ಗುರೂಜಿ ಕಂಡುಕೊಂಡರೋ ಗೊತ್ತಿಲ್ಲ. ಆದರೆ ತುಂಬ ಶ್ರೀಮಂತ ಶಾಲೆಗಳಲ್ಲಿ ಮಾದಕ ವಸ್ತುಗಳ ದುರ್ವ್ಯವಹಾರ ನಡೆಯುತ್ತಿದೆ ಎಂದು ಬಹಳ ಜನ ತಿಳಿದಿದ್ದಾರೆ ಎಂಬುದಂತೂ ನಿಜ.

ಪ್ರಜಾವಾಣಿ ಸಾಪ್ತಾಹಿಕ ಪುರವಣಿಯಲ್ಲಿ ಖಾಸಗಿ ಶಾಲೆಗಳ ಕುರಿತ ಲೇಖನಕ್ಕೆ ಪ್ರತಿಕ್ರಿಯಿಸಿ ಬರೆದ ಬರಹ, 1-4-2012.

 

‍ಲೇಖಕರು G

August 23, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: