ಎಂ ಜಿ ಸುಖೇಶ್
ಒಮ್ಮೊಮ್ಮೆ ದಾರಿ ಕಳೆಯುತ್ತದೆ
ಅಥವಾ ಕಳೆದು ಹೋಗುತ್ತದೆ.
ಕೆಲವೊಮ್ಮೆ ದಾರಿ ಸರ್ಕಲ್ಲುಗಳಲ್ಲಿ
ಸುತ್ತುತ್ತಾ ಸುತ್ತುತ್ತಾ ಟ್ರಾಫಿಕ್
ಪೊಲೀಸನಿಗೆ ಲಂಚ ಕೊಡಿಸುತ್ತದೆ.
ಬಿಗ್ ಬಜಾರಿನಲ್ಲಿ ಮಾರಾಟವಾಗುವ
ಹೊಸ ಬೆಂಗಳೂರು
ನಿನ್ನೆಯ ಅನ್ನವೇ ಇಂದಿನ ಇಡ್ಲಿ
ಎನ್ನುವ ದರ್ಶಿನಿಗಳ ಮಧ್ಯೆ
ನಾನು ಬೈಕು ನಿಲ್ಲಿಸಿ ಹೆಲ್ಮೆಟ್ಟಿನ
ಜೊತೆ ಕನಸುಗಳ ಕಟ್ಟಿಟ್ಟು
ಶಾಪಿಂಗ್ ಹೋಗುತ್ತೇನೆ.
ಮಳೆ ಸುರಿದು ಕನಸುಗಳ
ತೊಳೆದು ಹೆಲ್ಮೆಟ್ಟಿನಲ್ಲಿ
ನೀರು ತುಂಬಿಟ್ಟಿರುತ್ತದೆ
ದರ್ಶಿನಿಯಲ್ಲಿ ಹಳೇ ತಂಬಿಟ್ಟಿರುತ್ತದೆ.
ಮಳೆ ತೊಳೆ ತೊಳೆದು ಕಪ್ಪಾದ
ರಸ್ತೆಗಳ ಮೇಲೆ ಬಿಳೀ ಕಾರುಗಳು
ಕಪ್ಪು ಟೈರುಗಳ ಊರುತ್ತಾ
ಸಾಗುತ್ತವೆ; ಕೈಲಾಸ್ ಬಾರ್
ಎಂಡ್ ರೆಸ್ಟಾರೆಂಟ್ ನಿಂದ
ಸಭ್ಯ ಜನ ಕಮ್ಯೂನಿಸಮ್ಮಿನ
ಮಾತಾಡುತ್ತಾರೆ; ಹೆಡ್ ಲೈಟಿನ ಬೆಳಕು
ಸಾಲದಾದಾಗ ಸಿಗರೇಟಿನ
ಮೊರೆ ಹೋಗುತ್ತಾರೆ.
ಸೀತಾ ಸರ್ಕಲ್ಲಿನಲ್ಲಿ ಪದೇ ಪದೇ
ಬೈಕು ಆಫಾಗುತ್ತದೆ
ಮತ್ತು ಹೃದಯ ವೀಕಾಗುತ್ತದೆ.
ಎಚ್ ಎನ್ ಫ್ಲೈ ಓವರಿಂದ ಜಾರಿದ
ಕನಸುಗಳಿಗೆ ಲಾಲ್ ಭಾಗಿನಲ್ಲಿ
ತುರ್ತು ಚಿಕಿತ್ಸೆ ತೊರೆಯುತ್ತದೆ.
ಲಾಲ್ ಭಾಗ್ ಕೆರೆ ತೆರೆ ತೆರೆಗಳಾಗಿ
ಮೆಲ್ಲಗೆ ತೆರೆದುಕೊಳ್ಳುತ್ತದೆ.
ದೂರದೂರಿನಿಂದ ಬರುವ
ಯಾತ್ರಿ ಮೋಡಗಳು ಮೂಕವಾಗುತ್ತವೆ
ಮತ್ತು ಕೆರೆಯೆಂಬ ಮಾಯಾ
ಕನ್ನಡಿಯಲ್ಲಿ ಸ್ನೋ ಪೌಡರು
ಹಚ್ಚಿಕೊಳ್ಳುತ್ತ ಸಿಂಗಾರಗೊಳ್ಳುತ್ತವೆ.
ಗಾಂಧೀಬಜಾರಿನಲ್ಲಿ ಚಪ್ಪಲಿ ಅಂಗಡಿಗಳು
ಹೆಚ್ಚಾಗುತ್ತವೆ ಮತ್ತು
ಪುಸ್ತಕದಂಗಡಿಗಳು ಪೆಚ್ಚಾಗುತ್ತವೆ.
ಶಾಸ್ತ್ರಿಗಳ ಮೊಮ್ಮಗ ಆಗುಂಬೆಯ
ಮಳೆಯಲ್ಲಿ ಕುಣಿಯುತ್ತಾನೆ
ಬಂದೂಕಿನ ಗುರಿ ಕಲಿಯುತ್ತಾನೆ.
ರಾತ್ರಿಗಳಲ್ಲಿ ಚಿಕ್ಕಿಗಳಿಗೆ ಗುರಿಯಿಟ್ಟು
ಬೀಳಿಸಿ ಕವಿತೆಗಳ ಅಲಂಕರಿಸುತ್ತಾನೆ.
ಬರೆಯುತ್ತಾ ಬರೆಯುತ್ತಾ ಖಾಲಿಯಾಗುತ್ತಾನೆ
ಒಂದಿನ ಸುಮ್ಮನೆ ಮಾಯವಾಗುತ್ತಾನೆ.







ತುಂಬ ಇಷ್ಟವಾದ ಕವಿತೆ.