'ಅಷ್ಟಷಟ್ಪದಿಯಲ್ಲಿ ಇಷ್ಟಮಿತ್ರರ ಕುರಿತು' – ಜೋಗಿ

ಜೋಗಿ

ಎಚ್ ಎಸ್ ವೆಂಕಟೇಶಮೂರ್ತಿ ಅವರನ್ನು ಮೆಚ್ಚುವುದಕ್ಕೆ ವಿಶೇಷ ಕಾರಣಗಳು ಬೇಕಾಗಿಲ್ಲ. ಅವರ ಕಾವ್ಯ ಪ್ರೀತಿ, ಓದುಗರ ಮೇಲಿರುವ ಅಕ್ಕರೆ, ತಮ್ಮ ಕೈಂಕರ್ಯದ ಮೇಲಿರುವ ಶ್ರದ್ಧೆ, ತಾನು ತಿಳಿದದ್ದನ್ನು ಜೊತೆಗೆ ಮತ್ತೊಮ್ಮೆ ತಿಳಿಯುವ ಹುಮ್ಮಸ್ಸು ಅವರನ್ನು ನಮ್ಮ ಕಾಲದ ಪ್ರೀತಿಯ ಕವಿಗಳನ್ನಾಗಿಸಿದೆ. ಅವರದು ಪ್ರಯೋಗಶೀಲ ಮನಸ್ಸು ಕೂಡ. ಕವಿ ತನ್ನ ಸಮಕಾಲೀನರಿಗಾಗಿ ಬರೆಯುವ ಹೊತ್ತಿಗೇ, ತನ್ನ ಮುಂದಿನ ಜನಾಂಗಕ್ಕಾಗಿಯೂ ಬರೆಯುತ್ತಾನೆ ಎಂಬುದನ್ನು ಬಲ್ಲ ಕವಿಗಿರುವ ದೂರದರ್ಶಿತ್ವ ಮತ್ತು ಹುಡುಕಾಟದ ನೆಲೆ ಅವರ ಎಲ್ಲಾ ಪದ್ಯಗಳಲ್ಲೂ ಕಾಣಬಹುದು. ಯಾವತ್ತೂ ಎಚ್ ಎಸ್ ವೆಂಕಟೇಶಮೂರ್ತಿ ಹಗುರವಾದದ್ದನ್ನು ಬರೆಯುವುದಕ್ಕೆ ಹೋಗಲಿಲ್ಲ, ಭಾರವಾದದ್ದನ್ನೂ ಬರೆಯಲಿಲ್ಲ. ಪುಟ್ಟ ಹೆಣ್ಣು ಮಗುವಿನ ಸೊಂಟದಲ್ಲಿರುವ ಅವಳಿಗಿಂತ ಪುಟ್ಟ ತಮ್ಮನ ಭಾರ, ಆತನ ಮೇಲಿನ ಅಕ್ಕರೆಯಿಂದ ಸಹನೀಯವಾಗುತ್ತದಲ್ಲ, ಹಾಗೇ ಎಚ್‌ಎಸ್‌ವಿ ಅವರ ಗಂಭೀರವಾದ ಪದ್ಯಗಳೂ ಕೂಡ ನಮಗೆ ಆಪ್ತವಾಗುತ್ತಾ ಹೋಗುತ್ತವೆ. ಅಂತರಾರ್ಥವನ್ನು ಬಿಟ್ಟುಕೊಡುವುದಕ್ಕಿಂತ ಅಂತರಾತ್ಮದ ಪಿಸುಮಾತನ್ನು ಕೇಳಿಸಿಕೊಳ್ಳುವುದೇ ಕವಿಯನ್ನು ನಮ್ಮವನ್ನಾಗಿ ಮಾಡಿಕೊಳ್ಳುವ ಮಾರ್ಗವಲ್ಲವೇ?
ಕಳೆದ ಒಂದೆರಡು ದಶಕಗಳಲ್ಲಿ ಎಚ್‌ಎಸ್‌ವಿ ಅಕ್ಷರಕ್ರಾಂತಿಯನ್ನೇ ಮಾಡಿದ್ದಾರೆ. ಕಂಡದ್ದನ್ನು ಮತ್ತೆ ಮತ್ತೆ ಕಾಣುವ , ಕಾಣಿಸುವ ಆ ಮೂಲಕ ಮತ್ತೇನನ್ನೋ ನಾವು ಕಾಣುವಂತೆ ಮಾಡುವ ಕೆಲಸವನ್ನೂ ಅವರು ಅಷ್ಟೇ ಪ್ರೀತಿಯಿಂದ ಮಾಡಿಕೊಂಡು ಬಂದಿದ್ದಾರೆ. ಮಕ್ಕಳಿಗಾಗಿ ಬರೆದ ಪದ್ಯಗಳು, ಸಿಂದಾಬಾದನ ಆತ್ಮಕತೆ, ಭಾವಗೀತೆಗಳು, ಕೃಷ್ಣನಿಗೆ ಮನಸೋತ ಪದ್ಯಗಳು, ರಾಧಾ-ಕೃಷ್ಣರ ತೂಗುಮಂಚದ ಸಾಲುಗಳು, ಪಂಪನನ್ನು ಕನ್ನಡಕ್ಕೆ ತಂದ ಪ್ರೀತಿ, ಕುಮಾರವ್ಯಾಸನ ಪದ್ಯವನ್ನಿಟ್ಟುಕೊಂಡು ಆ ಪದ್ಯದ ಅನುಭವವನ್ನು ವಿಸ್ತರಿಸಿದ ಪರಿ, ಅನಾತ್ಮಕಥನದ ಮೂಲಕ ಆತ್ಮಕತೆಯಾಗಬಹುದಾಗಿದ್ದನ್ನು ಸಾರ್ವತ್ರಿಕವಾಗಿಸಿದ ಪರಿ- ಈ ಎಲ್ಲದರಲ್ಲೂ ಕಂಡುಬರುವ ಪ್ರಯೋಗಶೀಲತೆ ಅವರನ್ನು ನಮ್ಮ ನಡುವಿನ ತುಂಬುಯೌವನದ ಕವಿಯನ್ನಾಗಿಸಿದೆ. ಎಚ್‌ಎಸ್‌ವಿ ಯಾರ ಹಂಗಿಗೂ ಕಾಯದೇ, ಯಾರ ಮೆಚ್ಚುಗೆಗೂ ಕಾತರಿಸದೇ, ಯಾವ ಟೀಕೆಗೂ ಕುಂದದೇ ಹೊಸ ಹೊಸ ಹೂವುಗಳನ್ನು ಅರಳಿಸುತ್ತಲೇ ಬಂದಿದ್ದಾರೆ. ಕವಿಗೆ ಏಕಾಂತವೆಂಬುದು ಮಿತ್ರ ಮತ್ತು ಶತ್ರು. ಎಚ್‌ಎಸ್‌ವಿಯವರಿಗೆ ಏಕಾಂತವೇ ಇಲ್ಲವೇನೋ? ಸದಾ ಕಾವ್ಯಕನ್ನಿಕೆ ಅವರ ಜೊತೆಗೇ ಸಲ್ಲಾಪದಲ್ಲಿ ತೊಡಗಿಕೊಂಡಂತಿದೆ.
ಇದೀಗ ಎಚ್‌ಎಸ್‌ವಿ ಸುನೀತಭಾವ ಎಂಬ ಹೊಸ ಕಾವ್ಯಸರಣಿಯನ್ನು ಹೊರತಂದಿದ್ದಾರೆ. ಅಷ್ಟಷಟ್ಪದಿಯಲ್ಲಿ ಇಷ್ಟಮಿತ್ರರನ್ನು ಕಟ್ಟಿಹಾಕುವ ಕೆಲಸವನ್ನು ಅವರು ಎಷ್ಟು ಪ್ರೀತಿಯಿಂದ ಮಾಡಿದ್ದಾರೆ ಎನ್ನುವುದನ್ನು ನೋಡಿದಾಗ ಅಚ್ಚರಿಯಾಗುತ್ತದೆ. ಸುನೀತ ಎಂದೂ ಕರೆಸಿಕೊಳ್ಳುತ್ತಿದ್ದ ಸಾನೆಟ್ಟು, ದಶಕಗಳ ಹಿಂದೆಯೇ ಕನ್ನಡಕ್ಕೆ ಬಂದು, ಕ್ರಮೇಣ ಕಣ್ಮರೆಯಾಗಿ ಹೋದ ಕಾವ್ಯಪ್ರಕಾರ. ಅದು ಕೇವಲ ಪ್ರಯೋಗವಾಗಿ ಇಲ್ಲಿಗೆ ಕಾಲಿಟ್ಟು ಕಣ್ಮರೆಯಾಯಿತು ಎನ್ನಬಹುದು. ಷೇಕ್ಸ್‌ಪಿಯರನ ಸಾನೆಟ್ಟುಗಳನ್ನು ಸುನೀತ ಎಂಬ ಹೆಸರಲ್ಲಿ ಅನುವಾದಿಸಿದ್ದು, ಕನ್ನಡದ್ದೇ ಆದ ಸುನೀತಗಳು ಹುಟ್ಟಿಕೊಂಡದ್ದು, ಹೆಚ್ಚಿನ ಸಂದರ್ಭಗಳಲ್ಲಿ ಅವು ಬೇರೆ ಕಾವ್ಯ ಮಾದರಿಗಿಂತ ಭಿನ್ನವಾದದ್ದೇನನ್ನೂ ಸಾಽಸದೇ ಹೋದದ್ದು ಕೂಡ ಸುನೀತದ ಅಕಾಲಿಕ ನಿಷ್ಕ್ರಮಣಕ್ಕೆ ಕಾರಣ ಇರಬಹುದು. ಇಂಗ್ಲಿಷಿನಲ್ಲೂ ಸಾನೆಟ್ ಬಹುಕಾಲ ಬಾಳಲಿಲ್ಲ. ಈಗಂತೂ ಅದು ಇಂಗ್ಲೆಂಡಿನಲ್ಲಿ ಚಾಲ್ತಿಯಲ್ಲಿ ಇಲ್ಲವೇ ಇಲ್ಲ.

ಅಂಥದ್ದೊಂದು ಕಾವ್ಯಕಟ್ಟುವ ಕ್ರಮವನ್ನು ಕನ್ನಡಕ್ಕೆ ಮರಳಿ ಕೈ ಹಿಡಿದು ಕರಕೊಂಡು ಬರುವುದು ದುಸ್ಸಾಹಸವೂ ಹೌದು, ಸವಾಲೂ ಹೌದು. ಆ ಸವಾಲನ್ನು ಎಚ್ ಎಸ್ ವೆಂಕಟೇಶಮೂರ್ತಿ ದಿಟ್ಟವಾಗಿ ಎದುರಿಸಿದ್ದಾರೆ. ತಮ್ಮ ಪ್ರಯತ್ನದಲ್ಲಿ ಸಾರ್ಥಕತೆಯನ್ನೂ ಕಂಡಿದ್ದಾರೆ. ಹದಿನಾಲ್ಕು ಸಾಲುಗಳಲ್ಲಿ ೬೮ ಮಂದಿ ಇಷ್ಟಮಿತ್ರರ, ಪೂರ್ವಸೂರಿಗಳ, ಕಿರಿಯ ಗೆಳೆಯರ, ಮೆಚ್ಚಿನ ಲೇಖಕರ ಚಿತ್ರವೊಂದನ್ನು ಒಳಗಣ್ಣಿನಲ್ಲಿ ಅಳೆದು, ಸಹವಾಸದಿಂದ ತಿಳಿದು, ಅಕ್ಕರೆಯ ಕುಂಚದಲ್ಲಿ ಅದ್ದಿ, ಕಾಲವೆಂಬ ಕ್ಯಾನ್‌ವಾಸಿನ ಮೇಲೆ ಮೂಡಿಸಿದ್ದಾರೆ. ಸಮಕಾಲೀನರನ್ನೋ ತಾನು ಪ್ರೀತಿಸುವ ಜೀವಗಳನ್ನೋ ಗುರುಗಳನ್ನೋ ಕುರಿತು ಕನ್ನಡದಲ್ಲಿ ಎಲ್ಲಾ ಕವಿಗಳೂ ಅಲ್ಲೊಂದು ಇಲ್ಲೊಂದು ಪದ್ಯ ಬರೆದದ್ದಿದೆ. ಗುರುದಕ್ಷಿಣೆಯಾಗಿ ಸ್ನೇಹಪೂರ್ವಕವಾಗಿ ಅಭಿನಂದನೆಯಾಗಿ ಭಾಷ್ಪಾಂಜಲಿಯಾಗಿ ಸಹಕವಿಗಳ, ಸಹಮಿತ್ರರ ಕುರಿತ ಪದ್ಯಗಳು ಬಂದಿವೆ.
ಆದರೆ, ಎಚ್‌ಎಸ್‌ವಿ ಅವನ್ನೆಲ್ಲ ಮೀರಿಸುವಂಥ ಸಾಧನೆಯನ್ನು ಮಾಡಿದ್ದಾರೆ. ಇವು eಪಕ ಚಿತ್ರಶಾಲೆಯಲ್ಲಿ ರಚಿಸಿದಂಥ ಕಲಾಕೃತಿಗಳು. ವ್ಯಕ್ತಿಚಿತ್ರಗಳು ಹೌದಾದರೂ ಕೇವಲ ವ್ಯಕ್ತಿಚಿತ್ರಗಳಷ್ಟೇ ಅಲ್ಲ. ಶ್ರೇಷ್ಟ ಕಲಾವಿದನ ಕುಂಚದಲ್ಲಿ ಅರಳುವ ಪೋರ್ಟ್‌ರೈಟ್‌ಗಳಂಥ ರಚನೆಗಳೆಂದು ಕರೆಯಬಹುದಾದರೂ ಅದಷ್ಟೇ ಅಲ್ಲ. ಇವು ಕಾವ್ಯರೂಪದಲ್ಲಿರುವ ಟಿಪ್ಪಣಿಗಳಲ್ಲ. ಗುರುತು ಹಿಡಿಯಲು ನೆರವಾಗುವ ಮಾಹಿತಿಗಳಲ್ಲ. ನಾವೂ ಕಾಣಬಹುದಾದದ್ದು ಮಾತ್ರ ಇಲ್ಲಿಲ್ಲ. ಇವು ’ಸಹವಾಸದೋಷ’ದ -ಲಗಳು. ಸಹವಾಸದೋಷ ಅನ್ನುವುದನ್ನು ನೀವು ಅಪಾರ್ಥ ಮಾಡಿಕೊಳ್ಳಬೇಕಾಗಿಲ್ಲ. ಅದು ಸಕಾರಾತ್ಮಕವಾಗಿ ಬಳಕೆಯಾಗಿರುವ ಪದ. ಒಡನಾಡಿದ್ದರಿಂದ ಹುಟ್ಟಿಕೊಂಡ ಸಾಲುಗಳು. ಇವನ್ನು ಬಗೆದು ತೆಗೆಯುವುದಕ್ಕೆ ಕೇವಲ ಸ್ನೇಹದ ಬಲವೋ ಒಡನಾಟದ ಒಲವೋ ಸಾಲದು. ಕಾವ್ಯದ ವರವೂ ಬೇಕು. ವ್ಯಕ್ತಿಗಳೆಲ್ಲ ಅಕ್ಷರಗಳಾಗಿ ದೊರೆಕೊಳಬೇಕು. ಆ ಅಕ್ಷರಗಳ ಮೂಲಕವೇ ಸಂಬಂಧ ಸ್ಥಾಯಿಯಾಗಬೇಕು. ಆ ಸಂಬಂಧದ ಜೊತೆಗೇ ಅನುಬಂಧವೂ ದಾಖಲಾಗಬೇಕು.
ಒಂದು ರೀತಿಯಲ್ಲಿ ಇವು ಆತ್ಮಚರಿತ್ರೆಯೂ ಹೌದು. ಇಲ್ಲಿರುವ ಪ್ರತಿಯೊಂದು ಸಾನೆಟ್ಟಿನಲ್ಲೂ , ಎಚ್‌ಎಸ್‌ವಿ ತಾವು ಯಾರ ಬಗ್ಗೆ ಬರೆದಿದ್ದಾರೋ ಅವರು ಇರುವಂತೆ, ಎಚ್‌ಎಸ್‌ವಿ ಕೂಡ ಇದ್ದಾರೆ. ಓದುಗರಾದ ನಮಗೆ ಅವರಿಬ್ಬರೂ ಕಲ್ಲು ಬೆಂಚಿನ ಮೇಲೆ, ಹುಲ್ಲುಗಾವಲಿನಲ್ಲೋ, ಮನೆಯ ತೂಗುಮಂಚದ ಮೇಲೋ, ರವೀಂದ್ರ ಕಲಾಕ್ಷೇತ್ರದ ಕಲ್ಲುಮೆಟ್ಟಿಲಲ್ಲೋ ಕೂತಿರುವಂತೆ ಭಾಸವಾಗುತ್ತದೆ. ಅವರಿಬ್ಬರನ್ನೂ ನಾವು ಏಕಕಾಲಕ್ಕೆ ನೋಡುತ್ತಾ, ಅವರ ಸ್ನೇಹವನ್ನು ಇವರ ಸಾಲುಗಳಲ್ಲಿ, ಅವರ ಸಹವಾಸದ ಸಂತೋಷವನ್ನು ಇವರ ರೂಪಕದಲ್ಲಿ ಕಾಣುತ್ತಾ ಹೋಗುತ್ತೇವೆ.
ಸುನೀತಭಾವ ಕನ್ನಡಕ್ಕಷ್ಟೇ ಅಲ್ಲ, ಯಾವುದೇ ಭಾಷೆಗೂ ಹೊಸ ಕ್ರಮದ ಕವಿತೆ. ಇದೊಂದು ಪ್ರಯೋಗ ಅನ್ನುವುದು ತಪ್ಪಾಗುತ್ತದೆ. ಇಂಥದ್ದನ್ನು ಮತ್ತೊಬ್ಬರು ಮಾಡಲು ಸಾಧ್ಯವಿಲ್ಲದೇ ಇರುವುದರಿಂದ ಇದು ಅಭೂತಪೂರ್ವ ಕೂಡ. ಹೀಗಾಗಿಯೇ ಈ ಸಂಕಲನವನ್ನು ಓದುತ್ತಿದ್ದಂತೆ, ನಮ್ಮ ಮೆಚ್ಚಿನ ಸಾಹಿತಿಗಳೂ ಕವಿಗಳೂ ಸಹೃದಯರೂ ಹಿರಿಯರೂ ಕಿರಿಯರೂ ನೆರೆದಂಥ ಸಾಹಿತ್ಯ ಸರಸ್ವತಿಯ ನಡುಮನೆಗೆ ಕಾಲಿಟ್ಟ ಅನುಭವವಾಗುತ್ತದೆ. ಅತ್ತ ತಿರುಗಿದರೆ ಆಮೂರ, ಇತ್ತ ತಿರುಗಿದರೆ ಚಂಪಾ, ಅಲ್ಲಿ ನೋಡಿದರೆ ಅಡಿಗರು, ಇಲ್ಲಿ ಕಣ್ಣುಹಾಯಿಸಿದರೆ ಕಾರಂತರು, ಒಂಚೂರು ಹಣಿಕಿಹಾಕಿದರೆ ತಿರುಮಲೇಶರು, ಹಾಗೇ ಕತ್ತು ಬಾಗಿಸಿ ನೋಡಿದರೆ ಜಿಎಸ್ಸೆಸ್, ಅರೇ ಇದು ದೇವನೂರೇ, ಅವರು ನಿಸಾರೇ? ಅಲ್ಲಿ ಅದೋ ಡುಂಡಿಯೇ, ಇಲ್ಲಿರೋದು ಗಿರಡ್ಡಿಯೇ?

****

ದಾಸರು ತಾವು ಕಂಡ ದೇವರನ್ನು ಪದಗಳಲ್ಲಿ ಸೆರೆಹಿಡಿಯಲು ವಿಚಿತ್ರ ಸಾಹಸಗಳನ್ನು ನಡೆಸಿದ್ದನ್ನು ನಾವು ಓದಿದ್ದೇವೆ. ಕೃಷ್ಣಮೂರ್ತಿ ಕಣ್ಣಮುಂದೆ ನಿಂತಿದಂತಿದೆ ಎಂಬ ದಾಸರ ಪದವನ್ನೇ ನೋಡಿ.
ಮಸ್ತಕದಲ್ಲಿ ಮಾಣಿಕದ ಕಿರೀಟ
ಕಸ್ತೂರಿ ತಿಲಕದಿಂದೆಸೆವ ಲಲಾಟ
ಶಿಸ್ತಿಲಿ ಕೊಳಲನೂದುವ ಓರೆನೋಟ
ಕೌಸ್ತುಭ ಎಡಬಲದಲ್ಲಿ ಓಲಾಟ
ಈ ಸಾಲುಗಳನ್ನು ಓದುತ್ತಿದ್ದಂತೆ ನಮ್ಮ ಮುಂದೊಂದು ಚಿತ್ರ ಬರುತ್ತದೆ. ಅದು ಯಾರೂ ಕಾಣದ, ವೇದಗೋಚರನ ಚಿತ್ರ. ಆದರೆ ಎಚ್‌ಎಸ್‌ವಿ ಅಷ್ಟು ಸುಲಭವಾಗಿ ತಮ್ಮ ಇಷ್ಟಮಿತ್ರರನ್ನು ಕಣ್ಣಿಗೆ ಕಟ್ಟುವಂತೆ ತೋರಿಸಿಕೊಡಲಾರರು. ಏಕೆಂದರೆ ಅವರು ಯಾರ ಕುರಿತೂ ಹೇಳಲು ಹೊರಡುತ್ತಾರೋ, ಅಂಥವರನ್ನು ನಾವೂ ಕಂಡಿದ್ದೇವೆ. ನಾವು ಕೂಡ ಕಂಡಿರುವ ಅವರ ಮಿತ್ರರನ್ನು ಅವರು ಕಂಡ ಹಾಗೆ ನಮ್ಮ ಮುಂದೆ ಕಟ್ಟಿಕೊಡುವ ಹೊತ್ತಿಗೆ ಅವರು ನಾವು ಕಂಡವರಂತೆಯೂ ಇರಬೇಕು. ಈ ಸವಾಲಿನೊಂದಿಗೆ ಸುನೀತ ಭಾವದ ಕಷ್ಟ ಶುರುವಾಗುತ್ತದೆ. ಹದಿನಾಲ್ಕು ಸಾಲುಗಳಲ್ಲಿ ಕಟ್ಟಿಕೊಟ್ಟ ವ್ಯಕ್ತಿತ್ವವನ್ನು ಇದು ಅವರಲ್ಲವೇ ಅಲ್ಲ ಹೋಗ್ರೀ ಅಂತ ಓದುಗ ತಳ್ಳಿಹಾಕಿದರೂ, ಇದು ಸುನೀತವೇ ಅಲ್ಲ, ಕೊನೆಯ ಎರಡು ಸಾಲುಗಳಲ್ಲಿ ಹೊಸದೊಂದು ದರ್ಶನ ಇಲ್ಲ ಅಂತ ಹೇಳಿದರೂ- ಈ ಕಾವ್ಯದ ಅಸ್ತಿತ್ವಲೇ ಅಲ್ಲಾಡಿದಂತೆ.
ಹಾಗಾಗದಂತೆ ಮಾಡಿರುವುದು ಎಚ್‌ಎಸ್‌ವಿ ಸಾಧನೆ. ಕೇವಲ ಕಟ್ಟೆಚ್ಚರದ ಕವಿಗಷ್ಟೇ ಅದು ಸಾಧ್ಯ. ಈವತ್ತು ಸಿಪ್ಪಲ್ಲಾಗಲೀ ಗಾಸಿಪ್ಪಲ್ಲಾಗಲೀ ಆಸಕ್ತಿ ಕಳಕೊಳ್ಳದ ತತ್ಪರಾಸಕ್ತಿ ಅನ್ನುತ್ತಿದ್ದಂತೆ ಕಣ್ಮುಂದೆ ಐದಾರು ಚಿತ್ರಗಳು ಹಾದುಹೋಗುತ್ತವೆ. ನಿಮ್ಮ ನುಡಿಕಿಡಿಗೆ ಹೊಗೆಯಿಲ್ಲ, ಇರುವುದು ಕುಲುಕುಲು ನಗೆ ಅನ್ನುವಾದ ಮೂರು ಚಿತ್ರಗಳು ಮಾಯವಾಗಿ ಎರಡಷ್ಟೇ ಉಳಿಯುತ್ತದೆ.
ನೀವು ರೈಲಲ್ಲಿ ಬೇಕಂತಲೇ ಮರೆತು ಬಂದ ತಲೆ ತಿನ್ನುವ
ಕೆಲವು ಪುಸ್ತಕ ಕಟ್ಟು, ಮತ್ತೆ ಬೆಳಗಾಗ ಧುತ್ತೆಂದು ನಿಮ್ಮ ಅಂಗ-
ಳದಲ್ಲಿ ಪ್ರತ್ಯಕ್ಷ. ಬಿಟ್ಟರೂ ಬಿಡದ ಮಾಯಿ.
ಎಂಬ ಸಾಲು ಓದುತ್ತಿದ್ದಂತೆ ಮತ್ತೊಂದು ಮುಖವೂ ಎಲಿಮಿನೇಟ್ ಆಗಿ, ಗಿರಡ್ಡಿ ಥಳಥಳ ಹೊಳೆದು, ಅವರ ಓರೆನಗೆ ನಮ್ಮ ಮುಖದಲ್ಲೂ ಮಿನುಗಿ ನಿರಾಳ. ಇಷ್ಟು ಸರಳವಾಗಿ ಹೇಳಿಬಿಟ್ಟರಾ ಎಂದು ನಿಸೂರಾಗುವ ಕ್ಷಣದಲ್ಲೇ ಮತ್ತೊಂದು ಬೆರಗಿನ ಸಾಲು ಪ್ರತ್ಯಕ್ಷ: ಎತ್ತರದ ಮರಕ್ಕೆ ಒಣಹಾಕಿದ ನೆರಳಿನ ಹಾಗೆ ನಿಮ್ಮ ಪ್ರಬಂಧ. ಈ ಸಾಲಿಗೋ ಮತ್ತೆ ಮತ್ತೆ ಹೊಸತಾಗಿ ಹುಟ್ಟುವ ಗುಣ. ಬೇಕಾದಾಗೆಲ್ಲ ಚಪ್ಪರಿಸಬಹುದಾದ ಅಪ್ಪಟ ಕವಿತಾ ಪೆಪ್ಪರಮಿಂಟು.
ಎಲ್‌ಎಸ್‌ಶೇಷಗಿರಿರಾಯರ ಕುರಿತೊಂದು ಸುನೀತದಲ್ಲಿ ಈಗ ಕಾಫಿಗೆ ಹೇಳಲು ಅವರು ಮುಂಭಾರದಲ್ಲಿ ಮುಗ್ಗುರಿಸುತ್ತಾ ನಡೆಯುವರು ಎಂಬ ಸಾಲು ಥಟ್ಟನೆ ಶೇಷಗಿರಿರಾಯರನ್ನು ಹೊಳೆಯಿಸುತ್ತದೆ.
ಕಾಲ
ಸಾಗಿದ ಹಾಗೆ ಬಾಗಿ ತೂಗಿದ್ದ ಅದೇ ತನು, ಹೆದೆಯೇರಿ
ಸಿದ ಧನು. ಕಡೆಗಣ್ಣಲ್ಲಿ ಹೂಡಿದ ಬಾಣ. ದೀಪದ ಕುಡಿ
ಯಲ್ಲಿ ನೋಟದ ಚಾಟಿ. ಬೆಂದ ಅನ್ನದ ಮುಚ್ಚುತಾಟಲ್ಲಿ
ಬೇಗುದಿ ಹನಿ
ಎನ್ನುತ್ತಿದ್ದಂತೆ ಪ್ರತಿಭಾ ಪ್ರತ್ಯಕ್ಷರಾಗುತ್ತಾರೆ. ಉಚ್ಛ್ರಾಯದಲಿ ನೀವೇ ಒಂದು ನಾಭೀಮೂಲದ ಬಯಲಿಗೆತ್ತಿದ ಬಾಗುಕಹಳೆ ಅನ್ನುತ್ತಿದ್ದಂತೆ ಸಿ ಅಶ್ವತ್ಥರು ತಮ್ಮ ಹಾರ್ಮೋನಿಯಂ ಪೆಟ್ಟಿಗೆ ಜೊತೆಗೆ ಹಾಜರು. ಎಲ್ಲೇ ನೀರಿಗಿಳಿದರೂ ತನ್ನ ತೌರಹೊಳೆ ಹರಿವು, ಆಳ, ಒಳಸುಳಿ, ತರತರಾಂಗ ಅನ್ನುತ್ತಿದ್ದಂತೆ ವೈದೇಹಿಯವರು ಸೀಟಿಗೆ ಬಂದು ಕೂರುತ್ತಾರೆ.
ಅದು ಎಚ್‌ಎಸ್‌ವಿ ಅವರ ಶಕ್ತಿ. ಸುನೀತಭಾವದಲ್ಲಿ ವಿನೀತ ಎಂಬ ಪದವೂ ತನಗೇ ಗೊತ್ತಿಲ್ಲದ ಹಾಗೆ ಸೇರಿಕೊಂಡಂತಿದೆ ಎಂಬುದಕ್ಕೆ ಸಾಕ್ಷಿಯಾಗಿ ಈ ಪದ್ಯಗಳಲ್ಲಿ ಸಿಟ್ಟಿಲ್ಲ, ಅಕ್ಕರೆಯಿದೆ. ಅಹಂಕಾರವಿಲ್ಲ, ವಿನಯವಿದೆ. ಪೂರ್ವಸೂರಿಗಳತ್ತ ಬೆರಗು, ಬಾಲಕರತ್ತ ಅಚ್ಚರಿಯ ನೋಟ- ಎರಡೂ ಮೇಳೈಸುವಂತೆ ಎಚ್‌ಎಸ್‌ವಿ ಈ ಕವಿತೆಗಳನ್ನು ನಮ್ಮ ಮುಂದಿಟ್ಟಿದ್ದಾರೆ.
ಇಲ್ಲಿ ರೂಪಕಗಳ ಮೂಲಕವೇ ಬಹುತೇಕರು ನಿಮ್ಮನ್ನು ಎದುರುಗೊಳ್ಳುತ್ತಾರೆ. ಇತ್ತೀಚಿನ ದಿನಗಳಲ್ಲಿ ಇಷ್ಟೊಂದು ರೂಪಕಗಳು ಒಂದೇ ಕವಿತೆಯಲ್ಲಿ ಅಡಕಿರಿದ ಪದ್ಯಗಳನ್ನು ನಾನಂತೂ ಓದಿಲ್ಲ. ಪಿಟೀಲಿನ ಮೇಲೆ ಸುಮ್ಮನಾಡುವ ಕಮಾನೇ, ಹೊಗೆಯಿಲ್ಲದುರಿಬಳ್ಳಿ ನಿಮ್ಮ ಕವಿತೆ, ತೂರುದೀಪ ತೋರುತ್ತಲೇ ಉಂಟು ನಿಷ್ಕರುಣೆಯಿಂದ ಬೆಳಕ, ಒದಗುವ ತನಕ ಶೀತಾಗ್ರಧ್ಯಾನಕಪೂರ್ವ ಸೂರ್ಯಟಂಕ… ಹೀಗೆ ಪ್ರತಿಯೊಂದು ಪದ್ಯವೂ ರೂಪಕರಾಗ.
ಇವುಗಳನ್ನು ಸುಮ್ಮನೆ ಓದುವಂತಿಲ್ಲ. ಒಂದು ರೀತಿಯಲ್ಲಿ ಇವು ಒಗಟಿದ್ದಂತೆ. ಮುಖಪುಟ ಹರಿದುಹೋದ ಪುಸ್ತಕದ ಹತ್ತಾರು ಸಾಲು ಓದಿ, ಲೇಖಕ ಯಾರು ಅಂತ ಊಹಿಸುವ ಜಾಣ ಓದುಗನಂತೆ ನೀವಿದನ್ನು ಓದಬೇಕು, ಓದುತ್ತಾ ಓದುತ್ತಾ ಅವರನ್ನು ನಿಮ್ಮವರನ್ನಾಗಿ ಮಾಡಿಕೊಳ್ಳಬೇಕು. ಅವರು ನಿಮ್ಮವರಾದ ಕಾರಣಕ್ಕೆ ಅವರ ಕೃತಿಗಳನ್ನೂ ಓದಬೇಕು. ಆ ಮೂಲಕ ಪರಂಪರೆಯನ್ನು ಮುಂದುವರಿಸುವ ಪ್ರಕ್ರಿಯೆಯ ಪಾಲುದಾರರಾಗಬೇಕು. ಅದು ಈ ಕವಿತೆಗಳ ಆಶಯ.
ಸುನೀತಭಾವ ನಮ್ಮಲ್ಲೂ ನಿಮ್ಮಲ್ಲೂ ಸ್ಪುರಿಸಲಿ.
 

‍ಲೇಖಕರು G

April 16, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

7 ಪ್ರತಿಕ್ರಿಯೆಗಳು

 1. Sarala

  HSV avaru bareda suneetagaLu adbhuta. ee suneetagaLa pustaka BA athava MA vidyarathigalige patyavagabeku.HSV avara abhimanigala paravagi ee lekhana bareda Jogi avarige thanks 🙂

  ಪ್ರತಿಕ್ರಿಯೆ
 2. ಮಾಲಿನಿ

  ಅವರ ಸುನೀತಗಳ ಹಿಂದೆ ನಿರಂತರ ತಪಸ್ಸಿದೆ, ಸಮಕಾಲೀನರಷ್ಟೇ ಅಲ್ಲದೆಇತ್ತೀಚಿನ ಕವಿಗಳ ಬಗ್ಗೆಯೂ ಅವರು ತೋರುವ ಪ್ರೀತಿ ಅನುಕರಣೀಯ. ಒಳ್ಳೆಯ ಬರಹ.

  ಪ್ರತಿಕ್ರಿಯೆ
 3. Bandesab Megeri

  ಬರಹ ತುಂಬಾ ಚೆನ್ನಾಗಿದೆ ಸರ್, ಸುಪರ್……

  ಪ್ರತಿಕ್ರಿಯೆ
 4. mallikarjun talwar

  yallavannu heliyuu helada hage, tilisiyuu tilisada hage nivu akshara katti kodo riti matra super. ms u jogi sir.

  ಪ್ರತಿಕ್ರಿಯೆ
 5. Anil Talikoti

  ವಿನೀತ ಸುನೀತದ ಭಾವ ಹರಳುಗಟ್ಟಿಸುವದು ಜೋಗಿಯ ನವನೀತ ಬರಹ -ನಯವಾದ ಬೆಣ್ಣೆಯಲ್ಲಿ ಹೊಸತನದ ಘಮಲು ಶಾಶ್ವತ.

  ಪ್ರತಿಕ್ರಿಯೆ
 6. Anil

  ಬರಹ ತುಂಬ ಚನ್ನಾಗಿದೆ! ಈ ಬರಹದಲ್ಲಿ ಸುನೀತದ ೧೪ ಸಾಲುಗಳನ್ನ ಅಷ್ಟಷಟ್ಪದಿ ಎಂದು ಬಿಡಿಸಿದ ಬಗ್ಗೆ ಕುತೂಹಲ. ಪುಸ್ತಕದಲ್ಲಿ ೮೬ ವ್ಯಕ್ತಿಗಳ ಕುರಿತು ಸುನೀತಗಳಿವೆಯೇನೋ ಎಂದುಕೊಂಡೆ ಆದರೆ ಬರಹ ೬೮ ಎನ್ನುತ್ತದೆ. ಹಾಗಾದರೆ ಇದು ಷಟ್ಪದಿಯಂತೆ ವಿವಿದ ಹೂವುಗಳಿಂದ ಸಂಗ್ರಹಿಸಿ ತಂದ ಮಕರಂದ ಎಂದು ಹೇಳುವದಕ್ಕೋಸ್ಕರವೇ ಈ ಅಷ್ಟಷಟ್ಪದಿಯ ಪ್ರಯೋಗ? ಇಷ್ಟವಾಯಿತು.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: