’ಜಾತಿ ಮತದ ಎಲ್ಲೆ ಮೀರಿ….’ – ಅರಕಲಗೂಡು ಜಯಕುಮಾರ್

ಅರಕಲಗೂಡು ಜಯಕುಮಾರ್

ಜಾತಿ ಸಮೀಕ್ಷೆಗೆಂದು
ಅಂಗಳ ತುಳಿದವನ ಜಾತಿ ಕೇಳಿ
ಬೆಚ್ಚಿ
ಜಾತ್ಯತೀತ ದೇಶದಲ್ಲಿ
ಜಾತಿ ಸಮೀಕ್ಷೆಯೇ? ಎಂದು
ಉಗಿದು ಕಳುಹಿಸಿ
ಅಂಗಳವನ್ನು ಗೋ ಮೂತ್ರದಿಂದ
ಶುಚೀಕರಿಸಿದರು
ಇದು ಪತ್ರಕರ್ತ ಮಿತ್ರ ಬಿ ಎಂ ಬಷೀರ್ ತಮ್ಮ ಫೇಸ್ ಬುಕ್ ವಾಲ್ ನಲ್ಲಿ ಹಾಕಿದ್ದ ಕವನ, ಓದಿ ಒಂದು ಕ್ಷಣ ಅವಾಕ್ಕಾದೆ. ಹಾಗೆಯೇ ಸಾಮಾಜಿಕ ಜಾಲತಾಣದಲ್ಲಿ ಸೂಕ್ಷ್ಮ ಸಂವೇದನೆಯ ಪತ್ರಕರ್ತ ಮಿತ್ರ ಸತೀಶ್ ಶಿಲೆ ಉಲ್ಲೇಖಿಸಿದ್ದ ಎರಡು ಪ್ರತಿಕ್ರಿಯೆಗಳು ಇದೆಂತಹ ವಿಪರ್ಯಾಸ ಎನಿಸಿ ಬಿಟ್ಟಿತು.
ಹೇಳಿಕೆ-1
“ನಮ್ಮದು ಜಾತ್ಯತೀತ ರಾಷ್ಟ್ರ. ಆದರೂ ಅದ್ಯಾಕೆ ನಮ್ಮ ಸರಕಾರ ಜಾತಿಗಣತಿ ಮಾಡುತ್ತಿದೆಯೋ.. ಅರ್ಥವಾಗ್ತಿಲ್ಲ”.
ಹೇಳಿಕೆ-2
“ಜಾತಿ ಗಣತಿ ಮೂಲಕ ರಾಜ್ಯವನ್ನು 100 ವರ್ಷ ಹಿಂದಕ್ಕೆ ಕೊಂಡೊಯ್ಯುತ್ತಿದೆ ಈ ಸರಕಾರ”.
ಈ ಮೇಲಿನ ಎರಡು ಹೇಳಿಕೆಗಳನ್ನು ಕೇಳಿದಾಕ್ಷಣ ಇವು ಯಾರೋ ಜಾತಿ ಮೀರಿದ ಮಹಾತ್ಮರು ಹೇಳಿದ ಮಾತುಗಳಿವು ಅನ್ನಿಸಬಹುದು. ಮೊದಲನೆಯದನ್ನು ಹೇಳಿದವರು ವೀರಶೈವ ಮಹಾಸಭಾದ ಕರ್ನಾಟಕ ರಾಜ್ಯ ಅಧ್ಯಕ್ಷರು. ಎರಡನೇ ಹೇಳಿಕೆ ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷರದು.
ದೇಶದಲ್ಲಿ ಸ್ವಾತಂತ್ರ್ಯಾ ನಂತರ ಮೊದಲ ಬಾರಿಗೆ ಪೈಲಟ್ ಯೋಜನೆಯಾಗಿ ರಾಜ್ಯದಲ್ಲಿ ಜಾತಿ ಜನಗಣತಿ ನಡೆಯುತ್ತಿದೆ. ಭಾರತ ಜಾತ್ಯಾತೀತ ರಾಷ್ಟವೆಂಬ ಹಣೆಪಟ್ಟಿ ಹಚ್ಚಿಕೊಂಡಿದ್ದರೂ ಸಹಾ ಸಾವಿರಾರು ಜಾತಿ, ಮತ,ಪಂಥ ಗಳಿರುವುದರಿಂದ ನೋವಿಗೆ ಒಳಗಾದವರು, ಅಸಹಾಯಕರು, ಆರ್ಥಿಕ ದುರ್ಬಲರನ್ನು ಗುರುತಿಸಿ ಕನಿಷ್ಠ ಸೌಲಭ್ಯಗಳನ್ನಾದರೂ ಒದಗಿಸಿ ಅವರನ್ನು ಸಮಾಜದ ಮುಖ್ಯ ವಾಹಿನಿಯಲ್ಲಿ ತರುವುದು ಜಾತಿ ಗಣತಿಯ ಮುಖ್ಯ ಉದ್ದೇಶ. ಆದರೆ ಇದು ನಿರ್ದಿಷ್ಟ ಉದ್ದೇಶ ಹೊರತು ಪಡಿಸಿದ ಮತ್ಯಾವುದೇ ಉದ್ದೇಶಗಳಿಗೆ ಬಳಕೆಯಾಗುತ್ತದೆ ಎಂಬ ಸಂಗತಿಯೂ ಆತಂಕವನ್ನು ಉಂಟು ಮಾಡಿದೆ. ಸಾಮಾಜಿಕ ವ್ಯವಸ್ಥೆಯಲ್ಲಿ ಇರುವ ಸ್ಥಾನಮಾನಗಳಿಂದಲೇ ಮುಖ್ಯ ವಾಹಿನಿಗೆ ಬಂದು ಬಹುಜನರ ಆಶಯಗಳನ್ನು ತುಳಿದು ಪ್ರತಿಷ್ಠಿತರಾಗಿರುವ ಅಲ್ಪ ಸಂಖ್ಯಾತ ಮಂದಿಗೆ ಜಾತಿ ಗಣತಿ ನಡುಕ ತಂದಿದೆ. ಆದಾಗ್ಯೂ ಹರಿದು ಹಂಚಿ ಹೋದ ಜಾತಿಯ ನಿಗಿ ನಿಗಿ ಕೆಂಡದುಂಡೆಗಳನ್ನು ಒಂದೇ ಮುಟಿಗೆ ತಂದು ಒಗ್ಗಟ್ಟು ಮತ್ತು ಪ್ರಾಬಲ್ಯ ತೋರಿಸುವ ಪ್ರಯತ್ನವನ್ನು ಎಲ್ಲಾ ಜಾತಿಗಳ ಮಹೋದಯರು ಸಮಾನವಾಗಿಯೇ ಮಾಡುತ್ತಿದ್ದಾರೆ ಎಂಬುದು ಸುಳ್ಳಲ್ಲ. ಸಮಾನತೆಯ ಸಮಾಜದ ಕನಸು ಕಂಡ ಡಾ ಭೀಮರಾವ್ ರಾಮ್ ಜಿ ಅಂಬೇಡ್ಕರ್ ರ 125ನೇ ಜನ್ಮ ದಿನಾಚರಣೆಯ ಈ ದಿನಗಳಲ್ಲೇ ಜಾತಿಗಣತಿ, ಜಾತೀಯ ಮನಸ್ಸುಗಳನ್ನು ಕದಲಿಸಿರುವುದು ಮತ್ತು ಆತಂಕ ದುಗುಡಕ್ಕೆ ಒಡ್ಡಿಕೊಳ್ಳುವಂತೆ ಮಾಡಿರುವುದು ಸೂಜಿಗವೇ ಸರಿ.

*******

ಇವತ್ತಿಗೆ ಸರಿಯಾಗಿ 15ದಿನಗಳ ಹಿಂದೆ ಓರ್ವ ಪರಿಚಿತ ದಲಿತ ಯುವಕನೋರ್ವ ನನ್ನ ಮುಂದೆ ಕುಳಿತಿದ್ದ, ಅವನು ಹೇಳಿದ್ದು ಕೇಳಿ ಮನಸ್ಸು ದುಗುಡಕ್ಕೆ ಒಳಗಾಗಿತ್ತು. ಹತ್ತಿರದ ಹಳ್ಳಿ ಯ ಆ ಹುಡುಗನ ಊರಿಗೆ ಕೆಂಪು ಬಸ್ಸು ಸೇವೆ ಹಲವು ದಿನಗಳಿಂದ ನಿಂತು ಹೋಗಿತ್ತಂತೆ ಸರಿ ಚೆನ್ನಾಗಿ ಕಲಿತು ಪ್ಯಾಟೆಯಲ್ಲಿ ವ್ಯವಹಾರ ಮಾಡುವ ದಲಿತ ಕೇರಿಯ ಆ ಹುಡುಗನಿಂದ ಅರ್ಜಿ ಬರೆಸಲು, ದಲಿತೇತರರಿಂದ ಬುಲಾವ್ ಬಂದಿದೆ. ಸರಿ ಏನು ಬರೀತಾನೆ? ಹೇಗೆ ಬರೀತಾನೆ ಅಂತ ತಿಳಿಬೇಕಲ್ಲ ಅದಕ್ಕೆ ಅವನನ್ನು ಊರಿನ ಪಟೇಲನ ಮನೆಗೆ ಕರೆದೊಯ್ಯಲಾಗಿದೆ, ಇವನೋ ಅರ್ಜಿ ಬರೆಯುವ ಉತ್ಸಾಹದಲ್ಲಿ ಪಟೇಲರ ನಡು ಮನೆಗೆ ತೆರಳಿ ಅಲ್ಲೇ ಕುಳಿತು ಕೊಳ್ಳಲು ಬಳಸುವ ಕುರ್ಚಿ ಕಂ ಮಂಚದ ಮೇಲೆ ಕುಳಿತಿದ್ದಾನೆ, ಅರ್ಜಿಯನ್ನು ಬರೆದು ಮುಗಿಸಿದ್ದಾನೆ. ನಾಲ್ಕಾರು ದಿನಗಳು ಕಳೆದಿರ ಬೇಕು, ಊರಿನ ಪಂಚಾಯ್ತಿ ನಡೆಯುವಾಗ ದಲಿತ ಕೇರಿಯ ಯುವಕನ ತಂದೆ, ನ್ಯಾಯ ಇತ್ಯರ್ಥ ಮಾಡುವ ಪಟೇಲನಿಗೆ ಏನೋ ಸಲಹೆ ಕೊಡಲು ಹೋಗಿದ್ದಾನೆ. ಅಷ್ಟಕ್ಕೆ ಪಟೇಲನಿಗೆ ಪಿತ್ಥ ನೆತ್ತಿಗೇರಿದೆ “ಲೋ ಕರಿಯ ಸುಮ್ನೆ ಕುಂತ್ಕಳೋ ಬೋ… ಮಗ್ನೆ ನೀನೇನು ಸರಿಯಾದನಾ ? ನಿನ್ ಮಗನಿಗೆ ಬುದ್ದಿ ಹೇಳೋಕಾಗಲ್ವಾ ? ಆ ರಂಡೆ ಮಗ ಅರ್ಜಿ ಬರೆಯೋಕೆ ಬಂದ ದಿನ ಮನೆ ವಳೀಕೇ ಬತಾನೆ, ಮಂಚದ ಮೇಲ್ ಕುತ್ಕತನೇ, ಅವತ್ತೆ ತಿಕ್ಕೆ ಉಗ್ದು ಬಹಿಷ್ಕಾರ ಹಾಕನ ಅಂತಿದ್ದೆ ಸುಮ್ನಾಗಿದೀನಿ ಬೋಸುಡಿ ಮಗನೆ” ಘಟನೆ ನಡೆದಾಗ ಈ ಹುಡ್ಗ ಅಲ್ಲೇ ಇದ್ನಂತೆ ಮನಸ್ಸಿಗೆ ತುಂಬಾ ನೊಂದುಕೊಂಡು ಬಂದಿದ್ದ.

*********

ಅವತ್ತು ಆಲೂಗಡ್ಡೆ ತುಂಬಿಕೊಂಡು ಬರುತ್ತಿದ್ದ ಮಿನಿಟ್ರಕ ವೊಂದು ಉರುಳಿದ ಸುದ್ದಿ ಬಂತು, ತಕ್ಷಣ ಸ್ಥಳಕ್ಕೆ ಧಾವಿಸಿದೆ. 3ಅಮಾಯಕ ಜೀವಗಳು ಸ್ಥಳದಲ್ಲೇ ಶವವಾಗಿದ್ದವು. ಪಕ್ಕದ ಹಳ್ಳಿಯ ಜನ ಆಗಲೇ ಅಲ್ಲೆಲ್ಲಾ ನೆರೆದಿದ್ದರು. ಸಾಲ-ಸೋಲ ಮಾಡಿ ನಾಲ್ಕಾರು ಮಂದಿ ರೈತ ಕೂರ್ಮಿಕರು ಆಲೂಗಡ್ಡೆ ಬಿತ್ತನೆ ಬೀಜವನ್ನು ತುಂಬಿಕೊಂಡು ಜೀಪ್ ಟ್ರಕ್ ಒಳಗೆ ಕೂರಲು ಸ್ಥಳವಿಲ್ಲದೇ ಹಿಂಬದಿಯ ಲೋಡ್ ಮೇಲೆ ಕೂತು ಪ್ರಯಾಣಿಸುತ್ತಿದ್ದಾರೆ. ತಿರುವೊಂದರಲ್ಲಿ ವೇಗವಾಗಿ ಸಾಗುತ್ತಿದ್ದ ಟ್ರಕ್ ಆಯಾ ತಪ್ಪಿ ಮಗುಚಿಕೊಂಡಿದೆ. ಮೂಟೆಗಳ ಮೇಲೆ ಕುಳಿತವರ ಮೇಲೆಯೇ ಮೂಟೆಗಳೆಲ್ಲ ಬಿದ್ದಿವೆ ಅರೆಜೀವವಾಗಿ ಸೆಣಸಿ ಪ್ರಾಣ ಬಿಟ್ಟಿದ್ದಾರೆ. ಜೀಪ್ ಬೀಳುತ್ತಿದ್ದಂತೆ ಸ್ಥಳಕ್ಕೆ ಬಂದ ಪಕ್ಕದ ಹಳ್ಳಿಯ ಆ ಜನ ಅಪಘಾತಕ್ಕೀಡದಾವರ ನೆರವಿಗೆ ಧಾವಿಸುವ ಮುನ್ನ, ದುರಂತಕ್ಕೆ ಸಿಲುಕಿದವರು ದಲಿತರು ಎಂದು ಗೊತ್ತಾಗುತ್ತಿದ್ದಂತೆಯೇ ಮೂಗು ಮುರಿದು ವಾಪಾಸಾಗಿದ್ದಾರೆ. ಅಲ್ಲಿದ್ದ ಜನರ ಪ್ರಕಾರ ತತ್ ಕ್ಷಣ ಸ್ಥಳಕ್ಕೆ ಬಂದ ಹಳ್ಳಿಗರು ಸಹಾಯ ಹಸ್ತ ಚಾಚಿದ್ದರೆ ಒಂದೆರೆಡಾದರೂ ಜೀವಗಳು ಉಳಿಯುತ್ತಿದ್ದವೇನೋ?

*********

ಭಾರತವನ್ನು ಮುಘಲರು 400ವರ್ಷಗಳ ಕಾಲ ಆಳಿದ ಇತಿಹಾಸವಿದೆ, ಹಾಗೆಯೇ ಬ್ರಿಟೀಷರು ಬರೋಬ್ಬರಿ 90ವರ್ಷಗಳ ಕಾಲ ಆಳಿದ್ದಾರೆ ಈ ಅವಧಿಯಲ್ಲಿ ಆಡಳಿತಾತ್ಮಕ ಸುಧಾರಣೆಗಳು, ಅಭಿವೃದ್ದಿಗಳು ಬದಲಾವಣೆ ಕಂಡಿವೆ. ಆದರೆ ಜಾತಿ ವ್ಯವಸ್ಥೆಯಲ್ಲಿ ಮಾತ್ರ ಬದಲಾವಣೆ ಮರಿಚಿಕೆಯಾಗಿಯೇ ಉಳಿದು ಹೋಗಿದೆ. ಮುಘಲರ ಅವಧಿಯಲ್ಲಿ ಪುರೋಹಿತ ಷಾಹಿ ನಿಲುವುಗಳಿಗೆ ಕಡಿವಾಣ ಹಾಕುವ ಪ್ರಯತ್ನವಾದರೂ ಮೂಲಭೂತವಾದಿ ಮನೋಧರ್ಮ ಮಾತ್ರ ಹಾಗೆಯೇ ಉಳಿಯಿತು. ಅದೇ ರೀತಿ ಬ್ರಿಟೀಷ್ ರಾಜ್ ನಲ್ಲಿ ವರ್ಣಭೇಧ ನೀತಿಯ ಹುಳುಕುಗಳು ಒಡೆದು ಆಳುವ ಭೂಮಿಕೆಯನ್ನು ಸೃಷ್ಟಿಸಿ ಅಂತರವನ್ನು ಹೆಚ್ಚಿಸಿದವು ಆದರೆ ಭಾರತದ ರಾಜರುಗಳ ಆಳ್ವಿಕೆಯಲ್ಲಿ ವರ್ಗಭೇಧದಂತಹ ಸಂಗತಿಗಳು ಕೊಂಚ ಮಟ್ಟಿಗೆ ಸುಧಾರಣೆ ಕಂಡವು. ಮಹಾರಾಷ್ಟ್ರದಲ್ಲಿ ಆರಂಭಗೊಂಡ ಸುಧಾರಣೆಯ ಗಾಳಿ ಎಲ್ಲೆಡೆ ಬೀಸಲಾರಂಭಿಸಿತು, ಅದು ಮೈಸೂರು ಕರ್ನಾಟಕಕ್ಕೂ ತಲುಪಿ ಮಹತ್ವದ ಘಟ್ಟಗಳನ್ನು ಕಾಣುವಂತಾಯಿತು. ದಲಿತರಿಗೆ ಶೋಷಿತರಿಗೆ ಮೀಸಲಾತಿಯ ಕಲ್ಪನೆಯನ್ನು ಕೊಟ್ಟ ಮೈಸೂರು ಅರಸರು (ಒಡೆಯರ್) ಸಮಾನತೆಯ ಪ್ರತಿಪಾದಕರಾಗಿ ಇತಿಹಾಸದಲ್ಲಿ ದಾಖಲಾದರು. ನಂತರದ್ದು ಇತಿಹಾಸ, ಅಂಬೇಡ್ಕರ್ ದೇಶದಾಧ್ಯಂತ ಸಮಾನತೆಯ ಹಕ್ಕಿಗಾಗಿ ಸೃಷ್ಟಿಸಿದ ಸಂಚಲನ, ಸಂವಿಧಾನ ರಚನೆ ಮತ್ತು ಆ ಮೂಲಕ ದಲಿತರು, ದುರ್ಬಲರು, ಶೋಷಿತರಿಗೆ ನೀಡಿದ ರಕ್ಷಣೆ ಕೊಂಚವಾದರೂ ಉಸಿರಾಡುವಂತೆ ಮಾಡಿದೆ.
ದಕ್ಷಿಣ ಆಫ್ರಿಕಾದ ಕರಿಯರು ವರ್ಣಭೇಧದ ನೋವನ್ನಷ್ಠೇ ಅನುಭವಿಸತ್ತಾರೆ,ಅಲ್ಲಿ ಅವರಿಗೆ ಬದುಕುವ ಹಕ್ಕುಗಳು ಸಮಾನವಾಗಿ ಹಂಚಿಕೆಯಾಗಿದೆ, ಆದರೆ ಭಾರತ ದೇಶದ ದಲಿತರು ತಾರತಮ್ಯವನ್ನಷೆ ಅಲ್ಲದೇ ಬದುಕುವ ಹಕ್ಕುಗಳನ್ನೇ ನಿರಾಕರಿಸಲ್ಪಡುತ್ತಾರೆ ಎಂಬುದು ನೋವಿನ ಸಂಗತಿ. ಸಂವಿಧಾನ ರಚನೆಯಾಗಿ ಆರೂವರೆ ದಶಕಗಳಾಗಿವೆ, ದಲಿತರಿಗೆ ಸಂವಿಧಾನ ಬದ್ದ ರಕ್ಷಣೆಯೂ ಇದೆ ಆದರೆ ಅದು ಹೆಸರಿಗೆ ಮಾತ್ರ. ದಲಿತರನ್ನು ರಕ್ಷಿಸುವ ಕಾನೂನುಗಳು ಪುಸ್ತಕಗಳಲ್ಲಿ ಉಳಿದಿವೆಯೇ ವಿನಹ ಅನುಷ್ಠಾನಕ್ಕೆ ಬಂದಿಲ್ಲ, ರಾಜಕೀಯ ಹಿತಾಸಕ್ತಿಗಳು ಮತ್ತು ಆಡಳಿತಷಾಹಿ ಅಲ್ಲಿಯೂ ಪುರೋಗಾಮಿ ನಿಲುವುಗಳಿಗೆ ಶರಣಾಗಿದೆ ಎಂಬುದು ವರ್ತಮಾನದ ದುರಂತ. ಇತ್ತೀಚಿನ ದಿನಗಳಲ್ಲಿ ದಲಿತರನ್ನು ಮೀಸಲಾತಿಯ ನೆಲೆಯಲ್ಲಿ ಕುಹಕದಿಂದ ನೋಡಲಾಗುತ್ತದೆ, ಆದರೆ ಅವರಿಗೆ ಸಾಮಾಜಿಕ ವ್ಯವಸ್ಥೆಯಲ್ಲಿ ಎಂತಹ ಸ್ಥಾನಮಾನಗಳಿವೆ ಎಂಬುದು ಚರ್ಚೆಗೆ ಬರುವುದೇ ಇಲ್ಲ, ಶತಮಾನಗಳಿಂದ ಅಕ್ಷರ ವಂಚಿತರಾಗಿದ್ದ ದಲಿತರು ಕೆಲವು ದಶಕಗಳಿಂದ ಅಕ್ಷರವಂತರಾಗಿ ತಮ್ಮ ಹಕ್ಕುಗಳನ್ನು ಪ್ರತಿಪಾದಿಸುತ್ತಿದ್ದಾರೆ ಎಂಬುದು ಮುಂದುವರೆದ ವಲಯದ ಜನರಿಗೆ ಅರಗಿಸಿಕೊಳ್ಳಲಾಗದ ಸಂಗತಿ.
ಜಾತಿಯ ಕಂದಕ ಈ ಹಿಂದೆಂದಿಗಿಂತಲೂ ಈಗ ಹೆಚ್ಚು ಬಲಗೊಳ್ಳುತ್ತಿದೆ, ಹುಸಿ ಭ್ರಮೆಗಳು ಜಾತೀಯ ಕಬಂಧ ಬಾಹುಗಳಲ್ಲಿ ಸಿಲುಕಿಸುತ್ತಿದೆ, ದೇಶದ ಸಂವಿಧಾನದಲ್ಲಿ ದಲಿತರಿಗೆ ಮಾತ್ರ ಮೀಸಲಾತಿಯ ರಕ್ಷಣೆಯಿಲ್ಲ, ದಲಿತರಿಗಿಂತಲೂ ಹೆಚ್ಚು ಪ್ರಮಾಣದ ಮೀಸಲಾತಿ ದಲಿತೇತರರಾದ ಶೂದ್ರರು, ಹಿಂದುಳಿದವರಿಗೆ ಇದೆ ಎಂಬ ಸತ್ಯದ ಅರಿವು ಆಗದಿರುವುದೇ ದಲಿತರನ್ನು ಇನ್ನೂ ಸಂಕಟದ ಒಲೆಯಲ್ಲಿ ಬೇಯುವಂತೆ ಮಾಡಿದೆ. ಹಿಂದುಳಿದ ವರ್ಗಗಳ ಸಮಾನತೆಯ ಹರಿಕಾರ ಮಾಜಿ ಪ್ರಧಾನಿ ವಿ ಪಿ ಸಿಂಗ್ ಕನಸಿನ ಮಂಡಲ್ ಆಯೋಗದ ವರದಿ ಸಂವಿಧಾನಾತ್ಮಕವಾಗಿ ಶೂದ್ರರಿಗೆ ಮೀಸಲಾತಿ ಕಲ್ಪನೆಯನ್ನು ಎತ್ತಿ ಹಿಡಿದಿದೆ, ಇದನ್ನು ಪಕ್ಕದ ಆಂಧ್ರ ಮತ್ತು ತಮಿಳುನಾಡು ಸುಗ್ರಿವಾಜ್ಞೆ ಮೂಲಕ ದಕ್ಕಿಸಿಕೊಂಡಿವೆ. ಈಗಿನ ಜಾತಿ ಜನಗಣತಿಯಲ್ಲಿ ಅರ್ಹರಿಗೆ ಸಂವಿಧಾನಾತ್ಮಕ ರಕ್ಷಣೆ ನೀಡುವ ಎಲ್ಲಾ ಆಶಯಗಳ ಅನುಷ್ಟಾನದ ಉದ್ದೇಶ ಇದ್ದಂತಿದೆ. ಹಾಗಾಗಿ ಅಂಬೇಡ್ಕರ ಜಯಂತಿಯ ಈ ಸಂಧರ್ಭದಲ್ಲಿ ಯಾವುದೇ ಜಿಜ್ಞಾಸೆಗೆ ಒಳಗಾಗದೇ ನಡೆದುಕೊಳ್ಳುವುದು ಸೂಕ್ತವಾಗಿದೆ ಆ ಮೂಲಕವಾದರೂ ಸಮಾಜದಲ್ಲಿ ಸಮಾನತೆ ಸಾಕಾರವಾಗುವುದೇ ? ಕುವೆಂಪು ಆಶಯದಂತೆ ಜಾತಿ ಮತದ ಎಲ್ಲೆ ಮೀರಲು ಸಾಧ್ಯವಾಗುವುದೇ ಕಾದು ನೋಡುವ.
 

‍ಲೇಖಕರು G

April 16, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Srinivasamurthy

    “ಇತ್ತೀಚಿನ ದಿನಗಳಲ್ಲಿ ದಲಿತರನ್ನು ಮೀಸಲಾತಿಯ ನೆಲೆಯಲ್ಲಿ ಕುಹಕದಿಂದ ನೋಡಲಾಗುತ್ತದೆ” ಇದಕ್ಕೆ ಒಂದು ಕಾರಣವೆಂದರೆ, ಮೀಸಲಾತಿಯನ್ನು ಪಡೆದು ಹಣಕಾಸು ಹಾಗೂ ಶಿಕ್ಶಣದಲ್ಲೂ ಮೇಲ್ ವರ್ಗದಶ್ಟೇ ಸರಿಸಾಟಿಯಾಗಿ ಬದುಕುತ್ತಿರುವ ಕುಟುಂಬಗಳು ಮೀಸಲಾತಿಯ ಲಾಬವನ್ನು ಪಡೆಯುತ್ತಿರುವುದು. ಯಾರು ಮೀಸಲಾತಿಯ ಮೂಲಕ ಉದ್ಯೋಗವನ್ನು ಪಡೆಯುತ್ತಾರೋ ಅಂತವರ ಮಕ್ಕಳು ಹಾಗೂ ಕುಟುಂಬವನ್ನು ಮೀಸಲಾತಿಯಿಂದ ಹೊರಗಿಟ್ಟರೆ ಇನ್ನಶ್ಟು ಹಿಂದುಳಿದ ಜನರಿಗೆ ಅನುಕೂಲವಾಗುತ್ತದೆ.

    ಪ್ರತಿಕ್ರಿಯೆ
  2. M A Sriranga

    ಯಾರು ಯಾರು ಯಾವ ಯಾವ ಜಾತಿ,ಉಪಜಾತಿ,ಪಂಗಡ ಎಂದು ಜಾತಿ ಗಣತಿ ನಡೆಯುತ್ತಿರುವಾಗ ‘ಜಾತಿ ಮತದ ಎಲ್ಲೆ ಮೀರುವುದು ಹೇಗೆ?’ ಜಾತಿ ಎನ್ನುವುದು ನಮ್ಮ ದೇಹಕ್ಕಂಟಿದ ಚರ್ಮದ ಹಾಗೆ. ಅದರಿಂದ ಬಿಡುಗಡೆ ಇಲ್ಲ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: