ಅಶ್ಫಾಕ್ ಪೀರಜಾದೆ
ಬುಡ್ಡಿ ದೀಪದ ಕೆಳಗೆ ಕತ್ತಲೆ
ಎಂಬುದು ಹಳೆಯ ಮಾತು
ಪ್ರಖರವಾಗಿ ಪ್ರಜ್ವಲಿಸುವ
ಜ್ಯೋತಿ ಎಂಬುದೀಗ
ಕಗ್ಗತ್ತಲೆಯ ಮೂಲ ಸೆಲೆ
ಕತ್ತಲೆಯೇ ಈಗ ಪ್ರಕಾಶದ ವೇಶ
ತೊಟ್ಟು ಪೋಜು ಕೊಡುತಿದೆ
ಎಷ್ಟೋ ದಿನಗಳು
ಹೀಗೇ ಸಂದು ಹೋಗಿವೆ
ಇದನ್ನು ನೋಡುತ್ತ
ಇರುಳು ನಿದಿರೆ
ಹಗಲು ನೆಮ್ಮದಿ
ಕಳೆದು ಹೋಗಿ ಜನತೆಗೆ

ತಮ್ಮ ಬೆವರಿಗೆ
ತಾವೇ ದಂಡ ಕಟ್ಟಿ
ತಮ್ಮ ದುಡ್ಡಿಗೆ ತಾವೇ ಶುಲ್ಕ
ಪಾವತಿಸಿ ಸಾಕು ಸಾಕಾಗಿದೆ
ಇಷ್ಟಾದರು ಬ್ಯಾಂಕಗಳನ್ನ
ತಿಂದು ತೇಗಿ ದಿವಾಳಿ
ಎಬ್ಬಿಸಿದವರು ವಿವಿಧ ನಾಟಕ
ಕಂಪನಿಗಳ ಕೃಪಾಪೋಷಿತ
ಸೋ ಕಾಲ್ಡ್ ವ್ಹಿ ಐ ಪಿ ಗಳು
ಬಡವರು ಕಡು ಬಿಸಿಲು
ಬೇಗೆಯಲಿ ಜೀವ ಕೈಯಲ್ಲಿ ಹಿಡಿದು
ಎಲ್ಲದಕೂ ಸರತಿ ಸಾಲಿನಲ್ಲಿ
ಜಾತಕ ಪಕ್ಷಿಯಂತೆ ಕಾದು ಕಾದು
ಸುಸ್ತಾಗಿ ಸತ್ತಾಗ…
ಹೆಣಗಳ ರಾಶಿಯ ಮೇಲೆ
ಅರಮನೆ ಕಟ್ಟಿ ರಕ್ತಲೇಪನದ
ಸಿಂಹಾಸನವೇರಿ ಕುಳಿತ
ಕಣ್ಣು ಕುಕ್ಕುವ ಬೆಳಕಿನ
ಹೆಸರಿನಲಿ ಕಣ್ಣಿಗೆ ಸುಣ್ಣ ಎರಚಿ
ಕುರುಡಾಗಿಸುವ ಸೂಪರ್ ಮ್ಯಾಜಿಕ್
ಅಮೃತದ ರೂಪಧರಿಸಿ
ವಿಷ ಚಕ್ರ ತಿರುಗುವುದು
ಜಗ ಬೆಳಗುವ ನಾಟಕ ಕಂಡು
ಸೂರ್ಯ ಅಂಧನಾಗಿದ್ದಾನೆ
ಕುರುಡಾಗಿದ್ದಾನೆ ಏನೂ ಕಾಣುತ್ತಿಲ್ಲ
ಯಾರ ಕೂಗು ಆತನಿಗೆ ಕೇಳಿಸುತ್ತಿಲ್ಲ
ದಾಹ ವ್ಯಾಮೋಹ
ಜನಪ್ರಿಯತೆಯ ಹುಚ್ಚು ಸುಳ್ಳಿಗೆ,
ಸತ್ಯಕ್ಕೆ ಕೊಳ್ಳಿಯಿಟ್ಟ ಕಪಟ
ಬುದ್ದಿಗೆ ಸುಖ ಲೋಲುಪತೆ ಶರಣಾಗಿದೆ
ಲೋಭಿಯೋ ರೋಗಿಯೋ
ಅಬ್ಬರದಲಿ ಪದಪುಂಜಗಳ ಮಧ್ಯೆ
ಮಂಕು ಬೂದಿಗೆ ಬಲಿಯಾದ
ಮೂಗ ಕಿವುಡ ಕಣ್ಣಿದ್ದೂ ಕುರುಡ
ಗಾಂಧೀಜಿಯ ವಾನರ ಸೇನೆ
ಸೇವೆಯ ಸೋಗದಲಿ ಮದವೇರಿದ
ಸ್ವಾರ್ಥಿ ಗಜರಾಜ ಮೆರೆಯುತ್ತಿದ್ದಾನೆ,
ಅರಣ್ಯೋದ್ಧಾರದ ಹೆಸರಿನಲಿ
ಗುಳ್ಳೆ ನರಿಗಳು ಗೀಳಿಡುತ್ತಿವೆ…….!






0 Comments