ಚನ್ನಬಸವ ಆಸ್ಪರಿ /ಕಾರಟಗಿ
ಅವ್ವ
ಆಡಿ ಬಂದ ನನ್ನ ಅಂಗಾಲ ತೊಳೆಯಲಿಲ್ಲ
ಕೇಕು ಕತ್ತರಿಸಿ ಮೋಂಬತ್ತಿ ಆರಿಸುವ
ನನ್ನ ಸಂಭ್ರಮಕ್ಕೆ ಸಾಕ್ಷಿಯಾಗಲಿಲ್ಲ
ಅಪ್ಪ ಮನೆ ಕಟ್ಟಲಿಲ್ಲ
ಅವ್ವ ಮನೆಯ ಗೌಡತಿ ಆಗಲಿಲ್ಲ
ಗುಳೇ ಹೊರಟ ಅಪ್ಪನ ಹಿಂದೆ
ಗಂಟು ಮೂಟೆ ಕಟ್ಟಿ
ಊರೂರು ಅಲೆದಳು
ಮರುಮಾತನಾಡದೆ
ಸಾಕಿದ ನಾಯಿ ಯಜಮಾನನ್ನು ಹಿಂಬಾಲಿಸಿದಂತೆ
ಸುಮ್ಮನೆ ಬಾಲ ಅಲ್ಲಾಡಿಸಿಕೊಂಡು
ಅಪ್ಪನಿಗೆ ಬಣ್ಣ ಬಣ್ಣದ ನಿಲುವಂಗಿ ತೊಡಿಸಿ
ತಾನೇ ಬಣ್ಣದ ಪತಂಗವಾಗುತ್ತಿದ್ದ
ಅವ್ವನ ಮಾಸಿದ ಸೀರೆ ಸೆರಗಿನ ತುಂಬ
ಹಳಸಿದೆದೆಯ ಕನಸುಗಳು
ಉಳಿದರ್ಧ ಬದುಕು
ನೀರ ಮೇಲೆ ತೇಲಿ ಬಿಟ್ಟ
ಬಾಗಿನಕ್ಕೆ ಮಾಡಿದ ಸಿಂಗಾರ

ಅವ್ವನೂ ಕಸೂತಿ ಹಾಕುತ್ತಿದ್ದಳು
ಅಪ್ಪನ ತೂತುಬಿದ್ದ ಬನಿಯನ್ನಿನ ಮೇಲೆ
ಉಟ್ಟರೆ ಅಂಡು ಕಾಣಿಸುವ ನನ್ನ ದೊಗಲೆ ಚಡ್ಡಿಗೆ
ಅಲ್ಲಲ್ಲಿ ಹರಿದ ಪಾಟೀಚೀಲಕ್ಕೆ
ಪುಸ್ತಕದಲ್ಲಿಟ್ಟ ನವಿಲುಗರಿ
ಇನ್ನೂ ಮರಿ ಹಾಕಿಲ್ಲ
ಪಾಟೀಚೀಲದ ಹೊಲಿಗೆಗಂಟಿದ
ಅವ್ವನ ಬೆರಳ ತುದಿಯ ಬಿಸಿ
ಇನ್ನೂ ಆರಿಲ್ಲ
ನಂಜನೇ ಬಳುವಳಿಯಾಗಿ ಕೊಟ್ಟವರ
ಅಳುವ ಕೊರಳಿಗೂ
ಸಾಂತ್ವನದ ಹೆಗಲೊಡ್ಡಿದ ಅವ್ವ
ಶಿಲುಬೆಗಂಟಿದ ಹನಿ ಹನಿ ರಕ್ತದಲೂ
ಅತಃಕರಣದ ಕಡುಲಿಕ್ಕಿಸಿದ ಏಸು
ಅವರಿವರ ಬದುಕು ಸಿಂಗರಿಸುತ್ತಲೇ
ಕಾಲನ ಪಾದದಡಿ ನರಳಿದ
ಪಾಪದ ಹೂ
ವಿಚಿತ್ರ ನರಳಿಕೆಗಳನುಂಡು ತೇಗುವ
ವಾರ್ಡಿನ ಬಿಳಿ ಗೋಡೆಗಳ ಮಧ್ಯೆ
ಮಗನ ಕೈ ನೇವರಿಸಿ
ಹುಸಿನಗೆಯ ಮಿಂಚು ಹಾರಿಸುವ
ಅವ್ವನ ಅರೆ ತೆರೆದ ಕಂಗಳು
ಆಕಾಶಕ್ಕೆ ಜೋತುಬಿದ್ದ
ಜೋಡಿ ನಕ್ಷತ್ರಗಳು
ಅವ್ವನೆಂದರೆ
ಕರುಳ ಸೀಳು ಸೀಳುಗಳಲ್ಲಿ
ಓಡುವ ಕಕ್ಕುಲಾತಿಯ ನದಿ
ಮಡಿಲ ಕುಡಿಗಳ ಸಲಹುತ್ತ
ಎಲುವು ಕೀಲುಗಳ ಸಂದು ಗೊಂದಿನಲಿ
ಸೋರಿ ಹೋದ ಯೌವನ
ಅವ್ವ ಎಂದರೆ
ಬದುಕು ಹೊಸೆದ ಬತ್ತಿ
ಬೆಳಕದ್ರವ್ಯದಲಿ ಕರುಳ ಬಳ್ಳಿಯ ಕಾಯ್ದು
ಉರಿದುಹೋದ ಪಣತಿ
ಎಲ್ಲ ಹೇಳಿದ ಮೇಲೂ
ಏನೂ ಹೇಳಿಯೇ ಇಲ್ಲವೆಂದೆನಿಸುವ
ಮಾತಿನ ಚೌಕಟ್ಟಿಗೆ ಸಿಗದ
ಅವ್ವ
ನನ್ನ ಪಾಲಿಗಿನ್ನೂ
ಅಸ್ಪಷ್ಟ ಆಕೃತಿ
ಶಾಲೆಯ ವಿರಾಮದ ಘಳಿಗೆಯಲ್ಲಿ
ಹುಡುಗ
ಬಿಳಿ ಹಾಳೆಯ ಮೇಲೆ ಗೀಚಿದ
ತೃಪ್ತಿಯಾಗದ್ದಕ್ಕೆ
ಹಾಗೆಯೇ ಮುದ್ದೆ ಮಾಡಿ
ಡಸ್ಟ್ ಬಿನ್ನಿಗೆ ಎಸೆದ
ರೇಖಾಚಿತ್ರ






0 Comments