ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವ್ವ,ಅಕ್ಕ ಮತ್ತು ರೊಟ್ಟಿ

ಜೀವನ ಪ್ರಕಾಶನದ ಈ ಸಾಲಿನ ದಸರಾ ಕವಿತೆ ಸ್ಪರ್ಧೆಯಲ್ಲಿ

ಎರಡನೆಯ ಬಹುಮಾನ ಪಡೆದ ಕವಿತೆ 

h-s-ramanagowda

ಹೆಚ್.ಎಸ್.ರಾಮನಗೌಡ

ಹಾಲು ಕಕ್ಕುವ ಮಗುವ  ಮಲಗಿಸಿ ಮಡಿಲಲ್ಲಿ
ರೊಟ್ಟಿ ಬಡಿಯುತ್ತಿದ್ದಾಳೆ ಅವ್ವ ಯುಗದಿಂದ ಯುಗಗಳಿಗೆ
–   ಎಚ್ ಎಲ್ ಪುಷ್ಪ

1.
ಒಲೆಯ ಮೈ ಒಪ್ಪಾಗಿ ತೊಳೆದು
ಅವ್ವ ರೊಟ್ಟಿಮಾಡುತ್ತಿದ್ದಾಳೆ.
ಅವಳ ಕೈಬಳೆ ,ಒಲೆಯ ಸೌದೆ ಹಠಮಾಡುತ್ತವೆ
ಮಸಿಯರಬಿಗೂ ಕಪ್ಪಾದ ಹೊಂಬಣ್ಣದ ಸೀರೆ –
ಸೆರಗು ಹೆಗಲೇರಿ ಕುಳಿತಿದ್ದು ಕಡಿಮೆ
ರೇಷಿಮೆಯಂತ ಹಸಿಹಿಟ್ಟು ಕಲ್ಲಿನಲಿ ಕರಗಿ
ಅವ್ವನ ಒರಟು ಕೈಯಲ್ಲಿ ವೃತ್ತಗೊಂಡು ತೆವೆ ಏರುತ್ತಿವೆ

poverty-poor-painting2.
ಪಟ್ಟಾಗಿ ಕುಳಿತ ಅಕ್ಕನ ಕೈಯಲ್ಲಿ
ತ್ರಿಕೋಣ,ಆಯತ ಏನೆನೊ ಆಕಾರ ವಿಕಾರ
ಬೆಂದು ಬೇಯದೆ ನಾಯಿ,ಬೆಕ್ಕುಗಳ ಬಾಯಿಗೆ
ಜೀವ ಜಂತು ಮುನಿಸಿ ಮನೆ ಹೊರಗಾಗಿದ್ದು ಹೀಗೆಯೆ .

3.
ಬೆಳಕಿಗೆ ಜೀವ ತುಂಬುತ್ತಿರುವ ದೀಪ ಅವ್ವನಿಗೂ ಹಾಯುತಿದೆ
ಬೆರಳ ನಾಡಿಯಿಂದ ರೊಟ್ಟಿಗೂ! ಬಲು ಸೋಜುಗ!
ಕೈಬಳೆ ರೊಟ್ಟಿಗೊಮ್ಮೆ ಮಾತಿಗಿಳಿದಿವೆ
ತೆವೆ ಏರಿದ ರೊಟ್ಟಿಯನೊಮ್ಮೆ ಮುಟ್ಟಿನೋಡಿ ನೀರ ಸವರುತ್ತಾಳೆ
ಒಮ್ಮಲೆ ಬೆಂದು ಬೆಂಡಾಗಬಾರದಲ್ಲವೆ
ಎರಡಾವರ್ತಿ ತಿರುವಿ ಗಿರಗಿಟ್ಟಿ ಆಡಿಸಿದ ರೊಟ್ಟಿ
ಮೈಮೇಲೆ ಚಿತ್ತಾರಗೊಂಡ ಗಳಿಗೆಯಲ್ಲೆ ಬಾಯ ಸೇರುತ್ತಿವೆ
ಅವ್ವ ಮತ್ತೆ ಸಜ್ಜಾಗುತ್ತಾಳೆ. ಬಳೆ ಹತ್ತಿಸಿ, ಪುರಲೆ ಪುಟಿಗಿಟ್ಟು
ಹೂ ಅಂಚ ಸೆರಗಿಂದ ಬೆವರೊರಸಿ

4.
ಅಪ್ಪ ಅಕ್ಕನಿಗೆ ಬೈದು ಅವ್ವನಿಗೆ ಪರಾಕು ಹೇಳಿದಾಗ
ಅವ್ವನೇನು ರೊಟ್ಟಿಹಾಗೆ ಉಬ್ಬುವುದಿಲ್ಲ
ಒಣಹುಲ್ಲ ಹಾಗೆ ಸುಡುವುದೂ ಇಲ್ಲ
ಕಾಗೆ-ಗುಬ್ಬೆಯ ಕತೆ ಹೇಳುತ್ತಾಳೆ
ಅದೇ ಕತೆ ಹೇಳಿ ಊಟಬಡಿಸಿ ಅದೇ ಕತೆ ಹೇಳಿ ಮಲಗಿಸುತ್ತಾಳೆ.

5.
ಒಲೆಯ ಕಿಚ್ಚು ಕಪ್ಪು ಮುಖವ ಕೆಂಪಾಗಿಸಿ
ಎಳೆ ಎಳೆಯಾಗಿ ಕರಗಿಸುತ್ತಿದೆ
ಅಕ್ಕ ಆ ಮನೆಯಲ್ಲಿ ಕರಕಲಾಗಿದ್ದಾಳೆ
ಅಕ್ಕನವು ಈಗೀಗ ವೃತ್ತಗೊಳ್ಳುತ್ತಿವೆ
ಅವ್ವನವು ವೃತ್ತಕ್ಕೆ ಇನ್ನಷ್ಟು ವೃತ್ತ
ಇದು
ಯಾವುದೊ ಕರುಳೊಳಾಡವ ರಕ್ತಬಂಧವೋ
ರಕ್ತ ಹೀರುವ ಬಾಹ್ಯ ಬಂಧವೋ
ನನಗೂ  ತಿಳಿಯದಲ್ಲ

‍ಲೇಖಕರು Admin

3 December, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading