ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಳ ಸ್ವಗತ!

ಭವ್ಯ ಟಿ ಎಸ್

**

ಸಣ್ಣ ಸಣ್ಣ ನೋವಿಗೂ ಸಪ್ಪೆ ಮೋರೆ ಹಾಕಿ
ಕಣ್ಣೀರ ಹರಿಸುತ್ತಿದ್ದ ನಾನು ಇಂದು ಅಳುವವರಿಗೆ
ಧೈರ್ಯ ತುಂಬುವಂತಾಗಿದ್ದೇನೆ
ನೋವ ಮರೆತು ನಗುವ ಕಲೆ
ನನಗೂ ಕರಗತವಾಯಿತೇ?
ಅಥವಾ ನೋವ ಮೀರಿ
ಬದುಕುವ ಗಟ್ಟಿತನ ನನ್ನದಾಯಿತೇ?

ಟೀಕೆ ವ್ಯಂಗ್ಯಗಳ ಮೂಟೆ ಮಾಡಿ ಹೊತ್ತು
ಭಾರವಾದ ಮನದಿಂದ ಬಳಲುತ್ತಿದ್ದ ನಾನು
ಅವನ್ನೆಲ್ಲಾ ಗಾಳಿಯಲ್ಲಿ ತೂರಿಬಿಡಿ ಎನ್ನುವಂತಾದೆ
ಟೀಕೆಗಳು ನನ್ನ ತಾಕದಾಯಿತೇ?
ಅಥವಾ ಟೀಕೆಗಳೆದುರು ತಲೆಬಾಗದ
ದೃಢಚಿತ್ತ ನನ್ನದಾಯಿತೇ?

ಕಷ್ಟಗಳನ್ನು ಬಂಡೆ ಎಂದರಿತು
ಬೆದರಿ ಹಿಂದೆ ಸರಿಯುತ್ತಿದ್ದ ನಾನು
ಕಷ್ಟಗಳಿಗೆ ವಿಮುಖರಾಗದೆ
ಮುಂದಡಿಯಿಡಿ ಎನ್ನುವಂತಾದೆ…
ಕಷ್ಟಗಳೆನಗೆ ಇಷ್ಟವಾದವೇ ಅಥವಾ
ಬದುಕು ಬದಲಿಸುವ ಪಾಠವಾದವೇ?

ಅನುಕಂಪದ ಓಲೈಕೆಗೆ ಹಾತೊರೆಯುತ್ತಿದ್ದ ನಾನು
ಸ್ವ ಅನುಕಂಪವೂ ನಿಮ್ಮನ್ನು
ಬಲಹೀನಗೊಳಿಸುತ್ತದೆ ಎನ್ನುವಂತಾದೆ
ಸಹಾನುಭೂತಿ ನನಗೆ ಸೈರಿಸದಾಯಿತೇ?
ಅದುವೇ ನನ್ನ ದೌರ್ಬಲ್ಯವೆಂಬ ಅರಿವು
ನನ್ನದಾಯಿತೇ??

ನೇರ ನಡೆನುಡಿಗಳಿಗೆ ಬೆಚ್ಚಿ
ಸೋಗು ಹಾಕುತ್ತಿದ್ದ ನಾನು
ಮುಕ್ತ ಮನದಿಂದ ಮಾತನಾಡಿ ಎನ್ನುವಂತಾದೆ
ತುಪ್ಪ ಸವರಿದ ನುಡಿ ಎನಗೆ ಕಹಿ ಅನಿಸಿತೇ?
ನನ್ನ ನುಡಿಯಲ್ಲಿ ನನಗೆ ನಂಬಿಕೆ ಮೂಡಿತೇ?

ಬಿಕ್ಕುತ್ತಿದ್ದ ಮನವಿಂದು ಉಕ್ಕುವ ಉತ್ಸಾಹ ಪಡೆದಿದೆ
ಬದುಕು ಭಾವಗಳ ಪ್ರತಿಬಿಂಬ ಎಂಬ ಸತ್ಯ ಗೋಚರಿಸಿತೇ?
ಬದುಕ ನೋಡುವ ನನ್ನ ದೃಷ್ಟಿ ಬದಲಾಯಿತೇ?

‍ಲೇಖಕರು Admin MM

29 February, 2024

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading