
ಸಂದೀಪ್ ಈಶಾನ್ಯ
ಇನ್ನೂ ಬಂದಿರಲಿಲ್ಲ
ಇನ್ನೂ ಬಂದಿರಲಿಲ್ಲ
ಕೊನೆ ಬೀದಿಯ ಅವಳ ನೆಚ್ಚಿನ ಹುಡುಗ
ಅವನೇನು ಮೈಲುಗಟ್ಟಲೆ ನಡೆಯಬೇಕೆ
ಇವಳ ಸಿಂಗಾರ ನೋಡಲು
ಅವಳು ಸೀರೆಯುಟ್ಟು ಬೊಟ್ಟಿಟ್ಟದ್ದು ಇದೇ ಮೊದಲಲ್ಲವೆ
ಹಸಿರು ಮೆಚ್ಚುವುದಿಲ್ಲ ಅವನು
ಎಂದೇ ಶಾಯಿ ಬಣ್ಣದ ನೀಲಿ ಧರಿಸಿದ್ದಾಳೆ
ಈಗಾಲಾದರು ಮೆಚ್ಚುತ್ತಾನೆಯೆ?
ಮೆಚ್ಚುತ್ತಾನೆ
ಸೀರೆಯನ್ನಲ್ಲದಿದ್ದರು ಅವಳನ್ನಾದರು
ಅವಳಲ್ಲವೆ ಅವನ ಮುದ್ದು ಮುಖದ ಚಹರೆಗೆ
ಮರುಳಾಗಿ ಹಕ್ಕಿಗಳ ಹಾಗೆ ಪದ ಹೆಕ್ಕಿ
ಪತ್ರ ಬರೆದವಳು
ಅಪ್ಪ ಆಫೀಸಿನೆಡೆಗೆ ಅಮ್ಮ ಅಡಿಗೆ ಮನೆಗೆ
ಮುಖ ಮಾಡಿದಾಗ
ಬಾಗಿಲ ಬಳಿಯಲ್ಲೆ ನಿಂತು ದಿನಕಳೆದವಳು
ಕೊನೆ ಬೀದಿಯ ಅಂಗಡಿ ಮುಚ್ಚಿದ್ದರು
ವಿನಾಕಾರಣ ನಾಲ್ಕೈದು ಬಾರಿ ದಾವಿಸಿ
ಅವನ ಇರುವಿಕೆಯನ್ನ ಪರೀಕ್ಷಿಸಿದವಳು
ಅವಳಾಗ ಒಳಗಿದ್ದಳು
ಯಾರದೋ ಹೆಜ್ಜೆಯ ಸಪ್ಪಳದ ಕರೆ
ಹೊರಬಂದಳು ಕಂಡು ಬೇಸರಗೊಂಡಳು
ಅದು ಅವನಾಗಿರಲಿಲ್ಲ ಬಂದವನು
ಚಾಕು ಚೂಪು ಮಾಡುವ ಕಸಾಬ ಸಾಬಿ
ಜೊತೆಗೆ ಹೊಟ್ಟೆ ಪಾಡಿಗೆ ಹೂ ಮಾರುವ ಹೈಸ್ಕೂಲು ಹುಡುಗ
ಕಾದು ಬಸವಳಿದಿತ್ತು ಬೆವರಿಳಿದಿತ್ತು
ಸಂಜೆ ತೋರುತ್ತಿತ್ತು ಜಗದ ಗಡಿಯಾರ
ಬೆಳಗಿನ ತಿಳಿಗೆಂಪು ಸೂರ್ಯ ಈಗ ಪಡುವಣದ ಕಡೆಗೆ
ಅವಳ ಮುಂಜಾನೆಯ ವೈಯಾರಕ್ಕೆ ನಿವೃತ್ತಿಯ ಸಮಯ
ಪಕ್ಕದ ಮನೆಯ ಬಸುರಿಗೆ ಪ್ರಸವ ವೇದನೆ
ಬೀದಿ ಮುಂದಲ ಮಕ್ಕಳಿಗೆ ಅಜ್ಜಿಯ ಕಥೆಯ ಚಿಂತೆ
ಅಪ್ಪ ಮನೆಗೆ ಮರಳಿದ್ದ
ಕೊನೆ ಬೀದಿಯ ಅವಳ ನೆಚ್ಚಿನ ಹುಡುಗ
ಇನ್ನೂ ಬಂದಿರಲಿಲ್ಲ





Nice sandy
Thumba chennagide
Kavithe tumba chennagide, Dhanyavaadagalu……………………..